#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
26-08-2018:

ಕರ್ಕೋಟಕ ಕಾರುಣ್ಯ

ತನ್ನದೇ ಆಶ್ರಯದಲ್ಲಿರುವ ಅದೆಷ್ಟೋ ಜೀವಿಗಳು ಪದೇಪದೇ ಅಪಚಾರ ಮಾಡಿದರೂ ಅದನ್ನು ಕ್ಷಮಿಸಿ ಹೊಟ್ಟೆಗೆ ಹಾಕಿಕೊಂಡು, ಅವರಿಗೆ ಇನ್ನಷ್ಟು ಶ್ರೇಯಸ್ಸನ್ನು ಕರುಣಿಸುವ ಆ ಭಗವಚ್ಛಕ್ತಿ, ಸರ್ವಹೃದಯವಿಹಾರಿಯಾದ ಶ್ರೀಕೃಷ್ಣನಿಗೆ ವಂದಿಸೋಣ. ಇಂದಿನ ಪ್ರವಚನದ ಹೆಸರಿನ ಪದಗಳು ಒಂದಕ್ಕೊಂದು ಸಂಬಂಧ ಅನಿಸಲ್ಲ, ಹೌದು ಕರ್ಕೋಟಕ ಹಾಗೂ ಕಾರುಣ್ಯ ಎರಡೂ ವಿರುದ್ಧವಾಗಿ ಕಾಣುತ್ತದೆ.

ತತ್ತ್ವಭಾಗವತಮ್

ವಿಧಿಯ ವಿಪರ್ಯಾಸಕ್ಕೆ ಸಿಲುಕಿ ರಾಜ ತನ್ನ ಪತ್ನೀ ಪುತ್ರ ಇಷ್ಟಮಿತ್ರ ಎಲ್ಲರನ್ನೂ ಕಳೆದುಕೊಂಡು ದಿಕ್ಕಿಲ್ಲದೇ ಸಂಚಾರ ಮಾಡುತ್ತಿದ್ದಾನೆ. ಕಾಡಿನಲ್ಲಿ ನಡೆಯುತ್ತಾ ಇದ್ದಾನೆ. ಎಲ್ಲಿಗೆ ಗೊತ್ತಿಲ್ಲ, ವಿಧಿ ಕರೆದುಕೊಂಡು ಹೋಗುತ್ತಾ ಇದೆ ಅವನನ್ನು. ನಮಗೆ ಯಾವಾಗಲೂ ಮುಂದೆ ಏನಾಗುತ್ತದೆ ಎಂಬುದು ಗೊತ್ತಿರುವುದಿಲ್ಲ, ಮುಂದಿನದ್ದನ್ನು ಪ್ಲಾನ್ ಮಾಡಿರಬಹುದು ಆದರೆ ಸ್ಪಷ್ಟವಾಗಿ ಗೊತ್ತಿರುವುದಿಲ್ಲ, ಹಾಗಾಗಿ ಗೊತ್ತಿಲ್ಲದೂರಿಗೆ ಪ್ರಯಾಣ. ನಮಗೆ ಗೊತ್ತಿಲ್ಲದಿದ್ದರೂ ಸಾರಥಿಗೆ ಗೊತ್ತಿದೆ ಅಂದರೆ ನಡೆಸುವ ದೇವನಿಗೆ ಗೊತ್ತಿದೆ.

ನಳನೂ ಕಾಡಿನಲ್ಲಿ ಅಂಡಲೆಯುತ್ತಿದ್ದಾನೆ, ಅವನಿಗೆ ತಿಳಿದಿರದಿದ್ದರೂ ವಿಧಿಗೆ ಗೊತ್ತಿದೆ ಅವನನ್ನು ಎಲ್ಲಿಗೆ ಕರೆದುಕೊಂಡು ಹೋಗಬೇಕು ಅಂತ, ಅಷ್ಟರಲ್ಲಿ ಇದ್ದಕ್ಕಿದ್ದಂತೇ ಗಂಭೀರ ಧ್ವನಿಯಲ್ಲಿ ಆರ್ತನಾದ ಕೇಳಿಸಿತು. ಅದು ಮನುಷ್ಯನದ್ದಾ ಅಥವಾ ಪ್ರಾಣಿಯದ್ದಾ ತಿಳಿಯಲಿಲ್ಲ, ಒಟ್ಟಿನಲ್ಲಿ ಯವುದೋ ಒಂದು ಜೀವಿಯ ಧ್ವನಿ, “ನಳನೇ, ಪುಣ್ಯಶ್ಲೋಕನೇ, ಓಡಿ ಬಾ ನನ್ನನ್ನು ಉಳಿಸು” ಎಂದು ಮತ್ತೆ ಮತ್ತೆ ಕರೆಯುತ್ತಿದೆ. ಯಾರು ಗೊತ್ತಿಲ್ಲ, ವಿಷಯ ಗೊತ್ತಿಲ್ಲ, ಎಲ್ಲಿ ಗೊತ್ತಿಲ್ಲ ಆದರೂ ನಳ ಉತ್ತರಿಸಿದ ನೀನು ಯಾರೇ ಆಗಿರು, ಎಲ್ಲೇ ಇರು, ಏನೇ ಆಗಿರು ನಳನಿದ್ದಾನೆ ಹೆದರಬೇಡ ಧೈರ್ಯವಾಗಿರು ಎಂದು. ನಂತರ ಸ್ವರಬಂದತ್ತ ಓಡಿದ, ಅಲ್ಲಿ ಕಾಡ್ಗಿಚ್ಚು ಜೋರಾಗಿ ಉರಿಯುತ್ತಿದೆ. ಅದರ ಮಧ್ಯದಿಂದ ಧ್ವನಿ ಬರುತ್ತಿದೆ. ನಳ ತನ್ನ ಜೀವದ ಹಂಗನ್ನು ತೊರೆದು ಬೆಂಕಿಯನ್ನು ಹೊಕ್ಕ ಅದರ ಮಧ್ಯದಲ್ಲಿ ಇಂದು ಸರ್ಪ, ಮಹಾಸರ್ಪ ಸುರುಳಿ ಸುತ್ತಿ ತಲೆ ಎತ್ತಿ ಕುಳಿತಿದೆ. ತಲೆ ಮಾತ್ರಾ ಆಡುತ್ತಿದೆ. ಆಶ್ಚರ್ಯವಾಯಿತು ನಳನಿಗೆ ಅದೇಕೆ ಚಲಿಸುತ್ತಿಲ್ಲ ಅಂತ, ಕೇಳಿದ ಒಂದೋ ಉರಿತಪ್ಪಿಸಿ ಹರಿದುಹೋಗಬೇಕು, ಇಲ್ಲವೆ ಭಯಪಡಬಾರದು. ಆದರೆ ಇಲ್ಲಿ ಈ ವಿರುದ್ಧ ಹೇಗೆ ಅಂತ “ಕಾಡ್ಗಿಚ್ಚಿನ ಉರಿಗೆ ಸಿಲುಕಿ ಹೆದರಿ ಕಂಗಾಲಾದ ವನಲಕ್ಷ್ಮಿ ಓಡಿ ಹೋಗುವಾಗ ಬಿದ್ದ ಅವಳ ಕೈಯಿಗೆ ಕಂಕಣದಂತೆ ತೋರುತ್ತಿದೆ.” ಎಂದು ಅದನ್ನು ವರ್ಣಿಸಲಾಗಿದೆ.

ಬೃಹತ್ ಸರ್ಪ ಅದು ಯಾವುದೆಂದರೆ ಕರ್ಕೋಟಕ, ಒಟ್ಟು ಎಂಟು ಮಂದಿ ನಾಗನಾಯಕರು, ಅನಂತ, ವಾಸುಕಿ, ಪದ್ಮ, ಮಹಾಪದ್ಮ, ತಕ್ಷಕ, ಕರ್ಕೋಟಕ, ಕುಳಿಕ, ಶಂಖ. ಇವರ ಪೈಕಿ ಆರನೆಯವನು ಕರ್ಕೋಟಕ, ಬಳಿಬಂದ ನಳನಿಗೆ ತಲೆ ಬಾಗುತ್ತಾನೆ ಅದರೆ ಮೈ ಚಲನೆಯಿಲ್ಲ. ಅಚ್ಚರಿಯಿಂದ ನಳ ಕೇಳಿದಾಗ ಹೇಳುತ್ತಾನೆ ಮನುಷ್ಯಭಾಷೆಯಲ್ಲಿ, ನಿನ್ನಂತೆ ನಾನೂ ರಾಜ ನಾಗರಾಜ, ನಾವಿಬ್ಬರೂ ಸಮಾನ ದುಃಖಿಗಳು, ಇಬ್ಬರೂ ಕಷ್ಟದಲ್ಲಿದ್ದೇವೆ, ನೀನು ದ್ಯೂತದಿಂದ ನಾಶವಾದೆ ನಾನು ನಾರದರ ತಂಟೆಗೆ ಹೋದೆ. ಅವರಿಗೆ ಸಿಟ್ಟುಬಂದು ನನ್ನನ್ನು ಶಪಿಸಿದರು “ಎದ್ದು ಹೋಗಲಾರದಂತೆ ಬಿದ್ದಿರು ಇಲ್ಲೇ, ನಳ ಬರುವವರೆಗೆ” ಅಂತ. ಈಗ ನೀನು ಬಂದಿದ್ದೀಯೆ ಇನ್ನು ನನಗೆ ಶಾಪಮುಕ್ತಿ. ರಾಜಪ್ರಭುತ್ವ, ಹಿಂದಿನ ಸಾಮರ್ಥ್ಯ ಎಲ್ಲವೂ ಮರಳಿ ಬರುತ್ತದೆ. ನೀನು ಬಾರದಿದ್ದರೆ ಇಂದು ಇಲ್ಲೇ ನನ್ನ ಅಂತ್ಯವಾಗುತ್ತಿತ್ತು ಎಷ್ಟೋ ಕಾಲದಿಂದ ನಿನ್ನ ಪ್ರತೀಕ್ಷೆಯಲ್ಲಿದ್ದೆ ಅಂತ ಹೇಳುತ್ತಾನೆ.

ಕಲ್ಲಾಗಿ ಬಿದ್ದ ಅಹಲ್ಯೆ ಹಾಗೂ ಕಲ್ಲಿನಂತೆ ಬಿದ್ದ ಕರ್ಕೋಟಕ ಒಂದು ರೀತಿಯ ಸಾದೃಶ್ಯ. ಶರೀರದಲ್ಲಿ ಜ್ಞಾನವಾಹಿನಿ ಹಾಗೂ ಕ್ರಿಯಾವಾಹಿನಿಗಳೆಂಬ ಎರಡು ವಿಧದ ನಾಡಿಗಳಿರುತ್ತವೆ ಒಂದು ಸಂಜ್ಞೆಗೆ ಕಾರಣವಾದರೆ ಒಂದು ಕಾರ್ಯಕ್ಕೆ. ಕ್ರಿಯಾವಾಹಿನಿಗಳಲ್ಲಿ ತೊಂದರೆ ಆದಾಗ ಎಲ್ಲವೂ ತಿಳಿಯುತ್ತಿದ್ದರೂ ಅದಕ್ಕೆ ಪ್ರತಿಕ್ರಿಯೆ ನೀಡಲು ಅವರಿಗೆ ಸಾಧ್ಯವಾಗುವುದಿಲ್ಲ. ಕಣ್ಣಿಗೆ ಕಾಣುತ್ತಿದ್ದರೂ ಮೈಮೇಲೆ ಕುಳಿತ ಒಂದು ನೊಣವನ್ನು ಓಡಿಸುವುದೂ ಅವರಿಂದ ಸಾಧ್ಯವಿಲ್ಲ.

ನಾಗ ಹೇಳುತ್ತಾನೆ, ಸುತ್ತಲೂ ಕಾಡ್ಗಿಚ್ಚು ಹರಡುತ್ತಿದೆ. ನಾನು ಹೆಳವನಂತೆ ಏನೂ ಮಾಡಲು ಸಾಧ್ಯವಿಲ್ಲ, ನೀನು ಆಪದ್ಬಾಂಧವ ಹೆಸರಿಗೆ ತಕ್ಕಂತೆ ಇದ್ದೀಯೆ. ನನ್ನನ್ನು ರಕ್ಷಿಸು, ನಂತರ ನಿನಗೆ ಅಪೂರ್ವವಾದ ಒಂದು ಮಹದುಪಕಾರವನ್ನು ನಾನು ಮಾಡುತ್ತೇನೆ ಎಂದು. ನಳ ಕೇಳಿದ. ಅದು ಸರಿ ಅದರೆ ಈ ಭಾರೀಗಾತ್ರದ ನಿನ್ನನ್ನು ಹೊರಹಾಕೋದು ಹೇಗೆ ಅಂತ. ಆಗ ನಾಗ ಹೇಳಿತು ನಾನು ಕಾಮರೂಪಿ, ಅಷ್ಟಸಿದ್ಧಿಗಳು ನನ್ನಲ್ಲಿವೆ ಓಡಾಡಲು ಸಾಧ್ಯವಿಲ್ಲ ಬಿಟ್ಟರೆ ನನಗೆ ಶರೀರವನ್ನು ಹೃಸ್ವ ಮಾಡಿಕೊಳ್ಳಬಲ್ಲೆ ಅಂತ. ಸರಿ ಹಾಗೆ ಹೇಳಿ ಉಂಗುಷ್ಟ ಮಾತ್ರದವನಾದ.

ಎಷ್ಟು ದೊಡ್ಡವರಾದರೂ ಕಷ್ಟಬಂದಾಗ ಸಣ್ಣವರಾಗಬೇಕಾಗುತ್ತದೆ. ನಾನು ಬದಲಾಗಲ್ಲ ಎನ್ನುವ ಅಹಂಭಾವ ಇದ್ದರೆ ಸುಟ್ಟುಹೋಗಬೇಕಾಗುತ್ತದೆ. ಸಮಯಕ್ಕೆ ತಕ್ಕಂತೆ ರೂಪುತಾಳುತ್ತಾನೆ, ನಳ ಅವನನ್ನು ಎತ್ತಿಕೊಂಡು ಬಂದು ಬೆಂಕಿಯಿಂದ ಹೊರಗೆ ಬಿಡಲು ಹೋಗುವಾಗ ಅದು ಹೇಳುತ್ತದೆ, ನನ್ನನ್ನು ಈಗಲೇ ಬಿಡಬೇಡ, ನಿನಗೆ ಒಳ್ಳೆಯದನ್ನು ಮಾಡುತ್ತೇನೆ. ಒಂದರಿಂದ ಹತ್ತರವರೆಗೆ ಎಣಿಸುತ್ತಾ ಹೆಜ್ಜೆ ಹಾಕು ಎನ್ನುತ್ತಾನೆ. ನಿನಗೆ ದೊಡ್ಡ ಉಪಕಾರ ಮಾಡುತ್ತೇನಿ ಎಂದಾಗ, ನಳನಿಗೆ ಸಮಾಧಾನ ಆಗುತ್ತದೆ. ಇರುವ ನೂರು ಸಮಸ್ಯೆಗಳ ಮಧ್ಯೆ ಒಂದಾದರೂ ಕಳೆಯಬಹುದಲ್ಲ ಎಂದು, ಸರಿ ಹೆಜ್ಜೆ ಲೆಕ್ಕ ಹಾಕುತ್ತಾ ಹೊರಡುತ್ತಾನೆ. ಒಂದು, ಎರಡು,ಮೂರು……

ಒಂದೊಂದೇ ಹೆಜ್ಜೆ ಎಣಿಸುತ್ತಾ ಇಡುತ್ತ ನಳ ಚಕ್ರವರ್ತಿ ಕರ್ಕೋಟಕ ನಾಗನನ್ನು ತನ್ನ ಕೈನಲ್ಲಿ ಹಿಡಿದುಕೊಂಡು ಹೋಗುತ್ತಾ ಇದ್ದಾನೆ ಒಂದು, ಎರಡು, ಮೂರು ಹೇಳುತ್ತಾ ಹೇಳುತ್ತಾ ನಳನಿಗೆ ಏನೋ ಉದ್ವೇಗ ಮುಂದೆ ಒದಗುವ ಶುಭದ ಪ್ರತೀಕ್ಷೆಯಲ್ಲಿ. ಇದುವರೆಗೂ ಆಗಿದ್ದೆಲ್ಲಾ ಅನಿಷ್ಟಗಳೇ, ಹಾಗಾಗಿ ಇನ್ನು ಮುಂದೆ ಒಳ್ಳೆಯದಿನಗಳು ಬರಬಹುದು ಅಂತ ಆಲೋಚನೆಯಲ್ಲಿದ್ದಾನೆ. ಹತ್ತು ಅಂತ ಬಂದಾಗ ಸಂಸ್ಕೃತದಲ್ಲಿ ಆದ್ದರಿಂದ ದಶ ಅಂತ ಹೇಳುತ್ತಾನೆ, ಆ ಕೂಡಲೇ ನಾಗ ಅವನನ್ನು ಬಲವಾಗಿ ಕಚ್ಚುತ್ತಾನೆ. ಪರಮಶ್ರೇಯಸ್ಸಿನ ವಿಚಾರ ಹಾಗಿರಲಿ ಬದಲಾಗಿ ತನ್ನ ಘೋರವಿಷವನ್ನು ಬಾಯಿನಿಂದ ಕಕ್ಕುತ್ತಾ ಬಲವಾಗಿ ಕಚ್ಚಿಬಿಟ್ಟ. ನಳ ಸಾಯಲಿಲ್ಲ, ಬದುಕಲೂ ಇಲ್ಲ. ಏನಾಗಿಹೋಯಿತೆಂದರೆ ಅದು ಅನೂಹ್ಯ, ರಾಜ್ಯ, ಕೋಶ ತನ್ನ ಪತ್ನಿ, ಮಕ್ಕಳು ಇಷ್ಟಮಿತ್ರರು, ಉಟ್ಟಬಟ್ಟೆ ನೆಮ್ಮದಿ ಈ ಎಲ್ಲವನ್ನೂ ಈವರೆಗೆ ಕಳೆದುಕೊಂಡಿದ್ದರೂ ಅವನ ಸ್ಫುರದ್ರೂಪಿ ನಿಲುವು ಇತ್ತು ಆದರೆ ಈಗ ಅದೂ ಹೋಯಿತು. ಆ ಮಾನವ ರೂಪ ಹೋಯಿತು ಬಂದ ರೂಪ ಹೇಗಿತ್ತು ಅಂತ ವರ್ಣಿಸುವುದೂ ಕಷ್ಟ.

ಕನಕದಾಸರು ಹೇಳುತ್ತಾರೆ ಅವನ ರೂಪ ಹೇಗಿತ್ತೆಂದರೆ ದೊಡ್ಡ ಹೊಟ್ಟೆಯ, ಗೂನುಬೆನ್ನಿನ, ಅಡ್ಡ ಮೋರೆಯ, ಗಂಟುಮೂಗಿನ, ದೊಡ್ಡ ಕೈಕಾಲುಗಳ, ಜಡ್ಡುದೇಹದ, ಗುಚ್ಚುಕೊರಳಿನ, ಉದುರಿದ ರೋಮಮೀಸೆಗಳ, ಹರಕು ಕಂಠದ ಹೆಡ್ಡನಾದ. ಕುರೂಪತನದಲಿ ನೃಪತಿ. ಜನ ದೂರದಿಂದ ನೋಡಿಯೇ ನಗುವಂತಹ ರೂಪ ನಳನಿಗೆ ಬಂತು, ಹೇಸುವಂತಹ ರೂಪ ಮುಟ್ಟಲೂ ನೋಡಲೂ. ಬದುಕಿಸುವ ಕರವನ್ನೇ ಕಚ್ಚುವ ನರಸರ್ಪಗಳು ಇನ್ನು ಎಷ್ಟಿಲ್ಲ ಹೇಳಿ. ತನ್ನಷ್ಟಕ್ಕೇ ತಾನು ನಡೆದುಕೊಂಡು ಹೋಗುತ್ತಿದ್ದವ ಹಾಗೇ ಹೋಗಿದ್ದಿದ್ದರೆ ಕಡೇ ಪಕ್ಷ ಅಷ್ಟಾದರೂ ಉಳಿದಿರುತ್ತಿತ್ತು, ಈಗ ಅವನನ್ನು ಉಳಿಸಲು ಹೋಗಿ ಇದ್ದದ್ದೂ ಹೋಯಿತು. ಇದು ನಾಶದ ಪರಾಕಷ್ಠೆ.

ದ್ಯೂತದಿಂದಾಗಿ ಎಲ್ಲವೂ ಕಳೆದು ಹೆಂಡತಿ ಒಬ್ಬಳೇ ಉಳಿದಿದ್ದಳು, ನಂತರ ಪಕ್ಷಿಗಳಿಂದಾಗಿ ಉಟ್ಟಬಟ್ಟೆ ಹೋಯಿತು, ಕಲಿಪ್ರೇರಣೆಯಿಂದಾಗಿಯೋ ಏನೋ ಹೆಂಡತಿಯನ್ನು ಬಿಟ್ಟಹೋಗಿ ಅವಳನ್ನೂ ಕಳೆದುಕೊಂಡ, ಕೊನೆಗೆ ಹುಟ್ಟಿನಿಂದ ಬಂದ ಆಕಾರವೊಂದು ಉಳಿದಿತ್ತು, ಅದೂ ಹೊರಟುಹೋಯಿತು. ಈಗ ಅವನು ನಾನೇ ನಳ ಎಂದು ಹೇಳಿದರೂ ಯಾರೂ ಗುರುತಿಸಲಾರರು. ಅಷ್ಟೇ ಏಕೆ ಹೆಂಡತಿಯೂ ಗುರುತುಹಿಡಿಯಲಾರಳು. ಆ ಕ್ಷಣದಲ್ಲಿ ನಳನಿಗೆ ದಮಯಂತಿಯ ಸ್ಮರಣೆ ಆಗಿರಬಹುದು, ಅವಳು ಈಗ ನಿಜವಾಗಿ ನನ್ನನ್ನು ಒಪ್ಪುತ್ತಾಳಾ ಅಂತ, ಈ ರೂಪದಲ್ಲಿ ಹೋದರೆ ಯಾರು ಅವನನ್ನು ನಳ ಅಂತ ಒಪ್ಪುತ್ತಾರೆ? ಹಾಗಾಗಿ ಮುಂದೆ ಎಲ್ಲವನ್ನೂ ಪಡೆಯಬಹುದೆನ್ನುವ ಅವನ ವಿಶ್ವಾಸವೂ ಮುಗಿಯಿತು. ಇದು ಕೊನೆ. ಈ ರೂಪದಿಂದಾಗಿ ಹಿಂದಿನ ಜಗತ್ತಿನ ಎಲ್ಲ ಸಂಬಂಧಗಳೂ ಶಾಶ್ವತವಾಗಿ ಕಡಿದುಹೋಯಿತು.

ಆಗ ನಳನಲ್ಲಿ ಯಾವ ಭಾವ ಉದಿಸಿತು ಅಂತ ಬೇರೆಬೇರೆ ವ್ಯಾಖ್ಯಾನಕಾರರು ಬೇರೆಬೇರೆ ಅಭಿಪ್ರಾಯ ಪಟ್ಟಿದ್ದಾರೆ.

ಕೃಷ್ಣಾನಂದರ ಪ್ರಕಾರ ತನ್ನನ್ನು ನೋಡಿಕೊಂಡು ತನಗೇ ಬೇಸರವಾಯಿತು, ನಾನೇನು ಮಾಡಿದೆ ನನ್ನನ್ಯಾಕೆ ಕಚ್ಚಿದೆ ಅಂತ ಬೇಸರಗೊಂಡ,

ಕನಕದಾಸರ ಪ್ರಕಾರ, ಏನೋ ಒಳ್ಳೆಯದಾಗುತ್ತೆ ಅಂತ ಹಿಡಿಯಲು ಹೋದರೆ ಅದೇ ಕೆಂಡವಾಯಿತು. ಸರ್ಪದಂತಹ ಕ್ರೂರಜಂತುಗಳೊಡನೆ ಸಹವಾಸ ಮಾಡಿದ್ದರಿಂದ ಹೀಗಾಯಿತು. ಅಂತ

ಮಹಾಭಾರತದಲ್ಲಿ ಮಾತ್ರಾ ವ್ಯಾಸರು ನಳ ನಿರ್ವಿಕಾರನಾದ ಅಂತ ಹೇಳುತ್ತಾರೆ. ವಿಸ್ಮಿತನಾಗಿ ನಿಂತ, ಅತ್ತ ನಾಗನಿಗೆ ಮೂಲರೂಪ ಬಂದಿದೆ. ವೈಭವದ ರೂಪದಲ್ಲಿ, ಆದರೂ ನಳ ನಿಶ್ಚಲ ಅದೇ ನಳನ ಗಾಂಭೀರ್ಯ, ಇಲ್ಲಿ ಪ್ರಶ್ನೆ ಬರೋದು ಇದಕ್ಕೆ ಹೆಜ್ಜೆ ಯಾಕೆ ಎಣಿಸಿದ ಅಂತ, ಉತ್ತರ ಏನೆಂದರೆ ಕರ್ಕೋಟಕನೇ ಆಗಲಿ ಕಚ್ಚಬೇಕೆಂದರೆ ನಳನ ಒಪ್ಪಿಗೆ ಇಲ್ಲದಿದ್ದರೆ ಹೇಗೆ ಸಾಧ್ಯ? ಅದಕ್ಕೆ ಈ ತಂತ್ರ. ದಶ ಎಂದರೆ ಹತ್ತು ಎಂದು ಅರ್ಥವಾದರೂ ಸಂಸ್ಕೃತದಲ್ಲಿ ಕಚ್ಚು ಎಂಬ ಅರ್ಥವೂ ಇದೆ. ಹಾಗಾಗಿ ಸಂಖ್ಯೆಯ ಎಣಿಕೆ, ಅವನು ದಶ ಎಂದು ಹೇಳಿದಾಗ ತನ್ನನ್ನು ಕಚ್ಚು ಅಂತ ಹೇಳಿದ ಅಂತ ಭಾವಿಸಿದಂತೆ ಕಚ್ಚಿದ. ನೀನೇ ಹೇಳಿದೆ ಅದಕ್ಕಾಗಿ ಕಚ್ಚಿದ್ದು ಅಂತ ಭಾವ. ಇದು ನಳ ಎಂತಹ ಮಹಾತ್ಮನೆಂಬುದನ್ನು ಸೂಚಿಸುತ್ತದೆ. ಅವನಾಗಿ ಕೇಳದೇ ಬೇರೆಯವರಿಗೆ ಆ ಕಾರ್ಯ ಮಾಡಲೂ ಸಾಧ್ಯವಿಲ್ಲ. ನಳ ಸುಮ್ಮನೇ ನಾಗನನ್ನು ನೋಡಿದ ಇದೇನಾ ನಿನ್ನ ಪ್ರತ್ಯುಪಕಾರ ಅಂತ.

“ಬದುಕಿಸಿದ ಕರವನ್ನೇ ಕಚ್ಚುವ ವಿಷಸರ್ಪಗಳು ಎಷ್ಟಿಲ್ಲ? ನರಸರ್ಪಗಳು ಎಷ್ಟಿಲ್ಲ!” ಆ ಕಥೆ ನೀವು ಕೇಳಿದ್ದೀರಿ, ಸಂತನೊಬ್ಬ ನೀರಿನಲ್ಲಿ ಮುಳುಗುತ್ತಿದ್ದ ಚೇಳನ್ನು ಹಿಡಿದು ನೀರಿನಿಂದ ಹೊರಹಾಕಲು ಪ್ರಯತ್ನಿಸುತ್ತಿದ್ದ, ಅದು ಬಾರಿಬಾರಿಗೂ ಅವನನ್ನು ಕಚ್ಚುತ್ತಿತ್ತು, ಅದರೂ ಅವನು ಪ್ರಯತ್ನಪಟ್ಟು ಅದನ್ನು ಹೊರಹಾಕಿದ. ನೋಡುತ್ತಿದ್ದ ವ್ಯಕ್ತಿ ಕೇಳುತ್ತಾನೆ, ನೀವು ಅದು ಅಷ್ಟು ತೊಂದರೆ ಕೊಟ್ಟರೂ ಮತ್ತೆ ಮತ್ತೆ ಯಾಕೆ ಪ್ರಯತ್ನ ಮಾಡುತ್ತಿದ್ದೀರಿ? ಅಂತ. ಆಗ ಸಂತರು ಹೇಳುತ್ತಾರೆ, ಕಚ್ಚುವುದು ಅದರ ಸ್ವಭಾವ ಎಂತಹ ವಿಷಮಸ್ಥಿತಿಯಲ್ಲಿಯೂ ಅದು ತನ್ನ ಸ್ವಭಾವವನ್ನು ಬಿಡಲಿಲ್ಲ, ಇನ್ನು ನಾವು ಬಿಟ್ಟರೆ ಹೇಗೆ? ನಮ್ಮ ಸ್ವಭಾವ ರಕ್ಷಣೆ ಮಾಡುವುದು, ಹಾಗಾಗಿ ಮಾಡುತ್ತಿದ್ದೆವು ಅಂತ. ಪ್ರಪಂಚದಲ್ಲಿ ಎರಡೂ ತರಹದವರು ಇರುತ್ತಾರೆ, ಅಮೃತವನುಂಡು ವಿಷವನ್ನು ಕೊಡುವವರೂ ಇದ್ದಾರೆ.

ನಳನ ಒಂದು ನೋಟ ಮಾತ್ರಾ ಇದು ನಿನ್ನ ಕೆಲಸ ಎಂದು ಹೇಳಿದಂತೆ ಇರುತ್ತದೆ. ಕರ್ಕೋಟಕ ಸಾಂತ್ವನ ಮಾಡುತ್ತಾನೆ. ಕೆಟ್ಟದ್ದು ಅಂತ ಮೇಲ್ನೋಟಕ್ಕೆ ಕಾಣುವುದೆಲ್ಲವೂ ಕೆಟ್ಟದ್ದಾಗಿರಲ್ಲ, ನಾನು ನಿನಗೆ ಮಾಡಿದ್ದು ಕೆಟ್ಟದಲ್ಲ ಅದು ಒಳ್ಳೆಯದೇ. ಇಂದು ನಿನಗೆ ಅಪ್ರಿಯವಾದಂತೆ ಕಾಣುತ್ತದೆ ಆದರೆ ಮುಂದೆ ಒಂದುದಿನ ಅದೇ ಅಮೃತೋಪಮವಾಗಿರುತ್ತದೆ.

ಕಹಿಯಾದ ಔಷಧ ಕುಡಿದ ಮೇಲೆ ಉಪಕಾರಿಯಾಗುವುದಿಲ್ಲವೇ ಹಾಗೆ. “ನಾನು ಕಚ್ಚಿದ್ದು ನಳನನ್ನಲ್ಲ, ಕಲಿಯನ್ನು. ನನ್ನ ಗುರಿ ಬೇರೆ ಇತ್ತು. ಕಲಿಗೆ ದಮಯಂತಿಯನ್ನು ಪಡೆಯಬೇಕೆಂದು ಇತ್ತು, ಆದರೆ ಅವಕಾಶ ಇರಲಿಲ್ಲ ಹಾಗಾಗಿ ೧೨ ವರ್ಷಗಳ ಕಾಲ ಕಾದ, ಒಂದು ದಿನ ನಿನ್ನಿಂದ ಆದ ಒಂದು ಸಣ್ಣ ತಪ್ಪಿನಿಂದಾಗಿ ಅಧರ್ಮದಲ್ಲಿ ಸಿಲುಕಿದೆ, ನಿನ್ನೊಳಗೆ ಆಗ ಕಲಿಪ್ರವೇಶ ಮಾಡಿದ, ಅನಂತರದಲ್ಲಿಯೇ ಇದೆಲ್ಲವೂ ನಡೆದಿದ್ದು, ಕಲಿಯೇ ಪುಷ್ಕರನಿಗೆ ಪ್ರೇರಣೆ ಕೊಟ್ಟಿದ್ದು. ದ್ಯೂತದಲ್ಲಿಯೂ ದಳ, ಕಾಯಿಗಳಲ್ಲಿ ಸೇರಿಕೊಂಡು ನೀನು ಎಲ್ಲವನ್ನೂ ಕಳೆದುಕೊಳ್ಳುವಂತೆ ಮಾಡಿದ, ದಮಯಂತಿಯನ್ನೂ ಪಡೆದುಕೊಳ್ಳಲು ಯತ್ನಿಸಿದ. ನೀನು ಆಗ ಪಣವಾಗಿಡಲಿಲ್ಲ, ಹಕ್ಕಿಯಾಗಿ ಬಂದು ಬಟ್ಟೆಯನ್ನು ಕೂಡಾ ಅಪಹರಿಸಿದ, ಹಾಗಾಗಿ ನನ್ನ ಗುರಿ ಈಗ ಕಲಿ. ಯಾರಿಂದಾಗಿ ನೀನು ಇಷ್ಟು ನೋವು, ಕಷ್ಟದಲ್ಲಿದ್ದೆಯೋ ಈ ಕ್ಷಣದಿಂದ ಅವನಿಗೆ ಶಿಕ್ಷೆ ಪ್ರಾರಂಭ. ನಿನ್ನ ಅಕಾರಣ ವೈರಿಗೆ ಕರ್ಕೋಟಕ ಕೊಡುವ ಶಿಕ್ಷೆ ಇದು. ನಿನ್ನ ರೂಪ ಸದ್ಯ ಹೀಗಿರಲಿ, ನಿನಗೆ ಈಗ ಬೇಕಾಗಿರುವುದು ಅಕ್ಷವಿದ್ಯೆ, ಅದನ್ನು ಪಡೆದರೆ ನಿನ್ನ ರಾಜ್ಯ ಮರಳಿ ನಿನ್ನ ಕೈಗೆ ಬರುತ್ತದೆ. ಅದನ್ನು ನೀನು ನಿಜರೂಪದಲ್ಲಿ ಪಡೆಯಲಾರೆ ಈ ರೂಪದಿಂದ ಪಡೆಯಬಹುದು. ಪಡೆದ ನಂತರ ಯಾವಾಗ ನಿನಗೆ ಈ ರೂಪ ಬೇಕೋ ಆಗ ನಾನು ಕೊಡುವ ಬಟ್ಟೆಯನ್ನು ತೆಗೆದುಕೊಂಡು ಹೊದ್ದು ನನ್ನನು ಸ್ಮರಿಸು ಆಗ ನೀನು ಮೊದಲಿನಂತೆ ಆಗುತ್ತೀಯೆ. ನೀನು ನಿರಪರಾಧಿ, ನಿನ್ನನ್ನು ನೋಯಿಸಿದ ಕಲಿಯನ್ನು ಇನ್ನು ನಾನು ಪೀಡಿಸುತ್ತೇನೆ, ಸಾಕು ಎನ್ನುವಂತೆ ಮಾಡುತ್ತೇನೆ.

ಈ ಸಮಯಗಳಲ್ಲಿ ಅಷ್ಟು ವ್ಯತ್ಯಾಸ ಇಲ್ಲ. ನಲ ದಮಯಂತಿಯರು ಒಂದೇ ವೇಳೆಯಲ್ಲಿ ಸರ್ಪವನ್ನು ಕಾಣುತ್ತಾರೆ. ದಮಯಂತಿ ಕಲಿಯನ್ನು ಶಪಿಸಿದ ವೇಳೆಯಲ್ಲಿಯೇ ಕರ್ಕೋಟಕ ನಳನಿಗೆ ಅನುಗ್ರಹ ಮಾಡುತ್ತಾನೆ. ಈ ಇಬ್ಬರ ಮಧ್ಯದ ಬಂಧ ಆ ಮಟ್ಟಿನದ್ದು. ಇವನು ಸರ್ಪವನ್ನು ಕಾಪಾಡುತ್ತಾನೆ, ಅವಳನ್ನು ಸರ್ಪದಿಂದ ದೈವವೇ ಉಳಿಸುತ್ತದೆ. ಅಲ್ಲಿ ದಮಯಂತಿ ಶಪಿಸುತ್ತಾಳೆ, ಇಲ್ಲಿ ಕರ್ಕೋಟಕ ಕಲಿಯನ್ನು ಕಡಿಯುತ್ತಾನೆ. ಹೀಗೆ ಎರಡೂ ಪೂರಕ. ಆದರೆ ಕಲಿಗೆ ಸದ್ಯಕ್ಕೆ ಹೊರಗೆ ಬರಲು ಸಾಧ್ಯವಿಲ್ಲ ಒಳಗೆ ಇರುವವರೆಗೂ ಘೋರಪೀಡನೆ ಇರುತ್ತದೆ, ದೇವತೆಗಳ ಆಶೀರ್ವಾದ, ಮಾತು ಹೀಗೆ ಫಲಿಸಿತು, ನಳನ ಒಳಗೆ ಇರುವವರೆಗೂ ಅವನು ಕರ್ಕೋಟಕ ವಿಷದಲ್ಲಿ ಮುಳುಗಿರಬೇಕು. ಅದರಲ್ಲಿ ನಿತ್ಯ ಕುದಿಯಬೇಕು. ಇನ್ನು ನಿನಗಲ್ಲ ನಿನ್ನೊಳಗಿರುವ ಕಲಿಗೆ ಮಾತ್ರವೇ ಕಷ್ಟ, ಅಷ್ಟೇ ಅಲ್ಲ ಇನ್ನು ಇದರ ಜೊತೆಗೆ ಹಲವು ವರಗಳೂ ಸಿಗುತ್ತವೆ, ಹಲ್ಲಿರುವ ಪ್ರಾಣಿಗಳಿಂದ ಇನ್ನು ಮುಂದೆ ನಿನಗೆ ಆಪತ್ತಿಲ್ಲ, ಶತ್ರುಬಾಧೆಯು ನಿನ್ನನ್ನು ಬಾಧಿಸುವುದಿಲ್ಲ, ಪರಮಜ್ಞಾನಿಯಾಗುತ್ತೀಯೆ, ಹೀಗಾಗಿ ಜೀವಕ್ಕೂ ಶ್ರೇಯಸ್ಸು, ಇದು ನನಗೆ ನೀನು ಮಾಡಿದ ಸಹಾಯದ ಪ್ರತಿಫಲ, ನನ್ನ ವಿಷದಿಂದ ಕೂಡಿದ ನಿನ್ನನ್ನು ಮುಂದೆ ಯಾವ ವಿಷವೂ ಬಾಧಿಸುವುದಿಲ್ಲ. ನಿನಗೆ ಮುಂದೆ ಯುದ್ಧದಲ್ಲಿ ಸೋಲಿಲ್ಲ.

ಇನ್ನು ಮುಂದಿನ ಸಂಗತಿಗಳನ್ನು ನಿನಗೆ ಹೇಳುತ್ತೇನೆ ಕೇಳು, ಇಲ್ಲಿಂದ ನೀನು ನೇರ ಅಯೋಧ್ಯೆಗೆ ಹೋಗು, ಅಲ್ಲಿನ ರಾಜನಾದ ಋತುಪರ್ಣನ ಸಾರಥಿಯಾಗಿ ಬಾಹುಕನೆಂಬ ಹೆಸರನ್ನು ಇಟ್ಟುಕೊಂಡು ಇರು, ನಿನಗೆ ಅಶ್ವಹೃದಯವಿದ್ಯೆ ಕರಗತ, ಅವನಿಗೆ ಕುದುರೆಗಳ ಹುಚ್ಚು. ಅವನು ಅಕ್ಷವಿದ್ಯೆಯಲ್ಲಿ ಪ್ರವೀಣ ನಿನಗೆ ಅದನ್ನು ಪಡೆದುಕೊಳ್ಳಲಿಕ್ಕಿದೆ. ಮುಂದೆ ಒಂದು ಸಂದರ್ಭ ಎದುರಾಗಿ ನಿಮ್ಮಿಬ್ಬರಲ್ಲಿ ಪರಸ್ಪರ ವಿದ್ಯೆಗಳು ಬದಲಾಗುವ ಅವಕಾಶ ಬರುತ್ತದೆ ಅದನ್ನು ಪ್ರತೀಕ್ಷೆ ಮಾಡು. ಅವನ ಆಳಾಗಿ ಬೂದಿ ಮುಚ್ಚಿದ ಕೆಂಡದಂತೆ ಬಾಳು, ಅಯೋಧ್ಯಾಧಿಪತಿ ನಿನ್ನ ಮಿತ್ರನಾಗುತ್ತಾನೆ, ಶೋಕ ಬಿಡು ರಾಜ್ಯ, ಕೋಶ, ಪತ್ನೀ ಪುತ್ರ ಮುಂತಾದ ಪೂರ್ವ ವೈಭವವೆಲ್ಲವೂ ಮಿಗಿಲಾಗಿ ಸಿಗುತ್ತದೆ. ಈ ನನ್ನ ವಸ್ತ್ರ ಬಹಳ ಮುಖ್ಯ ತಗೋ ಅಂತ ಕೊಟ್ಟ.

ಇದು ವಿಶೇಷ ಸಂದರ್ಭ ನೋಡಿ, ಒಳಿತು ಹೇಗೆ ಬರುತ್ತದೆ ನಮ್ಮ ಜೀವನದಲ್ಲಿ ಅಂತ, ದ್ಯೂತ ಒಳಿತು ಎನಿಸಬಹುದು ಅದರೆ ಅದು ತಂದಿಟ್ಟ ಅಪಸವ್ಯಗಳು ಹಲವು. ಆದರೆ ಕರ್ಕೋಟಕ ವಿಷವು ಔಷಧವಾಗಿ ಉಪಯೋಗಕ್ಕೆ ಬಂದಿತು. ಹಾಗಾಗಿ ಒಳ್ಳೆಯದನ್ನು ಮಾಡಿ ಕೆಟ್ಟದಾಯಿತು ಅನ್ನಬಾರದು, ದೇವರು ನೋಡಿದ್ದಾನೆ ಅವನು ಮಾಡುತ್ತಾನೆ ಅಂತ ಇರಬೇಕು. ಪ್ರತ್ಯುಪಕಾರವನ್ನು ಬಯಸಬಾರದು, ಅವನ ಲೆಕ್ಕ ನಮಗೆ ಸಿಗಲ್ಲ, ಅಚ್ಚಳಿಯದ ಅಕ್ಷರಗಳಂತೆ ಅವು. ಮತ್ತೆ ಶುಭ ತರುವುದರಲ್ಲಿ ಯಾವ ಸಂದೇಹವೂ ಇರುವುದಿಲ್ಲ. ನಾವು ಮಾಡುವ ಉಪಕಾರಗಳು ಎಂದಿಗೂ ನಮ್ಮ ಕೈ ಹಿಡಿಯುತ್ತವೆ. ಎಷ್ಟೋ ಬಾರಿ ನಾವು ನಾವಾಗಿ ಕಾರ್ಯಸಾಧನೆ ಮಾಡುವುದು ಸಾಧ್ಯವಿಲ್ಲ, ಯಾರೋ ಆಗಿ ಮಾಡಬೇಕಾಗಿರುತ್ತೆ, ಅದಕ್ಕಾಗಿ ರಾಜಾಧಿರಾಜನಾದರೂ ನಾವು ಯಾರದ್ದೋ ಆಳಾಗಲು ಸಿದ್ಧರಾಗಿರಬೇಕು. ಚಕ್ರವರ್ತಿನಿ ಸೈರಂಧ್ರಿಯಾಗಿರಲು ಸಿದ್ಧವಾಗಿರಬೇಕು. ಪರಿಸ್ಥಿತಿಗೆ ಹೊಂದಿಕೊಳ್ಳುವವರು ಮಾತ್ರಾ ಉದ್ಧಾರ ಆಗುತ್ತಾರೆ ಇಲ್ಲದಿದ್ದರೆ ವಿನಾಶ ಖಚಿತ. ಎತ್ತರದ ಮರಗಿಡಗಳಲ್ಲಿ ಸಿಕ್ಕುವ ಎಲೆಗಳನ್ನು ತಿಂದುಕೊಂಡು ಬದುಕಲು ಪ್ರಯತ್ನಿಸಿದ ಜಿರಾಫೆ ಉಳಿಯಿತು. ಅದೇ ಪ್ರಕೃತಿಗೆ ಹೊಂದಿಕೊಂಡು ಬದುಕಲು ಆಗದೇ ಡೈನಾಸರಸ್ ವಿನಾಶ ಹೊಂದಿತು. ಇಲ್ಲಿ ನಳ ದಮಯಂತಿ ಇಬ್ಬರೂ ಅಷ್ಟೆತ್ತರದಿಂದ ಆಳಾಗುವ ಹಂತಕ್ಕೂ ಇಳಿದು ಸೇವೆ ಮಾಡಲು ಸಿದ್ಧರಾದರು ಹಾಗಾಗಿ ಅವರಿಗೆ ಲಾಭವಾಯಿತು. ನಳನಂತೂ ಕುರೂಪಿಯಾಗಿ ಜನರೆಲ್ಲರೂ ಹೇಸುವಂತಹ ರೂಪದಿಂದ ಇದ್ದು ತನ್ನ ಕಾರ್ಯವನ್ನು ಮಾಡಿಕೊಳ್ಳಬೇಕಾಗಿದೆ, ರೂಪಮಾತ್ರವೇ ಮಾಸಿದೆ ಒಳಗಿನ ಯಾವ ಚೈತನ್ಯವೂ ಮಾಸಿಲ್ಲ, ಅವನ ದಿವ್ಯವಾದ ತೇಜಸ್ಸು, ಶಕ್ತಿಗಳು ಎಲ್ಲವೂ ಹಾಗೆಯೇ ಇದೆ ಹಾಗಾಗಿ ಅವನು ಮುಂದೆ ಪೂರ್ಣವಾಗಿ ಪೂರ್ವಸ್ಥಿತಿಯನ್ನು ಪಡೆಯುವುದು ನಿಶ್ಚಿತ. ಅದರೂ ಕಷ್ಟವೇ ಇಂಥಾ ಸ್ಥಿತಿಯಲ್ಲಿ, ವಿಕೃತರೂಪದಲ್ಲಿ, ಯಾರದೋ ಮನೆಯ ತೊತ್ತಾಗಿ ರಾಜಾಧಿರಾಜನಾದವನು ಕೆಲಸ ಮಾಡಬೇಕಾದ ಸ್ಥಿತಿ ಇದೆಯಲ್ಲ ಅದು. ಅದಕ್ಕಿಂತ ತಾನೇ ಬಿಟ್ಟಬಂದ ದಮಯಂತಿ ಏನಾಗಿರುವಳೋ? ಆ ಭಾವ ಅವನ ಮನಸ್ಸಿನಲ್ಲಿ ಪ್ರತೀಕ್ಷಣ ಇದೆ, ಜೊತೆಗೇ ಅವನ ಮನಸ್ಸನ್ನು ಅವಳಿಂದ ಬೇರೆಯಾದ ದುಃಖ ಅನುಕ್ಷಣ ಕಾಯಿಸುತ್ತಿದೆ. ಮುಂದೆ ಏನಾಯಿತು? ಅವನು ತನ್ನ ಕಾರ್ಯದಲ್ಲಿ ಹೇಗೆ ಮುಂದುವರೆದ? ದಮಯಂತಿ ಏನಾದಳು? ಮುಖ್ಯವಾಗಿ ನಮ್ಮ ವಿಷಯ ಕಲಿಯದ್ದು, ಅವನು ಪರಿಸ್ಥಿತಿ ಏನಾಯಿತು ಇದೆಲ್ಲವನ್ನೂ ಮುಂದೆ ತಿಳಿದುಕೊಳ್ಳೋಣ.

ಚಿತ್ರ:ಅಂತರ್ಜಾಲದಿಂದ

 

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments