#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
27-08-2018:
ಸುದೇವನೆಂಬ ಸುದೈವ
ಯಾವನ ಆನ್ವೇಷಣೆಯೇ ಜೀವನದ ಸಾರ್ಥಕತೆಯೋ, ಯಾವ ಮಹಾತೇಜಸ್ಸಿನ ದರ್ಶನದ ಬಳಿಕ ಮುಂದೆ ಆಗಬೇಕಾದದದ್ದು ಏನೂ ಇಲ್ಲವೋ ಆ ಶ್ರೀಕೃಷ್ಣನ ಚರಣಗಳಲ್ಲಿ ಪ್ರಣಾಮ ಮಾಡಿ ಮುಂದಿನ ಭಾಗಕ್ಕೆ ಪ್ರವೇಶ ಮಾಡೋಣ.
ಹೀಗೆ ಜನ್ಮಜಾತವಾಗಿ ಬಂದ ರೂಪದವರೆಗೂ ಎಲ್ಲವನ್ನೂ ಕಳೆದುಕೊಂಡ, ತನ್ನನ್ಯಾರೂ ಗುರುತಿಸಲಾರದ ಸ್ಥಿತಿಗೆ ನಳ ಬಂದ. ದಮಯಂತಿಯನ್ನು ಯಾವಾಗ ತ್ಯಜಿಸಿದನೋ ಆಗಲೇ ರೂಪದ ಮೇಲಿನ ಆಸೆಯನ್ನೂ ಬಿಟ್ಟಿದ್ದಾನೆ, ಇನ್ನು ಯಾರಿಗಾಗಿ ಬೇಕು ಈ ರೂಪ. ದಮಯಂತಿಯೂ ಹಾಗೇ, ಪ್ರಸಾದನವನ್ನು ತ್ಯಜಿಸಿದ್ದಳು. ಅವಳಾದರೂ ಯಾರಿಗಾಗಿ ಅದನ್ನು ಮಾಡಿಕೊಳ್ಳಬೇಕಿತ್ತು? ಅದನ್ನು ಮೆಚ್ಚಿಕೊಳ್ಳುವ ಪತಿಯೇ ಇಲ್ಲದಿದ್ದ ಮೇಲೆ. ಇಂದಿನ ಕಾಲಮಾನದಲ್ಲಿ ಹಾಗೇ ಆಗಿದೆ. ಪತ್ನಿ ಮನೆಯಿಂದ ಹೊರಗೆ ಹೋಗುವಾಗ ಅಲಂಕಾರ ಮಾಡಿಕೊಳ್ಳುತ್ತಾಳೆ, ಹೊರಗಿನವರನ್ನು ಮೆಚ್ಚಿಸಲಿಕ್ಕಾಗಿ. ಆದರೆ ಮನೆಯೊಳಗೆ ನಿಜವಾಗಿ ಮೆಚ್ಚಬೇಕಾಗಿರುವವರ ಎದುರಿನಲ್ಲಿ ಅಲಂಕಾರ ಇರುವುದಿಲ್ಲ, ಎಂತಹ ವಿಪರ್ಯಾಸ ನೋಡಿ.

ಶ್ರೀಶ್ರೀ ಅಮೃತವಾಣೀ…
ದಮಯಂತಿ ಅಲಂಕಾರ ಮಾಡಿಕೊಳ್ಳಲಿಲ್ಲ, ನಳನ ರೂಪ ತಾನಾಗಿಯೇ ಹೋಯಿತು, ನಳನಿಗಾದರೂ ಹೆಂಡತಿಯನ್ನು ಕಾಡಿನಲ್ಲಿ ಬಿಟ್ಟ ಹೋಗಿದ್ದಕ್ಕಾಗಿ ತಕ್ಕ ಶಾಸ್ತಿ ಅಯಿತೆಂದು ಭಾವಿಸಬಹುದು, ಆದರೆ ದಮಯಂತಿಯದ್ದು ಏನು ತಪ್ಪಿತ್ತು? ಅವಳಿಗೇಕೆ ಈ ಶಿಕ್ಷೆ ? ಅಂತ ಕೇಳಬಹುದು. ದಮಯಂತಿಯ ತಪ್ಪು ಏನೆಂದರೆ ಅವಳು ದೇವತೆಗಳನ್ನೂ ಮೀರಿ ಮನುಷ್ಯನನ್ನು ವರಿಸುವ ನಿರ್ಣಯ ಮಾಡಿದಳು. ಅವಳ ಶಕ್ತಿಗೆ, ನಿಷ್ಠೆಗೆ ಪರೀಕ್ಷೆ ಅದು.
ನಳನಿಗೆ ಈಗ ಸಮಾಧಾನ ಬಂದಿದೆ, ಕರ್ಕೋಟಕ ಕೆಲವು ವಿವರಗಳನ್ನು ನೀಡಿದ್ದಾನೆ. ದ್ಯೂತದ ವಿವರಗಳನ್ನು ಅರಿಯಬೇಕು, ಅದರ ಸೂಕ್ಷ್ಮ ನಡೆಗಳ ಕುರಿತು ತಿಳಿದುಕೊಳ್ಳಬೇಕು, ಅದು ನಿನಗೆ ಗೋಚರವಾದರೆ ಮಾತ್ರಾ ನೀನು ಮತ್ತೆ ನಿಷಧಾಧಿಪತಿ ಆಗಲು ಸಾಧ್ಯ. ಹಾಗಾಗಿ ಋತುಪರ್ಣನಲ್ಲಿಗೆ ಹೋಗಿ ಅದನ್ನು ಪಡೆದುಕೋ, ಅದು ಸಿಗುವವರೆಗೂ ಅವನಲ್ಲಿ ನೌಕರಿ ಮಾಡಿಕೊಂಡಿರು, ಮುಂದೆ ರಾಮ ಜನಿಸುವ ಮನೆಯಲ್ಲಿ ಕೆಲವು ಕಾಲ ಸೇವೆ ಮಾಡಿದರೆ ನಿನ್ನ ಶಾಪ ವಿಮೋಚನೆ ಅಗಬಹುದು, ಎಂಬುದಾಗಿ.
ಒಂದು ಕಾಲದಲ್ಲಿ ಆನೆ, ಕುದುರೆ, ರಥಗಳಲ್ಲಿ ಸಂಚರಿಸುತ್ತಿದ್ದವನು ಈಗ ಪಾದಚಾರಿಯಾಗಿ ಹೊರಟ. ಕಾಲುದಾರಿಗಳಲ್ಲಿ, ಕಾಡಿನ ದಾರಿಗಳಲ್ಲಿ ನಡೆದುಕೊಂಡು ಹೊರಟ. ಏಕಾಂಗಿಯಾಗಿ ಹತ್ತು ದಿನಗಳ ಕಾಲ ನಡೆದು ಅಯೋಧ್ಯೆಯನ್ನು ತಲುಪಿದ. ಮೊದಲು ಅವನಿಗೆ ಸರಯೂ ನದಿಯ ದರ್ಶನ ಆಯಿತು. ಬ್ರಹ್ಮನ ಮನಸ್ಸಿನಿಂದ ಜನಿಸಿದ ಮಾನಸಸರೋವರವೇ ಕರಗಿ ಹರಿದು ‘ಸರಯೂ’ ಎಂದು ಕರೆಸಿಕೊಂಡಿತು ಎಂದು ಹೇಳಲಾಗಿದೆ. ಅದರ ತೀರದಲ್ಲಿ ಅವನಿಗೆ ಯಜ್ಞಯೂಪಗಳ ಸಾಲುಗಳು ಕಾಣಿಸಿತು. ಯೂಪವೆಂದರೆ ಯಜ್ಞಚಿಹ್ನೆ. ಸೂರ್ಯವಂಶದ ಪೂರ್ವಿಕರು ಎಷ್ಟು ಯಜ್ಞಗಳನ್ನು ಅಚರಿಸಿದ್ದರೋ ಅಷ್ಟು ಯೂಪಗಳು ಅಲ್ಲಿದ್ದವು.
ನಳ ಸರಯೂ ನದಿಯನ್ನು ದಾಟಿ ಅಯೋಧ್ಯಾನಗರವನ್ನು ಪ್ರವೇಶಿಸಿದ, ನೇರ ಅರಮನೆಗೆ ಹೋಗಿ ರಾಜನನ್ನು ಕಂಡ, ತನ್ನ ಪರಿಚಯ ಮಾಡಿಕೊಂಡ, “ನಾನು ಬಾಹುಕ” ಅಂತ ಅಷ್ಟೇ ಹೇಳಿದ. ತನ್ನ ವಂಶ ತಂದೆ ತಾಯಿ ಯಾವುದನ್ನೂ ಹೇಳುವಂತಿರಲಿಲ್ಲ, ನಿಜ ಹೇಳುವಂತಿಲ್ಲ ಸುಳ್ಳನ್ನು ಹೇಳಲಾರ. ಹಾಗಾಗಿ ಹೇಳಲೇ ಇಲ್ಲ. ಕೇವಲ ಹೆಸರು ಹೇಳಿ, ತಾನು ಅಶ್ವವಿದ್ಯಾ ವಿಶಾರದ, ಜಗತ್ತಿನಲ್ಲಿ ನನ್ನ ಸಮನಾಗಿ ಇದನ್ನು ಬಲ್ಲವನು ಇನ್ನೊಬ್ಬನಿಲ್ಲ ಎಂದ, ಇದೇ ನಿಜವಾದ ರೀತಿಯ ಪರಿಚಯ. ಮನೆತನದ ಪರಿಚಯ ಕೊಟ್ಟರೆ ಏನು ಉಪಯೋಗ? ತನ್ನಪ್ಪ ಹೀಗೆ, ತನ್ನ ಅಜ್ಜ ಹಾಗೆ ಎನ್ನುವ ಬದಲು, ತಾನು ಹೇಗೆ ತನ್ನ ಶಕ್ತಿ ಸಾಮರ್ಥ್ಯಗಳು ಏನು ಅಂತಲೇ ಪರಿಚಯ ಮಾಡಿಕೊಡಬೇಕು. ಹೆಸರಾಂತ ವೈಣಿಕರ ಮನೆತನದ ಮಕ್ಕಳಿದ್ದರಂತೆ ಅವರ ತಾತಂದಿರು ಎಲ್ಲರೂ ವೀಣಾ ವಿದ್ವಾಂಸರು ಆದರೆ ಈ ಮೊಮ್ಮಕ್ಕಳ ಕಾಲಕ್ಕೆ ಯಾರಿಗೂ ಸಂಗೀತದ ಗಂಧಗಾಳಿಯೂ ಇಲ್ಲ, ಅವರು ಅದನ್ನಿಟ್ಟು ಪೂಜೆ ಮಾಡುತ್ತಿದ್ದಾರೆ ಅಷ್ಟೇ. ಹೀಗಾದರೆ ಏನು ಚಂದ. ಗತವೈಭವಕ್ಕಿಂತ ಸ್ಥಿತವೈಭವ ಮುಖ್ಯ. ಇತಿಹಾಸ ಏನಿದ್ದರೇನು ಈಗ ಏನಾಗಿದ್ದೀವಿ ಅನ್ನುವುದು ಮುಖ್ಯ.
ಇತರರೊಂದಿಗೆ ಸಂಭಾಷಣೆ ನಡೆಸುವಾಗ ಎದರು ಇರುವವನಿಗೆ ಏನು ಆಸಕ್ತಿಕರ ವಿಷಯ ಇದೆಯೋ ಅದನ್ನು ಕುರಿತು ಮಾತು ಪ್ರಾರಂಭಿಸಬೇಕು. ಆಗ ಅವನು ಮಾತುಕಥೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾನೆ, ಅದು ಬಿಟ್ಟು ಬರೀ ನಮ್ಮದೇ ಕಥೆ ಹೇಳಿದರೆ ಕೇಳುವವರು ಇರುವುದಿಲ್ಲ. ಅವರಿಗೆ ಬೇಸರ ಆಗುತ್ತದೆ. ಹಾಗಾಗಿ ನಳ ನೇರವಾಗಿ ಅಶ್ವಗಳ ಬಗ್ಗೆ ಮಾತನಾಡಿದ ಅದು ಋತುಪರ್ಣನಿಗೆ ಆಸಕ್ತಿದಾಯಕವಾಗಿತ್ತು. ಆಗ ಸ್ವಲ್ಪ ಮುಂದೆ ಸರಿದು ಕುಳಿತ ರಾಜನನ್ನು ಗಮನಿಸಿ ಮಾತು ಮುಂದುವರೆಸಿದ ನಳ, ನಾನು ರಾಜನೀತಿಯ ವಿಷಯದಲ್ಲಿ ಸಲಹೆ ನೀಡಬಲ್ಲೆ, ಅದರಲ್ಲಿ ನನಗೆ ನೈಪುಣ್ಯತೆ ಇದೆ ಎನ್ನುತ್ತಾನೆ, ನೈಪುಣ್ಯವೆಂದರೆ ಮಂಗಳಕರ ಸಂದರ್ಭದಲ್ಲಿ, ಅಭಿವೃದ್ಧಿಯ ವಿಷಯಗಳಲ್ಲಿ ಸಲಹೆ ಕೊಡಬಲ್ಲೆ ಹಾಗೂ ದೇಶೋಪದ್ರವಗಳ ಸಂದರ್ಭಗಳಲ್ಲಿಯೂ ಸಲಹೆ ನೀಡಬಲ್ಲೆ. (ನಳ ವಾಸ್ತವದಲ್ಲಿ ಅದ್ಭುತವಾದ ಆಡಳಿತಾಧಿಕಾರಿ, ದ್ಯೂತ ಮೋಸದಿಂದಾದ್ದರಿಂದ ಸೋತುಹೋದ). ನಾನು ಮಾಡುವಂಥ ಅಡುಗೆ ಇನ್ಯಾರಿಂದಲೂ ಸಾಧ್ಯವಿಲ್ಲ. ಯಾವುದೇ ರುಚಿಯನ್ನು, ಹದವನ್ನು ಕೊಡಬಲ್ಲೆ ಅಡುಗೆಗೆ. ಅದು ಬೇರಾರಿಗೂ ಸಾಧ್ಯವಿಲ್ಲ. ಎಲ್ಲ ಬಗೆಯ ಕಲೆಗಳಲ್ಲಿ ಪರಿಣತ ನಾನು. ಶಿಲ್ಪ, ಚಿತ್ರ, ಗಾನ, ನರ್ತನ ಎಲ್ಲವೂ ಗೊತ್ತು. ಯಾವ ಕೆಲಸ ಯಾರಿಂದಲೂ ಸಾಧ್ಯವಿಲ್ಲವೋ ಅದನ್ನು ನನಗೆ ಹೇಳು, ನಾನು ಮಾಡುತ್ತೇನೆ. ನನ್ನನ್ನು ಕೆಲಸಕ್ಕೆ ಇಟ್ಟುಕೋ ಎಂದ.
ಋತುಪರ್ಣನೂ ಒಪ್ಪಿದ. ನಳನ ಪ್ರಭಾವ ಹಾಗಿತ್ತು, ಅದು ಬೂದಿ ಮುಚ್ಚಿದ ಕೆಂಡದಂತಿತ್ತು. ಋತುಪರ್ಣನೂ ಸಾಮಾನ್ಯನಲ್ಲ, ಶ್ರೇಷ್ಠ ವ್ಯಕ್ತಿ. ಯಾವುದೋ ಒಂದು ಪ್ರಭಾವಕ್ಕೆ ಸಿಲುಕಿ ಒಪ್ಪುತ್ತಾನೆ ಹಾಗೂ ಹೇಳುತ್ತಾನೆ, ಬಾಹುಕ ನೀನು ಅನೇಕ ವಿಚಾರಗಳನ್ನು ಹೇಳಿದೆ. ಅದರಲ್ಲಿ ನನಗೆ ಅಸಕ್ತಿ ಇಲ್ಲ, ಶೀಘ್ರಯಾನದಲ್ಲಿದೆ(ಕುದುರೆಗಳನ್ನು ವಾಯುವೇಗದಲ್ಲಿ ಓಡಿಸುವಂಥ ವಿದ್ಯೆ). ಈ ಒಂದು ಉಪಕಾರವನ್ನು ನೀನು ಮಾಡು ನಿನ್ನನ್ನು ಅಶ್ವಶಾಲೆಯ ಅಧ್ಯಕ್ಷನನ್ನಾಗಿ ನೇಮಿಸಿದ್ದೇನೆ. ನಿನ್ನ ಸಂಬಳ ೧೦ ಸಾವಿರ ಹೊನ್ನುಗಳು ಎಂದು ಹೇಳಿದ. (ನಳನಿಗೆ ಹಣದ ಹಂಬಲ ಇಲ್ಲ, ಅವನಿಗೆ ಬೇರೆಯದೇ ಚಿಂತೆ ಅವನಿಗೆ ರಾಜನಲ್ಲಿರುವ ಅಕ್ಷವಿದ್ಯೆ ಬೇಕಾಗಿದೆ. ಅದಕ್ಕೆ ಇನ್ನೂ ಸಮಯವಿದೆ, ಅಲ್ಲಿಯವರೆಗೆ ಕಾಲ ಕಳೆಯಬೇಕು.) ಈ ಕೆಲಸಕ್ಕಾಗಿ ಈಗಾಗಲೇ ಇಬ್ಬರು ಇದ್ದಾರೆ ಜೀವಕ ಹಾಗೂ ವಾರ್ಷ್ಣೇಯ.( ಹಿಂದೆ ನಳನ ಸಾರಥಿಯಾಗಿದ್ದವನು, ದಮಯಂತಿಯ ಅಣತಿಯಂತೆ ಅವಳ ತವರಿನಲ್ಲಿ ಮಕ್ಕಳನ್ನು ಬಿಟ್ಟವನು ಇಲ್ಲಿ ಬಂದು ಸಾರಥಿಯಾಗಿ ಸೇರಿಕೊಂಡಿರುತ್ತಾನೆ.) ಅವರಿಬ್ಬರೂ ನಿನ್ನ ಸಹಾಯಕರಾಗಿರುತ್ತಾರೆ ಅಂತ ಹೇಳುತ್ತಾನೆ.
ನಳನ ರೂಪ ಅಕರಾಳವಿಕರಾಳ ಆದರೂ ಅವನ ಮಾತು ರತ್ನದಂತೆ ಇರುತ್ತದೆ. ಅತ್ಯಂತ ಸಮರ್ಥನಾಗಿ ಕೆಲಸ ಮಾಡುತ್ತಾನೆ. ನಳ ಅಶ್ವಗಳ ಹೃದಯವನ್ನು ಓದಬಲ್ಲ, ಅವುಗಳ ಸುಖ ದುಃಖ ಅವನಿಗೆ ತಿಳಿಯುತ್ತದೆ. ಅವುಗಳ ರೋಗ, ನೋವು, ದೋಷಗಳು ಇವನು ಬಂದ ನಂತರ ದೂರಾಗುತ್ತದೆ. ಅಶ್ವಗಳ ಸಂಖ್ಯೆ, ಸಾಮರ್ಥ್ಯ ವೃದ್ಧಿಮಾಡುತ್ತಾನೆ. ಅವನ ಸಲಹೆಗಳು, ಸಂದರ್ಭಾನುಸಾರವಾದ ಕಾರ್ಯಗಳು, ಅವನ ವ್ಯಕ್ತಿತ್ವ ಅಯೋಧ್ಯೆಯ ಅವಿಭಾಜ್ಯ ಅಂಗವಾಯಿತು. ಏನೂ ತೊಂದರೆ ಇಲ್ಲದೇ ಕೆಲಸಕಾರ್ಯಗಳು ನಡೆಯುತ್ತಿದ್ದವು, ಸಹಾಯಕರೂ ಅವನನ್ನು ಗೌರವಿಸುತ್ತಿದ್ದರು. ಹೊರಗೆಲ್ಲೂ ಸಮಸ್ಯೆ ಇಲ್ಲ, ಆದರೆ ಮನದ ಒಳಗೆ ಸಂಕಟ ಇದೆ, ರಾಜ್ಯ ಕಳೆದುಕೊಂಡಿದ್ದು, ಮಕ್ಕಳನ್ನು ಕಳೆದುಕೊಂಡಿದ್ದು, ಪ್ರೀತಿಯ ಪತ್ನಿಯನ್ನು ಕಳೆದುಕೊಂಡಿದ್ದು. ಎಲ್ಲವೂ ಸೇರಿಕೊಂಡಿದೆ.
ಪರಸ್ಪರ ವೈರಿಗಳಾದ ನಳ ಮತ್ತು ಕಲಿ ಇಬ್ಬರೂ ಒಂದೇ ಶರೀರದಿಂದ ಸಂಕಟ ಅನುಭವಿಸುತ್ತಿದ್ದಾರೆ, ನಳನಿಗೆ ಇದು ಸಹಜವಾದ ಶರೀರ, ಕಲಿಯು ಇಲ್ಲಿ ಸೇರಿರುವ ಶರೀರ. ೧೨ ವರ್ಷ ವರ್ಷಗಳ ಕಾಲದ ಮಡಿ ಮೀರಿ ಒಂದೇ ಬಾರಿಯ ಮೈಲಿಗೆಯಲ್ಲಿ ಕಲಿ ಶರೀರದ ಒಳಗೆ ಪ್ರವೇಶಿಸಿದ. ಒಂದು ಬಾರಿ ಮೈಲಿಗೆಯಾದದಕ್ಕೇ ಅವನಲ್ಲಿ ಕಲಿ ಪ್ರವೇಶಿಸಿದ ಇನ್ನು ಈಗಿನವರ ಅವಸ್ಥೆ ಊಹಿಸಿ, ಕಲಿಗೆ ಪ್ರವೇಶ ಅಂತ ಬೋರ್ಡ್ ಹಾಕಿದಂತಿದೆ. ಕಲಿಗೆ ಮಾತ್ರ ಧರ್ಮಾತ್ಮನಾದ ನಳನೊಳಗೆ ಇರುವುದು ತುಂಬಾ ಕಷ್ಟವಾಗುತ್ತಿದೆ.
ಆಯಾ ಗುಣವುಳ್ಳವರು ಆಯಾಗುಣವನ್ನೇ ಪ್ರೀತಿಸುತ್ತಾರೆ. ಇದಕ್ಕೆ ಆ ಮೀನು ಮಾರುವವಳ ಉದಾಹರಣೆ ನೀಡಬಹುದು, ಮೀನು ಮಾರುವವಳಿಗೆ ಒಂದು ರಾತ್ರಿ ಹೂವು ಮಾರುವವಳ ಮನೆಯಲ್ಲಿರಬೇಕಾದ ಅನಿವಾರ್ಯತೆ ಬಂದಿತು. ಆದರೆ ಅವಳಿಗೆ ಹೂವಿನ ಸುವಾಸನೆಗೆ ಹೇಸಿ ರಾತ್ರಿಯಿಡೀ ನಿದ್ದೆ ಬರಲೇ ಇಲ್ಲ, ಕಡೆಗೆ ಅವಳ ಮೀನು ಬುಟ್ಟಿಯನ್ನು ತಲೆಗೆ ಮಗುಚಿಹಾಕಿಕೊಂಡು ಮಲಗಿದಾಗ ಅ ವಾಸನೆಯಿಂದಾಗಿ ನೆಮ್ಮದಿಯಿಂದ ನಿದ್ದೆ ಮಾಡುವಂತಾಯಿತು. ಹಾಗೆಯೇ ಕಲಿಗೂ ಆಯಿತು. ಕೊಚ್ಚೆಯಲ್ಲಿಯೇ ಬದುಕುವ ಹುಳಗಳಿಗೆ ಶುದ್ಧ ನೀರಿನಲ್ಲಿ ವಾಸಮಾಡಲು ಸಾಧ್ಯವೇ ಆಗುವುದಿಲ್ಲ. ನಳನಿಗೆ ಎಷ್ಟು ಕಷ್ಟ ಆಗುತ್ತಿದೆಯೋ ಅದಕ್ಕೆ ನೂರುಪಾಲು ಕಷ್ಟ ಕಲಿಗೆ ಆಗುತ್ತಿದೆ. ಜೊತೆಗೇ ಕರ್ಕೋಟಕನ ವಿಷದ ಪ್ರಭಾವವೂ ಅವನನ್ನು ಕ್ಷಣಕ್ಷಣಕ್ಕೂ ಬಾಧಿಸುತ್ತಿದೆ. ಕರ್ಕೋಟಕ ಕಚ್ಚುವಾಗ ಆ ವಿಷ ಕಲಿಗೇ ತಾಗುವಂತೆ ಕಚ್ಚಿದ್ದಾನೆ, ನಳನಲ್ಲಿ ವಿಷದ ಪರಿಣಾಮ ಇಲ್ಲ, ಉಪಾಯದಿಂದ ತಾತ್ಕಾಲಿಕ ರೂಪಾಂತರವನ್ನು ಮಾಡಿದ್ದಾನೆ ನಳನಿಗೆ. ನಳ ಹಾಗೂ ದಮಯಂತಿ ವಿರಹದಲ್ಲಿ ಬೇಯುತ್ತಿದ್ದರೆ ಕಲಿ ವಿಷದಲ್ಲಿ ಬೇಯುತ್ತಿದ್ದ.
ನಳ ಪ್ರತೀ ನಿತ್ಯ ಸಾಯಂಕಾಲದಲ್ಲಿ ಒಂದು ಶ್ಲ್ಲೋಕ ಹೇಳುತ್ತಾ ಅಳುತ್ತಿದ್ದ.
ಮನಸಾ ಕ್ಷುತ್ ಪಿಪಾಸಾರ್ತಾ ಶಾಂತಾಶೀತೇ ತಪಸ್ವಿನೀ| ಸ್ಮರಂತೀ ತಸ್ಯ ಮಂದಸ್ಯ ಕಂವಸಾತ್ಯೋಪತಿಷ್ಟತಿ||
ಹಸಿವು ಬಾಯಾರಿಕೆಗಳಿಂದ ಬಳಲಿದ ಅಕೆ ಎಲ್ಲಿದ್ದಾಳೋ, ಏನು ಮಾಡುತ್ತಿದ್ದಾಳೋ, ಯಾರ ಸೇವೆ ಮಾಡುತ್ತಿದ್ದಾಳೋ? ಆ ಮುಠ್ಠಾಳನನ್ನು ನೆನಪು ಮಾಡಿಕೊಳ್ಳುತ್ತಿದಾಳೋ ಇಲ್ಲವೋ,
ದುಃಖ ಸಣ್ಣದಾದರೂ ಹೇಳಿಕೊಳ್ಳಲಾರದ ದುಃಖವಾದರೆ ತುಂಬಾ ನೋವು ಕೊಡುತ್ತದೆ, ಇನ್ನು ಇವನ ದುಃಖ ಅತೀ ದೊಡ್ಡದು. ಹೇಳಿಕೊಳ್ಳಲೂ ಬರುವುದಿಲ್ಲ. ಹಾಗಾಗಿ ವೇದನೆ ತಡೆಯಲಾರದೇ ಅಳುತ್ತಾ ಹಾಡಿಕೊಳ್ಳುತ್ತಿದ್ದ. ಸಹಾಯಕರಿಗೆ ದಿನಾ ಅದನ್ನು ಕೇಳಿಕೇಳಿ ಕುತೂಹಲದಿಂದ ಒಂದು ದಿನ ಕೇಳಿದರು ಇದು ಯಾರ ವಿಷಯ, ನಿನ್ನದಾ ? ಅಂತ. ಅವನು ಹೇಳಿದ ನನ್ನದಲ್ಲ, ನಳನೆಂಬ ಒಬ್ಬ ರಾಜನಿದ್ದ. ಬುದ್ಧಿಗೇಡಿ, ಅವನ ಹೆಂಡತಿಯ ವಿಚಾರ ಇದು. ಬುದ್ಧಿಗೇಡಿ ಯಾಕೆಂದರೆ ಅವನು ಹೆಂಡತಿಯನ್ನು ಬಿಟ್ಟು ಬಂದಿದ್ದ. ಅದರಿಂದ ಅವನೂ ಸುಖವಾಗಿಲ್ಲ, ಅವಳನ್ನೂ ಕಷ್ಟಕ್ಕೆ ದೂಡಿದ. ಶೋಕದಿಂದ ಅವನೂ ಸುಟ್ಟುಹೋಗುತ್ತಿದ್ದಾನೆ, ಹಗಲು, ರಾತ್ರಿ ನಿದ್ದೆ ಬಿಡಿ ತೂಕಡಿಸುವುದೂ ಇಲ್ಲದೇ ಶೋಕದಿಂದ ಪರಿತಪಿಸುತ್ತಿದ್ದಾನೆ. ಅದೇ ದುಃಖ, ನೋವಿನಲ್ಲಿದ್ದಾನೆ. ರಾತ್ರಿಯಲ್ಲಿ ಅವಳ ನೋವಿನಲ್ಲಿ ಹಾಡಿಕೊಳ್ಳುತ್ತಾನೆ, ಅವಳಿಗೆ ಅವನು ಯೋಗ್ಯನಲ್ಲ. ಅವನನ್ನು ಅವಳು ಕಷ್ಟದಲ್ಲಿಯೂ ಹಿಂಬಾಲಿಸಿದಳು, ಕಾಡುಪಾಲಾದರೂ ಜೊತೆಗಿದ್ದಳು. ಆದರೂ ಇವನು ಬಿಟ್ಟುಬಂದ ಅಂತ ನಿಟ್ಟುಸಿರು ಬಿಟ್ಟು, ಅವಳು ಬದುಕಿದ್ದಾಳೋ ಇಲ್ಲವೋ? ಮೊದಲೇ ಕಾಡು, ರಾತ್ರಿಗಳಲ್ಲಿ ಕ್ರೂರಮೃಗಗಳು, ದುಷ್ಟರು, ಪಿಶಾಚ, ರಾಕ್ಷಸರು ಇರುತ್ತಾರೆ. ಅವಳೋ ಏಕಾಂಗಿನಿ, ಇನ್ನೂ ಚಿಕ್ಕವಳು, ಕಾಡಿನ ಬಗ್ಗೆ ಏನೂ ತಿಳಿಯದ ಮುಗ್ದಳು, ಹಸಿವೆ ನೀರಡಿಕೆಗಳಿಂದ ಅವಳು ಕಂಗೆಟ್ಟಿರಬಹುದು. ಆ ಬುದ್ಧಿಗೇಡಿ ಅಂತಹವಳನ್ನು ಬಿಟ್ಟು ಬಂದುಬಿಟ್ಟ, ಹೀಗೆ ಮೂರನೆಯವರ ವಿಷಯ ಹೇಳಿದಂತೆ ಹೇಳಿದ. ಹೀಗೆ ನಿತ್ಯವೂ ಅಳುತ್ತಾನೆ ಹಾಡುತ್ತಾನೆ. ಅವಳ ಮೇಲೆ ಪ್ರೀತಿ ಇರಲಿಲ್ಲವೇ ಅವನಿಗೆ? ಅಂತ ಸಂಶಯ ಬರುತ್ತದೆ. ಸ್ವಯಂವರದಲ್ಲಿಯೂ ಹಾಗೇ ಮಾಡುತ್ತಾನೆ. ತಾನು ಮನಸಾರೆ ಬಯಸಿದ್ದರೂ ದೇವತೆಗಳ ಪರವಾಗಿ ಅವರನ್ನು ಮದುವೆಯಾಗು ಎಂದು ಕೇಳಲು ಬಂದಿರುತ್ತಾನೆ, ಆದರೆ ಹಾಗಿಲ್ಲ ಅವನಿಗೆ ಎಷ್ಟು ಪ್ರೀತಿ ಇದೆ ಅವಳ ಮೇಲೆ ಎಂದರೆ ಒಂದು ರಾತ್ರಿಯೂ ನಿದ್ದೆ ಬಿಡಿ, ತೂಕಡಿಕೆಯೂ ಬರದಷ್ಟು ಪ್ರೀತಿ ಇದೆ ಅವಳ ಮೇಲೆ.
ಹೀಗೇ ಕೆಲಸ ಮಾಡುತ್ತಾ, ಚಕ್ರವರ್ತಿಯಾಗಿದ್ದವನು ಇನ್ನೊಬ್ಬ ರಾಜನ ನೌಕರನಾಗಿ, ಕುದುರೆ ಕಾಯುವ ಕೆಲಸ ಮಾಡುತ್ತಿದ್ದಾನೆ. ಎಲ್ಲಿಯೂ ತೀರದ ನಳನ ಕ್ಲೇಶ ಇಲ್ಲಿ ರಾಮನ ಪೂರ್ವಜರ ಮನೆಯಲ್ಲಿ ತೀರಬಹುದೇ? ಕಳೆಯಬಹುದೇ?
ಇತ್ತ ವಿದರ್ಭದಲ್ಲಿ ಭೀಮ ರಾಜನಿಗೂ ಅದೇ ಕೊರಗು, ಬಹುಕಾಲ ಮಕ್ಕಳಿಲ್ಲದೇ ಮಕ್ಕಳಾಗಿತ್ತು. ಅದರಲ್ಲೂ ಅಪರೂಪದ ಸೌಂದರ್ಯವತಿ ಅವಳು. ಹಾಗೇ ವಿಶೇಷವಾಗಿ ಬೆಳೆದಿದ್ದಳು, ಉತ್ತಮ ಕುಲದಲ್ಲಿ ವಿವಾಹವೂ ನಡೆದಿತ್ತು. ಎಲ್ಲವೂ ಸರಿಯಾಗಿದ್ದಾಗ ಈ ನೋವು ಕಲಿಯ ರೂಪದಲ್ಲಿ ಬಂದಿತ್ತು.
ಪುರುಷರಿಗೆ ಪರಾಕ್ರಮವೇ ವಿಶೇಷ, ಸ್ತ್ರೀಯರಿಗೆ ಸೌಂದರ್ಯ ವಿಶೇಷ. ಅದರಲ್ಲಿಯೂ ಸೌಶೀಲ್ಯವೂ ಸೇರಿದ್ದಿತು ದಮಯಂತಿಯಲ್ಲಿ. ಮಗಳು ಅಳಿಯ ಇಬ್ಬರ ವಿಷಯವೂ ತಿಳಿಯದೇ ಭೀಮರಾಜ ಅವರನ್ನು ಹುಡುಕಲು ಬ್ರಾಹ್ಮಣೋತ್ತಮರನ್ನು ಗೂಢಚಾರಿಗಳಾಗಿ ಎಲ್ಲ ಕಡೆಗೂ ಕಳಿಸುತ್ತಾನೆ, ಬ್ರಾಹ್ಮಣರು ಯಾಕೆ ಅಂದರೆ ಅವರಿಗೆ ಎಲ್ಲಕಡೆಗಳಲ್ಲೂ ಪ್ರವೇಶ ಸರಾಗವಾಗಿತ್ತು. ಬ್ರಾಹ್ಮಣರಿಗೂ ಯಾರು ಅವರಿಬ್ಬರನ್ನು ಹುಡುಕಿಕೊಡುವರೋ ಅವರಿಗೆ ೧ ಸಾವಿರ ಗೋವುಗಳನ್ನು, ನಗರ, ಗ್ರಾಮಗಳಿಂದ ಕೂಡಿದ ಪ್ರದೇಶಗಳನ್ನೂ ಕೊಡುವುದಾಗಿ ಘೋಷಿಸಿದ. ಕನಿಷ್ಟ ಸುದ್ಧಿಯನ್ನಾದರು ತಂದರೆ ಸಾವಿರ ಗೋವುಗಳನ್ನು ಕೊಡುವುದಾಗಿ ತಿಳಿಸುತ್ತಾನೆ. ಹೀಗೆ ದೊಡ್ಡರೀತಿಯಲ್ಲಿ ಆನ್ವೇಷಣೆ ಪ್ರಾರಂಭವಾಗುತ್ತದೆ.
ಅವರ ಪೈಕಿ ಒಬ್ಬನ ಹೆಸರು ಸುದೇವ ಎಂದು. ಅವನು ಚೇದಿ ರಾಜ್ಯಕ್ಕೆ ಹೋಗುತ್ತಾನೆ, ಕುಂಡಿನಪುರದ ಅರಮನೆಗೇ ನೇರ ಹೋಗುತ್ತಾನೆ. ಅಲ್ಲಿರಬಹುದೇ ಎಂಬ ದೂರ ಚಿಂತನೆಯಿಂದ, ಅಲ್ಲಿ ಆ ಸೈರಂಧ್ರಿಯನ್ನು ನೋಡುತ್ತಾನೆ. ಅವಳನ್ನು ಕಂಡು ಇವನಿಗೆ ಸಂಶಯ ಉಂಟಾಗುತ್ತದೆ. ಅದೇ ಮುಖಲಕ್ಷಣ, ಸ್ವರ, ನಡಿಗೆ ಆದರೆ ಅವಳು ಹೀಗೆ ಹೇಗೆ? ದೇಹ ಕೃಶವಾಗಿದೆ, ಧೂಳಿನಿಂದ ಆವೃತವಾಗಿದೆ. ಆದರೆ ಅವಳೇ ಇರಬಹುದೇ ಎಂದು ಸಂಶಯ ಬರುತ್ತದೆ.
ಹನುಮಂತನಿಗೂ ಹೀಗೆಯೇ ಆಗುತ್ತದೆ. ಸೀತೆಯನ್ನು ಹುಡುಕಿಕೊಂಡು ಲಂಕೆಗೆ ಹೋದವನಿಗೆ ಸೀತೆ ಕಾಣುತ್ತಾಳೆ. ಮೊದಲೇ ಅವಳನ್ನು ಅಪಹರಣದ ಸಮಯದಲ್ಲಿ ಕಂಡಿದ್ದಾನೆ, ಈಗ ಅವಳು ಕೃಶಳಾಗಿದ್ದಾಳೆ, ಕೇಶ, ವಸ್ತ್ರಗಳು ಸಂಸ್ಕಾರವಿಲ್ಲದೇ ಹಾಳಾಗಿವೆ. ಅವನಿಗೆ ಅವಳ ವಸ್ತ್ರದ ನೆನಪಿದೆ. ಅದೇ ವಸ್ತ್ರದ ಒಂದು ತುಂಡಿನಲ್ಲಿ ಅವಳ ಕೆಲವು ಆಭರಣಗಳನ್ನು ಕಟ್ಟಿ ಋಷ್ಯಮೂಕ ಪರ್ವತದ ಮೇಲೆ ಹಾಕಿದ್ದಳು. ಅವಳ ಅಪಹರಣದ ಸಮಯದಲ್ಲಿ ಅದನ್ನು ಹನುಮಂತ ನೋಡಿದ್ದ. ಈಗ ಅವುಗಳ ಜೋಡಿ ಒಡವೆಗಳು ಅವಳ ಮೈಮೇಲೆ ಅವಳಿಗೆ ಕಂಡವು ಆಗ ಅವನಿಗೆ ನಿಶ್ಚಯವಾಯಿತು. ಇಲ್ಲಿಯೂ ಹಾಗೇ ಆಯಿತು, ಲಕ್ಷಣಗಳಿಂದ ಇವಳು ಅವಳೇ ಅಂತ ನಿರ್ಧರಿಸಿದ ಸುದೇವ. ಆದರೆ ಮುಂದುವರೆಯುವುದು ಹೇಗೆ, ಅಪರಿಚಿತ ಸ್ಥಳದಲ್ಲಿ ಅಪರಿಚಿತ ಹೆಂಗಸನ್ನು ಮಾತನಾಡಿಸುವುದು ಹೇಗೆ? ಏನು ಉಪಾಯ ಎಂದು ಚಿಂತಿಸಿದ.
ಸುದೇವನೆಂದರೆ ಸುದೈವವೇ ಹೊರತು ಬೇರಲ್ಲ. ದಮಯಂತಿ, ನಳ, ಭೀಮರಾಜ, ಚೇದಿರಾಜ್ಯಗಳ ಸುದೈವ. ಇಲ್ಲಿಗೆ ಒಂದು ಹಂತ ಮುಗಿದಿದೆ. ಮುಂದೇನೆನ್ನುವ ಚಿಂತೆ ಇದೆ, ಬ್ರಾಹ್ಮಣೋತ್ತಮ ವಿಫಲನಾಗಲು ಸಾಧ್ಯವಿಲ್ಲ, ಹೇಗಾದರೂ ಮಾಡುತ್ತಾರೆ. ಹೇಗೆ ಮಾಡುತ್ತಾರೆ ಅಂತ ಮುಂದೆ ನೋಡೋಣ.
ಚಿತ್ರ:ಅಂತರ್ಜಾಲದಿಂದ
ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:
Leave a Reply