#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
28-08-2018:

ಮಿಡಿಯಿತು ತಾಯಿ ಮಕ್ಕಳ ತಂತು

ನಮಗೆ ನಮ್ಮ ಪರಿಚಯವೇ ಇರುವುದಿಲ್ಲ, ಇನ್ನು ಬೇರೆಯವರ ಪರಿಚಯ ಹೇಗೆ ಇರುತ್ತದೆ? ಶಾಸ್ತ್ರಗಳು ಹೇಳುತ್ತವೆ ಯಾವಾಗ ನಮಗೆ ನಮ್ಮ ಪರಿಚಯ ಆಗುತ್ತದೋ, ಅಲ್ಲಿಗೆ ಪ್ರಪಂಚದ ಎಲ್ಲ ದುಃಖಗಳಿಂದ ವಿಮುಕ್ತಿ, ಆನಂದ ಪರ್ವದ ಶುಭಾರಂಭ. ಅದನ್ನು ಮಾಡಿಸಿಕೊಡುವವನು ಶ್ರೀಕೃಷ್ಣ, ಅವನ ಚರಣಗಳಲ್ಲಿ ಪ್ರಣಾಮ ಮಾಡಿ ಪ್ರವಚನಕ್ಕೆ ಉಪಕ್ರಮಿಸೋಣ.

ಪ್ರವಚನದ ವಸ್ತು ಕೂಡಾ ಪರಿಚಯವೇ, ದಮಯಂತಿಯ ಪರಿಚಯ. ಸಾಕ್ಷಾತ್ ತಾಯಿಯ ತಂಗಿ ಚಿಕ್ಕಮ್ಮ, ಚಿಕ್ಕಮ್ಮನ ಮನೆಯಲ್ಲಿ ದಮಯಂತಿ ಇದ್ದಾಳೆ. ಹೇಗೆ ಇದ್ದಾಳೆ ಅಂದರೆ ಸೈರಂಧ್ರಿಯಾಗಿ, ಕೆಲಸ ಮಾಡುವವಳಾಗಿ, ಯಾರ ಸೇವೆ ಮಾಡುತ್ತಾ ಇದ್ದಾಳೆ ಅಂದರೆ ಸುನಂದಾಳದ್ದು. ವಾಸ್ತವದಲ್ಲಿ ಅವಳು ದಮಯಂತಿಯ ತಂಗಿಯೇ, ತನಗಿಂತ ಎಷ್ಟೋ ಚಿಕ್ಕವಳಾದ ತನ್ನ ತಂಗಿಯ ಸೇವೆಯಲ್ಲಿ ಅವಳಿದ್ದಾಳೆ. ಯಾರಿಗೂ ಅವಳ ಪರಿಚಯ ಇಲ್ಲ. ಪರಿಚಯ ಇರುವುದಾದರೆ ಭಗವಂತನಿಗೆ ಮಾತ್ರಾ. ನಮ್ಮ ಪರಿಚಯ ದೇವನಿಗೆ ಮಾತ್ರ ಸರಿಯಾಗಿ ಗೊತ್ತು, ಸಣ್ಣಪುಟ್ಟ ದೇವರಲ್ಲ ಅವನು ಸುದೇವ. ದೇವರಲ್ಲೇ ದೊಡ್ಡ ದೇವ, ಶ್ರೀಕೃಷ್ಣನಿಗೆ ಮಾತ್ರ ಪರಿಚಯ ಇರಲಿಕ್ಕೆ ಸಾಧ್ಯ.

ತತ್ತ್ವಭಾಗವತಮ್

ಹಾಗೆಯೇ ಅದೇ ಹೆಸರಿನ ಬ್ರಾಹ್ಮಣನೊಬ್ಬ ಚೇದಿರಾಜ್ಯದ ಅರಮನೆಯನ್ನು ಪ್ರವೇಶಿಸುತ್ತಾನೆ, ದಮಯಂತಿಯನ್ನು ಹುಡುಕುತ್ತಾ. ಭೀಮರಾಜನಿಂದ ಪ್ರೇಷಿತನಾದ ಸಾವಿರಾರು ಬ್ರಾಹ್ಮಣರ ಪೈಕಿ ಒಬ್ಬನಾಗಿ, ಅವನು ಸುದೈವವೋ ಅಥವಾ ಭೀಮರಾಜ ದಮಯಂತಿಯರ ಸುದೈವವೋ ಬಂದವನೇ ಸೈರಂಧ್ರಿಯ ರೂಪದಲ್ಲಿ ಇದ್ದವಳನ್ನು ನೋಡಿದ, ಅನುಮಾನ ಬಂತು ಅದೇ ಮುಖ, ಅದೇ ಸ್ವರ, ಅದೇ ನಡಿಗೆ, ಅದೇ ವರ್ಚಸ್ಸು ಆದರೆ ಶರೀರಕ್ಕೆ ಮೊದಲಿನ ಆಕೃತಿ ಇಲ್ಲ, ಆದರೂ ಗುರುತಿಸುತ್ತಾನೆ. ಚಿಹ್ನೆಗಳನ್ನು ಹುಡುಕುತ್ತಾನೆ. ದಮಯಂತಿಯ ಭ್ರೂಮಧ್ಯೆಯಲ್ಲಿ ಒಂದು ಮಚ್ಚೆ ಇದೆ ಅದನ್ನು ಹುಡುಕುತ್ತಾನೆ, ಸೌಂದರ್ಯದ ಅಪೇಕ್ಷೆ ಇಲ್ಲದ್ದರಿಂದ ಧೂಳಿನಿಂದಾವೃತವಾದಂತೆ ಆ ಮಚ್ಚೆಯು ಮುಚ್ಚಿದ್ದು ಸೂಕ್ಷ್ಮವಾಗಿ ಗ್ರಹಿಸಿದ.

ಇಲ್ಲಿ ವ್ಯಾಸರು ರಾಮಾಯಣದ ಅನೇಕಾನೇಕ ಶ್ಲೋಕಗಳನ್ನು ಹಾಗೆಹಾಗೇ ತಂದು ಹಾಕಿದ್ದಾರೆ. ಅದು ಯಾವ ಸಂದರ್ಭ ಅಂದರೆ ಅಂಜನೇಯ ಸೀತೆಯನ್ನು ಹುಡುಕುತ್ತಾ ಇದಾನೆ, ಸೀತೆಯನ್ನು ಅಶೋಕವನದಲ್ಲಿ ಕಂಡ, ಆದರೆ ಅವಳನ್ನು ಗುರುತುಹಿಡಿಯುವಲ್ಲಿ ಅವನಿಗೆ ಜಿಜ್ಞಾಸೆ ಬಂತು, ಸೀತೆ ಕೃಶಳಾಗಿದ್ದಾಳೆ, ಅವಳ ಮೈ ಬಣ್ಣವೂ ಸರಿಯಾದ ಉಪಚಾರವಿಲ್ಲದೇ ಮಬ್ಬಾಗಿದೆ. ಉಟ್ಟಿದ್ದ ವಸ್ತ್ರ ಹಳತಾಗಿದ್ದು ಮಾಸಿದೆ, ಆಭರಣಗಳೂ ಕಳೆಗೆಟ್ಟಿದೆ ಹಾಗಾಗಿ ಅವಳನ್ನು ಕಂಡು ಸಂದೇಹ ಶುರುವಾಯಿತು. ಇಲ್ಲೂ ಅದೇ ಸಂದರ್ಭವಾದ್ದರಿಂದ ವ್ಯಾಸರು ಅದೇ ಭಾಗವನ್ನು ಹಾಗೇ ತಂದು ಇಲ್ಲಿ ಹಾಕಿಬಿಟ್ಟಿದ್ದಾರೆ. ಉದಾ: ಸ್ವಗಣೇನ ಮೃಗೀಂ ಹೀನಾ ಶ್ವಗಣೇನವೃತಾವಿವ| ಸ್ವ ಅಂದರೆ ತನ್ನವರು ಶ್ವ ಅಂದರೆ ನಾಯಿ ಎರಡಕ್ಕೂ ತುಂಬಾ ವ್ಯತ್ಯಾಸ ಇದೆ. ತನ್ನವರನ್ನೆಲ್ಲಾ ಬಿಟ್ಟು ಈ ನಾಯಿಗಳಂತಿರುವ ರಾಕ್ಷಸಿಯರ ಬಳಗದಿಂದ ಕೂಡಿದವಳು ಅಂತ.
ಕೆಲವರಿಗೆ ‘ಆ’ ಗೂ ‘ಹಾ’ ಗೂ ವ್ಯತ್ಯಾಸ ಇಲ್ಲ, ಅಲ್ಪಪ್ರಾಣ ಮಹಾಪ್ರಾಣ ಎರಡಕ್ಕೂ ವ್ಯತ್ಯಾಸವಿಲ್ಲ, ಅದು ಎಷ್ಟು ಮುಖ್ಯ ಅಂತ ಇಲ್ಲಿ ಗೊತ್ತಾಗುತ್ತದೆ. ಸೀತೆ ಹೇಗಿದ್ದಳು ಅಂದರೆ ಶುಕ್ಲಪಕ್ಷದ ಪಾಡ್ಯದ ಚಂದಿರನಂತೆ ಇದ್ದಳು. ಅಷ್ಟು ಕೃಶಳಾಗಿದ್ದಳು ಅಂತ. ಗ್ರಹಪೀಡಿತವಾದ ರೋಹಿಣೀ ನಕ್ಷತ್ರದಂತೆ.
೧೬ ಶ್ಲೋಕಗಳು ಹಾಗೇ ಇದೆ ಇನ್ನೂ ಹಲವು ಅದೇ ಧ್ವನಿಯನ್ನು ಕೊಡುತ್ತದೆ. ಅದೇನು ಕೃತಿಚೌರ್ಯವೇ . ವ್ಯಾಸರೇ ಹೀಗೆ ಮಾಡಿದರೆ ನಾವೂ ಮಾಡಬಹುದೇ? ಅಂದರೆ ಮಹಾಭಾರತದಲ್ಲಿ ೧ ಲಕ್ಷ ಶ್ಲೋಕ ಇದೆ ಅದನ್ನೇ ಬರೆದಿರುವವರು ಇದನ್ನು ಯಾಕೆ ಕಡಿಮೆ ಮಾಡಿಕೊಳ್ಳುತ್ತಾರೆ, ಅದೂ ಮಹಾಭಾರತದ ಲಿಪಿಕಾರ ಗಣಪತಿ ಬರೆಯುವಾಗ ಒಂದು ನಿಯಮ ಹಾಕುತ್ತಾನೆ, ಏನೆಂದರೆ ನಾನು ಬರೆಯುವ ವೇಗಕ್ಕೆ ತಕ್ಕಂತೆ ನೀವು ಶ್ಲೋಕ ರಚಿಸಿಕೊಡಬೇಕು ಅಂತ. ಹಾಗಾದರೆ ಯಾಕೆ ಹೀಗಾಯಿತು ಅಂದರೆ ವ್ಯಾಸರಿಗೆ ಅಲ್ಲಿ ಸೀತೆಯ ನೆನಪಾಗಿದೆ ಈ ಇಬ್ಬರಿಗೂ ಅಲ್ಲಿ ಸಾದೃಶ್ಯ ಕಂಡಿದೆ, ರಾಮನೆಂದರೆ ನಳನೇ, ದಮಯಂತಿಯೂ ಸೀತೆಯಂತೆಯೇ, ಎರಡರಲ್ಲೂ ಇರೋದು ಒಂದೇ ಭಾವ ಅಂತ ಹೇಳಲಿಕ್ಕಾಗಿ ಅದನ್ನೇ ಇಲ್ಲಿ ಹಾಕಿದ್ದಾರೆ. ಇಬ್ಬರಿಗೂ ಬಂದ ಶೋಕ ಒಂದೇ ರೀತಿಯದ್ದೇ ಆಗಿದೆ.

ಸುದೇವನಿಗೆ ಖಚಿತವಾಯಿತು, ದಮಯಂತಿ ಒಬ್ಬಳೇ ಇದ್ದಾಗ ಮಾತಾಡಲು ಕಾಯುತ್ತಿದ್ದ. ಏಕೆಂದರೆ ಒಬ್ಬರೇ ಇದ್ದಾಗ ಕೆಲವು ವಿಚಾರಗಳನ್ನು ಒಪ್ಪುತ್ತೇವೆ, ಗುಂಪಿನಲ್ಲಿ ಕೇಳಿದಾಗ ವಿಷಯ ಹೊರಬರುವುದಿಲ್ಲ. ಹಾಗಾಗಿ ಅವನೂ ಕಾದ, ದಮಯಂತಿ ಯಾರನ್ನೂ ಭೇಟಿಯಾಗುತ್ತಿರಲಿಲ್ಲ ಆದರೆ ಬ್ರಾಹ್ಮಣರನ್ನು ಭೇಟಿಯಾಗಲು ಅವಳ ಅಭ್ಯಂತರವಿರಲಿಲ್ಲ. ಭೇಟಿಯಾಗಲು ಒಪ್ಪಿದಳು, ಅವಳನ್ನು ಒಂದು ಅನಿರೀಕ್ಷಿತವಾದ ಪ್ರಶ್ನೆ ಕಾಯುತ್ತಿತ್ತು. ಸುದೇವ ನೇರವಾಗಿ ಕೇಳಿದ ನೀನು ದಮಯಂತಿ ಅಲ್ಲವೇ? ಎಂದು. ದಮಯಂತಿ ಅವಕ್ಕಾದಳು, ಸಾಮಾನ್ಯವಾಗಿ ಅಲ್ಲ ಅಂತ ಹೇಳಿಬಿಡುತ್ತಾರೆ ಅಲ್ಲದಿದ್ದರೆ. ಇವಳಿಗೆ ಏನೂ ಹೇಳಲು ಗೊತ್ತಾಗಲಿಲ್ಲ ಅವನು ಗುರುತು ಹಿಡಿದು ಬಿಟ್ಟಿದ್ದಾನೆ. ಅವನೇ ಮುಂದುವರೆದು ಹೇಳಿದ ನಾನು ನಿನ್ನ ಸಹೋದರ ದಮನ ಸ್ನೇಹಿತ ಸುದೇವ ಅಂತ.

ಹೊರಗಡೆಯ ಊರುಗಳಲ್ಲಿದ್ದಾಗ ನಮ್ಮವರು ಯಾರಾದರೂ ಪರಿಚಿತರಾದರೆ ಅಥವಾ ಹಳೆ ಪರಿಚಯದವರು ಸಿಕ್ಕಿದರೆ ನಮ್ಮನ್ನು ನಾವು ತೆರೆದುಕೊಳ್ಳುತ್ತೇವೆ, ಅವರು ಅಪ್ತರು ಎಂದು ಅನಿಸಿಬಿಡುತ್ತದೆ. ಆನಂದವಾಗುತ್ತದೆ, ಅಲ್ಲಿಯವರೆಗೆ ಮರೆಯಾಗಿದ್ದ ವಿಷಯಗಳೆಲ್ಲಾ ನೆನಪಾಗಿ ಬಿಡುತ್ತದೆ. ದಮಯಂತಿಯೂ ಅಂತಹ ಸನ್ನಿವೇಶಕ್ಕಾಗಿ ಕಾಯುತ್ತಿದ್ದಳು ಅಂತ ಭಾವಿಸಬಹುದು. ಅವರೇನಾದರೂ ಮಾತನಾಡಿಸಿದರೆ ಸಾಕು ಅಲ್ಲಿಯವರೆಗೂ ಹೃದಯದಲ್ಲಿ ಬಚ್ಚಿಟ್ಟುಕೊಂಡಿದ್ದ ಮಾತುಗಳೆಲ್ಲಾ ಹೊರಗೆ ಬಂದು ಬಿಡುತ್ತದೆ. ದಮಯಂತಿಗೂ ಹಾಗೇ ಆಯಿತು. ಸುದೇವನು ಮುಂದುವರಿದು, ನಿನಗೆ ಗೊತ್ತಾ ನಿನ್ನ ತಂದೆತಾಯಿ ಹೇಗಿದ್ದಾರೆ ಅಂತ, ನಿನ್ನ ಮಕ್ಕಳು ನಿನಗಾಗಿ ಹೇಗೆ ಪರಿತಪಿಸುತ್ತಿದ್ದಾರೆ ಅಂತ ಗೊತ್ತಾ. ಅಂತ ಕೇಳಿದ. ಕೂಡಲೇ ಅತ್ತುಬಿಟ್ಟಳು ದಮಯಂತಿ. ಸರಾಗವಾಗಿ ಧಾರಾಕರವಾಗಿ ಹರಿದ ಕಂಬನಿ, ನಂತರ ನಿರರ್ಗಳ ಮಾತು ಅವನು ಕೇಳಿದ್ದನ್ನ ಕೇಳದ್ದನ್ನ ಎಲ್ಲವನ್ನೂ ಬಿಡಿಸಿ ಬಿಡಿಸಿ ಆಡಿಬಿಟ್ಟಳು. ಮತ್ತೆ ತನ್ನವರ ನೆನಪಾಗುತ್ತದೆ, ಬಿಕ್ಕಿಬಿಕ್ಕಿ ಅಳುತ್ತಾಳೆ. ಮತ್ತೆ ಬಡಬಡನೆ ಮಾತನಾಡುತ್ತಾಳೆ.

ಈ ಸನ್ನಿವೇಶವನ್ನು ಸುನಂದೆ ದೂರದಿಂದ ನೋಡುತ್ತಿದ್ದಳು, ಅವಳಿಗೆ ಆಶ್ಚರ್ಯವಾಯಿತು, ಅವಳಲ್ಲಿ ಕೇಳುವುದು ಸರಿಯಲ್ಲ ಎಂದು ಭಾವಿಸಿ, ಇವಳು ವಿಚಿತ್ರವಾಗಿ ಆಡುತ್ತಿದ್ದಾಳೆ ಅಂತ ನೇರವಾಗಿ ತಾಯಿಯಲ್ಲಿ ಹೋಗಿ ಹೇಳುತ್ತಾಳೆ “ಅಮ್ಮ, ಸೈರಂಧ್ರಿಗೆ ಏನೋ ಅಗಿದೆ, ಆ ಬ್ರಾಹ್ಮಣೋತ್ತಮರಲ್ಲಿ ಮಾತನಾಡುತ್ತಾ ಘೋರವಾಗಿ ಅಳುತ್ತಿದ್ದಾಳೆ, ಪಾಪ ಅವರೇನೂ ಮಾಡಲಿಲ್ಲ ಆದರೂ ಈಕೆ ಅಳುತ್ತಿದ್ದಾಳೆ ಅದರ ಕಾರಣ ತಿಳಿಯುತ್ತಿಲ್ಲ. ನೀನೇ ಕರೆದು ವಿಚಾರಿಸಿದರೆ ಒಳ್ಳೆಯದು ಅಂತ. ರಾಜಮಾತೆಗೆ ಮೊದಲೇ ಅವಳಲ್ಲಿ ವಿಶೇಷ ಭಾವ, ಪ್ರೀತಿ ಬೆಳೆದಿತ್ತು. ಈಗ ಗೋಳಾಡುತ್ತಿದ್ದಾಳೆ ಎಂದ ಕೂಡಲೆ ಏನಾಗಿರಬಹುದು ಅಂತ ಚಿಂತೆಯಾಯಿತು, ಕಡೆಗೆ ಸುದೇವನನ್ನು ಕರೆಸಿ ಮಾತನಾಡೋಣ ಎಂದು ಯೋಚಿಸಿ ಅವನಿಗೆ ಹೇಳಿ ಕಳುಹಿಸಿದಳು. ಕೂಡಲೇ ಬರಬೇಕು ಅಂತ, ಬಂದವನಿಗೆ ಕೇಳುತ್ತಾಳೆ ನಿಜ ಹೇಳಿ ಅವಳು ಯಾರು? ಅಂದಾಗ ದಮಯಂತಿಯ ಗುಟ್ಟನ್ನು ಸುದೇವ ಬಿಚ್ಚಿಡುತ್ತಾನೆ. ಇವಳು ವಿದರ್ಭದ ದೊರೆ ಭೀಮ ರಾಜನ ಪುತ್ರಿ ದಮಯಂತಿ ಅಂತ.

ಅವಳಿಗೆ ಅದನ್ನು ಕೇಳಿ ಸಖೇದಾಶ್ಚರ್ಯಗಳು ಉಂಟಾಗುತ್ತದೆ. ಒಂದು ಕಾರಣ ಅವಳು ಸಾಮ್ರಾಟನ ಧರ್ಮಪತ್ನಿ ಮಹಾ ಸಾಮ್ರಾಜ್ಞಿ, ಇನ್ನೊಂದು ಕಾರಣ ಅವಳು ತನ್ನ ಸ್ವಂತ ಅಕ್ಕನ ಮಗಳು ಇದನ್ನು ಕೇಳಿದ ಕೂಡಲೇ ಹೌದೇ, ಹಾಗಾದರೆ ಅವಳ ಹಣೆಯಲ್ಲಿನ ಮಚ್ಚೆಯನ್ನು ಪರೀಕ್ಷಿಸೋಣ ಎಂದು ಉದ್ವೇಗದಿಂದ ಹೋಗುತ್ತಾಳೆ. ಸುನಂದೆಯನ್ನು ಕರೆದು ಅವಳಿಗೆ ದಮಯಂತಿಯ ಮುಖ ತೊಳೆಸಲು ಹೇಳುತ್ತಾಳೆ. ಇಂದಿನವರೆಗೂ ಯಾರು ಅವಳ ಸೇವೆ ಮಾಡುತ್ತಿದ್ದಳೋ ಅವಳ ಸೇವೆಯನ್ನು ಮಾಡಲು ಇವಳೇ ಹೊರಟಿದ್ದಾಳೆ. ತಪ್ಪೇನಿಲ್ಲ ಅವಳು ಸಾಮ್ರಾಜ್ಞಿ, ಜೊತೆಗೆ ಅಕ್ಕ ಕೂಡಾ ಹಾಗಾಗಿ ಅವಳ ಸೇವೆ ವಿಹಿತ. ಅಲ್ಲದೇ ಅಪರೂಪದಲ್ಲಪರೂಪದ ಸ್ತ್ರೀ ಅವಳು. ಅವಳ ಸೇವೆ ಒಳ್ಳೆಯದೆ. ಮುಖ ತೊಳೆದಾಗ ಅವಳ ಗುರುತು ಸ್ಪಷ್ಟವಾಯಿತು. ಶುಭ್ರಾಕಾಶದಲ್ಲಿ ಚಂದ್ರ ಗೋಚರಿಸುವಂತೆ ಅವಳ ಮುಖದಲ್ಲಿನ ಅ ಮಚ್ಚೆ ಗೋಚರವಾಯಿತು. ಅವಳು ತನ್ನ ಮಗಳೇ, ತನ್ನಕ್ಕನ ಮಗಳೇ. ಸಾವಿರ ಯೋಚನೆಗಳು ಬಂದು ಹೋಯಿತು. ಅವಳ ಮನದಲ್ಲಿ ಎಂತಹ ಪರಿಸ್ಥಿತಿ ಬಂದು ಹೋಯಿತು ಪಾಪ ಮಗಳಿಗೆ, ಒಂದುಕ್ಷಣ ಅವಳಿಗೆ ದಮಯಂತಿ ಬಂದ ದಿನದ ಅವಳ ಪರಿಸ್ಥಿತಿ ನೆನಪಾಯಿತು ಹುಚ್ಚಿಯಂತೆ ತೋರಿದ್ದಳು ಅಂದು, ಬೀದಿಯಲ್ಲಿ ಮಕ್ಕಳೆಲ್ಲಾ ಅವಳನ್ನು ಅಟ್ಟಾಡಿಸುವಂತೆ ಆಗಿದ್ದಳು, ಇನ್ನು ನಾನು ಬೇರೆ ಅವಳನ್ನು ಸೇವೆಗೆ ಹಚ್ಚಿದೆ, ಅವಳು ಇಲ್ಲಿ ಏನೇನು ತೊಂದರೆ ಅನುಭವಿಸಿದಳೋ? ಇಲ್ಲಿ ಎಂಜಲನ್ನೂ ತೆಗೆದಿರಬೇಕು, ಯಾರ ಬಾಯಿಂದಲೂ ಮಾತು ಹೊರಡಲಿಲ್ಲ, ಸುಮ್ಮನೇ ತಬ್ಬಿಕೊಂಡು ಜೋರಾಗಿ ಅಳುತ್ತಾ ಗಂಟೆಗಟ್ಟಳೆ ದುಃಖಿಸಿದರು.

ದಮಯಂತಿಗೆ ಇನ್ನೂ ತಿಳಿದಿಲ್ಲ. ರಾಜಮಾತೆ ಹೇಳುತ್ತಾಳೆ ನಮ್ಮಿಬ್ಬರ ಮಧ್ಯೆ ಇರುವುದು ತಾಯಿ ಮಕ್ಕಳ ಸಂಬಂಧ. ನನ್ನ ಅಕ್ಕನ ಮಗಳು ನೀನು, ಅದಕ್ಕೆ ಈ ಮಚ್ಚೆಯೇ ಸಾಕ್ಷಿ, ಅಂತ ದುಃಖ ಕಡಿಮೆಯಾದಾಗ ಮಾತನಾಡುತ್ತಾಳೆ.
ಕನಕದಾಸರು ಹೇಳುತ್ತಾರೆ: ಬಾಲೆ ಬಿಡು ಶೋಕವನು, ಭೀಮನೃಪಾಲನರಸಿಗೆ ತಂಗಿ ನಾನು.
“ನನ್ನ ಮನೆಯಲ್ಲಿ ಎಷ್ಟು ನೋವನ್ನು ಉಂಡೆಯೋ? ಮೊದಲೇ ನೀನು ಹೇಳಬಾರದಿತ್ತೆ ನನ್ನಲ್ಲಿ” ಅಂತ. ನೀನು ಹಾಗೂ ಸುನಂದೆ ಇಬ್ಬರೂ ನನಗೆ ಒಂದೇ ಎಂದು ಹೇಳಿ ಅವಳನ್ನು ಪುನಃ ತಬ್ಬಿಕೊಂಡು ಉಪಚರಿಸುತ್ತಾಳೆ. ಅಲ್ಲಿ ಅವಳ ಠೀವಿಯಲ್ಲ ಮಮತೆ ಮಾತ್ರವೇ ಪ್ರಧಾನವಾಗಿದೆ. ದಶಾರ್ಣ ದೇಶದ ದೊರೆಗೆ ನಾವು ಇಬ್ಬರೂ ಮಕ್ಕಳು, ಭೀಮರಾಜನೊಂದಿಗೆ ನನ್ನಕ್ಕನ ವಿವಾಹ ಆಯಿತು, ನಾನು ಚೇದಿಯ ಅರಸು ವೀರಬಾಹುವಿನ ಪತ್ನಿಯಾದೆ. ನಾನು ದಶಾರ್ಣದಲ್ಲಿದ್ದಾಗಲೇ ನಿನ್ನ ಜನನವಾಗಿತ್ತು ಆಗಲೇ ಕೊನೆ ನಿನ್ನನ್ನು ಕಂಡಿದ್ದು ನಾನು, ಈ ಮನೆಯನ್ನು ನಿನ್ನ ತವರೆಂದೇ ಭಾವಿಸು, ನೀನೂ ನನ್ನ ಮಗಳಂತೆಯೇ. ಇಲ್ಲಿ ನನ್ನದೆನ್ನುವುದು ಏನಿದೆಯೋ ಎಲ್ಲವೂ ನಿನ್ನದೇ ಅಂದಳು.

ದಮಯಂತಿಗೆ ಅನಂದ ತುಂಬಿ ಹರಿಯಿತು, ಅಮ್ಮನಿಗೆ ನಮಸ್ಕರಿಸಿದಳು, ನಾನು ಯಾರು ಅಂತ ತಿಳಿಯದಿದ್ದರೂ ಮಗಳಂತೆಯೇ ನಡೆಸಿಕೊಂಡಿದ್ದೀರಿ, ನನಗೆ ಇನಿತೂ ದುಃಖ ಆಗಗೊಡಲಿಲ್ಲ, ಹೇಳಲು ಏನಿದೆ? ಹೇಳದೆಯೂ ಚೆನ್ನಾಗಿಯೇ ಇದ್ದೆ, ಅಂತ ಹೇಳಿ ನನ್ನ ತಂದೆ ತಾಯಿ ಹಗೂ ಮಕ್ಕಳನ್ನು ನೋಡುವ ತವಕ ವ್ಯಕ್ತಪಡಿಸುತ್ತಾಳೆ. ಆಗ ತಾಯಿ ಅಪ್ಪಣೆ ಕೊಡುತ್ತಾಳೆ ಹೋಗಿಬಾ ಅಂತ, ಸುನಂದಳನ್ನು ಕರೆದು ಹೇಳುತ್ತಾಳೆ, ಅವಳು ನಿನ್ನ ಸಹೋದರಿ ಆಗುತ್ತಾಳೆ, ಈಗ ಮನೆಗೆ ಹೋಗಲು ಯೋಜಿಸಿದ್ದಾಳೆ, ಸರಿಯಾಗಿ ಕಳಿಸಿಕೊಡು ಅಂತ. ರಾಜನಾದ ಸುಬಾಹು ಅವಳ ರಕ್ಷಣೆಗೆ ಒಂದು ಸೈನ್ಯದ ತುಕಡಿಯನ್ನೇ ಕಳುಹಿಸಿಕೊಟ್ಟ. ಸೇವೆಗಾಗಿ ಜನರು ಸಿದ್ಧರಾದರು ಹೀಗೆ ತವರಿನೊಡಗೂಡಿತು ಬಳ್ಳಿ, ದಮಯಂತಿ ವೈಭವದಿಂದ ತವರಿಗೆ ಹೊರಟಳು.

ಜ್ಯೋತಿಷ್ಯದಲ್ಲಿ ನೀಚಭಂಗ ರಾಜಯೋಗ ಅಂತ ಇರುತ್ತದೆ. ಆ ಯೋಗ ಯಾರಲ್ಲಿ ಇರುತ್ತದೆಯೋ ಅವರಿಗೆ ಆ ಕೆಲಸ ಅಗಲ್ಲ ಆಗಲ್ಲ ಅನ್ನುವಂತಾಗಿ ಕೊನೆಯಲ್ಲಿ ಆಗುತ್ತದೆ. ಹಾಗೇ ಭೀಮ ರಾಜನಿಗೂ ಅಯಿತು. ಮಗಳು ಅಳಿಯ ಯಾರೂ ಸಿಗುವುದಿಲ್ಲ ಅಂತ ನಿಶ್ಚಯಮಾಡಿದ್ದ. ಮೊದಲು, ಎಷ್ಟು ಹುಡುಕಿದರೂ ಸಿಕ್ಕಿರಲಿಲ್ಲ. ಅವರನ್ನು ಹುಡುಕಲು ಏನನ್ನಾದರೂ ಕೊಡಲಿಕ್ಕೆ, ಏನನ್ನಾದರೂ ಮಾಡಲಿಕ್ಕೆ ಸಿದ್ಧನಾಗಿದ್ದ. ಹುಡುಕಿಕೊಟ್ಟವರಿಗೆ ರಾಜ್ಯವನ್ನೇ ಕೊಡಲೂ ಸಿದ್ಧನಿದ್ದ.

ಇದ್ದಕ್ಕಿದ್ದಂತೆಯೇ ಒಂದು ದಿನ ಸಂದೇಶ ಬಂತು. ಸುದೇವ ಬಂದ, ಸುದೈವ ಬಂತು, ಅವನ ಜೀವ, ಅವನ ಅತ್ಯಂತ ಪ್ರೇಮದ ಪುತ್ರಿ ಬಂದಿದ್ದಾಳೆ, ಆನಂದದ ಹೊಳೆ ಹರಿದಂತಾಯಿತು. ಆದರೆ ಪೂರ್ಣ ಆನಂದ ಪಡುವಂತಿಲ್ಲ. ಈಗ ಬಂದದ್ದು ಅರ್ಧ ಅಷ್ಟೇ, ಇನ್ನರ್ಧ ಬಂದಮೇಲೆ ಪೂರ್ಣ ಸಂತೋಷ. ಅದಕ್ಕಾಗಿ ಪ್ರಯತ್ನ ನಡೆಯುತ್ತಿದೆ. ಅದೂ ಬಂದರೆ ಈ ಅರ್ಧ ಬಂದದ್ದಕ್ಕೆ ಸಾರ್ಥಕ, ಇಲ್ಲದಿದ್ದರೆ ಇದೂ ಹೋಗಿಬಿಡುತ್ತದೆ. ಮುಂದಿನ ಒಳಿತಿನ ನಿರೀಕ್ಷೆಯಲ್ಲಿ ಮುಂದುವರೆಯೋಣ.

ಚಿತ್ರ:ಅಂತರ್ಜಾಲದಿಂದ

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments