#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
29-08-2018:

ನಳಾನ್ವೇಷಣೆ

ಬಹಿರಂಗದಲ್ಲಿ ಎಂದೂ ರಾಜನಾಗದಿದ್ದ ಭಗವಾನ್ ಶ್ರೀಕೃಷ್ಣನಿಗೆ ಅನಂತ ಪ್ರಣಾಮಗಳು. ಕಲಿನಿಗ್ರಹವನ್ನು ನಿರೂಪಿಸುತ್ತಾ, ನಳಚರಿತ್ರೆಯ ಇಂದಿನ ಪ್ರವಚನ ಪ್ರಾರಂಭಿಸೋಣ.

ಬೇರಿನೊಡಗೂಡಿತು ಬಳ್ಳಿ, ಬೇರಿಂದ ಬೇರಾಗಿ ಬಾಡುತ್ತಿದ್ದ ಬಳ್ಳಿ ಮತ್ತೆ ಬೇರಿನ ಸಂಪರ್ಕವನ್ನು ಪಡೆದುಕೊಂಡಿತು. ದಮಯಂತಿ ವಿದರ್ಭಕ್ಕೆ ಬಂದಳು, ಸುದೇವನೆಂಬ ಬ್ರಾಹ್ಮಣ ಚೇದಿಯಲ್ಲೆಲ್ಲೋ ಕಳೆದುಹೋಗಿದ್ದ ದಮಯಂತಿಯನ್ನು ಹುಡುಕಿ ಕರೆತಂದ. ಭೀಮರಾಜನಿಗೆ ತುಂಬಾ ಸಂತೋಷವಾಯಿತು, ಹೇಳುತ್ತೀವಲ್ಲ ಭಯಂಕರ ಸಂತೋಷವಾಗಿದೆ ಅಂತ. ಹಾಗೆ. ಭೀಮ ಅಂದರೇ ಭಯಂಕರ ಎಂದರ್ಥ. ಆದರೆ ವಾಸ್ತವದಲ್ಲಿ ಅವನು ಹಾಗಿರಲಿಲ್ಲ. ಬಹಳ ಮೃದುವಾದ ಮನಸ್ಸು ಅವನದ್ದಾಗಿತ್ತು. ಮಗಳಿಗಾಗಿ , ಅಳಿಯನಿಗಾಗಿ ಅವರನ್ನು ಮರಳಿ ಕರೆತರಲಿಕ್ಕಾಗಿ ಅವನು ಏನೂ ಮಾಡಲು ಸಿದ್ಧನಿದ್ದ, ಕರುಳು ಬಳ್ಳಿಯ ಬೆಲೆಯೇನು? ಬೆಲೆ ಕಟ್ಟಲಿಕ್ಕಾದರೂ ಸಾಧ್ಯವೇ? ಇಲ್ಲವೇ ಇಲ್ಲ. ಭೀಮರಾಜ ಮಗಳಿಗಾಗಿ ಪ್ರಾಣ ಕೊಡಲೂ ತಯಾರಾಗಿದ್ದ. ಹಾಗಾಗಿಯೇ ಅವರ ಸುದ್ದಿ ತಂದವರಿಗೆ ೧೦೦೦ ಆಕಳುಗಳು ಹಾಗೂ ಅವರನ್ನು ಕರೆತಂದವರಿಗೆ ಗ್ರಾಮ, ನಗರಗಳನ್ನು ಕೊಡುವುದಾಗಿ ಘೋಷಿಸಿದ್ದ. ಅಂತೆಯೇ ಸುದೇವನಿಗೆ ನೀಡಿದ. ಆದರೆ ಸುದೇವನಿಗೆ ಅದಕ್ಕಿಂತ ಹೆಚ್ಚಾಗಿ ರಾಜನ ಸಂತೋಷವೇ ಮುಖ್ಯವಾಗಿತ್ತು.

ತತ್ತ್ವಭಾಗವತಮ್

ಸರಿ ದಮಯಂತಿ ಮನೆಗೆ ಬಂದಳು, ಈಗ ನಮ್ಮ ಭಾವನೆ ಹೇಗಿರುತ್ತದೆ? ಇನ್ನು ದಮಯಂತಿ ಸಂತೋಷವಾಗಿರುತ್ತಾಳೆ, ನೆಮ್ಮದಿಯಾಗಿರುತ್ತಾಳೆ ಅಂತ ಅಲ್ಲವೆ! ಅದೆಲ್ಲ ಇದೆ, ಆದರೆ ನಳನಿಲ್ಲದೇ ಅವಳಿಗೆ ಆನಂದವೆಲ್ಲಿ? ರಾತ್ರಿ ಹಾಗೇ ಕಳೆಯಿತು. ಯೋಚಿಸುತ್ತಾ ಇದ್ದಳು, ನಳಾನ್ವೇಷಣೆಯ ಬಗ್ಗೆ ಯಾರಲ್ಲಿ ಹೇಗೆ ಪ್ರಸ್ತಾಪ ಮಾಡುವುದು ಅಂತ. ನಳನಿಲ್ಲದೇ ಅವಳು ಪೂರ್ಣಳಾಗುವುದು ಹೇಗೆ? ಅರ್ಧಾಂಗಿನಿ ಅಂತ ಹೇಳಿದ್ದಾರೆ. ಹಾಗೆಯೇ ಗಂಡನಿಲ್ಲದೇ ಹೆಂಡತಿ ಅಥವಾ ಹೆಂಡತಿ ಇಲ್ಲದ ಗಂಡ ಪೂರ್ಣರಾಗುವುದಿಲ್ಲ, ಪ್ರಕೃತಿಯಿಲ್ಲದ ಪುರುಷ, ಪುರುಷನಿಲ್ಲದ ಪ್ರಕೃತಿ ಎರಡೂ ಅಪೂರ್ಣವೇ, ಪುರುಷನಿಲ್ಲದ ಪ್ರಕೃತಿ ಶವವಾದರೆ ಪ್ರಕೃತಿಯಿಲ್ಲದ ಪುರುಷ ಮುಕ್ತಿಯಲ್ಲದೆ, ಪ್ರೇತವಾಗುತ್ತದೆ. ಹಾಗೇ ನಳನಿಲ್ಲದ ದಮಯಂತಿ ಅಪೂರ್ಣಳು. ಹೇಗೋ ಆ ರಾತ್ರಿ ಕಳೆಯಿತು, ಈ ರಾತ್ರಿ ಕಳೆಯುವುದು ಎಂದು? ಈ ಕಾಳರಾತ್ರಿ, ನಳನಿಲ್ಲದ ಬದುಕು, ಅದು ತಾನಾಗಿ ಕಳೆಯುವುದಲ್ಲ, ಅದಕ್ಕೆ ಪುರುಷಪ್ರಯತ್ನ ಬೇಕು, ಇಲ್ಲಿ ಅದಕ್ಕಿಂತ ಹೆಚ್ಚಿನ ಸ್ತ್ರೀ ಪ್ರಯತ್ನವನ್ನು ನಾವು ಕಾಣುತ್ತೇವೆ. ಪುರುಷಪ್ರಯತ್ನ ಅಂದರೆ ಜೀವದ ಪ್ರಯತ್ನ ಅನ್ನುವ ಅರ್ಥದಲ್ಲಿ ಹೇಳುತ್ತೇವೆ.

ದಮಯಂತಿ ಎಂತಹ ಜಾಣೆ, ಕಾರ್ಯಸಮರ್ಥೆ, ಸಾಮ್ರಾಜ್ಞಿಯಾಗಿದ್ದರೂ, ಯಾವ ತರಹ ಸಾಮ್ರಾಟ್ ಆಗುವ ಶಕ್ತಿಯನ್ನು ಹೊಂದಿದ್ದಳು ಅಂತ ಕಾಣುತ್ತದೆ ಅವಳ ಮುಂದಿನ ನಳನನ್ನು ಹುಡುಕುವ ಪ್ರಯತ್ನದಲ್ಲಿ. ಸಾಮನ್ಯವಾಗಿ ಮನುಷ್ಯ ದುಃಖ ಬಂದಾಗ, ಕಷ್ಟ ಬಂದಾಗ ದುರ್ಬಲನಾಗುತ್ತಾನೆ, ಆದರೆ ಆಗಲೇ ಗಟ್ಟಿಯಾಗಬೇಕು. ದುಃಖ ಪಡಬಾರದು ಅಂತಲ್ಲ ಆದರೆ ಅದು ಮುಂದಿನ ಚಿಂತನೆಗೆ ದಾರಿ ಮಾಡಿಕೊಡಬೇಕು. ಧೈರ್ಯವನ್ನು ತಂದುಕೊಡಬೇಕು. ಅದನ್ನು ನಾವು ದಮಯಂತಿಯಲ್ಲಿ ಕಾಣುತ್ತೇವೆ.

ಅಕಸ್ಮಾತ್ ಕಳೆದುಹೋದರೆ ಹುಡುಕಬಹುದು ಹುದುಗಿಕೊಂಡಿರುವವರನ್ನು ಹೇಗೆ ಹುಡುಕುವುದು? ಉಸಿರಾದರೂ ಬಿಟ್ಟಾಳು ಪತಿಯನ್ನು ಹೇಗೆ ಬಿಟ್ಟಾಳು. ಬೆಳಿಗ್ಗೆ ನೇರ ತಾಯಿಯ ಬಳಿಗೆ ಹೋಗುತ್ತಾಳೆ. ನಮ್ಮ ದೇಹದಲ್ಲಿ ಪ್ರತಿಯೊಂದು ಅಂಗಕ್ಕೂ ಒಂದೊಂದು ಕೆಲಸ ಇದೆ, ಹೊಕ್ಕಳಿಗೆ ಏನು ಅಂದರೆ ಅದು ನಮ್ಮ ತಾಯಿಯನ್ನು ನೆನಪು ಮಾಡಿಕೊಡಲಿಕ್ಕೆ. ಅವಳನ್ನು ಮರೆಯದಿರಲಿಕ್ಕೆ ಅಂತ, ಒಂದು ಕಾಲದಲ್ಲಿ ಗರ್ಭದಲ್ಲಿದ್ದಾಗ ಆ ಅಂಗದ ಮೂಲಕವೇ ಅವಳು ತಾನು ಜೀರ್ಣಿಸಿಕೊಂಡ ಆಹಾರವನ್ನು ನಿನ್ನೊಳಗೆ ಕಳುಹಿಸುತ್ತಿದ್ದಳು ಅಂತ ನೆನಪು ಮಾಡಿಸಲಿಕ್ಕಾಗಿ ಅದು. ನೋವು ತಾಯಿಗೆ ಚೆನ್ನಾಗಿ ಅರ್ಥವಾಗುತ್ತೆ, ಹೇಗಿದ್ದರೂ ಅಮ್ಮ ಅವರ ಮೂಲಕವೇ ಹೋಗುವುದು ಒಳ್ಳೆಯದು, ಹಾಗೇ ತಾಯಿ ಮೂಲಕ ತಂದೆಯ ಬಳಿ ಹೋಗುವುದು ಪರಂಪರೆ, ಸಾಮಾನ್ಯ ಅವಳಿಗೆ ಆ ಕಂಟ್ರೋಲ್ ಇರುತ್ತೆ, ಒಂದು ರುಚಿಯಾದ ಅಡುಗೆಯನ್ನು ಮಾಡಿಕೊಟ್ಟು ಬೇಕಾದ ಕೆಲಸಕ್ಕೆ ಪೀಠಿಕೆ ಹಾಕುತ್ತಾಳೆ ಅವಳು ಅಲ್ಲಿ. ತಾಯಿ ಮಕ್ಕಳಿಗೆ ಅಷ್ಟು ಹತ್ತಿರವಾಗುವುದು ಸರಿ, ಅವಳು ಹಾಗೇ ಇರಬೇಕು.

ದಮಯಂತಿ ಅಮ್ಮನ ಬಳಿಗೆ ಹೋಗಿ ಒಂದು ಪ್ರಶ್ನೆ ಕೇಳುತ್ತಾಳೆ ಅಮ್ಮ ನಾನು ಬದುಕಿರಬೇಕು ಅನ್ನೋದು ನಿನ್ನ ಇಚ್ಛೆಯೇ? ಗಂಭೀರವಾಗಿ ಕೇಳುತ್ತಿದ್ದೇನೆ ಅಂತ ಹೇಳಿದಳು. ಹಾಗಿದ್ದರೆ ನನ್ನ ಒಂದು ಅಪೇಕ್ಷೆ ಈಡೇರಿಸು, ಹೇಗಾದರೂ ನರವೀರನಾದ ನಳನನ್ನು ಹುಡುಕಿಸುವ ಪ್ರಯತ್ನ ಮಾಡು, ಅವನು ಬರದಿದ್ದರೆ ನಾನು ಜೀವಸಹಿತ ಉಳಿಯಲಾರೆ ಅಂತ. ತಾಯಿ ಮರುಗುತ್ತಾಳೆ ಕಂಬನಿ ಮಿಡಿದು ತನ್ನ ಗಂಡನ ಬಳಿ ಈ ವಿಚಾರವನ್ನು ಪ್ರಸ್ತಾಪಮಾಡುತ್ತಾಳೆ. ಮಗಳಿಗೆ ತಾಯಿಯ ಹತ್ತಿರ ಹಠಮಾಡುವ ಹಕ್ಕಿದೆ, ಹಾಗೆಯೇ ಹೆಂಡತಿಗೆ ಗಂಡನ ಹತ್ತಿರ ಹಠ ಮಾಡಲು ಸಾಧ್ಯ. ಭೀಮರಾಜನಿಗಾದರೂ ಏನು ಬೇಕು? ಅವನಿಗೂ ಅಳಿಯನನ್ನು ಮನೆಗೆ ಕರೆತರಬೇಕಾಗಿದೆ. ಅವನಿಗೂ ಅಳಿಯ ಬೇಕು. ಅವನು ಅಳಿಯನೆಂಬ ಕಾರಣ ಮಾತ್ರವೇ ಅಲ್ಲ ಲೋಕೋತ್ತರ ವೀರ, ಸಾಮ್ರಾಟ. ಜೊತೆಗೆ ಮಗನಿಗಿಂತ ಹೆಚ್ಚು.

ಈ ವಿಷಯದ ಕುರಿತು ಮೊದಲೇ ಚಿಂತಿತನಾಗಿದ್ದ, ಹೆಂಡತಿ ಹಾಗೂ ಮಗಳ ಒತ್ತಡದ ನಂತರ ಮತ್ತೂ ಹೆಚ್ಚು ಪ್ರಯತ್ನ ಪ್ರಾರಂಭಿಸಿದ. ಗುಪ್ತಚರರನ್ನು ಕರೆಸಿದ, ಅದೂ ಬ್ರಾಹ್ಮಣ ಗುಪ್ತಚರರು, ಯಾಕೆ ಬ್ರಾಹ್ಮಣರೆಂದರೆ ಅವರು ಎಲ್ಲಿಗೆ ಬೇಕಾದರೂ ಹೋಗಬಲ್ಲರು, ಅಂತರಂಗದಲ್ಲಿಯೂ ಹಾಗೂ ಅರಮನೆ ಎರಡರಲ್ಲಿಯೂ. ಅಂತಹ ಸಾವಿರಾರು ಜನರನ್ನು ಕರೆದು ಹೇಳುತ್ತಾನೆ, ಭೂಮಂಡಲವನ್ನೆಲ್ಲಾ ಸುತ್ತಿರಿ, ಎಲ್ಲಿಯಾದರೂ ನಳನನ್ನು ಹುಡುಕಿ ಅಂತ. ಎಲ್ಲರೂ ಒಪ್ಪಿ ನಂತರ ದಮಯಂತಿಯಲ್ಲಿಗೆ ಬರುತ್ತಾರೆ. ದಮಯಂತಿ ಅವರೆಲ್ಲರನ್ನೂ ಕೂರಿಸಿ, ಅವರಿಗೆ ನಾಲ್ಕಾರು ಶ್ಲೋಕಗಳನ್ನು ಕೊಡುತ್ತಾಳೆ, ನಂತರ ಹೇಳುತ್ತಾಳೆ ಈ ಕವಿತಾ ಗುಚ್ಛವನ್ನು ಸರಿಯಾಗಿ ಮನನ ಮಾಡಿಕೊಳ್ಳಿ, ನಂತರದಲ್ಲಿ ದೇಶಾಂತರ ಹೋದಾಗ ಎಲ್ಲಿ ಜನರ ಗುಂಪು ಸೇರಿರುತ್ತದೋ ಅಲ್ಲಿ ಈ ಕವಿತೆಯನ್ನು ಹೇಳಿ. ಎಲ್ಲ ಕಡೆಗಳಲ್ಲೂ ಪದೇಪದೇ ಹೇಳಿ, ಇದು ನಳನಿಗೆ ಸಂದೇಶ, ಅವನಿಗೆ ಮಾತ್ರಾ ಅರ್ಥವಾಗುತ್ತದೆ. ಈ ಪದಗಳನ್ನು ಕೇಳಿ ಯಾರು ಮಾರುತ್ತರ ಕೊಡುತ್ತಾನೋ ಅವನು ನಳ, ಬೇರೆಯವರು ಇದಕ್ಕೆ ಉತ್ತರಿಸುವುದಿಲ್ಲ. ನಳನು ನರನೇ ಹೌದಾದರೆ ಇದಕ್ಕೆ ಉತ್ತರವನ್ನು ಕೊಡುತ್ತಾನೆ. ಹಾಗೆ ಉತ್ತರ ಕೊಟ್ಟವನನ್ನು ಅವನು ಯಾರು? ಎಲ್ಲಿದ್ದಾನೆ? ಏನು ಮಾಡುತ್ತಾನೆ? ಅಂತ ನಿಶ್ಚಿತವಾಗಿ ತಿಳಿಯಬೇಕು, ನಂತರ ನೇರ ಬಂದು ನನಗೇ ಹೇಳಬೇಕು. ಅವನ ಉತ್ತರವೇನು ಎನ್ನುವುದನ್ನು ಹಾಗೂ ಅವನ ಆ ಸಮಯದ ವಿವರಗಳನ್ನು ಪೂರ್ಣವಾಗಿ ತಿಳಿಸಬೇಕು. ಅವನ ರೂಪು, ಮುಖ ಲಕ್ಷಣ ಎಲ್ಲವನ್ನೂ ತಿಳಿದು ಹೇಳಬೇಕು. “ಎಲ್ಲಿ ಹೋದೆ ಜೂಜುಗಾರ ನನ್ನನ್ನು ಬಿಟ್ಟು ಮಧ್ಯರಾತ್ರಿಯಲ್ಲಿ. ಮಹಾರಣ್ಯದ ಮಧ್ಯದಲ್ಲಿ ಹಸಿದು, ಬಾಯಾರಿ, ಬಳಲಿ ನೀನಿರುವೆಯೆಂಬ ಧೈರ್ಯದಲ್ಲಿ ನಿದ್ದೆಗೆ ವಶಳಾಗಿದ್ದ ನನ್ನನ್ನು ಬಿಟ್ಟು ಎಲ್ಲಿಗೆ ಹೋದೆ? ಸಾಲದ್ದಕ್ಕೆ ಉಟ್ಟ ವಸ್ತ್ರದಲ್ಲಿ ಅರ್ಧ ಕಿತ್ತುಕೊಂಡು ಹೋದೆ? ನಿನ್ನ ಬಿಟ್ಟು ನಾನು ಹೇಗಿರಲಿ? ಏನು ಮಾಡಿದ್ದೆ ನಾನು? ನಿನ್ನಲ್ಲಿ ಮಾತ್ರವೇ ಅನುರಾಗವನ್ನು ಹೊಂದಿದ್ದ ನನ್ನನ್ನು ಬಿಟ್ಟು ಎಲ್ಲಿಗೆ ಹೋದೆ? ಓ ನನ್ನ ಪರಮಪ್ರಿಯನೇ ನೀನು ನಿನ್ನ ಪ್ರಿಯೆಯನ್ನು ಬಿಟ್ಟು ಎಲ್ಲಿಗೆ ಹೋದೆ? ಅವಳೇನಾಗಿದ್ದಾಳೆ ಅಂತ ಗೊತ್ತೆ ನಿನಗೆ? ಇಂದಿಗೂ ಅದೇ ಅರ್ಧವಸ್ತ್ರದಲ್ಲಿ ಇದ್ದಾಳೆ. ನೀನು ಇಟ್ಟ ಹಾಗೇ ಇದಾಳೆ, ಅರೆ ಹೊಟ್ಟೆ, ಅರೆ ಬಟ್ಟೆ, ಅರೆ ಜೀವದಲ್ಲಿ, ವ್ಯತ್ಯಾಸ ಇಷ್ಟೇ ನೀವು ಬಿಟ್ಟು ಹೋಗುವವರೆಗೂ ಯಾವುದೂ ಅವಳನ್ನು ನೋಯಿಸಿರಲಿಲ್ಲ, ಸುಡಲಿಲ್ಲ. ಆದರೆ ನೀನು ಬಿಟ್ಟು ಹೋದಮೇಲೆ ಎಲ್ಲವೂ ಸುಡುತ್ತಿದೆ. ಈಗಲೂ ಕರಗಬಾರದೆ? ನಿನ್ನ ಮನಸ್ಸು ಕಲ್ಲೇ? ಕೊರಡೇ? ಅಂದಿನಿಂದ ಇಂದಿನವರೆಗೆ ಬಿಡದೆ ರೋದಿಸುವ ಬಾಲೆಯ ಕುರಿತು ನೀನು ಈಗಲೂ ಕರಗಬಾರದೆ? ಹೇ ವೀರ, ದಯೆ ತೋರು, ಶತ್ರುಗಳಲ್ಲೂ ದಯೆ ತೋರುವವನು ನೀನು, ನಿನ್ನ ಅರ್ಧಾಂಗಿನಿಯ ಮೇಲೆ ಕೃಪೆ ತೋರಬಾರದೇ? ಕಡೆಪಕ್ಷ ಒಂದು ಮಾತು ಪ್ರತಿಯಾಗಿ ಹೇಳಬಾರದೇ” ಅಂತ. ಎಲ್ಲಿ ನಳ ಇದನ್ನು ಕೇಳಿದರೂ ಅವನು ಕೂಡಲೇ ಓಡಿ ಬರಬೇಕು. ಯಾಕೆಂದರೆ ಹಾಗೆ ರಚಿಸಿದ್ದಾಳೆ ದಮಯಂತಿ ಇದನ್ನು, ಅವಳು ಅತ್ಯತ್ತಮ ವಿದುಷಿ. ಇದಕ್ಕೆ ಉತ್ತರ ಕೊಡದೇ ಹೇಗಿದ್ದಾನು ನಳ? ಇದು ಅವನ ಕಿವಿಗೆ ಬಿದ್ದರೆ ಸಾಕು, ಅವನ ಹೃದಯವನ್ನು ಹೊಕ್ಕುವುದು ನಿಶ್ಚಿತ, ಅವನು ಉತ್ತರವನ್ನು ಕೊಟ್ಟೇ ಕೊಡುತ್ತಾನೆ ಅನ್ನುವುದು ದಮಯಂತಿಯ ಭಾವ.

ಚಿಂತೆಗೂ ಚಿತೆಗೂ ಒಂದೇ ವ್ಯತ್ಯಾಸ, ಸೊನ್ನೆ ಮಾತ್ರಾ ಆದರೆ ಚಿತೆ ಒಂದು ಬಾರಿ ಸತ್ತ ನಂತರ ಸುಟ್ಟರೆ,.ಚಿಂತೆ ಬದುಕಿರುವ ತನಕವೂ ನಿತ್ಯ ಸುಡುತ್ತದೆ. ಸೊನ್ನೆ ಅಂದರೆ ಇನ್ನೂ ಒಂದು ಅರ್ಥವೇನೆಂದರೆ ಏನೂ ವ್ಯತ್ಯಾಸವೇ ಇಲ್ಲ ಎರಡಕ್ಕೂ ಅಂತ.

ಆ ಬ್ರಾಹ್ಮಣರು ಅವಳಿಂದ ಬೀಳ್ಕೊಂಡು ಊರು ಊರು, ರಾಷ್ಟ್ರ, ಗ್ರಾಮಗಳು, ಕಾಡುಜನರು ವಾಸಿಸುವ ಹಾಡಿಗಳು ಎಲ್ಲ ಕಡೆಗೂ ಹೋಗಿ ಇದನ್ನು ಹೇಳುತ್ತಾ ಇದ್ದರು, ಗಮನಿಸುತ್ತಾ ಇದ್ದರು. ಎಷ್ಟು ಕಷ್ಟ ನೋಡಿ ಅವರಿಗೆ? ಸಿಕ್ಕಿದ ಸಭೆಗಳಲ್ಲಿ ಸಂಬಂಧ ಇಲ್ಲದಿದ್ದರೂ ಮಾತಾಡಿ, ಎಲ್ಲರ ಮುಖ ನೋಡಿ, ಎಲ್ಲರನ್ನೂ ಗಮನಿಸಿ, ಇದೆಲ್ಲಾ ಸುಲಭ ಸಾಧ್ಯವೇ? ಅವರಲ್ಲಿ ಸಮಾಜಕ್ಕೆ ಗೌರವವಿತ್ತು. ಹಾಗಾಗಿಯೇ ಬ್ರಾಹ್ಮಣರನ್ನು ಹುಡುಕಿ ಈ ಕೆಲಸಕ್ಕಾಗಿ ಕಳುಹಿಸಿದ್ದು. ದಮಯಂತಿ ಕೊಟ್ಟ ಶ್ಲೋಕವೇನೂ ಮಂತ್ರ ಅಲ್ಲ, ಅದು ಪ್ರಿಯ ಪ್ರಿಯೆಯರ ಸಂವಾದ, ಅದನ್ನು ಹೇಳದೂ ಕಷ್ಟ, ಬ್ರಾಹ್ಮಣರು ಅದನ್ನು ಎಲ್ಲೆಡೆ ಹೇಳಬೇಕಾದರೆ ಎಷ್ಟು ಕಷ್ಟ ಪಟ್ಟಿರಬೇಕು? ಇದು ನಳ ದಮಯಂತಿಯರ ನಡುವೆ ಮಾತ್ರಾ ಇದ್ದ ಸಂಕೇತ ವಿಷಯ ಈಗ ಎಲ್ಲೆಡೆ ರಟ್ಟಾಗಿದೆ. ಬೀದಿ ಬೀದಿಗಳಲ್ಲಿ ಹಾಡುತ್ತಿದ್ದಾರೆ. ಹೀಗೆ ಸಾವಿರಾರು ಬ್ರಾಹ್ಮಣರು ವರ್ಷಗಟ್ಟಲೇ ಹುಡುಕಿದರೂ ಸಿಗಲಿಲ್ಲ. ಯಾಕೆಂದರೆ ಅವನೆಲ್ಲಿದ್ದನೋ ಅ ಒಂದು ಕಡೆ ಬಿಟ್ಟು ಬೇರೆಲ್ಲಕಡೆ ಅವರು ಹುಡುಕುತ್ತಿದ್ದರು ಹಾಗಾಗಿ.

ಆಂಜನೇಯನ ನೆನಪಾಗುತ್ತದೆ, ಲಂಕೆಯಲ್ಲಿ ಅವನು ಸೀತೆಯನ್ನು ಹುಡುಕುತ್ತಿದ್ದಾಗ ಅವನು ಹುಡುಕದ ನಾಲ್ಕು ಅಂಗುಲಗಳಷ್ಟು ಜಾಗವೂ ಇರಲಿಲ್ಲ, ಡಬ್ಬಿಗಳ ಮುಚ್ಚಳ ಎಲ್ಲಾ ತೆಗೆದು ಹುಡುಕುವಷ್ಟು ಮಟ್ಟಿಗೆ ಹುಡುಕಿದ್ದ. ಆದರೂ ಸಿಗಲಿಲ್ಲ ಏಕೆಂದರೆ ಅವಳು ಇದ್ದ ಅಶೋಕವನವನ್ನು ಬಿಟ್ಟು ಬೇರೆಲ್ಲಾ ಕಡೆಯೂ ಅವಳನ್ನು ಹುಡುಕಿದ್ದ. ಹೀಗೇ ಆ ಬ್ರಾಹ್ಮಣರ ಪೈಕಿ ಒಬ್ಬನಿಗಾದರೂ ನಳ ಇರುವ ಸ್ಥಳ ಸಿಗಬೇಕು, ಅವನೆಲ್ಲಿ ಇದಾನೆ ಅಂದರೆ ಅದು ರಾಮನಿರುವ ಸ್ಥಳ. ರಾಮಜನ್ಮಸ್ಥಳ, ಎಲ್ಲಿ ಅಡಗಿದ್ದರೂ ಹುಡುಕಬಹುದು ಆದರೆ ರಾಮಚರಣ ಸೇರಿ ಅಡಗಿದ್ದರೆ, ಹುಡುಕುವುದು ಹೇಗೆ? ಅಂತಹಾ ಒಬ್ಬ ಬ್ರಾಹ್ಮಣ, ರಾಮಚರಣವನ್ನು ತಲುಪುವ ಬ್ರಾಹ್ಮಣ ಇದ್ದರೆ ಮಾತ್ರಾ ತಲುಪಬಹುದು.

ಆತನ ಹೆಸರು ಪರ್ಣಾದ, ಬರೀ ಹೆಸರಿಗೆ ಬ್ರಾಹ್ಮಣನಲ್ಲ. ಬದಲಿಗೆ ಹೆಸರೇ ಹೇಳುವಂತೆ ತಪಸ್ವೀ ಬ್ರಾಹ್ಮಣ, ಅಂದರೆ ಎಲೆ ತಿಂದುಕೊಂಡು ಬದುಕುವವನು ಅಂತ, ಮೃಷ್ಟಾನ್ನ ಭೋಜನ ಅಲ್ಲ, ಸರಳ ಭೋಜನವನ್ನೂ ಬಿಟ್ಟು ಕೇವಲ ಎಲೆಯನ್ನು ತಿಂದುಕೊಂಡು ಬದುಕುವವನು ಅಂತ. ಮೋಕ್ಷದಾಯಕವಾದ ಸಪ್ತನಗರಗಳ ಪೈಕಿ ಮೊದಲನೆಯದು ಅಯೋಧ್ಯಾ, ಅದನ್ನು ಸೇರಬೇಕು ಅಂದರೆ ಹೇಗ್ಹೇಗೋ ಸಾಧ್ಯವಿಲ್ಲ. ರಾಮಚರಣವನ್ನು ಸೇರಲು ಸಾಧ್ಯವಾಗುವಂತೆ ಹೋಗಬೇಕು.

ಸೀತೆಯನ್ನು ಹುಡುಕಲು ಸುಗ್ರೀವನ ಒಟ್ಟು ಸೈನ್ಯದ ಪೈಕಿ ೧/೩ ಭಾಗದ ಸೇನೆ ದಕ್ಷಿಣ ದಿಕ್ಕಿಗೆ ಹೊರಡುತ್ತದೆ ಮ, ಆದರೆ ಅವರಲ್ಲಿ ಗುರಿ ತಲುಪಿದವನು ಆಂಜನೇಯ ಒಬ್ಬನೇ. ಹಾಗೆಯೇ ಅಯೋಧ್ಯೆಯನ್ನು ಒಬ್ಬನೇ ಬ್ರಾಹ್ಮಣ ತಲುಪುತ್ತಾನೆ, ಸರಯೂ ನದಿಯ ದರ್ಶನ ಮಾಡುತ್ತಾನೆ, ಅಯೋಧ್ಯಾ ನಗರವನ್ನೆಲ್ಲಾ ದರ್ಶನ ಮಾಡುತ್ತಾನೆ. ಅಲ್ಲಿರುವ ದೇವಾಲಯಗಳನ್ನೆಲ್ಲಾ ನೋಡುತ್ತಾನೆ, ನಂತರ ನೇರವಾಗಿ ರಾಜನ ಅರಮನೆಯನ್ನು, ಆಸ್ಥಾನವನ್ನೂ ಪ್ರವೇಶಿಸುತ್ತಾನೆ. ತುಂಬಿದ ಸಭೆಯಲ್ಲಿ ಋತುಪರ್ಣನನ್ನೂ ಸೇರಿದಂತೆ ಎಲ್ಲರೂ ಇರುವ ಸಭೆಯಲ್ಲಿ ದಮಯಂತಿಯ ಕವಿತಾಗುಚ್ಛವನ್ನು ಹೇಳುತ್ತಾನೆ, ಪಾಪ ಋತುಪರ್ಣ ಏನು ಹೇಳಬೇಕು ಅದಕ್ಕೆ! ಬ್ರಾಹ್ಮಣನು ಹೇಳಿ ಎಲ್ಲರ ಮುಖಭಾವವನ್ನೂ ನೋಡುತ್ತಾ ಇದ್ದಾನೆ, ಯಾರ ಭಾವ ಏನಿದೆ ಅಂತ. ಋತುಪರ್ಣ ನಿಮಗೇನಾಗಿದೆ ಎನ್ನುವಂತೆ ಸುಮ್ಮನೇ ನೋಡಿದ ಏನೂ ಮಾತಾಡಲಿಲ್ಲ, ಇಡೀ ಸಭೆಯಲ್ಲಿ ಮತ್ತೆ ಮತ್ತೆ ಈ ಶ್ಲೋಕವನ್ನು ಹೇಳಿದರೂ ಕೂಡಾ ಯಾರೂ ಮಾತಾಡಲಿಲ್ಲ.

ಹಾಗಂತ ಪ್ರತಿಕ್ರಿಯೆ ಇಲ್ಲ ಅಂತಲ್ಲ, ಆ ಮಾತನ್ನು ಕೇಳಿದ ಕೂಡಲೇ ಸಭೆಯಲ್ಲಿದ್ದ ಒಬ್ಬನ ಮನ ಮ್ಲಾನವಾಯಿತು. ಮಂಕಾಯಿತು. ಕಣ್ಣು ಮಂಜಾಯಿತು, ಎದೆಯೊಳಗಿನ ಬೆಂಕಿ ನಾಲಗೆಯ ಮೂಲಕ ಹೊರಗೆ ಬರುವ ಪ್ರಯತ್ನ ಅದು, ತುಟಿ ಹಲ್ಲುಗಳು ಕಚ್ಚಿಹಿಡಿದಿವೆ ಬೇಡ ಮಾತಾಡಬೇಡ ಈಗ ಮಾತಾಡುವ ಸಮಯ ಅಲ್ಲ ಅಂತ ಮಾತಡುವ ಸ್ಥಳ ಅಲ್ಲ ಇದು ಅಂತ. ಆದರೆ ಭಾವ ಹೊರಗೆ ಬರುವ ಪ್ರಯತ್ನ ಮಾಡುತ್ತಾ ಇದೆ. ಆದರೆ ಮಾತಾಡಲಾರ. ಒಂದು ಯುಗ ತುಂಬುವಷ್ಟು, ಒಂದು ಜಗ ತುಂಬುವಷ್ಟು ವೇದನೆ ಇದೆ ಅಲ್ಲಿ. ಅದು ಅವನಿಗೇ ಸಂಬಂಧಿಸಿದ್ದು ಆದರೆ ಸಭೆಯಲ್ಲಿ ಮಾತನಾಡುವಂತೆ ಇಲ್ಲ, ಆತ ಜನ ಮಧ್ಯೆಯಿಂದ ನಿರ್ಜನದೆಡೆಗೆ ನಡೆದು ಹೋದ. ಅವನೆದೆಯೊಳಗಿನ ಬಡಬಾಗ್ನಿಯನ್ನು ಯಾರ ಮುಂದಾದರೂ ಹೊರಹಾಕಲಿಕ್ಕೆ ಅವಕಾಶ ಆಗುತ್ತೋ ಏನು ಅಂತ ನಾಳೆ ನೋಡೋಣ.

ಚಿತ್ರ:ಅಂತರ್ಜಾಲದಿಂದ

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments