#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
30-08-2018:

ಸಂದೇಶ-ಪ್ರತಿಸಂದೇಶ

ಜೀವದ ಮೊರೆ ದೇವರಿಗೆ ತಲುಪಬೇಕು; ದೇವರ ಕೃಪೆ ಜೀವದ ಕಡೆ ಹರಿಯಬೇಕು. ಇಷ್ಟೇ ಇರುವಂಥದ್ದು. ದೇವನ ಕೃಪೆಗೆ ತಡೆ ಏನೂ ಇಲ್ಲ ಅದು ನಿರಂತರವಾಗಿರುತ್ತದೆ. ಆದರೆ ಜೀವದ ಮೊರೆ ದೇವನನ್ನು ತಲುಪಬೇಕಷ್ಟೇ, ಅದಕ್ಕೂ ದೇವನ ತಡೆ ಇಲ್ಲ ಕೊರತೆಗಳೇನಿದ್ದರೂ ಅದು ಜೀವದ ಕಡೆಯಿಂದಲೇ. ಹಾಗೆ ಮೊರೆಯಿಡುವಂತಹ ಭಾವವನ್ನು ಕೃಷ್ಣ ನಮಗೆ ಕೊಡಲಿ ಅಂತ ಅವನನ್ನು ಪ್ರಾರ್ಥಿಸೋಣ. ಹೇಗೆ ಮೊರೆಯಿಟ್ಟರೆ ಅವನನ್ನು ತಲುಪಬಹುದೋ ಅಂತಹ ಮನಸ್ಥಿತಿಯನ್ನು ಅವನೇ ದೊರಕಿಸಿಕೊಡಲಿ ಅಂತ ಬೇಡಿಕೊಳ್ಳೋಣ.

ತತ್ತ್ವಭಾಗವತಮ್

ದಮಯಂತಿ ಸಂದೇಶ ಕಳುಹಿಸುತ್ತಾಳೆ ಬ್ರಾಹ್ಮಣರ ಹತ್ತಿರ ನಳನಿಗೆ ಪರೋಕ್ಷವಾಗಿ: “ನೀನು ನನ್ನ ಬಿಟ್ಟುಹೋಗಿದ್ದರಿಂದಾಗಿ ನಾನು ವಿಧವಿಧವಾದ ನೋವುಗಳನ್ನು ಅನುಭವಿಸುತ್ತಿದ್ದೇನೆ, ನಿನಗೆ ಅದರ ಪರಿವೆಯೇ ಇಲ್ಲ, ನೀನು ಕಠಿಣ ಹೃದಯಿ. ಈಗಲಾದರೂ ನನ್ನ ಮೊರೆಗೆ ಓಗೊಟ್ಟು ಬಾ. ಕನಿಷ್ಟ ಒಂದು ಮಾರುತ್ತರ ನೀಡು” ಎನ್ನುವ ಅರ್ಥ ಬರುವಂತೆ ಹೇಳಿ, ಅದಕ್ಕೆ ಯಾರು ಮಾರುತ್ತರ ನೀಡುತ್ತಾರೋ ಅಥವಾ ಅದಕ್ಕೆ ಸ್ಪಂದನೆ ನೀಡುತ್ತಾರೋ ಅವರ ವಿವರಗಳನ್ನು ಸಂಗ್ರಹಿಸಿಕೊಂಡು ಬನ್ನಿ ಅಂತ. ಬ್ರಾಹ್ಮಣರು ಅದನ್ನು ಹೇಳಿಕೊಂಡು ಊರೂರು ತಿರುಗಿ ದೇಶದೆಲ್ಲಡೆ ಹೋಗುತ್ತಾರೆ. ಯಾರಿಗೂ ಉತ್ತರ ಸಿಗುವುದಿಲ್ಲ, ಅವರ ಪೈಕಿ ಪರ್ಣಾದನೆಂಬ ಒಬ್ಬನು ಅಯೋಧ್ಯೆಗೆ ಹೋಗಿ ಅಲ್ಲಿ ರಾಜನ ಆಸ್ಥಾನದಲ್ಲಿ ಇದನ್ನು ಹೇಳಿದರೂ ಯಾರಿಂದಲೂ ಮಾರುತ್ತರ ಸಿಗುವುದಿಲ್ಲ, ಯಾಕೆಂದರೆ ಅದು ಯಾರಿಗೂ ಸಂಬಂಧಪಟ್ಟಿರುವುದಿಲ್ಲ. ನಳ ಅಲ್ಲೇ ಇದ್ದ, ವಿರೂಪ ಹೊಂದಿ ಅಷ್ಟಾವಕ್ರನಾಗಿ ಬಾಹುಕನೆಂಬ ಹೆಸರಿನಿಂದ ಇದ್ದ. ಅವನಿಗೆ ಈ ವಿಷಯ ಹೇಳುವವರ ಸಂಬಂಧ ಇರಲಿಲ್ಲ ನಿಜ, ಆದರೆ ಅದು ಯಾರಿಗೆ ಸಂಬಂಧಿಸಿದ್ದು ಅಂತ ಅವನಿಗೆ ತಿಳಿದಿರಲಿಲ್ಲವೇ? ತಿಳಿದಿತ್ತು, ಅವನು ಅದನ್ನು ಮರೆಯಲು ಹೇಗೆ ಸಾಧ್ಯ? ಅದು ಅವನ ಹೃದಯದಲ್ಲಿ ಹುದುಗಿ ಹೋಗಿರುವ ವಿಷಯಗಳು, ಅವನ ಜೀವನದ ಸತ್ಯಗಳು. ಉತ್ತರ ಕೊಡಲೇಬೇಕೆನಿಸುವಂತಹ ಒತ್ತಾಯದ ಪ್ರಶ್ನೆಗಳು, ಆದರೆ ಮಾತನಾಡುವಂತಿಲ್ಲ. ಮಾತನಾಡಿದರೆ ಎಲ್ಲರಿಗೂ ತಿಳಿಯುತ್ತದೆ, ಆಗ ಆಗಬೇಕಾದ ಕೆಲಸ ಕೆಡುತ್ತದೆ. ಪಡೆಯಬೇಕಾದ ಅಕ್ಷವಿದ್ಯೆ ಇನ್ನೂ ಸಿಕ್ಕಿಲ್ಲ, ಅದಕ್ಕಾಗಿ ಈ ಪ್ರಯತ್ನ. ಹಾಗಾಗಿ ಮಾತಾಡಲಾರ, ಮಾತಾಡದೇ ಇರಲಾರ. ಅವನ ಮನಸ್ಸಿನಲ್ಲಿನ ದುಃಖವು ಕಣ್ಣಿನಿಂದ ನೀರಾಗಿ ಧಾರಾಕಾರವಾಗಿ ಹರಿದುಬಂತು. ವಾರ್ಷ್ಣೇಯನಿಗೂ ತಿಳಿಯದಂತೆ ಗುಟ್ಟಾಗಿ ಕಾಪಾಡಿಕೊಂಡು ಬಂದ್ದಿದ್ದನಲ್ಲ ಈ ಸತ್ಯವನ್ನು.

ಸಂದೇಶ ಬೇರಾರಿಗೂ ಮುಖ್ಯವಲ್ಲ ಆದರೆ ಇವನಿಗೆ ಇದು ತುಂಬಾ ಮುಖ್ಯ, ಆ ಸಂದೇಶ ಎಲ್ಲೆಡೆಯೂ ಹರಿದು ಈಗ ಸರಿಯಾದ ಕಿವಿಗಳನ್ನು ತಲುಪಿದೆ. ದ್ಯೂತಪ್ರಿಯರು ಬೇರೆಯೂ ಇರಬಹುದು, ಆದರೆ ಉಳಿದ ವಿಷಯ? ಅರ್ಧಬಟ್ಟೆ? ಇದು ತಮ್ಮಿಬ್ಬರಿಗೆ ಮಾತ್ರವೇ ಗೊತ್ತಿರುವುದು. ಮುಂದಿನ ವಿಷಯಗಳೂ ಹಾಗೇ, ಬೇರೆ ದಾರಿ ಕಾಣದೇ ನಿರ್ಜನದೆಡೆಗೆ ನಡೆದು ಹೋದ.
ಋತುಪರ್ಣ ಅಂದರೆ ವಿಶೇಷಸಂದರ್ಭಗಳಲ್ಲಿ ಬೆಳೆಯುವ ಒಂದು ವಿಶೇಷ ಎಲೆ. ಪರ್ಣಾದ ಎಂದರೆ ಬರಿಯ ಎಲೆಗಳನ್ನು ಮಾತ್ರಾ ತಿಂದು ಬದುಕುವವನು ಎಂದು, ಅವನಿಗೆ ಯಾವ ಎಲೆಯು ಬೇಕಿತ್ತೋ ಅದು ಅಲ್ಲೇ ಇತ್ತು ಅವನಿಗೆ ತಿಳಿಯಲಿಲ್ಲ ಅಷ್ಟೇ.

ಆ ನಂತರ ಅವನು ರಾಜನ ಅಪ್ಪಣೆ ಪಡೆದು ಅರಮನೆಯಿಂದ ಹೊರಟು ನಿರ್ಜನ ಜಾಗಕ್ಕೆ ಯಾವಾಗ ಬಂದನೋ ಆಗ ಅವನ ಮುಂದೆ ಒಂದು ಆಕೃತಿ ಪ್ರತ್ಯಕ್ಷವಾಯಿತು. ಯಾರು ನೀನು ಅಂತ ಇವನು ಕೇಳುವ ಮೊದಲೇ ಅದು ಮಾತನಾಡಿತು. ಆಕೆ ಕೋಪಮಾಡಿಕೊಳ್ಳಬಾರದು, ಯಾಕೆ ಅಂದರೆ ಅಂತಹ ಸ್ತ್ರೀಯರಿಗೆ ಇಂತಹ ಶಕ್ತಿ ಇರುತ್ತೆ, ಅವರು ಎಂತಹ ವಿಷಮ ಸ್ಥಿತಿಯಲ್ಲೂ ತಮ್ಮನ್ನು ತಾವು ಕಾಪಾಡಿಕೊಳ್ಳಬಲ್ಲರು. ಅದರ ಅರಿವಿದ್ದವರು, ಬಿಟ್ಟು ಹೋದರೆ, ಎದ್ದುಹೋದರೆ ಕೋಪಮಾಡಿಕೊಳ್ಳಬಾರದು. ಎದ್ದು ಹೋದವನಿಗೆ ಅವಳ ಶಕ್ತಿ ಏನೆಂಬುದು ಗೊತ್ತಿರಬಹುದು, ಗಂಡ ತಪ್ಪುಮಾಡಬಹುದು, ಬಿಟ್ಟು ಹೋಗಬಹುದು ಆದರೆ ಇಂತಹ ಸ್ತ್ರೀಯರು ಸಿಟ್ಟುಮಾಡಲ್ಲ, ಅಂತಹ ಸತಿಯರಿಗೆ ಪ್ರಾಣಕ್ಕೆ ಮಾನವೇ ಕವಚ, ಮಾನಕ್ಕೆ ಪಾತಿವ್ರತ್ಯವೇ ಕವಚ, ಅವನಿಗೆ ಆ ಮೂಢನಿಗೆ ಏನಾಗಿತ್ತೋ? ಕಡುಕಷ್ಟದ ಪರಿಸ್ಥಿತಿಯಲ್ಲಿ ಮಾಡಿದ ಕಾರ್ಯವಿದು. ಸುಖದ ಸುಳಿವೇ ಇರದಂತಹ ರುಗ್ಣ ಮನಸ್ಥಿತಿಯಲ್ಲಿ ಅವನು ಮಾಡಿದ ಕಾರ್ಯ ಇದು, ತನ್ನ ಕಷ್ಟ ಅವಳಿಗೂ ತಟ್ಟಬಾರದು ಅಂತ ಉಣ್ಣಲೂ, ಉಡಲೂ ಇರದಿದ್ದ ಗಂಡ ಬಯಸಿದರೆ ತಪ್ಪೇನು? ಅವಳು ತನ್ನ ತವರಿನಲ್ಲಾದರೂ ನೆಮ್ಮದಿಯಿಂದಿರಲಿ ಅಂತ, ಅವನಿಗೆ ಬದುಕೇ ಬವಣೆಯಾಗಿತ್ತು, ಅವನ ಬಟ್ಟೆಯನ್ನೂ ಪಕ್ಷಿಗಳು ಕೊಂಡೊಯ್ದಿದ್ದವು, ಅವನಾದರೂ ಏನು ಮಾಡಬಹುದಿತ್ತು ಮಾನ ಉಳಿಸಿಕೊಳ್ಳಲಿಕ್ಕಾಗಿ ಅವಳ ಬಟ್ಟೆಯಲ್ಲಿ ಅರ್ಧವನ್ನು ತೆಗೆದುಕೊಂಡುಹೋದ, ಅವನ ಹೃದಯವೇ ದುಃಖದಿಂದ ತುಂಬಿತ್ತು. ಯಾವಾಗಲೂ ಶ್ಯಾಮಾ ಸ್ತ್ರೀ ತಪ್ಪು ಮಾಡಬಾರದು. (ಶ್ಯಾಮಾ ಸ್ತ್ರೀ ಎಂದರೆ ಯಾವಾಗಲೂ ಯೌವನವತಿಯಾಗಿರುತ್ತಾಳೋ, ಮಧ್ಯಕೃಶವಾದ ದೇಹವನ್ನು ಹೊಂದಿರುತ್ತಾಳೋ, ಶೀತಕಾಲದಲ್ಲಿ ಬೆಚ್ಚಗಿನ ಶರೀರ ಸ್ಥಿತಿಯನ್ನೂ ಹಾಗೂ ಉಷ್ಣಕಾಲದಲ್ಲಿ ತಂಪಿನ ದೇಹಸ್ಥಿತಿಯನ್ನೂ ಪಡೆದಿರುತ್ತಾಳೋ ಅವಳು) ದೇಹವೇ ಹೀಗೆ ಸಮವಾದ ಅವಸ್ಥೆಯಲ್ಲಿ ನಿತ್ಯವೂ ಇರುವಾಗ ಅವಳು ಮನಸ್ಸನ್ನೂ ಹಾಗೇ ಇಡಬೇಕಲ್ಲವಾ? ಪುಟವಿಟ್ಟ ಬಂಗಾರದ ವರ್ಣದವಳು ನೀನು ಸಿಟ್ಟುಮಾಡಿಕೊಳ್ಳಬಾರದು ಗಂಡನನ್ನು ಆದರಿಸಬೇಕು ಸಿಟ್ಟುಮಾಡಬಾರದು. ಅವನು ರಾಜ್ಯವನ್ನು ಕಳೆದುಕೊಂಡಿದ್ದ, ಸಂಪತ್ತನ್ನೆಲ್ಲಾ ಕಳೆದಕೊಂಡಿದ್ದ ಅಂತಹ ಹೀನ ಸ್ಥಿತಿಯಲ್ಲಿ ಇದ್ದವನು ಏನು ಮಾಡಿದರೂ ಶ್ಯಾಮಾ ಸ್ತ್ರೀ ಅದನ್ನು ಮನಸ್ಸಿಗೆ ತಂದುಕೊಳ್ಳಬಾರದು” ಅಂತ ಇಷ್ಟು ಹೇಳಿ ಎದ್ದುಹೋಗಿಬಿಟ್ಟ, ಬೇರೇನೂ ಮಾತನಾಡಲಿಲ್ಲ. ಆದರೆ ಪರ್ಣಾದ ಅವನ ಬಗ್ಗೆಗಿನ ಇತರ ವಿವರಗಳನ್ನು ಸಂಗ್ರಹಿಸಿದ.

ದೂರದ ಪ್ರಯಾಣ ಮಾಡಿ ಬಂದು ದಮಯಂತಿಯನ್ನು ಕಾಣುತ್ತಾನೆ. ಅಯೋಧ್ಯೆಯಲ್ಲಿ ನಡೆದ ಘಟನೆಯ ವಿವರಗಳನ್ನು ನೀಡುತ್ತಾನೆ. ತಾನು ಅರಮನೆಯಲ್ಲಿ ಈ ವಿಚಾರಗಳನ್ನು ಹೇಳಿದಾಗ ಯಾರೂ ಮಾತನಾಡದಿದ್ದುದು, ಹಾಗೂ ನಂತರ ವಿಜನದಲ್ಲಿ ಇದ್ದಾಗ ಒಬ್ಬ ಬಂದು ಉತ್ತರ ಕೊಟ್ಟದ್ದು. ಅವನು ಋತುಪರ್ಣನ ಸಾರಥಿಯಂತೆ, ಅವನ ಹೆಸರು ಬಾಹುಕ ಅಂತ. ವಿಕಾರವಾದ ರೂಪ ಅವನದ್ದು, ಮೋಟು ಕೈಗಳು, ಆದರೆ ಅವನಿಗೆ ವಿಶೇಷ ಪ್ರತಿಭೆ ಇದೆ, ಅದೆಂದರೆ ಅವನು ಕುದುರೆಗಳನ್ನು ಅತೀ ವೇಗವಾಗಿ ನಡೆಸಬಲ್ಲ ಹಾಗೂ ಒಳ್ಳೆ ಅಡುಗೆಯನ್ನು ಕೂಡಾ ಮಾಡಬಲ್ಲ, ಇದು ತನಗೆ ಹೇಗೆ ತಿಳಿಯಿತು ಅಂದರೆ ಋತುಪರ್ಣನ ಅರಮನೆಯಲ್ಲಿ ಈ ಎರಡರ ಮೇಲ್ವಿಚಾರಣೆಯೂ ಇವನದ್ದೇ ಆಗಿದೆ.

ದಮಯಂತಿ ಮೈಯೆಲ್ಲ ಕಿವಿಯಾಗಿ ಕೇಳಿದಳು, ಇವೆರಡೂ ನಳನದ್ದೇ ಲಕ್ಷಣಗಳು, ಪರ್ಣಾದ ಮುಂದುವರೆಸಿದ. ಆ ಬಾಹುಕ ನನ್ನ ಮುಂದೆ ಬಂದು ನಿಂತ ಆದರೆ ಮಾತನಾಡಲಿಲ್ಲ, ದೀರ್ಘವಾದ ನಿಟ್ಟುಸಿರುಬಿಟ್ಟ, ಮಾತನಾಡಲು ಹೊರಟ ಆದರೆ ಅಳು ಒತ್ತರಿಸಿಕೊಂಡು ಬರುತ್ತಿತ್ತು, ಮಾತಾಡುತ್ತಾ ಮಧ್ಯೆ ಮಧ್ಯೆ ಅಳುತ್ತಾ ಅಳುವಿನ ಮಧ್ಯೆ ಮಾತಾಡುತ್ತಾ ನಡೆಯಿತು ನಮ್ಮ ಸಂವಾದ. ಕೆಲವೆಡೆಗಳಲ್ಲಿ ಅವನು ಬಿಕ್ಕಿಬಿಕ್ಕಿ ಅತ್ತುಬಿಟ್ಟ, ಆದರೆ ಒಂದು ವಿಷಯ ನಾನು ಗುರುತಿಸಿದ್ದೆಂದರೆ ಅವನ ಸಂಸ್ಕಾರ ಮಾತ್ರಾ ಅದು ಸೂತನ ಸಂಸ್ಕಾರವಲ್ಲ, ಯಾಕೆಂದರೆ ಅವನು ನನ್ನಲ್ಲಿ ಕುಶಲ ಪ್ರಶ್ನೆಗಳನ್ನು ಮಾಡಿದ್ದು ವಿಶೇಷವಾಗಿತ್ತು ಎಂದ. ಅದು ವಿಶೇಷವಾಗಿರಲೇಬೇಕು ಯಾಕೆಂದರೆ ಅವನು ಕೇಳಿದ್ದು ಪರ್ಣಾದನನ್ನಲ್ಲ, ದಮಯಂತಿಯನ್ನೇ ಅವನು ಪ್ರಶ್ನಿಸುತ್ತಿದ್ದುದು. ಅಷ್ಟಾದ ಮೇಲೆ ಈ ಮಾತನ್ನು ಕೇಳಿದ, ಎಂತಹ ಕಾಲಕ್ಕೂ ಯೋಗ್ಯ ಸ್ತ್ರೀಯರು ತಮ್ಮನ್ನು ಕಾಪಾಡಿಕೊಳ್ಳಬಲ್ಲರೆಂದು ಅವನಿಗೆ ತಿಳಿದಿರಬಹುದಲ್ಲವೇ? ಎಂದು. ಪತಿಯರು ಸಿಟ್ಟುಮಾಡಿದರೂ ಸತಿಯರು ಸಿಟ್ಟುಮಾಡಲ್ಲವಂತೆ ಅವನು ತುಂಬಾ ನಳನನ್ನು ವಹಿಸಿಕೊಂಡು ಮಾತನಾಡಿದ, ಅವನಿಗೆ ಬುದ್ಧಿ ಮಂಕಾಗಿತ್ತು, ಸುಖ ಇರಲಿಲ್ಲ, ಹೊಟ್ಟೆಗೂ ಇರಲಿಲ್ಲ, ಬಟ್ಟೆ ಇರಲಿಲ್ಲ ಅದಕ್ಕೆಲ್ಲಾ ಕೋಪಮಾಡಿಕೊಳ್ಳಬಾರದು ಅಂತ. ಈಗ ಮಗನ ಮೇಲೆ ಸಿಟ್ಟು ಬಂದು ಒಂದು ಏಟು ಹೊಡೆದರೆ ಆ ಸಿಟ್ಟು ಆ ಕ್ಷಣದ್ದು ಅಷ್ಟೇ ಅದು ನಂತರದಲ್ಲಿ ಹಾಗೇ ಉಳಿದಿರಲ್ಲ. ನಳನಿಗೆ ತಾನು ಅಗ ಯಾಕೆ ಹಾಗೆ ಮಾಡಿದ್ದ ಅಂತ ಈಗ ಗೊತ್ತಾಗಿದೆ. ಕರ್ಕೋಟಕ ಎಲ್ಲವನ್ನೂ ತಿಳಿಸಿದ್ದಾನೆ, ಅವನೊಳಗಿದ್ದ ಕಲಿಯಿಂದಾಗಿ ಹಾಗಾಗಿದ್ದು ಅಂತ.
ಎಲ್ಲ ಕೇಳಿದ ಮೇಲೆ ದಮಯಂತಿಗೆ ಒಂದು ನಿಶ್ಚಯ ಆಯಿತು ನಳ ಅಯೋಧ್ಯೆಯಲ್ಲೇ ಇದ್ದಾನೆ. ಒಂದೋ ಅವನು ಬಾಹುಕನ ಜೊತೆಗೆ ಇರಬೇಕು ಅಥವಾ ಬಾಹುಕನೇ ಅವನಾಗಿರಬೇಕು. ಉಳಿದೆಲ್ಲಾ ವಿಚಾರಗಳೂ ಹೊಂದುತ್ತಿದೆ, ಆದರೆ ಆಕಾರ ಒಂದು ಮಾತ್ರಾ ತಾಳೆಯಾಗುತ್ತಿಲ್ಲ. ಪರ್ಣಾದ ಮತ್ತೆ ಮಾತಾಡಿದ, ಈ ವಿಚಾರ ತಿಳಿದ ಕೂಡಲೇ ಓಡಿ ಇಲ್ಲಿಗೆ ಬಂದೆ. ಇನ್ನು ಮುಂದೇನು ಮಾಡಬೇಕು ನಿನಗೆ ಬಿಟ್ಟಿದ್ದು, ರಾಜನೊಡನೆ ಮಾತನಾಡು ಎಂದು ಹೇಳಿ ನಿರ್ಗಮಿಸಿದ. ಕಣ್ಣೀರಿನಲ್ಲಿ ಮುಳುಗಿ ಕುಳಿತಳು ದಮಯಂತಿ.

ಕಂಡೂ ಕಾಣದವನು, ಕಾಣದೆಯೂ ಕಾಣುವವನು ಯಾರವನು? ದೇವರು. ದಮಯಂತಿಯ ಪಾಲಿಗಂತೂ ಪತಿದೇವರೂ ಹಾಗಾಗಿಬಿಟ್ಟಿದ್ದಾನೆ. ಎಲ್ಲ ಲಕ್ಷಣಗಳೂ ಹಾಗೆಯೇ ಹೇಳುತ್ತಿವೆ. ಅವನ್ಯಾಕೆ ಉತ್ತರ ಕೊಡಬೇಕು? ನಳನ ಪರವಾಗಿ ಯಾಕೆ ಮಾತಾಡಬೇಕು? ಕಾಡಿನ ಜೀವನದ ಆ ಎಲ್ಲ ವಿವರಗಳು, ತನ್ನ ದೇಹದ ಸ್ಥಿತಿ ಎಲ್ಲವೂ ಅವನಿಗೆ ಹೇಗೆ ಗೊತ್ತು? ಮತ್ತೆ ಅಶ್ವಹೃದಯ ವಿದ್ಯೆ ಹಾಗೂ ಪಾಕವಿದ್ಯೆ ಎರಡರಲ್ಲೂ ಪ್ರಾವೀಣ್ಯತೆ ಇರುವುದು ಅವನಿಗೆ ಮಾತ್ರ. ಆದರೆ ಕಂಡ ರೂಪ ಮಾತ್ರಾ ಅವನದ್ದಲ್ಲ, ತನ್ನ ಪತಿಯ ರೂಪ ಮನೋಹರ, ಅವನು ವಿರೂಪಿ, ಹಾಗಾಗಿ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ, ಆದರೆ ಸಮಯವೂ ಇಲ್ಲ, ಅವನು ಅಲ್ಲಿಂದಲೂ ತಲೆ ಮರೆಸಿಕೊಳ್ಳುವ ಮುಂಚೆ ಅವನನ್ನು ವಿದರ್ಭಕ್ಕೆ ಬರುವಂತೆ ಮಾಡಬೇಕು ಹಾಗೂ ಅವರು ಇಲ್ಲಿಗೆ ತಲುಪುವಷ್ಟರಲ್ಲಿ ಅವನು ನಳನೇ ಅಂತ ಖಚಿತಮಾಡಿಕೊಳ್ಳಬೇಕು.

ಅವಳ ಮುಂದೆ ಬರುವ ಒಂದೇ ವಿಚಾರ ದಮಯಂತಿಗೆ ಪುನಃ ಸ್ವಯಂವರವಂತೆ ಅಂತ ಪ್ರಚಾರ ಮಾಡುವುದು. ಆಗ ಅವನು ಬರಲೇ ಬೇಕು, ಯಾವ ಪತಿಯಾದರೂ ತನ್ನ ಹೆಂಡತಿಗೆ ಬೇರೆ ಮದುವೆ ಎಂದರೆ ಬಾರದಿರುವನೇ? ಹಾಗೆ ಈ ಸುದ್ದಿಯನ್ನು ಋತುಪರ್ಣರಾಜನಿಗೆ ಮಾತ್ರವೇ ಕೊಡಬೇಕು, ಸುದ್ದಿ ತಿಳಿದ ನಂತರ ಒಂದುದಿನ ಮಾತ್ರವೇ ಸಮಯ ಕೊಡಬೇಕು ಪ್ರಯಾಣಕ್ಕಾಗಿ, ಅವರು ಆದರೂ ಬಂದು ತಲುಪಿದರೆ ಅದು ನಳನೇ ಎಂಬುದು ನಿಶ್ಚಿತ. (ಅಯೋಧ್ಯೆಯಿಂದ ವಿದರ್ಭವೆಂದರೆ ಅಂದಾಜು ಈಗಿನ ೧೨೦೦ ಕಿಮೀ ಗಳಷ್ಟು ದೂರ. ನಾಗಪುರದ ಹತ್ತಿರ ಬರುತ್ತದೆ ವಿದರ್ಭ.) ಹೀಗೊಂದು ವಿಚಿತ್ರ ಯೋಜನೆ ಸಿದ್ಧಪಡಿಸುತ್ತಾಳೆ ದಮಯಂತಿ, ಸ್ವಯಂವರಕ್ಕೆ ಬೇರೆ ಯಾರಿಗೂ ಕರೆ ಇರಲ್ಲ, ಋತುಪರ್ಣನಿಗೆ ಮಾತ್ರವೇ, ಆ ವಿಷಯ ಸ್ವಂತ ತಂದೆಗೂ ತಿಳಿಯದಂತೆ ಎಚ್ಚರವಹಿಸಬೇಕು. ಅವನಿಗೆ ಎಲ್ಲಿಯಾದರೂ ತಿಳಿದರೆ ಒಂದೋ ಅದಕ್ಕೆ ಅಡ್ಡಿಪಡಿಸಬಹುದು ಅಥವಾ ನಿಜವಾಗಿ ಸ್ವಯಂವರಕ್ಕೆ ಸಿದ್ಧನಾಗಬಹುದು. ಅದು ಅವಳಿಗೆ ಬೇಡ. ಇಲ್ಲಿ ಕೇವಲ ಪರೀಕ್ಷೆ ಅಷ್ಟೇ ಆಗಬೇಕಾಗಿರುವುದು.

ಈ ಯೋಜನೆ ಬಂದದ್ದೇ ತಡ ಅದನ್ನು ಕಾರ್ಯರೂಪಕ್ಕಿಳಿಸಿಕೊಳ್ಳಲು ಒಬ್ಬರನ್ನು ತನ್ನ ಜೊತೆಗೆ ಸೇರಿಸಿಕೊಳ್ಳಲು ಹೊರಟಳು, ಅದು ತನ್ನ ತಾಯಿ. ನಳ ಈ ವಿಚಾರ ತಿಳಿದ ಕೂಡಲೇ ಎಷ್ಟು ವೇಗದಿಂದ ಇಲ್ಲಿಗೆ ಧಾವಿಸಿ ಬರುವನೋ ಅಷ್ಟೇ ವೇಗದಲ್ಲಿ ತಾಯಿಯ ಬಳಿಗೆ ಹೊರಟಳು. ಈಗ ನಮ್ಮ ಚಿಂತೆ ಅದಲ್ಲ, ಈ ಸುದ್ದಿ ನಳನಿಗೆ ತಿಳಿದರೆ ಅವನ ಪರಿಸ್ಥಿತಿ ಏನಾಗಿರಬಹುದು? ಈಗಾಗಲೇ ಸಾಲುಸಾಲು ನೋವು ಕಷ್ಟಗಳಿಂದ ದುಃಖಗಳಿಂದ ನೊಂದಿರುವ ನಳನ ಮನಸ್ಸು ಎಷ್ಟು ನೋಯಬಹುದೋ? ಏನಾಗಬಹುದೋ? ನಾಳೆ ನೋಡೋಣ.

ಚಿತ್ರ:ಅಂತರ್ಜಾಲದಿಂದ

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments