#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
16-09-2018:

ಪುನರ್ವಸು

ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ | ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಮ್ಯಹಂ|

ಧರ್ಮಗ್ಲಾನವು ಎಲ್ಲೆಲ್ಲಿ ಸಂಭವಿಸುತ್ತದೋ ಅಲ್ಲಲ್ಲಿ ಅವನು ಅವತಾರ ಎತ್ತುತ್ತಾನೆ, ಮಾತ್ರವಲ್ಲ ಮನುಜರಲ್ಲಿ ಆಗಾಗ ಆವೇಶಗೊಳ್ಳುತ್ತಾನೆ. ಅಂದರೆ ಇರುವ ಮಹನೀಯರಲ್ಲಿ ಆತ ತನ್ನ ಸತ್ವವನ್ನು ತೋರ್ಪಡಿಸುತ್ತಾನೆ, ಅವರೆಲ್ಲ ಭಗವಂತನ ಅವತಾರ ಅಲ್ಲದೇ ಹೋದರೂ ಭಗವಂತನ ಅಂಶವೇ ಹೌದು. ಹೀಗೆ ಅಂತಹ ಮಹನೀಯರು ಅಲ್ಲಲ್ಲಿ ಕಾಲಕಾಲಕ್ಕೆ ತೋರಿಕೊಳ್ಳುವುದರಿಂದಲೇ ಮಳೆ ಬೆಳೆಗಳು ಸಕಾಲಕ್ಕೆ ಆಗುತ್ತಲಿದೆ. ಭಗವಂತ ಎಂದರೇ ಒಳಿತು. ಈ ಜಗದಲ್ಲಿ ಒಳಿತು ಅಂತ ಯಾವುದೆಲ್ಲ ಇದೆಯೋ ಅದೆಲ್ಲವೂ ಭಗವಂತನೇ, ಈ ಮಾತು ನಿಜವಾದರೆ ನಳ-ದಮಯಂತಿಯರೂ ನಿಜವಾದ ದೇವರೆಂದೇ ಹೇಳಬಹುದು. ಇವರಿಬ್ಬರೂ ದೈವತ್ವವೇ ಮೈವೆತ್ತಂಥವರು. ಅವರೊಳಗೆ ಕುಳಿತು ಜಗತ್ತನ್ನು ಶುಭಗೊಳಿಸಿದ ಪ್ರಭು ಶ್ರೀಕೃಷ್ಣನಿಗೆ ನಮಿಸಿ ಈ ನಳಚರಿತ್ರೆಯ ಕೊನೆಯ ಭಾಗದ ಪ್ರವಚನಕ್ಕೆ ತೊಡಗೋಣ.

ತತ್ತ್ವಭಾಗವತಮ್

ಕಾಯುವ ತಾಳ್ಮೆ ನಮಗಿದ್ದರೆ, ನಮಗೆ ಅಂತ ಒಂದು ಕಾಲ ಬಂದೇ ಬರುತ್ತದೆ. ಈ ಮಾತನ್ನು ರಾವಣನಿಂದ ಅಪಹೃತಳಾದ ಸೀತೆ ಹೇಳುತ್ತಾಳೆ. ಈಗ ನಳನಿಗೆ ಅಂತಹ ಕಾಲ ಮರಳಿ ಬಂದಿದೆ. ಪುಷ್ಕರ ಚಕಿತನಾಗಿದ್ದಾನೆ. ಅವನು ನಿರೀಕ್ಷೆ ಮಾಡದಿದ್ದ ಒಂದು ಆಕಾರ ಅವನ ಮುಂದೆ ಪ್ರಕಟವಾಗಿದೆ, ಯಾವ ನಳನು ರಾಜ್ಯ ಕೋಶ, ಬಂಧು, ಬಳಗ, ಮಿತ್ರರು ಎಲ್ಲವನ್ನೂ ಕಳೆದುಕೊಂಡಿದ್ದನೋ, ಯಾವನನ್ನು ಇನ್ನು ಬರಲಾರ ಅಂತ ಪುಷ್ಕರ ಅಂದುಕೊಂಡಿದ್ದನೋ, ಅವನು ಎದುರಿಗೇ ಬಂದು ನಿಂತಿದ್ದಾನೆ. ತನ್ನೊಂದು ಚಿಕ್ಕಸೇನೆಯನ್ನು ನಡೆಸಿಕೊಂಡು ನಳ ನೇರವಾಗಿ ನಿಷಧಕ್ಕೇ ಬಂದು ತಲುಪಿದ್ದಾನೆ. ಅದಕ್ಕಿಂತ ವಿಚಿತ್ರವೆಂದರೆ ಸೇನಾಸಹಿತನಾದ ಅವನನ್ನು ನಿಷಧದಲ್ಲಿ ಯಾರೂ ತಡೆಯಲಿಲ್ಲ. ನಳ ನೇರವಾಗಿ ಪುಷ್ಕರನೆದುರಿಗೆ ಹೋಗಿ ದ್ಯೂತಕ್ಕೇ ಆಹ್ವಾನ ಮಾಡಿದ. ಇಬ್ಬರ ಮುಖಾಮುಖಿ: ಒಬ್ಬ ರಾಜ್ಯಾಪಹಾರಕ, ಮತ್ತೊಬ್ಬ ರಾಜ್ಯಪ್ರದಾಯಕ. ಪುಷ್ಕರ ನಳನ ರಾಜ್ಯವನ್ನು ಮೋಸದಿಂದ ಅಪಹರಿಸಿದರೆ, ನಳ ತಾನು ಯುದ್ಧದಲ್ಲಿ ಗೆದ್ದಿದ್ದ ರಾಜ್ಯವನ್ನು ಪುಷ್ಕರನಿಗೆ ಮರಳಿ ಕೊಟ್ಟವನು. ಪ್ರಾಣಪ್ರದಾಯಕ ಕೂಡಾ, ತಮ್ಮನನ್ನು ಬದುಕಿಕೋ ಹೋಗು ಅಂತ ಬಿಟ್ಟವನು. ಪುಷ್ಕರ ಪ್ರಾಣಪೀಡಕ. ರಾಜ್ಯಕೋಶಗಳನ್ನು ಕಳೆದುಕೊಂಡು ನಿರ್ಗತಿಕನಾಗಿ ಕಾಡಿಗೆ ಹೊರಟ ನಳನಿಗೆ ಪ್ರಜೆಗಳಾರೂ ಬೆಂಕಿ ನೀರುಗಳನ್ನೂ ಕೊಡಬಾರದೆಂದೂ, ಕೊಟ್ಟವರು ಮೃತ್ಯುದಂಡಕ್ಕೆ ಅರ್ಹರೆಂದೂ ಶಾಸನ ಮಾಡಿದವನು. ನಳ ಧರ್ಮಮೂರ್ತಿಯಾದರೆ, ಪುಷ್ಕರ ಅಧರ್ಮಮೂರ್ತಿ. ಈಗ ಅವರಿಬ್ಬರ ಮಧ್ಯೆ ಮತ್ತೆ ಮುಖಾಮುಖಿ.

ನಳ ಪುಷ್ಕರನಿಗೆ ಹೇಳುತ್ತಾನೆ, ನಾನು ಈಗ ಇನ್ನಷ್ಟು ಧನಸಂಗ್ರಹ ಮಾಡಿಕೊಂಡು ಬಂದಿದ್ದೇನೆ, ದ್ಯೂತವನ್ನು ಮುಂದುವರೆಸೋಣ ಅಂತ. ಅವನಲ್ಲಿ ಹಣ ಎಲ್ಲಿಂದ ಬಂತು ಅಂತ ಯೋಚಿಸುತ್ತೀರೇನೋ. ಮರೆಯಬೇಡಿ, ಅವನು ಋತುಪರ್ಣ ರಾಜನಲ್ಲಿ ಅಶ್ವಾಧ್ಯಕ್ಷನಾಗಿದ್ದವನು, ಹಾಗಾಗಿ ಪ್ರತಿಮಾಸ ಹತ್ತುಸಾವಿರ ಹೊನ್ನುಗಳನ್ನು ಪಡೆದುಕೊಳ್ಳುತ್ತಿದ್ದ, ಅದಕ್ಕೂ ಹೆಚ್ಚಾಗಿ ರಾಜನ ಕೃಪೆಯಿಂದಾಗಿ ಇವನ ಸೇವೆಗೆ ಮೆಚ್ಚಿ ಹಲವು ಪುರಸ್ಕಾರಗಳನ್ನೂ ಪಡೆದಿದ್ದ, ನಂತರದಲ್ಲಿ ಪಾಕಾಧ್ಯಕ್ಷನಾಗಿ ನಿಯುಕ್ತನಾಗಿ ಸ್ವತಃ ರಾಜನಿಗೇ ಭೋಜನ ತಯಾರು ಮಾಡುತ್ತಿದ್ದ. ಸಾಕ್ಷಾತ್ ನಳಪಾಕವನ್ನೇ ಭುಜಿಸುತ್ತಿದ್ದ ರಾಜನ ಅದೃಷ್ಟ, ಆದರೆ ಈಗ ಅವನಿಲ್ಲದೇ ಹೇಗೆ ರುಚಿಸುತ್ತಿದೆಯೋ ಆಹಾರ. ಹೀಗಾಗಿ ಸಾಕಷ್ಟು ಸಂಪಾದನೆ ಮಾಡಿದ್ದ, ಅಲ್ಲದಿದ್ದರೆ ಅವನು ಸ್ವಾಭಿಮಾನಿ ಸ್ವತಃ ಮಾವನಿಂದಲೇ ಸೈನ್ಯವನ್ನೂ ತೆಗೆದುಕೊಳ್ಳದವನು. ಸ್ತ್ರೀಧನ ವರ್ಜ್ಯ, ಅಂದರೆ ಹೆಂಡತಿಯ ಮನೆಯಿಂದ ಹಣ ಪಡೆದರೆ ಅದು ಅಧಮಾಧಮ ಕಾರ್ಯವೆಂದು ಹೇಳಿದ್ದಾರೆ. ಹೆಂಡತಿಯ ತವರಿಗೆ ಹಣಸಹಾಯ ನೀಡಬಹುದೇ ಹೊರತು ಅಲ್ಲಿಂದ ಏನನ್ನೂ ತರುವಂತಿಲ್ಲ. ನಳ ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿಯೂ, ಯುದ್ಧದ ಸಮಯದಲ್ಲಿಯೂ ಅದನ್ನು ನಡೆಸುತ್ತಿದ್ದಾನೆ. ಪುಷ್ಕರ ಆಶ್ಚರ್ಯದಿಂದ ನೋಡುತ್ತಿದ್ದಾನೆ, ಏನಿದು ಇವನ ಉತ್ಸಾಹ ಎಂದು. ನಳ ಜೊತೆಗೆ ದಮಯಂತಿಯನ್ನೂ ಪಣಕ್ಕಿಟ್ಟ, ಅವತ್ತು ಪುಷ್ಕರನೇ ಬಲವಂತ ಮಾಡಿದ್ದರೂ ಪಣಕ್ಕಿಟ್ಟಿರಲಿಲ್ಲ. ಇವತ್ತು ಅವನಿಗೆ ನಿಶ್ಚಯ ಇದೆ ಗೆಲುವಿನದ್ದು, ಏಕೆಂದರೆ ಈಗ ಅವನಿಗೆ ಅಕ್ಷವಿದ್ಯೆಯ ರಹಸ್ಯಗಳು ಕರಗತವಾಗಿದೆ ಹಾಗೂ ಅವಳನ್ನು ಪಣಕ್ಕಿಡದಿದ್ದರೆ ಪುಷ್ಕರನು ದ್ಯೂತಕ್ಕೆ ಒಪ್ಪುವುದೂ ಸಾಧ್ಯವಿಲ್ಲ. ಅಂದು ಯಾವ ಕೇಡು ಕಲಿಯ ರೂಪದಲ್ಲಿ ಅವನಲ್ಲಿ ಸೇರಿತ್ತೋ ಅದು ಈಗ ಇಲ್ಲ. ಹಾಗಾಗಿ ಯಾರೂ ಈಗ ಅವನಿಗೆ ಮೋಸಮಾಡಲು ಸಾಧ್ಯವಿಲ್ಲ, ಹಾಗೂ ಅವನನ್ನು ಸೋಲಿಸುವುದೂ ಸಾಧ್ಯವಿಲ್ಲ. ನಳ ಹೇಳುತ್ತಾನೆ, ನಾನು ನನ್ನಲ್ಲಿ ಏನೆಲ್ಲಾ ಇದೆಯೋ, ದಮಯಂತಿಯ ಸಹಿತವಾಗಿ ಎಲ್ಲವನ್ನೂ ಪಣಕ್ಕಿಡುತ್ತೇನೆ ಪ್ರತಿಯಾಗಿ ನೀನು ನನ್ನಿಂದ ಪಡೆದುಕೊಂಡ ರಾಜ್ಯಕೋಶಗಳ ಜೊತೆಗೆ ನಿನ್ನ ರಾಜ್ಯಕೋಶಗಳನ್ನೂ ಪಣಕ್ಕಿಡಬೇಕು ಎನ್ನುತ್ತಾನೆ. ದ್ಯೂತ ನಡೆಯಲಿ ಎನ್ನುತ್ತಾನೆ, ಮತ್ತದಕ್ಕೆ ಕಾರಣವನ್ನೂ ಕೊಡುತ್ತಾನೆ. ಯಾಕೆ ದ್ಯೂತವನ್ನು ಮುಂದುವರೆಸಬೇಕೆಂದರೆ ನನ್ನಲ್ಲಿ ಪಣಕ್ಕಿಡಲು ಇನ್ನೂ ಸಂಪತ್ತಿದೆ, ಹಾಗೂ ಗೆಲ್ಲವುವವರೆಗೂ ನಾನು ಆಟ ನಿಲ್ಲಿಸಲಾರೆ. ನಾನು ನನ್ನ ಪ್ರಾಣವನ್ನೂ ಪಣಕ್ಕಿಡುತ್ತೇನೆ, ನೀನೂ ನಿನ್ನ ಪ್ರಾಣವನ್ನು ಪಣಕ್ಕಿಡು ಎಂದು ಹೇಳಿ ದ್ಯೂತಶಾಸ್ತ್ರದಲ್ಲಿಯೂ ಹೀಗೆ ಹೇಳಿದೆ ಎಂಬುದನ್ನು ಉಲ್ಲೇಖ ಮಾಡುತ್ತಾನೆ. ಒಬ್ಬ ದ್ಯೂತದಲ್ಲಿ ಇನ್ನೊಬ್ಬನ ಸಂಪತ್ತನ್ನು ಗೆದ್ದಿದ್ದರೆ ಅವನು ತನ್ನ ಸಂಪತ್ತನ್ನು ಮರಳಿಪಡೆಯಲು ಮತ್ತೆ ಆಡಲು ಬಯಸಿದರೆ ಆಗ ಆಡಬೇಕು ಎಂದು. ಹಾಗೂ ಒಂದುವೇಳೆ ನೀನು ದ್ಯೂತಕ್ಕೆ ಸಿದ್ಧನಿಲ್ಲವಾದರೆ, ಬಲವಂತ ಏನೂ ಇಲ್ಲ ಯುದ್ಧಕ್ಕೆ ಸಿದ್ಧನಾಗು ಬಾ ದ್ವೈರಥ ಯುದ್ಧ ಮಾಡೋಣ, ಅಂದರೆ ತಾವಿಬ್ಬರೇ ಪರಸ್ಪರ ಸೆಣಸುವುದು. ಇದನ್ನು ಯಾಕೆ ಪ್ರಸ್ತಾಪಮಾಡುತ್ತಾನೆ ಎಂದರೆ ಯುದ್ಧದಿಂದಾಗುವ ಅನಗತ್ಯ ಸೈನ್ಯನಾಶವನ್ನು, ತನ್ನದೇ ಸೈನ್ಯದ ನಾಶವನ್ನು ತಪ್ಪಿಸಲಿಕ್ಕಾಗಿ, ಹಾಗಾಗಿ ಯುದ್ಧ ನಮ್ಮಿಬ್ಬರಲ್ಲಿಯೇ ಆಗಲಿ ಒಂದೋ ನನಗೆ ಇಲ್ಲ ನಿನಗೆ ಶಾಂತಿ ಸಿಗುತ್ತದೆ ಇದರಿಂದಾಗಿ. ರಾಮನೂ ಹೀಗೆಯೇ ಹೇಳುತ್ತಾನೆ ರಾವಣನೊಟ್ಟಿಗಿನ ಯುದ್ಧದಲ್ಲಿ, ನಾಳೆಯಿಂದ ಜಗತ್ತು ಒಂದೋ ರಾಮರಹಿತವಾಗಿರಬೇಕು ಅಥವಾ ರಾವಣರಹಿತವಾಗಿರಬೇಕು ಎಂದು. ನಳ ಮುಂದುವರೆಸುತ್ತಾನೆ, ಈ ರಾಜ್ಯ ನನ್ನ ವಂಶಪಾರಂಪರ್ಯವಾದದ್ದು. ಇದನ್ನು ಪಾಲಿಸುವುದು ನನ್ನ ಧರ್ಮ, ಒಂದೊಮ್ಮೆ ಇದು ನನ್ನ ಕೈತಪ್ಪಿದರೆ ನನ್ನ ಪಿತೃಗಳಿಗೆ ನಾನು ಕಾರಣವನ್ನು ಕೊಡಬೇಕು, ದ್ಯೂತವಾಡಿ ನಿನ್ನ ವಕ್ರಬುದ್ಧಿಯನ್ನು ತೋರು ಅಥವಾ ಯುದ್ಧಕ್ಕೆ ಸಿದ್ಧನಾಗಿ ನಿನ್ನ ಧನುಸ್ಸನ್ನು ವಕ್ರಮಾಡು, ಹೆದೆಯೇರಿಸು ಎಂದು. ವಕ್ರತೆ ತಾನೇ ನಿನ್ನ ಸಹಜತೆ, ಕೆಲವರು ಹಾಗೇ ವಕ್ರವೇ ಆಗಿರುತ್ತಾರೆ, ಸೀದಾ ಇರುವುದು ಅವರಿಗೆ ಕಷ್ಟ.

ಇಷ್ಟು ಮಾತಾಡುವಷ್ಟರಲ್ಲಿ ಪುಷ್ಕರ ಆಘಾತದಿಂದ ಹೊರಬಂದಿದ್ದ ಹಾಗಾಗಿ ಈಗ ನಗುತ್ತಾನೆ, ನಾನು ಗೆಲ್ಲುವುದು ನಿಶ್ಚಯ ಎಂಬುದಾಗಿ. ಅವನಿಗೆ ಹಿಂದಿನ ಅರಿವಿಲ್ಲ. ತನ್ನ ಗೆಲುವಿನ ಕಾರಣ, ಆ ಯೋಜನೆಗಳು, ಅಂದು ಗೆಲುವಾದಾಗ ಇದ್ದ ಪರಿಸ್ಥಿತಿ ಈಗಲೂ ಇದ್ದಿದ್ದರೆ ಆ ಸಮಸ್ಯೆ ಇರಲಿಲ್ಲ. ಹೀಗೇ ಅಧಿಕಾರ, ಸಂಪತ್ತು, ಲೋಲುಪತೆ ಮನುಷ್ಯನನ್ನು ಬುದ್ಧಿಹೀನನನ್ನಾಗಿ ಮಾಡುತ್ತದೆ. ಈ ನಕಲಿ ನಿಷಧಾಧಿಪತಿ ಮತ್ತೆ ಹೇಳಿದ ನಿನಗೆ ಮತ್ತಷ್ಟು ಸಂಪಾದನೆ ಮಾಡುವಂತೆ ಮಾಡಿದ ದೇವರಿಗೆ ನನ್ನ ನಮಸ್ಕಾರಗಳು, ದಮಯಂತಿಯ ಪಾಪಗಳು ಮುಗಿದವು ಅಂತ ಕಾಣುತ್ತದೆ, ನಿನ್ನ ಸಹವಾಸ ತಪ್ಪಿ ನನ್ನ ರಾಣಿಯಾಗುವ ಸಂದರ್ಭ ಬಂದುಬಿಟ್ಟಿದೆ. ಈ ಲಾಭಗಳನ್ನು ನನಗೆ ಮಾಡಿಸಲು ದೇವರೇ ಮಾಡಿಕೊಟ್ಟ ಅವಕಾಶ ಇದು. ನನಗೆ ಶತ್ರುಗಳ ಜೊತೆ ದ್ಯೂತ ಆಡುವುದೆಂದರೆ ಖುಷಿ, ಪ್ರೀತಿಯ ದಮಯಂತಿಯನ್ನು ಗೆದ್ದು ಕೃತಕೃತ್ಯನಾಗುತ್ತೇನೆ, ಎಷ್ಟೋ ಕಾಲದಿಂದ ಅವಳು ನನ್ನ ಮನಸ್ಸಿನಲ್ಲಿದ್ದಾಳೆ ಅಂತ. ಯಾವ ದೇವರೋ ಅವನಿಗೆ ಅಶೀರ್ವಾದ ಮಾಡಿದ್ದು, ಅದು ಯಾರೇ ಆಗಿದ್ದರೂ ಇವನಿಗೆ ಅದು ನರಕದ ದ್ವಾರವೇ. ನಳನೇ, ನೀನು ಗೆದ್ದರೆ ನಿನಗೆ ರಾಜ್ಯ ನಾನು ಗೆದ್ದರೆ ನೀನು ದಮಯಂತಿಯನ್ನು ನನಗೆ ಬಿಟ್ಟುಕೊಡಬೇಕು, ಎಂದ. ಪುಷ್ಕರನ ಮಾತಿಗೆ ನಳ ಒಪ್ಪಿದ. ಜೊತೆಗೇ ಕೋಪಬಂತು. ಒರೆಯಲ್ಲಿನ ಖಡ್ಗವನ್ನು ಒಂದುಕ್ಷಣ ಹಿರಿದ, ಪುಷ್ಕರನ ತಲೆಯನ್ನು ಕತ್ತರಿಸುವ ಮನಸ್ಸಾಯಿತು, ಅವನ ಬಾಯಿಂದ ಇಂತಹ ಮಾತುಗಳನ್ನು ಕೇಳಿದಾಗ. ಕೋಪವನ್ನು ನಿಗ್ರಹಿಸಿದ ಯಾಕೆಂದರೆ ಸೋತದಾರಿಯಲ್ಲೇ ಗೆಲ್ಲಬೇಕು ಅಂತ ಮನಸ್ಸು ಮಾಡಿ ಈಗ ದ್ಯೂತಕ್ಕೆ ಬಾ ನಂತರ ಹಲುಬುವಂತೆ ಎಂದ. ಸರಿ ದ್ಯೂತ ಪ್ರಾರಂಭವಾಯಿತು. ಅದು ಎಂತಹ ದ್ಯೂತ! ಪುಷ್ಕರ ಗೆದ್ದರೆ ನಳನಲ್ಲಿರುವ ಎಲ್ಲ ಸಂಪತ್ತು ದಮಯಂತಿ ಸಹಿತವಾಗಿ, ಅವನ ಪ್ರಾಣಗಳನ್ನೂ ಬಿಡಬೇಕು.

ಒಂದೇ ಒಂದು ಆಟ. ನಳನಿಗೆ ತುಂಬಾ ಆಡಲು ಮನಸ್ಸಿಲ್ಲ, ಅದು ಅವನಿಗೆ ಪ್ರೀತಿಕರವಲ್ಲ. ಆ ಒಂದೇ ಆಟದಲ್ಲಿ ನಿಷಧ ಮರಳಿ ನಳನ ಕೈಸೇರಿತು. ಜೊತೆಗೇ ಪುಷ್ಕರನ ಆಡಳಿತ, ದೇಶ, ಸಂಪತ್ತು ಹಾಗೂ ಅವನ ಪ್ರಾಣಗಳೂ ಕೂಡಾ ನಳನ ಕೈವಶವಾಯಿತು. ಇದಕ್ಕಾಗಿಯೇ ಇದೇ ಧೈರ್ಯದಿಂದಲೇ ನಳ ಮತ್ತೆ ದ್ಯೂತ ಆಡಿದ್ದು, ಅವನಲ್ಲಿ ಅಕ್ಷವಿದ್ಯೆ ಬಂದಿದ್ದು ಅರಿಯದೇ ಹೋದ ಪುಷ್ಕರ ಸೋತ, ಗೆದ್ದ ನಳ ಹರ್ಷಚಿತ್ತನಾಗಿ ಇನ್ನು ಇದೆಲ್ಲವೂ ನನ್ನದು ಎಂದ. ಇಂದಿನ ಪ್ರವಚನಕ್ಕೆ ಇದರಿಂದಾಗಿಯೇ ಪುನರ್ವಸು ಎಂದು ಹೆಸರು ಕೊಟ್ಟಿದ್ದು. ಪುನರ್ವಸು ಎಂಬುದು ರಾಮನ ನಕ್ಷತ್ರದ ಹೆಸರು ಹಾಗೂ ಇದರರ್ಥ ಕಳೆದದ್ದನ್ನು ಮರಳಿ ಪಡೆಯುವುದು ಎಂದು. ನಳ ಎಲ್ಲಿಂದ ಮರಳಿ ಪಡೆಯಬೇಕಿತ್ತೋ ಅದರ ಮೂಲಕವೇ ತನ್ನೆಲ್ಲ ಭಾಗ್ಯಗಳನ್ನೂ ಮರಳಿ ಪಡೆದ, ಯುದ್ಧವೇನಾದರೂ ಆಗಿದ್ದರೆ ಪುಷ್ಕರ ಬದುಕಿರಲು ಶಕ್ಯವೇ ಇರಲಿಲ್ಲ ಯಾಕೆಂದರೆ ನಳನ ಸಿಟ್ಟು ಅಷ್ಟಿತ್ತು. ನಂತರ ಪುಷ್ಕರನೆಡೆಗೆ ತಿರುಗಿ ಹೇಳಿದ ಅವನಿಗೆ ಸಹಜವಲ್ಲದ ಧ್ವನಿ ಹಾಗೂ ಭಾಷೆಯಲ್ಲಿ: ಎಲೈ ರಾಜಾಪಸದ ಎಂದು ಸಂಬೋಧಿಸಿದ, ಇದರರ್ಥ ರಾಜರುಗಳಲ್ಲಿ ನೀಚನಾದವನೇ ಎಂದು. ಮೂಢ ನೀನು ದಮಯಂತಿಯನ್ನು ಬಯಸಿದೆಯಲ್ಲವೇ, ನಿನಗೆ ಇನ್ನು ಅವಳನ್ನು ದೃಷ್ಟಿಸಿ ನೋಡಲೂ ಸಾಧ್ಯವಿಲ್ಲ, ನಿಯಮಗಳ ಪ್ರಕಾರ ಪುಷ್ಕರ ಎಲ್ಲವನ್ನೂ ಸೋತಿರುವುದರಿಂದ ಅವನು ನಳನ ದಾಸನಾಗಬೇಕು, ದಾಸನಿಗೆ ಯಜಮಾನನ ಎದುರು ತಲೆ ಎತ್ತಿ ಓಡಾಡುವಂತೆಯೂ ಇಲ್ಲವಲ್ಲ. ಇಷ್ಟು ಹೇಳಿ ತನ್ನ ಸಹಜತೆಗೆ ಬಂದ, ಮೊದಲು ಗೆದ್ದಿದ್ದು ನೀನಲ್ಲ, ಕಲಿ. ಅವನು ನನ್ನಲ್ಲಿ ಸೇರಿದ್ದರಿಂದಾಗಿ, ನಿನ್ನ ಕಾಯಿ ದಾಳಗಳಲ್ಲಿ ಸೇರಿದ್ದರಿಂದಾಗಿ ನಾನು ಗೆದ್ದೆನೆಂದು ಮೂಢ ನೀನು ಬೀಗಿದ್ದೆ. ಹಾಗಾಗಿ ಕಲಿಯ ದೋಷವನ್ನು ನಿನ್ನ ಮೇಲೆ ಹಾಕಲಾರೆ, ಕಲಿಗೆ ಅವನು ಮಾಡಿದ ತಪ್ಪಿಗೆ ಆಗಲೇ ದಮಯಂತಿ ಸರಿಯಾದ ಶಿಕ್ಷೆ ವಿಧಿಸಿದ್ದಾಳೆ. ಇಗೋ ನಿನಗೆ ಪ್ರ್ರಾಣಭಿಕ್ಷೆ ಕೊಟ್ಟಿದ್ದೇನೆ, ನಿನಗೆ ಬೇಕಾದಂತೆ ಬದುಕು, ಈ ಹಿಂದೆ ಪಾಲುಮಾಡಿದಾಗ ನಿನ್ನ ಪಾಲಿಗೆ ಬಂದಿದ್ದ ರಾಜ್ಯ, ಕೋಶ, ಸಂಪತ್ತು ಎಲ್ಲವನ್ನೂ ನಿನಗೆ ಮರಳಿ ಕೊಟ್ಟಿದ್ದೇನೆ. ಹೋಗಿ ಬದುಕಿಕೋ ಎನ್ನುತ್ತಾನೆ, ಇದು ಅವನ ನೈಜತೆ. ಹಿಂದೆ ದಮಯಂತಿ ನೀನ್ಯಾಕೆ ನನ್ನನ್ನು ಬಿಟ್ಟು ಹೋದೆ ಎನ್ನುವಾಗ ಅದು ನಾನಲ್ಲ ಕಲಿ ಎಂದಿದ್ದ ಈ ವಿಚಾರ ತನಗಾಗಿ ಮಾತ್ರವಲ್ಲ ಬೇರೆಯವರಿಗೂ ಸಲ್ಲುತ್ತದೆ ಎಂಬುದನ್ನು ಪ್ರತಿಪಾದಿಸಲು ಈ ಸಂದರ್ಭ. ಮತ್ತೆ ಪುಷ್ಕರನಿಗೆ ಹೇಳುತ್ತಾನೆ ನೀನು ನನ್ನ ತಮ್ಮ, ಹಾಗಾಗಿ ನೂರ್ಕಾಲ ಬದುಕು. ಹೀಗೇ ದೊಡ್ಡವರು ದೊಡ್ಡವರಾಗುವುದು. ಮನಸ್ಸು ಮಾಡಿದರೆ ಅವನನ್ನು ಕೊಲ್ಲಬಹುದಿತ್ತು ಅವನು ಅಷ್ಟು ತೊಂದರೆ ಕೊಟ್ಟಿದ್ದ ನಳನಿಗೆ, ಕನಿಷ್ಟ ಅವನನ್ನು ಆಳಿನಂತೆ ಇಟ್ಟುಕೊಂಡು ಮೆರೆಯಬಹುದಿತ್ತು, ಆದರೆ ತಾನು ರಾಜ್ಯವನ್ನು ಕಳೆದುಕೊಂಡು ಅನುಭವಿಸಿದ್ದೇನೆ, ಬೇರೆಯವರ ಊಳಿಗದವನಾಗಿ ಸೇವೆ ಮಾಡಿದ್ದೇನೆ, ಆ ಕಷ್ಟ ನಿನಗೆ ಬರುವುದು ಬೇಡ ನೀನು ನೆಮ್ಮದಿಯಾಗಿ ಬದುಕು ಹೋಗು ಎಂದ.

ಇಲ್ಲಿಯೂ ರಾಮನ ನೆನಪು ಬರುತ್ತದೆ, ಕಾಳಿದಾಸನ ಕಾವ್ಯದಲ್ಲಿ ನಿರೂಪಿಸಿರುವ ಪ್ರಕಾರ. ರಾವಣವಧೆಯಾದ ನಂತರ ರಾಮ ಮರಳಿ ಅಯೋಧ್ಯೆಗೆ ಬಂದಾಗ ಎಲ್ಲರ ಅಶೀರ್ವಾದ ಪಡೆಯುವಾಗ, ಕೈಕೇಯಿಯ ಸರದಿ ಬರುತ್ತದೆ ಅವಳು ಸಂಕೋಚದಿಂದ ದೂರ ಉಳಿದಾಗ ರಾಮನೇ ಮಾತನಾಡಿಸುತ್ತಾನೆ, ಆಶೀರ್ವಾದ ಬೇಡುತ್ತಾನೆ. ಮತ್ತೆ ಹೇಳುತ್ತಾನೆ, ನೀನು ನನ್ನ ತಂದೆಯನ್ನು ನರಕವಾಸದಿಂದ ತಪ್ಪಿಸಿದೆ. ಅವನು ನಿನಗೆ ಮೊದಲೇ ವರ ಕೊಟ್ಟು ಅದರಿಂದ ಚ್ಯುತನಾಗಿದ್ದರೆ ಅವನು ನರಕಕ್ಕೆ ಹೋಗಬೇಕಿತ್ತು. ನೀನು ಅದನ್ನು ತಪ್ಪಿಸಿದೆ, ಅವನನ್ನು ಸತ್ಯವಚನನನ್ನಾಗಿ ಮಾಡಿದೆ, ಅದಕ್ಕಾಗಿ ನಾನು ಚಿರಋಣಿ ಎಂದು.

ಈಗ ಪುಷ್ಕರ ಸಮಾಧಾನಕ್ಕೆ ಬಂದ, ನಳ ನಳನೇ, ಪುಷ್ಕರ ಪುಷ್ಕರನೇ ಅಂತ ಸಿದ್ಧವಾಯಿತು. ತನ್ನ ಅಣ್ಣ ಎಷ್ಟು ದೊಡ್ಡವನು ಅಂತ ಅವನಿಗೆ ಅರ್ಥವಾಯಿತು, ಪಶ್ಚಾತ್ತಾಪವಾಯಿತು, ಇವನ ಎಲ್ಲ ದುಃಖ,ನೋವುಗಳಿಗೆ ನಾನು ಕಾರಣನಾಗಿಬಿಟ್ಟೆನಲ್ಲ ಎಂದು ಅನ್ನಿಸಿತು. ಮನುಷ್ಯ ತಪ್ಪು ಮಾಡುತ್ತಾನೆ ಸಹಜ ಆದರೆ ಆಮೇಲೆ ಪಶ್ಚಾತ್ತಾಪ ಪಡುವುದು ಮುಖ್ಯ. ಇಲ್ಲದಿದ್ದರೆ ಆ ಜೀವ ಪತನವಾಗುತ್ತದೆ, ನೊಂದಾಗ ಪಾಪ ಪರಿಹಾರ. ತಪ್ಪುಮಾಡಿದರೆ ಬೇಸರವಷ್ಟೇ ಅಲ್ಲ, ಅದಕ್ಕೆ ಪಶ್ಚಾತ್ತಾಪ ಪಡಬೇಕು. ಪುಷ್ಕರ ಕೈಮುಗಿದು ನಳನ ಕಾಲಿಗೆ ಬಿದ್ದ. ದೊರೆಯೇ, ಪುಣ್ಯಶ್ಲೋಕನೇ, ನಿನ್ನಕೀರ್ತಿ ಶಾಶ್ವತವಾಗಲಿ, ಹತ್ತಾರು ಸಾವಿರ ವರ್ಷಗಳ ಕಾಲ ನೀನು ಸುಖವಾಗಿ ಬಾಳು (ಅವನ ಮನಸ್ಸು ಈಗ ಹೀಗಾಗಿದೆ.) ನನಗೆ ಎಲ್ಲವನ್ನೂ ತಿರುಗಿ ಕೊಟ್ಟೆ, ನನ್ನನ್ನು ನೀನು ಹೊಸಕಿ ಹಾಕಬಹುದಿತ್ತು ಎಂದು ಶರಣಾದ ನಳನಿಗೆ( ನಳ ಹೊಸಕಿದರೂ ಹೂವು ನಳನಳಿಸುತ್ತದೆ ಅದೇ ಅವನ ಮಹಿಮೆ) ಇನ್ನುಮುಂದೆ ಕೃತಜ್ಞನಾಗಿ ಬಾಳುತ್ತೇನೆ ಎಂದ. ನಳ ಅವನನ್ನು ತಕ್ಷಣ ಕಳಿಸಲು ಒಪ್ಪಲಿಲ್ಲ ಒಂದು ತಿಂಗಳ ಕಾಲ ತನ್ನ ಮನೆಯಲ್ಲೇ ಇಟ್ಟುಕೊಂಡು ಅವನಿಗೆ ಯಥೋಚಿತ ಸತ್ಕಾರಮಾಡಿ ಕಳುಹಿಸಿಕೊಟ್ಟ. ಅನಂತರ ರಾಜ್ಯಸೂತ್ರವನ್ನು ಕೈಗೆತ್ತಿಕೊಂಡ, ಪುರಪ್ರಮುಖರನ್ನು ಕರೆದ ಅವರಿಗೆಲ್ಲ ಅತ್ಯಂತ ಸಂತೋಷವಾಯಿತು, ಅವರ್ಯಾರೂ ನಳ ಮತ್ತೆ ತಮ್ಮ ರಾಜನಾಗಬಹುದೆಂದು ಭಾವಿಸಿರಲಿಲ್ಲ. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿದ, ಅವರೆಲ್ಲರೂ ಕೈಮುಗಿದು ಹೇಳಿದರು ಇಂದು ನಮಗೆ ಸಮಾಧಾನವಾಯಿತು, ದೇವತೆಯಂತಹ ದೊರೆ ನೀನು ಮರಳಿ ಬಂದೆ ಇನ್ನು ನಾವೂ ದೇವತೆಗಳಂತೆ ಬದುಕಬಹುದು ಅಂತ.

ನಂತರ ರಾಜ್ಯದೆಲ್ಲಡೆ ಬಹುಕಾಲ, ನಿಜವಾದ, ಆನಂದದ ಉತ್ಸವ ನಡೆಯಿತು. ಭೀಮರಾಜನಿಗೆ ವರ್ತಮಾನವೆಲ್ಲವೂ ತಿಳಿಯಿತು. ನಳ ದೂತರ ಮೂಲಕ ಹೇಳಿಕಳಿಸಿದ ನಾನು ಮತ್ತೆ ನಿಷಧಾಧಿಪತಿಯಾಗಿದ್ದೇನೆ ದಮಯಂತಿಯನ್ನು ಕಳುಹಿಸಿಕೊಡಿ ಅಂತ. ಭೀಮರಾಜ ಸಂತೋಷವಾಗಿ ದಮಯಂತಿಯನ್ನು ತನ್ನ ಸೇನೆಯ ಜೊತೆಗೆ ಕಳುಹಿಸಿಕೊಟ್ಟ. ನಳ ಸೈನ್ಯವನ್ನು ತೆಗೆದುಕೊಂಡು ಹೋಗದಿದ್ದಾಗ ಅವನಿಗೆ ಸಮಧಾನ ಇರಲಿಲ್ಲ. ಹಾಗಾಗಿ ಈಗ ಕಳುಹಿಸಿದ, ಮಗಳಿಗೂ ಸಮ್ಮಾನ ಮಾಡಿ ಕಳುಹಿಸಿದ, ಈಗ ನೀನು ಚಕ್ರವರ್ತಿನಿಯಾದೆ ಅಂತ. ಅವಳು ಮಕ್ಕಳೊಡನೆ ಬಂದಮೇಲೆಯೇ ನಳನಿಗೆ ನಿಜವಾದ ಸೌಖ್ಯ ಬಂದಿದ್ದು, ವೈಭವದಿಂದ ರಾಜ್ಯಭಾರ ಮಾಡಿದ ಇಡೀ ಜಂಬೂದ್ವೀಪಕ್ಕೇ ಚಕ್ರವರ್ತಿಯಾಗಿ ಮೆರೆದ.

ಈ ಕಥೆಯನ್ನು ಯುಧಿಷ್ಠಿರನಿಗೆ ಬೃಹದಶ್ವರು ಹೇಳಿದರು. ಹೇಳು ನಿನಗೆ ನಳನಿಗೆ ಬಂದಷ್ಟು ಕಷ್ಟ ಬಂದಿದೆಯೇ? ಅವನನ್ನು ನೋಡು ಹೇಗೆ ಬದುಕಿದ ಅಂತ, ಅವನಿಗೂ ನಿನಗೂ ಹೋಲಿಕೆಮಾಡು. ಅವನ ಕಷ್ಟದ ಮುಂದೆ ನಿನ್ನದು ಎಷ್ಟರದು? ಎಂದು. ರೌರವಿಗೆ ಹಿತ ಮಹಾರೌರವಿಯ ಗೋಳು ದನಿ ಎನ್ನವಂತೆ, ಆಗ ಯುಧಿಷ್ಟಿರನಿಗೆ ಸಮಾಧಾನವಾಯಿತು. ಅದು ಹೀಗೇ. ಯಾರಾದರೂ ದುಃಖದಿಂದ ಬಳಲುತ್ತಿರುವವನಿಗೆ ಅವನಿಗಿಂತ ದುಃಖದಲ್ಲಿರುವವರನ್ನು ತೋರಿಸಿದರೆ ಅವನ ದುಃಖದ ವೇಗ ತಂತಾನೇ ಶಮನವಾಗುತ್ತದೆ. ಯಾರೇ ದುಃಖದಲ್ಲಿದ್ದರೂ ನೀನು ನಿಮಗಿಂತ ದುಃಖದಲ್ಲಿರುವವರ ಕಡೆ ನೋಡಿ. ನಿಮಗಿಂತ ಸುಖವಾಗಿರುವವರನ್ನು ಕಂಡರೆ ನೋವು ಹೆಚ್ಚಾಗುತ್ತೆ ದುಃಖದಲ್ಲಿರುವವರನ್ನು ಕಂಡಾಗ ನೋವು ಪರಿಹಾರವಾಗುತ್ತದೆ, ನಳ ತನ್ನ ಧರ್ಮದಿಂದಲೇ ಎಲ್ಲವನ್ನೂ ಮರಳಿ ಪಡೆದ ಹಾಗಾಗಿ ಎಲ್ಲಿ ಧರ್ಮವಿರುತ್ತದೋ ಅಲ್ಲಿ ಸುಖ ಇದ್ದೇ ಇರುತ್ತದೆ.

ಪುಣ್ಯಶ್ಲೋಕೋ ನಲೋರಾಜಃ ಪುಣ್ಯಶ್ಲೋಕೋ ಯುಧಿಷ್ಠಿರಃ| ಪುಣ್ಯಶ್ಲೋಕಾ ಚ ವೈದೇಹೀ ಪುಣ್ಯಶ್ಲೋಕೋ ಜನಾರ್ಧನಃ|| ಎಂದು ಹೇಳಿದಂತೆ ಇವರುಗಳು ಪುಣುಶ್ಲೋಕಿಗಳು, ಇವರನ್ನು ನೆನೆದರೆ ಸಾಕು ಪುಣ್ಯ ಬರುತ್ತದೆ, ಮನಸ್ಸು ಹಗುರಾಗುತ್ತದೆ. ನೋವು ದೂರವಾಗುತ್ತದೆ. ವೈದೇಹಿ ಹಾಗೂ ವೈದರ್ಭೀ ಇವರುಗಳು ತಮ್ಮ ಪತಿಯರುಗಳಿಗಿಂತ ಸ್ವಲ್ಪ ಮೇಲೆ ನಿಲ್ಲುತ್ತಾರೆ ತಮ್ಮ ಧರ್ಮಾಚರಣೆಯ ಬಲದಿಂದ. ಇವರುಗಳ ಪೈಕಿ ನಳನಿಗೆ ಮಾತ್ರಾ ಆ ಹೆಸರು ಪರ್ಯಾಯನಾಮವಾಗಿ ಹೋಗಿದೆ. ಹೀಗೆ ಯಾರು ಈ ಕಥೆಯನ್ನು ಅನುಸಂಧಾನ ಮಾಡುತ್ತಾರೋ ಅವರಿಗೆ ಅಲಕ್ಷ್ಮೀ ಉಂಟಾಗುವುದಿಲ್ಲ, ಯಾರಿಗೆ ಸಂಪತ್ತು ಬೇಕೋ ಅವರು ಇದನ್ನು ಅನುಸಂಧಾನ ಮಾಡಬೇಕು. ಇದು ಇತಿಹಾಸವೂ ಹೌದು, ಪುರಾಣವೂ ಹೌದು. ಇದು ಕೇವಲ ಕಾಲ್ಪನಿಕ ಕಥೆಯಲ್ಲ. ಈ ಕಥೆ ದಂತಕಥೆಯಾಯಿತು ಅಂಥ ಬದುಕನ್ನು ಬದುಕಿಬಿಟ್ಟ ನಳ. ಇದು ಯಾವಕಾಲಕ್ಕೂ ಪ್ರಸ್ತುತ, ಎಲ್ಲ ದೇಶ, ಕಾಲ, ವಯೋಮಾನ, ಮಾನಸಿಕತೆಯ ವ್ಯಕ್ತಿಗಳಿಗೂ ಸಲ್ಲುವ ವಿಚಾರ ಇದು. ಇದನ್ನು ಅನುಸಂಧಾನಮಾಡಿದವನಿಗೆ ಜೀವನದಲ್ಲಿ ಆಗಬೇಕಾದ ಪ್ರಯೋಜನಗಳೆಲ್ಲಾ ಕೂಡಿ ಬರುತ್ತದೆ. ಧನ್ಯತೆ ಬರುತ್ತದೆ. ಧನ ಧನ್ಯವಾಗುತ್ತದೆ, ಲಕ್ಷ್ಮಿಯು ನಾರಾಯಣನನ್ನು ಸೇರಿದಂತೆ. ತನ್ನ ಸಮಕಾಲೀನರಲ್ಲಿ ಆತ ನಳನ ಹಾಗೆ ಶ್ರೇಷ್ಟನೆಂದು ಕರೆಸಿಕೊಳ್ಳುತ್ತಾನೆ.

ಕರ್ಕೋಟಕಸ್ಯನಾಗಸ್ಯ ದಮಯಂತ್ಯಾ ನಲಸ್ಯಚ ಋತುಪರ್ಣಸ್ಯ ರಾಜರ್ಷೇ ಕೀರ್ತನಂ ಕಲಿನಾಶನಂ|| ಎಂಬಂತೆ ಇದರ ಶ್ರವಣ ಮಾತ್ರದಿಂದ ಕಲಿ ಪರಿಹಾರವಾಗುತ್ತದೆ.
ಹೆಚ್ಚಿಗೆ ತಿಳಿದರೂ ಅಪಾಯವೇ, ಪಾಂಡಿತ್ಯ ಹೆಚ್ಚಾದರೆ ಭಗವಂತ ದೂರವಾಗುತ್ತಾನೆ. ಭಾವ ಕಡಿಮೆಯಾಗುತ್ತದೆ. ಎಲ್ಲವನ್ನೂ ತಿಳಿದುಕೊಳ್ಳಬೇಕೆಂದಿಲ್ಲ, ತಿಳಿದು ಮುಗಿಸಲೂ ಸಾಧ್ಯವಿಲ್ಲ. ಸಾಧನೆಯೂ ಹಾಗೆಯೇ, ಚಿಕ್ಕಮಗುವನ್ನು ತಾಯಿ ತೊಡೆಯ ಮೇಲೆ ಕುಳ್ಳರಿಸಿಕೊಂಡು ವಾಹನದಲ್ಲಿ ದಿಲ್ಲಿಗೆ ಹೋದರೆ ಮಗು ಎಚ್ಚರದಿಂದ ದಾರಿಯಲ್ಲಿ ಸಿಗುವುದೆಲ್ಲವನ್ನೂ ನೋಡಿಕೊಂಡು ಕುಳ್ಳಿರಬೇಕೇ, ಅದರ ಪಾಡಿಗೆ ನಿದ್ದೆಮಾಡಿದರೂ ಸಾಕು, ಅದು ದೆಹಲಿಯನ್ನು ತಲುಪಿಯೇ ತಲುಪುತ್ತದೆ. ಮಾರ್ಗದ ವಿವರ ಮಗುವಿಗೆ ಬೇಕೇ? ತಿಳಿಯುವುದು ಅನಿವಾರ್ಯವೇ? ಆರಾಮವಾಗಿ ಹೋಗುವುದು ಮುಖ್ಯ ಅಲ್ಲವೇ, ಮುಕ್ತಿ ಸಿಕ್ಕಿದರೆ ಸಾಕು, ಅದನ್ನು ತಿಳಿಯುವ ಅವಶ್ಯಕತೆ ಏನು? ಎಷ್ಟೋ ಸಾರಿ ಕಡಿಮೆ ತಿಳಿದರೇ ಹಿತ, ಸಹಸ್ರಪದಿಯ ಕಥೆಯಂತೆ. ಸಹಸ್ರಪದಿಯೊಂದು ನಡೆದುಕೊಂಡು ಹೋಗುತ್ತಿರುತ್ತದೆ, ಆಗ ಅದನ್ನು ನೋಡಿದ ಮೊಲವೊಂದು ಕುತೂಹಲಕ್ಕೆ ಅದನ್ನು ಪ್ರಶ್ನಿಸುತ್ತದೆ. ಅಲ್ಲ, ನನಗೆ ಇರುವ ನಾಲ್ಕು ಕಾಲುಗಳಲ್ಲೇ ಮೊದಲು ಯಾವುದನ್ನು ಇಡುವುದು ಅಂತ ಸಂಶಯ ಬರುತ್ತದೆ ನಡೀವಾಗ, ಇನ್ನು ನೀನು ಸಾವಿರ ಕಾಲುಗಳ ಪೈಕಿ ಯಾವುದನ್ನು ಮೊದಲು ಹಾಕುವೆ ಅಂತ. ಇದು ನಿಜವಾಗಿ ಅವಶ್ಯಕತೆ ಇತ್ತಾ? ಕಥೆಯ ಅಂತ್ಯವೇನೆಂದರೆ ಅಲ್ಲಿಂದ ಮುಂದೆ ಆ ಸಹಸ್ರಪದಿಗೆ ನಡೆಯಲು ಆಗಲೇ ಇಲ್ಲ.

ಕೆಲವು ಕೆಲಸಗಳು ತಂತಾನೇ ಆಗಬೇಕು, ಅರ್ಥ ಆಗದಿದ್ದರೂ ಚಿಂತೆಯಿಲ್ಲ. ಸಂಕ್ಷೇಪವಾದ ಈ ಚರಿತ್ರೆಯನ್ನು ಮತ್ತೆ ಮತ್ತೆ ಕೇಳಿ, ಓದಿ, ಆಡಿ, ಹಾಡಿ, ಆನಂದಿಸಿ, ಅನುಸಂಧಾನ ಮಾಡಿ ಇದು ಜೀವನಕ್ಕೆ ಉಪಯುಕ್ತವಾಗಲಿ.

ಚಿತ್ರ:ಅಂತರ್ಜಾಲದಿಂದ

 

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments