#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
21-09-2018:

ನರಸಿಂಹಾವತಾರ

ತತ್ತ್ವ : ಭಕ್ತನ ಮಾತಿಗೆ ಬದ್ಧ ಭಗವಂತ.

ಇಂದು ವಾಮನ ಜಯಂತಿ. ನಿನ್ನೆಯ ಪ್ರವಚನಕ್ಕೆ ಬಿಡುವಿಲ್ಲದಿದ್ದರೆ ಇಂದು ನಾವು ವಾಮನಾವತಾರದ ಕುರಿತು ಮಾತನಾಡಬೇಕಿತ್ತು, ಆದರೆ ಇಂದು ನರಸಿಂಹಾವತಾರದ ವಿಚಾರ, ಇದು ವಾಮನಾವತಾರಕ್ಕೆ ಪೀಠಿಕೆ. ಇವೆರಡಕ್ಕೂ ನಡುವೆ ತುಂಬಾ ಹೋಲಿಕೆ ಇದೆ. ಇದರಲ್ಲಿ ಪ್ರಹ್ಲಾದನ ಉದ್ಧಾರ ಆದರೆ ಅದರಲ್ಲಿ ಬಲಿಯ ಉದ್ಧಾರ. ಪ್ರಹ್ಲಾದನ ಮೊಮ್ಮಗ ಬಲಿ, ಇಬ್ಬರೂ ಒಂದೇ ಬಗೆಯ ವ್ಯಕ್ತಿತ್ವಗಳು, ರಾಕ್ಷಸನ ಮಗನಾಗಿ ಹುಟ್ಟಿದರೂ ರಾಕ್ಷಸತ್ವವನ್ನು ಮೀರಿ ನಿಂತವರು. ಮಹಾನುಭಾವರ ಜೀವನದಲ್ಲಿ ಭಗವಂತನ ಪ್ರವೇಶವಾದ ಕಥೆ. ವಾಮನ ಜಯಂತಿಯ ದಿನ ವಾಮನನ, ಹಾಗೂ ತತ್ತ್ವ ಭಾಗವತದ ಅಧಿದೈವ ಶ್ರೀಕೃಷ್ಣ, ಅವನಿಗೂ ನಮಸ್ಕರಿಸಿ ಪ್ರಾರಂಭಮಾಡೋಣ.

ತತ್ತ್ವಭಾಗವತಮ್

ನಂಬದಿರ್ದನು ತಂದೆ ನಂಬಿದನು ಪ್ರಹ್ಲಾದ, ಅನ್ನುತ್ತದೆ ಕಗ್ಗ. ನಂಬಿಕೆ ಪ್ರಶ್ನೆ ಇದು. ತಂದೆಗೆ ನಂಬಿಕೆ ಇಲ್ಲ, ಮಗನಿಗೆ ಪೂರ್ಣ ನಂಬಿಕೆ ಇದೆ. ಇಬ್ಬರೂ ಉದ್ಧಾರವಾದರು, ಯಾಕೆಂದರೆ ಇಬ್ಬರಿಗೂ ಹರಿಯ ಅರಿವಿನ ಬಗ್ಗೆ ನಂಬಿಕೆ ಇತ್ತು, ಹರಿಯನ್ನು ಪರದೈವ ಅಂತ ಪ್ರಹ್ಲಾದ ನಂಬಿದ್ದ. ಆದರೆ ಹಿರಣ್ಯಕಶಿಪು ಅವನನ್ನೇ ವೈರಿ ಅಂತ ತಿಳಿದಿದ್ದ. ಇಬ್ಬರಿಗೂ ಈ ವಿಷಯವೊಂದರಲ್ಲಿ ತುಂಬಾ ನಂಬಿಕೆ ಇತ್ತು, ತಾವು ಏನನ್ನು ನಂಬಿದ್ದರೋ ಅದನ್ನು ದೃಢವಾಗಿ ನಂಬಿದ್ದರು. ಇಬ್ಬರೂ ಆ ವಿಷಯದಲ್ಲಿ ಅವರು ಅಪ್ಪ ಮತ್ತು ಮಗನೇ ನಿಜ. ಏಕನಿಷ್ಠೆ ಅವರಲ್ಲಿತ್ತು. ಆ ನಂಬಿಕೆಯ ದಾರ್ಡ್ಯವೇ ಮುಕ್ತಿಗೆ ಕಾರಣ, ಹಾಗಾಗಿ ಆ ಎರಡರ ಪೈಕಿ ನೀನು ಯಾವುದಾದರೂ ಒಂದಾಗು ಮಧ್ಯದಲ್ಲಿ ನಿಲ್ಲಬೇಡ. ಇಬ್ಬಂದಿಯಾಗಬೇಡ, ಎಲ್ಲೋ ಒಂದು ಕಡೆ ನಂಬು, ಅನುರಾಗ ಭಕ್ತಿಯನ್ನು ತಾಳು ಅಥವಾ ವಿರೋಧ ಭಕ್ತಿಯನ್ನು ತಾಳು. ಅನುರಾಗ ಭಕ್ತಿಯಾದರೆ ಮಧುರವಾಗಿ ಮುಕ್ತಿ; ವಿರೋಧ ಭಕ್ತಿಯಾದರೆ ಯುದ್ಧ, ಹಿಂಸೆ ಇವುಗಳಿಂದ. ಕಂಬದಿನೋ ಬಿಂ ಬದಿನೋ ಮೋಕ್ಷ ಅವರಿಗೆ ದೊರಕಿತು, ಈ ಎರಡಾದರೂ ಅಡ್ಡಿಯಿಲ್ಲ, ಸಿಂಬಳದ ನೊಣ ಆಗಬೇಡ ಅದು ಹೊರಹೋಗಲಿಕ್ಕೆ ಆಗದೇ ಅಂಟಿಕೊಂಡಿರುತ್ತದೆ, ಮುಳುಗುವಷ್ಟು ಇಲ್ಲದ್ದರಿಂದ ಸಾಯುವುದೂ ಇಲ್ಲ. ಹೀಗೆ ಆಗಬೇಡಿ.

ಕಿರಣ್ಯಕಶಿಪುವಿಗೆ ಹರಿಯ ಇರವಿನ ಬಗ್ಗೆ ಯಾವುದೇ ಸಂಶಯ ಇಲ್ಲ; ಯಾಕೆಂದರೆ ಅವನಿಂದಲೇ ತನ್ನ ತಮ್ಮನ ಹತ್ಯೆಯಾಗಿದೆ ಅಂತ ಅವನಿಗೆ ತಿಳಿದಿದೆ. ಹಾಗಾಗಿ ಬದ್ಧ ದ್ವೇಷ ಅವನಿಗೆ ಹರಿಯನ್ನು ಕಂಡರೆ, ಹಾಗಾದರೆ ಅದಕ್ಕೆ ಮೊದಲು ಪ್ರೀತಿ ಇತ್ತಾ ಅಂತ ಕೇಳಿದರೆ ಅದೂ ಇಲ್ಲ, ಇಂತಹವರ ಸ್ವಭಾವವೇ ಹೀಗೆ; ಅಕಾರಣ ದ್ವೇಷ, ತಮ್ಮನ ನೆನಪಿನಲ್ಲಿ ಮತ್ತೆ ಆ ದ್ವೇಷ ಮತ್ತಷ್ಟು ಹೆಚ್ಚಿತು. ಆತ ಮತ್ತಷ್ಟು ವ್ಯಗ್ರನಾದ, ಕಠಿಣವಾದ ತಪಸ್ಸನ್ನು ಮಾಡಿದ, ಎಷ್ಟು ಕಠಿಣವಾಗಿತ್ತು ಅಂದರೆ ಅವನ ಮೂಳೆಗಳುಳಿದು ಬೇರೇನೂ ಇರಲಿಲ್ಲ ದೇಹದಲ್ಲಿ, ಅವನ ಮೇಲೆ ಹುತ್ತ ಬೆಳೆದಿತ್ತು. ಹಾಗಾದಾಗ ವರ ಬಂತು. ವರ ದೊರೆತ ಬಳಿಕ ಶರೀರವೂ ಮತ್ತೆ ಮೊದಲಿನಂತಾಯಿತು, ಆ ಕಾಲದಲ್ಲಿ ಹೀಗೇ; ಜನರು ಅಸ್ಥಿಗತ ಪ್ರಾಣರಾಗಿದ್ದರು, ಹಾಗಾಗಿ ಅಸ್ಥಿ ಉಳಿದಿರುವವವರೆಗೂ ಪ್ರಾಣ ಇರುತ್ತಿತ್ತು. ಈಗ ನಾವುಗಳು ಅನ್ನಗತ ಪ್ರಾಣರಾಗಿದ್ದೇವೆ.

ಹೀಗೆ ವಿಶ್ವೇಶ್ವರನ ಮೇಲಿದ್ದ ದ್ವೇಷ ವಿಶ್ವದ ಮೇಲೆಯೂ ಬಂತು. ಇಂತಹವರಿಗೆ ಯಾರೂ ಆಗಲ್ಲ, ಯಾರ ಸುಖವನ್ನೂ ಸಹಿಸುವುದೂ ಇಲ್ಲ. ಇಡೀ ಪ್ರಪಂಚವೂ ವಿರೋಧ, ಹಾಗಾಗಿ ತನ್ನ ವರದ ಬಲದಿಂದ ಎಲ್ಲ ಲೋಕಗಳನ್ನು ಗೆದ್ದ, ಎಲ್ಲವೂ ಅವನ ಅಧೀನವಾಯಿತು. ಇವರಿಗೆ ನಮ್ಮ ಮೇಲೂ ಕರುಣೆ ಇರಲಾರದು. ನಿಷ್ಕರುಣಿಗಳು, ಕ್ರೂರಿಗಳು ಹೇಗಿರುತ್ತಾರೆ ಅಂದರೆ ಶರೀರದಲ್ಲಿ ಕೇವಲ ಎಲುಬು ಮಾತ್ರವೇ ಉಳಿಯುವವರೆಗೆ ತಪಸ್ಸು ಮಾಡುತ್ತಾರೆ; ಎಂದರೆ ಎಷ್ಟು ಗಟ್ಟಿತನ ಬೇಕು? ಒಂದು ರೀತಿಯ ಕ್ರೌರ್ಯವೂ ಅವರಲ್ಲಿ ಇರಬೇಕಾಗುತ್ತದೆ. ತಮ್ಮ ವಿಷಯಕ್ಕೂ ಹಾಗೇ ತನ್ನ ಮೇಲೆ ತಾವು ಕ್ರೌರ್ಯವನ್ನು ವ್ಯಕ್ತಪಡಿಸಿ ಅದರಿಂದಾಗಿ ವರವನ್ನು ಪಡೆದುಕೊಂಡು ನಂತರ ಅದೇ ವರದಿಂದ ಪ್ರಪಂಚದ ಮೇಲೆ ಕ್ರೌರ್ಯವನ್ನು ತೋರತೊಡಗಿದ. ಗಂಧರ್ವ, ಸಿದ್ಧ, ಯಕ್ಷ, ರಾಕ್ಷಸ, ಋಷಿಗಳು, ಪಿತೃಗಳು ಎಲ್ಲರ ಮೇಲೂ ಗೆದ್ದ ವರಬಲದಿಂದ. ಆ ವರ ಅಂತೂ ಬಹಳ ವಿಚಿತ್ರ; ಅದನ್ನು ಅರ್ಥ ಮಾಡಿಕೊಳ್ಳಲೂ ಸಾಧ್ಯವಿಲ್ಲ. ಹಗಲೂ ಅಲ್ಲ ರಾತ್ರಿಯೂ ಅಲ್ಲ ಆ ಹೊತ್ತಿಗೆ ಸಾವು ಬರಲಿ ಎಂಬುದಾಗಿತ್ತು ಅದು. ಸಾವು ಬಂದರೆ ಹಗಲಲ್ಲಿ ಬರಬೇಕು ಇಲ್ಲ ರಾತ್ರಿಯಲ್ಲಿ, ಹೀಗೆ ವರ ಪಡೆದುಕೊಂಡರೆ ಯಾವಾಗಲೂ ಸಾಯುವಂತಿಲ್ಲ, ಎಂದರೆ ಸಾವೇ ಇಲ್ಲ ಎಂದು ಅರ್ಥ. ಇಷ್ಟೇ ಸಾಕಾಗಿತ್ತು, ಆದರೆ ಇಂತಹವರಿಗೆ ಸಂಶಯ ಜಾಸ್ತಿ. ಹಾಗಾಗಿ ಮುಂದುವರೆಸಿ ಕೇಳಿದ ಮನೆ ಒಳಗೂ ಸಾವಿಲ್ಲ, ಹೊರಗೂ ಸಾವಿಲ್ಲ, ದ್ವಿಪಾದಿಗಳಿಂದ ಅಥವಾ ಚತುಷ್ಪಾದಿಗಳಿಂದ ಹೀಗೆ ಇಬ್ಬರಿಂದಲೂ ಸಾವಿಲ್ಲ, ಮೇಲೂ ಇಲ್ಲ ಕೆಳಗೂ ಇಲ್ಲ ಅಂತ. ಹೀಗೆ ಸೃಷ್ಟಿಯಲ್ಲಿ ಯಾರೂ ಪಡೆದುಕೊಂಡಿರದಂತಹ ವಿಚಿತ್ರ ವರವನ್ನು ಕೇಳಿ ಪಡೆದುಕೊಂಡ.

ಮಾಯೆ ಅಂದರೆ ಇದು. ಇವನ್ಯಾರು? ಜಯ-ವಿಜಯರಲ್ಲಿ ಒಬ್ಬನಾಗಿ ವೈಕುಂಠದಲ್ಲಿದ್ದವನು; ಸನಕಾದಿಗಳ ಶಾಪದಿಂದ ಭೂಮಿಗೆ ಬಂದದ್ದು, ಅದರಲ್ಲಿಯೂ ಬೇಗ ತಿರುಗಿ ಹೋಗಬೇಕೆನ್ನುವ ಹಂಬಲದಿಂದ ಶತ್ರುಗಳಾಗಿ ಹುಟ್ಟಿ ಮೂರೇ ಜನ್ಮಗಳಲ್ಲಿ ಶಾಪವನ್ನು ತೀರಿಸುತ್ತೇವೆ ಎಂದೂ ಕೇಳಿಕೊಂಡದ್ದು ಅದರೆ ಈಗ ರಾಕ್ಷಸದೇಹ ದೊರೆತ ಮೇಲೆ ತಪಸ್ಸು ಮಾಡಿ ಅದೇ ರಾಕ್ಷಸ ದೇಹವನ್ನು ಶಾಶ್ವತ ಮಾಡಿಕೊಳ್ಳಲು ವರ ಕೇಳುತ್ತಿದ್ದಾನೆ. ಮುಕ್ತಿಕೊಡಲು ದೇವನಿಗೂ ದಾರಿ ಇರಬಾರದು ಅಂತಹ ವ್ಯವಸ್ಥೆಗೆ ಯೋಜನೆ ಮಾಡುತ್ತಿದ್ದಾನೆ. ಉದ್ಧಾರಮಾಡಕ್ಕೆ ಹೋದರೆ ಅವರಿಗೆ ಅವರೇ ವಿಘ್ನ. ಈ ವರವಿಲ್ಲದಿದ್ದರೆ ಸುಖವಾಗಿ ಸೇರಬಹುದಿತ್ತು. ವರವ ಕೇಳಿದ್ದು, ಬ್ರಹ್ಮ ಒಪ್ಪಿರಲಿಲ್ಲ. ಆದರೂ ಹೀಗಾಯಿತು. ಅಮರತ್ವವನ್ನು ಕೊಟ್ಟಿರಲಿಲ್ಲ. ಎಷ್ಟೋ ಬಾರಿ ನಾವು ದೇವರಿಂದ ದೂರ ಇರುವ ವರವನ್ನೇ ಕೇಳಿರುತ್ತೇವೆ, ಹತ್ತಿರ ಹೋಗುವ ವರವಲ್ಲ. ಯಾಕೆಂದರೆ ಏನನ್ನು ಕೇಳಬೇಕೆಂದು ನಮಗೂ ತಿಳಿದಿಲ್ಲ; ಅವನ ಜಾಗದಲ್ಲಿ ನೀವೇ ಇದ್ದಿದ್ದರೂ ಇದನ್ನೇ ಕೇಳುತ್ತಿದ್ದಿರಿ, ನಿಮ್ಮ ಯೋಚನೆಯೂ ಹಾಗೆಯೇ ಇರುತ್ತದೆ, ಏನು ತಪ್ಪು ಅದರಲ್ಲಿ? ಅಂತ. ಆದರೆ ಒಳಗಿನ ಮರ್ಮ ಗೊತ್ತಿರುವವನು ಅಯ್ಯೋ ಜೀವವೇ ನೀನು ರಾಕ್ಷಸನಾಗಿ ಹುಟ್ಟಿದ್ದೇ ಬೇಗ ಜೀವನ ಮುಗಿಸಿ ವೈಕುಂಠವನ್ನು, ಶ್ರೀಹರಿಯ ಪಾದವನ್ನು ಸೇರಬೇಕೆಂದುಕೊಂಡಲ್ಲವಾ, ಮತ್ತೆ ಇದೇ ಶರೀರವನ್ನು ಖಾಯಂ ಮಾಡಿಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದೀಯಲ್ಲಾ ಅಂತ ಬೇಸರ ಮಾಡಿಕೊಳ್ಳುತ್ತಾನೆ, ಕರುಣೆ ತೋರಿಸುತ್ತಾನೆ. ಉಳಿದವರ ಪಾಲಿಗೆ ಇದು ಅದ್ಭುತ ವರವೇ.

ಹೀಗೆ ಇಂತಹ ವರವನ್ನು ಪಡೆದುಕೊಂಡು, ಮಹೇಂದ್ರನ ಭವನದಲ್ಲಿ ವಾಸಮಾಡುತ್ತಾ ಸಮಸ್ತ ಲೋಕಗಳನ್ನು ಆಳುತ್ತಾ ಇದ್ದಾನೆ. ಇಡೀ ಪ್ರಪಂಚವನ್ನು ಹಿಂಡುತ್ತಾ ಇದ್ದಾನೆ, ಸಕಲ ಜೀವರಾಶಿಗಳನ್ನು ಪೀಡಿಸುತ್ತಾ ಇದ್ದಾನೆ. ಎಲ್ಲ ದೇವತೆಗಳೂ ಶ್ರೀಹರಿಯ ಬಳಿ ಹೋಗಿ ಮೊರೆಯಿಟ್ಟರು, ನಮ್ಮನ್ನು ರಕ್ಷಿಸು ಅಂತ. ಭಗವಂತ ಹೇಳಿದ, ಚಿಂತಿಸಬೇಡಿ ಕೆಲಸ ಆಗುತ್ತದೆ. ಆದರೆ ಕಾಲ ಬರಬೇಕು. ಅವನೇ ಒಂದು ಬಲೆ ಹಾಕಿಕೊಂಡು ಕೂತಿದ್ದಾನೆ, ಅವನ ಸುತ್ತಾ ಅದರ ಒಳಗೆ ಹೋಗಿ ಅವನನ್ನು ಬಿಡಿಸಿಕೊಂಡು ಬರಬೇಕು ಹಾಗಾಗಿ ಕಾಲಕ್ಕೆ ಕಾಯಿರಿ ಎಂದು ಹೇಳಿ ಮತ್ತೂ ಒಂದು ಮಾತನ್ನು ಹೇಳುತ್ತಾನೆ. ಚಿಂತಿಸಬೇಡಿ ಯಾರು ಗೋವು, ಬ್ರಾಹ್ಮಣರು, ಸಂತರು, ಧರ್ಮದ ದ್ವೇಷಿಯಾಗಿರುತ್ತಾನೋ ಅವನು ಬಹುಕಾಲ ಉಳಿಯಲು ಸಾಧ್ಯವಿಲ್ಲ, ಸ್ಥಿರವಾಗಿರಲು ಸಾಧ್ಯವಿಲ್ಲ, ಅವರಿಗೆ ಅನರ್ಥಗಳು ಕಟ್ಟಿಟ್ಟ ಬುತ್ತಿ. ಪ್ರಪಂಚವನ್ನೇ ಗೆದ್ದವನು ಅವನು. ತ್ರಿಭುವನಗಳನ್ನೂ ಗೆದ್ದಿದ್ದಾನೆ, ಅವನಿಗೆ ತನ್ನ ಮನೆಯಿಂದಲೇ ಪ್ರತಿರೋಧ ಬರುತ್ತದೆ. ಆ ಎಲ್ಲರನ್ನೂ ಗೆದ್ದವನು ತನ್ನ ಮಗನಿಂದಲೇ ಸೋತುಹೋಗುತ್ತಾನೆ ಕೊನೆಗೆ. ಹೇಳಿಕೇಳಿ ಮಗ ಇನ್ನೂ ಶಿಶು ಕೂಡಾ ಅವನ ಮುಂದೆ ಇವನು ಅಸಹಾಯಕನಾಗುತ್ತಾನೆ, ದುರ್ಬಲನಾಗುತ್ತಾನೆ. ಅವನಿಂದ ಮನೆಯೊಳಗೆ ಅವನ ದೌಷ್ಟ್ಯ ಮಿತಿಮೀರಿದಾಗ ನಾನು ಬರುತ್ತೇನೆ, ಕಾಯಿರಿ ಅಂತ. ದೇವತೆಗಳಿಗೆ ದೇವರ ದೇವ ಹೇಳುತ್ತಾನೆ. ಬಲ ಬಲಿಷ್ಟ, ಆದರೆ ಎಲ್ಲವೂ ಶಾಶ್ವತ ಅಲ್ಲ ಎಲ್ಲೋ ಒಂದುಕಡೆ ಅದಕ್ಕೆ ಒಂದು ಬಾಧೆ ಇರುತ್ತದೆ. ಮನೆಯೊಳಗೆ ಇರಬಹುದು, ಮೈಯೊಳಗೆ ಇರಬಹುದು, ಮನದೊಳಗೂ ಇರಬಹುದು! ಎಲ್ಲೋ ಒಂದು ಕಡೆ ತಡೆ ಇರುತ್ತದೆ. ಯಾರಿಂದಲೂ ಎದುರಿಸಲಿಕ್ಕೆ ಸಾದ್ಯವಿಲ್ಲ ಎನ್ನುವ ತರಹ ಇರುವವನು ಎಲ್ಲೋ ಒಂದು ಕಡೆ ಸೋತು ಹೋಗುತ್ತಾನೆ. ಯಾಕೆಂದರೆ ಇದು ಪ್ರಪಂಚ, ಇಲ್ಲಿ ಹಾಗಿರಲಿಕ್ಕೆ ಸಾಧ್ಯವೇ ಇಲ್ಲ. ಸೋಲು ಎಲ್ಲಿಂದಲೋ ಒಂದುಕಡೆಯಿಂದ ಬರುತ್ತದೆ.

ಹಿರಣ್ಯಕಶಿಪುವಿಗೆ ಕಯಾದು ಎಂಬ ಪತ್ನಿಯಲ್ಲಿ ನಾಲ್ಕು ಮಕ್ಕಳು. ಸಂಹ್ಲಾದ, ಅನುಹ್ಲಾದ, ಹ್ಲಾದ ಮತ್ತು ಪ್ರಹ್ಲಾದ ಅಂತ. ಪ್ರಹ್ಲಾದನೇ ಚಿಕ್ಕವನು ಆದರೆ ನಾವು ಉಳಿದ ಮೂವರ ಹೆಸರೇ ಕೇಳಿಲ್ಲ. ಯಾಕೆಂದರೆ ಹೆಸರು ಚಿರಪರಿಚಿತವಾಗಿರಬೇಕೆಂದರೆ ಅವರು ಯಾವುದಾದರೂ ಒಂದು ವಿಚಾರದಲ್ಲಿ ತುದಿ ಮುಟ್ಟಿರಬೇಕು. ನಮಗೆ ಅಪ್ಪನೂ ಗೊತ್ತು ಪ್ರಹ್ಲಾದನೂ ಗೊತ್ತು. ರಾಕ್ಷಸರಲ್ಲಿ ಕಿರಿಯ ಮಗ ಅಂದರೆ ನಮಗೇನೋ ನೆನಪಾಗುತ್ತದೆ. ರಾಮಾಯಣದಲ್ಲಿಯೂ ಹಾಗೇ, ವಿಭೀಷಣ; ಅವನೂ ಕೊನೆಯವನೇ, ರಾವಣ, ಕುಂಭಕರ್ಣ, ಶೂರ್ಪಣಖಿ ಹಾಗೂ ವಿಭೀಷಣ. ಕೈಕಸೆಯ ನಾಲ್ವರು ಮಕ್ಕಳ ಪೈಕಿ ವಿಭೀಷಣ ತಂದೆಯ ತರಹ. ವಿಶ್ರವಸು ಬ್ರಹ್ಮರ್ಷಿ, ಕೈಕಸೆ ರಾಕ್ಷಸಿ. ಮೊದಲೇ ಹೇಳಿರುತ್ತಾರೆ ಅವಳ ಅಪೇಕ್ಷೆಯಂತೆ ಅಕಾಲದಲ್ಲಿ ಸೇರುವಂತಾದಾಗ; ನನ್ನಂತಹ ಮಕ್ಕಳು ಬೇಡ, ನಿನ್ನಂತಹ ಮಕ್ಕಳು ನನಗೆ ಬೇಕು ಅಂದಾಗ; ಮೊದಲ ಮೂವರು ನಿನ್ನಂತೆ ಆಗುತ್ತಾರೆ, ಕೊನೆಯವನು ಮತ್ರಾ ನನ್ನಂತಹ ಮಗ ಎಂದು. ಹಾಗಾಗಿ ವಿಭೀಷಣ ಧರ್ಮಾತ್ಮನಾದ. ಇವನಿಗೂ ಹಾಗೆಯೇ, ಪ್ರಹ್ಲಾದನಂಥವರು ವಿಬೀಷಣನಂಥವರಿಗೆ ಪ್ರೇರಣೆ.

ಹಿರಣ್ಯಕಶಿಪುವಿನ ಅಳ್ವಿಕೆಯಲ್ಲಿ ಎಲ್ಲೆಲ್ಲೂ ದೌಷ್ಟ್ಯವೇ ಇತ್ತು, ಪ್ರಪಂಚದಲ್ಲಿ ಎಲ್ಲಿಯೂ ಧರ್ಮಕ್ಕೆ ನೆಲೆಯಿಲ್ಲದಂತಾಗಿತ್ತು. ಧರ್ಮವನ್ನೂ ಎಲ್ಲಿಯೂ ಇರಲಿಕ್ಕೆ ಬಿಡಲಿಲ್ಲ, ಅದು ಮನೆಯೊಳಗೇ ಬಂದುಬಿಟ್ಟಿತು. ಮಗನಾಗಿಯೇ ಜನ್ಮತಾಳಿತು. ಧರ್ಮಕ್ಕೂ ಕೂಡಾ ಮಾಯೆ ಇದೆ, ಅದು ಕಾಡ ಕತ್ತಲ ಗಬ್ದಿಂದ ಎದ್ದು ಬರುತ್ತದೆ. ಹಾಗೇ ಆಯಿತು, ಅವನ ಮಗನೇ ಬೇರೆತರಹ ಆಗಿಬಿಟ್ಟ, ಅವನಿಗೆ ಗಬ್ದಿಂದಲೇ ಬಂತು ಹರಿಪ್ರೀತಿ. ಅದಕ್ಕೇ ಹೇಳುವುದು, ಗರ್ಭದಲ್ಲಿರುವಾಗ ಒಳ್ಳೆ ಸಂಸ್ಕಾರ ಕೊಡಬೇಕು ಅಂತ. ತಾಯಿಯಾದವಳು ತನ್ನ ಮಗುವಿನ ಒಳಗೆ ಒಳಿತನ್ನು ಮಾತ್ರಾ ಬಿಡಬೇಕು.

ಕಯಾದು ಗರ್ಭಿಣಿಯಾಗಿದ್ದಾಗ ಒಂದಷ್ಟು ಒಳ್ಳೆಯದನ್ನು ಕೇಳಿದ್ದಳು, ಹಾಗಾಗಿ ಆ ಭಾವ ಅದು ಅಲ್ಲಿ ಹೆಮ್ಮರವಾಗಿ ಬೆಳೆದು ಹುಟ್ಟುವಾಗಲೇ ಆತ ಭಕ್ತಿಯನ್ನು ಮೈಗೂಡಿಸಿಕೊಂಡಿದ್ದ. ವಯಸ್ಸಿನಲ್ಲಿ ಚಿಕ್ಕವನಾದರೂ ಗುಣದಲ್ಲಿ ದೊಡ್ಡವನು, ಸುಳ್ಳು ಹೇಳುತ್ತಿರಲಿಲ್ಲ, ಹೇಳಿದ್ದನ್ನು ಸುಳ್ಳುಮಾಡುತ್ತಿರಲಿಲ್ಲ. ವಯೋವೃದ್ಧರನ್ನು, ಜ್ಞಾನವೃದ್ಧರನ್ನು ಗೌರವಿಸುತ್ತಿದ್ದನು. ಜಿತೇಂದ್ರಿಯನಾಗಿದ್ದನು, ಎಲ್ಲ ಜೀವಿಗಳಲ್ಲೂ ಕರುಣೆಉಳ್ಳವನು, ಕರಗುವ ಮನಸ್ಸು; ತಮ್ಮ ವಿಷಯದಲ್ಲಿ ಇದು ಇರುವುದು ಸಹಜ, ಬೇರೆಯವರಲ್ಲಿ ಅದು ಇರಲ್ಲ. ಸಂತರಿಗೂ ಸಾಮಾನ್ಯರಿಗೂ ಅದೇ ವ್ಯತ್ಯಾಸ. ಸಂತರಿಗೆ ಸ್ವಂತದವರಲ್ಲಿ ಹಾಗೂ ಬೇರೆಯವರಲ್ಲಿ ವ್ಯಯತ್ಯಾಸ ಇರುವುದಿಲ್ಲ. ಸಂಕುಚಿತ ಮನಸ್ಥಿತಿ ಇರಲಿಲ್ಲ, ಲೋಕಾ ಸಮಸ್ತಾ ಸುಖಿನೋ ಭವಂತು, ಹಿರಿಯವರನ್ನು ಕಂಡು ಸೇವಕನಂತೆ ವರ್ತಿಸುವವನು, ಗುರುಗಳನ್ನು ಕಂಡರೆ ದೇವರಂತೆ ಕಾಣುವನು, ಹೀಗೆ ಜನ್ಮದಿಂದ ಅಸುರನಾದರೂ ಕರ್ಮದಿಂದ ಅಲ್ಲ. ಹಾಗಾಗಿ ದೇವತೆಗಳು ಇನ್ನೂ ಇವನ ಎಳವೆಯಲ್ಲಿಯೇ ಇವನನ್ನು ಭಕ್ತೋತ್ತಮ ಅಂತ ಒಪ್ಪಿಕೊಂಡರು. ತಂದೆಗೆ ಮೊದಲು ಗೊತ್ತಾಗಲಿಲ್ಲ, ಆದರೆ ಆಕಾಲವೇನೂ ದೂರ ಇಲ್ಲ, ಸರಿ ವಿದ್ಯಾಭ್ಯಾಸಕ್ಕೆ ಗುರುಕುಲಕ್ಕೆ ಕಳಿಸಲಾಯಿತು. ಶುಕ್ರಾಚಾರ್ಯರ ಮಕ್ಕಳಾದ ಚಂಡಾಮರ್ಕರು ಅವನ ವಿದ್ಯಾಗುರುಗಳು ಅಲ್ಲಿ. ಯಾಕೆ ಕಳುಹಿಸಿದ ಅಂದರೆ ನನಗಿಂತ ಹೆಚ್ಚು ಕೆಡುಕನಾಗಿ ಕ್ರೂರಿಯಾಗಿ ಅವನೂ ತಯಾರಾಗಬೇಕು ಅಂತ. ಎಲ್ಲ ದುರ್ವಿದ್ಯೆಗಳನ್ನು ಕಲಿಯಬೇಕು ಅಂತ.

ಕೆಲವು ವಿದ್ಯಾಥಿಗಳಿರುತ್ತಾರೆ; ಉಪದೇಶ ಸ್ವೀಕಾರ ಮಾಡದಿರುವುದು, ಎಂದರೆ ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಹೊರಬಿಡುವುದು ಅಂತ, ಆದರೆ ಇವನು ಹಾಗೂ ಅಲ್ಲ, ವಿಷಯವನ್ನು ಕಿವಿಗೆ ಹಾಕಿಕೊಳ್ಳಲೂ ಇಲ್ಲ. ಸಾಮಾನ್ಯವಾಗಿ ವಾತಾವರಣ ಇದ್ದಾಗ ಗುಣವಾಗಲೀ ವಿದ್ಯೆಯಾಗಲೀ ಬೆಳೆಯುತ್ತದೆ, ಆದರೆ ಇಲ್ಲಿ ಅವನಿಗೆ ಯಾವುದೇ ಪೂರಕ ವಾತಾವರಣ ಇರಲಿಲ್ಲ, ಹರಿಭಕ್ತಿಗೆ ಅವಕಾಶವೇ ಇರಲಿಲ್ಲ. ಇದ್ಯಾವುದೂ ಅವನಿಗೆ ಲೆಕ್ಕಕ್ಕೇ ಬರಲಿಲ್ಲ. ಶಾಲೆಯ ವಾತಾವರಣ ಮನೆಯ ವಾತಾವರಣ ಎರಡೂ ಅವನನ್ನು ಬದಲಿಸಲಾಗಲಿಲ್ಲ. ವ್ಯಕ್ತಿತ್ವ ಗಟ್ಟಿಯಾಗಿದ್ದರೆ ಉಳಿದದ್ದು ಯಾವುದೂ ಗಣನೆಗೇ ಬರುವುದಿಲ್ಲ, ಅದು ಇಲ್ಲದಿದ್ದಾಗಲೇ ಇವರು ಹೇಳಿದ್ದು ಸ್ವಲ್ಪ, ಅವರು ಹೇಳಿದ್ದು ಸ್ವಲ್ಪ ಅಂತ ಆಗಿ ನಮ್ಮದು ಏನೂ ಉಳಿಯುವುದಿಲ್ಲ. ಇವನು ಅಂತಹವನಲ್ಲ, ಅತೀ ಗಟ್ಟಿ, ನೆಗೆಟಿವ್ ಆಗಿ ಹೇಳುವುದಾದರೆ ಎತ್ತಿಹಾಕಿದರೆ ಒಡೆಯಲ್ಲ, ಎಳೆದರೆ ಸವೆಯೋದಿಲ್ಲ, ಇಟ್ಟ ಹಾಗೇ ಇರುತ್ತಾರೆ. ಹೀಗೆ ಗುರುಗಳು ಏನೇ ಮಾಡಿದರೂ ಇವನನ್ನು ತಿದ್ದಲಾಗಲಿಲ್ಲ, ಈ ಅಧ್ಯಾಪಕರಿಗೆ ಸಮಸ್ಯೆಯಾಯಿತು, ನಿಮ್ಮ ಮಗ ಸರಿಯಾಗಿಲ್ಲ ಅಂತ ರಾಜನಿಗೆ ಹೇಳಬೇಕು, ಪಾಪ ಅವರ ಸ್ಥಿತಿ.

ಹಿರಣ್ಯಕಶಿಪುವಿಗೆ ಗೊತ್ತಾಯಿತು. ಸ್ವಲ್ಪ ಸಮಯದ ನಂತರ ಅವನನ್ನು ಕರೆದು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಪ್ರೀತಿಮಾಡಿ, ನೆತ್ತಿಯನ್ನು ಆಘ್ರಾಣಿಸಿ ಅವನು ಏನು ಕಲಿತಿದ್ದಾನೆ ಅಂತ ತಿಳಿಯಲು ಪ್ರಶ್ನೆಮಾಡಿದ (ಕಟುಕರಾದರೂ ಪರಜೀವಿಗಳಿಗೆ ತೊಂದರೆ ಕೊಡುವವರಾದರೂ, ತಮ್ಮ ಹೆಂಡತಿ ಮಕ್ಕಳು ಸಂಸಾರದ ವಿಷಯದಲ್ಲಿ ಹೀಗಿರುತ್ತಾರೆ ಹಲವರು, ಅವರ ಮೇಲೆ ಪ್ರೀತಿ ತೋರಿಸುವುದು ಮಾಡುತ್ತಾರೆ). ಮಗೂ ಪ್ರಪಂಚದಲ್ಲಿ ಯಾವುದು ಶ್ರೇಷ್ಠ ಎಂದು? ಮಗ ಹೇಳಿದ ಸರ್ವಾಶ್ರಯನಾದ ಹರಿಯೇ ಸರ್ವಶ್ರೇಷ್ಠ. ತಂದೆ ಗಹಗಹಿಸಿ ನಕ್ಕ, ಮನಸಿನಲ್ಲಿಯೇ ಅಂದುಕೊಂಡ; ಪಾಪ ಮಗೂ! ಯಾರೋ ಏನೋ ಹೇಳಿಕೊಟ್ಟಿರಬೇಕು, ಯಾರೋ ಬ್ರಾಹ್ಮಣರು ವೇಷಮರೆಸಿಕೊಂಡು ನಮ್ಮೊಳಗೆ ಸೇರಿರಬೇಕು, ಅವರೇ ನನ್ನ ಮಗನಿಗೆ ಏನೆಲ್ಲಾ ಹೇಳಿಕೊಟ್ಟಿದ್ದಾರೆ ಅಂತ. ಅಧ್ಯಾಪಕರನ್ನು ಕರೆದು ಹೇಳಿದ ಯಾರೋ ಬೇಡದ್ದನ್ನ ಹೇಳಿಕೊಟ್ಟಿದ್ದಾರೆ ಜಾಗ್ರತೆ, ಯಾರನ್ನೂ ಅವನೊಡನೆ ಸೇರಿಸಬೇಡಿ ಅಂತ. ಅವರಿಗೆ ಸದ್ಯಕ್ಕೆ ಸಮಾಧಾನ, ಅವನನ್ನೇ ಪುಸಲಾಯಿಸಿ ಕೇಳಿದರು ನಿನ್ನಲ್ಲಿ ಯಾರು ಈ ಹರಿಭಕ್ತಿಯ ಬೀಜವನ್ನು ಬಿತ್ತಿದವರು ಅಂದಾಗ, ಅವನು ನನಗೆ ಯಾರೂ ಹೇಳಿಕೊಡಲಿಲ್ಲ, ಇದು ನನ್ನ ಸಹಜ ಸ್ವಭಾವ, ನಾನು ಇರೋದೇ ಹೀಗೆ, ಅಂತ ಹೇಳಿ ಅವರಿಗೇ ಪಾಠ ಮಾಡಿದನಂತೆ ಶ್ರೀಹರಿಯೇ ಸರ್ವೋತ್ತಮ ಅಂತ. ಅವನಿಗಿಂತ ದೊಡ್ಡದು ಬೇರೆ ಯಾವುದೂ ಇಲ್ಲ ಅಂತ. ಏನೂ ಮಾಡಲು ತಿಳಿಯಲಿಲ್ಲ, ಸಾಮ, ದಾನ, ಭೇದ, ದಂಡ ಎಲ್ಲವನ್ನೂ ಪ್ರಯೋಗ ಮಾಡಿದರು. ಈಗಲೂ ಕೆಲವು ಶಾಲೆಗಳಲ್ಲಿ ಹೀಗೆ ಮಾಡಲಾಗುತ್ತದಂತೆ. ಏನು ಮಾಡಿದರೂ ಅವನು ಬದಲಾಗಲಿಲ್ಲ, ಆದರೆ ಇತರ ಮಕ್ಕಳಿಗೆ ತಾನೇ ಪಾಠಮಾಡಲು ತೊಡಗಿದ, ಹರಿಯೇ ಸರ್ವಶ್ರೇಷ್ಠ ಅಂತ. ಅವನು ಎಷ್ಟು ಚಂದಕ್ಕೆ ಹೇಳುತ್ತಿದ್ದನೆಂದರೆ ಗುರುಗಳ ಮಾತುಬಿಟ್ಟು ಇವನ ಮಾತೇ ಕೇಳಲು ಪ್ರಾರಂಭಿಸಿದರು. ಆಗ ಉಪಾಧ್ಯಾಯರಿಗೆ ತೊಂದರೆ ಆಯಿತು; ಆಗ ಅವನನ್ನು ತಾಯಿಯ ಬಳಿಗೆ ಕಳುಹಿಸಿಬಿಟ್ಟರು, ಬೇರೆಲ್ಲಾದರೂ ಕಳುಹಿಸಿ ಅಂತ.

ಸರಿ ಮನೆಗೆ ಬಂದ ಮಗನನ್ನು ತಂದೆ ಪ್ರೀತಿಯಿಂದ ಕೇಳಿದ; ಗುರುಗಳಿಂದ ಕಲಿತ ಯಾವುದಾದರೂ ಒಂದು ಒಳ್ಳೆಯ ವಿಷಯವನ್ನು ತಿಳಿಸು ಅಂತ. ಜಾಗ್ರತೆಯಿಂದ ಕೇಳಿದ ಈ ಬಾರಿ ಪ್ರಶ್ನೆಯನ್ನು. ಮಗನಿಗೆ ಅದೇ ಹರಿಯನ್ನು ಬಿಟ್ಟು ಬೇರೆ ಏನೂ ತಿಳಿದಿಲ್ಲ ಹಾಗಾಗಿ ನವವಿಧ ಭಕ್ತಿಯ ಪಾಠಮಾಡಿಬಿಟ್ಟ ತಂದೆಗೆ. ಯಾರ ವಿಷಯದಲ್ಲಿ ಈ ಭಕ್ತಿ ಎಂದರೆ ಅದೇ ವಿಷ್ಣುವಿನ ವಿಷಯದಲ್ಲಿ. ಶ್ರವಣ, ಕೀರ್ತನ, ಸ್ಮರಣ, ಪಾದವಂದನ, ಸಖ್ಯ, ಪೂಜೆ, ನಮಸ್ಕಾರ, ದಾಸ್ಯ. ಅತ್ಮನಿವೇದನೆ. ಎಷ್ಟುಸಾರಿ ನಮಗೆ ನೆನಪಾಗುತ್ತದೆ ದೇವರು ಅಂತ, ಕೇವಲ ಸಮಸ್ಯೆ ಬಂದಾಗ ಮಾತ್ರವೇ! ಆದರೆ ಏನೋ ಸಮಸ್ಯೆ ಇದೆ ಅಂತ, ಸಮಸ್ಯೆ ಬಂದಾಗಲೂ ಆಗದಿದ್ದರೆ ಏನೋ ಗಂಭೀರವಾಗಿದೆ ಅದಕ್ಕೆ ಚಿಕಿತ್ಸೆ ಕೂಡಾ ಕಷ್ಟ. ಅಧ್ಯಯನ ಅಂದರೆ ಇದೇ ಅಂತ ಮತ್ತೆ ಹೇಳಿದ, ಹೀಗೆ ವಿಷ್ಣುವಿನಲ್ಲಿ ನವವಿಧ ಭಕ್ತಿ ಇಟ್ಟರೆ ಅದೇ ಬೃಹತ್ ಫಲ ಅಂತ ಕಲಿತೆ. ಹಿರಣ್ಯಕಶಿಪುವಿಗೆ ಸಿಟ್ಟುಬಂತು ಉಪಾಧ್ಯಾಯರನ್ನು ಕರೆಸಿದ ಏನು ಹೇಳಿಕೊಟ್ಟಿದ್ದೀರಿ ಅಂತ. ಅವರ ಮೇಲೆಯೂ ಸಂಶಯ ಅವನಿಗೆ, ಆದರೆ ಉಪಾಧ್ಯಾಯರು ಹೇಳಿದರು ಅವನ ಬುದ್ಧಿಯೇ ಹೀಗೆ ಎಂದು. ಆದರೆ ಹಿರಣ್ಯಕಶಿಪು ಒಪ್ಪಲಿಲ್ಲ. ಪ್ರಹ್ಲಾದ ಮಧ್ಯೆ ಬಂದು ಮತ್ತೆ ಅದೇ ವಿಚಾರವಾಗಿ ಹೇಳಲು ಪ್ರಾರಂಭಮಾಡಿದ, ಈಗ ತಂದೆಗೆ ನಿಜವಾಗಿ ಸಿಟ್ಟುಬಂತು. ಕೋಪದ ಕೈಯಲ್ಲಿ ಬುದ್ಧಿಯನ್ನು ಕೊಟ್ಟ, ಇದರ ಪರಿಣಾಮವೆಂದರೆ ಮಗನನ್ನು ಕೊಂದೇಹಾಕಲು ಆಜ್ಞೆಮಾಡಿದ. ನಾನು ಮುಖ್ಯ, ನನ್ನೆಣಿಕೆಯಂತೆಯೇ ಎಲ್ಲವೂ ಅಗಬೇಕು ಅದಕ್ಕೆ ಅಡ್ಡಿಯಾದರೆ ಮಗನಾದರೂ ಸರಿಯೇ ತನ್ನ ಸಿದ್ಧಾಂತವನ್ನು ಒಪ್ಪದಿದ್ದರೆ ಅವನ ಅವಶ್ಯಕತೆ ಇಲ್ಲ ಅಂತ.

ಇದು ನಮ್ಮ ಸಂಸ್ಕೃತಿ ಅಲ್ಲ, ಎಲ್ಲ ಬೇರೆ ಬೇರೆ ದರ್ಶನಗಳೂ ಬೇರೆ ಬೇರೆ ವಿಚಾರಗಳನ್ನು ಪ್ರಸ್ತಾಪ ಮಾಡುತ್ತವೆ. ಎಲ್ಲಕ್ಕೂ ಇಲ್ಲಿ ಅವಕಾಶ ಇದೆ, ಯವುದನ್ನೂ ಕೀಳು ಮಾಡುವುದಿಲ್ಲ. ಯಾವುದಾದರೂ ಒಂದು ದಾರಿಯಲ್ಲಿ ಸಾಧನೆ ಮಾಡಿ ಗುರುವಿಟ್ಟು ಅಂತ ಹೇಳುತ್ತದೆ. ಇದು ಹಾಗಲ್ಲ, ಅದು ಅತಿರೇಕ. ಕ್ರೂರ ಸೇವಕರು ಪ್ರಹ್ಲಾದನನ್ನು ಕೊಲ್ಲುವ ಪ್ರಯತ್ನ ಮಾಡುತ್ತಾರೆ. ನೋಡಿ ತಲೆಗೆರೆದದ್ದು ಕಾಲಿಗೆ ಬರದಿದ್ದೀತೇ ಅಂತಾರಲ್ಲ ಹಾಗೆ. ಇದುವರೆಗೂ ಅವನು ಪ್ರಪಂಚವಿಡೀ ಮಾಡಿದ ಅನಾಚಾರ ಈಗ ಮನೆಯನ್ನೂ ತಲುಪಿದೆ, ಮಗನ ಮೇಲೇ ಪ್ರಯೋಗವಾಗಿದೆ, ಕೈಯಾರೆ ಮಾಡಿದಂತೆಯೇ ಇದು. ಬಗೆಬಗೆಯ ಅಸ್ತ್ರ ಶಸ್ತ್ರಗಳಿಂದ ಪ್ರಹರಿಸಿದರು, ಅದರೆ ಹೇಗೆ ಚಂಡಮರ್ಕರು ವಿವಿಧ ಬಗೆಯ ಪ್ರಯೋಗಗಳಿಂದ ಅವನ ಬುದ್ಧಿಯನ್ನು ಬದಲಿಸಲು ಪ್ರಯತ್ನಿಸಿದರೋ ಹಾಗೆಯೇ ಇವರೂ ಶರೀರವನ್ನು ನೋಯಿಸಲು ಎಣಿಸಿದರು. ಆದರೆ ಅವನಿಗೆ ಏನೂ ಮಾಡಲು ಆಗಲಿಲ್ಲ, ದೇಹಕ್ಕೂ, ಮನಸ್ಸಿಗೂ ಏನೂ ಆಗಲಿಲ್ಲ, ಅದೆಂತಹ ದೇಹವೂ? ಅದೆಂತಹ ಮನಸ್ಸೋ? ಅದು ಏನೂ ಆಗಲೇ ಇಲ್ಲ, ಅದು ಇದ್ದ ಹಾಗೇ ಇರುತ್ತದೆ. ಅವಿಚಲಿತ. ಅದನ್ನು ಯಾರೂ ಏನೂ ಮಾಡಲು ಸಾಧ್ಯವೇ ಇಲ್ಲ, ಅದು ಏನು ಅಂದರೆ ಅದು ನಂಬಿಕೆ. ಸಾಕ್ಷಾತ್ ಹರಿಯೇ ಬಂದು ಹೇಳಿದರೂ ಒಪ್ಪದ, ಬಿಡದ ನಂಬಿಕೆ ಅದು. ಹಾಗಾಗಿ ಎಂತಹ ಗದೆಯೋ, ಖಡ್ಗವೋ ಯಾವುದೂ ಅವನಿಗೆ ತಾಗಲಿಲ್ಲ. ನಂಬಿಕೆ ಅದು. ಆನೆಗಳಿಂದ ತುಳಿಸಿದರು, ವಿಷಸರ್ಪಗಳಿಂದ ಕಡಿಸಿದರು ಮಾಂತ್ರಿಕರಿಂದ ಅಭಿಚಾರ ಮಾಡಿಸಿದರು ಏನೇ ಮಾಡಿದರೂ ಅವನಿಗೆ ಯಾವುದೂ ತಾಕಲೇ ಇಲ್ಲ. ಪರ್ವತಶಿಖರದಿಂದ ಪ್ರಪಾತಕ್ಕೆ ತಳ್ಳಿಸಿದರು, ಊಟವನ್ನೇ ಕೊಡದೇ ಉಪವಾಸ ಮಾಡಿಸಿದರು, ಕೊರೆಯುವ ಮಂಜಿನ ಮೇಲೆ ಮಲಗಿಸಿದರು, ಉರಿಯುವ ಬೆಂಕಿಯಲ್ಲಿ ತಳ್ಳಿದರು. ಕೊನೆಗೆ ಮಹಾಸಾಗರದ ಮಧ್ಯೆ ಅವನನ್ನು ಬೀಳಿಸಿದರು, ಇಷ್ಟಾದರೂ ಅವನ ದೇಹದ ಮೇಲೆ ಒಂದು ಗೆರೆಯೂ ಬೀಳಲಿಲ್ಲ! ಮುಖದ ಮಂದಹಾಸ ಮಾಸಲಿಲ್ಲ, ಅವಮ ಹೆಸರಿಗೆ ಅನ್ವರ್ಥವಾಗಿ ತೋರಿಬಂದ! ಇದು ನಾವು ಕಲಿಯಲಿಕ್ಕೆ ಇರುವುದು.

ಅವನ ಅಪ್ಪ ಯಾಕೆ ಅವನಿಗೆ ಈ ಹೆಸರು ಇಟ್ಟನೋ, ಆಗ ಅದಕ್ಕೆ ಅರ್ಥ ಇರಲಿಲ್ಲ, ಆದರೆ ಇವನ ಅಚರಣೆಯಿಂದ ಅದಕ್ಕೆ ಅರ್ಥ ಬಂತು. ಅಪ್ಪ ತನ್ನ ಮೇಲೆ ಅನರ್ಥಗಳನ್ನು ಮಾಡಿದಂತೆ ಅವನ ಹೆಸರಿಗೆ ಅರ್ಥ ಬಂತು. ಪ್ರಹ್ಲಾದ ಎಂದರೆ ಅತಿಶಯವಾದ ಆನಂದ ಅಂತ, ಅವನು ಹರಿಸ್ಮರಣೆಯಲ್ಲಿ ಎಂದಿಗೂ ಆನಂದವಾಗಿ ಇರುತ್ತಿದ್ದನಾದ್ದರಿಂದ, ಹರಿಭಜನೆಯ ಭಾವ ಇವನನ್ನು ಒಂದಿನಿತೂ ವಿಚಲಿತನನ್ನಾಗಿಸಲಿಲ್ಲ. ಅವನ ನಗು ಮಾಸಲಿಲ್ಲ. ಇದನ್ನು ನಾವು ಕಲಿಯಬೇಕು, ನಗುನಗುತ್ತಾ ಕಷ್ಟಗಳನ್ನು ಸ್ವೀಕರಿಸಬೇಕು, ಎಲ್ಲವನ್ನೂ ನಗುತ್ತಾ ಸಂತೋಷದಲ್ಲಿ ಸ್ವೀಕರಿಸಬೇಕು, ನಗುವನ್ನೇ ಚೆಲ್ಲಬೇಕು. ಆಗ ಕಷ್ಟಗಳು ಕರಗುತ್ತವೆ, ಕರಗದಿದ್ದರೂ ಅದರ ಒತ್ತಡ ಕಡಿಮೆಯಾಗುತ್ತದೆ. ನಮ್ಮಷ್ಟಕ್ಕೆ ನಾವು ಸಂತೋಷದಲ್ಲಿರಬೇಕು. ಪ್ರಹ್ಲಾದನ ಮೇಲೆ ಆದದ್ದು ಎಂಥಾ ದೌರ್ಜನ್ಯ ನೋಡಿ! ನಮ್ಮದು ಯಾವುದಾದರೂ ಸಣ್ಣದು ಇರುತ್ತದೆ, ಅದಕ್ಕೇ ನಾವು ಅಳುತ್ತೇವೆ. ಕಂಗಾಲಾಗಿರುತ್ತೇವೆ, ಹೆದರುತ್ತೇವೆ. ನಾವು ಸಹಜವಾಗಿ ಇರಬೇಕು; ಆಗ ಸಹಜ ಶಕ್ತಿ ಇರುತ್ತದೆ. ವೈಕುಂಠದ ಭಕ್ತನಿಗೆ ಏನೂ ಆಗಲಿಲ್ಲ. ಶುಕ್ರರಿಗೆ ಕರುಣೆ ಬಂತಂತೆ, ಒಂದು ಕೆಲಸ ಮಾಡು, ವರುಣಪಾಶದಿಂದ ಅವನನ್ನು ಬಂಧಿಸು ಕಟ್ಟಿರುವಾಗಲೂ ಪಾಠಮಾಡೋಣ ಅಂತ. ಆಗ ಸುಮ್ಮನಿದ್ದ ಏನೂ ಮಾತಾಡದೇ, ನಂತರ ಅವರು ಆ ಕಡೆ ಹೋದಾಗ ಮತ್ತೆ ಹಳೇ ವಿಷಯ ಮುಂದುವರೆಸಿದ ಸಿಕ್ಕಿದವರಿಗೆ ಉಪದೇಶ ಕೊಡತೊಡಗಿದ, ಅವನಿಂದ ಉಪದೇಶ ಪಡೆದವರೆಲ್ಲರೂ ಉದ್ಧಾರವಾಗಿ ಹೋದರು, ನಂತರ ಸಿಟ್ಟು ಅತಿರೇಕದೆಡೆಗೆ ಹೋಯಿತು. ಬಾಯಿಗೆ ಬಂದಂತೆ ಬಯ್ದು, ಹೊಡೆದು ಎಳೆದು ಏನೆಲ್ಲಾ ಮಾಡಿದರೂ ಅವನ ಮನಸ್ಥಿತಿ ಬದಲಾಗಲಿಲ್ಲ, ಆದರೆ ಮತ್ತೆ ಅಪ್ಪನಿಗೇ ಹೇಳತೊಡಗಿದ! ಇಲ್ಲ ಅಪ್ಪ ನೀನು ಸರಿಯಲ್ಲ, ನಾನು ಮಾಡಿದ್ದು ಇದು ಸರಿಯಿದೆ, ಹರಿಯಲ್ಲದೇ ಅನ್ಯ ಮಾರ್ಗವಿಲ್ಲ ಅಂತ. ಇಬ್ಬರಿಗೂ ಹಠ, ಅಪ್ಪನದು ಕೆಟ್ಟ ಹಠವಾದರೆ ಮಗನದು ಒಳ್ಳೆಯ ಹಠ. ಹಿರಣ್ಯಕಶಿಪು ತನ್ನ ಸಿದ್ಧಾಂತದಲ್ಲಿ ಗಟ್ಟಿ ಅದರೆ ಅವನಿಗೆ ಪರೀಕ್ಷೆ ಆಗಲೇ ಇಲ್ಲ. ಪ್ರಹ್ಲಾದನಿಗೆ ಆದ ಪರೀಕ್ಷೆ ಇನ್ಯಾರಿಗೆ ಆಗಿದೆ ಹೇಳಿ. ಹೀಗೆ ಅನುಪಮವಾದ ಹರಿಭಕ್ತಿಯನ್ನು ತೋರ್ಪಡಿಸಿದ ಪ್ರಹ್ಲಾದ ಭಕ್ತಾಗ್ರೇಸರ ಎನಿಸಿದ, ತಂದೆ ಗದರಿಸಿದ ಯಾವ ಬಲ ನಿನ್ನದು ಹೇಳು ಯಾವುದನ್ನು ಆಶ್ರಯಿಸಿ ನೀನು ನನ್ನನ್ನೆದುರಿಸಿ ನಿಂತಿದ್ಧೀಯೆ ಹೇಳು ಅಂತ. ಆಗ ಪ್ರಹ್ಲಾದ ಹೇಳಿದ ಗುಟ್ಟೇನಿದೆ ಅಲ್ಲಿ; ನನ್ನದ್ಯಾವ ಬಲವೋ ನಿನ್ನದೂ ಅದೇ ಬಲ, ಎಲ್ಲರದ್ದೂ ಅದೇ, ಯಾವುದು ಎಂದರೆ ಅದೇ ಹರಿಯದ್ದು.

ರಾಕ್ಷಸರ ಮುಖ್ಯ ವಿಷಯವೇ ಅಹಂಕಾರ. ನೋಡಿ ಅದನ್ನು ಜಾಗ್ರತೆ ಮಾಡಿ, ನೋಡೋಕೆ ನಾವೆಷ್ಟೇ ಚಂದ ಇದ್ದರೂ ನಮ್ಮಲ್ಲಿ ಈ ಅಹಂಕಾರ ಮೊಳೆತುಬಿಟ್ಟರೆ ನಾವು ರಾಕ್ಷಸರಾಗಿಬಿಡುತ್ತೇವೆ. ಅಹಂಕಾರದ ವಿಕೃತಿಗೆ ಎಂದಿಗೂ ಅವಕಾಶ ಕೊಡಬೇಡಿ, ಇಲ್ಲಿ ತಂದೆಯ ಅಹಂಕಾರವನ್ನು ಮೆಟ್ಟಿಬಿಟ್ಟಿದ್ದಾನೆ. ಸಿಟ್ಟಿನಿಂದ ಕೇಳಿದ ಎಲ್ಲಿದ್ದಾನೆ ಆ ನಿನ್ನ ಹರಿ ತೋರಿಸು? ಮೊದಲು ಅವನನ್ನು ಮುಗಿಸಿ ನಂತರ ನಿನ್ನನ್ನು ಮುಗಿಸುತ್ತೇನೆ. ಅಲ್ಲಿಗೆ ಸಮಸ್ಯೆ ಮುಗಿಯುತ್ತೆ ಅಂತ. ಮತ್ತೆ ನಕ್ಕ ಪ್ರಹ್ಲಾದ ಹೇಳಿದ, ಹಾಗೇಕೆ ಕೇಳುತ್ತೀಯೆ ಅವನು ಇರದ ಜಗವೆಲ್ಲಿದೆ? ಎಲ್ಲೆಲ್ಲಿಯೂ ಇದ್ದಾನೆ ಅಂತ. ಸಿಟ್ಟಿನಿಂದ ಕುದಿದ ಹಿರಣ್ಯಕಶಿಪು ಸಿಂಹಾಸನದಿಂದ ಜಿಗಿದು ಮಗನ ಕೈಹಿಡಿದು ಎಳೆದು ಕೈನಲ್ಲಿರುವ ಕತ್ತಿಯಿಂದ ಹತ್ತಿರದ ಕಂಬವೊಂದನ್ನು ಘಟ್ಟಿಸಿ ಕೇಳುತ್ತಾನೆ ಇಲ್ಲಿದ್ದಾನೆಯೇ ಅವನು? ಅಂತ. ಅದು ಅವನದೇ ಆಸ್ಥಾನದ ಕಂಬ. ಆಗ ಅಲ್ಲಿ ಅದ್ಭುತವಾದ ಮಹಾನಾದವೊಂದು ಕೇಳಿಬಂತು. ಸಿಂಹನಾದ ಬ್ರಹ್ಮಾಂಡಭಾಂಡವೇ ಒಡೆದಂತಹ ಶಬ್ದ. ಬ್ರಹ್ಮಾದಿಗಳಿಗೂ ಅವರವರ ಲೋಕದಲ್ಲಿ ನಿನಾದಿಸಿತಂತೆ. ದೈತ್ಯಸೇನಾಪತಿಗಳು ಗಡಗಡನೆ ನಡುಗಿದ್ದಾರೆ. ಹಿರಣ್ಯಕಶಿಪುವಿಗೆ ಆ ನಾದ ಕೇಳಿದೆ ಆದರೆ ಕಣ್ಣಿಗೆ ಏನೂ ಕಾಣುತ್ತಿಲ್ಲ. ಹರಿ ಪ್ರಕಟವಾಗುವ ಕಾಲ ಹತ್ತಿರವಿದೆ ಶಿಶುವಿನ ಮೇಲೆ ಕೈಮಾಡುತ್ತಿರುವ ತಂದೆಯನ್ನು ವಿರೋಧಿಸಲು ಬಂದೇ ಬರುತ್ತಾನೆ ಭಗವಂತ. ಯಾಕೆಂದರೆ ಅವನು ಭಕ್ತನ ಮಾತಿಗೆ ಬದ್ಧ ಭಗವಂತ, ತಾನು ಸುಳ್ಳಾದರೂ ತನ್ನ ಭಕ್ತ ಸುಳ್ಳಾಗಬಾರದು! ಇಲ್ಲದಿದ್ದರೆ ಹಿರಣ್ಯಕಶಿಪುವಿನ ಮಾತೇ ಸತ್ಯವಾಗಿಬಿಡಬಹುದು, ತನ್ನ ಭಕ್ತನ ಮಾತನ್ನು ಸತ್ಯ ಮಾಡುವಂತೆ ಪ್ರಕಟಗೊಂಡ ಭಗವಂತ. ೨ ಕಾರಣ; ತನ್ನ ಅಸ್ಥಿತ್ವ ಎಲ್ಲೆಡೆ ಇದೆ ಎಂಬುದನ್ನು ತೋರ್ಪಡಿಸಲು ಹಾಗೂ ತನ್ನ ಇಬ್ಬರು ಶಿಷ್ಯರ(ವರ ಕೊಟ್ಟ ಬ್ರಹ್ಮ ಹಾಗೂ ನಂಬಿದ ಪ್ರಹ್ಲಾದನ) ಮಾತನ್ನು ಕಾಪಾಡಲು ಅವತರಿಸಿದ ಭಗವಂತ! ಕಂಡೂ ಕಾಣದ ಅದ್ಭುತರೂಪವನ್ನು ಧಾರಣೆಮಾಡಿ ನೃಸಿಂಹ ರೂಪದಲ್ಲಿ ಪ್ರಕಟವಾದನು ಭಗವಂತ.

ಪ್ರಹ್ಲಾದ ಭಾವ ನಿಮ್ಮನ್ನು ಆವರಿಸಲಿ. ಭಕ್ತಿಯಿಂದ ಸ್ಮರಣೆ ಮಾಡಿ, ನಂಬಿಕೆಯನ್ನು ನಾವಿಟ್ಟರೆ ಅವನು ಅದನ್ನು ಹೇಗೆ ಉಳಿಸುತ್ತಾನೆ ಅನ್ನುವುದಕ್ಕೆ ಇದು ನಿದರ್ಶನ. ತನ್ನ ಭಕ್ತನ ಮಾತು ಉಳಿಯಬೇಕು, ಮರ್ಯಾದೆ ಉಳಿಯಬೇಕು ಅಂತ ಅವನ ಮಾತು ಉಳಿಸಲು ಹುಟ್ಟಿಬಂದ ಭಗವಂತ. ಹಿರಣ್ಯಕಶಿಪುವಿಗೆ ಅಶ್ಚರ್ಯವಾಯಿತು, ಇದೇನು ನರಸಿಂಹರೂಪ ಅಂತ. ಚಿನ್ನವನ್ನು ರಾಶಿಹಾಕಿದಂತಿತ್ತು ರೂಪ, ಮುಗಿಲು ಮುಟ್ಟಿದ ಬೆಂಕಿಯ ಜ್ವಾಲೆಯಂತೆ ಬಂಗಾರದ ಬಣ್ಣದ ಆ ರೂಪ ಕಲ್ಪನೆಗೂ ಮೀರಿದ್ದು, ಕೆಲವು ಕ್ಷಣಗಳ ಕಾಲ ದೈತ್ಯನೊಡನೆ ಯುದ್ಧದ ಆಟವಾಡಿ, ತೆಗೆದು ತನ್ನ ಮಡಿಲಲ್ಲಿ ಇಟ್ಟುಕೊಂಡು ಮುಕ್ತಿಕೊಟ್ಟನಂತೆ ಭಗವಂತ. ಭಗವಂತನಿಗೆ ನಿಜಕ್ಕೂ ವೈರಭಾವ ಇದ್ದಿದ್ದರೆ ಅವನಲ್ಲಿ ಮಡಿಲಲ್ಲಿ ಯಾಕೆ ಮಲಗಿಸಿಕೊಳ್ಳುತ್ತಿದ್ದ. ಮಡಿಲು ಶಿಶುಭಾವಕ್ಕೆ ಮಾತ್ರ, ಅಷ್ಟು ಭಯಂಕರ, ಉಗ್ರನಾಗಿ ಕಂಡರೂ ತಾಯ್ತನ ನೆನಪಾಗಿತ್ತು. ಅದು ವರಕ್ಕೂ ಅನ್ವಯವಾಗುತ್ತದೆ, ಸಂಧ್ಯಾಕಾಲ ಅದು. ಎಂತಹ ವರ ತೆಗೆದುಕೊಂಡರೂ ಒಂದು ದಾರಿ ಇರುತ್ತದೆ. ಬ್ರಹ್ಮನ ವರಕ್ಕೆ ಹೊಂದುವಂತೆ ಬಂದಿದ್ದಾನೆ. ಎಷ್ಟು ಕಷ್ಟ ನೋಡಿ ಅವನಿಗೆ, ಹೃದಯವನ್ನು ಸೀಳುತ್ತಾನೆ. ಹೃದಯ ಗ್ರಂಥಿಗಳು ಗಂಟಾದರೆ ಪರಮಾತ್ಮದರ್ಶನವಾಗುವುದಿಲ್ಲ, ಅದನ್ನು ಬಿಡಿಸುತ್ತಾನೆ, ಹೀಗೆ ಇಬ್ಬರಿಗೂ ಮುಕ್ತಿ ನೀಡುತ್ತಾನೆ, ಮೊದಲು ಹಿರಣ್ಯಕಶಿಪುವಿಗೆ ನಂತರ ಪ್ರಹ್ಲಾದನಿಗೆ ಜೀವನ್ಮುಕ್ತಿ. ಬಳಿಕ ಅದೇ ಸಿಂಹಾಸನದಲ್ಲಿ ನೃಸಿಂಹ ಕೂರುತ್ತಾನೆ, ಏಕೆಂದರೆ ಪ್ರಹ್ಲಾದನಿಗೆ ಬಿಟ್ಟುಕೊಡುವ ಸಿಂಹಾಸನ ತಾನು ಕುಳಿತಿದ್ದಾಗಿರಬೇಕು ಅಂತ. ಹಿರಿಯಮಕ್ಕಳು ಇದ್ದರೂ ಜ್ಞಾನದಿಂದ ಹಿರಿಯನಾದವನಿಗೆ ಪಟ್ಟಕಟ್ಟುವ ಪರಂಪರೆ ಇದೆ ನಮ್ಮಲ್ಲಿ. ನಂತರ ಪ್ರಹ್ಲಾದ ನರಸಿಂಹನನ್ನು ಸ್ತುತಿಮಾಡಿ ಸಮಾಧಾನಗೊಳಿಸಿದ. ಬ್ರಹ್ಮನೆಡೆಗೆ ತಿರುಗಿ ಹೇಳಿದ ಇನ್ನು ಮುಂದೆ ಇಂತಹ ವರಕೊಡಬೇಡ. ಹೀಗಾಗಿ ದೈತ್ಯೇಶ್ವರನಾಗಿ ಒಬ್ಬ ದೇವತಾ ಮನುಷ್ಯ ಪ್ರತಿಷ್ಠಿತನಾದ. ದೇವರಲ್ಲೂ ಅಂತಹವರಿಲ್ಲವೇನೋ? ಆಕಾಲ ಅದು ಕೃತಯುಗ, ಹೀಗೇ ಇನ್ನೊಮ್ಮೆ ಅಗಿದೆ ಅದು ತ್ರೇತೆಯಲ್ಲಿ. ಲಂಕೆಯಲ್ಲಿ ವಿಭೀಷಣನಲ್ಲಿ ರಾಮರಾಜ್ಯ ಬಂದಾಗ, ಲಂಕೆಯಲ್ಲೂ ರಾಮರಾಜ್ಯವೇ ಮರಳಿ ಬಂದಾಗ. ಆ ಸಂದರ್ಭಕ್ಕೆ ಕೃತಯುಗವೇ ಮರಳಿಬಂದಿತು ಅಂತ.

ಈ ಅವತಾರದ ವಿಶಿಷ್ಠವೇ ಅದು. ಭಕ್ತಭಾಷಿತವು ಮಿಥ್ಯೆಯಾಗಬಾರದು! ನಿನ್ನ ನಾಲಿಗೆಯು ನನ್ನಾಲಿಗೆ ನಿನ್ನ ಮಾತು ನನ್ನ ಮಾತು ಅಂತ ನಿಶ್ಚಯಕ್ಕೆ ಸುಳ್ಳಾಗಬಾರದು, ನೀನೇ ನಾನು ನಾನೇ ನೀನು, ನಮ್ಮಿಬ್ಬರಲ್ಲಿ ಭೇದವಿಲ್ಲ ಅಂತ. ಭಕ್ತಿ ವಿಜಯ, ಭಕ್ತಿ ಸರ್ವೋತ್ಕರ್ಷ. ಅದರೆಡೆಗೆ ಸಾಗೋಣ.

ಚಿತ್ರ:ಅಂತರ್ಜಾಲದಿಂದ

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments Box