#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
23-09-2018:

ಪರಶುರಾಮಾವತಾರ

ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ| ನಿನಗೆ ಕರ್ಮದಲ್ಲಷ್ಟೇ ಅಧಿಕಾರ ಫಲದಲ್ಲಲ್ಲ. ಫಲದಲ್ಲಿ ಅಧಿಕಾರ ನನಗೆ, ಇದು ಭಗವಂತನ ವಾಣಿ, ಹೀಗೆ ಅವರವರ ಕಮ೯ಕ್ಕನುಸಾರವಾಗಿ ಫಲವೀಯುವ ಶ್ರೀಕೃಷ್ಣನಿಗೆ ನಮಿಸಿ, ಈ ಆರನೆಯ ಅವತಾರ, ಪರಶುರಾಮಾವತಾರದ ವರ್ಣನೆಗೆ ಅಡಿ ಇಡೋಣ.

ಶಂಕರರ ಪ್ರಕಾರ: ಹತರಾಗಿ ಧರೆಗುಳಿದ ಕ್ಷತ್ರಿಯರ ರಕ್ತ ಕಾಲುವೆಯಾಗಿ ಧರೆಯಲ್ಲಿ ಹರಿದಿದೆ, ಅದನ್ನು ಕುಡಿದು ಮತ್ತರಾಗಿ ನರ್ತಿಸುವ ಪಿಶಾಚಿಗಳು ಯಾರನ್ನು ಸ್ತುತಿ ಮಾಡುತ್ತಾರೋ ಅಂತಹ ದೇವ ಅವನು ಎಂಬುದಾಗಿದೆ. ಅಂತವರಿಂದ ಸ್ತುತಿಸಲ್ಪಟ್ಟವನು ಎಂದು. ಪಿಶಾಚಿಗಳಿಂದ ಸಾಮಾನ್ಯವಾಗಿ ಸ್ತುತಿಸಲ್ಪಡುವವರು ರಾಕ್ಷಸರು, ಸಹಚಾರಿಗಳಾದ್ದರಿಂದ, ಆದರೆ ಇವನು ಸ್ತುತಿಸಲ್ಪಡುತ್ತಿದ್ದಾನೆ. ಹತರಾದವರು ಯಾರೂ ಒಳ್ಳೆಯವರಲ್ಲ. ಅವರು ದುಷ್ಟರು. ಅವರೆಂದರೆ ದೇಹದ ಕೆಟ್ಟರಕ್ತ ಇದ್ದಂತೆ. ಕೆಟ್ಟರಕ್ತ ದೇಹದಿಂದ ಹೊರಹೋಗಲೇ ಬೇಕಲ್ಲವೇ? ಅದು ಹೋದರೆ ಯಾರಾದರೂ ಬೇಸರ ಮಾಡಿಕೊಳ್ಳುತ್ತಾರೆಯೇ? ಆ ರಕ್ತ ಇದ್ದಿದ್ದರೆ ಇಡೀ ಪ್ರಪಂಚವೇ ಹಾಳಾಗುತ್ತಿತ್ತು. ಅದನ್ನು ವೈದ್ಯರಾದವರು ತೆಗೆದರೆ ಅವರ ಮೇಲೆ ಯಾರಾದರೂ ಕೋಪ ಮಾಡಿಕೊಳ್ಳುತ್ತಾರೆಯೇ? ಆ ರಕ್ತ ಹೋಗಬೇಕಿತ್ತು. ಹೊಟ್ಟೆಗೆ ಚೂರಿ ಹಾಕುವ ಕೆಲಸವನ್ನು ವೈದ್ಯರೂ ಮಾಡುತ್ತಾರೆ, ಡಾಕುಗಳೂ ಮಾಡುತ್ತಾನೆ. ಆದರೆ ವೈದ್ಯರಿಗೆ ಯಾರೂ ಬೈಯಲ್ಲ, ಏಕೆಂದರೆ ಉದ್ದೇಶ ಒಳ್ಳೆಯದಿದೆ ಅಂತ. ಹೀಗೇ ಪರಶುರಾಮ ಕೇವಲ ರಕ್ತ ಹರಿಸಿದ್ದಷ್ಟೇ ಅಲ್ಲ, ಶ್ಯಮಂತಪಂಚಕವೆಂಬ ಐದು ಕೊಳಗಳನ್ನು ಅದೇ ರಕ್ತದಿಂದಲೇ ತುಂಬಿಸಿದನಂತೆ. ಹಾಗಾಗಿ ಪಿಶಾಚರು ಸ್ತುತಿ ಮಾಡಿದ್ದು. ನರ್ತಿಸುತ್ತ ಅವನ ಹಿರಿಮೆಯನ್ನು ಹಾಡಿದರು.

ತತ್ತ್ವಭಾಗವತಮ್

ಎಂಥವನು ಅವನು ಅಷ್ಟು ನೀಚನೇ, ಪಿಶಾಚರಿಗೆ ಪ್ರಿಯವಾಗುವಷ್ಟು? ಅಂದರೆ ಅಲ್ಲ, ಆತ ಇಡೀ ಭೂಮಿಯನ್ನೇ ತಪಸ್ವಿಗಳ ಅಗ್ರಹಾರವನ್ನಾಗಿ ಮಾಡಿಬಿಟ್ಟ, ಅಂಥ ಒಳ್ಳೆಯವ. ಅವನು ಇಲ್ಲದಿದ್ದರೆ ಭೂಮಿಯಿಡೀ ಇಂತಹವರಿಂದಲೇ ತುಂಬಿರುತ್ತಿತ್ತು. ರಾಮರಾಜ್ಯ ಉದಯವಾಗಬೇಕಿದ್ದರೆ ರಾವಣನ ವಧ ಆಗಲೇಬೇಕು. ರಾಮಾಯಣದ ಯುದ್ಧ ಕಾಂಡದಲ್ಲಿನ ವರ್ಣನೆ ನೋಡಿದರೆ ಅಲ್ಲಿಯೂ ಹೀಗೇ ಬರುತ್ತದೆ, ರಕ್ತದ ಕಾಲುವೆ ಹರಿದವು, ಶವಗಳು ತೇಲಿದವು ಎಂದು. ಹೀಗಾಗಬೇಕಾಗುತ್ತದೆ. ಶಾಂತಿ ಎಂದರೆ ಯುದ್ಧ ಮುಗಿದ ನಂತರದ ಸ್ಥಿತಿ ಅದು, ಎರಡು ಯುದ್ಧಗಳ ನಡುವಿನ ಸ್ಥಿತಿ ಎಂದೂ ಹೇಳಬಹುದು. ಯುದ್ಧವಿಲ್ಲದೆ ಶಾಂತಿಯಿಲ್ಲ; ಹಾಗಿದ್ದರೆ ಸಾವಿನಲ್ಲಿ ಮಾತ್ರ. ಆಂತರ್ಯದಲ್ಲಿ ಶಾಂತಿ ಬರಬೇಕಾದರೂ ಹಾಗೆಯೇ; ಸಾಧನೆಯಿಂದ ಬರಬೇಕು. ಅಲ್ಲಿಯೂ ಅಂತಃಶತ್ರುಗಳನ್ನು ಸೋಲಿಸಿಯೇ ಬರಬೇಕು; ಸುಲಭದ್ದಲ್ಲ ಆ ಸಂಘರ್ಷ. ಧರೆಯ ಚರಿತ್ರೆಯಲ್ಲಿಯೇ ಈ ಮಹಾನುಭಾವ ಮಾಡಿದ ಸಂಗ್ರಾಮವನ್ನು ಯಾರೂ ಮಾಡಿಲ್ಲ. ಅವನದ್ದು ಏಕಾಕಿ ಹೋರಾಟ. ಇವತ್ತು ನಮ್ಮಗಳ ಸ್ಥಿತಿಯೂ ಇವನಂತೆ ಆಗಬೇಕಿದೆ, ಇಲ್ಲದಿದ್ದರೆ ಉಳಿಗಾಲವಿಲ್ಲ; ಪ್ರತಿಭಟಿಸದಿದ್ದರೆ ನಮ್ಮನ್ನು ಕುಳಿತಲ್ಲಿಯೇ ನಾಶ ಮಾಡಬಹುದು, ನಿಂತಲ್ಲಿಯೇ ನಾಶ ಮಾಡಬಲ್ಲರು, ಹಾಗಾಗಿ ನಾವೂ ಕ್ಷಾತ್ರವನ್ನು ಜಾಗೃತಗೊಳಿಸಬೇಕಿದೆ.

ಸಂದರ್ಭ ಬಂದಾಗ ಜನಿವಾರ ತೊಟ್ಟವನೂ ಯುದ್ಧವನ್ನು ಮಾಡಬೇಕಾಗುತ್ತದೆ. ತಪಸ್ವಿಯಾದರೂ ಯುದ್ಧ ಮಾಡಬೇಕಾಗುತ್ತದೆ. ಜಗತ್ತು ಸುಮ್ಮನಿರಲು ಬಿಡಲ್ಲ. ಇದನ್ನು ಪರಶುರಾಮ ಆಗಲೇ ತಿಳಿಸಿಕೊಟ್ಟಿದ್ದಾನೆ. ಮಧುಸೂದನಾನಂದ ಸರಸ್ವತಿಗಳ ಬಗ್ಗೆ ಹೇಳಲೇ ಬೇಕು. ಮೊಘಲರ ಆಳ್ವಿಕೆಯಲ್ಲಿ ಅವರು ಕಾಶಿಯಲ್ಲಿ ವಾಸವಾಗಿದ್ದರು. ಅದ್ವೈತ ಸಿದ್ಧಿ ಅನ್ನುವಂಥ ವೇದಾಂತ ಗ್ರಂಥವನ್ನು ರಚಿಸಿದ್ದಾರೆ, ಇಡೀ ವೇದಾಂತ ಪ್ರಕ್ರಿಯೆಯನ್ನು ಹೇಳುತ್ತದೆ ಇದು. ಒಂದು ಅತ್ಯುತ್ತಮ ಗ್ರಂಥ ಅದು ವೇದಾಂತದ ವಿಚಾರಗಳಿಗೆ. ಅವರು ಸಂನ್ಯಾಸಿಗಳನ್ನು ಸೇರಿಸಿ ಅವರಿಗೆ ಮಲ್ಲಯುದ್ಧವನ್ನು ಕಲಿಸಿದರು ಯಾಕೆಂದರೆ, ಆ ಕಾಲದಲ್ಲಿ ಸಂನ್ಯಾಸಿಗಳನ್ನು ಹುಡುಕಿ, ಹುಡುಕಿ ಕೊಲ್ಲುತ್ತಿದ್ದರಂತೆ. ಯಾವ ಕಾಲದ ಕಥೆಯಾದರೂ ಇದೇ, ಒಳ್ಳೆಯದನ್ನು ಮಾಡುವವರಿಗೆ ಪ್ರಪಂಚ ಅವಕಾಶ ಕೊಡುವುದಿಲ್ಲ. ಆದರೆ ಆಗ ತುಂಬಾ ಸಂಕಟ ಇತ್ತು. ಒಬ್ಬ ಸಂತ, ಸಂನ್ಯಾಸಿ ಅಂದರೆ ಸಾವಿರಾರು ಜನರನ್ನು ಸಂಘಟನೆ ಮಾಡುತ್ತಾನೆ, ಧರ್ಮ ಹಾಳಾಗದಂತೆ ತಡೆಯುತ್ತಾನೆ ಅನ್ನುವ ಕಾರಣಕ್ಕೆ ವಿಧರ್ಮೀಯರು ಅವರಿಗೆ ತೊಂದರೆ ಕೊಡುತ್ತಿದ್ದರು. ಇಂತವರಿಗೆ, ಆಚಾರ್ಯ ಚಾಣಕ್ಯನಂತಹವರಿಗೆಲ್ಲ ಪ್ರವರ್ತಕ ಈ ಮಹಾನುಭಾವ, ರಾಮನಾದರೂ ಸ್ವಲ್ಪ ಸೌಮ್ಯನೇ, ಸ್ವಲ್ಪ ಏನು? ಪೂರ್ಣ ಸೌಮ್ಯ! ರಾಮನದ್ದು ಮಾತೂ ಮಿತ; ಗಹಗಹಿಸಿ ನಗುವಿಲ್ಲ, ಸಾಮಾನ್ಯವಾಗಿ ತುಟಿಯಂಚಿನಲ್ಲಿ ಕಂಡೂ ಕಾಣದಂತಹ ನಗು, ಸ್ವಭಾವವೂ ವಿಶೇಷ ಮೃದು.

ಆದರೆ ಈ ರಾಮ ಹೀಗಲ್ಲ. ಇಲ್ಲಿ ಎಲ್ಲ ಕ್ರೋಧ, ಎಲ್ಲ ರೋಷ! ದೇವರಿಗೆ ಕೋಪ, ರೋಷ! ನಾವು ಪೂಜಿಸುವ ಎಲ್ಲ ವಿಗ್ರಹಗಳು ಮಂದಸ್ಮಿತರಿಂದ ಇರುತ್ತದೆ, ಜೈನ ಮೂರ್ತಿಗಳು ಕೂಡಾ, ಆದರೆ ಎಲ್ಲಿಯಾದರೂ ಪರಶುರಾಮನ ಒಂದು ಮಂದಸ್ಮಿತ ಮೂರ್ತಿ ತೋರಿಸಿ ನೋಡೋಣ. ಅವನ ಇಡೀ ಚರಿತ್ರೆ ನೋಡಿ ಎಲ್ಲಿಯಾದರೂ ಅಂಥದ್ದಿದೆಯಾ? ಅವನು ಬಂದರೆ ಭೂಕಂಪ, ಘರ್ಜಿಸಿದರೆ ಗುಡುಗು, ಪರಶು ಎತ್ತಿದರೆ ಸಿಡಿಲು. ಆಳುವವನು ಅಳಿಸುವವನಾದರೆ? ಅಳಿಸುವುದು ಎನ್ನುವದಕ್ಕೆ ರೋದನ, ನಾಶ ಮಾಡುವುದು ಎಂದು ಎರಡೂ ಅರ್ಥ ಇದೆ. ಅರಸನು ಪ್ರಜೆಗಳ ಆಸ್ತಿಪಾಸ್ತಿ, ಧಮ೯, ಮರ್ಯಾದೆ ಎಲ್ಲವನ್ನೂ ಕಾಪಾಡಬೇಕು. ಆಗ ದುಷ್ಟಕ್ಷತ್ರಿಯರ ಕಾಲವಾಗಿತ್ತು. ಎಲ್ಲೆಂದರಲ್ಲಿ ಸಾತ್ವಿಕ ಸಜ್ಜನರ ಪೀಡೆ ಹೆಚ್ಚಾಗಿತ್ತು. ಇದೆಲ್ಲ ಹೆಚ್ಚಿದ್ದಾಗ ಹುಟ್ಟಿ ಬಂದವ ಪರಶುರಾಮ. ಹಾಗಾಗಿ ಮೊದಲು ಅವರ, ಆ ಕ್ಷತ್ರಿಯರ ಕಥೆ ಹೇಳಬೇಕು.

ಹೈಹಯರೆಂಬ ಕ್ಷತ್ರಿಯರ ಒಂದು ಪ್ರಭೇದ, ಅವರಲ್ಲಿ ಅರ್ಜುನನೆಂಬವನು ಹುಟ್ಟಿಬಂದ. ಅವನ ಬಗ್ಗೆ ಒಂದು ಐತಿಹ್ಯವಿದೆ. ಹುಟ್ಟಿದಾಗ ಅವನಿಗೆ ಕೈಗಳು ಇರಲಿಲ್ಲವಂತೆ! ಅಂತಹವನಿಗೆ ಸಾವಿರ ಕೈಗಳಾದವು. ಯಾರಿಗೆ ಬೇಕು ಸಾವಿರ ಕೈಗಳು? ಹತ್ತು ತಲೆಯ ರಾವಣನದ್ದು ಎಂಥ ಹಿರಿಮೆ! ಅವನು ಮಗ್ಗಲಾಗಿ ಮಲಗುವುದು ಹೇಗೆ? ತಲೆ ಹೆಚ್ಚಾದರೆ ಪ್ರಯೋಜನ ಏನೂ ಇಲ್ಲ. ಅದಕ್ಕೆ ಬೇರೆ ಅರ್ಥ ಇದೆ. ಹತ್ತು ಇಂದ್ರಿಯಗಳ ಹುಚ್ಚು ಮುಖಗಳು ಹತ್ತು ಅಂತ. ಇಲ್ಲಿ ಇವನು ಸಾವಿರ ಬಾಹುಗಳಿಂದ 500 ಬಾಣಗಳನ್ನು ಒಟ್ಟಿಗೇ ಬಿಡುತ್ತಿದ್ದನಂತೆ. ಹಾಗಾಗಿ ಅವನು ಅಸಮಾನ ಎನಿಸಿದ. ಅವನು ಹೀಗಾದದ್ದು ಹೇಗೆ? ಎಂದರೆ, ಗುರು ಕರುಣೆಯಿಂದ, ದತ್ತಾತ್ರೇಯರ ಕರುಣೆಯಿಂದ. ಶತ್ರುಗಳಿಂದ ಅಪರಾಜಿತನಾದ. ಅಧಿಕಾರಸ್ಥರಿಗೆಲ್ಲ ಹೀಗೇ. ಅಧಿಕಾರಕ್ಕೆ ಬರಬೇಕಾದರೆ ಗುರುಗಳು ಬೇಕು, ಅವರ ಆಶೀರ್ವಾದಬೇಕು. ಬಂದ ಮೇಲೆ ಬೇಡ. ಇದಕ್ಕೆ ಇವನೂ ಅಪವಾದ ಅಲ್ಲ. ಓಜ, ಸಂಪತ್ತು. ವೀರ್ಯ ಬಲ ಬೇಕಾದಷ್ಟಿತ್ತು. ಈತ ಸತ್ಸಂಪನ್ನನಾಗಿದ್ದ, ದತ್ತನ ಕೃಪೆಯಿಂದ ಜಗದೀಶ್ವರನಾದ. ಅಷ್ಟ ಸಿದ್ಧಿಗಳನ್ನು ಗಳಿಸಿದ. ಎಲ್ಲಿಂದ ಎಲ್ಲಿಗೂ ಹೇಗೆ ಬೇಕಾದರೂ ಪ್ರಯಾಣ ಮಾಡಬಲ್ಲವನಾದ. ಹೀಗಾಗಿ ಗುರುಕರುಣೆಯಿಂದ ಭೂಯಾತ್ರೆ ಮಾಡಿದ. ಅಧಿಕಾರ ಅಮಲೇರಿಸುತ್ತದೆ. ಅಧಿಕಾರ ಬುದ್ಧಿಯನ್ನು ಕೆಡಿಸುತ್ತದೆ. ಮೈಮರೆಸುತ್ತದೆ. ಕಣ್ಣು ಕುರುಡಾಗಿಸುತ್ತದೆ ನಾನು ನಾನೇ ಸರಿ, ನಾನು ಮಾಡಿದ್ದೇ ಸತ್ಯ ಅಂತ ಅನ್ನಿಸಿಬಿಡುತ್ತದೆ. ಪ್ರಪಂಚಕ್ಕೆ ಕಂಟಕವಾಗಿ ಹೋಗುತ್ತಾನೆ.

ಬೇಟೆಯಾಡುತ್ತಾ ಒಮ್ಮೆ ಜಮದಗ್ನಿಗಳ ಆಶ್ರಮವನ್ನು ಪ್ರವೇಶಿಸುತ್ತಾನೆ. ಬೇಟೆಯಂದರೇ, ದುಷ್ಟ ಮೃಗಗಳು ತಪಸ್ವಿಗಳಿಗೆ ತೊಂದರೆ ಕೊಡುವಾಗ ಮಾತ್ರಮಾಡಬೇಕು, ಅದಕ್ಕೆ ಹೊರತಾದರೆ ದೋಷ. ಬೇಟೆಯಾಡುತ್ತಾ ಬಸವಳಿದು ಆಶ್ರಮಕ್ಕೆ ಬಂದ, ಅವರಿಗೆ ಅಲ್ಲಿಂದ ಯಾವುದೇ ಸತ್ಕಾರದ ನಿರೀಕ್ಷೆ ಇರಲಿಲ್ಲ, ಸ್ವಲ್ಪ ನೀರು ಸಿಗಬಹುದು ಹೆಚ್ಚೆಂದರೆ, ಅದೂ ತನಗೆ. ಉಳಿದ ಸೈನ್ಯ ಹತ್ತಿರದ ಕೆರೆಯೋ, ನದಿಯೋ ಅಲ್ಲಿ ದಣಿವಾರಿಸಿಕೊಳ್ಳಬಹುದು ಎಂದು ಯೋಚಿಸಿ, ಹೋದ. ಆದರೆ ಅವನಿಗೆ ಅಚ್ಚರಿಯಾಗುವಂತೆ, ಇಡೀ ಸೈನ್ಯಕ್ಕೆ ಯೋಗ್ಯ ಸತ್ಕಾರ, ಆತಿಥ್ಯ ಮಾಡಿದರು. ಆಶ್ರಮೋ ಶ್ರಮನಾಶನಃ | ಎಂಬಂತೆ ಆಶ್ರಮವೆಂದರೆ ಶ್ರಮ ಪರಿಹಾರವಾಗುವ ಸ್ಥಳ. ಅಲ್ಲಿ ಬಂದವರಿಗೆ ಹೊಟ್ಟೆ ತಂಪಾಗಬೇಕು, ಹೃದಯವೂ ತಂಪಾಗಬೇಕು. ಅದಾಗದಿದ್ದರೆ ಅದು ಆಶ್ರಮ ಅಲ್ಲ. ಮನೆಯಾದರೂ ಅಷ್ಟೇ. ನಮ್ಮ ಬಳಿಗೆ ಯಾರಾದರೂ ಬಂದರೂ ಅವರ ಹೊಟ್ಟೆಯೋ ಎದೆಯೋ ತಂಪಾಗದಿದ್ದರೆ ಅದು ಧರ್ಮ ಅಲ್ಲ. ತಂಪು ಮಾಡುವುದೇ ಮಾನವಧರ್ಮ. ಪ್ರತಿ ಜೀವದ ಧರ್ಮ. ಮನೆಗೆ ಯಾರು ಬರುತ್ತಾರೋ ಅವರಿಗೆ ತಂಪು ಮಾಡಿ ತೃಪ್ತಿ ಮಾಡಿ ಕಳಿಸಬೇಕು. ಯಾಕೆಂದರೆ ಅವರ ತೃಪ್ತಿಯೇ ನಮಗೆ ಆಶೀರ್ವಾದ. ಇದು ಮನೆಯ ವಾತಾವರಣವನ್ನು ಶುಭವಾಗಿ ಪರಿವರ್ತನೆ ಮಾಡುತ್ತದೆ. ಜಮದಗ್ನಿಗಳ ಸಾಮರ್ಥ್ಯ ಎಂಥದ್ದು ಅಂದರೆ, ಲಕ್ಷೋಪಲಕ್ಷ ಜನರಿಗೆ ಔತಣ ನೀಡಬಲ್ಲರು. ರಾಜನಿಗೆ ಅಸಡ್ಡೆ, ಏನು ಮಾಡಬಲ್ಲರು ಅಂತ. ಆದರೆ ಆತಿಥ್ಯ ನೋಡಿದ ನಂತರ ಅವನ ಅಹಂ ಗೆ ಪೆಟ್ಟು ಬಿತ್ತು. ಅರಮನೆಯಲ್ಲಿ, ತಾನೂ ನೀಡಲಾಗದ ಆತಿಥ್ಯ ಈ ಬಡವನಿಗೆ ಹೇಗೆ ಸಾಧ್ಯ ಎಂದು ಕುತೂಹಲ, ದುರಾಸೆ ಬಂತು. ತಪಸ್ವಿಗಳಿಗೆ ಯಾವುದೂ ಅಸಾಧ್ಯವಲ್ಲ. ಅದಕ್ಕೆ ಕಾರಣವಾಗಿದ್ದು ಸುರಭಿಯ ಕರುಣೆ. ಅವಳೆ ಇಡೀ ಸೈನ್ಯಕ್ಕೆ ಆತಿಥ್ಯ ಮಾಡಿದ್ದಳು. ರಾಜನಿಗೆ ಇದು ತನ್ನಲ್ಲಿರಬೇಕು ಅಂತ ಆಸೆಯಾಯಿತು. ಪಕ್ಕದ ಮನೆಯಲ್ಲಿ ಒಳ್ಳೆ ಹೂವು ಬಿಟ್ಟಿದ್ದರೆ ನೋಡಿ ಖುಷಿ ಪಡುವ ಬದಲು ಆ ಹೂವು ನನಗೆ ಬೇಕು, ಗಿಡವೇ ನನ್ನದು ಅಂತ ಹೊರಟರೆ? ಆ ದುರಾಸೆ ತರವಲ್ಲ. ಕಾರ್ತವೀರ್ಯನಿಗೂ ಹಾಗೇ. ಸುರಭಿ ಬೇಕೆಂಬ ಆಸೆ ಆಯಿತು. ಹೇಳಲಿಲ್ಲ, ಕೇಳಲಿಲ್ಲ. ತನ್ನ ಸೈನ್ಯದ ಸಹಾಯದಿಂದ ಅದನ್ನು ಬಲವಂತವಾಗಿ ತನ್ನ ಅರಮನೆಗೆ ಸಾಗಿಸಿದ. ಇದರಿಂದ ಗೊತ್ತಾಗುವುದು ಏನು ಎಂದರೆ ಗೋ ಕಳ್ಳತನಕ್ಕೆ ಇಷ್ಟು ಹಳೆಯ ಇತಿಹಾಸವಿದೆ. ಅಂತ. ಈಗ ದಿನಾ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ, ದಕ್ಷಿಣ ಕನ್ನಡದಲ್ಲಂತೂ ಇದು ಪ್ರತಿನಿತ್ಯದ ರಗಳೆ, ಇದಕ್ಕೆ ಸಂಬಂಧಿಸಿ ನಾವು ಆಂದೋಲನ ಕೂಡಾ ಮಾಡಿದ್ದೇವೆ. ಈಗಿನ ಕಾಲದ ಈ ಕಳ್ಳರಿಗೆಲ್ಲ ಕಾರ್ತವೀರ್ಯನೇ ಆದಿ ಪ್ರವರ್ತಕ. ಹೀಗೆ ದೊರೆಯೇ ಹೊರೆಯಾದರೆ ಮೊರೆ ಯಾರಲ್ಲಿ ಇಡಬೇಕು! ಬೇಲಿಯೇ ಎದ್ದು ಹೊಲ ಮೇಯ್ದರೆ ರಕ್ಷಣೆ ಹೇಗೆ? ಮನುಷ್ಯ ಸಾಮಾನ್ಯರನ್ನು ಮೀರಿದ ಬಲ, ದುರ್ಬುದ್ಧಿ ಎರಡೂ ಇದ್ದರೆ ಹೀಗೇ. ಸನ್ಮತಿ, ಸಾಮರ್ಥ್ಯ ಎರಡೂ ಇದ್ದರೆ ರಾಮ. ಇದೇ ದುರ್ಮತಿಯಾದರೆ ರಾವಣ.

ರಾಮ ಮನೆಗೆ ಮರಳಿದ. ಅವನಿಗೆ ಭಾಗ೯ವರಾಮ ಅಂತಾರೆ, ಭೃಗು ವಂಶಜನಾದ್ದರಿಂದ, ಪರಶು ಇರುವುದರಿಂದ ಪರಶುರಾಮ ಅಂತಾರೆ. ಆ ಪರಶು ಸಾಕ್ಷಾತ್ ಶಿವನದ್ದು, ಅವನೇ ಕೊಟ್ಟದ್ದು. ಜಮದಗ್ನಿಯ ಐದನೇ ಮಗ. ಮನೆಗೆ ಮರಳಿದಾಗ ಎಂದಿನಂತಿಲ್ಲ ವಾತಾವರಣ. ಗೋವಿನ ನೋವು ಕೇಳಿತು, ಅವನಿಗೆ ವಿಷಯ ತಿಳಿಯಿತು. ಕುಪಿತನಾದ. ಕಾರ್ತವೀರ್ಯನಿಗೆ ತಾನು ಮೆಟ್ಟಿದ್ದು ಕಾಳಸರ್ಪದ ಹೆಡೆ ಅಂತ ತಿಳಿದಿಲ್ಲ. ಬೋಧಿಸತ್ವನ ಕಥೆಯಿದೆ. ಒಂದು ಜನ್ಮದಲ್ಲಿ ಆತ ಕಾಡುಕೋಣವಾಗಿ ಜನ್ಮ ತಾಳಿದ್ದ. ಅಹಿಂಸೆಯ ಪ್ರತಿಪಾದನೆ ಮಾಡುತ್ತಿದ್ದುದರಿಂದ ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ. ಒಂದು ಕಪಿ ಇದರ ಸ್ವಭಾವ ತಿಳಿದು ಇದಕ್ಕೆ ತುಂಬಾ ತೊಂದರೆ ಕೊಡುತ್ತಿತ್ತು. ಇದು ಸುಮ್ಮನೆ ಅನುಭವಿಸುತ್ತಿತ್ತು. ಒಂದು ದಿನ ಬೇರೆ ಕಾಡಿನ ಒಂದು ಕೋಣ ಇದೇ ರೀತಿಯದ್ದು ಅಲ್ಲಿ ಬಂದಿತು ಕಪಿಗೆ ತಿಳಿಯದೇ ಅದರ ಬಾಲ ಎಳೆಯಿತು. ಅಂದೇ ಅದರ ಆಯಸ್ಸು ತೀರಿತು. ಕಾರ್ತವೀರ್ಯನ ಕಥೆಯೂ ಹೀಗಾಗಿದೆ. ಪರಶುರಾಮ ಸಿಟ್ಟಿನಿಂದ ಕೆರಳಿದ, ಅದು ಸಾತ್ವಿಕ ಕ್ರೋಧ, ಸಕಾರಣ ಕ್ರೋಧ. ಕ್ರೋಧ ಬರಬಾರದು ಅಂತಲ್ಲ ಆದರೆ ಸಕಾರಣವಾಗಿರಬೇಕು ಅಷ್ಟೇ. ಅಲ್ಲದೇ ಕ್ರೋಧ ಬಂದಾಗ ನಮ್ಮ ಬುದ್ಧಿಯನ್ನು ಅದರ ಕೈಯಲ್ಲಿ ಕೊಡಬಾರದು. ಪರಶುರಾಮ ಸಿಟ್ಟಿನಿಂದ ರಾಜಧಾನಿಯ ಕಡೆ ಹೊರಟ. ರಾಜನಿನ್ನೂ ಅರಮನೆ ತಲುಪುವ ಮೊದಲೇ ಎದುರಾದ. ರಾಜನಿಗೆ ಸೋಲು ಗೊತ್ತಿಲ್ಲ, ರಾವಣನಂಥವನನ್ನೇ ಸೋಲಿಸಿ ಸೆರೆಮನೆಯಲ್ಲಿಟ್ಟಿದ್ದವ ಅವನು. ಮೊದಲು ತನ್ನಿಡೀ ಸೈನ್ಯವನ್ನು ಎದುರಿಗೆ ಬಿಟ್ಟ. ಚತುರಂಗ ಬಲದಿಂದ ಕೂಡಿದ 17 ಅಕ್ಷೌಹಿಣಿ ಸೈನ್ಯ, ಅಷ್ಟನ್ನು ಪರಶುರಾಮನೊಬ್ಬನೇ ಧ್ವಂಸ ಮಾಡಿದ. ಅಸಹಾಯಶೂರನೆಂದರೆ ಅದೇ. ಯುದ್ಧ ಹೇಗಿತ್ತು ಅಂದರೆ ಪರಶುರಾಮ ಕಾಣಿಸುತ್ತಾ ಇಲ್ಲ; ಅವನ ಕೊಡಲಿ ಮಾತ್ರ ಓಡಾಡುತ್ತಿದೆ, ಸೈನ್ಯ ಕತ್ತರಿಸಿ ಬೀಳುತ್ತಿದೆ. ರಾಮಾಯಣದ ಕೊನೆಯಲ್ಲಿ ರಾವಣ ತನ್ನ ಮೂಲಬಲವನ್ನು ಯುದ್ಧಕ್ಕೆ ಕಳಿಸಿ ಹೋಗಿ ರಾಮನನ್ನು ಗಾಯಗೊಳಿಸಿ ಬನ್ನಿ, ಆಮೇಲೆ ನಾನು ಹೋಗಿ ಅವನನ್ನು ಸಂಹಾರ ಮಾಡುತ್ತೇನೆ ಅಂತ ಹೇಳುತ್ತಾನೆ. ಆದರೆ ಹಾಗಾಗದೇ ರಾಮನ ಪ್ರತಾಪಕ್ಕೆ ಇಡೀ ಸೈನ್ಯ ಧ್ವಂಸವಾಗುತ್ತೆ. ಇಲ್ಲಿಯೂ ಹಾಗೇ ರಾಮನ ಧನುಸ್ಸು ಮಾತ್ರವೇ ಕಾಣುತ್ತಿದೆ, ಸೈನಿಕರು ಸಾಲುಸಾಲಾಗಿ ನಾಶವಾಗುತ್ತಿರುತ್ತಾರೆ. ಇದು ರಾವಣ, ಹೀಗೆ ಯುದ್ಧದಲ್ಲಿ ರಾವಣ ಸೋತು ರಥದಿಂದ ಉರುಳಿ ನೆಲದಲ್ಲಿ ಬಿದ್ದಾಗ ರಾಮ ಹೇಳುತ್ತಾನೆ. ಈಗ ತಿರುಗಿ ಹೋಗು. ಸುಧಾರಿಸಿಕೋ ನಾಳೆ ಹೊಸರಥ, ಆಯುಧಗಳೆಂದಿಗೆ ಬಾ ಯುದ್ಧಮಾಡೋಣ ಅಂತ. ಇದು ರಾಮ.

ಕಟ್ಟಕಡೆಗೆ ಕಾರ್ತವೀರ್ಯನೇ ಬರುತ್ತಾನೆ. 500 ಕೈಗಳಿಂದ ಆಯುಧ ಪಾಣಿಯಾಗಿ ಬಂದಾಗ ಇನ್ನೊಂದು ಸೈನ್ಯವೇ ಬಂದಂತೆ ಆಯಿತು. ಆದರೆ ಆಯುಧಗಳು ನಾಶವಾದವು, ಕೈಗೆ ಸಿಕ್ಕಿದ್ದನ್ನು ತೆಗೆದು ಎಸೆಯಲು ಪ್ರಾರಂಭಿಸಿದ, ನಂತರ ಒಂದೊಂದಾಗಿ ಅವನ ಕೈಗಳೆಲ್ಲವನ್ನೂ ಕತ್ತರಿಸಿ ಹಾಕಿದ ಪರಶುರಾಮ, ಕಾಡುಕಡಿದಂತಿತ್ತು ಆ ದೃಶ್ಯ. ಕದ್ದ ಕೈ ಕಡಿಯಲ್ಪಟ್ಟಿತು. ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ. ಇನ್ನೊಬ್ಬರ ಸ್ವತ್ತನ್ನು ನಮ್ಮದಾಗಿಸಿಕೊಳ್ಳಲು ಹೊರಟರೆ ನಮ್ಮದೇ ನಾಶವಾಗುತ್ತೆ. ಕೊನೆಗೆ ಅವನ ತಲೆಯನ್ನೇ ಕಡಿದು ತಂದು ತಂದೆಯ ಮುಂದೆ ಹಾಕಿದಾಗ, ತಂದೆ ಹೇಳುತ್ತಾರೆ ತಪ್ಪು ಮಾಡಿದೆ. ಅವನು ರಾಜನಾದವನು. ಪಾಪ ಕಳೆಯಲು ತೀರ್ಥಯಾತ್ರೆ ಮಾಡಿ ಬಾ ಅಂತ, ಇದು ಒಳ್ಳೆಯತನ. ಹೀಗೆ ವಿರೋಧಿಗಳಲ್ಲಿ ಒಬ್ಬ ಒಳ್ಳೆಯವನು ಮತ್ತೊಬ್ಬ ದುಷ್ಟನಾದರೆ ಕಷ್ಟ. ಒಂದೆಡೆಯಿಂದ ನಿಯತ್ತಿನ ಯುದ್ಧ ಇನ್ನೊಂದೆಡೆ ಮಾಯಾ ಯುದ್ಧ. ಹೀಗಾಗುತ್ತದೆ. ಕಾರ್ತವೀರ್ಯನ ಮಕ್ಕಳು ಈ ರಾಮ ಹೊರಹೋಗುವುದನ್ನು ಕಾದಿದ್ದು, ಬಂದು ಧ್ಯಾನಸ್ಥನಾಗಿ ಅಗ್ನಿಗೃಹದಲ್ಲಿದ್ದ ಜಮದಗ್ನಿಯ ಮೇಲೆ ಆಕ್ರಮಣ ಮಾಡಿದರು. ಸರ್ವಶಸ್ತ್ರ ಸಂಪನ್ನನಾದರೂ ಕಾಲ ಮರ್ಯಾದೆಯಿಂದ ಅವರು ಸಮಾಧಾನದಿಂದ ಕುಳಿತುಬಿಟ್ಟರು. ಪತ್ನಿ ರೇಣುಕ ಪರಿಪರಿಯಾಗಿ, ಬೇಡಿ ಅತ್ತು ಗೋಳಿಟ್ಟರೂ ಕರಗದೆ, ಅವರ ತಲೆ ಕಡಿದು ಕೊಂಡೊಯ್ದರು. ರೇಣುಕೆಯ ವಿಲಾಪ, ಕರುಳ ಕೂಗು ದೂರದಲ್ಲಿದ್ದ ಮಗನನ್ನು ತಲುಪಿತು. ಧಾವಿಸಿ ಬಂದ. ಕ್ಷತ್ರಿಯನೆಂದರೆ ಆಪತ್ತಿನಲ್ಲಿರುವವರ ರಕ್ಷಣೆ ಮಾಡುವವನು ಅಂತ. ಧರ್ಮಕ್ಕೆ, ಜೀವಕ್ಕೆ ಆಪತ್ತು ಬಂದಾಗ ಯಾರು ಅದರ ರಕ್ಷಣೆ ಮಾಡುತ್ತಾರೋ ಅವರೇ ಕ್ಷತ್ರಿಯರು. ಇಂಥವರು ಕ್ಷತ್ರಿಯರಲ್ಲ ಅವರ ಉಳಿವು ಕೂಡಾ ಬೇಕಿಲ್ಲ ಎಂದು ಪರಶುರಾಮ ನಿಶ್ಚಯ ಮಾಡಿದ, ಜೀವ ಕಿತ್ತುಕೊಂಡವನಿಗೆ ಜೀವ ಇಟ್ಟುಕೊಳ್ಳುವ ಹಕ್ಕು ಕೂಡಾ ಇಲ್ಲ. ಒಬ್ಬನ ಸಾವು ಲಕ್ಷ ಜನರ ಒಳಿತಿಗೆ ಕಾರಣವಾಗುವುದಾದರೆ ಅದು ಸಹ್ಯ ಎಂದು ಕ್ಷತ್ರಿಯಕುಲವನ್ನೇ ಸರ್ವನಾಶ ಮಾಡುವ ಸಂಕಲ್ಪ ಮಾಡಿದ. ರಾಜಧಾನಿಗೆ ಹೋದ ಎಲ್ಲರ ತಲೆ ಕತ್ತರಿಸಿದ ಆ ತಲೆಯದ್ದು ಒಂದು ಬೆಟ್ಟವೇ ಆಯಿತಂತೆ. ಅದರ ರಕ್ತ ಹರಿದು ನದಿಯಾಯಿತು. ಆ ನದಿ ಕೆಟ್ಟವರಿಗೆ ಭಯಪಡಿಸುವಂತಿತ್ತು. ನಂತರ ತಂದೆಯ ತಲೆತಂದು ಶರೀರಕ್ಕೆ ಜೋಡಿಸಿ ಅಂತ್ಯಸಂಸ್ಕಾರ ನೆರವೇರಿಸಿದ. ನಂತರ ಭೂಮಂಡಲ ಪ್ರದಕ್ಷಿಣೆ ಮಾಡಿ ಎಲ್ಲ ಕ್ಷತ್ರಿಯರನ್ನು ನಿರ್ನಾಮ ಮಾಡಿ ಇಡೀ ಭೂಮಿಯ ಅಧಿಪತ್ಯ ಕೈಗೆತ್ತಿಕೊಂಡು ಕಡೆಗೆ ಒಂದು ಯಜ್ಞ ಮಾಡಿ ಎಲ್ಲ ಭೂಮಿಯನ್ನು ತಪಸ್ವಿಗಳಿಗೆ ದಾನ ಮಾಡಿ, ತಾನು ನಿಶ್ಚಿಂತನಾಗಿ, ಮಹೇಂದ್ರ ಪರ್ವತಕ್ಕೆ ತಪಸ್ಸಿಗಾಗಿ ಹೊರಟ. ಅಲ್ಲಿ ಧನುಸ್ಸು ತ್ಯಾಗ ಮಾಡಿ ಧ್ಯಾನಮಗ್ನನಾಗಿ ಚಿರಂಜೀವಿಯಾಗಿ ಕುಳಿತಿದ್ದಾನೆ. ಸಿದ್ಧಗಂಧರ್ವರೂ ಅವನ ಚರಿತ್ರೆಯನ್ನು ಹಾಡಿ ಹೊಗಳುತ್ತಿದ್ದಾರೆ.

ಹೀಗೆ ಅವನ ರೋಷ ಇಡೀ ಪ್ರಪಂಚದ ಸಮಾಧಾನಕ್ಕೆ ಕಾರಣವಾಯಿತು. ಇಂಥವರಿಗೆ ರೋಷ ಬಂದರೇ ಒಳ್ಳೆಯದು. ನಲಂದಾ ವಿಶ್ವವಿದ್ಯಾಲಯದ ಕಥೆ ಕೇಳಿದ್ದೀರಿ. ಅದು ನಾಶವಾಗಿದ್ದೇ ಅಲ್ಲಿದ್ದ ಪ್ರಜೆಗಳು ಆಚರಿಸಿದ ಶಾಂತಿಯಿಂದ. ಯಾರೂ ವಿರೋಧಿಸಲಿಲ್ಲ. ವಿರೋಧಿಗಳು ಒಬ್ಬೊಬ್ಬರನ್ನಾಗಿ ಹಿಡಿದು ಕೊಂದರು. ಪ್ರತೀಕಾರ ಮಾಡುವ ಸಂದರ್ಭ ಶಾಂತಿಯ ಚಿಂತೆ ಮಾಡಿದರೆ ಅದರಿಂದ ದೇಶಕ್ಕಾಗಲೀ ಧರ್ಮಕ್ಕಾಗಲೀ ಒಳ್ಳೆಯದಲ್ಲ. ಅದಕ್ಕೆ ತಕ್ಕ ಪ್ರತಿಕ್ರಿಯೆ ಮಾಡಬೇಕು. ಮಾಡಲೇಬೇಕು.
ಗೀತೆಯಲ್ಲಿ ಭಗವಂತ ಹೇಳುತ್ತಾನೆ. ಹತೋ ವಾ ಪ್ರಾಪ್ಸ್ಯಸೇ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯಸೇ ಮಹೀಂ | ಅಂತ. ಗೆದ್ದರೆ ಭೂಮಿ, ಸತ್ತರೆ ಸ್ವರ್ಗ ಅಂತ. ಇದರೆಡೆಗೆ ನಮ್ಮ ಚಿಂತನೆ ಬೇಕು. ರಾಮನೆಂದರೆ ಶ್ರೀರಾಮ ಮಾತ್ರ ಅಲ್ಲ. ಪರಶುರಾಮನೂ ಹೌದು. ಇದು ಅವನ ದಿನ. ಆರಾಮ ಮನಸ್ಸಿರಬೇಕಾದರೆ ಈ ರಾಮ ಮೊದಲು ಬರಬೇಕು. ಮಹೇಂದ್ರ ಪರ್ವತದ ಮೇಲೆ ಪರಮ ಶಾಂತನಾಗಿ ಕುಳಿತ ಪರಶುರಾಮನಂತೆ ನಾವು ಸಮಾಧಾನರಾಗೋಣ. ಪ್ರಪಂಚಕ್ಕೆ ಒಳ್ಳೆಯದಾಗಲಿ, ಅದರ ಭಾಗವಾದ ನಮಗೂ ಒಳ್ಳೆಯದಾಗಲಿ.

ದೊರೆ ದೇವರಂತೆ ಇರಬೇಕು. ಎಲ್ಲ ದೇವರೂ ಒಂದೇ ಕಡೆ ಇರುವವರು ಯಾರು ಅಂದರೆ, ಅವನು ದೊರೆ. ಅವನಲ್ಲಿ ಎಲ್ಲ ಲೋಕಪಾಲರೂ ಅಂಶರೂಪದಲ್ಲಿ ಸನ್ನಿಹಿತರಾಗಿರುತ್ತಾರೆ. ಹಾಗಾಗಿ ಎಲ್ಲ ದೇವರುಗಳಿಂದ ಆಗುವ ಅನುಕೂಲ ದೊರೆ ಒಬ್ಬನಿಂದಲೇ ಆಗಬೇಕು.
ರಾಮನ ಬಗ್ಗೆ ಹೀಗೆ ಹೇಳಿದೆ, ಅವನು ಎಲ್ಲರಿಗೂ ತಂದೆಯಂತಿದ್ದ. ಹಾಗಾಗಿ ಅವನ ರಾಜ್ಯದಲ್ಲಿ ಯಾರೂ ತಬ್ಬಲಿಗಳಿರಲಿಲ್ಲ. ಎಲ್ಲರಿಗೂ ಮಗನಂತಿದ್ದ ಹಾಗಾಗಿ ಯಾರಿಗೂ ಕಷ್ಟವಿರಲಿಲ್ಲ ಅಂತ. ಹೀಗಿರಬೇಕು ದೊರೆಯಾದವನು. ದೇವರಂತಿರಬೇಕಾದ ದೊರೆ ದಾನವನಾದರೆ ದೇವರೇ ಎದ್ದು ಬರುತ್ತಾನೆ, ಅವನ್ನು ಸರಿ ಮಾಡಲು. ಅಂಥವನನ್ನು ನಾಶ ಮಾಡಲು ಅಸಾಮಾನ್ಯ ರೂಪವನ್ನು ತಳೆಯುತ್ತಾನೆ. ಇಡೀ ಜಗತ್ತಿಗೆ ನೀನು ಪಾಠ ಹೇಳಬೇಕು ಅಂಥದ್ದರಲ್ಲಿ ನೀನೇ ಹೀಗೆ ಮಾಡುತ್ತೀಯೆ ಅಂತ. ಮದವೇರಿ ಮೈಮರೆತರೆ ತಕ್ಕ ಶಿಕ್ಷೆ ಕಾದಿದೆ. ಭವಿಷ್ಯ ನಿಮ್ಮ ಮುಂದಿಲ್ಲ, ನಿಮ್ಮೆದುರಿಗೆ ಇರುವುದು ವರ್ತಮಾನ ಮಾತ್ರವೇ. ಮುಂದಿನ ಕ್ಷಣ ನಿಮಗೆ ತಿಳಿದಿಲ್ಲ. ಒಳ್ಳೆಯ ದಾರಿಯಲ್ಲಿದ್ದರೆ ಒಳ್ಳೆಯದಾಗುತ್ತದೆ, ತಪಸ್ವಿಗಳು, ಗೋವುಗಳನ್ನು ಪೀಡಿಸುವ ದಾರಿಯಲ್ಲಿದ್ದರೆ ನಿಮ್ಮ ನಾಶ ನಿಶ್ಚಿತ. ಅದಕ್ಕೆ ನಿಮ್ಮ ಜಾತಕ, ಭವಿಷ್ಯ ನೋಡಬೇಕೆಂದಿಲ್ಲ. ನಿಮ್ಮ ದಾರಿ ನೋಡಿದರೆ ಸಾಕು. ಅದು ಪ್ರಪಾತದ ದಾರಿ ಆದರೆ ನಾಶ ನಿಶ್ಚಿತ. ಈ ಎಚ್ಚರಿಕೆಯನ್ನು ಈ ಕಥೆ ದೊರೆಗಳಿಗೆ ಕೊಡುತ್ತದೆ. ರಾಜರು ಹೀಗಾದರೆ ಸಾಮಾನ್ಯನೊಬ್ಬ ಎದ್ದು ಬರಬಹುದು, ತಪಸ್ವಿಯೊಬ್ಬ ಎದ್ದು ಬರಬಹುದು ಜಾಗೃತರಾಗಿ ಎಂದು ಎಚ್ಚರಿಕೆ ಕೊಡುತ್ತದೆ.

ಪರಶುರಾಮ ಬರುವವರೆಗೆ ಕಾಯಬೇಡ ಅಂತ ಜನಗಳಿಗೆ ಸಂದೇಶ. ಇಡೀ ಪರಶುರಾಮನಲ್ಲದಿದ್ದರೆ, ಕಿಡಿ ಪರಶುರಾಮನಾದರೂ ಆಗಿ, ಇದು ಸರಿ ಇಲ್ಲ, ನಾವು ಹೋರಾಡುತ್ತೇವೆ ಎಂಬ ಕಿಚ್ಚು ಹತ್ತಿಸಿ. ಅನ್ಯಾಯ ನಡೆಯುವಾಗ ಸುಮ್ಮನೇ ನಿಂತು ನೋಡಿದವನೂ ಅದರ ಭಾಗಿಯಾಗುತ್ತಾನೆ. ನಾವೂ ಹಾಗಾಗಬಾರದು. ಪಾಪ ನಡೆಯುವಾಗ ಗೊತ್ತಿದ್ದೂ ಸ್ವರವೆತ್ತದಿರಬಾರದು. ಪಾಪಭಾಗಿ ಮಾಡುತ್ತಾನೆ. ನಾವು ಧರ್ಮಪರರಾಗೋಣ, ಎಲ್ಲಿ ಸತ್ಯ ಇದೆಯೋ, ಧರ್ಮ ಇದೆಯೋ, ಸದ್ಗುಣಗಳಿವೆಯೋ ಅಲ್ಲಿ ನಾವು ಎನ್ನೋಣ. ಪರಶುರಾಮನ ಗಂಡುಗೊಡಲಿಯ ದಿವ್ಯಪ್ರಭೆ ನಮ್ಮ ಕಣ್ಣಲ್ಲಿನ ಬೆಳಕನ್ನು ಜಾಗೃತಿ ಮಾಡಲಿ. ಹೃದಯಾಂಧಕಾರವನ್ನು ದೂರ ಮಾಡಲಿ, ಮತ್ತೆ ಕೃತಯುಗ ಬರಲಿ.

ಚಿತ್ರ:ಅಂತರ್ಜಾಲದಿಂದ

Facebook Comments