#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
24-09-2018:
ರಾಮಾವತಾರ
ತತ್ತ್ವ : ಕಂಟಕ ತಮಗೆ ಕಿಸಲಯ ಪರರಿಗೆ
ಇದು ಮಹಾಪುರುಷರ ಚರಿತ್ರೆ.
ರಾಮ ಬೇರೆ ಅಲ್ಲ ಕೃಷ್ಣ ಬೇರೆ ಅಲ್ಲ, ಇಬ್ಬರದೂ ಯುಗ ಜಗ ಬೇರೆ ಬೇರೆ. ಆ ವಾತಾವರಣಗಳು ಬೇರೆ ಆದದ್ದರಿಂದ ರೀತಿ, ಶೈಲಿ ಬೇರೆ ಅಯಿತು ಅಷ್ಟೇ. ಹಾಗಾಗಿ ನಮ್ಮಲ್ಲಿ ರಾಮಕೃಷ್ಣ ಎಂದು ಹೆಸರಿಡುವ ವಾಡಿಕೆ ಇದೆ. ಇದು ಎರಡು ಬೇರೆ ಹೆಸರಲ್ಲ, ಎರಡೂ ಸೇರಿದ ಒಂದೇ ಹೆಸರು ಅದು. ಹಾಗಾಗಿ ಎರಡೂ ಒಂದೇ ಅಂತ ಅರ್ಥ. ಇಂದು ಪ್ರವಚನದ ಕೊನೆಯದಿನ, ಇಂದಿಗೆ ರಾಮಾವತಾರ ಬಂದಿದೆ. ಅದೂ ಆಶ್ಚರ್ಯಕರವಾಗಿ, ಎರಡು ದಿನ ಚತುರ್ದಶಿ ಬಂದದ್ದರಿಂದ ರಾಮವತಾರಕ್ಕೆ ಈ ಅವಕಾಶ ಬಂದಿದೆ. ಅದೆಲ್ಲವೂ ದೈವ ಸಂಕಲ್ಪ. ರಾಮನ ಸಂಕಲ್ಪ. ನಮ್ಮ ಎಲ್ಲ ವಿಷಯಗಳ ಪ್ರಾರಂಭವೂ ಅಲ್ಲಿಯೇ. ಪರ್ಯವಸಾನವಾಗುವುದೂ ಅಲ್ಲಿಯೇ. ಇಂದಿನದ್ದು ಕೃಷ್ಣಕಥೆಯಲ್ಲಿ ಬರುವ ರಾಮಕಥೆ, ಆದರೆ ರಾಮಾಯಣದಲ್ಲಿ ಹೇಳಿರುವ ಕಥೆ ಹೇಳಲು ಹೋಗುವುದಿಲ್ಲ, ಇದು ಭಾಗವತ ಹೇಳಿರುವ ರಾಮನ ಕಥೆ.

ಶ್ರೀರಾಮಾ…
ರಾಮಾಯಣ ಯಾವ ರಾಮನ ಚರಿತೆಯನ್ನು ೭ ಕಾಂಡಗಳ ೫೦೦ ಅಧ್ಯಾಯಗಳ ೨೪ ಸಾವಿರ ಶ್ಲೋಕಗಳಲ್ಲಿ ಹೇಳಿದೆಯೋ ಅದನ್ನು ಭಾಗವತ ಕೇವಲ ೨ ಅಧ್ಯಾಯಗಳ ೯೨ (೫೬+೩೬) ಶ್ಲೋಕಗಳಲ್ಲಿ ಹೇಳಿದೆ. ರಾಮಕಥೆಯನ್ನು ಸಂಕ್ಷಿಪ್ತವಾಗಿ, ಅಮೃತಬಿಂದುವಾಗಿ ಮಾಡಿಕೊಟ್ಟಿದೆ. ಭಾಗವತದ ರಾಮಯಣ ತುಂಬಾ ಭಾವುಕತೆಯನ್ನು ತುಂಬಿಕೊಡುತ್ತದೆ. ಇದೂ ಸಾಲದೆಂಬಂತೆ ಕೇವಲ ಒಂದು ಶ್ಲೋಕದಲ್ಲಿ ಶ್ರೀರಾಮನ ಕಥೆಯನ್ನು ಹೀಗೆ ವರ್ಣಿಸಿದೆ.
ರಾಮನು ಎಂಥವನು ಎಂದರೆ ಗುರುವಿಗಾಗಿ ರಾಜ್ಯವನ್ನು ತ್ಯಾಗಮಾಡಿದವನು, ಗುರುವಿಗಾಗಿಯೇ? ವಸಿಷ್ಟರು ಅವನಿಗೆ ಹಾಗೆ ಹೇಳಲಿಲ್ಲವಲ್ಲ, ತಂದೆಯ ಅಪ್ಪಣೆಯಿಂದ ಅಲ್ಲವೇ? ತಾಯಿಯ ವರದಿಂದಾಗಿ ಅಲ್ಲವೇ? ಅಂದರೆ ಹೌದು, ತಂದೆ- ತಾಯಿ- ಆಚಾರ್ಯ ಮೂವರನ್ನೂ ಗುರುಸ್ವರೂಪರು ಎಂದೇ ಪರಿಗಣಿಸಲಾಗಿದೆ.
ಪದ್ಮಪಾದಗಳಿಂದ ವನದಲ್ಲಿ ಸಂಚಾರ ಮಾಡಿದವನು. ಅವನ ಪಾದಗಳು ಎಷ್ಟು ಕೋಮಲವಾಗಿದ್ದವು ಅಂದರೆ; ಸೀತೆಯ ಕರಗಳೇ ಕೋಮಲವಾಗಿದ್ದವು ಅಂತ ಕೇಳಿದ್ದೇವೆ, ಅಂತಹ ಸೀತೆಯ ಕರಗಳಲ್ಲಿ ಅವನ ಪಾದಸ್ಪರ್ಶ ಮಾಡಿದರೆ ಅದನ್ನೂ ಸಹಿಸಿಕೊಳ್ಳಲಾಗದೇನೋ ಅನ್ನುವಷ್ಟು ಮೃದುವಾಗಿತ್ತಂತೆ. ಅಂತಹ ಪಾದಗಳಿಂದ ದಂಡಕಾರಣ್ಯದಲ್ಲಿ ಸಂಚರಿಸಿದವನು.
ಆಂಜನೇಯ ಹಾಗೂ ಲಕ್ಷ್ಮಣರು ರಾಮನ ಮಾರ್ಗಾಯಾಸವನ್ನು ಪರಿಹರಿಸುತ್ತಿದ್ದರು ವನವಾಸ ಕಾಲದಲ್ಲಿ. ವಿರೂಪಿಣಿಯಾದ ಶೂರ್ಪಣಖಿಯಿಂದಾಗಿ ಬಂದ ಸೀತೆಯ ವಿರಹ, ಅದರಿಂದಾಗ ಅವನಿಗೆ ಬಂದ ಕೋಪ, ಅದರಿಂದಾಗಿ ಗಂಟಿಕ್ಕಿದ ಹುಬ್ಬುಗಳು. ಆ ಹುಬ್ಬುಗಳಿಗೆ ನಡುಗಿದ ಸಮುದ್ರ, ಅದರಿಂದಾಗಿ ಸೇತುವೆ ಕಟ್ಟಲನುವಾಗಿದ್ದು. ನಂತರ ರಾವಣಾದಿ ಖಳರನ್ನು ಸುಟ್ಟುಹಾಕಿದ ನಂತರ ಅಯೋಧ್ಯೆಗೆ ಹಿಂತಿರುಗಿ ಪಟ್ಟಾಭಿಷಿಕ್ತನಾಗಿ ಕೊಸಲೇಂದ್ರನೆನಿಸಿದ. ಇಂತಹ ರಾಮನು ನಮ್ಮನ್ನು ಕಾಪಾಡಲಿ ಎಂದು ಈ ಶ್ಲೋಕದ ಭಾವ ಇದರಲ್ಲಿ ಸಮಸ್ತ ರಾಮಾಯಣವನ್ನು ಒಂದೇ ಶ್ಲೋಕದಲ್ಲಿ ಹೇಳಲಾಗಿದೆ. ಇಷ್ಟಕ್ಕೆ ತೃಪ್ತವಾಗದೇ ಮತ್ತೆ ಮುಂದುವರೆದು ಒಂದೇ ಪಾದದಲ್ಲಿ (ಒಂದು ಶ್ಲೋಕವನ್ನು ನಾಲ್ಕು ಪಾದಗಳಾಗಿ ವಿಭಜನೆ ಮಾಡಿರುತ್ತಾರೆ) ರಾಮಾಯಣವನ್ನು ಹೇಳಿದೆ. ನಮಗೆ ಅತ್ಯಂತ ಪ್ರಿಯವಾದ ಈ ಪಾದವೊಂದನ್ನೇ ಇಂದು ಅನುಸಂಧಾನ ಮಾಡೋಣ. ಇದರಲ್ಲಿ ಸೂಚ್ಯವಾಗಿ ಒಂದು ಶ್ಲೋಕದ ಒಂದೇ ಪದದಲ್ಲಿ ಇಡೀ ರಾಮಾಯಣವನ್ನೇ ಹೇಳಿದೆ.
ಸ್ಮರತಾಂ ಹೃದಿವಿನ್ಯಸ್ಯ ವಿದ್ಧಂ ದಂಡಕ ಕಂಟಕೈಃ ಸ್ವಪಾದಪಲ್ಲವಂ ರಾಮಃ ಆತ್ಮಜ್ಯೋತಿರಘಾತ್ತತಃ|
ಇದು ರಾಮನನಿರ್ವಾಣದ ವಿವರವನ್ನು ತಿಳಿಸುತ್ತದೆ. ಸೀತಾವಿಯೋಗದ ವರ್ಣನೆ ಇದೆ, ರಾಮನಿಗೆ ಎಷ್ಟು ಕಷ್ಟವಾಯಿತು ಸೀತಾವಿಯೋಗದಿಂದ ಅಂತ. ಆ ಬಳಿಕ ಆತ್ಮಜ್ಯೋತಿಯಲ್ಲಿ ವಿಲೀನವಾದನು, ಅದಕ್ಕೆ ಮೊದಲು ಏನು ಮಾಡಿದ ಅಂತ ಅದನ್ನು ಶ್ಲೋಕ ಹೇಳಿದೆ. “ಭಾವಿಸುವವರ ಹೃದಯದಲ್ಲಿ ದಂಡಕೆಯ ಮುಳ್ಳುಗಳು ಚುಚ್ಚಿದ ತನ್ನ ಪಾದಗಳನ್ನು ಇರಿಸಿ ಶ್ರೀರಾಮನು ಆತ್ಮಜ್ಯೋತಿಯಲ್ಲಿ ವಿಲೀನವಾದನು”. ಪ್ರಪಂಚಕ್ಕೆ ರಾಮ ಏನು ಬಿಟ್ಟು ಹೋದ? ಏನು ಇಟ್ಟು ಹೋದ? ಅನ್ನುವುದನ್ನು ಈ ಶ್ಲೋಕ ಹೇಳುತ್ತದೆ. ರಾಮ ಹೋದನಾ? ಹೊರಟೇ ಹೋದನಾ? ಎನ್ನುವುದಕ್ಕೆ ಈ ಶ್ಲೋಕ ಉತ್ತರ. ರಾಮ ನಮ್ಮನ್ನು ಬಿಟ್ಟು ಹೋದದ್ದಲ್ಲ, ಇಟ್ಟು ಹೋದದ್ದು; ನಮ್ಮ ಹೃದಯದಲ್ಲಿ ತನ್ನ ಪಾದಪದ್ಮಗಳನ್ನು ಇಟ್ಟುಹೋದದ್ದು. ಅವಿನಾಶಿ ಅವನು, ಅಜರ ಅಮರ ಅವನು, ಇಲ್ಲವಾಗುವುದೆಂದರೆ ಏನು? ಆ ರೀತಿ ಇಲ್ಲ, ಅವನು ಬಿಟ್ಟುಹೋಗಲು ಸಾಧ್ಯವೇ ಇಲ್ಲ. ತನ್ನನ್ನು ನೆನೆಸಿದವರ ಹೃದಯದಲ್ಲಿ ತನ್ನ ಪಾದಗಳನ್ನು ಇಟ್ಟುಹೋದ, ಅಲ್ಲಿ ಅವನ ಅವತಾರವಾಯಿತು. ಅಂದರೆ ಅವನ ನಿರ್ಯಾಣವೂ ಅವತಾರವೇ. ನೆನೆಸಿದವರ ಹೃದಯದಲ್ಲಿ ಪಾದಾರ್ಪಣ ಅದು. ಅಲ್ಲಿ ನೋವನ್ನುಂಟುಮಾಡುವ ಪದಗುಚ್ಛ ಯಾವುದೆಂದರೆ ಇದು, ಎಂತಹ ಪಾದಗಳು ಅವು ಎಂದರೆ ದಂಡಕಾರಣ್ಯದಲ್ಲಿ ಬಗೆಬಗೆಯ ಮುಳ್ಳುಗಳು ಕಚ್ಚಿ ನೋವಿಗೀಡಾಗಿದ್ದ ಪಾದಗಳು, ಯಾವ ಪಾದಗಳಿಗೆ ಸೀತೆಯ ಕರಸ್ಪರ್ಶವೂ ಕಠಿಣವಾಗಿ ತೋರಿಕೊಳ್ಳುತ್ತಿದ್ದವೋ? ಅಂತಹ ಪಾದಗಳಿಗೆ ಎಷ್ಟು ಮುಳ್ಳುಗಳು ಚುಚ್ಚಿದ್ದವೋ? ಆ ಮುಳ್ಳುಗಳು ಚುಚ್ಚಿದರೆ ಅವಸ್ಥೆ ಏನಾಗಿರಬೇಡ; ಅಂತಹ ಪಾದಗಳನ್ನು ತನ್ನವರ ಹೃದಯದಲ್ಲಿ ಇರಿಸಿಹೋದ ಶ್ರೀರಾಮ. ಇದೇ ಇಂದಿನ ಪ್ರವಚನದ ತತ್ವ, ಕಂಟಕ ತನಗೆ ಕಿಸಲಯ ಪರರಿಗೆ. ಕಿಸಲಯವೆಂದರೆ ಚಿಗುರು ಎಂದು ಅರ್ಥ. ದಂಡಕೆಯಲ್ಲಿ ಮಾತ್ರವೇ ಕಂಟಕಗಳು ಕಡಿದವೇ ಎಂದರೆ ಅಲ್ಲ, ಅಯೊಧ್ಯೆಯಿಂದ ಲಂಕೆಯವರೆಗೆ, ಲಂಕೆಯಿಂದ ಅಯೋಧ್ಯೆಯವರೆಗೆ ಎಲ್ಲೆಲ್ಲೂ ನೋವು, ಎಲ್ಲೆಲ್ಲೂ ಕಂಟಕಗಳೇ.
ಇದು ಮಹಾಪುರುಷರ ಚರಿತ್ರೆ. ಮಹಾಪುರುಷರು ಎಲ್ಲರೂ ಬದುಕಿದ್ದು ಹೀಗೆಯೇ, ಯಾಕೆ ಕಂಟಕ ತನಗೆ ಅಂದರೆ ಯಾರು ತಮ್ಮನ್ನು ನಂಬಿರುತ್ತಾರೋ ಅವರೆಲ್ಲರ ನೋವು, ಆ ನೋವಾದರೂ ಅವರದ್ದಲ್ಲ, ಯಾಕೆಂದರೆ ನೋವು ಬರಬೇಕಾದರೆ ಅದರ ಹಿಂದೆ ಪಾಪವಿರಬೇಕು, ಸುಖಕ್ಕೆಲ್ಲ ಹಿಂದೆ ಪುಣ್ಯವಿರಬೇಕು. ರಾಮನಿಗೆಲ್ಲಿಯ ಪುಣ್ಯಪಾಪ. ಮತ್ತೆ ಆ ಕಷ್ಟಗಳು ಯಾಕೆ? ಅಂದರೆ, ಅದು ಭಕ್ತರ ಕಷ್ಟಗಳು. ರಾಮರಾಜ್ಯ ಉದಯ ಆಯಿತಲ್ಲವಾ? ಎಲ್ಲೆಲ್ಲೂ ಸಂತೋಷವೇ ತುಂಬಿತಲ್ಲವಾ! ಯಾರನ್ನೂ ಅನರ್ಥಗಳು ಮುಟ್ಟಲಿಲ್ಲ, ಎಲ್ಲಿ ಹೋಯಿತು ಅದೆಲ್ಲಾ? ಜನರ ಕಷ್ಟಗಳು, ಜನರ ನೋವುಗಳು ಎಲ್ಲಿ ಹೋದವು? ಅಂದರೆ ರಾಮನೇ ಎಲ್ಲವನ್ನೂ ಸ್ವೀಕರಿಸಿದ. ಯಾರುಯಾರಿಗೆ ಏನೆಲ್ಲಾ ಅಪವಾದ ಬರಬಹುದಾಗಿತ್ತೋ ಎಲ್ಲವೂ ರಾಮನಿಗೇ ಬಂತು. ಸೀತೆ ಅನುಭವಿಸಿದಳಲ್ಲ! ಯಾರ್ಯಾರಿಗೆ ಸ್ಥಾನಚ್ಯುತಿ ಆಗಲಿಕ್ಕಿತ್ತೋ ರಾಮನಿಗೇ ಬಂತು, ರಾಮ ರಾಜ್ಯವನ್ನು ಕಳೆದುಕೊಂಡ. ಯಾರ್ಯಾರಿಗೆ ಬಂಧುವಿಯೋಗ ಆಗಲಿಕ್ಕಿತ್ತೋ ರಾಮನೇ ಕಳಕೊಂಡ; ಬಂಧು ಮಿತ್ರರು, ಪ್ರಜೆಗಳು, ಪರಿವಾರ ಎಲ್ಲವನ್ನೂ ಕಳೆದುಕೊಂಡು ತಾನೇ ಕಾಡಿಗೆ ಹೋದ. ಯಾರ್ಯಾರಿಗೆ ಏನೇನು ಯುದ್ಧ ಮಾಡಲಿಕ್ಕಿತ್ತೋ ಎಲ್ಲವನ್ನೂ ತಾನೇ ಮಾಡಿದ, ಯಾರ್ಯಾರು ಏನೇನು ಕಳೆದುಕೊಳ್ಳಲಿಕ್ಕಿತ್ತೋ? ಎಲ್ಲವನ್ನೂ ರಾಮನೇ ಕಳೆದುಕೊಂಡ. ತಾನು ಎಲ್ಲವನ್ನೂ ಅನುಭವಿಸಿ ನಂಬಿದವರಿಗೆ ಸುಖ ಕೊಟ್ಟ. ಅವನಿಗೆ ದಂಡಕದ ಮುಳ್ಳು ಚುಚ್ಚಿಸಿಕೊಳ್ಳುವ ಅವಶ್ಯಕತೆ ಏನಿತ್ತು? ಅದೂ ನಮಗಾಗಿ! ಬಂದವನು ಅಯೋಧ್ಯೆಯ ರಾಜನಾಗಿದ್ದು ಹೋಗಬಹುದಿತ್ತು, ಲಂಕೆಗೆ ಯಾಕೆ ಬಂದ? ಅದೂ ನಮಗಾಗಿಯೇ, ಅಂದರೆ ರಾವಣ ಸಂಹಾರವನ್ನು ಜೀವಕೋಟಿಗಳು ಬಯಸಿದ್ದವು; ಅದು ಅತ್ಯಂತ ಅನಿವಾರ್ಯ ಆಗಿತ್ತು ಪ್ರಪಂಚಕ್ಕೆ. ಅದಿಲ್ಲದಿದ್ದರೆ ಪ್ರಪಂಚಕ್ಕೆ ಉಳಿಗಾಲ ಇರಲಿಲ್ಲ. ಅದಕ್ಕೆ ಪ್ರಯಾಣ ಲಂಕೆಗೆ. ಈ ಮಧ್ಯೆ ಎಷ್ಟೆಲ್ಲ ರಾಕ್ಷಸರೊಡನೆ ಹೋರಾಟ, ಅದೆಷ್ಟು ಜನರೊಡನೆ ಕಾದಾಟ. ರಾಕ್ಷಸರ ಮೋಸ, ವಂಚನೆ, ಛಲ ಇವುಗಳನ್ನು ಅನುಭವಿಸಿದ್ದು. ರಾಮಾಯಣದ ಮಧ್ಯಭಾಗ ಪೂರ್ತಿ ಕರುಣರಸದಿಂದಲೇ ಪೂರಿತವಾಗಿದೆ. ಎಲ್ಲೆಲ್ಲ ಸೀತಾರಾಮರ ಶೋಕ, ದುಃಖ ಅವರದ್ದಾ ಅಂದರೆ ಅವರದ್ದಲ್ಲ ನಮ್ಮದೇ, ಅದನ್ನು ಅವರು ಅನುಭವಿಸಿದರು. ಒಂದಷ್ಟು ರಾಮ ಒಂದಷ್ಟು ಸೀತೆ, ಯಾರಿಗೆ ಹೆಚ್ಚು ನೋವಾಯಿತು ಅಂತ ಹೇಳುವುದು ಕಷ್ಟ, ಎಲ್ಲರದ್ದೂ ರಾಮ ತೆಗೆದುಕೊಂಡರೆ ರಾಮನದ್ದೂ ಸೀತೆ ತೆಗೆದುಕೊಂಡಳು.
ರಾಮ ಅಂದರೇ ಸುಕುಮಾರ, ಬಾಲರಾಮ ಹೇಗಿರಬಹುದು? ಅವನೇ ಕಾಡಿಗೆ ಹೋದ, ವಿಶ್ವಾಮಿತ್ರರು ಯಜ್ಞರಕ್ಷಣೆಗಾಗಿ ಕರೆದುಕೊಂಡು ಹೋಗುತ್ತಾರೆ. ಹುಲ್ಲಿನ ಮೇಲೆ ಮಲಗಿ ರಾತ್ರಿ ಕಳೆಯುತ್ತಾರೆ, ಅಲ್ಲಿಂದಲೇ ಪ್ರಾರಂಭ. ಮುಂದೆ ಸಾಲುಸಾಲಾಗಿ ದುಃಖಗಳು. ಇದನ್ನು ಭಾಗವತ ಹೃದಯಂಗಮವಾಗಿ ವರ್ಣನೆ ಮಾಡಿದೆ. ಮನಸ್ಸುಮುಟ್ಟುವಂತೆ ವರ್ಣನೆ ಮಾಡಿದೆ.
ಆ ಸೀತಾವಿರಹದ ದುಃಖವನ್ನು ಎಷ್ಟು ಅದ್ಭುತವಾಗಿ ಭಾಗವತದಲ್ಲಿ ವಿವರಿಸುತ್ತಾರೆ ಅಂದರೆ ಅದು ಸ್ವಯಂ ಈಶ್ವರನಿಗೇ ಕಷ್ಟವಾಯಿತಂತೆ. ಏಕಪತ್ನೀವ್ರತಧರ ಅವನು, ಯಾರಿಗೂ ನೋವನ್ನು ಕೊಟ್ಟಿರಲಿಲ್ಲ ಅವನು. ಅವನಿಗೆ ಎಂತಹ ನೋವು ಬಂದಿತೆಂದರೆ, ಅಯೋಧ್ಯೆಯ ಅರಮನೆಗೆ ಮಹಾಭಾಗ್ಯವನ್ನು ಕೊಟ್ಟ ಭಗವದವತಾರದ ಭಾಗ್ಯವನ್ನು. ಆ ಅರಮನೆ ಅವನಿಗೆ ವನವಾಸವನ್ನು ಕೊಟ್ಟಿತು. ಅಯೋಧ್ಯೆಗೆ ರಾಮರಾಜ್ಯವನ್ನು ಕೊಟ್ಟ, ಪ್ರತಿಯಾಗಿ ದೊರಕಿದ್ದು ವನವಾಸ. ಎಷ್ಟೋ ಸಾರಿ ಯೋಚಿಸುತ್ತೇವೆ, ಅಯೋಧ್ಯೆ ಯಾಕೆ ಹೀಗೆ ಹಾಳಾಗಿದೆ ಅಂತ. ಇಂತಹ ಪರಿಸ್ಥಿತಿ ಯಾಕೆ ಈಗಲೂ ಅಂತ, ಅಯೋಧ್ಯೆ ನಮಗೆ ಖಂಡಿತ ಪೂಜ್ಯ ಆದರೆ ಅಯೋಧ್ಯೆ ರಾಮಸೀತೆಯರಿಗೆ ಕೊಟ್ಟ ನೋವಿದೆಯಲ್ಲ, ಅದಕ್ಕೆ ಸೀತೆ ಹಾಕಿದ ಶಾಪ ಕಾರಣ ಅಂತ. ಹಾದಿ ಬೀದಿಗಳಲ್ಲಿ ಸೀತೆಯ ಚಾರಿತ್ರ್ಯದ ಬಗ್ಗೆ ಜನಗಳು ಮಾತಾಡುತ್ತಾರೆ. ಅದು ರಾಮನನ್ನು ಅತಿಯಾಗಿ ನೋಯಿಸಿತು; ಸೀತೆಯನ್ನು ಇನ್ನೆಷ್ಟು ನೋಯಿಸಿದೆಯೋ? ಮನುಷ್ಯರಾಗಿ ಬಂದಮೇಲೆ ಅದು ಇರಲೇ ಬೇಕಲ್ಲವಾ? ಅದೆಲ್ಲವೂ ತಗುಲಲೇ ಬೇಕಲ್ಲವಾ? ತಗುಲದೇ ಇರಲು ಸಾಧ್ಯವಿಲ್ಲ, ಸೀತಾ ನಿರ್ವಾಣದ ಬಳಿಕ ತನ್ನೆಲ್ಲ ಶಕ್ತಿಯನ್ನು ಹಾಕಿ ಶೋಕವನ್ನು ತಡೆದುಕೊಳ್ಳಲು ಪ್ರಯತ್ನಿಸಿದ, ಆದರೆ ಆಗಲಿಲ್ಲ. ಸೀತೆಯ ಜೊತೆ ನಡೆಸಿದ ಜೀವನದಲ್ಲಿನ ಬೇರೆ ಬೇರೆ ಸನ್ನಿವೇಶದಲ್ಲಿನ ಬೇರೆ ಬೇರೆ ಗುಣಗಳು ಆ ನೆನಪುಗಳು. ಸೀತೆ ಅಂದರೆ ಅಂಥವಳು ವರನಾರಿ, ನಾರೀರತ್ನ ಅವಳು. ರಾಮನ ಬಗ್ಗೆ ನಾವು ವಾದಕ್ಕಾಗಿಯಾದರೂ ಏನಾದರೂ ಹೇಳಬಹುದು, ಆದರೆ ಸೀತೆಯ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ಹಾಗಾಗಿ ಬದುಕಿನುದ್ದಕ್ಕೂ ಆಕೆ ಬದುಕಿದ ರೀತಿ, ಆಯಾ ಸನ್ನಿವೇಶಗಳಲ್ಲಿ ಅವಳು ಏರಿದ ಎತ್ತರ, ಅವಳ ಗುಣಗಳು, ಇದನ್ನು ನೆನಪು ಮಾಡಿಕೊಂಡ. ಆ ಶೋಕವನ್ನು ತಡೆಯಲಿಕ್ಕೆ ಸಾಕ್ಷಾತ್ ಪರಮಾತ್ಮನಾದ ಅವನಿಗೇ ಕಷ್ಟವಾಯಿತು. ಈಶ್ವರ ಶಬ್ದಕ್ಕೆ ಅರ್ಥವೆಂದರೇ ಪ್ರಭುತ್ವ ಉಳ್ಳವನು ಅಂತ. ಹಾಗೆ ಯಾರಿಗೆ ತನ್ನ ದೇಹದ ಮೇಲೆ, ಮನಸ್ಸಿನ ಮೇಲೆ, ತನ್ನ ಇಂದ್ರಿಯಗಳ ಮೇಲೆ, ಮುಂದುವರಿದು ಬ್ರಹ್ಮಾಂಡದ ಮೇಲೆ ಪ್ರಭುತ್ವ ಇದೆಯೋ ಅವನು. ಅವನಿಗೇ ದುಃಖ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲಿಂದ ಮುಂದೆ ಸುದೀರ್ಘವಾಗಿ ಬ್ರಹ್ಮಚರ್ಯವನ್ನು ಧಾರಣೆಮಾಡಿ ಯಜ್ಞಮಯನಾಗಿ ಇದ್ದು, ಬಳಿಕ ಈ ಲೋಕವನ್ನು ಬಿಟ್ಟು ಹೋಗುತ್ತಾನೆ. ಅದನ್ನೇ ಭಾಗವತದಲ್ಲಿ ಹೇಳಿದ್ದು ಆತ್ಮಜ್ಯೋತಿರಘಾತ್ತದಾ ಅಂತ. ಹಾಗಾಗಿ ನಾವು ಅವನ ಸ್ಮರಣೆ ಮಾಡಬೇಕು. ಆ ಒಂದೊಂದು ಮುಳ್ಳನ್ನೂ ಆತ ಚುಚ್ಚಿಸಿಕೊಂಡಿದ್ದು ನಮಗಾಗಿ ಎಂಬುದು ನಮಗೆ ನೆನಪಿರಬೇಕು. ಆ ಕಾಲದವರಿಗಾಗಿ ಮಾತ್ರವೇ ಅಲ್ಲ, ಹಾಗೆ ಅವನು ಅಂದು ಇರದಿರುತ್ತಿದ್ದರೆ ನಮಗೆ ಇಂದು ರಾಮಾಯಣವೇ ಇರುತ್ತಿರಲಿಲ್ಲ. ಇಂದು ರಾಮಾಯಣ ನಮಗೆ ಮುಕ್ತಿದಾಯಕವಾಗಿದೆ. ನಮ್ಮ ಬದುಕನ್ನು ಕೂಡಾ ಹೂವಾಗಿ ಅರಳುವಂತೆ ಮಾಡಿದೆ. ನಮ್ಮ ಮುಳ್ಳುಗಳು ಕೂಡಾ ಅವನಿಗೇ ಚುಚ್ಚಿದೆ. ಭಗವಂತನಿಗೆ ಭಕ್ತರೇ ಶಿಕ್ಷೆ ಅಂತಾರೆ, ಹಾಗೆ ಈ ಜೀವಗಳು ಮುಳ್ಳಾಗಿ ಅವನನ್ನು ಚುಚ್ಚಿಕೊಂಡಿದ್ದಾರೆ, ನಮ್ಮ ನೋವು ನಿನಗೆ ಅಂತ. ಅದನ್ನು ತಾನು ಸ್ವೀಕರಿಸಿ, ಜೀರ್ಣಿಸಿಕೊಂಡು ರಾಮರಾಜ್ಯವನ್ನು ಆ ಕಾಲಕ್ಕೆ ಕೊಟ್ಟ, ಈ ಕಾಲಕ್ಕೆ ರಾಮಚರಿತವನ್ನು ಕೊಟ್ಟ, ರಾಮನಾಮವನ್ನು ಕೊಟ್ಟ. ನಮ್ಮೆದೆಗಳಲ್ಲಿ ಕಾಲಿಟ್ಟು ತನ್ನ ಆತ್ಮಜ್ಯೋತಿಯಲ್ಲಿ ಲಯಗೊಂಡ.
ಬನ್ನಿ ನಾವೆಲ್ಲರೂ ಸೇರಿ ಅವನ ನಾಮಾನುಸಂಧಾನವನ್ನು ಮಾಡೋಣ. ತತ್ವಭಾಗವತದ ಕೊನೆ ಹೀಗೇ ಇರಬೇಕು, ಮತ್ತೆ ಹೇಗಿರಬೇಕು? ಹರೇರಾಮ ಹರೇರಾಮ ಅಂತ ಒಂದು ದೃಷ್ಟಿ ವೈಕುಂಠದ ಕಡೆಗೆ ಒಂದು ದೃಷ್ಟಿ ಅಯೋಧ್ಯೆಯ ಕಡೆಗೆ ಇಟ್ಟು ಜಪಿಸಬೇಕು. ಹರೇಕೃಷ್ಣ ಎನ್ನುವಾಗಲೂ ಒಂದು ದೃಷ್ಟಿ ವೈಕುಂಠದ ಕಡೆ ಹಗೂ ಮತ್ತೊಂದು ದೃಷ್ಟಿ ಮಥುರೆಯ ಕಡೆಗೆ ಇಟ್ಟು ಧ್ಯಾನಿಸಬೇಕು. ಇವನೇ ಅವನು ಅವನೇ ಇವನು ಎಂಬಂತೆ ವೈಕುಂಠವೇ ಧರಣಿಗೆ ಬಂತು ಎನ್ನುವ ಭಾವದಲ್ಲಿ ಹಾಡಿಕೊಳ್ಳೋಣ.
ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:
Leave a Reply