#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
09-08-2018:

ಯಾರಲ್ಲಿ ಭಾವ ಉಂಟೋ, ರಸ ಉಂಟೋ ಅವರೆಲ್ಲ ಬನ್ನಿ, ದಡದಲ್ಲಿ ನಿಂತು ಭಾಗವತ ಪಾನಮಾಡುವುದು ಬೇಡ, ಅದರಲ್ಲಿ ಮುಳುಗಿ. ಭಾಗವತವೇ ನಿಮ್ಮನ್ನು ಪಾನಮಾಡುವಂತಾಗಲಿ.
ಲಗ್ನ ಎಂದರೆ ಸೇರುವುದು, ಬಿಡದಂತೆ ಅಂಟಿಕೊಳ್ಳುವುದು.

ಮೀರಾ ರಾಜಸ್ಥಾನದವಳು, ತಂದೆ ರತ್ನಸಿಂಹ, ಚಿಕ್ಕವಳಾಗಿದ್ದಾಗ ಮನೆಮುಂದೆ ಮದುವೆದಿಬ್ಬಣ ಹಾದುಹೋಗುವಾಗ ಕುತೂಹಲಕ್ಕೆ ಕೇಳುತ್ತಾಳೆ “ತನ್ನದು ಯಾವಾಗ? ಯಾರೊಂದಿಗೆ?” ಆಗ ತಾಯಿ ಹೇಳಿದ್ದು “ನಿನ್ನದು ಅದಾಗಲೇ ಆಗಿದೆ, ಕೃಷ್ಣನೇ ನಿನ್ನವನು” ಎಂದು. ಅದೇ ಅವಳ ಜೀವನದಲ್ಲಿ ಗಟ್ಟಿಯಾಯಿತು, ನಿಜವಾಯಿತು, ಲಗ್ನ ಉಂಟಾದದ್ದು ಆ ಘಳಿಗೆಯಲ್ಲೇ.

ತತ್ತ್ವಭಾಗವತಮ್

ಮಿರಾಳನ್ನು ತನ್ನ ಪ್ರಯತ್ನದಿಂದ ಹಿಂದೆ ಸರಿಯುವಂತಹ ಎಲ್ಲ ಪ್ರಯತ್ನ ನಡೆಯಿತು, ಚಿಕ್ಕ ವಯಸ್ಸಿನಲ್ಲೆ ವಿವಾಹ ಕೂಡಾ ಮಾಡಲಾಯಿತು. ಅದೇ ಅವಳಿಗೆ ಪ್ರಬಲ ಅಡ್ಡಿ, ಅವಳಿಗೆ ಕೃಷ್ಣನಲ್ಲದೇ ಬೇರಾರೂ ಪತಿಯಲ್ಲ, ಸ್ವಂತ ಅತ್ತಿಗೆಯೇ ಅವಳ ಚಾರಿತ್ರ್ಯದ ಬಗ್ಗೆ ಇಲ್ಲಸಲ್ಲದ ಮಾತಾಡುತ್ತಾಳೆ, ಅವಳಾದರೋ ರಾತ್ರಿಯಿಡೀ ಕೃಷ್ಣಮಂದಿರಕ್ಕೆ ಹೋಗಿ ಕೃಷ್ಣನ ಜೊತೆಗೇ ಮಾತುಕಥೆ ನಡೆಸುತ್ತಾಳೆ, ಗಂಡನೇ ಕೇಳಿದರೂ, ಕೃಷ್ಣನೇ ತನ್ನ ಪ್ರಿಯಕರ ಎಂಬ ಉತ್ತರ ನೀಡುತ್ತಾಳೆ. ಅವಳ ಸಾಧುಸಂತರೊಡಗಿನ ಒಡನಾಟಕ್ಕೂ ಅಡ್ಡಿ ಬರುತ್ತದೆ, ಜನ ಏನೆಲ್ಲಾ ಮಾತಾಡುತ್ತಾರೆ.
ಅವಳ ಗಂಡ ತೀರಿಕೊಂಡಾಗಲೂ “ನನ್ನ ಪತಿಗೆ ಸಾವಿಲ್ಲ, ಸಾಯುವವನು ನನ್ನ ಪತಿಯಲ್ಲ” ಎನ್ನುತ್ತಾಳೆ, ಸಂಪ್ರದಾಯಸ್ಥ ಮನೆಯವರು ಅವಳನ್ನು ಬಗೆಬಗೆಯಾಗಿ ಕಟ್ಟಿಹಾಕಲು ಪ್ರಯತ್ನಿಸುತ್ತಾರೆ, ವಿಷಕೊಟ್ಟಾಗಲೂ ಅದನ್ನು ಕೃಷ್ಣನಿಗೆ ನಿವೇದನೆ ಮಾಡಿಯೇ ಸೇವಿಸುತ್ತಾಳೆ, ವಿಷವೂ ಅಮೃತವಾಗುತ್ತದೆ. ಹೂಮಾಲೆಯೆಂದು ಹಾವನ್ನು ಕಳಿಸಿದಾಗಲೂ ಅವಳ ಭಾವಕ್ಕೆ ಒಲಿದು ಅದು ಕೃಷ್ಣನ ವಿಗ್ರಹವಾಗುತ್ತದೆ. ಪ್ರಹ್ಲಾದನಂತೆಯೇ ಇವಳಿಗೂ ಅತಿಯಾದ ಕಷ್ಟ ಬಂದಾಗಲೂ ಹರಿಯ ನಾಮವೇ ಬಾಯಿಯಲ್ಲಿ ಬಂದಿತು.
ಸಮೃದ್ಧಿಯಿದ್ದರೂ ಅವಳಿಗೆ ಯಾವುದರಲ್ಲಿಯೂ ಮನವಿರಲಿಲ್ಲ, ಭಗವಂತನೆಡೆಗೆ ಸೆಳೆತ ತೀವ್ರವಾಗಿತ್ತು. ಗೋವಿಂದನಲ್ಲೇ ಇದ್ದಳು, ತೀವ್ರವಾಗಿ ಮುಳುಗಿದ್ದಳು, ಕೃಷ್ಣರಸವನ್ನು ಪಾನ ಮಾಡಿದ್ದಳು. ಅವಳ ಕುರಿತು ಮಾತನಾಡುವುದಕ್ಕಿಂತ ಕೀರ್ತನೆ ಮಾಡುವುದೇ ಒಳಿತು, ಏಕೆಂದರೆ ಅವಳು ಜೀವನವಿಡೀ ಮಾಡಿದ್ದು ಅದನ್ನೇ.
ಅವಳಿಗೆ ದೀಕ್ಷೆಯಾಗಿದ್ದು ರಾಮತಾರಕ ಮಂತ್ರ, ಅವಳು ಜೀವನವಿಡೀ ಆರಾಧಿಸಿದ್ದು ಕೃಷ್ಣನನ್ನು.

ಅವಳ ಕೀರ್ತನೆಗೆ ಮೆಚ್ಚಿ ಮಾರುವೇಷದಲ್ಲಿದ್ದ ಅಕ್ಬರ್ ಅವಳ ಪಾದಮುಟ್ಟಿ ನಮಸ್ಕಾರ ಮಾಡಿದಾಗಲೂ ಅವಳಿಗದರ ಅರಿವಿರಲಿಲ್ಲ. ಆದರೆ ಆಕೆಯ ಮಾವ, ರಾಜಾ ರಾಣಾನಿಗೆ ಅದು ಸಹಿಸಲಾಗಲಿಲ್ಲ, ನೀರಿನಲ್ಲಿ ಮುಳುಗಿಸಿ ಸಾಯಿಸುವ ಶಿಕ್ಷೆ ನೀಡಿದ, ಅಲ್ಲೂ ಕೃಷ್ಣ ಅವಳ ಕೈ ಹಿಡಿದ, ನಿನ್ನ ಲೌಕಿಕ ಸಂಬಂಧಗಳು ಕಳಚಿತು ನೀನಿನ್ನು ನನ್ನವಳು ಎಂದ, ಬದುಕಿಬಂದ ಅವಳನ್ನು ಕಂಡು ರಾಣಾನ ಮನಸ್ಸು ಕರಗಿ ಹಿಂತಿರುಗಿ ಬರಲು ಕರೆದರೂ ಮೀರಾ ಒಪ್ಪಲಿಲ್ಲ ಕೃಷ್ಣಮಂದಿರದಲ್ಲೇ ಉಳಿದಳು. ಅರ್ಚಕರು ನೀನು ಹೋದರೆ ಕೃಷ್ಣನೂ ನಿನ್ನ ಹಿಂದೆಯೇ ಬಂದಾನು ಅಂತ ಹೇಳುತ್ತಾರೆ. ಕೊನೆಗೊಂದು ದಿನ ಕೃಷ್ಣನ ಮಂದಿರದೊಳಗೇ ಹಾಡುತ್ತಾ ಕುಳಿತ ಮೀರಾ ಎಲ್ಲರೂ ಭಾವಪರವಶರಾಗಿದ್ದಾಗ ಕೃಷ್ಣನಲ್ಲಿಯೇ ಲೀನವಾಗುತ್ತಾಳೆ, ಸಾಕ್ಷಿಯಾಗಿ ಅವಳು ಧರಿಸಿದ್ದ ವಸ್ತ್ರ ಕೃಷ್ಣನ ವಿಗ್ರಹಕ್ಕೆ ಸುತ್ತಿಕೊಂಡಿರುವುದು ಕಾಣುತ್ತದೆ.
ಮೀರಾ ಪ್ರಪಂಚದ ಕ್ಲೇಶ ಕಂಡು ತನ್ನ ದೇಹವನ್ನೂ ಇಲ್ಲಿ ಬಿಡದೇ ತೆಗೆದುಕೊಂಡು ಹೋದಳು. ಇಡೀ ಜೀವನ ಅವಳನ್ನು ಕೃಷ್ಣನಿಂದ ದೂರಮಾಡುವ ಪ್ರಯತ್ನವನ್ನು ಪ್ರಪಂಚ ಮಾಡಿತು. ಸಾಮಾನ್ಯವಾಗಿ ಯಾರಾದರೂ ಹೀಗೆ ಹೊರಟಾಗ, ಅವರ ಪರಿವಾರ ಅವರನ್ನು ತಡೆಯುತ್ತೆ, ತಮ್ಮನ್ನು ಬಿಟ್ಟು ಹೋಗಬಾರದು ಅಂತ.

ಅನುಕ್ಷಣವೂ ಏನನ್ನು ಮಾಡಿರುತ್ತೇವೋ ಕೊನೆಯಕ್ಷಣದಲ್ಲಿ ಅದೇ ಉಳಿಯುತ್ತದೆ. ಆ ಕೊನೇಕ್ಷಣದಲ್ಲಿ ಏನಾಗಿದ್ದೆವೋ ಅದೇ ಮುಂದೆ ಆಗುತ್ತೇವೆ. ಭರತನದ್ದೇ ಉದಾಹರಣೆ ಇದಕ್ಕೆ, ಕೊನೇ ಕ್ಷಣದಲ್ಲಿ ಜಿಂಕೆಯ ಮೇಲೆ ಮೋಹ ಬೆಳೆಸಿಕೊಂಡ ಭರತ ಮುಂದಿನ ಜನ್ಮದಲ್ಲಿ ಜಿಂಕೆಯಾಗಿಯೇ ಹುಟ್ಟಿದ. ಹಾಗೆ ಕೊನೆಕ್ಷಣದ ಸಿದ್ಧತೆಯನ್ನು ಜೀವನವಿಡೀ ಮಾಡಬೇಕು ಯಾಕೆಂದರೆ ಕೊನೆಕ್ಷಣ ಯಾವಾಗ ಬರುತ್ತದೆಯೋ ನಮಗೆ ತಿಳಿದಿಲ್ಲ.

ಸಮುದ್ರ ಹೇಗೆ ಕಸವನ್ನು ಹೊರಹಕುತ್ತೋ ಭಾಗವತವೂ ಹಾಗೆಯೇ ಲೀನವಾಗದವರನ್ನು ಹೊರಗೆ ಹಾಕುತ್ತೆ. ಮತ್ತೆ ಬರಬಹುದು ಆದರೆ ಅದಕ್ಕೆ ಆ ಮಟ್ಟಿನ ಭಾವ ತೀವ್ರತೆ ಬೇಕು. ಲೋಕಮರ್ಯಾದೆಯನ್ನು ಮೀರಿದ ಪ್ರಮಾಣದ ಮರ್ಯಾದೆ ಬೇಕಾಗುತ್ತದೆ.
ಒಮ್ಮೆ ಅ ರುಚಿ ಸಿಕ್ಕಿದರೆ ಬೇರೆಯದು ರುಚಿಸಲ್ಲ, ರಾಣಾನಿಗೆ ಇವಳು ಯಾಕೆ ಹೀಗೆ ಎನ್ನುವ ಪ್ರಶ್ನೆ ನಿರಂತರ. ಮುಂದಾದರೂ ಅದು ಅವನಿಗೆ ಅರಿವಾಗಿದ್ದರೆ ಅವಳನ್ನು ಪೀಡಿಸಿದ ಪಾಪದಿಂದ ಅವನಿಗೆ ಮುಕ್ತಿ ಇಲ್ಲದಿದ್ದರೆ ಅದು ಅನಂತ ಪೀಡೆ.

ಸಾಮಾನ್ಯರನ್ನು ಪೀಡಿಸಿದರೇ ಅದು ಪಾಪವಾಗಿ ಸುತ್ತುತ್ತದೆ ಇನ್ನು ಇಂತಹ ಮಹಾತ್ಮರನ್ನು ಪೀಡಿಸಿದರೆ ಅದು ಎಲ್ಲಕ್ಕಿಂತ ದೊಡ್ಡ ಪಾಪವಾಗುತ್ತದೆ. ಎಲ್ಲ ಮಹಾತ್ಮರೂ ದೇಹ ಬಿಡುತ್ತಾರೆ. ನಂತರ ದೇಹ ಶವವೇ. ಆದರೆ ಇವಳ ದೇಹ(ಶವವೂ) ಅದೆಷ್ಟು ಪವಿತ್ರವೆಂದರೆ ಅದೂ ಭಗವಂತನ ಪಾಲಾಯಿತು. ಊರಲ್ಲಿ ಸಾವಾಗಿದ್ದರೆ ಊರಿಡೀ ಮೈಲಿಗೆ ಇರುತ್ತದೆ ಹೀಗಿರುವಾಗ ಗುಡಿಯಲ್ಲಿ, ಗರ್ಭಗೃಹದಲ್ಲಿ ದೇಹವನ್ನೂ ಬಿಡದಂತೆ ದೇವನ ಪಾಲು ಮಾಡಿ, ಮುಕ್ತಿ ಹೊಂದಿದ್ದು ಅತ್ಯಂತ ಮಹತ್ವದ ವಿಚಾರ. ಸಾವಿರ ವರ್ಷ ಬಾಳುವುದಕ್ಕಿಂತ ಇಂತಹ ಸಾವು ಶ್ರೇಷ್ಠ.

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments