#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
10-08-2018:

ಆಧ್ಯಾತ್ಮ ಎನ್ನುವುದು ಜೀವನದ ಹೊರಗಿನ ವಿಷಯ ಅಲ್ಲ ಬದಲಿಗೆ ಜೀವನದ ಅಂತರಾಳ ಅದು, ಅಂತರಾರ್ಥ ಅದು. ಆಧ್ಯಾತ್ಮ ಹೇಳಿದ ಜೀವನದ ಶಿಸ್ತು ನಮ್ಮ ಜೀವನೋಪಾಯಕ್ಕೂ ಅತ್ಯಂತ ಉಪಯುಕ್ತವಾಗಿರುತ್ತದೆ.

ಪರೀಕ್ಷಿತನ ಅವಸಾನ ಅಥವಾ ಭಾಗವತದ ಆವಿರ್ಭಾವ ಈ ಎರಡೂ ಒಂದೇ. ಅವನ ಜೀವಿತದ ಕೊನೆಯ ಏಳು ದಿನಗಳಲ್ಲಿ ಭಾಗವತ ಹೊರಬಂದಿತು.

ಶ್ರೀಶ್ರೀ ರಾಮಾ…

ಸನ್ನಿವೇಶ ಯಾವುದೆಂದರೆ ಆಪನ್ನಿರ್ವಹಣೆ, ಸುಲಭವಾಗಿ ಹೇಳಬೇಕೆಂದರೆ Crisis management. ಜೀವನದಲ್ಲಿ ಕಷ್ಟ ಬಂದಾಗ ಅದನ್ನು ಹೇಗೆ ಎದುರಿಸಬೇಕು, ಹೇಗೆ ಸ್ವೀಕರಿಸಬೇಕು ಎನ್ನುವುದು ಇಲ್ಲಿ ತಿಳಿಯುತ್ತದೆ.
ಶೃಂಗಿಯ ಶಾಪ ಇದೆ, 7 ದಿನಗಳಲ್ಲಿ ತಕ್ಷಕ ಸರ್ಪದಿಂದ ಮರಣ ಎಂದು. ಏಳೂ ದಿನ ಸದುಪಯೋಗವಾಯಿತು, ನೀವು ಅಲ್ಲಿದ್ದರೆ ಏನು ಮಾಡುತ್ತಿದ್ದಿರಿ? ಬಹುಶಃ ಆರೋಗ್ಯ ಕೆಡುತ್ತಿತ್ತು, ಹೃದಯದ ಬಡಿತ ನಿಲ್ಲುತ್ತಿತ್ತು. ಸಾವು ಮುಂದಿರುವಾಗ ಉಳಿದ ಆಯಸ್ಸನ್ನು ಹೇಗೆ ಬಳಸುವುದು, ಸಾವನ್ನು ಹೇಗೆ ಎದುರಿಸುವುದು ಎಂಬ ಚಿಂತನೆ ಮುಖ್ಯ.

ಸಾಮಾನ್ಯವಾಗಿ ಯಾರೂ ವಿಷದಿಂದ ಸಾಯುವುದಿಲ್ಲ, ಭೀತಿಯಿಂದ ಸಾಯುವವರೇ ಹೆಚ್ಚು, ನೀರಿನಲ್ಲಿ ಮುಳುಗಿದಾಗಲೂ ನೀರು ಕುಡಿದು ಸಾಯುವವರಿಗಿಂತ ಹೃದಯಸ್ತಂಭನವಾಗಿ ಸಾಯುವವರೇ ಹೆಚ್ಚು. ಅಲ್ಲಿ ನೀರಿನ ಪಾತ್ರ ನಗಣ್ಯ, ಆಪತ್ತು ಬಂದಾಗ ಹೇಗೆ ಎದುರಿಸಬೇಕೆನ್ನುವ ಸಿದ್ಧತೆ ನಮ್ಮಲ್ಲಿಲ್ಲದಿರುವುದೇ ಮುಖ್ಯ. ಆಗ ಬುದ್ಧಿ ಕೆಲಸ ಮಾಡಲ್ಲ.

ಪರೀಕ್ಷಿತನ ಉದಾಹರಣೆ ಇಲ್ಲಿ ಉತ್ತಮ, ಅವನ ಚಿಂತನೆ “ಸಾವನ್ನು ತಪ್ಪಿಸಲು ಸಾಧ್ಯವೇ? ಋಷಿವಾಕ್ಯ ತಪ್ಪಾಗಲಾರದು, ಸಾವು ಅನಿವಾರ್ಯ”. ಹಾಗಾಗಿ ಮುಂದಿನ 7 ದಿನಗಳಲ್ಲಿ ಏನು ಮಾಡಬಹುದೋ ಅದೇ ಮಾಡುತ್ತಾನೆ. ಗಂಗಾ ತೀರದಲ್ಲಿ ಋಷಿಮಂಡಲದ ಮಧ್ಯದಲ್ಲಿ ಪ್ರಾಯೋಪವೇಶ ವ್ರತ ಕೈಗೊಳ್ಳುತ್ತಾನೆ, ಶುಕ ಮುನಿಗಳಿಂದ ಭಾಗವತ ಪ್ರವಚನ ಕೇಳುತ್ತಾನೆ, ಅದರಲ್ಲಿ ಪೂರ್ತಿ ಮುಳುಗಿ ಸಮಾಧಿಯಲ್ಲಿ ಇರುತ್ತಾನೆ. ಹೀಗೆ ಸಾವು ಅವನಿಗೆ ಗೊತ್ತಾಗದೇ ಇಲ್ಲ, ಹೀಗೆ ಮರಣವನ್ನು ಮುಕ್ತಿಯನ್ನಾಗಿ ಬದಲಿಸಿಕೊಂಡ.
ಬರುವ ವಿಪತ್ತನ್ನು ಸಂಪತ್ತನ್ನಾಗಿ ಪರಿವರ್ತೀಸಿಕೊಳ್ಳುವುದು ಜಾಣತನ. ಸಾಮಾನ್ಯವಾಗಿ ಅಧಿಕಾರಸ್ಥರು ತಮ್ಮ ಅಧಿಕಾರ ಕಳೆದುಕೊಳ್ಳುವಾಗ ನೆಮ್ಮದಿ ಕಳೆದುಕೊಳ್ಳುತ್ತಾರೆ ಆದರೆ ಇಲ್ಲಿ ಭಿನ್ನವಾಗಿದೆ.

ಇನ್ನೊಂದು ಕಥೆ, ಒಬ್ಬ ಬಲಶಾಲಿ ರಾಜ ದೇಶವನ್ನೆಲ್ಲಾ ಗೆಲ್ಲಬಹುದಾದ ಯುಕ್ತಿ ಶಕ್ತಿ ಸಾಮರ್ಥ್ಯ, ಸೇನಾಬಲ, ನೈಪುಣ್ಯ ಎಲ್ಲವೂ ಅವನಲ್ಲಿದೆ ಹಾಗಾಗಿ ಎಲ್ಲ ಗೆದ್ದು ಬೀಗುತ್ತಿರುತ್ತಾನೆ, ಅವನ ಪಕ್ಕದ ರಾಜನಿಗೆ ಇವನ ಮೇಲೆ ಅವನಿಗೆ ಸಿಟ್ಟು, ಹೇಗಾದರೂ ಇವನನ್ನು ಸೋಲಿಸಬೇಕೆಂಬ ತವಕ. ಒಬ್ಬ ಜ್ಯೋತಿಷಿಯನ್ನು ಉಪಾಯದಿಂದ ಆ ರಾಜನಲ್ಲಿಗೆ ಕಳುಹಿಸುತ್ತಾನೆ. ಆ ಜ್ಯೋತಿಷಿ ರಾಜನ ಬಳಿಗೆ ಹೋಗಿ ಅವನ ಮನೆಯವರೆಲ್ಲರ ಜಾತಕ ಫಲಗಳನ್ನು ಹೇಳಿದ ನಂತರ ಹೊರಡಲು ಅಣಿಯಾದಾಗ ರಾಜ ತನ್ನ ಬಗ್ಗೆಯೂ ತಿಳಿದುಕೊಳ್ಳಲು ಬಯಸುತ್ತಾನೆ. ಆದರೆ ಜ್ಯೋತಿಷಿ ತಪ್ಪಿಸಲು ಯತ್ನಿಸುತ್ತಾನೆ, ಕುತೂಹಲ ತಡೆಯದಾದಾಗ ರಾಜನ ಬಲವಂತಕ್ಕೆ ಕಟ್ಟಬಿದ್ದವನಂತೆ ಅವನಲ್ಲಿ ಅಭಯ ಯಾಚನೆ ಮಾಡಿ ಇನ್ನು ಇಂದೇ ವಾರ ನಿಮ್ಮ ಆಯಸ್ಸು ಎಂದು ಹೇಳುತ್ತಾನೆ. ರಾಜ ಮೊದಲು ದಿಗಿಲುಗೊಂಡರೂ, ನಂತರ ಚೇತರಿಸಿ ಅಗತ್ಯ ಕ್ರಮಗಳನ್ನೆಲ್ಲಾ ಕೈಗೊಳ್ಳುತ್ತಾನೆ, ದೇಹಾರೋಗ್ಯ, ಶತ್ರುದಾಳಿ ಎಲ್ಲವನ್ನೂ ಆಲೋಚಿಸಿ ಸಮಾಧಾನವಾಗುತ್ತದೆ. ಆದರೂ ಮಲಗುವಾಗ ಅದೇ ನೆನಪಾಗುತ್ತದೆ, ಕನಸಿನಲ್ಲೂ ಅದೇ. ಮತ್ತೆ ಸಂಶಯ ಬರುತ್ತೆ, ಜಿಜ್ಞಾಸೆ ಪ್ರಾರಂಭವಾಗುತ್ತೆ ಶೇ99 ನಂಬಿಕೆ ಇದ್ದರೂ 1 ಶೇ ಅಪನಂಬಿಕೆ ತೊಂದರೆ ಕೊಡುತ್ತೆ. 4 ನೇ ದಿನ ಜ್ವರ ಬರುತ್ತೆ ಅದೇ ಪರಿಣಾಮ ಭಯ ಹೆಚ್ಚಾಗಿ 7 ನೇ ದಿನ ಅಕಾರಣ ಮರಣ ಬರುತ್ತೆ. ಇಲ್ಲಿ ಕೊಲ್ಲಲು ಕಾರಣ ಯಾವುದೆಂದರೆ ಮನಃಸ್ಥಿತಿ.

ನಾವು ಎಡಬಿಡದೇ ಯಾವುದನ್ನು ಕುರಿತು ಚಿಂತನೆ ಮಾಡತೀವೋ ಅದೇ ಆಗುತ್ತೇವೆ, ಹಾಗಾಗಿ ಒಳಿತರ ಕುರಿತು ಚಿಂತಿಸಬೇಕು. ಮನಸ್ಸು ತಾನು ಎಲ್ಲಿರುತ್ತದೋ ಅದೇ ಆಗಿ ಎಲ್ಲವನ್ನೂ ಮಾಡುತ್ತದೆ.

ಎರಡರಲ್ಲಿ ವ್ಯತ್ಯಾಸ ಗಮನಿಸಿ, ಪರೀಕ್ಷಿತ ನಮಗೆ ಆದರ್ಶ, ಕಲಿಯುಗದ ಮೊದಲ ರಾಜ ನಮಗೆ ಹೆಳಿದ ಪಾಠ ಇದು, ಆಪತ್ತನ್ನು ಸರಿಯಾಗಿ ಎದುರಿಸುವುದು ಹೇಗೆ ? ಸಂಕೀರ್ತನೆಗಳು ನಮಗೆ ಆ ರೀತಿಯ ಮನಃಸ್ಥಿತಿಯನ್ನು ತಂದುಕೊಡುತ್ತವೆ. ಪ್ರಭುವಿನ ಮೇಲೆ ಭಾರಹಾಕಿದರೆ ನಮಗೆ ನೆಮ್ಮದಿ ಬರುತ್ತದೆ. ಆಪತ್ತನ್ನು ಎದುರಿಸಲು ರಕ್ಷಣೆ ಹಾಗೂ ಮನಸ್ಥಿತಿ ಎರಡನ್ನೂ ಕೊಡುತ್ತದೆ.

ಪರೀಕ್ಷಿತನ ಅಂತಃರ್ಮಥನ ನಡೆದಿದೆ, ತಾನು ತಪ್ಪು ಮಾಡಿದ್ದಾನೆ ಅದಕ್ಕಾಗಿ ಶಿಕ್ಷೆ ಬಂದಿದೆ, ಸರಿಯಾಗಿದೆ. ತಾನು ಅನಗತ್ಯವಾಗಿ ಮಾಡಿದ ಸಿಟ್ಟು ಋಷಿಕುಮಾರನ ರೂಪದಲ್ಲಿ ತಿರುಗಿ ಬಂದಿದೆ. ಹೀಗೆ ಎಲ್ಲರೂ ಚಿಂತನೆ ಮಾಡಿದರೆ ಸಮಸ್ಯೆಯೇ ಇರುವುದಿಲ್ಲ.
ತಪ್ಪೇ ಮಾಡಿರದ ಬ್ರಾಹ್ಮಣನ ಮೇಲೆ ಮಾಡಿದ ಸಿಟ್ಟು ಅನರ್ಥಕ್ಕೆ ಎಡೆ ಮಾಡಿದೆ, ನಾನು ಆಚರಿಸಿದ ಪಾಪ ತೀರಲು ಇದು ಸರಿಯಾದ ದಂಡ, ಇನ್ನೆಂದೂ ಜನ್ಮಜನ್ಮಾಂತರಗಳಲ್ಲಿಯೂ ಈ ಪಾಪ ಮಾಡಲಾರೆ ಎಂಬ ನಿಶ್ಚಯಕ್ಕೆ ಅವನ ಮನಸ್ಸು ಬಂದಿತು.
ಈ ಶಾಪ ತನ್ನನ್ನು ಸುಡಲಿ ನನ್ನ ರಾಜ್ಯ, ಕೋಶ, ಅಧಿಕಾರ ಎಲ್ಲವೂ ನನ್ನಿಂದ ದೂರಾಗಲಿ ಈ ದೋಷ ಒಮ್ಮೆ ಪರಿಹಾರವಾಗಲಿ, ದೇವ-ಗೋ-ದ್ವಿಜರ ಕುರಿತಾಗಿ ನನಗೆ ಮತ್ತೆಂದೂ ಇಂತಹ ಮನಸ್ಸು ಬಾರದಿರಲಿ ಎಂದು ಚಿಂತಿಸಿದ.

ವೈರಾಗ್ಯ ಬುದ್ಧಿ ಒಳ್ಳೆಯದು, ಯಾವುದಾದರೊಂದು ಕಾರಣದಿಂದಾಗಿ ಎಲ್ಲ ಕಳೆದುಹೋಗುವುದು, ಕಳೆದುಕೊಳ್ಳುವುದು ಒಳ್ಳೆಯದೇ.
ಮೊದಲನೆಯದಾಗಿ ಇದೇ ನ್ಯಾಯ, ತಪ್ಪಿಗೆ ತಕ್ಕ ಶಿಕ್ಷೆಯಾಗಿದೆ, ಎರಡನೆಯಯದಾಗಿ ಆ ನೋವು ಪಾಪಹರಿಸುತ್ತದೆ. ಹಾಗಾಗಿ ಇದು ಲಾಭಕಾರಿಯೇ.

ನೋವು ಬಂದರೆ ಬೇರೆ ಏನೂ ಚಿಂತಿಸುವ ಅಗತ್ಯವಿಲ್ಲ, ನಾವು ತಪ್ಪು ಮಾಡಿದ್ದೇವೆಂದೇ ಅರ್ಥ, ಕರ್ಮವಿಲ್ಲದೇ ಫಲವಿಲ್ಲ. ತಿಳಿದವನು ಅದಕ್ಕೆ ದಂಡವಿತ್ತಿದ್ದಾನೆ, ಸ್ವೀಕರಿಸಿ, ಅನುಭವಿಸೋಣ ಎನ್ನುವ ಭಾವ ಅಗತ್ಯ.
ಪರೀಕ್ಷಿತ ಮೊದಲು ಮನಸ್ಸಿನಿಂದ ಎಲ್ಲವನ್ನೂ ತ್ಯಾಗ ಮಾಡಿದ, ನಂತರ ಸ್ವರ್ಗದ ಆಸೆಯನ್ನೂ ಬಿಟ್ಟ, ಕೃಷ್ಣಚರಣಗಳಲ್ಲಿ ಮನಸ್ಸನ್ನು ನೆಟ್ಟು ಪರಮಪಾವನೆ ಗಂಗೆಯ ತೀರದಲ್ಲಿ ಪ್ರಾಯೋಪವೇಶಕ್ಕೆ ಕುಳಿತ. ಅಂತಹ ಪುಣ್ಯತಮ ಕಾರ್ಯಕ್ಕೆ ಪುಣ್ಯಚೇತನರು ತಾವಾಗಿಯೇ ಬರುತ್ತಾರೆ, ಯಾವ ಸಿದ್ಧರು ತಮ್ಮ ಸ್ಪರ್ಶಮಾತ್ರದಿಂದ ವಸ್ತುಗಳನ್ನು ಪ್ರಸಾದವನ್ನಾಗಿ ಮಾಡಬಲ್ಲರೋ ಅಂತಹ ಮಹಾತ್ಮರು ಅನಾಯಾಸವಾಗಿ ಜೊತೆಗೂಡುತ್ತಾರೆ. ಶುಕರಂತಹ ಅಲಭ್ಯಲಭ್ಯರೂ ಆಗಮಿಸುತ್ತಾರೆ ಅವರಿಗೆ ನಮಸ್ಕರಿಸಿ ಪರೀಕ್ಷಿತ ತನ್ನ ಕರ್ತವ್ಯದ ಬಗ್ಗೆ ಕೇಳುತ್ತಾನೆ
ಶುಕರು ದಿಲೀಪನ ಕಥೆ ಹೇಳಿ ಅವನಿಗೆ ಅಯಸ್ಸು ತಿಳಿದಿದ್ದು ಕೇವಲ 2 ಮುಹೂರ್ತ ಇರುವಾಗ, ನೀನು ಪುಣ್ಯವಂತ 7 ದಿನಗಳು ದೊರಕಿವೆ, ಏನೂ ಮಾಡುವ ಅಗತ್ಯವಿಲ್ಲ ನಾನು ಹೇಳಿದ್ದು ಕೇಳು ಎನ್ನುತ್ತಾರೆ. ಅವರಿಗೆ ನಮಸ್ಕರಿಸಿ ತಾನು ಅಭಯವಿಲ್ಲದ ಸ್ಥಿತಿಯನ್ನು ಪಡೆಯುವುದಾಗಿ ತಿಳಿಸಿ ಅಂತಃರ್ಮಗ್ನನಾಗುತ್ತಾನೆ. ಬ್ರಹ್ಮಭೂತನಾಗುತ್ತಾನೆ. ಆಗ ಅಂತಹ ಸ್ಥಿತಿಯಲ್ಲಿ ತಕ್ಷಕ ಅವನನ್ನು ದಹಿಸುತ್ತಾನೆ.

ಯವುದೇ ಆಪತ್ತು ಬಂದರೂ ವಿಚಲಿತನಾಗಬಾರದು ಆಗ ಅದೇ ಸಂಪತ್ತಾಗುತ್ತದೆ.
ನೋವು ಅನುಭವವೇದ್ಯವಾದುದು, ನೋವೆನ್ನುವುದು ಮನಸ್ಸಿನ ಒಂದು ಸ್ಥಿತಿ ಅಷ್ಟೇ. ಕಲ್ಲಿನ ಮೇಲೆ ಬಿದ್ದಾಗ ಹೆಚ್ಚು ನೋವಾಗುತ್ತದೆ ಆದರೆ ಹಾಸಿಗೆಯ ಮೇಲೆ ನೋವಾಗುವುದಿಲ್ಲ ಬೀಳುವುದು ಎರಡರಲ್ಲೂ ಒಂದೇ ಆಗಿದ್ದರೂ ಹೀಗೆ ಏಕೆಂದರೆ ಕಲ್ಲು ನಮಗಿಂತ ಬಲಿಷ್ಟ, ಹಾಸಿಗೆ ನಮಗಿಂತ ಮೃದು. ಹಾಗಾಗಿ ನೋವಿಗಿಂತ ನಾವು ಬಲವಾದರೆ ನೋವು ಮರೆಯಾಗುತ್ತದೆ, ಅಂತಹ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಬೇಕು.
ಆಪತ್ತನ್ನು ಸ್ವೀಕರಿಸುವ, ನಿರ್ವಹಿಸುವ ಮನಸ್ಸನ್ನು ಆ ಕೃಷ್ಣ ನಿಮಗೆ ಕರುಣಿಸಲಿ.

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments