ಕೋಮಲೆಯರಲ್ಲಿ ಕ್ರೂರವಾದ ವ್ಯವಹಾರ ಕೂಡದು; ಕಾವಿಯನ್ನು ಕೇವಲವಾಗಿ ಕಾಣಕೂಡದು – ಇದು ಸನಾತನ ಸಂಸ್ಕೃತಿಯ ನೇತ್ರದ್ವಯದಂತಿರುವ ತತ್ತ್ವದ್ವಯ.

ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್  ಓರ್ವ ಮಹಿಳೆಯೂ ಹೌದು; ಸನ್ಯಾಸಿನಿಯೂ ಹೌದು.ಸ್ವಾಮಿ ಪೂರ್ಣಚೇತನಾನಂದಗಿರಿಯನ್ನು (ಅದು ಆಕೆಯ ಸಂನ್ಯಾಸನಾಮ) ಆರಕ್ಷಕರು ನಡೆಸಿಕೊಂಡ ರೀತಿಯು ಭಾರತೀಯ ಸಂಸ್ಕೃತಿಗೆ ಮಾತ್ರವಲ್ಲ; ಮನುಷ್ಯತ್ವಕ್ಕೇ ವಿರುದ್ಧವಾದುದು!

ಪ್ರಜ್ಞಾಪಚಾರದ ಹಿನ್ನೆಲೆಯಿಷ್ಟು:
ಅಧಿಕಾರಸ್ಥರಿಗೆ ‘ಹಿಂದುಗಳಲ್ಲಿಯೂ ಭಯೋತ್ಪಾದಕರಿದ್ದಾರೆ’ ಎಂದು ಬಿಂಬಿಸಬೇಕಿತ್ತು; ಅಧಿಕಾರಿಗಳಿಗೆ ಪೋಸ್ಟಿಂಗ್-ಪ್ರಮೋಷನ್`ಗಳು ಬೇಕಿದ್ದವು; ಅವು ಅಧಿಕಾರಾರೂಢರ ಮರ್ಜಿಯಲ್ಲಿದ್ದವು; ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಆರಕ್ಷಕರು ಕುಣಿದರು;
ಪರಿಣಾಮ, ಒಬ್ಬಾಕೆ ನಿರಪರಾಧಿನಿ~ಸನ್ಯಾಸಿನಿಯು ಸೆರೆಮನೆ ಸೇರಿದಳು; ಕ್ರೂರಾತಿಕ್ರೂರ ಚಿತ್ರಹಿಂಸೆಗಳಿಗೆ ಒಳಗಾದಳು; ದೇಶದ ಮುಂದೆ ಘೋರ ಅಪರಾಧಿಯೆಂಬಂತೆ ಬಿಂಬಿತಳಾದಳು; ಒಂಭತ್ತು ವರುಷಗಳ ಕಾಲ ಆಕೆಯ ಶರೀರ-ಮನಸ್ಸು-ಸನ್ಯಾಸ-ಸತ್ಕೀರ್ತಿಗಳನ್ನು ಮನ ಬಂದಂತೆ ಹಿಂಸಿಸಿ, ಬಳಿಕ ಸೂಕ್ತ ಸಾಕ್ಷ್ಯಾಧಾರಗಳಿಲ್ಲವೆಂದು ಬಿಡುಗಡೆ ಮಾಡಲಾಯಿತು!

ಮಹಿಳೆ; ಸಾಮಾಜಿಕ ಕಾರ್ಯಕರ್ತೆ; ಸನ್ಯಾಸಿನಿ; ನಿರಪರಾಧಿನಿ; ಆಕೆಯನ್ನು ಹಿಂಸಿಸದಿರಲು ನಾಲ್ಕು ನಾಲ್ಕು ಕಾರಣಗಳು! ಇವೆಲ್ಲವನ್ನೂ ಮೂಲೆಗೊತ್ತಿ, ಕಾನೂನುಗಳನ್ನು ಗಾಳಿಗೆ ತೂರಿ, ಧರ್ಮ-ದಯೆಗಳ ಮರ್ಯಾದೆಗಳನ್ನೇ ಮೀರಿ, ಕ್ಷುಲ್ಲಕ ವೈಯಕ್ತಿಕ ಲಾಭಗಳಿಗಾಗಿ ಓರ್ವ ಸನ್ಯಾಸಿನಿಗೆ ಗೌರವದ ಬದಲು ರೌರವ ತೋರಿದ ಆರಕ್ಷಕರಿಗಿಂತ ನರಭಕ್ಷಕರೇ ಮೇಲು!

#LokaLekha by @SriSamsthana SriSri RaghaveshwaraBharati MahaSwamiji

ಇತ್ತೀಚೆಗೆ, ಆಕೆ ತನ್ನ ಕಥೆಯನ್ನು ತಾನೇ ಹೇಳುವ, ನಾವು ಕೇಳುವ ಸದವಕಾಶವೊಂದು ತಾನಾಗಿ ಪ್ರಾಪ್ತವಾಗಿತ್ತು. ಲಂಕೆಯಿಂದ ಪಾರಾಗಿ ಬಂದ ಸೀತೆಯೊಡನೆ ಮಾತನಾಡಿದ ಅನುಭವವು ಅಂದು ನಮಗಾಯಿಯಿತು! ಪ್ರಜ್ಞಾ ಸಿಂಗ್ ತನ್ನ ಕಾರಾವಾಸದ ಕ್ರೂರಾನುಭೂತಿಯನ್ನು ಘಂಟೆ-ಘಂಟೆಗಳ ಕಾಲ ಬಣ್ಣಿಸುತ್ತಿದ್ದರೆ ಕಬ್ಬಿಣದ ಹೃದಯವೂ ಕರಗಬೇಕು; ಹಿಮದ ರಕ್ತವೂ ಕುದಿಯಬೇಕು! ಓರ್ವ ಸ್ತ್ರೀಯ ಮಾನಕ್ಕಾಗಿ ರಾಮಾಯಣ ಮಹಾಯುದ್ಧ ನಡೆದ ದೇಶದಲ್ಲಿ, ಓರ್ವ ಸ್ತ್ರೀಗಾದ ಅಪಮಾನದ ಪ್ರತೀಕಾರಕ್ಕಾಗಿ ಮಹಾಭಾರತ ಮಹಾಯುದ್ಧ ನಡೆದ ದೇಶದಲ್ಲಿ ಅಮಾಯಕ~ಸನ್ಯಾಸಿನಿಯೋರ್ವಳನ್ನು ಈ ಪರಿಯಲ್ಲಿ ಹಿಂಸಿಸಿದರೂ- ಅಪಮಾನಿಸಿದರೂ ಕೇಳುವವರೇ ಇಲ್ಲವೆಂದಾದರೆ ಅದು ಆ ದೇಶದ ಆತ್ಮನಾಶವಲ್ಲದೆ ಮತ್ತೇನು!?

“ನೂರು ಅಪರಾಧಿಗಳು ತಪ್ಪಿಸಿಕೊಂಡರೂ ಸರಿ, ಒಬ್ಬ ನಿರಪರಾಧಿಗೆ ದಂಡನೆಯಾಗಕೂಡದು!” ಎಂಬುದು ಕಾನೂನಿನ ಮೂಲಾಧಾರ ತತ್ತ್ವವಂತೆ; ಆದರೆ ಆ ತತ್ತ್ವದ ಅಸ್ತಿತ್ವ ಭಾಷಣಗಳಲ್ಲಿ- ಲೇಖನಗಳಲ್ಲಿ ಮಾತ್ರ; ನಿಜವಾಗಿ ನಡೆಯುತ್ತಿರುವುದೇ ಬೇರೆ! ಕಟುವಾಸ್ತವದ ಪ್ರತ್ಯಕ್ಷ ದೃಷ್ಟಾಂತವೇ ಪ್ರಜ್ಞಾ ಸಿಂಗ್ ಪ್ರಕರಣ! ರಕ್ಷಕರು ರಾಕ್ಷಸರಾದರೆ ನಾಡು ನರಕವಾಗದಿದ್ದೀತೇ!?

ಪೋಲೀಸ್ ಠಾಣೆಗಳಲ್ಲಿ, ನ್ಯಾಯಾಲಯಗಳಲ್ಲಿ, ಜೈಲುಗಳಲ್ಲಿ, ತಮ್ಮ ನೆಮ್ಮದಿ-ಮಾನ-ಧನ-ಆರೋಗ್ಯಗಳನ್ನಲ್ಲದೆ ಕೊನೆಗೆ ಬದುಕನ್ನೇ ಕಳೆದುಕೊಳ್ಳುತ್ತಿರುವ ನಿರಪರಾಧಿಗಳು ಈ ದೇಶದಲ್ಲಿ ಅದೆಷ್ಟು ಮಂದಿ! ಆದರೆ ನಿರಪರಾಧಿಯನ್ನು ಪೀಡಿಸಿದುದಕ್ಕಾಗಿ ಅಧಿಕಾರಿಗಳು ದಂಡನೆಗೊಳಗಾದ ಉದಾಹರಣೆಗಳು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ! ತಮ್ಮ ಅಧಿಕಾರದ ದುರುಪಯೋಗ ಗೈದು, ನಿರಪರಾಧಿಗಳನ್ನು ಈ ಪರಿ ಪೀಡಿಸಿದ ನಾಲ್ಕಾರು ಅಧಿಕಾರಿಗಳು ನೇಣಿಗೆ ಹೋದರೆ ಜೀವಂತ ಸಾಯುವ ಸಾವಿರಾರು ಮುಗ್ಧರು ಉಳಿದುಕೊಂಡಾರು!

#LokaLekha by @SriSamsthana SriSri RaghaveshwaraBharati MahaSwamiji

ಕಾವಿಗೆ ಕಲಂಕ ಹಚ್ಚಿ ಧರ್ಮದ ಕಿಡಿಯೊಂದನ್ನು ಆರಿಸಹೊರಟ ಮಾಯಾರಾಕ್ಷಸರೇ, ಸಂತರನ್ನು ಶಾರೀರಿಕವಾಗಿ, ಮಾನಸಿಕವಾಗಿ ಹಿಂಸಿಸಿ ಗೆದ್ದೆವೆಂದು, ಏನೋ ಸಾಧಿಸಿದೆವೆಂದು ಬೀಗಬೇಡಿ. ಅವರ ನಿಜಸತ್ವವಿರುವುದು ಅವರ ಆತ್ಮದಲ್ಲಿ. ಸಂತರನ್ನು ಬಹಿರಂಗವಾಗಿ ಘಾಸಿಗೊಳಿಸಿದಷ್ಟೂ, ಪ್ರಖರಗೊಂಡು ಮತ್ತಷ್ಟು ಪ್ರಜ್ವಲಿಸಿ ಉರಿಯುವುದು ಅವರ ಅಂತರ್ಜ್ವಾಲೆ, ಆತ್ಮಜ್ವಾಲೆ. ಪ್ರಜ್ಞಾ ಸಿಂಗ್ ರ ಒಳಗಿನ ಕಿಡಿಯು ನಿಮ್ಮ ಕೆಸರೆರಚಾಟದಿಂದ ಆರುವುದರ ಬದಲು ಮಹಾಜ್ವಾಲೆಯಾಗಿ ಉರಿಯುವುದನ್ನು ಮೊನ್ನೆ ನಾವು ಕಂಡೆವು.

ಉರಿಯುವ ಬೆಂಕಿಯ ಕೊಳ್ಳಿಯೊಂದನ್ನು ಅಧೋಮುಖವಾಗಿಸಿ ಹಿಡಿದರೆ ಜ್ವಾಲೆಯು ಮತ್ತಷ್ಟು ಪ್ರಖರಗೊಳ್ಳುವುದಲ್ಲದೆ, ಅದು ಉರಿದು ಹರಿಯುವುದು ಮೇಲ್ಮುಖವಾಗಿಯೇ!

~*~*~

ಕ್ಲಿಷ್ಟ~ಸ್ಪಷ್ಟ:

  • ಕಾರಾವಾಸ = ಸೆರೆಮನೆ ವಾಸ

ಪ್ರಸ್ತುತಿ:

~*~

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.

ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box