ಇಂದು ನಾವು ಯಾವ ವ್ಯವಸ್ಥೆಗೆ ಒಳಪಟ್ಟು ಬಾಳುತ್ತಿರುವೆವೋ ಅದರ ಶುಭಾಭಿಧಾನ- ಪ್ರಜಾಪ್ರಭುತ್ವ. ಪ್ರಜೆಯೇ ಪ್ರಭುವಿಲ್ಲಿ; ಮತ್ತುಳಿದ ವ್ಯವಸ್ಥೆಗಳಲ್ಲಿ ಆಳಲ್ಪಡುವವನೇ ಇಲ್ಲಿ ಆಳುವವನಾಗುತ್ತಾನೆ! ಆದರೆ, ಒಂದೇ ಒಂದು ಪ್ರಶ್ನೆ- ಅದು ಎಂದು? ಯಾರೋ ಕೆಲವರು ನಮ್ಮನ್ನು ಆಳುವುದು, ಯಥಾಪ್ರಕಾರ ನಾವು ಅವರಿಂದ ಆಳಲ್ಪಡುವುದು – ಇದು ಪ್ರಕೃತದ ನಿತ್ಯಾನುಭೂತಿ; ನಮ್ಮಲ್ಲಿಯೇ ಕೆಲವರು ಆಳುತ್ತಿರುವುದು ನಿಜವಾದರೂ- ಅದು ಕೆಲವರು ಮಾತ್ರ! ಎಲ್ಲ ಪ್ರಜೆಗಳೂ ಪ್ರಭುಗಳಾಗುವುದು, ಅಥವಾ ‘ಎಲ್ಲರೂ ಸೇರಿ’ ಪ್ರಭುಗಳಾಗುವುದು ಎಂದು?
ಕೆಲವು ಮಹಾದಿನಗಳು ವರ್ಷಕ್ಕೊಮ್ಮೆ ಬರುತ್ತವೆ: ಯುಗಾದಿಯು ಬರುವುದು ವರ್ಷಕ್ಕೊಂದೇ ಬಾರಿ; ಮಕರಸಂಕ್ರಾಂತಿಯು ಬರುವುದು ವರ್ಷಕ್ಕೊಮ್ಮೆ ಮಾತ್ರ; ದೀಪಾವಳಿಯು ಒಮ್ಮೆ ಬಂದರೆ ಬಂದರೆ ಇನ್ನೊಮ್ಮೆ ಬರಲು ಒಂದು ವರ್ಷವೇ ಕಾಯಬೇಕು! ಪ್ರಜೆಗಳೆಲ್ಲರೂ ಪ್ರಭುಗಳಾಗುವ ದಿನವು ಇನ್ನೂ ಅಪರೂಪ; ಸಾಮಾನ್ಯವಾಗಿ ಅದು ಬರುವುದು ಐದು ವರ್ಷಕ್ಕೊಮ್ಮೆ; ಎಂದರೆ 1825 ದಿನಗಳಲ್ಲಿ ಒಂದು ದಿನ -ಕೇವಲ ಒಂದು ದಿನ- ಆಳುವವರನ್ನು ನಾವು ಆಳುವ ದಿನ! ಮತ್ತೆಲ್ಲವೂ ನಾವು ಆರಿಸಿದವರಿಂದ ನಾವೇ ಆಳಿಸಿಕೊಳ್ಳುವ ದಿನಗಳು! ಆ ಮಹಾದಿನವೇ ಮತದಾನದ ದಿನ!
ಒಂದರ್ಥದಲ್ಲಿ ಮತದಾನವು ಮಹಾದಿನ ಮಾತ್ರವಲ್ಲ, ಮಹಾದಾನವೂ ಹೌದು; ಸಾಮಾನ್ಯ ದಾನಗಳು – ಗೈದ ವ್ಯಕ್ತಿಯ ಕ್ಷೇಮಕ್ಕೆ ಮಾತ್ರವೇ ಕಾರಣವಾದರೆ; ಮತದಾನವು ಸಮೀಚೀನವಾಗಿ ಮಾಡಲ್ಪಟ್ಟಾಗ ದೇಶಕ್ಷೇಮಕ್ಕೇ ಕಾರಣವಾಗುತ್ತದೆ! ಸಾಮಾನ್ಯ ದಾನಗಳನ್ನು ಮಾಡಿದರೆ ಪುಣ್ಯವಿದೆ; ಮಾಡದಿದ್ದರೆ ಪಾಪವಿಲ್ಲ. ಆದರೆ ಮತದಾನವು ಹಾಗಲ್ಲ; ಮಾಡದಿದ್ದರೆ- ಸರಿಯಾಗಿ ಮಾಡದಿದ್ದರೆ ಕರ್ತವ್ಯಲೋಪದ ಮಹಾಪಾಪ! ನಮ್ಮ ಕರ್ತವ್ಯಲೋಪದಿಂದಲಾಗಿ ದುಷ್ಟರ ಕರಾಳ-ಕರಗಳಲ್ಲಿ ಸಿಲುಕಿ ನಲುಗುವ ಭಾರತಮಾತೆಯ ಶಾಪ!
ಹಾಗೆ ನೋಡಿದರೆ, ಮತದಾನದ ದಿನದಂದು ಸಾಮಾನ್ಯ ಪ್ರಜೆಯು ಪ್ರಭುವೆನಿಸುವದಷ್ಟೇ ಅಲ್ಲ; ಮಹಾಪ್ರಭುವೆನಿಸುತ್ತಾನೆ! ನಾಡನ್ನು ಆಳುವವನು ಪ್ರಭುವಾದರೆ ಯಾರು ಆಳಬೇಕೆಂದು ನಿರ್ಧರಿಸುವವನು ಮಾಹಾಪ್ರಭುವೇ ಅಲ್ಲವೇ! ಅಷ್ಟು ಮಾತ್ರವಲ್ಲ, ಆ ದಿನದಂದು ಸಾಮಾನ್ಯ ಮಾನವನಲ್ಲಿ ಮಾಧವನ- ಜಗತ್’ಪ್ರಭುವಿನ ಅಂಶಗಳು ಅವತರಿಸುತ್ತವೆ! ದುಷ್ಟಶಿಕ್ಷಣ-ಶಿಷ್ಟರಕ್ಷಣಗಳು ಜಗದೀಶ್ವರನ ಕಾರ್ಯಗಳಲ್ಲವೇ? ಮತದಾನದ ದಿನದಂದು ಧರ್ಮದಂಡವು ನಮ್ಮ ಬೆರಳತುದಿಯಲ್ಲಿಯೇ ಇರುತ್ತದೆ! ದುಷ್ಟರನ್ನು ಒಂದೇ ಒಂದು ಬೆರಳಿನಲ್ಲಿ ಮೂಲೆಪಾಲು ಮಾಡಬಹುದು; ಕೃಷ್ಣನು ಗೋವರ್ಧನ ಗಿರಿಯನ್ನೆತ್ತಿದಂತೆ- ಸಜ್ಜನರನ್ನು ಬೆರಳತುದಿಯಲ್ಲಿ ಗದ್ದುಗೆಯೆತ್ತರಕ್ಕೆ ಎತ್ತಿಬಿಡಬಹುದು!!
ಆದರೊಂದಿದೆ: ಮತದಾನವನ್ನು ಮಾಡಿದರೆ- ಸರಿಯಾಗಿ ಮಾಡಿದರೆ- ನಾಡನ್ನು ಒಳಿತು ಆಳುವಂತೆ- ಜನವೆಲ್ಲ ಸುಖದಲ್ಲಿ ಬಾಳುವಂತೆ- ವಿಶ್ವರಂಗದಲ್ಲಿ ನಮ್ಮ ರಾಷ್ಟ್ರವು, ರಾಷ್ಟ್ರರಂಗದಲ್ಲಿ ನಮ್ಮ ರಾಜ್ಯವು ರಾಮರಾಜ್ಯವಾಗಿ ರಾರಾಜಿಸುವಂತೆ ಆಗುವಲ್ಲಿ ನಾವು ಕಾರಣರಾಗಬಹುದು. ಅಂತೆಯೇ, ಮತದಾನವನ್ನು ಮಾಡದಿದ್ದರೆ ಅಥವಾ ಸಮರ್ಪಕವಾಗಿ ಮಾಡದಿದ್ದರೆ- ಕೆಡುಕು ನಾಡನ್ನೇ ಕೆಡಿಸಲು, ಜನಸುಖದ ಸರ್ವನಾಶವೇ ಘಟಿಸಲು, ರಾಜ್ಯ-ರಾಷ್ಟ್ರಗಳ ಮರ್ಯಾದೆಗೆ ಮಸಿ ಬಳಿಯಲೂ ಕಾರಣರು ನಾವೇ ಆಗುತ್ತೇವೆ. ಹತ್ತಿರ-ಹತ್ತಿರ ಎರಡು ಸಾವಿರ ದಿನಗಳಿಗೊಮ್ಮೆ ಬರುವ ಆ ಮಹಾಮುಹೂರ್ತದ ಸಮಯದಲ್ಲಿ ಮೈಮರೆವ ಮಹಾಮೂರ್ಖರು ನಾವಾಗದಿರೋಣ.
ಅದು ಯಾವ ಒಳಿತಾದರೂ ಹಾಗೆಯೇ! ಮಾಡುವಂತೆ ಮಾಡಿದರೆ ಮಹಾಸುಖದ ಸಾಧನ; ಇಲ್ಲದಿದ್ದರೆ, ಮಹಾಪತನದ ಕಾರಣ! ಕೂಡಿಸುವ ಕಲೆಯಿದ್ದರೆ ಕೆಡುಕೂ ಕೆಡುಕು ಮಾಡದು; ಅದಿಲ್ಲದಿದ್ದರೆ ಒಳಿತೂ ಒಳಿತು ಮಾಡದು! ಬಳಕೆ ಸರಿಯಿದ್ದರೆ ಬೆಂಕಿಯೂ ಬೆಳಕೇ! ಇಲ್ಲದಿದ್ದರೆ ಬೆಳಕೂ ಕೊಳಕೇ!
ಕಾಲೋ ವಾ ಕಾರಣಂ ರಾಜ್ಞಃ, ರಾಜಾ ವಾ ಕಾಲಕಾರಣಮ್ |
ಇತಿ ತೇ ಸಂಶಯೋ ಮಾ ಭೂತ್, ರಾಜಾ ಕಾಲಸ್ಯ ಕಾರಣಮ್ ||
“ಕಾಲ ಕೆಟ್ಟು ದೊರೆಯು ಕೆಡುವನೋ, ದೊರೆಯು ಕೆಟ್ಟು ಕಾಲ ಕೆಡುವದೋ ಎಂಬ ಜಿಜ್ಞಾಸೆಯೇ? ಕಾಲವು ಕೃತಯುಗವಾಗಿ ಬೆಳಗಲು, ಕಲಿಯುಗವಾಗಿ ಕೆಡಲು ದೊರೆಯೇ ಕಾರಣ. ಸಂದೇಹವೇ ಇಲ್ಲ!”
ದೊರೆಗಳಿಲ್ಲದ ಕಾಲವಿದು; ಅಥವಾ ಎಲ್ಲರೂ ದೊರೆಗಳೇ ಆದ ಕಾಲವಿದು! “ನಾವು ದೊರೆಗಳು” ಎಂಬ ಹಕ್ಕಿನ ಪಕ್ಕದಲ್ಲಿಯೇ “ಕಾಲವು ಕೂಡಲು ಅಥವಾ ಕೆಡಲು ಕಾರಣರು ನಾವೇ!” ಎಂಬ ಬಾಧ್ಯತೆಯೂ ಇದೆಯೆಂಬುದನ್ನು ಮರೆಯಬಾರದು! ಪ್ರಜಾಪ್ರಭುತ್ವದ ಜೀವಾಳವೇ ಆದ ಮತದಾನಕ್ಕೆ ಮರ್ಯಾದೆ ನೀಡದಿರಬಾರದು!
ನಾವೆಂಥವರೋ ನಮ್ಮನ್ನಾಳುವವರೂ ಅಂಥವರೇ ಆಗಿರುತ್ತಾರೆ. We get served what we deserve! ಪುಡಿಗಾಸು ಪಡೆದು ನಾವು ಕೆಡುಕರಿಗೆ ಮತವಿತ್ತರೆ ಇಡಿಗಾಸಿಗಾಗಿ ನಾಡನ್ನೇ ಅಡವಿಡುವವನು ನಮ್ಮನ್ನು ಆಳತೊಡಗುತ್ತಾನೆ! ಜಾತಿ ನೋಡಿ ಮತ ನೀಡಿದರೆ, ಜಾತಿ-ಜಾತಿಗಳನ್ನು ಒಡೆದು ಆಳುವವರು, ಸರ್ವಸಮಾಜದ ಸಾಮರಸ್ಯಕ್ಕೆ ಬೆಂಕಿಯಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುವವರು, ‘ಸ್ವಜನರು ಮಾತ್ರವೇ ಜನರು; ಮತ್ತುಳಿದವರು ಮಣ್ಣು-ಕಲ್ಲುಗಳು’ ಎನ್ನುವ ಸಿದ್ಧಾಂತದವರು ಸಮ್ರಾಟರಾಗುತ್ತಾರೆ!
ಓ ಕನ್ನಡಕುಲದ ಕುಡಿಗಳೇ! ಓ ಭಾರತಮಾತೆಯ ಮಡಿಲ ಮಕ್ಕಳೇ!
ಮತದಾನವೆಂಬ ನಿಮ್ಮ ಪಟ್ಟಾಭಿಷೇಕಕ್ಕೆ ಒಂದು ವಾರದ ದೂರವೂ ಉಳಿದಿಲ್ಲ!
ಏಳಿ! ಎಚ್ಚರಗೊಳ್ಳಿ!! ನಿಮ್ಮ ಪ್ರಜ್ಞೆಯನ್ನು ಎಚ್ಚರಗೊಳಿಸಿಕೊಳ್ಳಿ!
ನಮ್ಮ-ನಿಮ್ಮ ಮತಿಹೀನ-ಮತದಾನದಿಂದಲಾಗಿ, ಹಿಮಾಲಯದ ಹಿರಿಮೆ- ಗಂಗೆಯ ಗರಿಮೆಗಳ ಭರತಖಂಡವನ್ನು, ಕಾವೇರಿಯ ಕರುಣೆ- ಕಿಷ್ಕಿಂಧೆಯ ಕಟಾಕ್ಷಗಳಿಗೆ ಪಾತ್ರವಾದ ಕರುನಾಡನ್ನು ಕಟುಕರು-ಕಾಪುರುಷರು-ಕುಜನರು ಆಳದಿರಲಿ!
ಸತ್ಪುರುಷರು-ಸುಜನರು ಆಳಲಿ; ಅವರ ಆಳ್ವಿಕೆ ಬಾಳಲಿ; ಭಾರತೀಯರ ಬಾಳು ಬೆಳಗಲಿ! ತಾಯಿಯ ತಿಲಕಕ್ಕೆ ಕಲಂಕವಾಗಿ ಸಲ್ಲುವವರನ್ನು ಕಸದ ಬುಟ್ಟಿಗೆಸೆದು, ನಮ್ಮ ಮತಗಳು ಮಹನೀಯ ಜನನಾಯಕರೆಂಬ ಮುತ್ತುಗಳಿಂದ ವಿರಚಿತವಾದ ಮುಕುಟವಾಗಿ ಭಾರತ-ಭುವನೇಶ್ವರಿಗೆ ಸಲ್ಲಲಿ!
ಭೋಜನಾಂತೇ ಸೀತಾಕಾಂತಸ್ಮರಣಮ್ – ಎಂಬಂತೆ, ಲೇಖನಾಂತೇ ಗಾಥಾಕಾಂತಸ್ಮರಣಮ್ ಎನ್ನೋಣವೇ..
‘ಕೊಟ್ಟವನು ಕೋಡಂಗಿ; ಇಸಕೊಂಡವನು ಈರಭದ್ರ!’ – ಎಂಬ ಗಾದೆಯು ಚುನಾವಣೆಯ ಬಳಿಕ ನಮ್ಮ-ನಿಮ್ಮನ್ನು ಮುಟ್ಟದಿರಲಿ!
~*~
ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.
ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.
May 6, 2018 at 6:38 AM
ಮತದಾನವೆಂಬ ಧರ್ಮದಂಡವನ್ನು ಪ್ರಯೋಗಿಸಿ, ನಮ್ಮನಾಡನ್ನು ಕಳ್ಳ ಕಾಕರಿಂದ ರಕ್ಷಿಸೋಣ.
#ಲೋಕಲೇಖ
May 6, 2018 at 9:31 AM
ಮಾಡಲೇಬೇಕಾದ ಕರ್ತವ್ಯವನ್ನು ಸರಿಯಾಗಿ ಶ್ರದ್ಧೆಯಿಂದ ಮಾಡೋಣ ಹಾಗೂ ಇನ್ನಿತರರಿಗೂ ಪ್ರೇರೇಪಿಸೋಣ
May 6, 2018 at 10:09 PM
ಪ್ರತಿ ಪ್ರಜೆಯ ಮತವೂ ಅತೀ ಅಮೂಲ್ಯ ಎಂಬುದನ್ನು ಮರೆಯದೆ, ನಮ್ಮ ಮತಿಯನ್ನ ಉಪಯೋಗಿಸಿ ವೋಟ್ ಮಾಡೋಣ! ನಮ್ಮವರೆಲ್ಲರನ್ನೂ ವೋಟ್ ಮಾಡಲು ಪ್ರೇರೇಪಿಸೋಣ! #ಲೋಕಲೇಖ