#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
31-08-2018:
ಮಿಥ್ಯಾ ಸ್ವಯಂವರ
ಮರಣ ಎಂದರೆ ಆಯ್ಕೆ, ಆಯ್ದಕೊಳ್ಳುವುದು. ಜೀವವು ದೇವನನ್ನು ವರಿಸಬೇಕು, ಅದು ಒಂದು ಬಾರಿ ಅಲ್ಲ, ನೂರಾರು ಬಾರಿ, ಸಾವಿರಾರು ಬಾರಿ ನಾವು ಅವನನ್ನು ವರಿಸಬೇಕು. ಆಯ್ಕೆ ಮಾಡಿಕೊಳ್ಳಬೇಕು. ನಾವು ನೂರಾರು ಬಾರಿ ವರಿಸಿದಾಗ ಅವನು ನಮ್ಮನ್ನು ಒಂದು ಬಾರಿ ವರಿಸುತ್ತಾನೆ. ಆಗ ಅಲ್ಲಿಗೆ ಅನಂತ ಸಂಸಾರದ ಯಾತ್ರೆ ಮುಕ್ತಾಯವಾಗುತ್ತದೆ, ಆನಂದ ಯಾತ್ರೆ ಆರಂಭವಾಗುತ್ತದೆ. ಬೇರೆಲ್ಲದರ ತುಲನೆಯಲ್ಲಿ ಅದೇ ಮುಖ್ಯ, ಅದೇ ಉಪಾದೇಯ, ಅದೇ ಶ್ರೇಷ್ಠ ಎಂಬುದನ್ನು ನಾವು ಮನಗಾಣಬೇಕು. ಹೀಗೆ ನಮ್ಮಿಂದ ವೃತನಾದ ಶ್ರೀಕೃಷ್ಣ ನಮ್ಮನ್ನು ಕಾಪಾಡಲಿ, ನಮ್ಮನ್ನು ವರಿಸಲಿ, ತನ್ನನ್ನು ತಾನು ತೆರೆದು ತೋರಿಸಲಿ.
ಏನಿದು ಮಿಥ್ಯಾಸ್ವಯಂವರ? ನಳ ಬರಲೇಬೇಕು, ಮತ್ತು ಬಂದದ್ದು ನಳನೇ ಅಂತ ತಿಳಿಯಬೇಕಾಗಿದೆ ದಮಯಂತಿಗೆ. ಈಗಾಗಲೇ ನಳನು ಅಯೋಧ್ಯೆಯಲ್ಲೇ ಇದ್ದಾನೆ ಅಂತ ದಮಯಂತಿಗೆ ಅರಿವಾಗಿದೆ. ಬಾಹುಕನಾಗಿ ಅವನು ತೋರಿದ ದುಃಖ, ಅವನಿಗೆ ತಿಳಿದಿರುವ ವಿಷಯಗಳು ಎಲ್ಲವೂ ಅದನ್ನು ನಿಶ್ಚಯಮಾಡುತ್ತಿವೆ, ಒಂದು ವಿಚಾರ ಹೊರತುಪಡಿಸಿ. ಅದು ಅವನ ಆಕೃತಿ, ಅದು ಆಕೃತಿಯೂ ಅಲ್ಲ.. ವಿಕೃತಿ. ಇರಬಹುದು ಒಮ್ಮೊಮ್ಮೆ ದೇವತೆಗಳೂ, ಮಹಾತ್ಮರೂ ಮಾರುವೇಷದಲ್ಲಿ ಇರಬಹುದು.. ಕವಿ ಹೇಳಿರುವಂತೆ “ಸಾಮಾನ್ಯ ರೂಪದಲಿ, ಸಂಸಾರಿವೇಷದಲಿ ಸ್ವಾಮಿ ನಿನ್ನೆಡೆಗೆ ಬರಬಹುದು ವರ ನೀಡಿ…” ಆದರೆ ಖಚಿತವಾಗಬೇಕು. ಹಾಗೂ ಅವನನ್ನು ಆದಷ್ಟು ಬೇಗ ಕರೆತರಬೇಕಾಗಿದೆ. ಯಾಕೆಂದರೆ ಅವನು ಅಲ್ಲಿಂದ ಹೊರಟು ಹೋಗುವ ಮೊದಲು. ಅವನಿಗೆ ಈಗಾಗಲೇ ನನಗೆ ಅವನ ಮಾಹಿತಿ ತಲುಪಿರುತ್ತದೆನ್ನುವ ಸಂಗತಿ ಅರಿವಾಗಿರುತ್ತದೆ. ಹಾಗಾಗಿ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಶ್ರೀಶ್ರೀ ಅಮೃತವಾಣೀ…
ನಳನಿಗೆ ದಮಯಂತಿ ಬೇಡ ಅಂತ ಅಲ್ಲ, ಆದರೆ ಅವನಿಗೆ ತನ್ನ ರಾಜ್ಯವನ್ನು ಮರಳಿ ಪಡೆಯಬೇಕಿದೆ. ಅದಕ್ಕಾಗಿ ಅಕ್ಷವಿದ್ಯೆ ಬೇಕು. ಎಲ್ಲಿ ಸೋತನೋ ಅಲ್ಲಿಯೇ ಗೆಲ್ಲಬೇಕು, ಎಲ್ಲಿ ಕಳೆದುಕೊಂಡನೋ ಅಲ್ಲಿಯೇ ಸಂಪಾದನೆ ಮಾಡಬೇಕು. ಅದಿಲ್ಲದೇ ವಿದರ್ಭಕ್ಕೆ ಬರಲಾರ. ರಾಜ್ಯವನ್ನು ಪಡೆಯದೇ, ರಾಜಾಧಿರಾಜನಾಗದೇ, ಮಾವನ ಮನೆಗೆ ಹೋಗುವುದೆಂತು. ಹಾಗಾಗಿ ಅವನಾಗಿಯೇ ಬರಲಾರ, ಬರಬೇಕೆಂದರೆ ಆ ಅನಿವಾರ್ಯತೆ ಉಂಟುಮಾಡಬೇಕು. ಅದು ಸಾಮಾನ್ಯವಾಗಿ ಎಲ್ಲರಿಗೂ ಬರುವ ಆಲೋಚನೆ ಅಲ್ಲ… ಅದು ಪುನಃಸ್ವಯಂವರ. ದಮಯಂತಿಗೆ ಬೇರೆ ಮದುವೆ ಅಂತಾದರೆ ನಳ ಖಂಡಿತವಾಗಿ ಎದ್ದು ಬರುತ್ತಾನೆ. ಹಾಗೆ ಬರದಿದ್ದರೆ ಅವನು ಪತಿ ಹೇಗಾದಾನು? ಪತ್ನಿ ತನ್ನವಳೆನ್ನುವ ಏಕನಿಷ್ಠಯಲ್ಲಿಯೇ ಪತಿತ್ವವಿರುವುದು. ಸಮಯ ಕೂಡಾ ಒಂದೇ ದಿನ ಅಂತ ಆದಾಗ ಯೋಚಿಸಲೂ ಅವಕಾಶ ಇರಲ್ಲ, ತಕ್ಷಣ ಹೊರಟು ಬರಲೇಬೇಕಾಗುತ್ತದೆ.
ಹಾಗೆ ಒಂದೇ ದಿನದಲ್ಲಿ ಬರಬೇಕಾದರೆ ಅವರು ನಳನೇ ಆಗಿರಬೇಕು. ಅಷ್ಟು ದೂರವನ್ನು ಒಂದೇ ದಿನದಲ್ಲಿ ಕ್ರಮಿಸಲು ಅವನಿಗೆ ಮಾತ್ರಾ ಸಾಧ್ಯ. ಬರದಿದ್ದರೆ ತಪ್ಪಿಸಿಕೊಳ್ಳಲು ಸುಲಭ. ಸೂರ್ಯೋದಯಕ್ಕೆ ತಲುಪದಿದ್ದರೆ ಸ್ವಯಂವರದ ವಾಯಿದೆ ಮುಗಿದಂತೆ, ಆಗ ಉತ್ತರಿಸಲೂ ಸುಲಭ. ಈ ನಿಶ್ಚಯವು ಅವಳು ಎಂತಹ ರಾಜನೀತಿ ಕುಶಲೆ ಅಂತ ತಿಳಿಸುತ್ತದೆ. ಒಂದು ದೊಡ್ಡ ಅಪಾಯ ಇದೆ ಇಲ್ಲಿ. ನಳನ ಕಿವಿಗೆ ಇವಳ ಮತ್ತೊಂದು ಮದುವೆಯ ವಿಷಯ ಬಿದ್ದರೆ ಪರಿಣಾಮ ಏನಾಗುತ್ತೋ ಏನೋ? ಆದರೆ ದಮಯಂತಿಯ ಯೋಚನೆ ಒಂದೇ, ಅವನು ಬಂದು ತಲುಪಬೇಕು ಅಷ್ಟೇ. ಇತರೆ ಪರಿಣಾಮಗಳು ಇಲ್ಲವಾ ಅಂದರೆ ಇರದೇ ಸಾಧ್ಯವಿಲ್ಲ. ಆದರೆ ಬೇರೆ ಯೋಚನೆ ಕೂಡಾ ಅವಳು ಮಾಡುತ್ತಿಲ್ಲ. ಅವಳ ಮನಸ್ಸಿನಲ್ಲಿ ನಳ ಬರಬೇಕು ಅನ್ನುವ ವಿಚಾರ ಒಂದೇ ಇರುವುದು. ಇದರಿಂದ ದೊಡ್ಡ ವಿಪತ್ತೇ ಬರಬಹುದು ಅಲ್ಲ ಅಂತಲ್ಲ..
ಹೀಗೆ ಒಂದು ದೊಡ್ಡ ಕಾರ್ಯದ ಕುರಿತು ಆಲೋಚಿಸುವಾಗ ನೂರಾರು ತೊಂದರೆಗಳು ಇದ್ದೇ ಇರುತ್ತವೆ. ಅದನ್ನು ಹೇಗೆ ನಿವಾರಿಸಿಕೊಳ್ಳಬೇಕೆಂಬ ಅರಿವು ನಮಗಿರಬೇಕು ಹಾಗೂ ಅದನ್ನು ಸರಿಯಾದ ಮಾರ್ಗದಿಂದ ಪರಿಹಾರ ಮಾಡಿಕೊಳ್ಳಬೇಕು. ಸ್ವಯಂವರ ಎಂದರೆ ವಿದರ್ಭದ ದೂತರು ಹೋಗಿ ಋತುಪರ್ಣನಿಗೆ ಕರೆ ನೀಡಬೇಕು, ಅದಕ್ಕೆ ತಂದೆಗೆ ತಿಳಿಸಬೇಕು. ಈ ಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ. ಒಂದೋ ಭೀಮರಾಜ ಈ ಪ್ರಸ್ತಾಪಕ್ಕೆ ಒಪ್ಪಲಿಕ್ಕಿಲ್ಲ ಅಥವಾ ಇದನ್ನ ಸಮರ್ಥಿಸಿ ಬೇರೊಂದು ಸ್ವಯಂವರವನ್ನೇ ಸಿದ್ಧ ಮಾಡಿಯಾನು! ಹಾಗಾಗಿ ಭೀಮರಾಜನ ದೂತರನ್ನು ಕಳಿಸಲು ಸಾಧ್ಯವಿಲ್ಲ. ಅವನಿಗೆ ಗೊತ್ತಾಗದಂತೆ ಈ ಕೆಲಸ ಆಗಬೇಕು. ಅವಳಿಗೆ ಆಗ ನೆನಪಾದದ್ದು ಸುದೇವನದ್ದು. ಅವನು ತನ್ನನ್ನು ಹುಡುಕಿ ಕರೆತಂದು ಮನೆಗೆ ಬಿಟ್ಟಿದ್ದನಲ್ಲ. ಸರಿ ನೇರ ತಾಯಿಯಲ್ಲಿಗೆ ಹೋಗಿ ಅವಳಿಗೆ ವಿಷಯ ತಿಳಿಸಿದಳು. ಅಮ್ಮ ನಾನು ಈಗ ಹೇಳುವ ವಿಚಾರ ಯಾರಿಗೂ ತಿಳಿಯಬಾರದು. ಹಿಂದಿನ ಕೆಲಸವನ್ನು ನೀನು ತಂದೆಯ ಮೂಲಕ ಮಾಡಿಸಿದ್ದೆ, ಆದರೆ ಇದನ್ನು ಅವನಿಗೂ ತಿಳಿಸುವಂತಿಲ್ಲ. ನೀನು ಸಮ್ಮತಿ ಇತ್ತರೆ ಹೇಳುತ್ತೇನೆ ಇದರಿಂದ ನಳನನ್ನು ಇಲ್ಲಿಗೆ ಕರೆತರಬಹುದು ಎನ್ನುತ್ತಾಳೆ. ತಾಯಿ ಒಪ್ಪಿ ವಿವರ ಕೇಳುತ್ತಾಳೆ. ಇದೂ ಪಕ್ಕಾ ರಾಜನೀತಿ.
ದಮಯಂತಿ ಹೇಳುತ್ತಾಳೆ “ಯಾವ ಸುದೇವ ನನ್ನನ್ನು ಹುಡುಕಿ, ಕರೆತಂದು ತಂದೆಗೆ ಒಪ್ಪಿಸಿದನಲ್ಲದೆ ಎಲ್ಲರನ್ನೂ ಒಟ್ಟುಗೂಡಿಸಿದನೋ ಅವನನ್ನು ಈಗ ಅಯೋಧ್ಯೆಗೆ ಕಳುಹಿಸಬಹುದು” ಎಂದು.
ನಂತರ ಸುದೇವನನ್ನ ಕರೆಸಿ ಹೇಳುತ್ತಾಳೆ ”ನೀನು ನೇರ ಅಯೋಧ್ಯಾ ನಗರಕ್ಕೆ ಹೋಗಿ, ಋತುಪಣ೯ ರಾಜನಲ್ಲಿ ಹೇಳು.. ದಮಯಂತಿಯು ಬೇರೊಂದು ವಿವಾಹದ ಇಚ್ಚೆಯಿಂದ ಸ್ವಯಂವರವನ್ನು ಘೋಷಿಸಿದ್ದಾಳೆ, ಆದರೆ ಸ್ವಯಂವರಕ್ಕೆ ಅವಕಾಶ ಇನ್ನು ಒಂದೇ ದಿನ, ನಿಮಗೆ ಆಹ್ವಾನ ನೀಡಲು ಬಂದಿರುತ್ತೇವೆ” ಎಂದು. ಕೆಲವು ಬಾರಿ ನಮಗೆ ಬೇಡದ ವ್ಯಕ್ತಿಗಳಿಗೆ ಆಹ್ವಾನ ಕಳಿಸುವಾಗ ಹೀಗೆ ಮಾಡುತ್ತೇವೆ, ಕಳಿಸಿದಂಗೂ ಆಗಬೇಕು. ಅವರು ಬರೋ ಹಾಗೂ ಆಗಬಾರದು ಅಂತ. ಇಲ್ಲಿ ಹಾಗಿಲ್ಲ, ಇಲ್ಲಿ ಬರಬೇಕು ಅಂತಲೇ, ನಳನ ಗುರುತಿಸಬೇಕು ಅಂತಲೇ ಈ ನಿರ್ಧಾರ (ಅವನಲ್ಲದೇ ಆ ವೇಗದಲ್ಲಿ ಬೇರಾರೂ ಬರಲಾರರು.) ಮುಂದುವರೆದು ರಾಜನಿಗೆ ಹೇಳು. ಸಮಯ ಇಲ್ಲ, ನೀನು ವೀರಾಧಿವೀರ, ಸಾಧ್ಯವಾದರೆ ಬಾ. ವೀರ ಕ್ಷತ್ರಿಯನೊಬ್ಬನನ್ನು ಕೆರಳಿಸುವುದು ಹೀಗೆ! ಅವನು ಬರದಿರಲು ಸಾಧ್ಯವೇ ಇಲ್ಲ. ಸ್ವಯಂವರದ ವಿಷಯ ಬೇರೆಲ್ಲೂ ಗೊತ್ತಿಲ್ಲ, ಸ್ವತಃ ತಂದೆಗೇ ತಿಳಿದಿಲ್ಲ. ಕೇವಲ ಋತುಪಣ೯ನಿಗೆ ಮಾತ್ರವೇ ಈ ಆಹ್ವಾನ. ಎಲ್ಲ ಕಡೆಗೂ ಬೇಡ ಇಲ್ಲಿ ಮಾತ್ರವೇ ಆ ವಿಚಾರ ತಲುಪಬೇಕಾಗಿತ್ತು..
ರಥವನ್ನು ನಳ ನಡೆಸಿದರೆ ಆ ಘೋಷವೇ ಬೇರೆ. ಅದನ್ನು ಅವನು ಬಂದು ತನ್ನ ರಥದ ಘೋಷದ ಮೂಲಕ ಸಾರಬೇಕು. ಆ ಶಬ್ದ ದಮಯಂತಿಗೆ ಕೇಳಿದರೆ ನಳ ಬಂದ ಅಂತಲೇ ಲೆಕ್ಕ.
ಸುದೇವ ಮರು ಮಾತಾಡಲಿಲ್ಲ, ಏನು? ಎತ್ತ? ಅಂತ ಕೇಳಲಿಲ್ಲ, ದಮಯಂತಿಯ ಮೇಲೆ ಅಷ್ಟು ನಂಬಿಕೆ ಅವನಿಗೆ. ಆಯಿತು ಅಂತ ಹೇಳಿ ಹೊರಬಂದು ದೇವರಿಗೆ ನಮಸ್ಕರಿಸಿ ದೊಡ್ಡ ಅನಾಹುತವಾಗದಂತೆ ಕಾಪಾಡು ಎಂದು ಕೇಳಿಕೊಂಡು, ಭೀಮರಾಜನಿಗೆ ತಿಳಿಯದಂತೆ ಹೊರಡುವುದಕ್ಕೆ ಶೀಘ್ರಯಾನದ ವ್ಯವಸ್ಥೆ ಮಾಡಿಕೊಂಡು ಅಯೋಧ್ಯೆಯನ್ನು ತಲುಪುತ್ತಾನೆ. ರಾಜನನ್ನು ಕಂಡು ಯಾವುದೇ ಉದ್ವೇಗಕ್ಕೆ ಒಳಗಾಗದೇ, ದಮಯಂತಿ ಹೇಳಿದ್ದನ್ನು ಹೆಚ್ಚು ಕಡಿಮೆ ಇಲ್ಲದಂತೆ ಎಲ್ಲವನ್ನೂ ಹಾಗೇ ಹೇಳಿದ.
ಸುದೈವ ದಮಯಂತಿಯದ್ದು. ವಿದಭ೯ದ ಆಮಂತ್ರಣವನ್ನು ಋತುಪಣ೯ ಒಪ್ಪಿದ. ಅಥವಾ ಈ ಮೂಲಕ ವಿದಭ೯ ಒಡ್ಡಿದ ಸವಾಲನ್ನು ಸ್ವೀಕರಿಸಿದ, ಸೂರ್ಯವಂಶೀಯ ಕ್ಷತ್ರಿಯನಾಗಿ ಅವನಿಗೆ ಅದು ಅನಿವಾಯ೯ವಾಗಿತ್ತು, ಒಪ್ಪಿದ ಆದರೆ ಆಮೇಲೆ ಚಿಂತಿಸಿದ ಇದು ಹೇಗೆ ಸಾಧ್ಯ? ಅಂತ. ಸರಿಯಾಗಿ ರೆಕ್ಕೆ ಬಲಿಯದ ಹಕ್ಕಿಯನ್ನು ಆಗಸಕ್ಕೆ ಹಾರು ಅಂತ ಹೇಳಿದಂತೆ ಆಗಿತ್ತು ಅವನ ಪರಿಸ್ಥಿತಿ. ವಿದಭ೯ ವೆಂದರೆ 200 ಗವ್ಯೂತಿಗಳಿಗಿಂತ ದೂರ (ಒಂದು ಗೋವು ಕೂಗಿದರೆ ಅದು ಕೇಳುವವರೆಗಿನ ದೂರವನ್ನು ಗವ್ಯೂತಿ ಅಂತ ಹೇಳತಾರೆ, ಅದು ಹಿಂದಿನ ಕಾಲದ ಲೆಕ್ಕ, ಈಗ ಅದನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಸಾಧ್ಯವಿಲ್ಲ. ಆಗ ಗೋವುಗಳ ಸ್ವರವೂ ಹೆಚ್ಚಿತ್ತು, ಕೇಳುವವರ ಶ್ರವಣ ಶಕ್ತಿ ಕೂಡಾ ಹೆಚ್ಚಿತ್ತು.) ಇದನ್ನ ಒಂದು ದಿನದಲ್ಲಿ ಹೇಗೆ ಕ್ರಮಿಸೋದು.. ಅಂತ ಚಿಂತೆಗೆ ಬಿದ್ದ, ಒಬ್ಬನೇ ಚಿಂತಿಸಿದರೆ ಫಲ ಏನು ? ತನ್ನ ಸಾರಥಿಗಳನ್ನು ಕರೆದು ಕೇಳಿದ. ವಾರ್ಷ್ಣೆಯನಿಗೆ ಅವನಲ್ಲಿ ಕೆಲಸ ದೊರಕಿದ್ದೇ ಅವನು ನಳನಿಗೆ ಸಾರಥಿಯಾಗಿದ್ದವನಾದ್ದರಿಂದ, ಅವನು ಹೇಳಿದ ಒಡೆಯ ಇದು ಸಾಧ್ಯವಿಲ್ಲ, ನನಗೋ ಜೀವಲಕನಿಗೋ ಸಾಧ್ಯವಿಲ್ಲ. ಒಬ್ಬ ನಳನಿಗೆ ಆ ಶಕ್ತಿ ಇತ್ತು, ಅವನೆಲ್ಲಿ ಈಗ! ಇನ್ನು ಸಾಧ್ಯವಿದ್ದರೆ ಬಾಹುಕನಿಗೆ ಆಗಬಹುದು. ಅವನನ್ನೇ ಒಮ್ಮೆ ಕೇಳಿ ನೋಡಿ ಅಂತ. ರಾಜನದ್ದೂ ಅದೇ ಚಿಂತನೆ ಇತ್ತು ಹಾಗೆ ಅವನನ್ನೇ ಕರೆದ. ಎಂದಿನ ಸ್ವರದಲ್ಲಿ ಅಲ್ಲದೇ, ಬಹಳ ಮೃದು ಸ್ವರದಲ್ಲಿ ನಯವಾಗಿ ಕರೆದ, ಹೇಗಾದರೂ ಬಾಹುಕನನ್ನು ಇದಕ್ಕೆ ಒಪ್ಪಿಸಬೇಕಾಗಿತ್ತು ಅವನಿಗೆ. ವಿದಭ೯ದೆದುರು ತನ್ನ ಮಯಾ೯ದೆ ಉಳಿಸಿಕೊಳ್ಳಬೇಕಾಗಿದೆ ಹಾಗಾಗಿ ಸೇವಕನಿಗೆ ಹೇಳಿದಂತಲ್ಲದೇ, ನಯವಾಗಿ ಬೆಣ್ಣಿಯಲ್ಲಿ ಕೂದಲು ತೆಗೆದಂತೆ ಹೇಳಿದ “ಬಾಹುಕ, ವಿದಭ೯ಕ್ಕೆ ಹೋಗಬೇಕು. ಅಲ್ಲಿ ಗುರುತರವಾದ ಕಾರ್ಯವಿದೆ, ದಮಯಂತಿಯ ಸ್ವಯಂವರವಿದೆ. ಈಗಷ್ಟೇ ಸುದ್ದಿ ಬಂದಿದೆ. ಪುನ: ಸ್ವಯಂವರ, ಒಂದೇ ದಿನದ ಸಮಯ ಇದೆ. ನಾಳೆ ಸೂರ್ಯೋದಯಕ್ಕೆ ಅಲ್ಲಿರಬೇಕು ಆದ್ದರಿಂದ ಹೇ ಅಶ್ವಹೃದಯಜ್ಞ ನಿನ್ನಿಂದ ಹೋಗಲು ಸಾಧ್ಯವೇ! ಎಂದ (ನಿನ್ನ ಸಾಮಥ್ಯ೯ಕ್ಕೆ ಇದು ಸವಾಲು, ನೀನೇ ಹೇಳಿದ್ದೆಯಲ್ಲವೇ ಯಾರಿಂದಲೂ ಆಗದ ಕೆಲಸವನ್ನು ನನಗೆ ಹೇಳಿ ಎಂದು ಎನ್ನುವ ಭಾವ)
ಇದನ್ನು ಕೇಳಿ ನಳನಿಗೇನಾಯಿತು? ಸ್ತಬ್ದವಾಗಿ ನಿಲ್ಲುತ್ತಾನೆ, ಪ್ರತಿಕ್ರಿಯೆ ಇಲ್ಲ. ಹೃದಯದ ಬಡಿತವೇ ನಿಂತಂತಾಗಿದೆ, ಜೀವಂತ ಪ್ರತಿಮೆಯಂತೆ ಆಗಿದ್ದಾನೆ.
ನಳ ಅಸಾಧಾರಣ ವ್ಯಕ್ತಿ, ಸಾಮಾನ್ಯ ದುಃಖಗಳು ಅವನನ್ನು ವಿಚಲಿತಗೊಳಿಸಲಾರವು. ಅವನನ್ನು ತಲುಪಲೂ ಸಾಧ್ಯವಿಲ್ಲ ಅವುಗಳಿಗೆ, ಆಯುಧಗಳೂ ಅವನ ಶರೀರವನ್ನು ಘಾಸಿಗೊಳಿಸಲಾರದು, ದೇಹದ ಮಟ್ಟಿಗೆ ಮಾತ್ರವಲ್ಲ ಮನಸ್ಸಿಗೂ ಹೌದು. ಅದೂ ಬಹಳ ಬಲಿಷ್ಟ, ಆದರೆ ಇದನ್ನು ಕೇಳಿ ತಡೆದುಕೊಳ್ಳಲು ಆಗಲಿಲ್ಲ. ತೋರಿಸಿಕೊಳ್ಳುವಂತೆಯೂ ಇಲ್ಲ. ತೋರಿಸಿಕೊಳ್ಳುವ ಪರಿಸ್ಥಿತಿ ಇಲ್ಲ, ಹಾಗಾಗಿ ದುಃಖದ ಪರಾಕಾಷ್ಠೆಯಲ್ಲಿ ಹೃದಯ ನೂರು ಚೂರಾಗಿ ಒಡೆದು ಹೋಗಿ ಸ್ತಬ್ಧವಾಗಿದೆ. ಹಾಗಾಗಿ ಮಾತಾಡಲೂ ಅವಕಾಶ ಇಲ್ಲ. ಋತುಪಣ೯ನಿಗೆ ಇವನ ಬಗ್ಗೆ ಗಮನ ಇಲ್ಲ. ಅವನ ಚಿಂತೆ ಪ್ರಯಾಣದ ಕಡೆಗೇ ಇದೆ. ಇವನ ಮನಸ್ಸನ್ನು ಅವನು ಗ್ರಹಿಸಲಿಲ್ಲ. ಈ ಕಡೆಯ ಅರಿವೇ ಇಲ್ಲದೇ ಸ್ತಬ್ಧನಾಗಿದ್ದ, ಮತ್ತೆ ಪ್ರಜ್ಞೆ ಬಂದಾಗ ನೂರಾರು, ಸಾವಿರಾರು ಭಾವಗಳು ಅವನೆದೆಯಲ್ಲಿ ಆಡಿದವು. ಅಂದಿನ ಸ್ವಯಂವರದ ನೆನಪಾಯಿತು. ಈಗ ಮತ್ತೆ ಹಾಗೆಯೇ, ಆಗ ದೇವತೆಗಳನ್ನು ಕರೆದುಕೊಂಡು ಹೋದ ಹಾಗೆ ಈಗ ಋತುಪಣ೯ನನ್ನು ಕರೆದುಕೊಂಡು ಹೋಗಬೇಕು, ಮಾತ್ರವಲ್ಲ ತಾನೇ ನಿಂತು ಮದುವೆಯನ್ನೂ ಮಾಡಿಸಬೇಕು.
ಅವನೊಳಗೆ ತಕ೯ ಶುರುವಾಯಿತು, ದಮಯಂತಿ ಹೀಗೆ ಮಾಡಿದಳಾ? ಇನ್ನೊಂದು ಮದುವೆಗೆ ಸಿದ್ಧಳಾದಳಾ? ಇದು ನನ್ನ ದಮಯಂತಿಯೇ ಹೌದಾ? ಅಥವಾ ಕಾರ್ಯಾಕಾರಣ ವಿವೇಚನೆ ಇಲ್ಲದೇ ಮೋಹದಿಂದ ಒಪ್ಪಿದಳಾ? ಅಥವಾ ಇದು ನನ್ನನ್ನು ಅಲ್ಲಿಗೆ ಕರೆಸಲು ಒಂದು ಉಪಾಯ ಆಗಿರಬಹುದಾ… ? ಹೀಗೆಲ್ಲಾ.
ಅದಕ್ಕೆ ಹೇಳದು ಸತಿಪತಿಯರು ಸಹೃದಯರು ಅಂತ. ಅಂದರೆ ಸಮಾನ ಹೃದಯರು ಅಂತ. ಸಮಾನ ಹೃದಯರಲ್ಲಿ ಒಟ್ಟಿಗೆ ಒಂದೇ ಭಾವ ಬರುತ್ತೆ. ಒಂದೇ ರೀತಿ ಶೃತಿ ಮಾಡಿಟ್ಟ ಎಲ್ಲ ವೀಣೆಗಳನ್ನು ಒಂದೇ ಕಡೆ ಇಟ್ಟು ಒಂದನ್ನು ನುಡಿಸಿದರೆ ಎಲ್ಲದರಲ್ಲೂ ಒಂದೇ ನಾದ ಬರುವಂತೆ. ಮತ್ತೆ ಕೆಡುಕಿನೆಡೆಗೆ ಮನ ಹರಿಯುತ್ತದೆ ನಳನಿಗೆ. ಗಂಡನಲ್ಲೇ ಪೂಣ೯ವಾಗಿ ಮನವನ್ನಿಟ್ಟವಳು ಇಂತಹ ಕ್ರೂರ ತೀರ್ಮಾನವನ್ನು ಹೇಗೆ ಮಾಡುತ್ತಾಳೆ? ಬಹುಶಃ ಅದಕ್ಕೆ ನಾನೇ ಕಾರಣ. ನಾನು ಕ್ಷುದ್ರ, ಪಾಪಬುದ್ಧಿಯವ, ನನ್ನಿಂದಾದ ಅಂತಹ ಅನ್ಯಾಯಕ್ಕೆ ಇದೇ ಸರಿಯಾದ ಶಿಕ್ಷೆ ಎಂದು ತನ್ನನ್ನು ತಾನೇ ಜರೆಯುತ್ತಾನೆ. ಮತ್ತೆ ಸ್ತ್ರೀ ಸ್ವಭಾವವೇ ಹಾಗೆ, ಚಂಚಲೆ ಅವಳು ಅಂತ ಹೇಳತಾನೆ. ಅಲ್ಲಲ್ಲ ನಾನು ಮಾಡಿದ ದೋಷ/ಅಪರಾಧ ದಾರುಣವಾದದ್ದು, ಯಾವ ವ್ಯಕ್ತಿಯಾದರೂ ಮತ್ತೊಬ್ಬನಿಗೆ ಮಾಡಬಾರದಂತಹದ್ದನ್ನು ನಾನು ಮಾಡಿದ್ದೇನೆ, ಅಥವಾ ಹೀಗೆ ಮಾಡಲೂ ಬಹುದೇನೋ. ಕಣ್ಣ ಮುಂದೆ ಇರುವಾಗ ಪ್ರೀತಿ ಇರುತ್ತದೆ. ದೂರವಾದ ಮೇಲೆ ಹೇಗೋ? ಏನೋ! ಕಾಲಪ್ರವಾಹಕ್ಕೆ ಸಿಕ್ಕಿದಂತೆ. ಪ್ರೇಮಪ್ರವಾಹವೂ ಕಳೆದು ಹೋಗಬಹುದು, ಅವಳಿಗೂ ನಿರಾಸೆ ಆಗಿರಬಹುದು. ಇನ್ನು ಇವನು ಹೇಗೂ ಬರಲ್ಲ ಅನ್ನುವ ತೀರ್ಮಾನಕ್ಕೆ ಬಂದಿರಬಹುದು, ಹಾಗಾಗಿ ಈ ಕೆಲಸಕ್ಕೆ ಅವಳು ಒಪ್ಪಿರಬಹುದು. ಹೀಗೆಲ್ಲಾ ಜಿಜ್ಞಾಸೆ ನಡೆದ ನಂತರ ಕೊನೆಯಲ್ಲಿ ಅನಿಸುತ್ತದೆ. ಇಲ್ಲ, ದಮಯಂತಿ ಹೀಗೆ ಮಾಡಲು ಸಾಧ್ಯವಿಲ್ಲ, ಯಾಕೆಂದರೆ ಪತಿಯ ವಿಷಯ ಬಿಡಿ, ಅವಳಿಗೆ ಮಕ್ಕಳಿದ್ದಾರೆ. ಅಲ್ಲದೇ ಅವಳು ಧಮ೯ ಮೀರಿ ವರ್ತಿಸುವವಳಲ್ಲ. ಹೀಗೆ ಹೊಯ್ದಾಡಿ, ಕೊನೆ ನಿಶ್ಚಯಕ್ಕೆ ಬರುತ್ತಾನೆ. ಹೇಗಾದರೂ ಆಗಲಿ ಹೋಗಿ ನೋಡಿ ನಿಶ್ಚಯ ಮಾಡೋಣ ಅಂತ.
ಇದಕ್ಕಾಗಿಯೇ ದಮಯಂತಿ ಈ ಯೋಜನೆ ಮಾಡಿದ್ದು. ಆ ಪುನಃ ಸ್ವಯಂವರದ ಚಿಂತನೆ ಮಾಡಿದ್ದು. ಮುಂದೇನು ಆಗಲಿ, ಬರಲಿ ಆದರೆ ತಿಳಿಯುವ ಕಾತುರತೆಯಂತೂ ಇರಬೇಕು. ಹಾಗೆಯೇ ಹಳೆಯ ತೀರ್ಮಾನ ಬಿಟ್ಟು ರಾಜಾಧಿರಾಜನಾಗದೇ ಮತ್ತೆ ವಿದಭ೯ಕ್ಕೆ ಹೋಗಲಾರೆ ಎಂದಿದ್ದವನು ಈಗ ಬದಲು ಮಾಡಿದ. ಸದ್ಯಕ್ಕೆ ನಾನು ರಾಜನ ಸೇವಕ, ಅವನ ಅಣತಿಯಂತೆ ತನ್ನಿಂದ ಸಾಧ್ಯವಾದದ್ದನ್ನು ಮಾಡದಿದ್ದರೆ ಕತ೯ವ್ಯಲೋಪ ಮಾಡಿದಂತೆ ಅಂತ ಭಾವಿಸಿ, ಸ್ವಾಮಿಕಾಯ೯, ಸ್ವಕಾಯ೯ ಎರಡನ್ನೂ ಮಾಡಿಕೊಂಡು ಬರುವ ಉದ್ದೇಶದಿಂದ ಆಗಲಿ ಅಂತ ರಾಜನಿಗೆ ಹೇಳುತ್ತೇನೆ ಅಂತ ನಿರ್ಧಾರ ಮಾಡುತ್ತಾನೆ.
ನಂತರ ದೊರೆಗೆ ಕೈ ಮುಗಿದು ಆಗಲಿ ಮಾಡುತ್ತೇನೆ ಅಂದ. ಅವನ ಮಾತಿನಲ್ಲಿ ದೃಢತೆ ಇತ್ತು. ಖಂಡಿತಾ ಹೋಗುತ್ತೇನೆ ಎನ್ನುವ ಸಂಕಲ್ಪ ಇತ್ತು. ಒಂದು ದಿನವೇಕೆ ಒಂದೇ ಹಗಲಿನಲ್ಲಿ ಇಲ್ಲಿಂದ ಅಲ್ಲಿಗೆ ಕರೆದೊಯ್ಯುತ್ತೇನೆ ಎಂಬುದಾಗಿ ಪ್ರತಿಜ್ಞ ಮಾಡಿದ. ದೀನ ಮನಸ್ಸಿನವನಾಗಿ, ಸೇವಕನಾಗಿ, ಅಪ್ಪಣೆ! ನಾಳೆ ಸೂರ್ಯೋದಯಕ್ಕೆ ದೊರೆ ಅಲ್ಲಿ ವಿದಭ೯ದಲ್ಲಿ ಅಂತ ಹೇಳುತ್ತಾನೆ.
ಋತುಪಣ೯ನೇನೋ ಸಂತುಷ್ಟನಾದ, ಬಾಹುಕ ಏನಾದ! ಎಷ್ಟೋ ಸೇವಕರು ಹಾಗಿರುತ್ತಾರೆ. ತಮ್ಮ ಯಜಮಾನನ ಸುಖಕ್ಕಾಗಿ, ತಾವು ಏನೇನು ದುಃಖವನ್ನು ಅನುಭವಿಸುತ್ತಿದ್ದಾರೋ? ಮನಸ್ಸನ್ನು ಏನೇನು ಮಾಡಿಕೊಳ್ಳುತ್ತಿದ್ದಾರೋ? ತಮ್ಮ ಸುಖವನ್ನೇ ತ್ಯಾಗ ಮಾಡುತ್ತಾರೆ ಅಂತಹವರು.
ಅವನದ್ದೇ ಮಾತಾಗಿತ್ತು. ಯಾರಿಗೂ ಮಾಡಲು ಆಗದ ಕೆಲಸವನ್ನು ನಾನು ಮಾಡುತ್ತೇನೆ ಮಾಡಿ ಮುಗಿಸುತ್ತೇನೆ ಎಂದು. ಇನ್ನೇನು ಆಗಲಿಕ್ಕಿದೆಯೋ ನಾಳೆ ನೋಡೋಣ.
ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:
Leave a Reply