ಜ.೦೮ – ಯಾತ್ರೆ ಇಂದು ಸಾಗರದಿಂದ ಹೊರಟು ದಲೋಡ್ ಮೂಲಕ ಪನ್ನಾ ನಗರವನ್ನು ತಲುಪಿತು. ದಾರಿಯಲ್ಲಿ ಹಲವಾರು ಕಡೆ ಹೃದಯ ತಟ್ಟುವ ರೀತಿಯ ಸ್ವಾಗತ ದೊರೆಯಿತು. ದಾರಿಯ ಮಧ್ಯೆ ಗಧಾರಿ ಮತ್ತು ಸೋನಾರ್ ನದಿಗಳು ದೊರೆಯುತ್ತವೆ. ಚಿಕ್ಕ ನದಿಗಳಾದರೂ ನೀರಿನಿಂದ ತುಂಬಿದ್ದವು. ಸೇತುವೆ ತುಂಬ ತಗ್ಗಿನಲ್ಲಿತ್ತು. ಮಳೆಗಾಲದಲ್ಲಿ ನೆರೆ ಬರುವುದು ಇಲ್ಲಿ ಸಾಮಾನ್ಯ ಮತ್ತು ಆಗದ ರಸ್ತೆ ಸಂಚಾರ ನಿಂತು ಹೋಗುತ್ತದಂತೆ. ಆಗ ಎತ್ತರದ ಸೇತುವೆ ಹೊಂದಿರುವ ರೈಲು ಸಂಪರ್ಕವೇ ಜನತೆಯ ಉಪಯೋಗಕ್ಕೆ.

ದಮೋಹ ಜಿಲ್ಲಾ ಕೇಂದ್ರ. ಗ್ರಾಮೀಣ ಪ್ರದೇಶಗಳ ಹಿನ್ನೆಲೆ. ಇಲ್ಲಿನ ಕೋತವಾಲೀ ಚೌಕದಲ್ಲಿ ಸಭೆ ಆಯೋಜಿಸಿದ್ದರು. ಶ್ರೀ ಶಂಕರಲಾಲರಿಂದ ಧ್ವಜಾರೋಹಣ, ದೀಪ ಪ್ರಜ್ವಾಲನೆ ಗೋಪೂಜೆ ನಡೆಯಿತು.

ವೇದಿಕೆಯ ಮೇಲೆ ಪೂಜ್ಯ ಸಂತರುಗಳಾದ ಶ್ರೀ ಅಖಿಲೇಶ್ವರಾನಂದ ಜೀ, ಸೇವಾಗಿರ್ ಜೀ ಮಹಾರಾಜ್, ಪ್ರಹ್ಲಾದ ಜೀ ಮಹಾರಾಜ್, ದದ್ದಾಜೀ ಮಹಾರಾಜ್, ಗೋವಿಂದ ಜೀ ಮಹಾರಾಜ್, ರಾಮಜೀ ಮಹಾರಾಜ್, ಅಮೃತಗಂದ ಜೀ ಮಹಾರಾಜ್ ಮತ್ತು ಪ.ಪೂ. ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾರಾಜ್ ದಿವ್ಯ ಉಪಸ್ಥಿತಿ ನೀಡಿದ್ದರು. ಅಲ್ಲದೇ ಕರ್ನಾಟಕದ ನಂದೀ ಮಹಾರಾಜ ಶ್ರೀ ಬಸಪ್ಪ ಮಹಾಸ್ವಾಮಿಗಳು ಉಪಸ್ಥಿತರಿದ್ದರು.

ಶ್ರೀ ಶಂಕರಲಾಲ ಜೀ ಅವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಯಾತ್ರೆಯ ಹಿನ್ನೆಲೆ ಉದ್ದೇಶವನ್ನು ವಿವರಿಸಿ, ದೇಶೀ ತಳಿಯ ಪಾಲನೆಯಿಂದ ಆರೋಗ್ಯ, ಆರ್ಥಿಕತೆ, ಪರಿಸರದ ಮೇಲಾಗುವ ಉತ್ತಮ ಪರಿಣಾಮಗಳ ಬಗ್ಗೆ ವಿವರಿಸಿದರು.

ಎತ್ತುಗಳಿಂದ ಚಲಿಸುವ ಟ್ರಾಕ್ಟರ್ ಒಂದರ ಮೂಲಕ 5 ಎಕರೆಯನ್ನು ದಿನಂಪ್ರತಿ ಉಳಬಹುದು. ಇದರ ಬೆಲೆ ಕೇವಲ ರೂ. 12,000 ವಷ್ಟೆ ಎಂದರು. ಗೋಶಾಲೆಗಳ ಸಹಾಯಕ್ಕಾಗಿ ಪಟ್ಟಣವಾಸಿಗಳು ತಮ್ಮಲ್ಲಿ ಉಳಿದ ಆಹಾರ ಪದಾರ್ಥಗಳನ್ನು, ತರಕಾರಿ ಹಣ್ಣುಹಂಪಲುಗಳನ್ನು ನಿತ್ಯ ಒಂದು ಸಂಗ್ರಹಿಸುವ ವ್ಯವಸ್ಥೆಯ ಮೂಲಕ ನೀಡಬಹುದು ಎಂದರು. ನಿತ್ಯ ಹಸುವಿನ ಸಂಪರ್ಕದಿಂದ ಎಲ್ಲ ರೋಗಗಳಿಂದ ಮುಕ್ತರಾಗಬಹುದು ಎಂಬ ಕಿವಿಮಾತು ಹೇಳಿದರು.

ಪೂಜ್ಯ ಅಖಿಲೇಶ್ವರಾನಂದ ಜೀ ಮಹಾರಾಜ್ ಅವರು ಗೋವು ಮತ್ತು ಭಾರತದ ಆರ್ಥಿಕ ವಿಕಾಸದ ಬಗ್ಗೆ ವಿಸ್ತೃತವಾದ ಮಾಹಿತಿ ನೀಡಿ, ಗೋರಕ್ಷಣೆಯ ಉದ್ದೇಶದಿಂದ ಹೊರಟ ಯಾತ್ರೆ ಮತ್ತು ಸಂತರ ಸಂಕಲ್ಪಕ್ಕೆ ಸಹಕಾರ ನೀಡಲು ಜನತೆಗೆ ಕರೆ ಇತ್ತರು.

ಪ.ಪೂ. ರಾಘವೇಶ್ವರಭಾರತೀ ಮಹಾಸ್ವಾಮಿಗಳು ಗೋವಿನಿಂದಾಗಿ ನಾವೆಲ್ಲರೂ ಬಂಧುಗಳಾಗಿದ್ದೇವೆ ಎಂದರು. ಎಲ್ಲರೂ ಗೋಮಾತೆಯ ಪುತ್ರರು. ಹಾಗಾಗಿ ಪುತ್ರರ ಕರ್ತವ್ಯವನ್ನು ನಿಭಾಯಿಸಬೇಕು ಎಂದರು.

ಇಂದು ಗೋವು ಸಂಕಟವಲ್ಲದೇ, ಇಡೀ ವಿಶ್ವವೇ ಸಂಕಟದಲ್ಲಿದೆ. ಇದಕ್ಕೆ ಪರಿಹಾರ ಭಾರತದ ರೈತ ಹಾಗೂ ಅವನ ಆತ್ಮ ಗೋವನ್ನು ರಕ್ಷಿಸುವುದು ಎಂದರು. ಗೋಹತ್ಯೆಯೇ ರೈತನ ಆತ್ಮಹತ್ಯೆಗೆ ಪರೋಕ್ಷವಾಗಿ ಕಾರಣ ಎಂದರು. ಇದೀಗ, ಭಾರತದ ಜನತೆ ಒಂದಾಗಿ ಗೋಮಾತೆಯನ್ನು ರಕ್ಷಿಸಬೇಕೆಂದು ಸರಕಾರಕ್ಕೆ ಒತ್ತಡ ತಂದರೆ ಸರಕಾರ ಒಪ್ಪಲೇಬೇಕಾಗುತ್ತದೆ ಎಂದರು. ಈ ಯಾತ್ರೆಯ ಮೂಲಕ ನವಜಾಗರಣ ಮತ್ತು ವಿಶಾಲ ಸಂಘಟನೆಯ ನಿರ್ಮಾಣ ಎಂದರು. ಈ ಯಾತ್ರೆ ಮುಂದೆ ನಡೆಯಲಿರುವ ಮಹಾ ಸಂಗ್ರಾಮದ ಸಿದ್ಧತೆ ಮಾತ್ರ. ನೀವೂ ಸಿದ್ಧತೆ ಮಾಡಿಕೊಳ್ಳಿ ಎಂದರು. ಈ ಯಾತ್ರೆ ವಿಜಯದಶಮಿಯಂದು, ಅಪರಾಜಿತಾ ದೇವಿಯ ಪೂಜೆಯ ದಿನ ಪ್ರಾರಂಭವಾಗಿದೆ. ಹಾಗಾಗಿ ವಿಜಯ ನಿಶ್ಚಿತ. ಇಂಡಿಯಾವನ್ನು ಭಾರತವನ್ನಾಗಿ ಮಾಡಲು ಸಂಗ್ರಾಮಕ್ಕೆ ಸಿದ್ಧರಾಗಿ. ಗೆಲ್ಲುವವರೆಗೆ ಇಲ್ಲವೇ ಈ ದೇಹವಿರುವವರೆಗೆ ಹೋರಾಡೋಣ ಎಂದು ಭಾವುಕರಾಗಿ ಜನತೆಗೆ ಕರೆಯನ್ನಿತ್ತರು.

ಗೋಸೇವಾಕರ್ತರಿಗೆ ಸಮ್ಮಾನ ಮಾಡಲಾಯಿತು. 422 ಗ್ರಾಮಗಳಲ್ಲಿ ಸಂಚರಿಸಿದ ಉಪಯಾತ್ರೆಯು ಇದುವರೆಗೆ ಸಂಗ್ರಹಿಸಿದ 2,24,800 ಹಸ್ತಾಕ್ಷರಗಳನ್ನು ಸಂತರಿಗೆ ಸಮರ್ಪಿಸಲಾಯಿತು.

ಯಾತ್ರೆ ಅಲ್ಲಿಂದ ಪನ್ನಾಕ್ಕೆ ತೆರಳಿತು. ಪನ್ನಾ ರತ್ನಗಳ ಖಣಿಯ ನಾಡು. ಪ್ರಾಣನಾಥನ ಊರು. ಮಹಾರಾಜ ಛತ್ರಸಾಲನ ರಾಜಧಾನಿ. ಯಾತ್ರೆಗೆ ಊರ ಹೊರಗಿನಿಂದಲೇ ಪ್ರಾರಂಭವಾದ ಸ್ವಾಗತ ತುಂಬ ಸುಂದರವಾಗಿ ನಡೆಯಿತು.

ಸಭೆಯನ್ನುದ್ದೇಶಿಸಿ ಆಶೀರ್ವಚನ ಸಂದೇಶ ನೀಡಿದ ಪ.ಪೂ. ರಾಘವೇಶ್ವರಭಾರತೀ ಮಹಾಸ್ವಾಮಿಗಳು ಜನತೆಯನ್ನುದ್ದೇಶಿಸಿ ನೀವೆಲ್ಲ ರತ್ನಗಳು, ಏಕೆಂದರೆ ಗೋಮಾತೆಯನ್ನುಳಿಸಿಕೊಳ್ಳಲು ಆಸಕ್ತರಾದವರೆಲ್ಲ ರತ್ನಗಳೇ ಎಂದು ಉದ್ಗರಿಸಿದರು.

ಗೋಮಾತೆ ವಿಶ್ವದ ಅತಿದೊಡ್ಡ ಕೈಗಾರಿಕೆ, ಗೋವು ಅತಿ ಮೌಲ್ಯದ ವಸ್ತು, ಅಂಥ ಗೋವಿನ ಹತ್ಯೆ ಅತಿದೊಡ್ದ ಪಾಪ ಎಂದರು. ಗೋವು ಮನುಷ್ಯನಿಗೆ ಮಾಡುವ ಅಗಣಿತ ಉಪಕಾರಗಳಿಗೆ, ಉಪಕಾರವಲ್ಲದಿದ್ದರೂ ಅಪಕಾರವನ್ನಾದರೂ ಮಾಡಬೇಡಿ ಎಂದರು. ಛತ್ರಸಾಲ ಧರ್ಮಾತ್ಮನಾಗಿದ್ದ. ಪ್ರಾಣನಾಥನ ಊರಿನಲ್ಲಿ ಪ್ರಾಣನಾಥಾ ಗೋಮಾತೆಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ ಎಂದರು. ಗೋವಿನ ನೋವನ್ನು ಅರ್ಥಮಾಡಿಕೊಳ್ಳಿ, ಆಂದೋಲನದಲಿ ನಿಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳಿ, ಭಾರತದ ಗೋ ಇತಿಹಾಸದಲ್ಲಿ ಪನ್ನಾ ನಗರಿಯ ’ಪನ್ನಾ’ (ಹಾಳೆ) ಸೇರಲಿ ಎಂದು ಹಾರೈಸಿದರು.

Facebook Comments