ಡಿ.೨೮ – ಇಂದು ಪುತ್ರತಾ ಏಕಾದಶೀ ತಿಥಿ, ಇಂದು ಗೋಸೇವೆ ಮಾಡಿ ಭಗವಂತನ ’ಉಪವಾಸ’ (ಸಮೀಪವಾಸ) ಮಾಡಿದಲ್ಲಿ ಪುತ್ರ ಪ್ರಾಪ್ತಿ ನಿಶ್ಚಿತವೆಂಬುದು ಸಂತರ ನುಡಿ.

ಇಂದು ಯಾತ್ರೆ ದಿಲ್ಲಿ ಮಹಾನಗರಿಯಿಂದ ಬೀಳ್ಕೊಂಡು, ಹರಿಯಾಣದ ಗುರುಗಾಂ, ರಾಜಸ್ಥಾನದ ಭಿವಾಡಿ, ಕಿಶನ್ ಗಢ್ ಮೂಲಕ ಅಲ್ವರ್ ಜಿಲ್ಲಾ ಕೇಂದ್ರವನ್ನು ಪ್ರವೇಶಿಸಿತು.

ಗುರುಗಾಂ (ಗುರುಗ್ರಾಮ) ನೇರವಾಗಿ ನಮ್ಮ ಯಾತ್ರೆಯ ಜತೆಗೆ ತಳುಕು ಹಾಕಿಕೊಂಡಿದೆಯೆನ್ನಬಹುದು. ಗುರು (ಸಂತ) ಮತ್ತು ಗ್ರಾಮ ಎರಡೂ ವಿಶ್ವ ಮಂಗಲ ಗೋ ಗ್ರಾಮ ಯಾತ್ರೆಯಲ್ಲಿವೆ. ಗುರುಗಳ ಗ್ರಾಮವಾಗಿದ್ದ ಇಂದು ’ಗುರ್ಗಾವಾಂ’ ಇಂದು ಇಡೀ ವಿಶ್ವ ಪ್ರಸಿದ್ಧ ಕೈಗಾರಿಕಾ ಮತ್ತು ವಸತಿ ವಾಣಿಜ್ಯ ವ್ಯವಹಾರಗಳ ಕೇಂದ್ರವಾಗಿ ಬೆಳೆಯುತ್ತಿದೆ. ಆದರೆ ಅದರೊಂದಿಗೆ ಸಮಾಧಾನದ ವಿಷಯವೆಂದರೆ ಇಂದಿಗೂ ಗುರ್ಗಾಂನ ಸುತ್ತಮುತ್ತಲ ಗ್ರಾಮಗಳಲ್ಲಿ ಗೋವಿಗಿರುವ ಮಹತ್ವ. ಅದಕ್ಕಾಗಿಯೇ ಇರಬೇಕು ಇಂದು ಗುರ್ಗಾಂನಲ್ಲಿ ನಡೆದ ಸಭೆಯಲ್ಲಿ ಅಂದಾಜು ೮ ರಿಂದ ೧೦,೦೦೦ ಗೋ ಆಸಕ್ತರು ಅದಕ್ಕಾಗಿಯೇ ಭಾಗವಹಿಸಿದ್ದರು. ಮಹಿಳೆಯರ ಪಾಲ್ಗೊಳ್ಳುವಿಕೆಯೂ ಅದ್ಭುತವಾಗಿತ್ತು.

ಇಂದಿನ ಸಭೆಯಲ್ಲಿ ಮುಖ್ಯವಾಗಿ ಪ.ಪೂ ಭಕ್ತಿಸ್ವರೂಪಾನಂದ ಜೀ, ಪ.ಪೂ. ಆಚಾರ್ಯ ಬಲದೇವ ಜೀ, ಆಚಾರ್ಯ ಭರಮದೇವ ಜೀ, ಅವಧೇಶಾನಂದ ಜೀ ಇವರು ವೇದಿಕೆಯಲ್ಲಿ ದಿವ್ಯ ಉಪಸ್ಥಿತಿ ನೀಡಿ, ಆಶೀರ್ವದಿಸಿ, ಮಾರ್ಗದರ್ಶನ ನೀಡಿದರು.

ರಾ.ಸ್ವ.ಸೇ.ಸಂ.ದ ಸಹ ಸರ ಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ ಜೀ ಅವರು ಪ್ರಮುಖ ಭಾಷಣ ಮಾಡಿದರು.

ಭಾರತ ಭಾರತವೇ ಆಗಬೇಕಾದರೆ ಗ್ರಾಮಗಳ ರಕ್ಷಣೆಯಾಗಬೇಕು, ಗ್ರಾಮಗಳ ರಕ್ಷಣೆಯಾಗಬೇಕಾದರೆ ಗೋವುಗಳ ರಕ್ಷಣೆ ಅತ್ಯಗತ್ಯ. ಭಾರತ ಪುಣ್ಯಭೂಮಿ, ಕರ್ಮಭೂಮಿ, ಯೋಗಭೂಮಿ. ಆದರೆ ಇಂದು ಅವೆಲ್ಲಕ್ಕೂ ಗ್ರಹಣ ಆವರಿಸಿದೆ. ಇದರಿಂದ ದೂರಾಗಲು ಆಗಾಗ ಜನರು ಜಾಗೃತರಾಗಬೇಕು. ಆ ಕುಂಡಲಿನಿಯನ್ನು ಜಾಗೃತಗೊಳಿಸುವ ಮಹತ್ಕಾರ್ಯವನ್ನು ಸಂತರು ಕೈಗೆತ್ತಿಕೊಂಡಿದ್ದಾರೆ. ಗೋಪೂಜೆ ಬೇರೆಯಲ್ಲ, ಭೂಪೂಜೆ ಬೇರೆಯಲ್ಲ. ಭಾರತದ ರಾಷ್ಟ್ರೀಯತೆಯೇ ಗೋವು. ಹಾಗಾಗಿ ಗೋಪೂಜೆಯೇ ರಾಷ್ಟ್ರಪೂಜೆಯಾಗಬೇಕು. ಭಾರತದ ನಮ್ಮತನವನ್ನು ಘಾಸಿಗೊಳಿಸುವ ಷಡ್ಯಂತ್ರ ಪ್ರಪಂಚದಾದ್ಯಂತ ನಡೆಯುತ್ತಿದೆ. ಅದನ್ನು ಹುಸಿಗೊಳಿಸಬೇಕಾದ ತುರ್ತು ಈಗ ಬಂದಿದೆ ಎಂದರವರು. ಗೋರಕ್ಷಣೆಗಾಗಿ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಬೇಕು ಎಂದರು.

ಅಮೇರಿಕಾದ ’ಅವಿಷ’ ಸಮುದಾಯದ ಜನ ಆಧುನಿಕ ಸೌಕರ್ಯಗಳಾದ ವಾಹನ ಸೌಕರ್ಯ, ವಿದ್ಯುತ್ ಸೌಕರ್ಯಗಳನ್ನುಪಯೋಗಿಸಿದ ಆಧುನಿಕ ಜೀವನ ಮಾಡುತ್ತಿದ್ದಾರೆ. ಹಾಗಾಗಿ ಯಾವುದೂ ಅಸಾಧ್ಯವಲ್ಲ. ಗೋರಕ್ಷಣೆಯೂ ಅಸಾಧ್ಯವೇನಲ್ಲ. ಆದರೆ ನಿರ್ಧಾರ ಬೇಕಿದೆ ಎಂದರು. ಗುರುಗಾಂ ಎಂದಿದ್ದ ಈ ಊರು ಯಾತ್ರೆಯಿಂದಾಗಿ ’ಗುರು ಗೋ ಗ್ರಾಮ’ವಾಗಲಿ ಎಂದು ಹಾರೈಸಿದರು.

ಮುಂದೆ ಆಶೀರ್ವಚನ ನೀಡಿದ ಜುನಾಪೀಠಾಧೀಶ್ವರ ಮಹಾಮಂಡಲೇಶ್ವರ ಸ್ವಾಮೀ ಅವಧೇಶಾನಂದ ಜೀ ಮಹಾರಾಜ್ ಅವರು ಶೀತಲ ಮಾತಾ ದೇವಿಯ ಕ್ಷೇತ್ರವಾದ ಗುರುಗಾಂ ನಗರಿ ಇಂದು ಎಲ್ಲ ಕ್ಷೇತ್ರಗಳಲ್ಲೂ ಹೆಸರುವಾಸಿಯಾಗಿದೆ. ಅದೇರೀತಿ ಗೋರಕ್ಷೆಣೆಯಲ್ಲೂ ಸಾಧನೆ ಮಾಡಲಿ ಎಂದು ಹಾರೈಸಿದರು. ಹರಿಯಾಣದ ವಿಶೇಷವೆಂದರೆ ಗೋವಿನ ಹಾಲನ್ನು ಸಂಪ್ರದಾಯಸ್ಥರು ಇಂದೂ ಹಣಕ್ಕೆ ಮಾರದಿರುವುದು.

ಇಂದು ವಿಶ್ವವಿಡೀ ಚರ್ಚಿತವಾಗುತ್ತಿರುವ ಗ್ಲೋಬಲ್ ವಾರ್ಮಿಂಗಿಗೆ ಮುಖ್ಯ ಕಾರಣ ಗೋಮಾಂಸ ಭಕ್ಷಣೆಯಿಂದ ಹೊರಬೀಳುತ್ತಿರುವ ಇಂಗಾಲಾಮ್ಲ ಎಂದು ಯು.ಎನ್.ಒ. ಸಂಶೋಧನೆ ಹೇಳುತ್ತಿದೆ ಎಂದು ಅವರು ತಿಳಿಸಿದರು. ಇಂದು ಗೋರಕ್ಷಣೆಗೆ ಬೇಕಾಗಿರುವುದು ಮಾನಸಿಕ ತಯಾರಿ ಹೊರತು ಕೇವಲ ಕಾನೂನುಗಳಿಂದ ಈ ಕೆಲಸ ಸಾಧ್ಯವಾಗದು ಎಂದು ಉದಾಹರಣೆ ಸಹಿತ ಅವರು ವಿವರಿಸಿದರು.

ಯಾತ್ರೆ ಮುಂದುವರೆದು ಮತ್ತೊಮ್ಮೆ ರಾಜಸ್ಥಾನವನ್ನು ಭಿವಾಡಿಯಲ್ಲಿ ಪ್ರವೇಶಿಸಿತು. ಭಿವಾಡಿ ರಾಜಸ್ಥಾನದ ಕೈಗಾರಿಕಾ ನಗರ. ಇಲ್ಲಿಯೂ ಯಾತ್ರೆಗೆ ಒಳ್ಳೆಯ ಸ್ವಾಗತ ದೊರೆಯಿತು.

ಮುಂದೆ ಯಾತ್ರೆ ಕಿಶನ್ ಗಢವನ್ನು ಸೇರಿತು. ಇಲ್ಲಿಯೂ ಗ್ರಾಮೀಣ ಜನತೆಯಿಂದ ಉತ್ತಮ ಸ್ವಾಗತ ಯಾತ್ರೆಗೆ ದೊರಕಿತು. ಪ.ಪೂ. ರಾಘವೇಶ್ವರಭಾರತೀ ಸ್ವಾಮೀಜಿ ಹಾಗೂ ಪ.ಪೂ. ಕಮಲದಾಸ ಜೀ ಮಹಾರಾಜ್ (೧೧೫ ವರ್ಷ) ಇವರು ಮಾರ್ಗದರ್ಶನ ಆಶೀರ್ವಚನ ನೀಡಿದರು.

ಯಾತ್ರೆಯ ಇಂದಿನ ಕೊನೆಯ ಗಮ್ಯಸ್ಥಾನ ’ಅಲ್ವರ್’ ಜಿಲ್ಲಾದೇಂದ್ರ. ಪ.ಪೂ.ರಾದ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ, ಪ.ಪೂ. ಕಮಲದಾಸ ಜೀ ಮಹಾರಾಜ್, ಪ.ಪೂ. ಹರಿಹರಾನಂದ ಬ್ರಹ್ಮಚಾರೀ ಜೀ ಮಹಾರಾಜ್ ಮತ್ತು ಪೂಜ್ಯ ನಿರಂಜನನಾಥ ಜೀ ಅವಧೂತ ಜೀ ಇವರೆಲ್ಲ ವೇದಿಕೆಯಲ್ಲಿ ದಿವ್ಯ ಉಪಸ್ಥಿತಿ ನೀಡಿದ್ದರು. ಪರಮಪೂಜ್ಯ ಕಮಲದಾಸ ಜೀ ಕಿಶನ್ ಗಢದವರು. ೧೧೫ ವರ್ಷದ ಯುವಕ. ಕಂಚಿನಕಂಠ ಸಾಧಕ. ಸಾವಿರಾರು ಜನರನ್ನು ಕ್ಯಾನ್ಸರಿನಿಂದ ಗುಣಪಡಿಸಿದ ಮಹತ್ಸಾಧನೆ ಇವರದು.

ಇಂದಿನ ಅವನತಿಗೆ ನಮ್ಮ ಪುರಾತನ ನಡೆ-ನುಡಿ, ಸಂಸ್ಕೃತಿಯನ್ನು ಬಿಟ್ಟುದೇ ಕಾರಣವೆಂದು ಅವರು ನುಡಿದರು.

ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಗೋಹತ್ಯೆಯೆಂದರೆ ನಮ್ಮದೆಲ್ಲದರ ಹತ್ಯೆಯೆಂದರು. ಗೋವಿನ ಶಾಸ್ತ್ರ ಮಿಕ್ಕೆಲ್ಲ ಶಾಸ್ತ್ರಗಳಿಂದ ಮಿಗಿಲು. ಅದರಲ್ಲಿ ತಿಳಿಯಬೇಕಾದುದು ಸಮುದ್ರದಷ್ಟು ಆಳವಾಗಿದೆ ಎಂದರು. ಗೋಮಾತೆಯ ಸರಿಯಾದ ಉಪಯೋಗವನ್ನು ಮನುಜ ಕುಲ ಪಡೆದಲ್ಲಿ ಎಲ್ಲ ದುಃಖಗಳಿಂದ ದೂರಾಗಬಹುದು ಎಂದರು.

ಪೂಜ್ಯ ಸಂತ ನಿರಂಜನನಾಥ ಜೀ ಅವಧೂತ ಇವರು ಗೋರಕ್ಷಾ ಸಂಕಲ್ಪ ಬೋಧಿಸಿದರು.

ರಾ.ಸ್ವ.ಸೇ.ಸಂ.ದ ಸೇವಾ ಪ್ರಮುಖರಾದ ಶ್ರೀ ಸೀತಾರಾಮ ಕೆದಿಲಾಯರು ಮಾತಾಡಿ ಯಾತ್ರೆಯು ನಿಜವಾದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಗೋವು ಅದರ ಸಂಕೇತ ಎಂದರು.

Facebook Comments