ಗೋಕರ್ಣ: ಮಾನವರಾದ ನಮಗೆ ಹುಟ್ಟು, ಸಾವುಗಳು ತಪ್ಪಿದ್ದಲ್ಲ. ನಿರಂತರವಾಗಿ ಒಂದಾದ ನಂತರ ಮತ್ತೊಂದು ಸಾಗರದ ಅಲೆಗಳಂತೆ ಬಂದೆರಗುತ್ತಲೇ ಇರುತ್ತದೆ. ಸಾವಿನಷ್ಟೇ ಹುಟ್ಟೂ ಸಹ ದುಃಖಕರ. ಶ್ರೀಮದಾಚಾರ್ಯ ಶಂಕರ ಭಗವತ್ಪಾದರೂ ಕೂಡಾ  ಪುನರಪಿ ಜನನಂ ಪುನರಪಿ ಮರಣಂ ಎಂಬ ಮಾತಿನ ಮೂಲಕ ಸತ್ಯವನ್ನು ಹೇಳಿ  ನಮ್ಮನ್ನು ಎಚ್ಚರಿಸುತ್ತಾರೆ. ಜೀವನದ ಅಸ್ಥಿರತೆಯ ಅರಿವಿದ್ದರೆ ಮಾತ್ರ ಸ್ವಲ್ಪಮಟ್ಟಿಗಿನ ನೆಮ್ಮದಿಯನ್ನು ಕಾಣಬಹುದು. ಆದರೆ ನಮಗೆ ಇದು ಸ್ಮರಣೆಗೇ ಬಾರದು. ಸ್ಮೃತಿ,ಮರೆವು ಎರಡೂ ವರ ಹಾಗೂ ಶಾಪಗಳಾಗಿ ಪರಿಣಮಿಸುತ್ತವೆ. ಅಗತ್ಯವಾದದ್ದರ ಸ್ಮರಣೆಯಿಲ್ಲದಿದ್ದರೆ ವರವಾಗಿರುವ ಸ್ಮರಣೆಯೂ ಶಾಪವೇ. ಇವೆಲ್ಲದರ ಜ್ಞಾಪನಕ್ಕಾಗಿಯೇ ನಮ್ಮ ಪೂರ್ವಜರು ಬದುಕಿನಲ್ಲಿ ಅನೇಕ ಧಾರ್ಮಿಕ ವಿಧಿವಿಧಾನಗಳನ್ನು ಅಳವಡಿಸಿದರು. ಆದರೆ ಆ ಕರ್ಮಗಳ ಅಂತರಾರ್ಥವನ್ನು ತಿಳಿಯದೆಯೇ ನಾವು ಅವೆಲ್ಲವೂ ಮೂಢನಂಬಿಕೆಗಳೆಂಬ ಸಿದ್ಧಾಂತಕ್ಕೆ ಬರುತ್ತೇವೆ. ಈ ಹಿನ್ನೆಲೆಯಲ್ಲಿ ಇಂದಿನ ಉಪವೀತಧಾರಣ ಕಾರ್ಯವು ಅತ್ಯಂತ ಮಹತ್ವದ್ದಾಗಿದೆ ಎಂದು ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಚಾತುರ್ಮಾಸ್ಯದ ನಿಮಿತ್ತ ಕೇರಳ ರಾಜ್ಯವಲಯದ ಶಿಷ್ಯಸಮುದಾಯದ ಶ್ರೀಗುರುದೇವತಾಸೇವೆಯನ್ನು ಸ್ವೀಕರಿಸಿ ಅನುಗ್ರಹ ಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಉಪವೀತವು ಕೇವಲ ಬ್ರಾಹ್ಮಣರಿಗೆ ಮಾತ್ರ ಸೀಮಿತವಾದದ್ದಲ್ಲ ಅಥವಾ ಅದು ಕೇವಲ ಸೂತ್ರವೂ ಅಲ್ಲ. ತ್ರಿಗುಣಾತ್ಮಕವಾದ ಪ್ರಕೃತಿಯೊಡನೆ ನಮಗಿರುವ ಅವಿನಾಭಾವದ ಸಂಬಂಧವನ್ನು ಸದಾ ನೆನಪಿಸಲೆಂದೇ ಇರುವ ಈ ಜನಿವಾರವು ಮೂರು ವೇದಗಳು, ಮೂರು ಋಣಗಳು, ಮೂರು ಅವಸ್ಥೆಗಳಿಗೆ ಪ್ರತೀಕವಾಗಿ ಜನನ-ಮರಣಗಳನ್ನು ದೂರಮಾಡಿ ಸದಾ ನಿತ್ಯಸುಖವನ್ನು ಕೊಡುವ ಅಪವರ್ಗದ  ಸಂಕೇತವೂ ಹೌದು ಎಂದು ಹೇಳಿ ಗೋಕರ್ಣದಿಂದ ಯಾವುದೋ ಕಾಲದಲ್ಲಿ ದೂರದ ಕೇರಳಕ್ಕೆ ಹೋಗಿ ನೆಲೆಸಿದ ನಮ್ಮ ಶ್ರೀಮಠದ ಶಿಷ್ಯರು ತಮ್ಮ ಮೂಲಸ್ಥಾನವನ್ನು ನೆನಪಿಸಿಕೊಂಡು ಇಂದು ಇಲ್ಲಿಗೆ ಆಗಮಿಸಿ ಶ್ರೀಪೀಠದಸೇವೆಯನ್ನು ತ್ರಿಕರಣಪೂರ್ವಕವಾಗಿ ಸಲ್ಲಿಸಿದ್ದಾರೆ. ನಮ್ಮ ಮಠದ ಸಂಸ್ಥಾಪಕರಾದ ಶ್ರೀಮದಾಚಾರ್ಯ ಶಂಕರ ಭಗವತ್ಪಾದರು ಕೇರಳದಲ್ಲಿ ಜನಿಸಿದವರೆಂಬ ಹಿನ್ನೆಲೆಯಲ್ಲಿ ಇಂದಿನ ಕೇರಳವಲಯದ ಸೇವೆಗೆ ವಿಶೇಷ ಮಹತ್ವವಿದೆ ಎಂದು ನುಡಿದು ಸಮಸ್ತ ಶಿಷ್ಯಸಮುದಾಯಕ್ಕೆ ಸನ್ಮಂಗಳವನ್ನು ಆಶಿಸಿದರು.

ಎಂದಿನಂತೆ ಮೂಲಮಠನಿರ್ಮಾಣ, ಶ್ರೀಮಠದ ಯೋಜನೆಗಳು ಇವುಗಳಿಗೆ ವಾಗ್ದಾನ, ಸಮರ್ಪಣೆಗಳು ಹಾಗೂ ಪ್ರತಿಭಾಪುರಸ್ಕಾರಗಳು ಸಂಪನ್ನಗೊಂಡವು. ಯಲ್ಲಾಪುರದ ಸಂಕಲ್ಪ ಸಂಸ್ಥೆಯ ಶ್ರೀ ಪ್ರಮೋದ ಹೆಗಡೆ ಮೊದಲಾದ ಗಣ್ಯರು ಶ್ರೀಗಳನ್ನು ಸಂದರ್ಶಿಸಿ ಆಶೀರ್ವಾದ ಪಡೆದರು. ಶ್ರೀ ಸವಾರಿಯ ವ್ಯವಸ್ಥಾಪಕ ಶ್ರೀ ರಾಘವೇಂದ್ರ ಮಧ್ಯಸ್ಥರು ನಿರ್ವಹಿಸಿದರು.

Facebook Comments