ಹೊಸನಗರ: ಪ್ರಪಂಚದಲ್ಲಿ ಆಯುಧ ವಿವೇಕ ಶೂನ್ಯತೆಯಿಂದ ಬಳಕೆಯಾಗಬಾರದು ಎಂದು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ರಾಮೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಾಮಕಥಾ ವಿಶೇಷ ಪ್ರವಚನದಲ್ಲಿ ಸೋಮವಾರ ಅವರು ಮಾತನಾಡಿದರು. ಲೋಕದಲ್ಲಿ ಭೀತಿಗೆ ಯುದ್ಧ ಕಾರಣ, ಯುದ್ಧಕ್ಕೆ ದ್ವೇಷ , ದ್ವೇಷಕ್ಕೆ ಮನೋಮಾಲಿನ್ಯ ಕಾರಣ. ಸೃಷ್ಠಿಯ ಸಹಜತೆ ನಾಶ ಮಾಡುವ ಮನಸ್ಸು ಅದು ರಕ್ಕಸ ಪ್ರವೃತ್ತಿ. ಅಂತಹ ಪ್ರವೃತಿಯ ಹಿಂದೆಯೂ ಆಯುಧ ಬಳಕೆಯಾಗುತ್ತದೆ ಅದರಿಂದ ಹಾನಿ ಆದರೆ ರಕ್ಷಣೆ ಮಾಡುವ ಶಸ್ತ್ರದಿಂದ ಮಾತ್ರ ಲಾಭ ಎಂದ ಅವರು ಅದು ಪುರಾಣದಲ್ಲಿಯೂ ನಡೆದಿದೆ. ವಿಶ್ವಮಿತ್ರನ ನಿರ್ದೇಶನದಲ್ಲಿ ಶ್ರೀರಾಮ ರಕ್ಕಸರ ಹುಟ್ಟಡಗಿಸಿ ಪ್ರಕೃತಿ ನಾಶ ತಪ್ಪಿಸಿದ ಆಗ ಬಳಕೆಯಾದ ಆಯುಧ ಲೋಕ ರಕ್ಷಕವಾದದ್ದು ಎಂದರು. ಧರ್ಮ ವಿವೇಕ ಸತ್ಯ ಒಳಿತಿನ ಮರೆವು ಇಂದಿನ ಜಾಗತಿಕ ವಿಪ್ಲವಗಳಿಗೆ ಕಾರಣವಾಗಿದೆ. ರಾಜನೇತಾರನಿಗೆ ಮಂತ್ರಾಲೋಚನೆಯ ರಹಸ್ಯ ಮಹತ್ವ ಅರಿವಿರಬೇಕು ವಿವೇಚನರಹಿತ ನಿರ್ಣಯ ಜೀವನ ವಿಫಲತೆಗೆ ಮಾತ್ರವಲ್ಲ ತನ್ನನ್ನು ನಂಬಿದ ಪ್ರಜೆಗಳ ಬದುಕು ಕೂಡ ನಾಶದತ್ತ ಸಾಗಿಸುವ ಸ್ಥಿತಿ ನಿರ್ಮಾಣ ಮಾಡುತ್ತದೆ  ಎಂದರು.  ರಾಮಕಥಾ ವೃಂದದಿಂದ ವಿವಿಧ ಬಗೆಯ ರೂಪಕಗಳು ಬಿತ್ತರಗೊಂಡು ಸೇರಿದ್ದ ಅಸಂಖ್ಯಾತ ಪ್ರೇಕ್ಷಕರ ಮನ ಸೆಳೆಯಿತು.

ಚಿತ್ರ ವಿವರ:
ಹೊಸನಗರ ರಾಮಚಂದ್ರಾಪುರಮಠದಲ್ಲಿ ನಡೆಯುತ್ತಿರುವ ರಾಮಕಥಾ ರೂಪಕದ ದೃಶ್ಯ.

Facebook Comments