02 ಅಕ್ಟೋಬರ್ 2010

ಹೊಸನಗರದ ಶ್ರೀರಾಮಚಂದ್ರಾಪುರಮಠದ ಅಮೃತಧಾರಾ ಗೋಶಾಲೆಯ ಗೋವುಗಳಿಗೆ ಮೇವುಣಿಸುತ್ತಿರುವ ಚೌಡಿಮಕ್ಕಿಯ ಹುಲ್ಲುಗಾವಲಿನಲ್ಲಿ ಇಂದು ವಿಶಿಷ್ಟ ಕಾರ್ಯಕ್ರಮ. ೧೫ ಎಕರೆ ಪ್ರದೇಶದಲ್ಲಿ ಹಸಿರು ಹುಲ್ಲುಗಳ ಮಧ್ಯದಲ್ಲಿರುವ ಚೌಡೇಶ್ವರಿಯ ಸನ್ನಿಧಿಗೆ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳು ಗೋಧೂಳಿ ಮುಹೂರ್ತದಲ್ಲಿ ಆಗಮಿಸಿದರು. ಗೋವುಗಳಿಗೆ ಬೇಕಾದ ಶುದ್ಧ ಸಾವಯವ ಹಸಿಹುಲ್ಲು ಒದಗಿಸಲು ಟೊಂಕ ಕಟ್ಟಿ ನಿಂತಿರುವ ತೌಡಗೊಳ್ಳಿ ಶಂಕರನಾರಾಯಣ ದಂಪತಿಗಳು ಶ್ರೀಗುರುಗಳನ್ನು ಸ್ವಾಗತಿಸಿದರು. ಕಳೆದ ಒಂದು ವರ್ಷದಿಂದ ತಮ್ಮ ಕೆಲಸಗಾರರ ತಂಡದೊಂದಿಗೆ ನಿರಂತರ ಶ್ರಮಿಸಿ ಹಚ್ಚ ಹಸಿರು ಕಂಗೊಳಿಸುವಂತೆ ಮಾಡಿ ಮೇವುಣಿಸುತ್ತಿರುವ ಜಯನಗರದ ಚೌಡಪ್ಪನವರ ತಂಡ ಶ್ರೀಗಳವರನ್ನು ಭಕ್ತಿಯಿಂದ ಬರಮಾಡಿಕೊಂಡಿತು. ಶ್ರೀಗಳವರು ನಡೆಯುವ ಹಾದಿಯಲ್ಲಿ ಪರಿಮಳದ ಮಲ್ಲಿಗೆಯ ಹೂವನ್ನು ಹಾಸಿ ಸ್ವಾಗತಿಸಿದ ಅವರ ಭಕ್ತಿ ಅದ್ಭುತವಾಗಿತ್ತು. ಕೆಲಸಗಾರರ ಭಕ್ತಿಗೆ ಮೆಚ್ಚಿ ಆಶೀರ್ವದಿಸಿದ ಶ್ರೀಗಳವರಿಗೆ ಅಲ್ಲೊಂದು ಅಚ್ಚರಿ ಕಾದಿತ್ತು. ಹುಲ್ಲುಗಾವಲು ನಿರ್ಮಾಣದಲ್ಲಿ ಹಿನ್ನೆಲೆಯ ಪಾತ್ರದಲ್ಲಿರುವ ಜಯನಗರದ ಕಮಾರ ಶ್ರೀಗಳವರಿಗಾಗಿ ಶಿಲೆಯಲ್ಲಿ ಶಾಶ್ವತ ಪೀಠವೊಂದನ್ನು ಕೆತ್ತಿ ಸ್ಥಾಪನೆಮಾಡಿದ್ದರು. ಶ್ರೀಗಳವರಿಂದ ಆಶೀರ್ವಾದ ಪಡೆದು ಶ್ರೀಗಳನ್ನೇ ಗುರುವಾಗಿ ಸ್ವೀಕರಿಸಿ ಸ್ವಯಂಶಿಲ್ಪ ಕಲೆಕಲಿತ ಆಧುನಿಕ ಏಕಲವ್ಯ ಕುಮಾರ ಜಯನಗರದಲ್ಲಿ ಶ್ರೀಮಠದ ಕಾಮಧೇನು ಶಿಲ್ಪಶಾಲೆ ನಡೆಸುತ್ತಿರುವವ. ಅವನೇ  ತನ್ನ ತಂಡದೊಂದಿಗೆ ನಿರ್ಮಿಸಿದ ಪೀಠವನ್ನು ತನಗೆ ಬದುಕು ಕೊಟ್ಟ ಶ್ರೀಗಳ ಚರಣಗಳಿಗೆ ಸಮಿರ್ಪಿಸಿದ ಮಧುರ ಕ್ಷಣ ಅದು.

ಚೌಡಿಮಕ್ಕಿಯ ಚೌಡೇಶ್ವರಿಯ ಸನ್ನಿಧಿಯಲ್ಲಿ ಚೌಡಪ್ಪ ಪರಿಶ್ರಮದಿಂದ ಬೆಳೆಸಲಾದ ಹುಲ್ಲುಗಾವಲಿನಿಂದ ಶ್ರೀಮಠದ ಗೋಶಾಲೆಗೆ ಆದ ಅನುಕೂಲ ಹಾಗೂ ಇದರ ಸಾಧನೆಯ ಕುರಿತು ತೌಡಗೊಳ್ಳಿ ಶಂಕರನಾರಾಯಣ ವಿವರಿಸಿ ಇವರ ಸಾಧನೆಗೆ ಶಕ್ತಿಕೊಟ್ಟ ಗುರುಗಳನ್ನು ವಂದಿಸಿ ನೆರವಾದ ಕೆಲಸಗಾರರನ್ನು ಅಭಿನಂದಿಸಿದರು. ತನ್ನ ಕೊನೆಯ ಉಸಿರಿನ ತನಕ ಗೋವಿಗೆ ಬೇಕಾದ ಹುಲ್ಲು ಬೆಳೆಯಲು ಪ್ರಯತ್ನಿಸುವ, ಶ್ರೀಗುರುಗಳ ಸೇವೆ ಮಾಡುವ ಸಂಕಲ್ಪ ತೊಟ್ಟ ಚೌಡಪ್ಪ ಮತ್ತವರ ತಂಡದವರಿಗೆ ಹಾಗೂ ಶಿಲ್ಪಿ ಕುಮಾರ ಇವರಿಗೆ ಇವರಿಂದ ಈ ಕೆಲಸ ಮಾಡಿಸಿದ ಶಂಕರಣ್ಣ ಇವರುಗಳಿಗೆ ಶ್ರೀಗಳವರು ವಸ್ತ್ರ, ರಾಮಟಂಕೆಯ ಮಂತ್ರಾಕ್ಷತೆಯೊಂದಿಗೆ ಪೂರ್ಣಾನುಗ್ರಹ ಮಾಡಿದ ಕ್ಷಣ ಅನೇಕರು ಭಾವುಕರಾದರು. ಕೂಲಿ ಕಾರ್ಮಿಕರ ಅಭಾವದ ಇಂದಿನ ದಿನಗಳಲ್ಲಿ ಚೌಡಪ್ಪನಂಥವರ ಸೇವಾ ಮನೋಭಾವದ ಪರಿಶ್ರಮವನ್ನು ಶ್ರೀಮಠದ ನಿರ್ವಹಣಾ ಸಮಿತಿಯ ಅಧ್ಯಕ್ಷ ಕುಮಾರ ಸಂಪೆಕಟ್ಟೆ, ರಾಮಚಂದ್ರಾಪುರ ಮಂಡಲದ ಅಧ್ಯಕ್ಷ ಜಟ್ಟಿಮನೆ ಗಣಪತಿ ಕೊಂಡಾಡಿದರು. ಎಲ್ಲರನ್ನೂ ಶ್ರೀಗಳವರು ಹರಸಿದ ಸಂದರ್ಭಕ್ಕೆ ಶ್ರೀಮಠದ ಕಾರ್ಯನಿರ್ವಹಣಾಧಿಕಾರಿ ಶ್ರೀ ಕೆ. ಜಿ. ಭಟ್ ಮತ್ತಿತರರು ಸಾಕ್ಷಿಯಾದರು.

Facebook Comments