ಗೋಕರ್ಣ.ಮಾ೭. ವ್ಯಕ್ತಿಯಿಂದ ರೂಪುಗೊಂಡದ್ದು ಸಮಾಜ.ಅದರ ಘಟಕವಾದ ವ್ಯಕ್ತಿಯ ಸ್ವಭಾವವೇ ಸಮುದಾಯದಲ್ಲಿ ಪ್ರತಿಫಲಿಸುತ್ತದೆ. ವ್ಯಕ್ತಿಯ ಆಂತರ್ಯ ಕೆಟ್ಟದಾಗಿದ್ದರೆ ಅದರ ದುಷ್ಟಪರಿಣಾಮ ಸುತ್ತಲಿನ ಪರಿಸರದ ಮೇಲೂ ಆಗುತ್ತದೆ. ಆಂತರ್ಯ ಒಳ್ಳೆಯದಾಗಿದ್ದರೆ ಆಗಲೂ ಅದರ ಒಳಿತಿನಿಂದಾಗಿ ಸಮಾಜವೂ ಸುಖಿಯಾಗುತ್ತದೆ.ಆದ್ದರಿಂದಲೇ ಮಹಾತ್ಮರನ್ನು ತಪಸ್ವಿಗಳನ್ನು ಸಂತರನ್ನು ಸಂದರ್ಶಿಸಿ ಅವರ ಅನುಗ್ರಹವನ್ನು ಪಡೆಯಬೇಕೆಂಬ ಕ್ರಮ ರೂಢಿಯಲ್ಲಿದೆ. ಊರಿನ ಮುಖ್ಯಸ್ಥ ಸರಿಯಾಗಿದ್ದಾರೆ ಊರಿನ ಜನರೂ ಸರಿದಾರಿಯಲ್ಲಿರುತ್ತಾರೆ. ಹಾಗೆಯೇ ಆಳುವ ವ್ಯಕ್ತಿ ಸದ್ಗುಣಿಯಾಗಿ ಶೀಲಸಂಪನ್ನನಾಗಿದ್ದರೆ ಸಮಾಜವೂ ಸುಸಂಸ್ಕೃತವಾಗಿ ರೂಪುಗೊಳ್ಳುತ್ತದೆ. ಸಿಂಹಾಸನದಲ್ಲಿ ಪ್ರಭು ಶ್ರೀರಾಮಚಂದ್ರನಂತಹ ಚಕ್ರವರ್ತಿ ಕುಳಿತಿದ್ದರೆ ಆ ರಾಜ್ಯ ಸರ್ವಸಮೃದ್ಧವಾಗುವುದಕ್ಕೆ ಬೇರಾವ ಕಾರಣಗಳೂ ಬೇಕಿಲ್ಲ. ಹಾಗೆಯೇ ಸಮಾಜದ ಘಟಕಗಳಾದ ನಮ್ಮ ಒಳಗನ್ನು ನಾವು ಶೋಧಿಸಿಕೊಂಡರೆ ಅದರ ಸತ್ಫಲ ಸಮಾಜದ ಮೇಲೆ ಆಗುತ್ತದೆ ಎಂದು ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.
gk-rk-day2
ಗೋಕರ್ಣದ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಗೋಕರ್ಣದ ಸಾಗರತೀರದ ಮಹರ್ಷಿ ದೈವರಾತ ವೇದಿಕೆಯಲ್ಲಿ ಆಯೋಜಿತವಾಗಿರುವ “ರಾಮಕಥಾ” ಕಾರ್ಯಕ್ರಮದ ಮೂರನೆಯದಿನದ ಪ್ರವಚನವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಬೇಡನಾಗಿ ದಾರಿಹೋಕರನ್ನು ದರೋಡೆಮಾಡಿ ಬದುಕುತ್ತಿದ್ದ ರತ್ನಾಕರನ ವಾಸಸ್ಥಾನವೂ ಅವನ ಆಂತರ್ಯದಂತೆಯೇ ಅತ್ಯಂತ ಭೀಕರವಾಗಿತ್ತು. ನಂತರ ಅದೇ ಬೇಡ ಸಪ್ತರ್ಷಿಗಳ ಅನುಗ್ರಹದಿಂದ ರಾಮಮಂತ್ರವನ್ನು ಪಡೆದು ತಪಸ್ಸುಮಾಡುತ್ತಿದ್ದಾಗ ಆತನ ಸಾತ್ವಿಕಸ್ವಭಾವದಿಂದಾಗಿ ಅವನ ಸುತ್ತ ಇದ್ದ ಪರಿಸರವೇ ಬದಲಾಯಿತು. ಹಿಂಸ್ರಪ್ರಾಣಿಗಳು ತಮ್ಮವೈರಭಾವವನ್ನು ತ್ಯಜಿಸಿದವು. ಪಂಚಭೂತಗಳು ತಮ್ಮ ಗುಣಸ್ವಭಾವವನ್ನೇ ಬದಲಿಸಿದವು. ಇದು ಬೇಡನಾಗಿದ್ದ ರತ್ನಾಕರ ವಾಲ್ಮೀಕಿಯಾದ ಕಥೆ. ನಮ್ಮ ಒಳಗೆ ಪ್ರೀತಿ, ವಾತ್ಸಲ್ಯ,ಜೀವಕಾರುಣ್ಯಗಳೇ ತುಂಬಿದ್ದರೆ ನಮ್ಮ ಸುತ್ತಲೂ ಅದೇ ನಮಗೆ ದೊರೆಯುತ್ತದೆ. ಇದೇ ಆತ್ಮವಿಸ್ತರಣೆ. ಪರಿಶುದ್ಧವಾದ ಭಕ್ತಿಯಿಂದ ಭಗವಂತನನ್ನು ಪಡೆಯಲು ಸಾಧ್ಯವಾಗುವಂತೆ ವಿರೋಧಭಕ್ತಿಯಿಂದಲೂ ಪರಮಾತ್ಮನ ಸಾಕ್ಷಾತ್ಕಾರ ಸಾಧ್ಯ ಎಂಬುದನ್ನು ಪುರಾಣದ ಪ್ರಹ್ಲಾದ ಹಾಗೂ ಭಗವದ್ವೈರಿಯಾದ ಆತನ ತಂದೆಯಾದ ಹಿರಣ್ಯಕಶಿಪುಗಳ ಮುಖಾಂತರ ತಿಳಿಯಲು ಸಾಧ್ಯ ಎಂದೂ ಹೇಳಿದ ಶ್ರೀಗಳು ತಾಟಕಿಯ ಆಂತರಂಗ ಹಾಗೂ ಬಹಿರಂಗಗಳೆರಡೂ ದ್ವೇಷ, ಪ್ರತೀಕಾರದ ಭಾವಗಳಿಂದ ವ್ಯಾಪ್ತವಾಗಿತ್ತು. ಪರಮಕರುಣಾಳುವಾದ ಶ್ರೀರಾಮ ಮೊದಲು ಸ್ತ್ರೀ ಎಂಬಕಾರಣದಿಂದ ಅವಳನ್ನು ವಧಿಸಲು ಹಿಂಜರಿದರೂ ಅವಳಿಂದ ಋಷಿಸಂಘಕ್ಕಾಗುತ್ತಿದ್ದ ಉಪಟಳವನ್ನು ತಡೆಯಲಿಕ್ಕಾಗಿ ವಿಶ್ವಾಮಿತ್ರರ ಆದೇಶದಂತೆ ತಾಟಕಿಯನ್ನು ಕೊಂದು ಆಕೆಗೆ ಮುಕ್ತಿಯನ್ನು ಕರುಣಿಸಿದ ಎಂದು ಹೇಳಿ ನಮ್ಮ ಅಂತರಂಗ ಶುದ್ಧಿ, ಬಹಿರಂಗಶುದ್ಧಿಗಳ ಅಗತ್ಯದ ಬಗ್ಗೆ ಈ ಪ್ರಕರಣ ಪ್ರೇರಕವಾಗುತ್ತದೆ ಎಂದೂ ನುಡಿದರು
gk-rk
ಶ್ರೀರಾಮಕಥಾ ವೃಂದದ ಕಲಾವಿದರಾದ ಶ್ರೀಪಾದ ಭಟ್, ಶ್ರೀ ಟಿ.ವಿ.ಗಿರಿ, ಕುಮಾರಿ ದೀಪಿಕಾ ಭಟ್, ಕುಮಾರಿ ಪೂಜಾ, ಕುಮಾರಿ ದೀಕ್ಷಾ ಇವರ ತುಂಬುಕಂಠದ ಸುಮಧುರಗಾನ, ಪ್ರಸಿದ್ಧ ತಬಲಾವಾದಕ ಶ್ರೀ ಗೋಪಾಲಕೃಷ್ಣ ಹೆಗಡೆ ಮತ್ತು ಕುಮಾರಿ ವಿಜೇತಾ ಇವರ ತಬಲಾ, ಶ್ರೀ ಗಣೇಶರ ವೇಣುವಾದನ, ಉದಯ ಭಂಡಾರಿಯವರ ಕೀಬೋರ್ಡ್, ಶ್ರೀ ಲೀಲಾಶುಕರ  ಮನೋಹರ ಹಾರ್ಮೋನಿಯಂ ವಾದನಗಳು ರಾಮಕಥೆಯ ಶ್ರೋತೃ ಗಳನ್ನು ರಂಜಿಸಿದರೆ ನೀರ್ನಳ್ಳಿ ಗಣಪತಿಯವರ ಆಶುಚಿತ್ರಗಳು ಜನರನ್ನು ಮಂತ್ರಮುಗ್ಧಗೊಳಿಸಿದವು. ಶ್ರೀಪಾದ ಹೆಗಡೆ ಹಡಿನಬಾಳ, ವಿಷ್ಣುಭಟ್ ಮೂರೂರು, ಈಶ್ವರಭಟ್ ಕಟ್ಟೆ, ವಿಶ್ವೇಶ್ವರ ಹೆಗಡೆ ದಾಮೋದರ ನಾಯಕ, ಕುಮಾರಿ ಪೂರ್ಣಿಮಾ ಶ್ರೀಶ ಹೆಗಡೆ ಮೊದಲಾದ ಕಲಾವಿದರ ಸಂಯೋಜನೆಯಲ್ಲಿ ಶ್ರೀ ಶಂಕರನಾರಾಯಣ ಉಪಾಧ್ಯಾಯ ಇವರ ನಿರ್ದೇಶನದಲ್ಲಿ “ವಾಮನ-ತ್ರಿವಿಕ್ರಮ”ಎಂಬ ಸುಂದರರೂಪಕವು ಪ್ರದರ್ಶಿತವಾಯಿತು.

ಪ್ರಾರಂಭದಲ್ಲಿ ವೇ.ಬಾಲಕೃಷ್ಣ ಭಟ್ ಜಂಭೆ,ವೇ.ರಮೇಶ ಪ್ರಸಾದ, ಶಿವಮೊಗ್ಗದ ನ್ಯಾಯವಾದಿ ಶ್ರೀ ನಾರಾಯಣ, ಶ್ರೀ ರಾಮ ಭಟ್ಟ ಮಾಸ್ಕೇರಿ, ಮುಂಬಯಿಯ ಶ್ರೀ ಚಿಂತಾಮಣಿ ಗಾಯತ್ರಿ ವಾರ್ತಾ ಪ್ರತಿನಿಧಿ ಶ್ರೀ ವೆಂಕಟೇಶ ಗೌಡ, ಶ್ರೀ ಮೋಹನಪ್ರಸಾದ, ಹಾಗೂ ಶ್ರೀ ಡಿ.ಎಸ್.ಚೋಡಣಕರ ಮೊದಲಾದ ಗಣ್ಯರು ರಾಮಾಯಣಗ್ರಂಥಕ್ಕೆ ಮಾಲಾರ್ಪಣೆ ಮಾಡಿದರು.

Facebook Comments