ಗೋಕರ್ಣ. ಐತಿಹಾಸಿಕ ಯಾತ್ರಾಸ್ಥಳವಾದ ಗೋಕರ್ಣದ ಶ್ರೀ ಸಾರ್ವಭೌಮ ಮಹಾಬಲೇಶ್ವರ ದೇವರ ನಂದನಸಂವತ್ಸರದ  ಸಾಂಪ್ರದಾಯಿಕವಾದ ತ್ರಿಪುರಾಖ್ಯ ದೀಪೋತ್ಸವವು ೨೮ ಬುಧವಾರದಂದು ಅತ್ಯಂತ ವೈಭವದಿಂದ ಸಂಪನ್ನವಾಯಿತು.ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ನಡೆದ ಈ ಇತಿಹಾಸಪ್ರಸಿದ್ಧ ಉತ್ಸವದಲ್ಲಿ ನೆರೆಯಜಿಲ್ಲೆಗಳ ಭಕ್ತರೂ ಸೇರಿದಂತೆ ಸಹಸ್ರಾರು ಸಂಖ್ಯೆಯ ಭಕ್ತರು  ಶ್ರದ್ಧಾಭಕ್ತಿಗಳಿಂದ ದೀಪವನ್ನು ಹಚ್ಚುವ ಮೂಲಕ ಪಾಲ್ಗೊಂಡರು.

ಇದೇ ಸಂದರ್ಭದಲ್ಲಿ ಪೂಜ್ಯಶ್ರೀಗಳು ಶ್ರೀಕ್ಷೇತ್ರಗೋಕರ್ಣದ ಸರ್ವಾಂಗೀಣವಾದ ಅಭಿವೃದ್ಧಿಯನ್ನುದ್ದೇಶಿಸಿ ಎಲ್ಲ ಸಮಾಜ ಹಾಗೂ ವರ್ಗಗಳ ಪ್ರಾತಿನಿಧ್ಯವನ್ನು ಹೊಂದಿ ಸಂಸ್ಥಾಪಿತವಾದ ಶ್ರೀ ಕ್ಷೇತ್ರಗೋಕರ್ಣ ಅಭಿವೃದ್ಧಿ ಸಮಿತಿಗೆ ದೀಪವನ್ನು ಬೆಳಗಿಸುವ ಮೂಲಕ ಚಾಲನೆಯನ್ನು ನೀಡಿದರು.ಮತ್ತು ಶ್ರೀ ದೇವಾಲಯದ ಗರ್ಭಗುಡಿಗೆ  ನೂತನವಾಗಿ ನಿರ್ಮಿಸಲಾಗುತ್ತಿರುವ ರಜತದ್ವಾರದ ನಿರ್ಮಾಣಕ್ಕೂ ಕೂಡಾ ಆಶೀರ್ವಾದ ನೀಡಿದರು.ಶ್ರೀದೇವಾಲಯದ ಆಡಳಿತ ಹಾಗೂ ಶ್ರೀಕ್ಷೇತ್ರ ಗೋಕರ್ಣದ ಉಪಾಧಿವಂತ ಮಂಡಲದವರು ಈ ರಜತದ್ವಾರದನಿರ್ಮಾಣವನ್ನು ಸಂಕಲ್ಪಿಸಿದ್ದು ಶ್ರೀದೇವರ ಆಸ್ತಿಕಭಕ್ತರೆಲ್ಲರ ಸಹಕಾರದಿಂದ ಈ ನೂತನನಿರ್ಮಾಣವು ಆಯೋಜಿತವಾಗಿದೆ.

ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಕಾರ್ಯದರ್ಶಿ ಶ್ರೀ ಜಿ.ಕೆ.ಹೆಗಡೆ, ವೇ.ಶಿತಿಕಂಠ ಭಟ್ ಹಿರೇ, ವೇ. ಗಣೇಶ ಹಿರೇಗಂಗೆ,ವೇ.ಬಾಲಕೃಷ್ಣ ಜಂಬೆ. ವೇ. ಗಣೇಶ ಜಂಬೆ, ವೇ.ಪರಮೇಶ್ವರ ಮಾರ್ಕಂಡೆ,ಮೊದಲಾದ ಉಪಾಧಿವಂತಮಂಡಲಮುಖ್ಯರೂ  ಜಿಲ್ಲಾಪಂಚಾಯತ ಸದಸ್ಯ ಶ್ರೀ ಪ್ರದೀಪ ನಾಯಕ, ಶ್ರೀ ಮಹೇಶ ಶೆಟ್ಟಿ ಮೊದಲಾದ ನಾಗರಿಕಗಣ್ಯರೂ ಉಪಸ್ಥಿತರಿದ್ದರು.

Facebook Comments