ಗೋ-ಹತ್ಯೆ ಸಂಪೂರ್ಣವಾಗಿ ನಿಂತಾಗ ಮಾತ್ರ, ಭಾರತಕ್ಕೆ ನಿಜವಾದ ಸ್ವಾತಂತ್ರ್ಯ – ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರಶ್ರೀ ಗೋಸಂದೇಶ

ಬೆಂಗಳೂರು: ಈ ದೇಶ ಸ್ವಾತಂತ್ರ್ಯ ಸಂಗ್ರಾಮಕ್ಕೆ ಎಷ್ಟು ಮಹತ್ವ ಕೊಟ್ಟಿತ್ತೊ ಅಷ್ಟೇ ಮಹತ್ವವನ್ನು ಗೋ-ರಕ್ಷಣಾ ಅಭಿಯಾನಕ್ಕೆ ಕೊಡಬೇಕು. ಈಗ ನಡೆಯುತ್ತಿರುವುದು ನಿಜವಾದ ಸ್ವಾತಂತ್ರ್ಯ ಸಂಗ್ರಾಮ, ಗೋ-ಹತ್ಯೆ ಸಂಪೂರ್ಣವಾಗಿ ನಿಂತಾಗ ಮಾತ್ರ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಬಂದಂತೆ. ದೇಶ ಭಾರತವಾಗಬೇಕಾದರೆ ಗೋ-ಹಿಂಸೆ ನಿಲ್ಲಬೇಕು, ಅಲ್ಲಿಯವರೆಗೂ ಇದು ಇಂಡಿಯಾ ಆಗೇ ಇರುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.

ಇಲ್ಲಿನ ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾ ಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶಸಭೆಯಲ್ಲಿ ಮಾತನಾಡಿ, ಯಾವ ಮನೆಯಲ್ಲಿ ಗೋವಿನ ಅಂಬಾಕಾರ ಇಲ್ಲವೋ ಅದು ಮನೆಯೇ ಅಲ್ಲ ಎಂದು ಬಲ್ಲವರು ಹೇಳುತ್ತಾರೆ. ಹಾಗಾಗಿ ಎಲ್ಲರ ಮನೆಯಲ್ಲೂ ಗೋವಿನ ಅಂಬಾಕಾರ ಕೇಳುವಂತಾಗಬೇಕು. ಇಂದು ನಡೆಯುತ್ತಿರುವ ಗೋವಿನ ಹಿಂಸೆ ನಿಲ್ಲಬೇಕು ಎಂದು ನುಡಿದರು.

ಬದುಕಿಗೆ ಸ್ಫೂರ್ತಿ ತುಂಬಿದ ತಾಯಿಯ ಫೋಟೋವನ್ನು ಮನೆಯ ಎಲ್ಲೆಡೆ ಹಾಕುತ್ತಾರೆ. ಹಾಗೆಯೇ ಬದುಕಿನುದ್ದಕ್ಕೂ ಹಾಲು ಕೊಟ್ಟು ನಮ್ಮನ್ನು ಪೊರೆಯುವ ಗೋವನ್ನು ನಮ್ಮ ಜೀವನದ ಎಲ್ಲ ಕ್ಷೇತ್ರದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದ ಅವರು, ಗೋವನ್ನು, ಸಂತರನ್ನು ಎದೆಯೊಳಗಿಟ್ಟುಕೊಂಡರೆ ಸೋಲಿಲ್ಲ. ಗೋವಿನ ಜೊತೆಗಿರುವ ಎಲ್ಲರ ಬದುಕು ಸಫಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಶ್ರೀರಂಗಪಟ್ಟಣ ಪಶ್ಚಿಮವಾಹಿನಿ, ಬೇಬಿಮಠ ಚಂದ್ರವನ ಆಶ್ರಮದ ಪೂಜ್ಯ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಗಳು, ಭಕ್ತರ ಅಭಿವೃದ್ಧಿಗೋಸ್ಕರ, ಗೋವಿನ ರಕ್ಷಣೆಗೋಸ್ಕರ ಪರಮಪೂಜ್ಯರು ಚಾತುರ್ಮಾಸ್ಯ ಮಾಡುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳಲ್ಲಿ ಜ್ಞಾನವನ್ನು ಸವಿಯಬೇಕು. ಭಗವಂತ ಎಲ್ಲವನ್ನು ಕೊಟ್ಟಿದ್ದಾನೆ, ಗುರು ಅದನ್ನು ನಮಗೆ ಪಡೆಯುವ ವಿಧಾನ ತೋರಿಸುತ್ತಾನೆ. ನಾವು ಯಾವಾಗಲೂ ಗುರು ಹಾಗೂ ಭಗವಂತನಿಗೆ ಕೃತಜ್ಞರಾಗಿರಬೇಕು ಎಂದರು.

ಅಪಘಾತಕ್ಕೊಳಗಾದ ಸಾವಿರಕ್ಕೂ ಹೆಚ್ಚು ಗೋವುಗಳನ್ನು ಉಳಿಸಿ, ಐನೂರಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸಿದ ಪುರುಷೋತ್ತಮ ಸಾಗರ ಇವರಿಗೆ ಗೋ ಸೇವಾಪುರಸ್ಕಾರವನ್ನು ನೀಡಲಾಯಿತು.

ಶ್ರೀಭಾರತೀಪ್ರಕಾಶನ ಹೊರತಂದ ಸಾಧನಾಪಂಚಕ ಪ್ರವಚನಮಾಲಿಕೆಯ ವಿ.ಸಿ.ಡಿಯನ್ನು ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹಾಗೂ ರಮೇಶ್ ಹೆಗಡೆ ಗುಂಡೂಮನೆ ಬರೆದ ಯಕ್ಷರಂಜಿನಿ ಯಕ್ಷಗಾನ ಪ್ರಸಂಗ ಪುಸ್ತಕವನ್ನು ರಾಘವೇಶ್ವರಶ್ರೀಗಳು ಲೋಕಾರ್ಪಣೆ ಮಾಡಿದರು.

ಕರ್ನಾಟಕ ಬ್ಯಾಂಕ್ನ ಅಧ್ಯಕ್ಷ ಅನಂತಕೃಷ್ಣ ಭಟ್, ಪೀಣ್ಯ, ಕಾಮಾಕ್ಷಿಪಾಳ್ಯ ನಾಗರಭಾವಿ ಪ್ರದೇಶದ ಉದ್ಯಮಿಗಳು, ಸಮಾಜಸೇವಕ ಲಕ್ಷ್ಮೀನಾರಾಯಣ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಆವಿನಹಳ್ಳಿ, ಸಾಗರ ನಗರ ಪೂರ್ವ ಮತ್ತು ಪಶ್ಚಿಮ ವಲಯದವರು ಸರ್ವಸೇವೆಯನ್ನು ನೆರವೇರಿಸಿದರು. ಶ್ರೀಮಠದ ಪದಾಧಿಕಾರಿಗಳು, ಚಾತುರ್ಮಾಸ್ಯ ಸಮಿತಿಯ ಸದಸ್ಯರು ಇದ್ದರು. ವೆಂಕಟೇಶ್ ಜೋಯಿಸ್ ದಂಪತಿಗಳು ಸಭಾಪೂಜೆ ಮಾಡಿದರು. ಮೋಹನ ಭಾಸ್ಕರ ಹೆಗಡೆ ಮತ್ತು ಕಾರ್ತಿಕ ಭಟ್ ನಿರೂಪಿಸಿದರು.

ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

ಕೋಟ್ಸ್
ಯಾವ ಮನೆಯಲ್ಲಿ ಗೋವಿನ ಅಂಬಾಕಾರ ಇಲ್ಲವೋ ಅದು ಮನೆಯೇ ಅಲ್ಲ ಎಂದು ಬಲ್ಲವರು ಹೇಳುತ್ತಾರೆ. ಹಾಗಾಗಿ ಎಲ್ಲರ ಮನೆಯಲ್ಲೂ ಗೋವಿನ ಅಂಬಾಕಾರ ಕೇಳುವಂತಾಗಬೇಕು. ಇಂದು ನಡೆಯುತ್ತಿರುವ ಗೋವಿನ ಹಿಂಸೆ ನಿಲ್ಲಬೇಕು.
– ಶ್ರೀರಾಘವೇಶ್ವರಶ್ರೀಗಳು, ಶ್ರೀರಾಮಚಂದ್ರಾಪುರ

• ಪುರುಷೋತ್ತಮ ಸಾಗರ ಇವರಿಗೆ ಗೋ ಸೇವಾಪುರಸ್ಕಾರ ಪ್ರದಾನ
• ರಮೇಶ ಹೆಗಡೆಯವರ ಯಕ್ಷಜನನೀ ಯಕ್ಷಗಾನ ಪುಸ್ತಕ ಲೋಕಾರ್ಪಣೆ
• ಬೇಬಿಮಠ ಪೂಜ್ಯ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಉಪಸ್ಥಿತಿ

06.08.2016 ರ ಕಾರ್ಯಕ್ರಮ:

 • ಬೆಳಗ್ಗೆ 7.00 ಕಾಮಧೇನು ಹವನ
 • ಬೆಳಗ್ಗೆ 9.00 : ಕುಂಕುಮಾರ್ಚನೆ
 • ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
 • ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
 • ಅಪರಾಹ್ನ 3.30 :
  ಗೋಸಂದೇಶ : ಗೋ ಸಂರಕ್ಷಣೆ – ಮಹೇಂದ್ರ ಮುನ್ನೋಟ್
  ಲೋಕಾರ್ಪಣೆ : ಜಡಭರತ – ಪುಸ್ತಕ – ಶ್ರೀಧರ ಡಿ.ಎಸ್. ಕಿನ್ನಿಗೋಳಿ
  ಸಾಧನಾಪಂಚಕ ಪ್ರವಚನಮಾಲಿಕೆ – ದೃಶ್ಯಮುದ್ರಿಕೆ
  ಗೋಸೇವಾಪುರಸ್ಕಾರ : ಭಾಜನರು – ಮಹೇಂದ್ರ ಮುನ್ನೋಟ್
  ಸಂತ ಸಂದೇಶ : ಪರಮಪೂಜ್ಯ ಶ್ರೀ ಶ್ರೀ ಸುಬ್ರಹ್ಮಣ್ಯಭಾರತೀ ಮಹಾಸ್ವಾಮೀಜಿಗಳು,
  ಶ್ರೀ ಜಗದ್ಗುರು ಶಂಕರಾಚಾರ್ಯ ಶಂಕರಾನಂದ ಸರಸ್ವತೀ ಮಹಾಸಂಸ್ಥಾನಮ್,
  ಶ್ರೀ ಶಾರದಾ ದತ್ತಪೀಠಂ, ಯಾದವಗಿರಿ – ಆದೋನಿ, ಕರ್ನೂಲು ಜಿಲ್ಲೆ, ಆಂದ್ರಪ್ರದೇಶ.
  ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
 • ಸಂಜೆ: 5.00 : ಕಲಾರಾಮ – ಚಿಣ್ಣರಿಂದ ‘ಪುಣ್ಯಕೋಟಿ’ ರೂಪಕ
 • ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
 • ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ
Facebook Comments