ಶ್ರೀ ರಾಘವಂ ದಶರಥಾತ್ಮಜಂ ಅಪ್ರಮೇಯಂ |
ಸೀತಾಪತಿಂ ರಘುಕುಲಾನ್ವಯ ರತ್ನದೀಪಂ
ಆಜಾನುಬಾಹುಂ ಅರವಿಂದದಲಾಯತಾಕ್ಷಂ
ರಾಮಂ ನಿಶಾಚರ ವಿನಾಶಕರಂ ನಮಾಮಿ ||
ಪೂಜ್ಯ ಶ್ರೀಗುರುಗಳ ಚರಣಾರವಿಂದಗಳಿಗೆ ಪ್ರಣಾಮಗಳು

ಶ್ರೀಗುರುಗಳ ಅಂತರ್ಜಾಲ ತಾಣದ ಸಮ್ಮುಖ ಅಂಕಣದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ಬರೆಯಬೇಕು. . . .
ಆ ರೀತಿಯಿಂದ ಶ್ರೀಗುರುಗಳ ಸಮ್ಮುಖಕ್ಕೆ ಪ್ರತಿಯೊಬ್ಬನೂ ಬರಬೇಕು. . . .
ಇದು ಶ್ರೀಶ್ರೀಗಳವರು ನಮಗೆಲ್ಲಾ ನೀಡಿದ ಅವಕಾಶ. ಈ ಅವಕಾಶದ ಮೂಲಕ ಸೇವೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಕೂಡಾ ಹೌದು, ಅವಕಾಶಗಳು ಬರುವುದು ಕೆಲವೊಮ್ಮೆ ಮಾತ್ರವಲ್ಲವೇ? ಅದನ್ನು ಸರಿಯಾಗಿ ಬಳಸಬೇಕು. ಸಾಮಾನ್ಯ ಶಿಷ್ಯನಿಗೂ ಬರೆಯುವ ಸದಾವಕಾಶ ದೊರೆತಿರುವುದು ಸಂತಸಕರ ವಿಷಯ.

ಸೇವೆಯೆಂಬುದು ಮನುಷ್ಯನ ಜನ್ಮ ಜನ್ಮದ ಋಣಗಳನ್ನು ತೀರಿಸಲು ದೊರೆತ ಅವಕಾಶ. ಇದರ ಮೂಲಕ ಜೀವನವನ್ನು ಉತ್ತಮ ಪಡಿಸುವುದು ನಮ್ಮ ಕರ್ತವ್ಯ. ಇದಕ್ಕೆ ಗುರುವಿನ ಅನುಗ್ರಹ, ಮಾರ್ಗದರ್ಶನಬೇಕು.
ಮುಜುಂಗಾವು, ಕಾಸರಗೋಡು ಜಿಲ್ಲೆಯಲ್ಲಿ ಬರುವ ಒಂದು ಪ್ರದೇಶ. ಶ್ರೀಗುರುಗಳೇ ಅನ್ನುವಂತೆ ಇದು ದೇವಾಲಯ, ವಿದ್ಯಾಲಯ, ವೈದ್ಯಾಲಯ ಗಳ ಸಂಗಮ ಸ್ಥಳ. ಇಲ್ಲಿ ಶ್ರೀಗುರುಗಳ ಸೇವಾಯೋಜನೆಗಳಲ್ಲಿ ಒಳಗೊಂಡ ವಿದ್ಯಾಲಯ ಮತ್ತು ವೈದ್ಯಾಲಯಗಳು ಕಾರ್ಯಾಚರಿಸುತ್ತಿವೆ. ೨೦೦೩ನೇ ಇಸವಿ ಶ್ರೀಗುರುಗಳು ಮುಜುಂಗಾವಿಗೆ ಆಗಮಿಸಿದ ಸಂದರ್ಭ. ಏಕಾದಶಿ, ಶ್ರೀಗುರುಗಳು ಮೌನವ್ರತದಲ್ಲಿದ್ದ ದಿನ. ಶ್ರೀಯುತ ಕೆ.ಪಿ. ಯವರು ಶ್ರೀ ಗುರುಗಳಿಗೆ ನನ್ನ ಬಗ್ಗೆ ಹೇಳಿದ್ದಲ್ಲದೆ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಸೇವೆ ಸಲ್ಲಿಸುವಂತೆ ಕೇಳಿಕೊಂಡಾಗ, ಶ್ರೀಗಳು ಹಸನ್ಮುಖರಾಗಿ ಚಿನ್ಮುದ್ರೆಯನ್ನಷ್ಟೇ ತೋರಿಸಿ, ನನಗೆ ಈ ವಿದ್ಯಾಲಯದಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನಿತ್ತು ಆಶೀರ್ವದಿಸಿದರು. ಅಂದಿನಿಂದ ಇಂದಿನವರೆಗೆ ಸುಮಾರು ೮ ವರ್ಷಗಳ ಸೇವೆಯಲ್ಲಿ ಯಾವುದೇ ಕಷ್ಟಕರ ಪರಿಸ್ಥಿತಿಯೇ ಇರಲಿ ಶ್ರೀಗುರುಗಳನ್ನು ನೆನೆದರೆ ಮಾತ್ರ ಸಾಕು ನನ್ನೆದುರಿದ್ದ ಅಡೆತಡೆಗಳು ನಿವಾರಣೆಯಾಗುತ್ತಾ ಬರುವುದನ್ನು ಗಮನಿಸುತ್ತಿದ್ದೇನೆ. ಇದೀಗ ವಿದ್ಯಾಲಯ ೯ನೇ ತರಗತಿಯ ಹಂತದಲ್ಲಿದೆ. ಮುಂದಿನ ವರ್ಷ ೧೦ನೆಯ ತರಗತಿಯತ್ತ ಸಾಗುವುದು.
(ಮಾಹಿತಿಗಾಗಿ ಸಂದರ್ಶಿಸಿ http://mujungavu.blogspot.com/)

ವಿದ್ಯಾಲಯದ ಬೆಳವಣಿಗೆಗೆ ಶ್ರೀ ಶ್ರೀಗಳವರ ನಿರಂತರ ಮಾರ್ಗದರ್ಶನ ಹಾಗೂ ಅನುಗ್ರಹವಿದೆ. ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿಕೊಂಡು ಆಧುನಿಕ ಶಿಕ್ಷಣ ನೀಡುವ ಕಿರುಪ್ರಯತ್ನಕ್ಕೆ ತಮ್ಮೆಲ್ಲರ ಪೂರ್ಣ ಸಹಾಯ ಸಹಕಾರ ಅತೀ ಅಗತ್ಯ. ಶ್ರೀಶ್ರೀಗಳವರ ಪ್ರೇರಣೆ, ಸಂಕಲ್ಪಕ್ಕೆ ಶಿಷ್ಯರಾದ ನಾವೆಲ್ಲರೂ ತಮ್ಮ ತಮ್ಮ ಅಮೂಲ್ಯ ಸಮಯವನ್ನು ನೀಡಿ ಉದ್ದೇಶ ಸಾಫಲ್ಯಕ್ಕೆ ಪ್ರಯತ್ನಿಸೋಣ.
ಗುರುಸೇವೆಯ ಅವಕಾಶಗಳು ಎಲ್ಲರಿಗೂ ಯಾವತ್ತೂ ಸಿಗುವುದಿಲ್ಲ. ಶ್ರೀಗುರುಗಳೆನ್ನುವಂತೆ ಗುರುಋಣದ ಸ್ವಲ್ಪ ಭಾಗವನ್ನಾದರೂ ಈ ಸೇವೆಯಿಂದ ಕಳೆದುಕೊಳ್ಳಬಹುದಂತೆ. ಇಂತಹ ಸೇವೆಗಳಲ್ಲಿಯ ಅನುಭವಗಳೇ ಒಂದು ರೋಮಾಂಚನ.

ಸಾಮಾನ್ಯ ವಿಶ್ವವಿದ್ಯಾಲಯಗಳಲ್ಲಿಯೂ ದೊರಕದ ವಿಶೇಷ ಅನುಭವ ಇಲ್ಲಿರುತ್ತದೆ. ಅಡಿಗಡಿಗೆ ಬಂದೆರಗುವ ಸವಾಲುಗಳು ಈ ಸೇವಾ ವೃತ್ತಿಯಲ್ಲಿ ಸರ್ವೇಸಾಮಾನ್ಯ. ಈ ಎಲ್ಲಾ ಸಂದರ್ಭಗಳಲ್ಲಿ ನಮ್ಮಲ್ಲಿರಬೇಕಾದುದು ಶ್ರೀಪೀಠದ ಮೇಲೆ ಅನನ್ಯ ಭಕ್ತಿ ಮತ್ತು ಪ್ರೀತಿ. ಸಂಸ್ಥೆಯಲ್ಲಿ ಆರ್ಥಿಕ ಅವಶ್ಯಕತೆಗಳು ಬರುವುದು ಸಾಮಾನ್ಯ. ಎಷ್ಟೋ ಸಂದರ್ಭಗಳಲ್ಲಿ ಶ್ರೀಶ್ರೀಗಳವರನ್ನು ಮನಸಾ ಪ್ರಾರ್ಥಿಸಿಕೊಂಡಾಗ ಅವಶ್ಯಕತೆಗಳು ಪೂರ್ಣಗೊಂಡ ನಿದರ್ಶನಗಳಿವೆ.

ಇತ್ತೀಚೆಗೆ ಅಧ್ಯಾಪಕರ ಮತ್ತು ಶ್ರೀಗುರುಗಳ ಭೇಟಿಯ ಸಂದರ್ಭವನ್ನು ಖಂಡಿತ ನೆನಪಿಸಬೇಕಾಗುತ್ತದೆ. ನಮ್ಮ ವಿದ್ಯಾಲಯದಲ್ಲಿ ನಾನೊಬ್ಬನೇ ಅಧ್ಯಾಪಕ ಮತ್ತೆಲ್ಲರೂ ಅಧ್ಯಾಪಿಕೆಯರು. ಭೇಟಿಯ ಸಂದರ್ಭ ಶ್ರೀಗುರುಗಳಿಗೆ ಎಲ್ಲರನ್ನೂ ಪರಿಚಯಿಸುವಾಗ ಅವರು ಎರಡೆರಡು ಸಲ ಕೇಳಿದರು : ಶ್ಯಾಮಾ, ನೀನು ಒಬ್ಬನೇ ಹೇಗೆ ನಿಭಾಯಿಸ್ತಾ ಇದ್ದೀಯ ? ಭೇಟಿ ನಡೆದು ಎರಡು ದಿನಗಳು ಕಳೆದಿರಲಿಲ್ಲ, ನಮ್ಮ ವಿದ್ಯಾಲಯಕ್ಕೆ ಚಿತ್ರಕಲಾ ವಿಭಾಗಕ್ಕೆ ಅಧ್ಯಾಪಕರೊಬ್ಬರು ಸೇವಾ ರೂಪದಲ್ಲಿ ಆಗಮಿಸಿದ್ದು ನನಗೆ ಸಹಕಾರಿಯಾಗಿ ಕೆಲಸಗಳ ಜವಾಬ್ದಾರಿಯನ್ನೂ ವಹಿಸಿದರು. ಪರಮ ಪೂಜ್ಯರ ಸಂಕಲ್ಪಕ್ಕೆ ಇದಕ್ಕಿಂತ ಬೇರೇನು ನಿದರ್ಶನ ಬೇಕು ?

ನನ್ನ ಮತ್ತು ಶ್ರೀಮಠದ ಸಂಪರ್ಕ ಹಳೆಯದೆಂದೇ ಹೇಳಬೇಕು. ೧೯೮೩ರಲ್ಲಿ ನನ್ನ ಅಜ್ಜನ (ವೇ| ಮೂ| ಕೇಶವ ಭಟ್ಟ ಕೋಣಮ್ಮೆ) ಮನೆಗೆ ಹಿರಿಯ ಗುರುಗಳು ಚಿತ್ತೈಸಿದ್ದು, ನಾನಾಗ ಬಹುಶ: ೧೦ ವರ್ಷದ ಒಳಗಿನ ಹುಡುಗ. ಬಟ್ಟೆ ಉಡಲು ತಿಳಿಯದಿದ್ದರೂ ಬಟ್ಟೆ ಉಟ್ಟು ಓಡಾಡಲು ಕಲಿತದ್ದು ಈ ಸಂದರ್ಭದಲ್ಲಿ. ಮಂತ್ರಾಕ್ಷತೆಯ ಸಂದರ್ಭ ನನ್ನನ್ನೂ ಕರೆದು ಫಲವನ್ನಿತ್ತು ಆಶೀರ್ವದಿಸಿದ್ದೂ ಒಂದು ಅವಿಸ್ಮರಣೀಯ ಅನುಭವ. ಮುಂದೆ ಗಿರಿನಗರದಲ್ಲಿ ಸಂಪನ್ನಗೊಂಡ ಶ್ರೀಗುರುಗಳ ಶಿಷ್ಯ ಸ್ವೀಕಾರ ಸಂದರ್ಭದಲ್ಲಿ ನಾನು ಮತ್ತು ನನ್ನ ತಮ್ಮ ಭಾಗಿಯಾಗಿದ್ದೆವು. ಇಂತಹ ಅಪರೂಪದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಗುರು ಅನುಗ್ರಹದಿಂದಲೇ ದೊರಕಿತ್ತು ಎಂದು ಭಾವಿಸುತ್ತೇನೆ. ನನ್ನ ಹಿರಿಯ ಅಜ್ಜ ಕೋಣಮ್ಮೆ ಅವಧಾನಿ ಮಹಾಲಿಂಗ ಭಟ್ಟರು ಜೀವನದ ಶ್ರೇಷ್ಠ ಆಶ್ರಮವಾದ ‘ಸನ್ಯಾಸ ಆಶ್ರಮ’ವನ್ನು ಪಡೆದವರು. ಅದು ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೆಂದ್ರಭಾರತೀ ಮಹಾಸ್ವಾಮಿಗಳವರಲ್ಲೇ. ಈ ಎಲ್ಲಾ ಆಶೀರ್ವಾದಗಳ ಸತ್ಪರಿಣಾಮವೂ ನನ್ನ ಮೇಲಾಗಿದೆ ಎಂದು ನಂಬಿದ್ದೇನೆ.

ಶ್ರೀಗುರುಗಳ ಪ್ರೀತಿ ಅನನ್ಯ. ಶ್ರೀಶ್ರೀಗಳವರ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬನಿಗೂ ಈ ಅನುಭವದ ಅರಿವಾಗಿರಬಹುದು. ನನ್ನ ಅಜ್ಜನಮನೆಗೆ ೨೦೦೩ರಲ್ಲಿ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಚಿತ್ತೈಸಿದ ಸಂದರ್ಭ ನಾನು ಸೋದರಮಾವ ಕೋಣಮ್ಮೆ ವೇ| ಮೂ| ಮಹಾದೇವ ಭಟ್ಟರೊಂದಿಗೆ ಪೂರ್ವಭಾವೀ ಸಿದ್ಧತಾ ಕೆಲಸಗಳಲ್ಲಿ ತೊಡಗಿಸಿಕೊಂಡು ಸಕಲ ವ್ಯವಸ್ಥೆಯಲ್ಲಿ ಸಹಕರಿಸಿದ್ದೆ. ಈ ವಿಚಾರವನ್ನು ಮಾವ ಶ್ರೀ ಶ್ರೀಗಳವರ ಗಮನಕ್ಕೆ ತಂದಿದ್ದರಂತೆ. ಮಂತ್ರಾಕ್ಷತೆಯ ಸಂದರ್ಭದಲ್ಲಿ ಶ್ರೀಗುರುಗಳು ನನ್ನನ್ನು ಕರೆದು ಮಂತ್ರಾಕ್ಷತೆಯೊಂದಿಗೆ ಒಂದು ಪಾತ್ರೆಯ ತುಂಬಾ ವಿಶೇಷ ಹಣ್ಣುಗಳನ್ನು ನನಗಿತ್ತು ‘ದರ್ಭೆಯವರು ತುಂಬಾ ಕೆಲಸ ಮಾಡಿದ್ದೀರಂತೆ ಒಳ್ಳೆಯದಾಗಲಿ’ ಎಂದು ಹರಸಿದರು. ಮುಂದಿನ ದಿನಗಳಲ್ಲಿ ಅವರು ನೀಡಿದ ಫಲಗಳಂತೆ ನನ್ನ ಜೀವನದಲ್ಲಿ ಉತ್ತಮ ಫಲಗಳನ್ನೇ ಅನುಭವಿಸುತ್ತಿದ್ದೇನೆ ಎಂಬುದನ್ನು ತಿಳಿಸಲು ಸಂತೋಷವಾಗುತ್ತಿದೆ.

ಹೌದು, ನನ್ನ ತವರೂರು ಪುತ್ತೂರು ತಾಲೂಕಿನ ಪುಟ್ಟ ಹಳ್ಳಿಯಾದ ಕುಞಿಮಲೆ ದರ್ಭೆ. ಇಲ್ಲೊಂದು ವಿದ್ಯಾಲಯವಿದೆ. ಇದು ಶ್ರೀಗುರುಗಳ ಮಾರ್ಗದರ್ಶನದಲ್ಲೇ ಸಾಗುತ್ತಿದೆ. ಇದರ ೨೦೦೧ ಸಾಲಿನ ಆಡಳಿತ ಮಂಡಳಿ ಸದಸ್ಯನಾಗಿಯೂ ನಾನು ಸೇವೆ ಕೈಗೊಂಡಿದ್ದೆ. ಈ ಸಂದರ್ಭದಲ್ಲಿ ಶ್ರೀಗುರುಗಳನ್ನು ಕೆಲವೊಂದು ಬಾರಿ ಭೇಟಿಯಾದದ್ದಿದೆ. ಆದುದರಿಂದಲೇ ಶ್ರೀ ಶ್ರೀಗಳು ನನ್ನನ್ನು ಗುರುತಿಸುವುದು ದರ್ಭೆಯವನೆಂದೇ.
ಶ್ರೀಗುರುಗಳ ಸಂಕಲ್ಪ ಶಕ್ತಿ ಅನನ್ಯ, ಅವರ ಪ್ರೀತಿ ನಮ್ಮೆಲ್ಲರ ಮೇಲಿದ್ದು ಶ್ರೀಗುರುಗಳು ತೋರಿದ ದಾರಿಯಲ್ಲಿ ಮುಂದುವರಿಯೋಣ. ಗುರಿಯನ್ನು ಮುಂದಿಟ್ಟುಕೊಂಡು ಗುರುವನ್ನು ಜತೆಯಲ್ಲಿಟ್ಟುಕೊಂಡು ಮುಂದುವರಿದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಲ್ಲವೇ? ಯಾವುದೇ ಸಂದರ್ಭವಿರಲಿ ಶ್ರೀಗುರುಗಳನ್ನು ಭೇಟಿಯಾಗಬೇಕೆಂದೇನಿಲ್ಲ, ನಾವೆಲ್ಲಿದ್ದೇವೆಯೋ ಅಲ್ಲಿಂದಲೇ ಪ್ರಾರ್ಥಿಸುವ ಮೂಲಕ ನಾವು ಕಷ್ಟದಿಂದ, ದು:ಖದಿಂದ ಪಾರಾಗಬಹುದು. ಇದನ್ನು ತಿಳಿದವರು ಅನ್ನುವುದು, ‘ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಛಿನ್ನ ಸಂಶಯ:’ ಇದನ್ನೇ ಅನ್ನುವುದು ಗುರುಕರುಣೆ ಅಥವಾ ಗುರುಕೃಪೆ ಎಂದು ಅಲ್ಲವೇ? ಶ್ರೀಗುರುಗಳ ಸೇವಾ ಯೋಜನೆಗಳಲ್ಲಿ ಭಾಗಿಯಾಗೋಣ. ಗುರುಕೃಪೆಯಲ್ಲಿ ಮಿಂದು ಪುನೀತರಾಗೋಣ.

|| ಹರೇ ರಾಮ ||

ದರ್ಭೆ ಶ್ಯಾಮ ಭಟ್ಟರ ಶ್ರೀಮಠದೊಂದಿಗಿನ ಮಧುರ ನೆನಪುಗಳು.

ಪರಿಚಯ

ಶ್ರೀಮತಿ ಲಕ್ಷ್ಮೀ ಅಮ್ಮ ಮತ್ತು ಶ್ರೀಯುತ ಸುಬ್ರಾಯ ಭಟ್ಟ ದಂಪತಿಗಳ ಮೊದಲ ಪುತ್ರರಾದ ಶ್ರೀಯುತರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಪುತ್ತೂರು ತಾಲೂಕು ದರ್ಭೆಯ ಕುಞಮಲೆ ಶಾಲೆಯಲ್ಲಿ ಪೂರೈಸಿ, ಪ್ರೌಢ ಶಿಕ್ಷಣವನ್ನು ಪಾಣಾಜೆಯ ಸುಬೋಧ ಪ್ರೌಢಶಾಲೆಯಲ್ಲಿ ಪಡೆದ ಇವರು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಮುಂದಿನ ವಿದ್ಯಾಭ್ಯಾಸವನ್ನು ಪೂರೈಸಿ ಪದವಿಯನ್ನು ಪಡೆದಿರುತ್ತಾರೆ, ಮೈಸೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಪದವಿಯನ್ನೂ ತಮ್ಮದಾಗಿಸಿಕೊಂಡ ಇವರು ಇಲೆಕ್ಟ್ರಾನಿಕ್ಸ್ ಡಿಪ್ಲೊಮಾ ಪದವೀಧರರೂ ಹೌದು. ಪ್ರಸಿದ್ಧ ಚೌರ್ಕಾಡು ಮನೆತನಕ್ಕೆ ಸೇರಿದ ಇವರು ೧೯೯೯ರಿಂದಲೇ  ಶ್ರಿಮಠದ ವಿವಿಧ ಯೋಜನೆ ಮತ್ತು ಕಾರ್ಯಕ್ರಮದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ದುಡಿದಿದ್ದು ೨೦೦೨ರಿಂದ ಶ್ರೀಗುರುಗಳ ಕನಸಿನ ಕೂಸಾದ ಗಡಿನಾಡಿನಲ್ಲಿರುವ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ಪ್ರಧಾನಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಶ್ರೀಕರಾರ್ಚಿತ ದೇವತಾನುಗ್ರಹ ಹಾಗೂ ಶ್ರೀಗುರುಗಳ ಆಶೀರ್ವಾದ ಯಾವತ್ತೂ ಇರಲಿ ಎಂದು ಹಾರೈಕೆ.

Facebook Comments Box