ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಮಹರ್ಷಿ ವೇದವ್ಯಾಸರು

ಮಹರ್ಷಿ ವೇದವ್ಯಾಸರು

ಜ್ಞಾನಸುಮ 8:

ವೇದಗಳು- ಕೃಷ್ಣ ಯಜುರ್ವೇದ

ವಿದ್ವಾನ್ ಎ ಅನಂತಕೃಷ್ಣ ಭಟ್ಟ

ಭಾರತೀಯ ಸನಾತನ ಸಂಸ್ಕೃತಿಯ ಮೂಲಸ್ರೋತಸ್ಸು ವೇದಗಳಾಗಿವೆ. ಧರ್ಮ-ಬ್ರಹ್ಮಗಳ ಕುರಿತಾದ ಪರಮ ಪ್ರಾಮಾಣಿಕ ವಿಚಾರವೇ ವೇದ. ಬ್ರಹ್ಮಾಂಡದಲ್ಲಿ ಅಂತರ್ಗತವಾದ ಮೂಲಭೂತ ತತ್ವವೇ ಬ್ರಹ್ಮವಾದರೆ, ಬ್ರಹ್ಮಾಂಡದ ಆಧಾರಭೂತವಾದ ಕ್ರಿಯಾಮಯ ಚೇತನವೇ ಧರ್ಮವಾಗಿದೆ. ಇಂತಹ ಧರ್ಮ-ಬ್ರಹ್ಮಗಳನ್ನು ಪ್ರಾಮಾಣಿಕವಾಗಿ ಬೋಧಿಸುವ ಜ್ಞಾನರಾಶಿಯೇ ವೇದ. ಗೌಣಾರ್ಥದಲ್ಲಿ ಪರಿಚಾಯಕ ಗ್ರಂಥರಾಶಿಯೇ ವೇದ.

ಧರ್ಮಬ್ರಹ್ಮಣೀ ವೇದೈಕವೇದ್ಯೇ |
ಧರ್ಮಂ ಜಿಜ್ಞಾಸಮಾನಾನಾಂ ಪ್ರಮಾಣಂ ಪರಮಂ ಶ್ರುತಿಃ ||

ಇತ್ಯಾದಿ ಶತಶಃ ವಚನಗಳು ಇದನ್ನು ಪ್ರಮಾಣೀಕರಿಸುತ್ತವೆ.

ಇಂತಹ ವೇದಗಳಿಂದ ನಾವು ಇಷ್ಟಪ್ರಾಪ್ತಿ ಮತ್ತು ಅನಿಷ್ಟಪರಿಹಾರಗಳೆಂಬ ಪ್ರಯೋಜನವನ್ನು ಹೊಂದಬಹುದಾಗಿದೆ. ಇದನ್ನು ಸಾಯಣಾಚಾರ್ಯರು ಹೀಗೆ ಸ್ಪಷ್ಟಪಡಿಸಿದ್ದಾರೆ.

ಇಷ್ಟಪ್ರಾಪ್ತ್ಯನಿಷ್ಟಪರಿಹಾರಯೋಃ ಅಲೌಕಿಕಮುಪಾಯಂ ಯೋ ಗ್ರಂಥೋ ವೇದಯತಿ ಸ ವೇದಃ||

 ಅಂದರೆ ವೇದವಿಹಿತವಾದ ಅಲೌಕಿಕ ಉಪಾಯರೂಪ ಕರ್ಮಗಳಿಂದ ನಮಗೆ ಇಷ್ಟವಾದುದು ಪ್ರಾಪ್ತವಾಗುತ್ತದೆ ಮತ್ತು ಅನಿಷ್ಟವಾದುದು ದೂರವಾಗುತ್ತದೆ.

ಅಗ್ನಿಹೋತ್ರಂ ಜುಹುಯಾತ್ ಸ್ವರ್ಗಕಾಮಃ ||

ಇಲ್ಲಿ ಸ್ವರ್ಗರೂಪ ಇಷ್ಟಪ್ರಾಪ್ತಿಗೆ ಅಗ್ನಿಹೋತ್ರಾನುಷ್ಠಾನ ರೂಪ ಅಲೌಕಿಕ ಉಪಾಯವು ವಿಹಿತವಾಗಿದೆ.

ಸರ್ವಂ ಪಾಪ್ಮಾನಂ ತರತಿ ತರತಿ ಬ್ರಹ್ಮಹತ್ಯಾಂ, ಯೋsಶ್ವಮೇಧೇನ ಯಜತೇ | ಯು ಉ ಚೈನಮೇವಂ ವೇದ||

ಇಲ್ಲಿ ಪಾಪ ಮತ್ತು ಬ್ರಹ್ಮಹತ್ಯಾದೋಷ ರೂಪ ಅನಿಷ್ಟಗಳಿಗೆ ಪರಿಹಾರವಾಗಿ ಅಶ್ವಮೇಧಯಾಗಾನುಷ್ಠಾನರೂಪದಲ್ಲಿ ಅಲೌಕಿಕ ಉಪಾಯವು ವಿಹಿತವಾಗಿದೆ. ಕರ್ಮಕಾಂಡದಲ್ಲಿ ಈ ಪ್ರಕಾರವಾದರೆ, ಜ್ಞಾನಕಾಂಡದಲ್ಲಿ ಬ್ರಹ್ಮರೂಪ ಇಷ್ಟಪ್ರಾಪ್ತಿಯನ್ನೂ, ಅಹಂತಾ, ಮಮತಾ ಇತ್ಯಾದಿ ಅನಿಷ್ಟ ಪರಿಹಾರಕ್ಕೆ ಸಾಧನ ಚತುಷ್ಟಯಾದಿ ಅಲೌಕಿಕ ಉಪಾಯವನ್ನೂ ವೇದವು ತಿಳಿಸಿಕೊಡುತ್ತದೆ. ಈ ಪ್ರಕಾರ ಪ್ರತ್ಯಕ್ಷಾನುಮಾನ- ಉಪಮಾನ ಪ್ರಮಾಣಗಳಿಂದ ಲೌಕಿಕವಾಗಿ ತಿಳಿಯಲಸಾಧ್ಯವಾದ, ಇಷ್ಟಪ್ರಾಪ್ತಿ ಮತ್ತು ಅನಿಷ್ಟ ಪರಿಹಾರಗಳಿಗೆ ಅಲೌಕಿಕವಾದ ಉಪಾಯವನ್ನು ತಿಳಿಸುವುದೇ ವೇದದ ಪರಮ ಪ್ರಯೋಜನವಾಗಿದೆ.

 

ಈ ಅಲೌಕಿಕ ಉಪಾಯವು ಅನುಷ್ಠಾನರೂಪವಾಗಿದೆ. ಇದನ್ನು ಮಂತ್ರಗಳೂ, ಬ್ರಾಹ್ಮಣಗಳೂ ನಮಗೆ ಬೋಧಿಸುತ್ತವೆ. ಮಂತ್ರಾಶ್ಚ ಕರ್ಮಕರಣಾಃ || ಎಂಬಂತೆ ಅನುಷ್ಠಾನದಲ್ಲಿ ಕರಣತ್ವೇನ ಪರಿಗೃಹೀತವಾಗಿ ಯಾಜ್ಞಿಕ ಪ್ರಸಿದ್ಧಿಯಿಂದ ಮಂತ್ರತ್ವೇನ ಗೃಹೀತವಾದ ವೇದಭಾಗವು ಮಂತ್ರವೆನಿಸುವುದು. ಇದನ್ನು ಹೊರತುಪಡಿಸಿ ಉಳಿದೆಲ್ಲ ಭಾಗವು “ಶೇಷೇ ಬ್ರಾಹ್ಮಣಶಬ್ಧಃ” ಎಂಬಂತೆ ಬ್ರಾಹ್ಮಣ ಎನಿಸಿಕೊಳ್ಳುತ್ತದೆ. ಇದರಲ್ಲಿ ಬ್ರಾಹ್ಮಣಾನೀತಿಹಾಸಾನ್ ಪುರಾಣಾನಿ ಕಲ್ಪಾನ್ಗಾಥಾ ನಾರಾಶಾಗ್ ಂಸೀಃ -ಎಂಬಂತೆ ಪುರಾಣ, ಇತಿಹಾಸ, ಕಲ್ಪ, ಗಾಥಾ, ನಾರಾಶಂಸೀ ಎಲ್ಲವೂ ಅಂತರ್ಗತವಾಗಿವೆ. ಸಂಹಿತಾ-ಬ್ರಾಹ್ಮಣ- ಆರಣ್ಯಕ ಎಂಬುದಾಗಿ ಸ್ವತೋವಿಭಕ್ತವಾಗಿ ತನ್ನನ್ನು ತೋರಿಸಿಕೊಳ್ಳುವ ವೇದವು ಆರಣ್ಯಕವನ್ನು ಬ್ರಾಹ್ಮಣಭಾಗದಲ್ಲಿ ಆಂತರ್ಗತವಾಗಿಸಿದೆ. ಇದರಿಂದ “ಮಂತ್ರಬ್ರಾಹ್ಮಣಯೋಃ ವೇದನಾಮಧೇಯಮ್” ಎಂಬುದಾಗಿ ವೇದಲಕ್ಷಣವು ಸಂಪನ್ನವಾಗಿದೆ.

ಸಂಹಿತಾ ಮಂತ್ರಾತ್ಮಕವಾಗಿದ್ದರೆ ಬ್ರಾಹ್ಮಣ ವಿಧ್ಯರ್ಥವಾದಾತ್ಮಕವಾಗಿದೆ. ಆರಣ್ಯಕವು ಜ್ಞಾನಕಾಂಡವೆಂಬುದಾಗಿ ಪ್ರಸಿದ್ಧವಾಗಿದೆ. ತಥಾಪಿ ಕ್ವಚಿತ್ ತತ್ಪ್ರತಿಷ್ಠೇತ್ಯುಪಾಸೀತ, ತನ್ನಮ ಇತ್ಯುಪಾಸೀತ – ಇತ್ಯಾದಿ ಉಪಾಸನಾ ಭಾಗವನ್ನು, ಪ್ರವರ್ಗ್ಯ ವಿಧಿಬೋಧಕವಾಗಿ ಕರ್ಮಕಾಂಡವನ್ನು ವಿವರಿಸುತ್ತಿದೆ. ಆರಣ್ಯಕದ ಕೊನೆಯಲ್ಲಿ ಉಪನಿಷತ್ತು ಸೇರಿಕೊಂಡಿದೆ. ಆದುದರಿಂದಲೇ ಆರಣ್ಯಕೋಪನಿಷತ್ ಎಂಬ ನಾಮಧೇಯವಿದೆ. ಅರಣ್ಯಾಧ್ಯಯನಾದೇತದಾರಣ್ಯಕಮೀತೀರ್ಯತೇ | ಅರಣ್ಯಾಧ್ಯಾಯಯೋಗ್ಯತ್ವಾದಪ್ಯಾರಣ್ಯಕಮಿಷ್ಯತೇ|| ಎಂಬ ಸಾಯಣ ಭಾಷ್ಯ ವಚನದಂತೆ ಅರಣ್ಯದಲ್ಲಿ ಕುಳಿತು ಅಧ್ಯಯವ ಮಾಡಬೇಕಾಗಿರುವ ಮತ್ತು ಆರಣ್ಯರು-ಸನ್ಯಾಸಿಗಳು ಕೂಡಾ ಅಧ್ಯಯನ ಮಾಡುವುದಕ್ಕೆ ಯೋಗ್ಯವಾದ ಪವಿತ್ರವೂ, ರಹಸ್ಯವೂ ಆದ ವಿದ್ಯೆ ಆರಣ್ಯಕವಾಗಿದೆ. ಒಟ್ಟಿನಲ್ಲಿ ಸಂಹಿತಾ-ಬ್ರಾಹ್ಮಣ-ಆರಣ್ಯಕಗಳಿಂದ ಕರ್ಮ-ಜ್ಞಾನ-ಉಪಾಸನಾ ಇವು ಮೂರೂ ಬೋಧಿತವಾಗುತ್ತವೆ.

ಅನಂತಾ ವೈ ವೇದಾಃ | ಎಂಬಂತೆ ವೇದಗಳು ಅನಂಯವಾಗಿವೆ. ಈಗ ಉಪಲಬ್ಧವಿರುವುದು ಮಾತ್ರ ಸಾಂತವಾಗಿದೆ. ಏಕಶತಮಧ್ವರ್ಯುಶಾಖಾಃ, ಸಹಸ್ರವರ್ತ್ಮಾ ಸಾಮವೇದಃ, ಏಕವಿಂಶತಿಧಾ ಬಾಹ್ವೃಚ್ಯಂ, ನವಧಾsಥರ್ವಣೋ ವೇದಃ|| ಎಂಬುದಾಗಿ ಮಹಾಭಾಷ್ಯಕಾರ ಪತಂಜಲಿಗಳು ಗಣಿಸಿದ್ದಾರೆ, ಅಂದರೆ ಯಜುರ್ವೇದ ನೂರ ಒಂದು ಶಾಖೆ, ಸಾಮವೇದ ಸಹಸ್ರಶಾಖೆ, ಋಗ್ವೇದ ಇಪ್ಪತ್ತೊಂದು ಶಾಖೆ, ಅಥರ್ವಣ ಒಂಭತ್ತು ಶಾಖೆ. ಈ ಸಂಖ್ಯೆಯು ಆ ಕಾಲದಲ್ಲಿ ಪ್ರಚಲಿತವಾಗಿದ್ದ ಶಾಖಾವಿಷಯಕವಾಗಿದೆ.  ಈ ಸಂಖ್ಯಾಭಿಪ್ರಾಯವನ್ನು ಚರಣವ್ಯೂಹ ಗ್ರಂಥವೂ ತಿಳಿಸುತ್ತದೆ.ಇವುಗಳಲ್ಲಿ ಅನೇಕ ಶಾಖೆಗಳು ಲುಪ್ತವಾಗಿದ್ದು, ಬೆರಳೆಣಿಕೆಯಷ್ಟು ಮಾತ್ರ ಉಪಲಬ್ಧ ಇವೆ. ಶಾಖೆಗಳು ಉಪಲಬ್ಧವೆಂದರೆ ಗ್ರಂಥರೂಪದಲ್ಲಿ ಇದ್ದರೆ ಸಾರ್ಥಕವಾಗುವುದಿಲ್ಲ.  ಆಯಾ ಶಾಖೆಯ ಅಧ್ಯೇತೃಗಳೇ ಜೀವಂತ ಉಪಲಬ್ಧಿಯೆನಿಸುತ್ತಾರೆ.

 

ತ್ರಯೀ ಶಬ್ಧವು ಸಂಹಿತಾ-ಬ್ರಾಹ್ಮಣ-ಉಪನಿಷತ್- ಈ ಮೂರು ಅವಯವಗಳಿಂದ ಅರ್ಥವತ್ತಾಗಿದೆ. ಇವು ಮೂರು ಋಗ್ಯಜುಸ್ಸಾಮಾಥರ್ವ ರೂಪ ಚತುರ್ವೇದಗಳಲ್ಲಿಯೂ ಸಮಾನವಾಗಿವೆ. ಕ್ವಚಿತ್ ಋಗ್ಯಜುಸ್ಸಾಮ ಎಂಬುದಾಗಿ ವೇದತ್ರಯಗಳು ತ್ರಯೀ ಎನಿಸುತ್ತವೆ. ಪ್ರಸಂಗವಶಾತ್ ಈ ಅರ್ಥವು ಸಾಧುವೇ. ಆದರೂ ಋಗ್ ಲಕ್ಷಣಬಾಹುಲ್ಯವಿರುವ ಅಥರ್ವ ವೇದವನ್ನು ತ್ರಯೀಬಹಿರ್ಭೂತವೆಂದು ಕಲ್ಪಿಸುವುದು ಅನುಚಿತ.

 

ಛಂದೋನೀಯತತ್ವ, ಗೀತಿರೂಪತ್ವ, ವೃತ್ತಗೀತಿವರ್ಜಿತತ್ವೇನ ಪ್ರಶ್ಲಿಷ್ಟ ಪಠಿತತ್ವ- ಈ ಪ್ರಕಾರ ಲಕ್ಷಣೋಪೇತವಾಗಿರುವ ಋಕ್  ಸಾಮಯಜುರ್ವೇದಗಳು ಲಕ್ಷಣಾವಶಾತ್ ಭಿನ್ನವಾಗಿಯೇ ಹೊರತು ತಾತ್ವಿಕವಾಗಿ ಒಂದೇ ಆಗಿವೆ. ಕೃಷ್ಣದ್ವೈಪಾಯನರು ಜಗದುಪಕಾರಾರ್ಥವಾಗಿ ಏಕೀಭೂಯಾಸ್ಥಿತವಾದ ವೇದವನ್ನು ಚತುರ್ಧಾ ವಿಭಾಗಿಸಿದರು. “ಸಕಲವೇದಪರಿಪಾಲನಂ ತು ಅಶಕ್ಯಮೇಕೇನ ಪುರುಷೇಣ ಇತಿ ಶಾಖಾಬೇಧ ಪ್ರವೃತ್ತಿಃ” ಎಂಬುದಾಗಿ ಭಟ್ಟಭಾಸ್ಕರರು ಶಾಖಾಬೇಧಕ್ಕೆ ಯುಕ್ತಿಯನ್ನು ನೀಡಿರುತ್ತಾರೆ.

ಈ ಪ್ರಕಾರ ಶಾಖಾಬೇಧದಿಂದ ವೇದಪರಿಪಾಲನೆಯು ಸುಲಭವಾಗಿವೆ. ಸ್ವಶಾಖೆಯ ಅಧ್ಯಯನದಿಂದಲೇ ‘ಸ್ವಾಧ್ಯಾಯೋsಧ್ಯೇತವ್ಯಃ’ – ಎಂಬ ಅಧ್ಯಯನ ವಿಧಿಯು ನಿರಾಕಾಂಕ್ಷವಾಗುವುದು. ಅಧ್ಯಯನ ವಿಧಿಯು ಅರ್ಥಜ್ಞಾನ ಪರ್ಯಾವಸಾಯಿಯೇ ಹೊರತು ಕೇವಲ ಅಕ್ಷರಗ್ರಹಣಕ್ಕೆ ಸೀಮಿತವಾಗಿಲ್ಲ.

 

ಆದುದರಿಂದಲೇ “ಬ್ರಾಹ್ಮಣೇನ ನಿಷ್ಕಾರಣೋ ಧರ್ಮಃ ಷಡಂಗೋ ವೇದೋsಧ್ಯೇಯೋ ಜ್ಞೇಯಶ್ಚ| ಎಂಬುದಾಗಿ ಪತಂಜಲಿ ಮಹರ್ಷಿಗಳ ಮಹಾಭಾಷ್ಯ ವಚನದಂತೆ ಪ್ರತಿಯೊಬ್ಬ ಬ್ರಾಹ್ಮಣನು ಫಲಾಪೇಕ್ಷೆ ಇಲ್ಲದೆ ಮಹಿಮಾತಿಶಯಯುತವಾದ ಸಾಂಗವೇದವನ್ನು ಅಧ್ಯಯನ ಮಾಡಬೇಕು. ಇದು ಅನುಲ್ಲಂಘನೀಯ ಶಾಸ್ತ್ರನಿಯಮವಾಗಿದೆ.

ಕೃಷ್ಣ ಯಜುರ್ವೇದ

“ಏಕಶತಮಧ್ವರ್ಯುಶಾಖಾಃ” – ಎಂಬುದಾಗಿ ನೂರ ಒಂದು ಶಾಖಾತ್ಮಕವಾಗಿರುವ ಅಧ್ವರ್ಯುವೇದವೇ ಯಜುರ್ವೇದ. ಹಿಂದೆ ಹೇಳಿದಂತೆ ಋಕ್ ಮತ್ತು ಸಾಮಗಳಿಂದ ಭಿನ್ನವಾಗಿ ಅನಿಯತಾಕ್ಷರಾವಸಾನವಾಗಿ, ಪ್ರಶ್ಲಿಷ್ಟಪಠಿತವಾಗಿರುವ ಮಂತ್ರಸಮೂಹವೇ ಯಜುಸ್ಸು ಎನಿಸಿಕೊಳ್ಳುತ್ತದೆ. ಈ ಪ್ರಕಾರ ಯಜುರ್ಮಂತ್ರಗಳ ಬಾಹುಲ್ಯವಿರುವ ಶಾಖೆಯೇ ಯಜುರ್ವೇದ. ಇಲ್ಲಿ ಋಕ್ಕುಗಳೂ, ಸಾಮಗಳೂ ಸೇರಿಕೊಂಡಿವೆ. ಯಜುರ್ವೇದವು ಶುಕ್ಲ-ಕೃಷ್ಣ ಎಂಬುದಾಗಿ ದ್ವಿಧಾ ವಿಭಕ್ತವಾಗಿದ್ದು, ಶುಕ್ಲಯಜುರ್ವೇದದಲ್ಲಿ ಮಂತ್ರ- ಬ್ರಾಹ್ಮಣಗಳು ವ್ಯವಸ್ಥಿತವಾಗಿ ಕಂಡುಬರುತ್ತಿವೆ. ಇದರಲ್ಲಿ ಕಾಣ್ವ- ಮಾಧ್ಯಂದಿನ ಎಂದು ಎರಡು ಶಾಖೆಗಳಿವೆ.

ಕೃಷ್ಣ ಯಜುರ್ವೇದದಲ್ಲಿ ತೈತ್ತಿರೀಯ, ಮೈತ್ರಾಯಣೀಯ, ಕಾಠಕ ಎಂದು ಮೂರು ಶಾಖೆಗಳು ಉಪಲಬ್ಧಿಯಿವೆ. ಇದರಲ್ಲಿ ತೈತ್ತಿರೀಯ ಶಾಖಾಧ್ಯಾಯಿಗಳು ಭಾರತದಾದ್ಯಂತ- ತತ್ರಾಪಿ ದಕ್ಷಿಣ ಭಾರತದಲ್ಲಿ ಬಹಳ ಮಂದಿ ಇದ್ದಾರೆ. ಚರಣವ್ಯೂಹ ಗ್ರಂಥವು ತೈತ್ತಿರೀಯ ಶಾಖೆಯ ಬಗ್ಗೆ ಈ ಮುಂದಿನಂತೆ ತಿಳಿಸಿದೆ.

“ತೈತ್ತಿರೀಯಕಾ ನಾಮ ದ್ವಿಭೇದಾ ಭವಂತಿ | ಔಖ್ಯಾಃ, ಖಾಂಡಿಕೇಯಾಶ್ಚೇತಿ|ತತ್ರ ಖಾಂಡಿಕೇಯಾ ನಾಮ ಪಂಚಭೇದಾ ಭವಂತಿ| ಆಪಸ್ತಂಭಾಃ, ಬೋಧಾಯನಾಃ, ಸತ್ಯಾಷಾಢಾಃ,

ಹೈರಣ್ಯಕೇಶಾಃ, ಕಾಣ್ವಾಯಾನಾಶ್ಚೇತಿ|”

ತೈತ್ತಿರೀಯ ಈ ಭೇದವು ಸೂತ್ರಾನುಸಾರಿಯೇ ಹೊರತು, ಎಲ್ಲಾ ಸೂತ್ರದವರಿಗೂ ಸಂಹಿತಾ-ಬ್ರಾಹ್ಮಣ-ಆರಣ್ಯಕಗಳು ಒಂದೇ ಆಗಿದೆ.

ಯಜುರ್ವೇದದ ಕೃಷ್ಣತ್ವದ ಬಗ್ಗೆ ಕೆಲವು ಮತಗಳಿವೆ.

ವೇದೋಪಕ್ರಮಣೇ ಚತುರ್ದಶೀಯುಕ್ತಪೂರ್ಣಿಮಾಗ್ರಹಣಾತ್ ಶುಕ್ಲ ಯಜುಃ ಪ್ರತಿಪದ್ಯುಕ್ತಪೂರ್ಣಿಮಾಗ್ರಹಣಾತ್, ಕೃಷ್ಣಯಜುರಿತಿ| ತೈತ್ತಿರೀಯರಿಗೆ ಉಪಾಕರ್ಮವು ಶ್ರಾವಣಪೂರ್ಣಿಮೆಯಂದು ವಿಹಿತವಾಗಿದೆ. ಚತುರ್ದಶೀ ಸಹಿತವಾದ ಪೂರ್ಣಿಮೆಯಂದು ಕೆಲವರು ವೇದಾರಂಭಮಾಡಿದರೆ, ಕೆಲವರು ಮುಂದಿನ ದಿನ ಅಂದರೆ ಪ್ರತಿಪತ್ಸಹಿತವಾದ ಹುಣ್ಣಿಮೆಯಂದು ವೇದಾರಂಭವನ್ನಾಚರಿಸುತ್ತಾರೆ. ಚತುರ್ದಶೀಯುಕ್ತವಾದರೆ ಶುಕ್ಲಪಕ್ಷದಲ್ಲಿ ವೇದಾರಂಭ ಮಾಡಿದಂತಾಗುವುದು. ಪ್ರತಿಪತ್ಸಹಿತವಾದ ಹುಣ್ಣಿಮೆಯಂದು ಮಾಡಿದ ವೇದಾರಂಭ ಕೃಷ್ಣಪಕ್ಷದಲ್ಲಿ ಆಚರಿಸಿದಂತಾಗುವುದು. ಈ ಪ್ರಕಾರ ಕೃಷ್ಣಪಕ್ಷದ ಸ್ಪರ್ಶದಿಂದ ಅಂದರೆ ಪ್ರತಿಪದ್ಯುಕ್ತ ಪೂರ್ಣಿಮೆಯಂದು ವೇದಾರಂಭವನ್ನಾಚರಿಸುವವರು ಕೃಷ್ಣಯಜುರ್ವೇದೀಯರು, ಅವರು ಅಧ್ಯಯನ ಮಾಡುವ ವೇದ ಕೃಷ್ಣಯಜುರ್ವೇದ ಎನಿಸಿದೆ.

 

ಅಗ್ನ್ಯಾಧಾನಾನಂತರದಲ್ಲಿ ದರ್ಶ-ಪೂರ್ಣಾಮಾಸೇಷ್ಟಿಗಳನ್ನು ಮಾಡುವಾಗ ಕೃಷ್ಣಯಜುಃಶಾಖೆಯವರು ಪೂರ್ಣಮಾಸೇಷ್ಟಿಯಿಂದ ಇಷ್ಟಾರಂಭ ಮಾಡುತ್ತಾರೆ.  ಪೂರ್ಣಿಮೆಯ ನಂತರದಲ್ಲಿ ಕೃಷ್ಣಪಕ್ಷ ಬರುವುದರಿಂದ ಚಂದ್ರನ ಕ್ಷಯದಂತೆ ಯಜಮಾನನಿಗೆ ಬರುವ ದೋಷದ ನಿವೃತ್ತಿಗಾಗಿ ಸಾರಸ್ವತ ಹೋಮವನ್ನು ಮಾಡುತ್ತಾರೆ. ಈ ಪ್ರಕಾರ ಪೂರ್ಣಮಾಸೇಷ್ಟಿಯ ನಂತರದಲ್ಲಿ, ಕೃಷ್ಣಪಕ್ಷಾರಂಭವಾಗುವುದರಿಂದ, ಈ ಕ್ರಮದಲ್ಲಿ ಅನುಷ್ಠಿಸುವವರ ಸಂಬಂಧೀ ಶಾಖೆಯು ಕೃಷ್ಣಯಜುರ್ವೇದ ಎನಿಸಿದೆ.

ಬುದ್ಧಿಮಾಲಿನ್ಯಹೇತುತ್ವಾನ್ ತದ್ಯಜುಃ ಕೃಷ್ಣಮೀರ್ಯತೇ|
ವ್ಯವಸ್ಥಿತಪ್ರಕರಣಂ ತದ್ಯಜುಃ ಶುಕ್ಲಮೀರ್ಯತೇ |

 

ಮಂತ್ರ- ಬ್ರಾಹ್ಮಣಗಳು ವ್ಯವಸ್ಥಿತವಾಗಿರದೆ, ಮಿಶ್ರವಾಗಿದ್ದು, ತಿಳಿದುಕೊಳ್ಳಲು ಕಷ್ಟಸಾಧ್ಯವಾಗಿರುವುದರಿಂದ – ಈ ಪ್ರಕಾರದ ಯಜುಸ್ಸಮೂಹವು ಕೃಷ್ಣಯಜುರ್ವೇದ ಎನಿಸಿದೆ.

 

ಕೃಷ್ಣಯಜುರ್ವೇದದ ತೈತ್ತಿರೀಯ ಶಾಖಾಧ್ಯಯನದಲ್ಲಿ ಸಾರಸ್ವತಪಾಠವು ವಿಹಿತವಾಗಿದೆ, ಸಾಂಪ್ರದಾಯಿಕವಾಗಿದೆ. ಇಲ್ಲಿ ಮಂತ್ರ-ಬ್ರಾಹ್ಮಣಗಳ ಸಾಂಕರ್ಯವಿದೆ. “ಅಪಿ ಸಾರಸ್ವತೇ ಪಾಠೇ ಜ್ಞಾನಮಾತ್ರಮಿಹೇಷ್ಯತೇ” – ಎಂಬಂತೆ ಮಂತ್ರ-ಬ್ರಾಹ್ಮಣ ವಿವೇಕಾರ್ಥವಾಗಿ ಕಾಂಡಾನುಕ್ರಮಣಿಕಾ ಪಾಠವನ್ನು ತಿಳಿಯಬೇಕು. ಇದಕ್ಕೆ ಬೋಧಾಯನ-ಆಪಸ್ತಂಬ ಹಿರಣ್ಯಕೇಶೀಯ ಗೃಹ್ಯಸೂತ್ರಗಳು ಆಧಾರವಾಗಿವೆ.

ತಿತ್ತಿರಿಣಾ ಪ್ರೋಕ್ತಂ – ತೈತ್ತಿರೀಯಂ |
ತೇನ ಪ್ರೋಕ್ತಂ (ಪಾಣಿನಿ ಸೂತ್ರ – 4-3-101)
ತಿತ್ತಿರಿ-ವರತಂತು-ಛಣ್ (ಪಾಣಿನಿ ಸೂತ್ರ 4-3-102)

ಈ ಸೂತ್ರಗಳಂತೆ ಆಚಾರ್ಯ ತಿತ್ತಿರಿಯು ವಿಶೇಷವಾಗಿ ಈ ಶಾಖೆಯನ್ನು ಪ್ರವಚನ ಮಾಡಿದ್ದರಿಂದ ತೈತ್ತಿರೀಯ ಎಂಬ ಹೆಸರು ಬಂದಿತು.

ಅಧ್ವರ್ಯು ರ್ವಾ ಋತ್ವಿಜಾಂ ಪ್ರಥಮೋ ಯುಜ್ಯತೇ, ತೇನ ಸ್ತೋಮೋ ಯೋಕ್ತವ್ಯ ಇತ್ಯಾಹುಃ ||

ಎಂಬಂತೆ ಯಜ್ಞದಲ್ಲಿ ಪ್ರಥಮವಾಗಿ ಅಧ್ವರ್ಯುವರಣವನ್ನು ಮಾಡುತ್ತಾರೆ. ಅವನು ಋತ್ವಿಗ್ಗಣವನ್ನು ಮುಂದೆ ಒಯ್ಯುವವನಾಗಿರುತ್ತಾನೆ. ಈ ಪ್ರಕಾರ ಅಧ್ವರ್ಯುವು ವಿಷಯಕ ಯಜ್ಞಪ್ರಕ್ರಿಯೆಯು ಈ ಶಾಖೆಯಲ್ಲಿ ಪ್ರಧಾನವಾಗಿಯೂ, ವಿಸ್ತಾರವಾಗಿಯೂ ಬಂದಿರುವುದರಿಂದ ಕೃಷ್ಣಯಜುರ್ವೇದವು ಅಧ್ವರ್ಯುವೇದ ಎಂದು ಪ್ರಸಿದ್ಧವಾಗಿದೆ.

ಯುಗಾಂತೇsನ್ತರ್ಹಿತಾನ್ ವೇದಾನ್ ಸೇತಿಹಾಸಾನ್ ಮಹರ್ಷಯಃ |
ಲೇಭಿರೇ ತಪಸಾ ಪೂರ್ವಮನುಜ್ಞಾತಾಃ ಸ್ವಯಂಭುವಾ||

ಮಹರ್ಷಿಗಳು ಕಲ್ಪಾದಿಯಲ್ಲಿ ಬ್ರಹ್ಮನಿಂದ ಅನುಜ್ಞಾತರಾಗಿ, ಯುಗಾಂತದಲ್ಲಿ ನಿಗೂಹಿತವಾಗಿದ್ದ ಇತಿಹಾಸ ಸಹಿತವಾದ ವೇದಗಳನ್ನು ತಪೋಬಲದಿಂದ ದರ್ಶನ ಮಾಡಿಕೊಂಡರು. ಇಂತಹ ಸತ್ವಯುತವಾದ ವೇದಗಳು ನಮಗೆಲ್ಲಾ ದಾರಿದೀಪಗಳಾಗಲಿ.

||ಸ್ವಸ್ತಿ ನೋ ಬೃಹಸ್ಪತಿರ್ದಧಾತು||

~*~

 

Facebook Comments