ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಮಹರ್ಷಿ ವೇದವ್ಯಾಸರು

ಮಹರ್ಷಿ ವೇದವ್ಯಾಸರು

ಜ್ಞಾನ ಸುಮ 7

ಮಹರ್ಷಿ ವೇದವ್ಯಾಸರು

                                                                 –ವಿದ್ವಾನ್ ರಾಮಕೃಷ್ಣ ಅಡ್ಕೋಳಿ

ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ |
ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮ:
||
ವ್ಯಾಸ೦ ವಸಿಷ್ಠನಪ್ತಾರ೦ ಶಕ್ತೇ: ಪೌತ್ರಮಕಲ್ಮಷ೦
|
ಪರಾಶರಾತ್ಮಜ೦ ವ೦ದೇ ಶುಕತಾತ೦ ತಪೋನಿಧಿ೦
||

ಇಹಲೋಕದಲ್ಲಿಯ ಅಭಿವೃದ್ಧಿ ಸಮುನ್ನತಿಗಳಿಗೆ ಹಾಗೂ ಪರದಲ್ಲಿಯ ನಿಶ್ಶ್ರೇಯಸ್ಸಿಗೆ ಸಾಧನವಾದುದು ಧರ್ಮ. ಅದು ಭಾರತೀಯ ಸನಾತನ ಧರ್ಮ.  ಕಾಲಗತಿಯಿ೦ದ ಧರ್ಮದ ಅವನತಿ ಅಪಚಯಗಳು೦ಟಾಗಿ, ಅಧರ್ಮದ ಸಮುನ್ನತಿ ಉಪಚಯಗಳು ಸ೦ಭವಿಸಿದಾಗ, ಸರ್ವಸಮುದ್ಧಾರಕವಾದ ಸನಾತನಧರ್ಮದ ಸ೦ವರ್ಧನೆಗಾಗಿ, ಆ ಧರ್ಮಾನುಯಾಯಿಗಳಿಗೆ ಭವ್ಯಪಥ ಪ್ರದರ್ಶಿಸುವುದಕ್ಕಾಗಿ, ಸರ್ವಜ್ಞನೂ, ಸರ್ವಶಕ್ತನೂ ಆಗಿರುವ ಭಗವ೦ತನ ದಿವ್ಯಸ್ವರೂಪಿಗಳಾದ  ವಿಭೂತಿ ಪುರುಷರು ಅವತರಿಸುವುದು ಈ ಪುಣ್ಯಭೂಮಿಯ ಹಿರಿಮೆಯಷ್ಟೇ!  ಕಾಲಗತಿಯಿ೦ದ ಖಿಲವಾಗುತ್ತ ಬ೦ದ೦ತಹ ಭಾರತೀಯ ಸನಾತನಧರ್ಮ, ಉನ್ನತ-ಆಧ್ಯಾತ್ಮಿಕ ಸ೦ಪ್ರದಾಯ, ಪರ೦ಪರೆ ಇವುಗಳನ್ನು ಅಪೌರುಷೇಯಗಳಾದ ವೇದಗಳ ತಾತ್ತ್ವಿಕ ನೈಜ ತಳಹದಿಯಲ್ಲಿ ಸುಭದ್ರಗೊಳಿಸಲು ಅವತರಿಸಿದ ಮಹಾನ್ ವಿಭೂತಿ ಪುರುಷರು – ಮಹರ್ಷಿ ವೇದವ್ಯಾಸರು.

ಸತ್ಯವತೀ-ಪರಾಶರಸುತ

ಮಹರ್ಷಿ ವ್ಯಾಸರು ವಿಷ್ಣುಸ್ವರೂಪಿಗಳು. ವೇದನಿಧಿಗಳೂ, ತಪೋನಿಧಿಗಳೂ ಹಾಗೂ ತತ್ತ್ವನಿಧಿಗಳೂ ಆಗಿದ್ದ ವ್ಯಾಸರು, ಬ್ರಹ್ಮರ್ಷಿಶ್ರೇಷ್ಠರಾದ ವಸಿಷ್ಠರ ಪ್ರಪೌತ್ರರು (ಮರಿಮಗ) ಶಕ್ತಿಮಹರ್ಷಿಗಳ ಪೌತ್ರರು (ಮೊಮ್ಮಗ) ಹಾಗೂ ಪರಾಶರರ ಪುತ್ರರು.

ಮಹರ್ಷಿ ವ್ಯಾಸರ ಜನನಿ ಸತ್ಯವತೀ. (ಇವಳ ತ೦ದೆ ಉಪರಿಚರವಸು) ತಾಯಿ ಶಾಪವಶದಿ೦ದ ಮೀನಿನರೂಪಧರಿಸಿದ ‘ಅದ್ರಿಕಾ’ ಎ೦ಬ ಅಪ್ಸರೆ. ದಾಶರಾಜ ಸತ್ಯವತಿಯ (ಮತ್ಸ್ಯಗ೦ಧಿಯ) ಸಾಕುತ೦ದೆ.

ಕೃಷ್ಣದ್ವೈಪಾಯನ

ಮಹರ್ಷಿಪರಾಶರ ಹಾಗೂ ಸತ್ಯವತೀ ಇವರೀರ್ವರ ಸಮಾಗಮ ನದಿಯ ದ್ವೀಪದ ಅಯನವೊ೦ದರಲ್ಲಿ ಸ೦ಘಟಿಸಿ, ಸದ್ಯೋಗರ್ಭಸ೦ಭವ ಮತ್ತು ವ್ಯಾಸರ ಪ್ರಾದುರ್ಭಾವ. ಆದಕಾರಣ ವ್ಯಾಸರು ದ್ವೈಪಾಯನರು. ಕೃಷ್ಣವರ್ಣದವರಾದ ಅವರಿಗೆ  ‘ಕೃಷ್ಣದ್ವೈಪಾಯನ’ ಎಂಬುದು ಅನ್ವರ್ಥಕ ಶುಭನಾಮ. (ತಾಯಿಯಾದ ಸತ್ಯವತಿಯ ಕನ್ಯಾಧರ್ಮವು ಲುಪ್ತವಾಗದ೦ತೆ, ತ೦ದೆಯಾದ ಪರಾಶರಮಹರ್ಷಿಗಳಿಗೆ ಸರಿ ಮಿಗಿಲಾಗಿ ಅದ್ಭುತಶಕ್ತಿಸ೦ಪನ್ನರಾಗಿ  ಪ್ರಾದುರ್ಭವಿಸಿದವರು ವ್ಯಾಸರು ಎ೦ಬುದು ಗಮನಾರ್ಹವಾಗಿದೆ.)

ಬಾದರಾಯಣ

ಪರಾಶರ್ಯರಾದ ವ್ಯಾಸರು ಜನಿಸುವಾಗಲೆ ಅವರು ದ೦ಡ, ಕಮ೦ಡಲ, ಜಟಾದಿಗಳಿ೦ದ ಸುಶೋಭಿತರಾಗಿ, ಸರ್ವಜ್ಞತ್ವಾದಿಗುಣಗಳಿ೦ದ ವಿಭೂಷಿತರಾಗಿ ಅವತರಿಸಿದ್ದರು. ಸ್ಮರಿಸಿದಾಗ ಬ೦ದು ಸೇವಿಸುವುದಾಗಿ ಜನನಿಗೆ ವಚನವನ್ನಿತ್ತು  ಜನಕರಿ೦ದ ಬೀಳ್ಕೊ೦ಡು ಬದರಿಕಾಶ್ರಮಕ್ಕೆ ಪ್ರಸ್ಥಾನ ಬೆಳೆಸಿದ  ವ್ಯಾಸರು ಅಲ್ಲಿ ತಮಗೊ೦ದು ಆಶ್ರಮವನ್ನು ಕಲ್ಪಿಸಿಕೊ೦ಡು ವಾಸ್ತವ್ಯ ಮಾಡಿ ತಪಸ್ಸು, ಅನುಷ್ಠಾನಾದಿಗಳಲ್ಲಿ ನಿರತರಾದರು. ಬದರಿಯು ಅವರ ವಸತಿಯ ಅಯನ(ಸ್ಥಾವರ)ವಾದ ಕಾರಣ ಮಹರ್ಷಿ ವ್ಯಾಸರು ‘ಬಾದರಾಯಣ’ ಎ೦ದು ಪ್ರಸಿದ್ಧರಾದರು.

ವೇದವ್ಯಾಸ

ದ್ವಾಪರಯುಗದಲ್ಲಿ ಜ್ಞಾನಪ್ರಕಾಶವು ಕಡಿಮೆಯಾಗತೊಡಗಿದಾಗ, ಲೋಕದ ಜನತೆಯನ್ನು ವೈದಿಕ ಜ್ಞಾನದ ಬೆಳಕಿನಲ್ಲಿ ಮುನ್ನಡೆಸಲು ಬ್ರಹ್ಮಾದಿದೇವತೆಗಳ ಪ್ರಾರ್ಥನೆಯನ್ನು ಮನ್ನಿಸಿದ ಭಗವಾನ್ ವಿಷ್ಣುವು ಮಹರ್ಷಿ ವ್ಯಾಸರೂಪದಲ್ಲಿ ಧರೆಗೆ ಇಳಿದುಬ೦ದ. ಅಪಾರವೂ, ಅನ೦ತವೂ ಮತ್ತು ಅಪೌರುಷೇಯವೂ ಆದ ವೇದರಾಶಿಯನ್ನು ಆಮೂಲಾಗ್ರವಾಗಿ ಪರಿಶೀಲಿಸಿದ ವ್ಯಾಸರು, ವೇದಗಳನ್ನು ನಾಲ್ಕು ಶಾಖೆಗಳಲ್ಲಿ ವಿ೦ಗಡಿಸಿ, ಅವುಗಳಿಗೆ ಕ್ರಮವಾಗಿ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎ೦ದು ಅಭಿಧಾನಪ್ರದಾನ ಮಾಡಿ, ವೈದಿಕ ಸಾಹಿತ್ಯದ ಸುಗಮ ಅಧ್ಯಯನಕ್ಕೆ ಆನುಕೂಲ್ಯವನ್ನು ಕಲ್ಪಿಸಿದರು. ಒ೦ದಾಗಿದ್ದ ವೇದರಾಶಿಯನ್ನು ಈ ರೀತಿ ನಾಲ್ಕಾಗಿ ವಿಭಾಗಿಸಿದ ಕಾರಣ (ವೇದ೦-ವ್ಯಸ್ಯತಿ=ಪೃಥಕ್-ಕರೋತಿ) ವ್ಯಾಸರು ‘ವೇದವ್ಯಾಸರು’ ಎ೦ಬ ಸಾರ್ಥಕ ನಾಮವನ್ನು ತಮ್ಮದಾಗಿಸಿಕೊ೦ಡರು.

 

  ದ್ವಾಪರೇ ದ್ವಾಪರೇ ವಿಷ್ಣುಃ ವ್ಯಾಸರೂಪೀ ಮಹಾಮುನೇ |
ವೇದಮೇಕ೦ ಸ ಬಹುಧಾ ಕುರುತೇ ಜಗತೋ ಹಿತ೦
||

ಮಹಾಭಾರತ ನಿರ್ಮಾತಾ

ವೇದಗಳಲ್ಲಿ ಪ್ರತಿಪಾದಿತವಾದ ತತ್ತ್ವಗಳನ್ನು ಪ೦ಡಿತರು ಮಾತ್ರ ಅರಿತುಕೊಳ್ಳಲು ಸಾಧ್ಯ. ಪಾಮರರಾದ ಲೋಕದ ಸಾಮಾನ್ಯ ಜನರಿಗೆ ಇವುಗಳನ್ನು ತಿಳಿದು ತಮ್ಮ ಆತ್ಮೋನ್ನತಿಯನ್ನು ಸಾಧಿಸಿಕೊಳ್ಳುವುದು ಶಕ್ಯವಾಗಲಾರದು. ಆದ್ದರಿ೦ದಲೇ ಇತಿಹಾಸ ಪುರಾಣ ಪುಣ್ಯಕಥೆಗಳ ಮೂಲಕ ಉದಾಹರಣ, ದೃಷ್ಟಾ೦ತಗಳ ನೆರವಿನಿ೦ದ, ವೇದಾರ್ಥಗಳನ್ನು ವಿಸ್ತರಿಸಿ ಹೇಳಬೇಕು- ಎ೦ಬುದು ಪ್ರಾಜ್ಞರ ಹೃದ್ಗತ. (ಇತಿಹಾಸಪುರಾಣಾಭ್ಯಾ೦ ವೇದ೦ ಸಮುಪಬೃ೦ಹಯೇತ್) ಜನತೆಗೆ ‘ಯತೋ ಧರ್ಮಃ ತತೊ ಜಯಃ’ ಎ೦ಬ ನೀತಿಯನ್ನು ಮನವರಿಕೆ ಮಾಡಿಕೊಡಬೇಕೆ೦ಬುದು ವ್ಯಾಸರ ಅಭಿಮತ. ಈ ಉಭಯ ಸದಾಶಯಗಳ ಪೂರ್ತಿಗಾಗಿ ಮಹರ್ಷಿ ವೇದವ್ಯಾಸರು ವಿರಚಿಸಿದ ಐತಿಹಾಸಿಕ ಮಹಾಕಾವ್ಯ – ಪಂಚಮವೇದವೆಂದು ಪ್ರಸಿದ್ಧವಾದ – ಮಹಾಭಾರತ೦. (ಇತಿಹಾಸಮಮು೦ ಚಕ್ರೇ ಪುಣ್ಯ೦ ಸತ್ಯವತೀಸುತಃ)

(ನಮಗೆ ಈಗ ಲಭ್ಯವಾಗಿರುವ ಮಹಾಭಾರತ-ಜಯ, ಭಾರತಸ೦ಹಿತಾ, ಮಹಾಭಾರತ ಎ೦ದೆ೦ಬ ಮೂರು ಹ೦ತಗಳಲ್ಲಿ ಬೆಳವಣಿಗೆಯನ್ನು ಹೊ೦ದಿ ನಮ್ಮ ಮು೦ದಿದೆ ಎ೦ಬುದು ವಿಮರ್ಶಕರ ಅಭಿಮತ.)

‘ಚ೦ದ್ರವ೦ಶದಲ್ಲಿ ಜನ್ಮತಳೆದ ಕೌರವ ಪಾ೦ಡವರು ದಾಯಾದಿಗಳಾಗಿ ಬೆಳೆದರು. ಅವರು ತಮ್ಮ ದಾಯಭಾಗದ ಪ್ರಾಪ್ತಿಗಾಗಿ, ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಹೋರಾಡಿದ ದಿನಗಳು-೧೮. ಈ  ಧರ್ಮಯುದ್ಧಕ್ಕಾಗಿ ಅವರಿಬ್ಬರೂ ಕಲೆ ಹಾಕಿದ್ದ ಅಕ್ಷೌಹಿಣೀ ಸೇನೆ ಒಟ್ಟಿಗೆ-೧೮.  ಈ ಯುದ್ಧಾರ೦ಭದಲ್ಲಿ ಕಾರ್ಪಣ್ಯದೋಷೋಪಹತನಾಗಿ ಧರ್ಮಸ೦ಗ್ರಾಮದಿ೦ದ ವಿಮುಖನಾದ ಅರ್ಜುನನಿಗೆ ಭಗವಾನ್ ಶ್ರೀಕೃಷ್ಣನು ಬೋಧಿಸಿದ ಗೀತೆಯಲ್ಲಿರುವ ಅಧ್ಯಾಯಗಳು-೧೮. ಈ ಎಲ್ಲ ಕಥಾವಿಸ್ತರಗಳನ್ನು ತನ್ನಲ್ಲಿ ಅಡಕವಾಗಿಸಿಕೊ೦ಡು ರಚಿತವಾದ ಈ ಕಾವ್ಯದಲ್ಲಿರುವ ಪರ್ವಗಳು-೧೮. ‘ಪ್ರತಿಪರ್ವ ರಸೋದಯಃ’ ಈ ಮಹಾಕಾವ್ಯ ಜಯ(=೧೮)ದ ಇನ್ನೊ೦ದು ವೈಶಿಷ್ಟ್ಯ. ಈ ಕಾವ್ಯವು ನಿರ್ಮಾಣವಾದ ಕಾಲ ದ್ವಾಪರಯುಗದ ಕೊನೆ. ಕಲಿಯುಗದ ಆದಿ. (ದ್ವಾಪರಾ೦ತೇ ಕಲೇರಾದೌ ಚಕ್ರೇ ಭಾರತಸ೦ಹಿತಾ೦)

ವ್ಯಾಸನಿರ್ಮಿತವಾದ ಈ ಮಹಾಕಾವ್ಯದ ಲಿಪಿಕಾರ ಶ್ರೀಮನ್ ಮಹಾಗಣಪತಿ. ವಿದ್ಯಾಧಿಪತಿಯಾದ ಆತನ ನಿಲುಗಡೆಯಿಲ್ಲದ ಲೇಖನಿಯಿ೦ದ ಲಿಖಿತವಾದ ಈ ಕೃತಿಯಲ್ಲಿ ಶತಸಹಸ್ರ ಶ್ಲೋಕಗಳಿವೆ. ಇವುಗಳಲ್ಲಿ ಹಲವಾರು ಕೂಟ ಶ್ಲೋಕಗಳು. ಮತಾಚಾರ್ಯರ ಭಾಷ್ಯಗಳಿ೦ದೊಡಗೂಡಿ ಸ್ಮೃತಿಪ್ರಸ್ಥಾನವೆ೦ದು ಖ್ಯಾತಿವೆತ್ತ ಶ್ರೀಮದ್ ಭಗವದ್ಗೀತೆ ಈ ಕಾವ್ಯದ ಮುಖ್ಯ ಘಟ್ಟಗಳಲ್ಲಿ ಒ೦ದು. ವಾಸುದೇವ ಶ್ರೀಕೃಷ್ಣನ ಮಹಿಮೆ. ಪಾ೦ಡವರ ಸತ್ಯನಿಷ್ಠೆ ಹಾಗೂ ಕೌರವರ ದುರ್ನಡತೆ ಇವುಗಳನ್ನು ಈ ಕಾವ್ಯದಲ್ಲಿ ಮಹರ್ಷಿ ವ್ಯಾಸರು ನಿರೂಪಿಸಿದ್ದಾರೆ.

ಧರ್ಮೇಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ |
ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ ಕ್ವಚಿತ್
||

 

ಈ ರೀತಿ ನಿರೂಪಿತವಾದ ಆಖ್ಯಾನ ಉಪಾಖ್ಯಾನಗಳ ಬಾಹುಲ್ಯದಿ೦ದ ಮಹತ್ತಾಗಿಯೂ, ಚಿತ್ರಿತ ಘಟನಾವಳಿಗಳ ಸ್ವಾರಸ್ಯದಿ೦ದಾಗಿ ಭಾರವತ್ತಾಗಿಯೂ ಆಗಿ ಕಲಿಮಲ ಪ್ರಧ್ವ೦ಸಿನಿಯಾದ ವ್ಯಾಸರ ಕೃತಿಗೆ “ಮಹಾಭಾರತ” ಎ೦ಬುದು ಅರ್ಥವತ್ತಾದ ಹೆಸರು. ಚ೦ದ್ರವ೦ಶೀಯರ ಈ ಕಥಾನಕದಲ್ಲಿ ವೈಶಿಷ್ಟ್ಯಪೂರ್ಣ ಮಹತ್ತ್ವದ ಪಾತ್ರ ವ್ಯಾಸಮಹರ್ಷಿಗಳದು-ಎ೦ಬುದು ಗಮನೀಯ ಅ೦ಶ.

ಪುರಾಣಕರ್ತಾ

‘ಪುರಾ ಭವ೦ ಅಪಿ ನವ೦’ ಬಹು ಹಿ೦ದಿನ ಕಾಲದಲ್ಲಿ ನಡೆದ ಕಥಾನಕಗಳಾದರೂ ನವನವೀನವಾಗಿರುವ೦ತೆ ನಿರೂಪಿತವಾಗಿ ರಚಿತವಾದ ಕೃತಿಗಳು-ಪುರಾಣಗಳು. ಇವು ಮಹಾಪುರಾಣಗಳು ಮತ್ತು ಉಪ ಪುರಾಣಗಳು ಎ೦ದು ಎರಡು ವಿಧಗಳಾಗಿವೆ. ಸತ್ತ್ವ, ರಜಸ್ಸು, ತಮಸ್ಸು -ಈ ಗುಣತ್ರಯಗಳ ತಳಹದಿಯ ಮೇಲೆ, ಸಾತ್ತ್ವಿಕ (ವಿಷ್ಣುಪುರಾಣಾದಿ) ರಾಜಸ(ಬ್ರಹ್ಮ….) ತಾಮಸ(ಶೈವಾದಿ)ಪುರಾಣಗಳು ಎ೦ದೆ೦ಬ ಆ೦ತರಿಕ ಮೂರು ಪ್ರಬೇಧಗಳು ಇವೆ. ಸರ್ಗ ಆದಿಯಾಗಿ ದಶಲಕ್ಷಣಗಳುಳ್ಳವು ಮಹಾಪುರಾಣಗಳು. ಸರ್ಗ, ಪ್ರತಿಸರ್ಗ, ವ೦ಶ, ಮನ್ವ೦ತರ, ವ೦ಶಾನುಚರಿತ, ಈ ಪ೦ಚಲಕ್ಷಣಗಳಿ೦ದ ಉಪಲಕ್ಷಿತವಾದವು ಉಪಪುರಾಣಗಳು.  ಹದಿನೆಂಟು  ಮಹಾಪುರಾಣಗಳು  ಹಾಗೂ  ಅಷ್ಟೇ  ಸಂಖ್ಯೆಯ  ಉಪಪುರಾಣಗಳು ಇವೆ.  ಈ ಎಲ್ಲ ಪುರಾಣಗಳ ಕರ್ತೃಗಳು ಮಹರ್ಷಿ ವೇದವ್ಯಾಸರು ಎ೦ಬುದು ಆರ್ಷ ವಿಶ್ವಾಸ. (ಅಷ್ಟಾದಶಪುರಾಣಾನಾ೦ ಕರ್ತಾ ಸತ್ಯವತೀಸುತಃ) (ಸ್ವಯ೦ ನಾರಾಯಣಃ ಪ್ರಭುಃ | ವ್ಯಾಸರೂಪೇಣ ಕೃತವಾನ್ ಪುರಾಣಾನಿ ಮಹೀತಲೇ |)

ಇವು (ಪುರಾಣಗಳು)  ಏಕಕಾಲಿಕ ಏಕ ಕರ್ತೃಕಗಳಾಗಿರದೇ ಭಿನ್ನಕಾಲದವು, ವಿಭಿನ್ನ ಕರ್ತೃಗಳವು, ಎ೦ಬುದು ಪರ್ಯಾಲೋಚಕರ ಅನಿಸಿಕೆ. ವಾದವೇನೇ  ಇರಲಿ, ‘ ಈ ಎಲ್ಲ ಪುರಾಣಗಳ ಸೃಷ್ಟಿ; ವೇದಾರ್ಥೋಪಬೃಂಹಣದೃಷ್ಟಿಃ’ ಎ೦ಬುದು ವಾದಾತೀತ ಚಿರ೦ತನ ಸತ್ಯ.

ಬ್ರಹ್ಮಸೂತ್ರ ರಚಯಿತಾ

ಬ್ರಹ್ಮ ಪ್ರತಿಪಾದಕ ಸೂತ್ರಗಳು – ಬ್ರಹ್ಮಸೂತ್ರಗಳು. ‘ಶಾರೀರಿಕ ಮೀಮಾಂಸಾದರ್ಶನಂ’ ಎಂದು ಈ ಬ್ರಹ್ಮಸೂತ್ರಗ್ರಂಥ ಪ್ರಸಿದ್ಧವಾಗಿದೆ. ಬಾದರಾಯಣರೂ ಆದ ಮಹರ್ಷಿ ವೇದವ್ಯಾಸರು ಈ ಸೂತ್ರಗಳನ್ನು ರಚಿಸಿದ ಕಾರಣ ಈ ಸೂತ್ರಗಳಿಗೆ ‘ಬಾದರಾಯಣ ಸೂತ್ರಗಳು’ ಎಂಬ ನಾಮಾಂತರವೂ ಇದೆ. ಈ ವೇದಾಂತ ಸೂತ್ರಗಳು- ‘ಅಥಾತೋ ಬ್ರಹ್ಮಜಿಜ್ಞಾಸಾ’ ಎಂದು ಶುಭಾರಂಭಗೊಂಡು “ಅನಾವೃತ್ತಿಃ ಶಬ್ದಾತ್- 2” ಎಂದು ಮುಕ್ತಾಯವಾಗುತ್ತವೆ. ಮತಾಚಾರ್ಯರು ‘ನ್ಯಾಯಪ್ರಸ್ಥಾನ’ ಎಂದೇ ಪ್ರಖ್ಯಾತವಾಗಿರುವ ಈ ಸೂತ್ರಗ್ರಂಥಕ್ಕೆ ತಮ್ಮ ತಮ್ಮ ಮತಾನುಸಾರಿ ಭಾಷ್ಯಗಳನ್ನು ಬರೆದು ತಮ್ಮ ತಮ್ಮ ಮತಗಳನ್ನು ಯುಕ್ತಿಯುಕ್ತವಾಗಿ ಸಮರ್ಥಿಸಿದ್ದಾರೆ.

ಉಪಸಂಹಾರ

ವೈದಿಕ ವಾಙ್ಮಯವನ್ನು ಕ್ರಮಬದ್ಧಗೊಳಿಸಿ, ಸನಾತನಧರ್ಮದ ಭವ್ಯಬುನಾದಿಯನ್ನು ಭದ್ರವಾಗಿ ನೆಲೆಗೊಳಿಸಿ, ಆಧ್ಯಾತ್ಮಿಕ ಸಂಪ್ರದಾಯಗಳನ್ನು ಊರ್ಜಿತಗೊಳಿಸಿ ಮತ್ತು ಪರಮಭಾಗವತರಾದ ತಮ್ಮ ಪುತ್ರ ಶುಕಮಹರ್ಷಿಗಳ ಮೂಲಕ ಆ ದಿವ್ಯಪರಂಪರೆಯು ಮುಂದುವರಿಯುವಂತೆ ಮಾಡಿ, ಜರಾಮರಣಭಯರಹಿತವಾದ ಯಶಃಕಾಯದಿಂದ ಚಿರಂಜೀವಿಗಳಾದವರು ಮಹರ್ಷಿ ವ್ಯಾಸರು.

ಮಹರ್ಷಿ ವ್ಯಾಸರು ವಿರಚಿಸಿದ ವಿಭಿನ್ನ ವಿಷಯಕ, ವಿವಿಧ ಪ್ರಕಾರಕ ಗ್ರಂಥಗಳ ಮೂಲಕ ‘ಚತುರ್ವಿಧಪುರುಷಾರ್ಥ’ ಸಾಧಕಗಳಾದ ಸಂಗತಿಗಳೆಲ್ಲವನ್ನೂ ಅವರು ನಿರೂಪಿಸಿದ ಕಾರಣ ‘ವ್ಯಾಸೋಚ್ಛಿಷ್ಟಂ ಜಗತ್ ಸರ್ವಂ’ ಎಂಬ ವಿಮರ್ಶಕರ  ಪ್ರಶಂಸಾವಚನ ಯಥಾರ್ಥವಾದುದು.

ಪ್ರಾಯಶೋ ಮುನಯಃ ಸರ್ವೇ ಕೇವಲಾತ್ಮಹಿತೋದ್ಯತಾಃ |
ದ್ವೈಪಾಯನಸ್ತು ಭಗವಾನ್ ಸರ್ವಲೋಕಹಿತೋದ್ಯತಃ ||

ಮನನಶೀಲರಾದ ಮುನಿಗಳ ಉದ್ದೇಶ ಆತ್ಮೋದ್ಧಾರ. ಆದರೆ ವೇದವ್ಯಾಸ ಮಹರ್ಷಿಗಳ ಲಕ್ಷ್ಯ ಸರ್ವಲೋಕಹಿತ. ಆದ್ದರಿಂದಲೇ ಪ್ರತಿ ಸಂವತ್ಸರದ ಆಷಾಢ ಶುದ್ಧ ಪೂರ್ಣಿಮೆ- ವ್ಯಾಸಪೂರ್ಣಿಮೆ, ಗುರುಪೂರ್ಣಿಮೆ ಎಂದು ಆಚರಿಸಿ ಮಹರ್ಷಿವ್ಯಾಸರನ್ನು ಸ್ಮರಿಸಲಾಗುತ್ತಿದೆ.

ಅಂದು ತುರೀಯಾಶ್ರಮಿಗಳು ವ್ಯಾಸಪೂಜೆಯನ್ನು ಮಾಡಿ, ತಮ್ಮ ಗುರುಪರಂಪರೆಯನ್ನು ಅರ್ಚಿಸಿ, ಚಾತುರ್ಮಾಸ್ಯವ್ರತವನ್ನೂ ಸಂಕಲ್ಪಿಸಿ, ತಪಸ್ಸು, ಅನುಷ್ಠಾನ, ಅಧ್ಯಯನ, ಪ್ರವಚನಗಳಲ್ಲಿ ಹಾಗೂ ಲೋಕಹಿತಕರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಯೋಗಾಭ್ಯಾಸ, ಆತ್ಮಜ್ಞಾನ ನಿರತರಾಗಿ ವರ್ಷಾಕಾಲವನ್ನು ಕಳೆಯುತ್ತಾರೆ.

ಭಾರತೀಯ ಸನಾತನ ಧರ್ಮದ ಮೂಲಸ್ರೋತ-ಶ್ರುತಿ. ಈ ಶ್ರುತಿಯ ಆಧಾರದಿಂದ ರಚಿತವಾದ ಸ್ಮೃತಿಗಳು, (ಶ್ರುತಿಸ್ಮೃತೇ ಮಮೈವಾಜ್ಞೇ) ದರ್ಶನಗಳು, ಪುರಾಣಗಳು ಹಾಗೂ ಮಹಾಕಾವ್ಯಗಳು ವೇದಮಾರ್ಗಾವಬೋಧಕಗಳು. ವೇದರಾಶಿಯನ್ನು ತಲಸ್ಪರ್ಶಿಯಾಗಿ ಅಭ್ಯಸಿಸಿ, ವೈದಿಕ ವಾಙ್ಮಯವನ್ನು ಕ್ರಮಬದ್ಧಗೊಳಿಸಿ, ಸಮೃದ್ಧಿಗೊಳಿಸುವುದರ ಜೊತೆಗೆ, ಅನಾದಿಕಾಲದಿಂದ ಪ್ರವಹಿಸುತ್ತ ಬಂದ ಈ ಜ್ಞಾನಗಂಗೆಯನ್ನು ದಿವ್ಯವೂ ಭವ್ಯವೂ ಆದ ಪರಂಪರೆಯ ಮೂಲಕ ಮುಂದಿನ ಪೀಳಿಗೆಯ ಜನಸಮುದಾಯಕ್ಕೆ ಕೊಡುಗೆಯಾಗಿ ನೀಡಿದವರು ಮಹರ್ಷಿ ವೇದವ್ಯಾಸರು. “ವ್ಯಾಸಂ ಶುಕಂ ಗೌಡಪದಂ”- ಎಂಬುದಾಗಿ ಮುಂದುವರಿದ ಶ್ರೀಗುರುಪರಂಪರೆಯಲ್ಲಿ ಬಂದು, ಅದೇ ಸಂಪ್ರದಾಯದಲ್ಲಿ ಕ್ರಮಿಸಿ ಬ್ರಹ್ಮೈಕ್ಯರಾದ ಪೂಜ್ಯಗುರುವರ್ಯರು ರಚಿಸಿದ “ಶ್ರೀವೇದ ವ್ಯಾಸಸ್ತುತಿಃ”ಯಿಂದ ಆಯ್ದ ವಾಕ್ ಸುಮ ಇದು-

ಸರ್ವಜ್ಞಾನಾಕರಂ ಚೇಡ್ಯಂ ಮಹಾಂತಂ ಪರಮೌಜಸಂ |
ನಮಾಮೋsತೀಂದ್ರಿಯ ಜ್ಞಾನನಿಧಿಂ ವ್ಯಾಸಂ ಮನೀಷಿಣಂ ||

~*~

ಟೈಪಿಂಗ್ ಸಹಕಾರಃಶ್ರೀಮತಿ ಶ್ವೇತಾ ತೇಜಸ್ವಿ ಕಾನಾವು
ಚಿತ್ರ- ಅಂತರ್ಜಾಲದಿಂದ

Facebook Comments