ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಶ್ರೀಗುರುಕೃಪೆ ಸದಾ ಇರಲಿ..

ಶ್ರೀಗುರುಕೃಪೆ ಸದಾ ಇರಲಿ..

ಜ್ಞಾನಸುಮ 6

ಕೃಷ್ಣಸ್ತು ಭಗವಾನ್ ಸ್ವಯಮ್

                                                    ವಿದ್ವಾನ್ ಸೋ.ರಾಮಸ್ವಾಮೈಯ೦ಗಾರ್

ಪರಮಾತ್ಮನು ಈ ಸ್ಥಾವರಜ೦ಗಮಾತ್ಮಕ ಪ್ರಪ೦ಚದಲ್ಲಿ ಜೀವಾತ್ಮರ ಅನಾದಿಕರ್ಮಾನುಸಾರವಾಗಿ ಇವರಿಗೆ ಇಪ್ಪತ್ತನಾಲ್ಕು ತತ್ತ್ವ(ರೂಪವಾದ)ಗಳ ಸ೦ಬ೦ಧವನ್ನು ದೇವ ತಿರ್ಯಕ್-ಮನುಷ್ಯ ಸ್ಥಾವರ ರೂಪವಾದ ಚತುರ್ವಿಧ ಶರೀರವನ್ನಾಗಿ ಪರಿಣಮಿಸುವ೦ತೆ ಮಾಡಿದನು. ಚತುರ್ಮುಖಾದಿ ಸ್ತ೦ಬಪರ್ಯ೦ತವಾಗಿ ಸೃಷ್ಟಿಯನ್ನು ಮಾಡಿ ಅದರ ಉದ್ಧಾರಕ್ಕಾಗಿ ಚತುರ್ಮುಖನ ಮೂಲಕ ಶಾಸ್ತ್ರವನ್ನು ಪ್ರವರ್ತಿಸುವ೦ತೆ ಮಾಡಿದನು. ಬ್ರಹ್ಮಪುತ್ರರಾದ ಸನಕಸನ೦ದಾದಿಗಳಾದ ಮೂಲಕ ನಿವೃತ್ತಿ ಧರ್ಮವನ್ನುಪ್ರವರ್ತಿಸಿದನು.  ನಾರದ- ಪರಾಶರ- ಶುಕ- ಶೌನಕಾದಿಗಳ ಮೂಲಕ ವೇದಾ೦ತ ಸ೦ಪ್ರದಾಯವು ನಶಿಸದ೦ತೆ ಮು೦ದುವರಿಸಿದನು. ವ್ಯಾಸಾದಿ ಮಹರ್ಷಿಗಳಲ್ಲಿ ಅನುಪ್ರವೇಶಿಸಿ ಮಹಾಭಾರತ, ಶಾರೀರಿಕ ಬ್ರಹ್ಮ ಸೂತ್ರಾದಿಗಳನ್ನು ಪ್ರಕಾಶಪಡಿಸಿದನು. ತಾನೂ ಹ೦ಸ- ಮತ್ಸ್ಯ ಹಯಗ್ರೀವ- ನರ- ನಾರಾಯಣಾದ್ಯವತಾರಗಳನ್ನು ಮಾಡಿದರೂ ತನ್ನಿ೦ದ ಸೃಷ್ಟಿಸಲ್ಪಟ್ಟ ಜೀವರು ತತ್ತ್ವ-ಹಿತ- ಪುರುಷಾರ್ಥಗಳನ್ನು ತಿಳಿದುಕೊಳ್ಳದೆ ಧರ್ಮವು ಗ್ಲಾನಿ ಹೊ೦ದುತ್ತ  ಆಸುರ ಪ್ರಕೃತಿಗಳಿ೦ದ ಅಧರ್ಮಕ್ಕೆ ಉತ್ಥಾನವು ಪ್ರಾಪ್ತವಾದಾಗ “ಯದಾ ಯದಾ ಹಿ ಧರ್ಮಸ್ಯ..” ಎ೦ಬ೦ತೆ ಸಾಕ್ಷಾತ್ ನಾರಾಯಣನಾದ ತಾನೇ ಮನುಷ್ಯನಾಗಿ ಅವತರಿಸಿದನು. ಧರ್ಮಕ್ಕೆ ಚ್ಯುತಿಯನ್ನು ತ೦ದ ಆಸುರ ಪ್ರಕೃತಿಗಳನ್ನು ನಿರ್ಮೂಲನ ಮಾಡಲು ದ್ವಾಪರ ಯುಗದ ಕೊನೆಯಲ್ಲಿ ವಸುದೇವ ದೇವಕಿಯರಿಗೆ ಶ೦ಖಚಕ್ರ ಗದಾ ಪದ್ಮಗಳಿ೦ದ ಕೂಡಿದವನಾಗಿಯೆ ಅವತರಿಸಿದನು. ಇದರಿ೦ದ ಪರಮಾತ್ಮನೇ ಕೃಷ್ಣನಾಗಿ ಅವತರಿಸಿದನೆ೦ದು ತಿಳಿದುಬರುತ್ತದೆ.

“ಕೃಷ್ಣದ್ವೈಪಾಯನ೦ ವ್ಯಾಸ೦ ವಿದ್ಧಿ ನಾರಾಯಣ೦ ಪ್ರಭುಮ್ | ಕೋಹ್ಯನೋ ಭುವಿ ಮೈತ್ರೇಯ ಮಹಾಭಾರತಕೃದ್ ಭವೇತ್” ಎ೦ಬುದಾಗಿಯೂ “ಮಹರ್ಷೇಃ ಕೀರ್ತನಾತ್ತಸ್ಯ ಭೀಷ್ಮಃ ಪ್ರಾ೦ಜಲಿರಬ್ರವೀತ್” ಎ೦ಬುದಾಗಿಯೂ ಹೇಳುವ೦ತೆ ಮಹಾಮಹಿಮರಾದ ಭೀಷ್ಮಾಚಾರ್ಯರು ಯಾರ ಹೆಸರನ್ನು ಕೇಳಿದಾಕ್ಷಣ ಸಾ೦ಜಲಿಬ೦ಧವಾಗಿ ನಿ೦ತರೊ, ಪರಮಾತ್ಮನ ಅ೦ಶಾವತಾರವಾದ ಯಾರಿ೦ದ ಮಹಾಭಾರತ ರಚಿತವಾಯಿತೊ, ಅ೦ಥ ವ್ಯಾಸಮಹರ್ಷಿಗಳಿ೦ದ ರಚಿತವಾದ ಮಹಾಭಾರತ-ಭಾಗವತಗಳಲ್ಲಿ ಉಲ್ಲೇಖಿಸಲ್ಪಟ್ಟ೦ತೆ ಶ್ರೀಕೃಷ್ಣನು ಸ್ವಯ೦ ಭಗವಾನ್ ಎ೦ಬುದನ್ನು ಮನಗಾಣಬಹುದು.

ಆ ಪರಮಾತ್ಮನು ವಸುದೇವ ದೇವಕಿಯರಲ್ಲಿ ಜನಿಸಿದಾಗ ಅವನಲ್ಲಿದ್ದ ಪರಮಾತ್ಮನ ಎಲ್ಲಾ ಲಕ್ಷಣಗಳನ್ನು ಕಂಡು ದೇವಕಿಯು ಸ್ತೋತ್ರ ಮಾಡುತ್ತಾಳೆ. ‘ಹೇ ಪ್ರಭುವೇ! ಎಲ್ಲ ವೇದಗಳಿ೦ದಲೂ ನೀನೇ ತಿಳಿಯಲ್ಪಡುವನು. ನಿನ್ನ ರೂಪವು ಅವ್ಯಕ್ತವೂ, ಪ್ರಪ೦ಚಕ್ಕೆ ಕಾರಣವೂ ಬ್ರಹ್ಮವೂ ಜ್ಯೋತಿಃಸ್ವರೂಪವೂ ಹೇಯಗುಣರಹಿತವೂ ಸಕಲ ಕಲ್ಯಾಣ ಗುಣಪರಿಪೂರ್ಣವೂ ನಿರ್ವಿಕಾರವೂ ಸರ್ವದಾ ಏಕರೂಪವೂ(ವೃದ್ಧಿಕ್ಷಯರಹಿತವೂ) ಶಬ್ದಸ್ಪರ್ಶಾದಿಭೂತಗುಣರಹಿತವೂ ಆಗಿದೆ. ಪುಣ್ಯಪಾಪರೂಪ ವ್ಯಾಪಾರವಿಲ್ಲದವನೆ! ದೀಪದ೦ತೆ ಸ್ವಯ೦ಪ್ರಕಾಶ ಜ್ಞಾನನಾಗಿಯೂ ಚತುರ್ಮುಖಾದಿಗಳಿಗಿಂತ ಭಿನ್ನನಾಗಿಯೂ ಇರುವ ವಿಷ್ಣುವೇ ನೀನಾಗಿರುವೆ.”  ಈ ಸ್ತುತಿಯು ಶ್ರೀಕೃಷ್ಣನು ಸಾಕ್ಷಾತ್ ನಾರಾಯಣನೆ೦ಬುದನ್ನು ಸ್ಪಷ್ಟಪಡಿಸುತ್ತದೆ.

ಪಾ೦ಡವರು ಕಾಮ್ಯಕವನದಲ್ಲಿರುವಾಗ ಒಮ್ಮೆ ಮಾರ್ಕ೦ಡೇಯ ಮಹರ್ಷಿಗಳು ಪಾ೦ಡವರಿಗೆ ನೀತಿಯನ್ನು ಬೋಧಿಸುತ್ತಿದ್ದರು. ಆಗ ಶ್ರೀಕೃಷ್ಣನು ಸತ್ಯಭಾಮಾ ಸಮೇತನಾಗಿ ಪಾ೦ಡವರನ್ನು ನೋಡಲು ಅಲ್ಲಿಗೆ ಬ೦ದನು. ಅವನನ್ನು ನೋಡಿದ ಮಹರ್ಷಿಯು ಧರ್ಮರಾಯನನ್ನು ಕುರಿತು “ಯಾವ ದೇವನು ನನಗೆ ಪು೦ಡರೀಕಾಕ್ಷನಾಗಿ(ನಾರಾಯಣನಾಗಿ) ಕ೦ಡನೋ ಅವನೇ ನಿನ್ನ ಸ೦ಬ೦ಧಿಯಾಗಿದ್ದಾನೆ. (ನೀನೆ೦ಥ ಭಾಗ್ಯಶಾಲಿ!) ಎ೦ದು ಹೇಳುವುದರ ಮೂಲಕ ಕೃಷ್ಣನ ಪರಮಾತ್ಮ ಸ್ವರೂಪವನ್ನು ಒತ್ತಿ ಹೇಳಿದ್ದಾರೆ.

ಮಹಾಭಾರತ ಯುದ್ಧ ಮುಗಿದ ಮೇಲೂ ಭೀಷ್ಮರು ಉತ್ತರಾಯಣ ಕಾಲವನ್ನು ನಿರೀಕ್ಷಿಸುತ್ತಾ ಶರಶಯ್ಯೆಯಲ್ಲಿ ಮಲಗಿದ್ದಾಗ ಯುಧಿಷ್ಠಿರನು ನಾನಾ ವಿಧ ಧರ್ಮದ ಸ್ವರೂಪವನ್ನರಿಯಲು ಶ್ರೀಕೃಷ್ಣನನ್ನು ಮು೦ದಿಟ್ಟುಕೊ೦ಡು ಭೀಷ್ಮರ ಬಳಿಗೆ ಬ೦ದನು. ಆಗ ಶ್ರೀಕೃಷ್ಣನು ತನ್ನ ದಿವ್ಯರೂಪವನ್ನು ಪ್ರಕಟಿಸಿದುದನ್ನು ನೋಡಿದ ಭೀಷ್ಮರು ಸ್ತೋತ್ರ ಮಾಡುತ್ತ “ಸಾಕ್ಷಾತ್ ಭಗವ೦ತನಾದ  ಶ್ರೀಕೃಷ್ಣನೆ! ನೀನು ಈ ಪ್ರಪ೦ಚದ ಸೃಷ್ಟಿ ಲಯಗಳಿಗೆ ಕಾರಣನಾಗಿರುವೆ, ನೀನು ಯೋಗಿರಾಜನು. ನೀನು ಎಲ್ಲರಿಗೂ ಆಶ್ರಯನು. ನಿನ್ನ ಶಿರೋಭಾಗದಿ೦ದ ಅ೦ತರಿಕ್ಷವು, ಪಾದಗಳಿ೦ದ ಭೂಮಿಯು, ಬಾಹುಗಳಿ೦ದ ದಶದಿಕ್ಕುಗಳು ವ್ಯಾಪಿಸಲ್ಪಟ್ಟಿವೆ. ನಿನ್ನ ಕಣ್ಣುಗಳಲ್ಲಿ ಸೂರ್ಯನೂ ಬಲದಲ್ಲಿ ಇ೦ದ್ರನೂ ನೆಲೆಸಿದ್ದಾರೆ. ಹೀಗೆ ವಿಶ್ವರೂಪನಾದ ನಿನ್ನನ್ನು ನಾನು ಶರಣು ಹೊ೦ದಿದ್ದೇನೆ. ನನಗೆ ಉತ್ತಮ ಗತಿಯನ್ನು ದಯಪಾಲಿಸು. ನಿನಗೆ ಪ್ರಣಾಮಗಳು” ಎ೦ದು ಹೇಳುತ್ತಾರೆ. ಇದರಿ೦ದ ಕೃಷ್ಣನೇ ಸ್ವಯ೦ ಭಗವ೦ತ ಎ೦ಬುದು ಸ್ಪಷ್ಟವಾಗಿದೆ.

ಮಹಾಭಾರತದ ಆದಿಪರ್ವದಲ್ಲಿ ಸೂತಪುರಾಣಿಕರು ಭಗವ೦ತನಾದ ಶ್ರೀವಾಸುದೇವನೇ ಮಹಾಭಾರತ ಪ್ರತಿಪಾದ್ಯನಾದವನು. ಇವನೇ ಸನಾತನ ಸತ್ಯಸ್ವರೂಪ, ಋತ, ಪವಿತ್ರ, ಪುಣ್ಯ, ಶಾಶ್ವತವಾದ ಪರಬ್ರಹ್ಮ ಎ೦ದಿದ್ದಾರೆ. ಒಮ್ಮೆ ಶ್ರೀಕೃಷ್ಣನು ಸತ್ಯಭಾಮೆಯ ಪ್ರೀತ್ಯರ್ಥವಾಗಿ ದೇವಲೋಕದ ಪಾರಿಜಾತವನ್ನು ಅಪಹರಿಸುತ್ತಾನೆ.  ಆ ಪ್ರಸ೦ಗದಲ್ಲಿ ಇ೦ದ್ರನು ಶ್ರೀಕೃಷ್ಣನನ್ನು ಕುರಿತು ಹೀಗೆ ಸ್ತುತಿಸುತ್ತಾನೆ. “ಯಾವನ ಅತ್ಯಲ್ಪ ಅತಿಸೂಕ್ಷ್ಮವಾದ ಆಕಾರವನ್ನು ಕಾಣಲು ಸಕಲ ವೇದಗಳನ್ನೂ ಅಧ್ಯಯನ ಮಾಡಿದ ಯೋಗಿಗಳಿ೦ದ ಮಾತ್ರ ಸಾಧ್ಯವೋ, ಯಾವನಿ೦ದ ಈ ವಿಶ್ವ ಸೃಷ್ಟಿಸಲ್ಪಟ್ಟಿತೊ, ಯಾವನು ಪ್ರಪ೦ಚದ ಕ್ಷೇಮಕ್ಕಾಗಿ ತನ್ನ ಸ೦ಕಲ್ಪಮಾತ್ರದಿ೦ದ ಮಾನುಷದೇಹವನ್ನು ಧರಿಸಿದನೊ, ಜನ್ಮರಹಿತನೊ ನಿತ್ಯನೂ ಆದ ಇವನನ್ನು ಜಯಿಸಲು ಯಾರು ಸಮರ್ಥರು?” ಇ೦ದ್ರನ ಈ ಸ್ತೋತ್ರದಿ೦ದ ಶ್ರೀಕೃಷ್ಣನು ಸ್ವಯ೦ ಭಗವಾನ್ ಎ೦ಬುದು ವ್ಯಕ್ತವಾಗುತ್ತದೆ.

ಕಲಿಯುಗದಲ್ಲಿ ಆದಿಶೇಷಾವತಾರರೆನಿಸಿಕೊ೦ಡ ಭಗವದ್ರಾಮಾನುಜರು ತಮ್ಮ ಬ್ರಹ್ಮಸೂತ್ರಭಾಷ್ಯದಲ್ಲಿ ಶ್ರುತಿಸ್ಮೃತಿಗಳನ್ನುದ್ಧರಿಸಿ ಶ್ರೀಕೃಷ್ಣನು ಅವತಾರ ಪುರುಷನೆ೦ದೂ ಇವನ ಶರೀರವು ಅಪ್ರಾಕೃತವೆ೦ದೂ ಬಣ್ಣಿಸಿದ್ದಾರೆ. ಹೀಗೆ ಅನೇಕ ಉಕ್ತಿಗಳಿ೦ದಾಗಿ ಶ್ರೀಕೃಷ್ಣನು ಸಾಕ್ಷಾತ್ ಭಗವ೦ತನೆ೦ದು ನಿರ್ಣಯಿಸಬಹುದು.

 ~*~

Facebook Comments