ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಶ್ರೀಗುರು ಪರಂಪರೆಯಲ್ಲಿ ನಮ್ಮನ್ನು ಅನುಗ್ರಹಿಸುತ್ತಾ ಬಂದಿರುವ ಎಲ್ಲ ಗುರುಗಳ ಅನುಗ್ರಹ ನಮ್ಮೆಲ್ಲರ ಮೇಲಿರಲಿ.

ಹರೇರಾಮ

~

ಸೂರ್ಯವಂಶದ 36 ನೆಯ ರಾಜಪೀಠಾಧಿಪಗೆ ಶ್ರೀರಾಮಚಂದ್ರಾಪುರ ಮಠದ 36 ನೆಯ ಗುರುಪೀಠಾಧಿಪರ ಮನದ ನಮನ..

ಸೂರ್ಯವಂಶದ 36 ನೆಯ ರಾಜಪೀಠಾಧಿಪಗೆ ಶ್ರೀರಾಮಚಂದ್ರಾಪುರ ಮಠದ 36 ನೆಯ ಗುರುಪೀಠಾಧಿಪರ ಮನದ ನಮನ..

ಜ್ಞಾನ ಸುಮ 5

ಮರ್ಯಾದಾ ಪುರುಷೋತ್ತಮ ಶ್ರೀರಾಮ

ವಿದ್ವಾನ್ ರಾಮಚಂದ್ರ ಶರ್ಮಾ, ತ್ಯಾಗಲಿ

ಭೂಯೋ ಭೂಯೋ ಭಾವಿನೋ ಭೂಮೊಪಾಲಾಃ
ನತ್ವಾ ನತ್ವಾ ಯಾಚತೇ ರಾಮಚಂದ್ರಃ |
ಮದ್ಭದ್ಧೋsಯಂ ಧರ್ಮಸೇತುರ್ನರಾಣಾಂ
ಕಾಲೇ ಕಾಲೇ ಪಾಲನೀಯೋ ಭವದ್ಭಿಃ ||

ಭವಿಷ್ಯಕಾಲದಲ್ಲಿ ಮತ್ತೆ ಮತ್ತೆ ಹುಟ್ಟಿಬರುವ ಲೋಕಶಾಸಕರೆ! ನಾನು ರಾಮಚಂದ್ರನು ನಮಿಸಿ ನಮಿಸಿ ಬೇಡಿಕೊಳ್ಳುತ್ತೇನೆ, ಮಾನವರಿಗಾಗಿ ನಾನು ಕಟ್ಟಿದ ಈ ಧರ್ಮಸೇತುವೆಯನ್ನು ನೀವು ಕಾಲಕಾಲಕ್ಕೆ ಕಾಪಾಡುತ್ತಿರಬೇಕು.”
ಸದಾ ತಪೋನಿರತರಾದ ಶ್ರೀ ವಾಲ್ಮೀಕಿಮುನಿಗಳು ಒಂದಿಷ್ಟು ದಿನಗಳಿಂದ ಒಂದು ವಿಶೇಷ ಚಿಂತನೆಯಲ್ಲಿ ಮಗ್ನರಾಗಿದ್ದಾರೆ. ಅವರ ಅಂತರಂಗ ವಿಶ್ವಕ್ಕೆ ಒಂದು ಶ್ರೇಷ್ಠವಾದ, ಶಾಶ್ವತವಾದ, ಆದರ್ಶವಾದ, ಸತ್ಯ-ಸನಾತನ ಧರ್ಮಸ್ವರೂಪವನ್ನು ನೀಡಲು ತವಕಿಸುತ್ತದೆ. ಶ್ರುತಿ, ಸ್ಮೃತಿ ಪುರಾಣಾದಿಗಳಲ್ಲಿ ಸತ್ಯ-ಧರ್ಮಗಳ ವಿಚಾರ-ವಿವರಣೆಗಳೇನೂ ಕಡಿಮೆ ಇಲ್ಲ, ಇವು ಸರ್ವರ ಅಂತರಂಗವನ್ನೂ ತಟ್ಟಲಾರವು. ಹೃದಯ-ಬುದ್ಧಿಗಳಿಗೆ ತಟ್ಟಿದರೂ ವಿಶ್ವಾಸವನ್ನು ಉಂಟುಮಾಡುವುದು ಕಷ್ಟಕರ. ಪ್ರಮಾಣಗಳೆಲ್ಲ ಪ್ರಾಮಾಣಿಕವಾದರೂ ಲೋಕ ಪ್ರತ್ಯಕ್ಷಪ್ರಮಾಣವನ್ನೇ ಅಧಿಕವಾಗಿ ಗ್ರಹಿಸುವುದು, ಸ್ವೀಕರಿಸುವುದು, ಆದ್ದರಿಂದ ಲೋಕಶಿಕ್ಷಕವಾದ ಈ ಧರ್ಮವು ಒಬ್ಬ ವ್ಯಕ್ತಿಯಲ್ಲೇ ನೆಲೆಯಾಗಿ ಅವನ ನಡೆ-ನುಡಿಗಳಲ್ಲಿ ಹೊಮ್ಮಿದರೆ ಅದು ಲೋಕಕ್ಕೆ ರೋಚಕವಾಗುವುದು. ಅಂಥ ವ್ಯಕ್ತಿಯನ್ನು ಕಲ್ಪನೆಯಿಂದ ನಿರ್ಮಿಸಿ ಲೋಕದ ಮುಂದಿಡುವುದೇ? ಸಲ್ಲದು. ಅದು ಕಲ್ಪನೆ. ಸತ್ಯವಾಗದು. ಹಾಗಾದರೆ ಅಂಥ ಒಬ್ಬ ವ್ಯಕ್ತಿ ಇದ್ದರೆ! ಅವನ ಚರಿತ್ರೆಯನ್ನು ಲೋಕದ ಮುಂದೆ ಮಧುರಾಕ್ಷರದ ಕಾವ್ಯವಾಹಿನಿಯಲ್ಲಿ ತುಂಬಿ ಹರಿಸಿದರೆ ಲೋಕವು ನಿರಂತರವಾಗಿ ಆಸ್ವಾದಿಸಿ ಧರ್ಮಸತ್ವವನ್ನು ಮೈಗೂಡಿಸಿಕೊಳ್ಳುವುದು. ಅಂಥ ವ್ಯಕ್ತಿ ಯಾರು? ಅವನನ್ನು ಯಾರು ನನಗೆ ತಿಳಿಸಿಕೊಡಬಲ್ಲರು? ಎಂದೆಲ್ಲ ಧ್ಯಾನಿಸುತ್ತಿರುವಾಗಲೇ ಮಹರ್ಷಿ ನಾರದರು ಅರಸಿದ ಔಷಧಿ ಅಂಗೈಯಲ್ಲೇ ಆವಿರ್ಭವಿಸಿದಂತೆ ಆಗಮಿಸಿದರು. ಬಂದ ನಾರದರನ್ನು ಉಪಚರಿಸಿ ತಮ್ಮ ಆಸೆಯನ್ನು ಪ್ರಕಟಿಸಿದರು.
‘ನಾರದರೆ! ನನಗೆ ಈಗ ಈ ವರ್ತಮಾನ ಕಾಲದಲ್ಲಿ ಬದುಕಿರುವ ಒಬ್ಬ ಪುರುಷೋತ್ತಮನಾದ, ಧರ್ಮಮರ್ಯಾದಾ ಪರಿಪಾಲಕನಾದ ವ್ಯಕ್ತಿಯು ಬೇಕು. ಅವನು ಗುಣವಂತನೂ. ವೀರನೂ, ಧರ್ಮಜ್ಞನೂ, ಕೃತಜ್ಞನೂ, ಸತ್ಯವಾದಿಯೂ, ಧೃಢಸಂಕಲ್ಪ ಉಳ್ಳವನೂ, ಆಗಿರಬೇಕು. ಅವನಲ್ಲಿ ಚಾರಿತ್ರ್ಯಶುದ್ಧಿ ಇರಬೇಕು. ಅವನು ಸಕಲ ಪ್ರಾಣಿಗಳ ಹಿತಚಿಂತಕನಾಗಿರಬೇಕು, ವಿದ್ವಾಂಸನೂ, ಕಾರ್ಯದಕ್ಷನೂ ಆಗಿ ರೂಕ್ಷನಾಗಿರಬಾರದು. ಕಂಡ ಜನರು ಆನಂದ ಪಡುವಂಥ ವ್ಯಕ್ತಿಯಾಗಿರಬೇಕು. ಲೋಕಾಕರ್ಷಕನಾಗಿರಬೇಕು. ಕ್ರೋಧವನ್ನು ಗೆದ್ದು ಆತ್ಮಸ್ಥೈರ್ಯ ಹೊಂದಿ, ಕಾಂತಿಯುಕ್ತನಾಗಿ ಅಸೂಯಾರಹಿತನಾಗಿ ಇರಬೇಕು. ಸ್ನೇಹಶೀಲನಾದರೂ, ಕ್ರೋಧಗೊಂಡರೆ ಯುದ್ಧದಲ್ಲಿ ದೇವತೆಗಳೂ ನಡುಗಬೇಕು. ಹೇಳಿ, ಇಂಥವನು ಇರುವನೇ?’
ನಾರದರು ಹರ್ಷಿತರಾದರು. ಹೇಳಿದರು -“ಮಹರ್ಷಿ! ನೀನು ಹೇಳಿದ ಗುಣಗಳೆಲ್ಲವನ್ನೂ ಹೊಂದಿರುವ ವ್ಯಕ್ತಿ ಸಿಗುವುದು ಕಷ್ಟ. ಆದರೂ ಒಬ್ಬ ಇದ್ದಾನೆ. ಅವನು ನೀನು ಹೇಳಿದ ಗುಣಗಳ ಜೊತೆಗೆ ಇನ್ನೂ ಅನೇಕ ಗುಣಗಳಿಂದ ಶೋಭಿತನು. ಜಿತೇಂದ್ರಿಯನು, ಬುದ್ಧಿವಂತ, ನೀತಿವಂತ, ವಾಗ್ಮಿ, ಐಶ್ವರ್ಯಯುಕ್ತ, ಶತ್ರುನಾಶಕ, ಸತ್ಯಸಂಧ, ಗುರು-ಹಿರಿಯರಲ್ಲಿ ವಿಧೇಯ, ಶರಣಾಗತರಕ್ಷಕ, ಪ್ರತಿಭಾಶಾಲಿ, ಗುಣಮಾತ್ರಗಳಿಂದ ಅಲ್ಲ ದೈಹಿಕವಾಗಿಯೂ ಸುಂದರ, ಬಲಿಷ್ಠವಾದ ತೋಳುಗಳು, ಶಂಖದಂಥ ತ್ರಿರೇಖಾಭೂಷಿತವಾದ ಕಂಠ, ವಿಶಾಲವಾದ ಎದೆ, ಆಜಾನುಭಾಹು, ಸರ್ವಾಂಗಸುಂದರ, ಅವನನ್ನು ನೋಡಿದವರೆಲ್ಲ ಆನಂದಪಡುವರು. ನದಿಗಳು ಸಮುದ್ರವನ್ನು ಸೇರುವಂತೆ ಸಜ್ಜನರು ಇವನ ಸಮೀಪ ಹೋಗುತ್ತಾರೆ. ಜಗತ್ತಿನ ಸಕಲರನ್ನೂ ರಕ್ಷಿಸುವ ಸಾಮರ್ಥ್ಯ ಅವನಿಗೆ ಇದೆ. ಮಹಾತೇಜಸ್ವಿಯಾದ ಅವನು ಯಾರು ಗೊತ್ತೇ? ಶ್ರೀರಾಮ. ಕೌಸಲ್ಯಾನಂದವರ್ಧನ. ದಶರಥಪುತ್ರ. ವಿಷ್ಣುವಿನಂತೆ ಪರಾಕ್ರಮಿ, ಚಂದ್ರನಂತೆ ಆಹ್ಲಾದಕರ, ಕೋಪಬಂದರೆ ಕಾಲಾಗ್ನಿ ಸದೃಶ, ತಾಳ್ಮೆಯಲ್ಲಿ- ಭೂಮಿಗೆ ಸಮ. ಸತ್ಯದಲ್ಲಿ ಸಾಕ್ಷಾತ್ ಧರ್ಮಸ್ವರೂಪ.”

ಈ ಬಗೆಯಲ್ಲಿ ತಪಃಸ್ವಾಧ್ಯಾಯನಿರತರೂ, ವಾಗ್ವಿದರಲ್ಲಿ ಶ್ರೇಷ್ಠರೂ, ಮುನಿಪುಂಗವರೂ ಆದ ಇಬ್ಬರು ಮಹರ್ಷಿಗಳು -ವಾಲ್ಮೀಕಿನಾರದರು ತಮ್ಮ ಮುಂದೆ ಪ್ರತ್ಯಕ್ಷವಾಗಿ ಬಾಳಿ ಬದುಕಿದ ಪುರುಷೋತ್ತಮನನ್ನು ಗುರುತಿಸಿದರು. ಆದರೆ ಗುಣಾವಳಿಗಳು ನಡೆಯಲ್ಲಿ, ನುಡಿಯಲ್ಲಿ, ಮನದಲ್ಲಿ, ಬದುಕಿನ ಘಟನೆಗಳಲ್ಲಿ, ವ್ಯಕ್ತಿಗಳ ಸಂಪರ್ಕ-ಸಂಘರ್ಷಗಳಲ್ಲಿ ಅಗ್ನಿಪರೀಕ್ಷೆಗೊಳಗಾದಾಗಲೇ ಸಾರ್ಥಕವಾಗುವುವು. ನಡತೆ ಗುಣಗಳ ಒರೆಗಲ್ಲು. ಈ ಪುರುಷೋತ್ತಮತ್ವದ ಗುಣಗಳು ಶ್ರೀರಾಮನ ಬದುಕಿನುದ್ದಕ್ಕೂ ನಡೆ-ನುಡಿಗಳಲ್ಲಿ ನಿರೂಪಿತವಾಗಿವೆ. ಧರ್ಮದ ಮರ್ಯಾದಾರಕ್ಷಣೆಯನ್ನು ಕೋದಂಡವನ್ನು ನಿರಂತರ-ಹೆದೆ ಏರಿಸಿಯೇ ನಡೆದವನು ಶ್ರೀರಾಮ. ರಾಜ್ಯಸ್ವೀಕಾರ-ವನಗಮನವೆರಡನ್ನೂ ಸಮಾನಭಾವದಲ್ಲಿ ಸ್ವೀಕರಿಸಿದ ಶ್ರೀರಾಮ ವನವಾಸದಲ್ಲೂ ರಾಜಧರ್ಮವನ್ನು ನಡೆದು ತೋರಿದ್ದಾನೆ. ರಾಮನ ಬದುಕಿನಲ್ಲಿ ಕಲಂಕವೆಂಬಂತೆ ಕೆಲವರು ಭಾವಿಸಿದ ವಾಲಿವಧೆಯನ್ನು ರಾಮನು ಇದು “ರಾಜದಂಡನೆ” ಎಂದು ಸಾರಿದ್ದಾನೆ. ಪತ್ನಿಯನ್ನೇ ಅಪಹರಿಸಿದ ರಾವಣನನ್ನು ಸಂಹರಿಸಿದ ಮೇಲೆ ಮರಣಾಂತಾನಿ ವೈರಾಣಿ- ಶತ್ರುತ್ವ ದೇಹಾಂತದವರೆಗೆ ಮಾತ್ರ. ಆದ್ದರಿಂದ ’ಕ್ರಿಯತಾಂ ಅಸ್ಯ ಸಂಸ್ಕಾರಃ’ – ಇವನಿಗೆ ಮರಣೋತ್ತರ ಶಾಸ್ತ್ರೀಯ ಸಂಸ್ಕಾರಗಳನ್ನು ನೆರವೇರಿಸಿ ಎಂದು ತಾನೇ ನಿಯಮಿಸಿ ರಾವಣನಿಗೆ ಮರಣೋತ್ತರ ಸಂಸ್ಕಾರಗಳನ್ನು ನೆರವೇರಿಸುತ್ತಾನೆ. ಪಿತೃವಾಕ್ಯಪರಿಪಾಲನೆಗಾಗಿ ವನವಾಸವನ್ನು ಕೈಕೊಂಡ ರಾಮ ತಾನೇ ಗೆದ್ದ ಲಂಕೆಯ ಪ್ರವೇಶವನ್ನೂ ಮಾಡುವುದಿಲ್ಲ. ಸೀತಾರಕ್ಷಣೆಯನ್ನು ತನ್ನ ಧರ್ಮವೆಂದು ನೆರವೇರಿಸಿದ ಶ್ರೀರಾಮ ಆಕೆಯನ್ನು ದೈವಾಗ್ನಿಗುರುಗಳ ಅನುಜ್ಞೆಯನ್ನು ಪಡೆದು ಮರಳಿ ಸ್ವೀಕರಿಸುತ್ತಾನೆ. ಸ್ತ್ರೀವಧೆಯ ವಿಚಾರದಲ್ಲಿ ಎಂದೂ ಮೃದುಹೃದಯಿಯಾದ ರಾಮ ಶೂರ್ಪನಖಿಯೆಂಬ ಹೆಣ್ಣನ್ನು ವಿರೂಪಗೊಳಿಸುವುದು- ಮರಳಿ ಆಕೆಯಿಂದ ಬೇರೆಯವರ ಧರ್ಮ ಕೆಡದಿರಲೆಂದೇ ಆಗಿದೆ.

ಮಗನಾಗಿ, ಅಳಿಯನಾಗಿ, ಸಹೋದರನಾಗಿ, ಪತಿಯಾಗಿ, ಮಿತ್ರನಾಗಿ, ಶತ್ರುವಾಗಿ, ಬಂಧುವಾಗಿ, ತಂದೆಯಾಗಿ, ಕ್ಷತ್ರಿಯನಾಗಿ, ದೊರೆಯಾಗಿ, ಯೋಧನಾಗಿ, ಹೇಗೆ ವರ್ತಿಸಿದರೆ ಪುತ್ರಾದಿ ಧರ್ಮಗಳು ಸಾರ್ಥಕವಾಗುತ್ತವೆಯೋ, ಹಾಗೆ ನಡೆದು ತೋರಿದ್ದಾನೆ. ರಾಜಧರ್ಮ ರಕ್ಷಣೆಗಾಗಿಯೇ ಸೀತಾಪರಿತ್ಯಾಗ ಮಾಡಿದ ಶ್ರೀರಾಮ ಸ್ವರ್ಣಮಯ ಸೀತಾಪ್ರತಿಮೆಯನ್ನು ಇಟ್ಟುಕೊಂಡು ಯಜ್ಞವನ್ನು ಮಾಡಿ ಪತಿಧರ್ಮವನ್ನು ಪಾಲಿಸುತ್ತಾನೆ. ಯಜ್ಞಕ್ಕಾಗಿಯೂ ಏಕಪತ್ನೀ ವ್ರತಭಂಗ ಮಾಡುವುದಿಲ್ಲ. ಜಾಬಾಲಿಮುನಿಯ ನಾಸ್ತಿಕವಾದವನ್ನೂ ಸಹನೆಯಿಂದ ಆಲಿಸಿ, ಅವರ ಎದುರಿಗೇ ಭರತನಿಗೆ ಆಸ್ತಿಕಧರ್ಮವನ್ನು ಬೋಧಿಸುತ್ತಾನೆ. ಮನುಷ್ಯ ಸಮಾನವಾಗಿಯೇ ಪಶು-ಪಕ್ಷಿಗಳನ್ನೂ, ಪ್ರಕೃತಿಯನ್ನೂ ಪ್ರೀತಿಸುತ್ತಾನೆ.
ಭರಣಃ ಪೋಷಣಾಧಾರಃ ಶರಣ್ಯಃ-ಸರ್ವವ್ಯಾಪಕಃ | ಕರುಣಃ ಷಡ್ ಗುಣೈಃ ಯುಕ್ತಃ ರಾಮಸ್ತು ಭಗವಾನ್ ಸ್ವಯಮ್ ||
– ಭರಣ ಪೋಷಣೆ ಮಾಡುವವನೂ, ಶರಣಾಗತರಕ್ಷಕನೂ, ಸರ್ವವ್ಯಾಪಕನೂ, ಕರುಣಾಳುವೂ ಆದ ರಾಮನು ಷಡ್ಗುಣಯುಕ್ತನಾದ ಸ್ವಯಂ ಭಗವಂತನಾಗಿದ್ದಾನೆ.

‘ರಾಮೋ ವಿಗ್ರಹವಾನ್ ಧರ್ಮಃ’ – ಧರ್ಮವೇ ಶರೀರಿಯಾಗಿ ರಾಮನಾಗಿದೆ. ರಾಮನ್ನಾಸ್ತಿಪರಾಯಣಂ ಪರತರಂ… ರಾಮನಿಗಿಂತ ಮಿಗಿಲಾಗಿ ಏನೂ ಇಲ್ಲ ಎಂದು ಬಣ್ಣಿಸಿದಂತೆ ಶ್ರೀರಾಮಚಂದ್ರನು ನರನಾದ ನಾರಾಯಣ, ನಾರಾಯಣನಾದ ನರ. ಮರ್ಯಾದಾಪುರುಷೋತ್ತಮ.

ರಾಮಚಂದ್ರಮಠಾಧೀಶೈಃ ರಾಮಾವರ್ಜಿತಜೀವನೈಃ |
ರಾಮಾನಾಮಾಂಕಿತೈಃ ಪೂಜ್ಯೋ ರಾಮೋsವ್ಯಾತ್ ರಾಮಣೀಯಕಃ ||
~*~

Facebook Comments