ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಶ್ರೀಗುರು ಪರಂಪರೆಯಲ್ಲಿ ನಮ್ಮನ್ನು ಅನುಗ್ರಹಿಸುತ್ತಾ ಬಂದಿರುವ ಎಲ್ಲ ಗುರುಗಳ ಅನುಗ್ರಹ ನಮ್ಮೆಲ್ಲರ ಮೇಲಿರಲಿ.

ಹರೇರಾಮ

~

ಶ್ರೀಗುರುಕೃಪೆ ಸದಾ ಇರಲಿ..

ಶ್ರೀಗುರುಕೃಪೆ ಸದಾ ಇರಲಿ..

ಜ್ಞಾನ ಸುಮ 4

ಆದಿಶಕ್ತಿ ಶ್ರೀ ಮಹಾಮಾಯಾ

ಕೈಂತಜೆ ನರಸಿಂಹ ಭಟ್ಟ, ವಿದ್ವಾನ್

ಯತ್ರೈವ ಯತ್ರೈವ ಮನೋಮದೀಯಂ | ತತ್ರೈವ ತತ್ರೈವ ತವ ಸ್ವರೂಪಮ್ |
ಯತ್ರೈವ ಯತ್ರೈವ ಶಿರೋಮದೀಯಂ |ತತ್ರೈವ ತತ್ರ್ಯೈವ ಪದದ್ವಯಂ ತೇ||

ಎಲ್ಲೆಲ್ಲಿ ಎಲ್ಲೆಲ್ಲಿ ಮನವೆನ್ನದಿಹುದೋ | ಅಲ್ಲಲ್ಲಿ ಅಲ್ಲಲ್ಲಿ ನಿನ್ನ ಪರಿಜಿಹುದು |
ಎಲ್ಲೆಲ್ಲಿ ಎಲ್ಲೆಲ್ಲಿ ತಲೆಯೆನ್ನದಿಹುದೋ | ಅಲ್ಲಲ್ಲಿ ಅಲ್ಲಲ್ಲಿ ನಿನ್ನಡಿಗಳಿಹುದು ||

ಓಂಕಾರಸ್ವರೂಪಿಣಿಯೂ, ಆದಿಶಕ್ತಿಯೂ, ಮಹಾಮಾಯೆಯೂ, ಜಗದೀಶ್ವರಿಯೂ ಆಗಿರುವ, ಶ್ರೀ ದುರ್ಗಾಂಬಿಕೆಯ ಕುರಿತು ನಾಲ್ಕಾರು ಮಾತುಗಳನ್ನು ಆಡಿ, ಹಾಡಿ, ಓದಿ, ಬರೆದು, ಕೊಂಡಾಡುವುದೂ, ಆ ಭವ್ಯ-ದಿವ್ಯ ಸನ್ನಿಧಿಯಲ್ಲಿ ಗೋತ್ರಪ್ರವರಾದಿಗಳನ್ನು ಹೇಳಿ, ಬಲವಂದು, ಸಾಷ್ಟಾಂಗ ನಮಸ್ಕಾರಗಳನ್ನು ಸಮರ್ಪಿಸುವುದೂ ಒಂದೇ ಆಗಿದೆ.

ಆದಿ, ಶಕ್ತಿ, ಮಹಾ, ಮಾಯಾ ಎಂಬ ಈ ಪದಗಳಿಗೆ ಬಹಳಷ್ಟು ಅರ್ಥಗಳಿವೆ.
1. ಆದಿ – ಎಂದರೆ ಮೂಲ, ಪ್ರಾರಂಭ, ಮುಖ್ಯ, ಮೂಲಕಾರಣ, ಮೊದಲಿನ ಎಂದೂ,
2. ಶಕ್ತಿ– ಎಂದರೆ ಶೌರ್ಯ, ಸಾಮರ್ಥ್ಯ, ಕೆಚ್ಚು, ಕಸುವು, ದುರ್ಗಾದೇವಿ ಎಂದೂ,
3. ಮಹಾ- ಎಂದರೆ ಘನವಾದ, ಜ್ಞಾನವುಳ್ಳ, ಶ್ರೇಷ್ಟವಾದ, ಅಧಿಕವಾದ, ಹೆಚ್ಚಿನದಾದ, ಬಲವುಳ್ಳ ಎಂದೂ,
4. ಮಾಯಾ- ಎಂದರೆ ಮೋಹ, ಭ್ರಾಂತಿ, ಭ್ರಮೆ, ಕಣ್ಣುಕಟ್ಟು, ಇಲ್ಲದುದು, ವಿಶಿಷ್ಟ ಸೃಷ್ಟಿಶಕ್ತಿ, ಅಜ್ಞಾನ, ಸಂಪತ್ತು, ನಿಸರ್ಗ, ಪ್ರಕೃತಿ, ದೈವಿಕಲೀಲೆ, ಮಮತೆ, ಲಕ್ಷ್ಮೀದೇವಿ, ದುರ್ಗಾದೇವಿ ಎಂದೂ ನಾನಾರ್ಥಗಳಿವೆ.

ವಿಶೇಷವಾದ ಅರ್ಥವ್ಯಾಪ್ತಿಗಳಿಂದ ಕೂಡಿದ ಈ ಶಬ್ಧಗಳನ್ನು ಅನ್ವಯಿಸಿ, ವಿಶ್ಲೇಷಿಸಿದಾಗ, ನಮಗೆ ’ಆದಿಶಕ್ತಿ ಶ್ರೀಮಹಾಮಾಯಾ’ ಎಂದು ಹೆಸರಿಸಲ್ಪಡುವ ಜಗದೀಶ್ವರಿ ಶ್ರೀ ದುರ್ಗಾಂಬಿಕೆಯ ಬೃಹತ್ತು-ಮಹತ್ತುಗಳ ಅರಿವಾಗುತ್ತದೆ. ಸೃಷ್ಟಿಯ (ಲೋಕದ) ಸೃಷ್ಟಿ (ಉತ್ಪತ್ತಿ) ಗಿಂತಲೂ ಮೊದಲಿನವಳೂ, ಸೃಷ್ಟಿಯ ಹಾಗೂ ವಿಶ್ವದ ಸಕಲ ಜೀವಿಗಳ ಆವಿರ್ಭಾವಕ್ಕೆ(ಹುಟ್ಟಿಗೆ) ಮೂಲಕಾರಣಳಾದವಳೂ ಗುರುತರವೂ, ವಿಶಾಲವೂ ಆದ ಶಕ್ತಿ-ಸಾಮರ್ಥ್ಯಗಳನ್ನು ಹೊಂದಿದವಳೂ, ಶ್ರೇಷ್ಟಳೂ, ಹೆಚ್ಚಾದ ಮೇಲ್ಮೆಯನ್ನು ಹೊಂದಿದವಳೂ, ಮೋಹ-ಭ್ರಮಾ-ಭ್ರಾಂತಿ-ಅಜ್ಞಾನಗಳಲ್ಲಿ ಹಾಸುಹೊಕ್ಕಾಗಿರುವವಳೂ, ಚರ್ಮಚಕ್ಷುಗಳಿಗೆ ಅಗೋಚರಳೂ, ವಿಶಿಷ್ಟ ಸೃಷ್ಟಿಶಕ್ತಿ-ಧಾರಣಾಶಕ್ತಿಗಳಿಂದ ಕೂಡಿದವಳೂ, ನಿಸರ್ಗಸ್ವರೂಪಿಣಿಯೂ, ಮೂಲಪ್ರಕೃತಿಯೂ, ಜಗದಾಧಾರೆಯೂ ಜ್ಞಾನಭರಿತೆಯೆಂಬುದರಿಂದ ವಾಗೀಶ್ವರಿ-ಶಾರದೆಯಾಗಿರುವವಳೂ, ಸಂಪದ್ಭರಿತೆಯೆಂಬುದರಿಂದ ಶ್ರೀಲಕ್ಷ್ಮೀದೇವಿಯಾಗಿರುವವಳೂ, ಅಜ್ಞಾನ(ತಾಮಸ) ಆವೃತೆಯೆಂಬುದರಿಂದ ಕಾಲಿಕಾಸ್ವರೂಪದಿಂದ ಒಪ್ಪಿರುವವಳೂ, ಮಮತಾಮಯಿಯೆಂಬುದರಿಂದ ಜಗನ್ಮಾತೆಯಾಗಿ ಸಮಸ್ತ ಜೀವಕೋಟಿಗಳ ಉತ್ಪತ್ತಿ-ಪಾಲನೆಗಳನ್ನು ಮಾಡುತ್ತಿರುವವಳೂ – ಎಂಬಿತ್ಯಾದಿ ವಿಚಾರಗಳು ನಮಗೆ ವೇದ್ಯವಾಗುತ್ತವೆ.

ಪ್ರಕೃತಿ-ಪುರುಷ, ಅಭೇದ್ಯ ಘಟಕವಾದುದರಿಂದ, ಆದಿ-ಶಕ್ತಿ, ಮಹಾ-ಮಾಯಾ ಎಂಬಲ್ಲಿನ ಆದಿ-ಮಹತ್(ಮಹಾ) ಎಂಬವುಗಳು “ಪುರುಷ”ವಾಚಕ ಶಬ್ಧಗಳೆಂದೂ, ಶಕ್ತಿ-ಮಾಯಾ ಎಂಬುವುಗಳು “ಪ್ರಕೃತಿ”ವಾಚಕ ಶಬ್ಧಗಳೆಂದೂ ಕಲ್ಪಿಸಲು ಎಡೆಯಿದೆ. ಆದಿಶಕ್ತಿ(ಶಿವಶಕ್ತಿ), ಮಹಾ ಮಾಯಾ(ವಿಷ್ಣುಮಾಯಾ) ಎಂದು ಅರ್ಥೈಸಬಹುದಾಗಿದೆ. ಪ್ರಕೃತಿಯನ್ನೇ ಆಗಲಿ, ಪುರುಷನನ್ನೇ ಆಗಲಿ, ಅಥವಾ ಅವೆರಡರ ‘ಘಟಕರೂಪ’(ಓಂಕಾರ)ವನ್ನೇ ಆಗಲಿ ಇದಮಿತ್ಥಂ ಎಂದು ಹೇಳುವುದೋ, ವಿವರಿಸುವುದೋ, ಚರ್ಮಚಕ್ಷುಗಳಿಂದ ಕಾಣುವುದೋ ಸಾಧ್ಯವಾಗದ ವಿಚಾರವಾಗಿದೆ. ಆದರೆ, ರೂಢಿಯಲ್ಲಿ(ಭೂಮಿಯಲ್ಲಿ, ವ್ಯವಹಾರದಲ್ಲಿ) ಆದಿಶಕ್ತಿ, ಮಹಾಮಾಯಾ – ಎಂಬ ಪದಗಳೆರಡೂ ಶ್ರೀದುರ್ಗಾವಾಚಕವಾಗಿಯೇ ಪ್ರಸಿದ್ಧವಾಗಿವೆ.

“ಆದಿಶಕ್ತಿ ಶ್ರೀ ಮಹಾಮಾಯೆ” ಯನ್ನು ಆರ್ಷೇಯ ಋಷಿ-ಮುನಿಗಳೂ, ಮನೀಷಿಯರೂ ನಾನಾ ದೃಷ್ಟಿಕೋನಗಳಿಂದ ವೀಕ್ಷಿಸಿದ್ದಾರೆ.
“ಮೂಲಪ್ರಕೃತಿ”ಯಾದ ಆಕೆಯು ಏಕಸ್ವರೂಪಿಯೆಂದೂ, ಪ್ರಕೃತಿ-ಪುರುಷವೆಂಬ ದ್ವಂದ್ವ ಸ್ವರೂಪವೆಂದೂ, ಮಹಾಕಾಲೀ ಮಹಾಲಕ್ಷ್ಮೀ, ಮಹಾಸರಸ್ವತೀಯೆಂಬ ತ್ರಿಗುಣಾತ್ಮಕ ಸ್ವರೂಪಳೆಂದೂ, ಪಂಚಮುಖ ಪರಮೇಶನರ್ಧಾಂಗಿಯೆನಿಸಿ, ಭೂದುರ್ಗಾ, ಜಲದುರ್ಗಾ, ಅಗ್ನಿದುರ್ಗಾ, ವನದುರ್ಗಾ, ಅಗ್ರ(ಆಕಾಶ) ದುರ್ಗಾ – ಎಂಬ ಪಂಚದುರ್ಗಾಪರಮೇಶ್ವರಿಯಾಗಿ ಅಪ್ಪಿ-ಒಪ್ಪಿಕೊಂಡಿರುವವಳೆಂದೂ, ದಾನವ ವಂಶ ನಿರ್ಮೂಲನಕ್ಕಾಗಿ ಬ್ರಹ್ಮಾಣೀ, ವೈಷ್ಣವೀ, ಮಾಹೇಶ್ವರೀ, ಕೌಮಾರೀ, ವಾರಾಹೀ, ನಾರಸಿಂಹೀ ಹಾಗೂ ಐಂದ್ರೀ – ಎಂಬ ಸಪ್ತ ಮಾತೃಕಾ ಪರಿಜುಗಳನ್ನು ಪಡೆದಿರುವಳೆಂದೂ, ದುರ್ಗಾ, ಆರ್ಯಾ, ಭಗವತೀ, ಕೌಮಾರೀ, ಅಂಬಿಕಾ, ಮಹಿಷಮರ್ದಿನೀ, ಚಂಡಿಕಾ, ಸರಸ್ವತೀ, ವಾಗೀಶ್ವರೀ (ಇವು ಮಂತ್ರವಿಧಾನದವುಗಳು); ಅಥವಾ – ಶೈಲಪುತ್ರೀ, ಬ್ರಹ್ಮಚಾರಿಣೀ, ಚಂದ್ರಘಂಟಾ,ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನೀ, ಕಾಲರಾತ್ರೀ, ಮಹಾಗೌರೀ, ಸಿದ್ಧಧಾತ್ರೀ (’ಸಪ್ತಶತೀ’ ಗ್ರಂಥದಲ್ಲಿ ಹೆಸರಿಸಲ್ಪಟ್ಟ ಇವು ತಂತ್ರವಿಧಾನದವುಗಳು) ಎಂಬ ನವದುರ್ಗಾ ಸ್ವರೂಪಗಳಿಂದ ಒಪ್ಪಿರುವವಳೆಂದೂ ವಿಶ್ಲೇಷಿಸಿದ್ದಾರೆ. ದುಷ್ಟ ದೈತ್ಯಕುಲ ಸಂಹರಣಾರ್ಥವಾಗಿ, ಕಾಲೀ, ಚಾಮುಂಡೀ, ರಕ್ತೇಶ್ವರೀ, ಚಂಡಿಕಾದಿ ಅವತಾರಗಳನ್ನು ಸಿಂಹವಾಹಿನಿಯಾದ ಭಗವತಿಯು ತಳೆದುದರಿಂದ, ಆಕೆಯು ಕರಾಳ ಸ್ವರೂಪಿಣಿಯಾಗಿರುವಳೆಂದೂ, ತಾಮಸೀ ಪ್ರವೃತ್ತಿಯವಳೆಂದೂ, ಕೆಲವರ ಮನೋಭಾವವಿದೆ. ಅಂತಹವರು, ಅವಳ ಬಾಹ್ಯರೂಪವನ್ನು ನೋಡಿದರಷ್ಟೇ ಹೊರತು, ಅಂತರಂಗವನ್ನಲ್ಲ. ‘ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ’ – ಇಂತಹ ಜನರು ಲೋಕದಲ್ಲಿ ಇದ್ದಾರೆಂದು ತಿಳಿದೇ ಜಗದ್ಗುರು ಶ್ರೀಶಂಕರ ಭಗವತ್ಪಾದಾಚಾರ್ಯರು, ಈ ಸೂಕ್ತಿಯನ್ನು ಘಂಟಾಘೋಷವಾಗಿ ಸಾರಿರಬೇಕೆಂದು ತೋರುತ್ತದೆ. ಅಂಬಿಕೆಯು ನವರಾತ್ರಿ ಪೂಜಾಕಾಲದ ವೈಶಿಷ್ಟ್ಯಗಳನ್ನು ವಿಚಾರ ಮಾಡಿದಾಗ ಆಕೆಯು ತಾಮಸೀ ಪ್ರವೃತ್ತಿಯವಳಲ್ಲ; ಕೆಟ್ಟತಾಯಿ- ಅಲ್ಲವೇ ಅಲ್ಲ ಎಂದು ಅರಿವಾಗುತ್ತದೆ. ಶ್ರೀ ಭಗವತ್ಪಾದರ ಸೂನೃತವು ತ್ರಿಕಾಲ ಸತ್ಯ – ಎಂದು ತಿಳಿಯುತ್ತದೆ.

ದುಷ್ಟ ದಾನವ ಹರಣಕ್ಕಾಗಿ, ಶಿಷ್ಟಜನ ಪರಿಪಾಲನೆಗಾಗಿ, ಆದಿಶಕ್ತಿಯು ಶ್ರೀ ಮಹಾಕಾಲೀ, ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಸರಸ್ವತೀ – ಎಂಬ ತ್ರಿಸ್ವರೂಪಗಳಿಂದ ಸಪ್ತ ಮಾತೃಕಾ ರೂಪಗಳಿಂದ, ನವದುರ್ಗಾರೂಪಗಳಿಂದ, ಬೇರೆಬೇರೆಯೇ ಕಾಲಗಳಲ್ಲಿ ಅವತರಿಸಿ, ಲೋಕಹಿತ ಕಾರ್ಯಗಳನ್ನು ಮಾಡಿದುದರ ನಿರಂತರ ನೆನಹಿಗಾಗಿ, ಆ ಅವತಾರ ವಿಶೇಷಗಳನ್ನು, ಭಗವದ್ಭಕ್ತರು ಪ್ರತಿ ವರ್ಷವೂ ಅಶ್ವಯುಜ ಮಾಸದ ಶುದ್ಧ ಪ್ರತಿಪದೆಯಿಂದ ನವಮಿಯ ತನಕ ಸತತ ಒಂಬತ್ತು ದಿವಸಗಳ ರಾತ್ರಿಗಳಲ್ಲಿ ಏಕತ್ರವಾಗಿ ಪೂಜಿಸುತ್ತ ಬರುವುದು ಕಂಡುಬರುತ್ತದೆ. ನವರಾತ್ರಿ ಕಾಲದಲ್ಲಿ ನಡೆಸಲ್ಪಡುವ ಈ ಭಗವತೀ ಆರಾಧನೆಯು ವೈಶಿಷ್ಟ್ಯಪೂರ್ಣವಾಗಿದೆ. ಈ ವಿಶಿಷ್ಟತೆಗಳ ಮೂಲಕ ನಾವು ಆದಿಶಕ್ತಿ ಮಾಹಾಮಾಯೆಯ ಮೇಲ್ಮೈಯನ್ನು ಅರ್ಥವಿಸಿಕೊಳ್ಳಬಹುದಾಗಿದೆ.

“ನವರಾತ್ರಿ” ಎಂದರೆ ಒಂಬತ್ತು ರಾತ್ರಿಗಳು, ಹೊಸ ರಾತ್ರಿಗಳು ಎಂದು ಅರ್ಥವಾಗಿದೆ, ನವ(ಒಂಬತ್ತು) ಎಂಬ ಸಂಖ್ಯೆಯು ಸಂಖ್ಯೆಗಳಲ್ಲಿ ಕೊನೆಯದಾಗಿದೆ. ಅದನ್ನು ಎಷ್ಟುಪಟ್ಟು ವರ್ಧಿಸಿದರೂ, ಬಂದ ಗುಣಲಬ್ಧವನ್ನು ಕೂಡಿಸಿ ಏಕಸ್ಥಾನಕ್ಕೆ ತಂದಾಗ ಅದು ಒಂಬತ್ತೇ ಆಗುವುದು ಈ ಸಂಖ್ಯೆಯ ವಿಶೇಷತೆಯಾಗಿದೆ. (ಉದಾ-೯*೧=೯;೯*೨=೧೮(೧+೮=೯);೯*೩=೨೭(೭+೨=೯)ಇತ್ಯಾದಿ) ಶ್ರೀ ದುರ್ಗಾಂಬಿಕೆಯ ಮೇಲ್ಮೆಯೂ ಹಾಗೆಯೇ. ಆಕೆಯು ಯಾವುದೇ, ಎಷ್ಟೇ ಅವತಾರಗಳನ್ನು ತಾಳಿದರೂ ಕೊನೆಗೆ ಆದಿಶಕ್ತಿಯಾಗಿಯೇ ಇರುತ್ತಾಳೆ. ಪ್ರಧಾನದೀಪವೊಂದರಿಂದ ಹಲವಾರು ದೀಪಗಳು ಉರಿಸಲ್ಪಟ್ಟರೂ ಮೂಲದ ದೀಪ್ತಿಯೂ ಹಾಗೆಯೇ ಇರುವಂತೆ, ಎಷ್ಟೆಷ್ಟು ಅವತಾರಗಳನ್ನು ಹೊಂದಿದರೂ, ಆದಿಶಕ್ತಿಯು ಮೊದಲಿನಂತೆಯೇ ದೇದೀಪ್ಯಮಾನವಾಗಿರುತ್ತಾಳೆ.

ವರ್ಷದ ಮುನ್ನೂರ ಅರುವತ್ತೈದು ರಾತ್ರಿಗಳಲ್ಲಿ ಅಶ್ವಯುಜ ಮಾಸದ ಶುಕ್ಲಪ್ರತಿಪದೆಯಂದು ಮೊದಲ್ಗೊಂಡು ನವಮಿಯವರೆಗಿನ ಒಂಬತ್ತು ರಾತ್ರಿಗಳನ್ನು ಮಾತ್ರ ‘ನವರಾತ್ರಿ’ ಯೆಂದು ವಿಶೇಷವಾಗಿ ಹೆಸರಿಸುತ್ತಿರುವುದರಿಂದಲೂ, ಈ ನವ-ರಾತ್ರಿಗಳ ಪೂಜೆಗಳಲ್ಲಿ ಕೆಲ ಕೆಲವು ವೈಶಿಷ್ಟ್ಯಗಳು ವ್ಯಕ್ತವಾಗುವುದರಿಂದಲೂ, ಬೇರೆ ಬೇರೆ ಸಂದರ್ಭಗಳಲ್ಲಾದ ದುರ್ಗಾವತಾರಗಳನ್ನು ಒಗ್ಗೂಡಿಸಿ ಸಮಷ್ಟಿಯಾಗಿ ಅರ್ಚಿಸುವ ‘ಹೊಸತನ’(ವಿಶೇಷಕ್ರಮ) ಇರುವುದರಿಂದಲೂ, ನವ(ಹೊಸತನವಿರುವ) ರಾತ್ರಿ- ಎನ್ನುವ ಹೆಸರು ಔಚಿತ್ಯಪೂರ್ಣವಾಗಿದೆ.

ತ್ರ್ಯಂಬಿಕೆ(ಗೌರೀ)ಯನ್ನು ಕೇವಲ ಒಂದೇ ರಾತ್ರಿಯಲ್ಲಿ ಪೂಜಿಸುವ ಪರಿಪಾಠವಿದೆ. ಇದನ್ನು ‘ದುರ್ಗಾಪೂಜೆ’ ಎನ್ನುತ್ತಾರೆ. (ದ.ಕ. ಜಿಲ್ಲೆಯ ಕೆಲವೆಡೆಗಳಲ್ಲಿ ದುರ್ಗಾಪೂಜೆಯನ್ನು ’ಶುಕ್ರವಾರ ಪೂಜೆ’ ಎಂದೂ ಹೇಳುತ್ತಾರೆ.) ಐವತ್ತೇಳು ಉವಾಚಗಳು, ನಲವತ್ತೆರಡು ಅರ್ಧಶ್ಲೋಕಗಳು, ಅರವತ್ತಾರು ಅವಧಾನಗಳು ಹಾಗೂ ಐನೂರ ಮೂವತ್ತೈದು ಪೂರ್ಣಶ್ಲೋಕಗಳುಳ್ಳ, ಶಾಕ್ತೇಯರಿಗೆ ಪರಮಪವಿತ್ರವಾದ, “ಶ್ರೀ ದುರ್ಗಾಸಪ್ತಶತೀ” ಗ್ರಂಥದ ಶ್ಲೋಕಗಳನ್ನು, ದುರ್ಗಾದೇವಿಯ ಪ್ರೀತ್ಯರ್ಥವಾಗಿ ಪಾರಾಯಣ ಮಾಡುವ ಪದ್ಧತಿ ಇದೆ. ಉವಾಚಾದಿಗಳನ್ನು ಮಂತ್ರವಾಗಿ ಪರಿವರ್ತಿಸಿಕೊಂಡು ‘ಸ್ವಾಹಾ’ದೊಡನೆ ಹವಿಸ್ಸನ್ನಿತ್ತು ಹೋಮ ಮಾಡುವ ಕ್ರಮವೂ ಇದೆ. ಇದನ್ನು ‘ಚಂಡಿಕಾ ಹೋಮ’ ಎನ್ನುತ್ತಾರೆ. ಶ್ಲೋಕರೂಪದಲ್ಲಿ ಪಾರಾಯಣವನ್ನೂ, ಮಂತ್ರರೂಪದಲ್ಲಿ ಹವನ-ಪೂಜೆಗಳನ್ನೂ ಮಾಡುತ್ತಿರುವುದರಿಂದ ’ಶ್ರೀ ದುರ್ಗಾಸಪ್ತಶತೀ’ ಗ್ರಂಥವು ಅದ್ವಿತೀಯವೆನಿಸಿದೆ. ದುರ್ಗಾಸಪ್ತಶತಿಯ ಅನುಸಾರವಾಗಿ ಬೆಳಿಗ್ಗೆ-ಮಧ್ಯಾಹ್ನ-ರಾತ್ರಿಗಳಲ್ಲಿ ಮಾಡುವ “ತ್ರಿಕಾಲ ಪೂಜೆ”ಯಲ್ಲಿ ಮಹಾಕಾಲೀ, ಮಹಾಲಕ್ಷ್ಮೀ, ಮಹಾಸರಸ್ವತೀ ದೇವಿಯರನ್ನು ಅರ್ಚಿಸುತ್ತಾರೆ. (ಪುಷ್ಪಾಂಜಲಿಯ ಸಂಖ್ಯಾನುಸಾರ (12,24,48 ಸಾವಿರಗಳು)ವಾಗಿ ತ್ರಿಕಾಲ ಪೂಜೆಯಲ್ಲಿ ಮೂರು ವಿಧಗಳಿವೆ. ಸಾಮಾನ್ಯವಾಗಿ (ವಾಡಿಕೆಯಾಗಿ) ಇವನ್ನು ಕಾಲು, ಅರ್ಧ, ಪೂರ್ಣ(ಮಂಡಲ) ಪೂಜೆಗಳೆನ್ನುತ್ತಾರೆ. ನವರಾತ್ರಿಯಲ್ಲಿ ದುರ್ಗಾ, ಆರ್ಯಾ, ಭಗವತೀ, ಕೌಮಾರೀ, ಅಂಬಿಕಾ, ಮಹಿಷಮರ್ದಿನೀ, ಚಂಡಿಕಾ, ಸರಸ್ವತೀ ಮತ್ತು ವಾಗೀಶ್ವರೀ ಎಂಬ ನವದುರ್ಗೆಯರಿಗೆ ಪ್ರತ್ಯೇಕ ಪ್ರತ್ಯೇಕವಾಗಿಯೂ, ಬ್ರಹ್ಮಾಣಿ-ವೈಷ್ಣವೀ ಮೊದಲಾದ ಸಪ್ತಮಾತೃಕೆಯರಿಗೆ ದೀಪಾರಾಧನೆಯ ಮೂಲಕವೂ ಆರಾಧನೆಯಾಗುತ್ತದೆ. ನವರಾತ್ರಿಯಲ್ಲಿ ಮೂರು ಮೂರು ದಿನಗಳಲ್ಲಿ ತ್ರಿಮಾತೃಕೆಯರಿಗೂ, ದೀಪಾರಾಧನೆ ಮೂಲಕ ಸಪ್ತಮಾತೃಕೆಯರಿಗೂ, ಬಿಡಿಬಿಡಿಯಾಗಿ ಒಂಬತ್ತು ದಿವಸಗಳಲ್ಲಿ ನವದುರ್ಗೆಯರಿಗೂ ಅರ್ಚನೆಯಾಗುವುದು, ದುರ್ಗಾಪೂಜೆಯಲ್ಲಿ ಮಾತ್ರ ಕಂಡುಬರುವ ವೈಶಿಷ್ಟ್ಯವಾಗಿದೆ. “ಒಂದರಿಂದ ಹಲವು; ಹಲವು ಕೂಡಿ ಒಂದು” – ಎಂಬುದೇ ಆದಿಶಕ್ತಿ ಶ್ರೀಮಹಾಮಾಯೆಯ ವೈಶಿಷ್ಟ್ಯ – ಎಂಬುದನ್ನು ನಾವಿದರಿಂದ ತಿಳಿದುಕೊಳ್ಳಬಹುದು.

ನವರಾತ್ರಿಯ ಮಧ್ಯಂದಿನವಾದ ಪಂಚಮೀ ತಿಥಿಯಂದು ಶ್ರೀ ಲಲಿತಾಪರಮೇಶ್ವರಿಗೆ ಆರಾಧನೆಯು ನಡೆಯುತ್ತದೆ. ಪಂಚಮೀ ತಿಥಿಯಂದು ಲಲಿತೆಗೆ ನಡೆಯುವ ಅರ್ಚನೆಯಾದುದರಿಂದ ಆ ದಿನವು “ಲಲಿತಾ ಪಂಚಮೀ” ಎಂದೇ ಪ್ರಸಿದ್ಧವಾಗಿದೆ. ಲಲಿತಾ ಎಂದರೆ ಸೌಮ್ಯ-ಮೃದು- ಕೋಮಲವೆಂಬ ಅರ್ಥಗಳುಳ್ಳ ಶಬ್ಧವೂ ಹೌದು; ಭಗವತಿ ಶ್ರೀ ದುರ್ಗಾಂಬಿಕೆಯ ಶುಭನಾಮಧೇಯವೂ ಹೌದು. ದುಷ್ಟರಾಕ್ಷಸ ವಂಶ ಹನನಕ್ಕಾಗಿ ಮಹಾಮಾಯೆಯು ಕರಾಳ ಸ್ವರೂಪದ ಚಾಮುಂಡೀ, ರಕ್ತೇಶ್ವರೀ, ಚಂಡಿಕೆಯಾಗಿ ಆವಿರ್ಭವಿಸಿದರೂ, ಶಿಷ್ಟ-ದೇವತೆಗಳ ಮಟ್ಟಿಗೆ ಅಂಬಿಕೆಯಾಗಿಯೇ ಇದ್ದಳು. ಮಮತಾಮಯಿಯಾಗಿದ್ದಳು. ಅನಿಮಿಷರ ಕಣ್ಣಿಗೆ-ಮನಸ್ಸಿಗೆ ಕೋಮಲೆಯಾಗಿದ್ದಳು-ಲಲಿತೆ(ಸೌಮ್ಯ)ಯಾಗಿದ್ದಳು. ಪಂಚಮಿಯ ಹಿಂದು-ಮುಂದಿನ ಚತುರ್ಥೀ-ಷಷ್ಠೀ ತಿಥಿಗಳು, ಪಂಚಮಿಯಂದು ಆರಾಧಿಸಲ್ಪಡುವ ಅಂಬಿಕೆಯ (ಲಲಿತಾಂಬಿಕೆಯ) ಇಬ್ಬರು ಸುಪುತ್ರರು ಅವತರಿಸಿದ ತಿಥಿಗಳು. ತನ್ನ ಪ್ರಿಯಪುತ್ರರಾದ, ಗಣಪತಿ-ಷಣ್ಮುಖ ಸ್ವಾಮಿಯರನ್ನು ಇಕ್ಕೆಲಗಳಲ್ಲಿ ನಿಂದಿರಿಸಿಕೊಂಡ ತಾಯಿ ಲಲಿತಾಪರಮೇಶ್ವರಿಯ ಪೂರ್ಣ-ಸೌಮ್ಯ-ಸ್ವರೂಪವದು. ಮಕ್ಕಳೊಂದಿಗಳಾಗಿರುವ ತಾಯಿಯು ಲಲಿತ(ಸೌಮ್ಯ) ಮಾನಸೆಯಾಗಿರುವುದು ವ್ಯಾವಹಾರಿಕವಾಗಿಯೂ ಸತ್ಯವೇ ಆಗಿದೆ.
ಮೊತ್ತಮೊದಲು (ಆದಿಯಲ್ಲಿ-ಪ್ರಾರಂಭದಲ್ಲಿ) ಆದಿಶಕ್ತಿ ಮಹಾಮಾಯೆಯು ಬ್ರಹ್ಮ-ವಿಷ್ಣು-ಮಹೇಶ್ವರರನ್ನು ಸೃಜಿಸಿ, ಅವರಿಗೆ ರಾಜಸ, ಸತ್ವ, ತಾಮಸಗಳೆಂಬ ಗುಣಗಳೊಂದಿಗೆ, ತನ್ನ ‘ವಿಶಿಷ್ಟ ಸೃಷ್ಟಿ ಶಕ್ತಿ’(ಮಾಯಾಶಕ್ತಿ-ಮಾಯೆಯ ಶಕ್ತಿ)ಯನ್ನೂ ಕೊಟ್ಟಳು. ದೇವೀದತ್ತ ಶಕ್ತಿಯೊಂದಿಗೆ ಸ್ವಶಕ್ತಿಯನ್ನೂ ಕೂಡಿಸಿ ಬ್ರಹ್ಮನು ಲಕ್ಷ್ಮೀದೇವಿಯನ್ನು ಸೃಷ್ಟಿಸಿ, ವಿಷ್ಣುವಿಗೆ ಅರ್ಪಿಸಿದನು. ವಿಷ್ಣುವು ಕಾಲಿಕಾದೇವಿಯನ್ನು ಸೃಜಿಸಿ ಶಿವನಿಗೆ ಸಮರ್ಪಿಸಿದನು. ಪರಶಿವನು ಸರಸ್ವತೀದೇವಿಯನ್ನು ಪಡೆದು ಬ್ರಹ್ಮನಿಗಿತ್ತನು. ರಾಜಸ ಗುಣೋಪೇತನಾದ ಬ್ರಹ್ಮನು ಸೃಷ್ಟಿಸಿದ ಸಂಪದಧಿದೇವಿಯು ರಾಜಸಗುಣಭರಿತೆಯಾದಳು. ಪಾಲನಾಕರ್ತೃತ್ವವನ್ನು ಪಡೆದ ವಿಷ್ಣುವಿನ ಸೃಷ್ಟಿಯಾದ ಕಾಲಿಕಾಂಬೆಯು ಪಾಲನೆ, ಆರೋಗ್ಯ-ಸುಖಗಳನ್ನೀಯುವ ಗುಣವನ್ನು ಹೊಂದಿದಳು. ಜ್ಞಾನದಾತೃ ಎನಿಸಿದ ಪರಶಿವನ ಸೃಷ್ಟಿಯಾದ ಸರಸ್ವತಿಯು ಜ್ಞಾನ-ಬುದ್ಧಿಪ್ರದೆ-ಶಾರದೆಯಾದಳು. ಆರೋಗ್ಯ-ಸೌಭಾಗ್ಯ-ಜ್ಞಾನವೆಂಬ ಮಾಹಾದೇವಿಯರ ಗುಣತ್ರಯಗಳು, ಜನನ-ಜೀವನ-ಮರಣಗಳೆಂಬ ಮೂರು ದಿನದ ಬಾಳನ್ನು ಇಹದಲ್ಲಿ ಪಡೆದ ನಮಗೆ ಅತಿ ಅವಶ್ಯವಾಗಿವೆ. ಅವನ್ನು ಹೊಂದುವ ಪ್ರಯತ್ನದ ಸಂಕೇತವೆಂಬಂತೆ, ನವರಾತ್ರಿಗಳಲ್ಲಿ ಮೂರು-ಮೂರು ದಿನಗಳಲ್ಲಿ ತ್ರಿಮಾತೃಕೆಯರನ್ನು ಅರ್ಚಿಸುವುದಾಗಿದೆ.

ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಅದಕ್ಕಾಗಿಯೇ ಎಲ್ಲರೂ ಜ್ಞಾನವನ್ನು ಅಪೇಕ್ಷಿಸುತ್ತಾರೆ. ಅಚಿಂತ್ಯಶಕ್ತಿಯಲ್ಲಿ ಅದನ್ನೇ ದಯಪಾಲಿಸು ಎಂದು ಯಾಚಿಸುತ್ತಾರೆ. ’ಧೀಯೋ ಯೋನಃ ಪ್ರಚೋದಯಾತ್’ ಎಂಬುದೂ ಅದನ್ನೇ ಸೂಚಿಸುತ್ತದೆ. ನಮಗೆ ದುರ್ಗಾಂಬಿಕೆಯು ದಯಪಾಲಿಸುವ ಜ್ಞಾನವು ಸಾಮಾನ್ಯದ್ದಾಗಿರಬಾರದು, ಅದು ಪ್ರಕಾಶಮಾನ-ಕಾಂತಿ(ಲಕ್ಷ್ಮೀ)ಯುಕ್ತವಾಗಿರಬೇಕೆಂದು ನಾವು ಬಯಸುತ್ತೇವೆ. ಅದರ ಸಂಕೇತವೋ ಎಂಬಂತೆ ನವರಾತ್ರಿಯ ದಿನಗಳಲ್ಲಿ ಷಷ್ಟೀಯುಕ್ತ ಸಪ್ತಮೀ ತಿಥಿಯಂದು ಶಾರದಾ ಪ್ರತಿಷ್ಠೆಯನ್ನು ಮಾಡಿ, ದುರ್ಗಾಂಬೆಯೊಂದಿಗೆ ಶಾರದಾ ಪೂಜೆಯೂ ಜರುಗುತ್ತದೆ.

ದೀಪಾರಾಧನೆಯ ಮೂಲಕ ಬ್ರಹ್ಮಾಣೀ ಮೊದಲಾದ ಸಪ್ತಮಾತೃಕೆಯರಿಗೆ ಪೂಜೆಯು ಸಲ್ಲುತ್ತದೆ. ವಾರಾಹೀ-ನಾರಸಿಂಹಿ ಶಕ್ತಿಗಳು ವೈಷ್ಣವೀ ಶಕ್ತಿಯ ಪ್ರಭೇದಗಳೇ ಆಗಿರುವುದರಿಂದ ಪಂಚವರ್ತಿಯ(ಐದುಬತ್ತಿಯ) ದೀಪವನ್ನಿಟ್ಟು ಪೂಜಿಸುವ ಪರಿಪಾಠ ಪ್ರಸಿದ್ಧವಾಗಿದೆ. ದೀಪಾರಾಧನೆಯೂ ಕೆಲವು ವಿಶೇಷಗಳನ್ನು ಹೊಂದಿದೆ. ಐದು ಬತ್ತಿಗಳನ್ನು ಕ್ರಮಾಗತವಾಗಿ ಪ್ರದಕ್ಷಿಣಾರೂಪದಲ್ಲಿ ಮಂತ್ರಗಳನ್ನುಚ್ಚರಿಸುತ್ತಾ ಅರ್ಚಕರು ಉರಿಸುತ್ತಾರೆ. ಬತ್ತಿಗಳು ಸರಿಯಾಗಿ ಉರಿ ಹತ್ತಿಕೊಳ್ಳದಿದ್ದರೆ, ನಂದಿದರೆ, ಪೂಜಾಮಧ್ಯದಲ್ಲಿ ನಂದಿದರೆ (ಪೂಜೆಯ ಕೊನೆಯಲ್ಲಿ ನಂದಿಸುವ ಪದ್ಧತಿಯಿದೆ ಆಗ) ನಂದದೇ ಹೋದರೆ, ತೊಂದರೆ ತಪ್ಪಿದ್ದಲ್ಲವೆಂದು ನಂಬಿಕೆಯಿದೆ. (ಪೂಜೆಯ ಕೊನೆಯಲ್ಲಿ ಉರಿಸಿದ ಬತ್ತಿಯನ್ನು ನಂದಿಸುವ ಕ್ರಮ ಕೆಲವು ಕಡೆಗಳಲ್ಲಿ ಇಲ್ಲ. ಅವರು ನಂದಿಸುವ ಬದಲು ಉರಿಯುತ್ತಿರುವ ಬತ್ತಿಗಳ ಮಂಡಲದ ನಾಲ್ಕು ಮೂಲೆಗಳಲ್ಲಿ ಅರ್ಚಿಸಿದ ಹೂವಿನ ರಾಶಿಯ ಮೇಲೆಯೇ ಇರಿಸುತ್ತಾರೆ. ಇದು ಆಯಾ ಅರ್ಚಕರಿಗೆ ಅವರ ಗುರೂಪದೇಶ ಹೇಗೋ ಹಾಗೆ ಇರುತ್ತದೆ.) ತೊಂದರೆಗಳ ವಿಚಾರದಲ್ಲಿ – “ಪಂಚದುರ್ಗೀಕಲ್ಪೋಕ್ತ” ಶ್ಲೋಕವೊಂದರಲ್ಲಿ ವಿವರಣೆಯು ಈ ರೀತಿಯಾಗಿದೆ –
ಪ್ರಥಮೇ ದೀಪನಾಶೇ ತು ಯಜಮಾನಸ್ಯ ದುಃಖದಂ |
ಭಾರ್ಯಾದುಃಖಂ ದ್ವಿತೀಯೇ ತು ತೃತೀಯೇ ಪುತ್ರಪೌತ್ರಕಮ್ |
ಚತುಷ್ಪಾದೋ ಗೃಹಂ ದ್ರವ್ಯಂ ಚತುರ್ಥೇ ದೀಪನಾಶನೇ |
ಪಂಚಮೇ ದೀಪನಾಶೇ ತು ಪೂಜಕೋ ಪರಿಚಾರಕಮ್ ||

(ತಸ್ಮಾದ್ದೀಪಂ ಪ್ರಯತ್ನೇನ ಭದ್ರೋ ಭದ್ರೈವ ಪಾಲಯೇತ್|)
(*ಈ ಶ್ಲೋಕದಲ್ಲಿ ಹೇಳಿದ ವಿಚಾರಗಳು ಸರಿಯೆಂದು ನಾನು ಸ್ವಾನುಭಾವದಿಂದ ನಂಬುತ್ತೇನೆ.)

ದೇವತಾನುಗ್ರಹ ಪ್ರಾಪ್ತಿಗಾಗಿ ಕೈಕೊಳ್ಳುವ ಮಾರ್ಗಗಳು ಎರಡು ರೀತಿಯಾಗಿವೆ. ಒಂದನೆಯದು ಜಪ-ತಪ-ಯೋಗಾದಿಗಳು; ಎರಡನೆಯದು ಪೂಜೆ-ಪಾರಾಯಣ-ಭಜನಾದಿಗಳು ಇವು ಸಾಮಾನ್ಯರಿಗೆ ಇರುವಂತಹವುಗಳು. ಅಸಾಮಾನ್ಯರಿಗೂ ಸಾಮಾನ್ಯರಿಗೂ ಇರುವಂತಹ ಜಪ-ಪೂಜೆಗಳೆರಡಕ್ಕೂ ಭಕ್ತಿಭರಿತವಾದ ಪುರಶ್ಚರಣೆಯೇ ಮುಖ್ಯವಾಗಿದೆ. ನಿಯಮಾನುಸಾರವಾಗಿ ಭಕ್ತಿಯಿಂದ ಮಾಡುವ ಪೂಜೆಯೇ ಜಪ; ಮತ್ತೆ ಮತ್ತೆ ದೇವತಾಸ್ತೋತ್ರರೂಪವಾದ ಮಂತ್ರದ ಪುರಶ್ಚರಣೆ(ಜಪ)ಯೇ ಪೂಜೆ. ಆದುದರಿಂದ ಜಪ- ಪೂಜೆಗಳೆರಡರ ಉದ್ದೇಶವು ಒಂದೇ ಆಗಿದೆ. “ಜ” ಕಾರೋಜನ್ಮವಿಚ್ಛೇದಃ, “ಪ್”ಕಾರ ಪಾಪವಿನಾಶನಮ್, (ಜ-ಪ, ಪೂ-ಜಾಗಳೆಂಬ ಎರಡೂ ಶಬ್ಧಗಳಲ್ಲಿರುವ ಅಕ್ಷರಗಳನ್ನು ಪರಾಂಬರಿಸಬೇಕು.) ಎಂದರೆ,
1. ಜನ್ಮಗಳನ್ನೂ, ಪಾಪಗಳನ್ನೂ ಇಲ್ಲದಂತೆ ಮಾಡಿಕೊಳ್ಳುವುದು,
2. ಪಾಪಗಳ ನಾಶ(ಇಲ್ಲದಾಗಿಸುವಿಕೆ)ದ ಮೂಲಕ ಪುನರ್ಜನ್ಮವು ಇಲ್ಲದಂತೆ ಮಾಡಿಕೊಳ್ಳುವುದು.
ಜಪ-ಪೂಜಾದಿಗಳು ಈ ಆಧ್ಯಾತ್ಮ ಮಾರ್ಗದಲ್ಲಿ ನಡೆದರೆ, ನಮಗೊದಗುವ ಫಲವೆಂದರೆ, ನಾವು ಯಾವ ದೇವರ ಕುರಿತು ಜಪ- ಅಥವಾ ಪೂಜೆಯನ್ನು ಮಾಡುತ್ತೇವೆಯೋ, ಅದರಿಂದ ಲಭ್ಯವಾಗುವ ಪುಣ್ಯವಿಶೇಷದಿಂದ, ದೇಹಾಂತ್ಯದಲ್ಲಿ ನಮಗೆ ಆ ದೇವತಾನುಗ್ರಹವಾಗಿ, ಪುನರ್ಜನ್ಮವಿರಹಿತವಾದ ಸಾಯುಜ್ಯವು ಸಿದ್ಧಿಸುವುದಾಗಿದೆ. ಆದುದರಿಂದ ಜಪ-ಪೂಜಾದಿಗಳನ್ನು ಮಾಡುವ ಮೊದಲೇ ಅಥವಾ ಮಾಡುತ್ತಿರುವಾಗ ನಾವು ಆರಾಧಿಸಲಿರುವ(ಆರಾಧಿಸುತ್ತಿರುವ) ಆ ಭವ್ಯ-ದಿವ್ಯ ಶಕ್ತಿಯ ಕುರಿತು ಸಾಧ್ಯವಾದಷ್ಟೂ ಅರಿತುಕೊಳ್ಳುವುದು ತೀರಾ ಅವಶ್ಯವಾಗಿದೆ.

ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣಿ ನಮೋಸ್ತುತೇ ||

||ಶ್ರೀ ದುರ್ಗಾರ್ಪಣಮಸ್ತು||
~*~

Facebook Comments