ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಶ್ರೀಗುರು ಪರಂಪರೆಯಲ್ಲಿ ನಮ್ಮನ್ನು ಅನುಗ್ರಹಿಸುತ್ತಾ ಬಂದಿರುವ ಎಲ್ಲ ಗುರುಗಳ ಅನುಗ್ರಹ ನಮ್ಮೆಲ್ಲರ ಮೇಲಿರಲಿ.

ಹರೇರಾಮ.

~

ಶ್ರೀಗುರುಕೃಪೆ ಸದಾ ಇರಲಿ..

ಶ್ರೀಗುರುಕೃಪೆ ಸದಾ ಇರಲಿ..

ಜ್ಞಾನ ಸುಮ 3

ಋತ, ಸತ್ಯ ಮತ್ತು ಧರ್ಮ

ವಿದ್ವಾನ್ ಶೇಷಾಚಲ ಶರ್ಮಾ

ಭಾರತವು ಅತ್ಯಂತ ಮಹಿಮಾನ್ವಿತವಾದ ಪುಣ್ಯಭೂಮಿ. ಮಹರ್ಷಿಗಳ ತಪಸ್ಸಿನಿಂದ ಈ ನಾಡು ಪವಿತ್ರವಾಗಿದೆ. ಇಂತಹ ಧರ್ಮಭೂಮಿಯಲ್ಲಿ ಜನಿಸಿದ ಮಾನವನ ಮಹಿಮೆಯನ್ನು ದೇವತೆಗಳೂ ಕೊಂಡಾಡುತ್ತಾರೆ.

“ಗಾಯಂತಿ ದೇವಾಃ ಕಿಲ ಗೀತಕಾನಿ
ಧನ್ಯಾಸ್ತು ತೇ ಭಾರತಭೂಮಿಭಾಗೇ |
ಸ್ವರ್ಗಾಪವರ್ಗಾಸ್ಪದಮಾರ್ಗಭೂತೇ
ಭವಂತಿ ಭೂಯಃ ಪುರುಷಾಃ ಸುರತ್ವಾತ್ ||

ಕರ್ಮಾಣ್ಯಸಂಕಲ್ಪಿತತತ್ಫಲಾನಿ
ಸಂನ್ಯಸ್ಯ ವಿಷ್ಣೌ ಪರಮಾತ್ಮಭೂತೇ |
ಅವಾಪ್ಯ ತಾಂ ಕರ್ಮಮಹೀಮನಂತೇ
ತಸ್ಮಿನ್ ಲಯಂ ಯೇತ್ವಮಲಾಃ ಪ್ರಯಾಂತಿ ||

ಜಾನೀಮ ನೈತತ್ ಕ್ವ ವಯಂ ವಿಲೀನೇ
ಸ್ವರ್ಗಪ್ರದೇ ಕರ್ಮಣಿ ದೇಹಬಂಧಮ್ |
ಪ್ರಾಪ್ಸ್ಯಾಮ ಧನ್ಯಾಃ ಖಲು ತೇ ಮನುಷ್ಯಾ
ಯೇ ಭಾರತೇ ನೇಂದ್ರಿಯವಿಪ್ರಹೀನಾಃ ||” (ವಿ.ಪು. 2-3)

ದೇವತೆಗಳು ಹೀಗೆ ಹಾಡುತ್ತಾರೆ –

ಭಾರತ ಭೂಮಿಯಲ್ಲಿ ಹುಟ್ಟಿದ ಮನುಷ್ಯರು ದೇವತೆಗಳಿಗಿಂತಲೂ ಶ್ರೇಷ್ಠವಾದವರು. ಅವರು ಸ್ವರ್ಗ ಮತ್ತು ಮೋಕ್ಷಗಳಿಗೆ ಆಸ್ಪದವಾದ ಮಾರ್ಗವಾಗಿರುವ ಭಾರತಭೂಮಿಯಲ್ಲಿ ಜನಿಸಿದ್ದಾರೆ. ಇಂತಹ ಕರ್ಮಭೂಮಿಯಲ್ಲಿ ಜನ್ಮತಾಳಿ ಅವರು ಫಲಾಪೇಕ್ಷೆಯನ್ನು ತೊರೆದು ಪರಮಪುರುಷನಾದ ವಿಷ್ಣುವಿನಲ್ಲಿ ಕರ್ಮಗಳನ್ನು ಅರ್ಪಿಸುತ್ತಾರೆ. ಹೀಗೆ ಶುದ್ಧಾಂತಃಕರಣರಾದ ಅವರು ಅನಂತನಾದ ಆ ಪರಮಾತ್ಮನಲ್ಲಿ ಲಯವಾಗುತ್ತಾರೆ. ಸ್ವರ್ಗಪ್ರದವಾದ ಈ ನಮ್ಮ ಪುಣ್ಯಕರ್ಮವು ಮುಗಿದ ಮೇಲೆ ಮತ್ತೆ ಎಲ್ಲಿ ಜನ್ಮವನ್ನು ನಾವು ಹೊಂದುವೆವೋ ನಮಗೆ ತಿಳಿಯದು. ಭಾರತದಲ್ಲಿ ಹುಟ್ಟಿದ ಮನುಷ್ಯರೇ ಧನ್ಯಾತ್ಮರು. ಏಕೆಂದರೆ ಅವರ ಇಂದ್ರಿಯ ಹಾಗೂ ಮನಸ್ಸುಗಳು ಶಕ್ತಿಹೀನವಾಗಿರುವುದಿಲ್ಲ.

ತಪಸ್ಸಿನಿಂದ ಪವಿತ್ರರಾದ ಮಹರ್ಷಿಗಳು ತಮ್ಮ ತಪೋಬಲದಿಂದ ಕಂಡ ಸನಾತನ ತತ್ತ್ವಗಳಲ್ಲಿ ಋತ, ಸತ್ಯ ಮತ್ತು ಧರ್ಮಗಳು ತ್ರಿಕಾಲ ಸತ್ಯವಾದುವುಗಳಾಗಿವೆ. ಋಗ್ವೇದದಲ್ಲಿ ಅವಿನಾಶಿಯಾದ ತತ್ತ್ವವೇ ಋತ.ಋತದಿಂದಲೇ ಜಗತ್ತಿನ ಸೃಷ್ಟಿಯಾಗಿರುವುದು. ಋತ-ಸತ್ಯಗಳು ಪರಮಾತ್ಮನ ಸೃಷ್ಟಿಕಾರಕ ಶಕ್ತಿಗಳು. “ಋತಂಚ ಸತ್ಯಂಚಾಭೀದ್ಧಾತ್ ತಪಸೋsಧ್ಯಜಾಯತ” (ಋ.ವೇ.10-190-1) ಎಂಬ ಮಂತ್ರವು ಪರಮಾತ್ಮನ ತಪಸ್ಸಿನಿಂದ ಋತ-ಸತ್ಯಗಳ ಆವಿರ್ಭಾವವನ್ನು ವರ್ಣಿಸುತ್ತದೆ. ವಿಶ್ವವ್ಯವಸ್ಥೆಗೆ ಕಾರಣವಾದ ಋತವು ಪರಮಾತ್ಮನ ವಿಭೂತಿ. ಜಗತ್ತಿನಲ್ಲಿ ವಿಷಮತೆಯನ್ನು ಪರಿಹರಿಸಿ ಶಾಂತಿಸಾಮ್ರಾಜ್ಯವು ಹರಡಲು ಋತವೇ ಆಧಾರ. ಭಗವಂತನ ವಿಭೂತಿ ಶಕ್ತಿಗಳಾದ ದೇವಸಮೂಹವು ಋತದಿಂದಲೇ ಅಭಿವ್ಯಕ್ತವಾಗುವುದು. ಋತದಿಂದ ಹುಟ್ಟಿದ ಸೋಮವು ಯಜ್ಞದ ಸಾಧನವೆನಿಸುತ್ತದೆ. ಸೂರ್ಯ-ಚಂದ್ರರೂ ಋತರೂಪವೇ ಆಗಿದ್ದಾರೆ. ಋತದಿಂದ ನಿಯಂತ್ರಿತವಾದ ಪಂಚಭೂತಗಳೂ ಋತರೂಪವಾದವು. ಜಗದ್ವ್ಯಾಪಾರಗಳೆಲ್ಲ ಋತದ ಬಲದಿಂದಲೇ ನಡೆಯುವುದು. ಜಡ-ಚೇತನಗಳ ಅಂತರಾಳದಲ್ಲಿ ಋತಧಾರೆಯೇ ಹರಿಯುತ್ತಿರುವುದು. ಋತ, ಸತ್ಯ ಮತ್ತು ಧರ್ಮಗಳು ಭಗವಂತನ ಜಗನ್ನಿಯಾಮಕ ಶಕ್ತಿಗಳು. “ಋತಗ್ಂ ಸತ್ಯಂ ಪರಂ ಬ್ರಹ್ಮ”, “ಅಣುರೇಷಧರ್ಮಃ” ಎಂಬ ವೇದವಾಣಿಯು ಈ ನಾಮಗಳಿಂದ ಪರಮಾತ್ಮನನ್ನೇ ನಿರ್ದೇಶಿಸುತ್ತದೆ.

ಪರಮಾತ್ಮನ ಸತ್ಯಸಂಕಲ್ಪಶಕ್ತಿಯೇ ಋತವೆನಿಸುತ್ತದೆ. ಅದು ಸತ್ಯವೂ ಹೌದು. ವಿಶ್ವಧಾರಕ ಶಕ್ತಿಯಾಗಿ ಅದು ಧರ್ಮವೂ ಆಗಿದೆ. ಈ ಪದಗಳು ವಿಶ್ವವ್ಯಾಪಕವಾದ ಅರ್ಥತತ್ತ್ವಗಳನ್ನು ಹೊಂದಿವೆ. ಯಥಾರ್ಥವಾದ ವಸ್ತುಪರಿಜ್ಞಾನ, ಜಗದ್ವಯವಸ್ಥೆ, ಅವಶ್ಯವಾಗಿ ಉಂಟಾಗುವ ಕರ್ಮಫಲ, ಪ್ರತಿಯೊಂದು ವಸ್ತುವಿನ ಸ್ವಭಾವಶಕ್ತಿ, ಯಜ್ಞ, ಯಾಗ ಮುಂತಾದ ಪವಿತ್ರಕಾರ್ಯ, ಯಜ್ಞಸಾಮಾಗ್ರಿಗಳು, ಪಂಚಭೂತಗಳು, ಸೂರ್ಯ, ಚಂದ್ರ – ಇತ್ಯಾದಿಯಾಗಿ ಋತ ಶಬ್ಧದ ಅರ್ಥವ್ಯಾಪ್ತಿಯನ್ನು ವೇದದ ಋಷಿಗಳು ಗುರುತಿಸಿ ಕೀರ್ತಿಸಿದರು.

ಸತ್ಯವೆಂದರೆ ಯಥಾರ್ಥ ವಚನವೆಂದು ಪ್ರಸಿದ್ಧವಾಗಿದೆ. ಸತ್ಯವನ್ನು ಕಂಡವರು ತಾನೆ ಸತ್ಯವನ್ನು ನುಡಿಯಬಲ್ಲರು. “ಸತ್ಯಂ ಜ್ಞಾನಮನಂತಂ ಬ್ರಹ್ಮ” ಎಂದು ಹೇಳುವಂತೆ ಪರಮಾತ್ಮನೇ ಪರಮ ಸತ್ಯ. ಉಳಿದುದೆಲ್ಲವೂ ಮಿಥ್ಯೆ ಅಂದರೆ ಯಥಾರ್ಥವಾದುದಲ್ಲ. “ಸತ್ಯಂ ಬೃಹತ್ ಋತಮ್” ಎಂಬುದಾಗಿ ಶ್ರುತಿಯು ಈ ಸನಾತನ ಸತ್ಯವನ್ನೇ ತಿಳಿಸುತ್ತದೆ.

ಮಹಾಭಾರತದ ಶಾಂತಿಪರ್ವದಲ್ಲಿ ಧರ್ಮರಾಜನು ಸತ್ಯದ ತತ್ತ್ವವನ್ನು ತಿಳಿಸಬೇಕೆಂದು ಭೀಷ್ಮಪಿತಾಮಹನನ್ನು ಪ್ರಶ್ನಿಸುತ್ತಾನೆ. ಇದಕ್ಕೆ ಭೀಷ್ಮಪಿತಾಮಹನ ಉತ್ತರವು ಸರ್ವಕಾಲಕ್ಕೂ ಮನನೀಯವಾಗಿದೆ “ಸತ್ಯವನ್ನು ನುಡಿಯುವುದು ಯುಕ್ತವೇ ಸರಿ. ಸತ್ಯಕ್ಕಿಂತ ಶ್ರೇಷ್ಠವಾದುದು ಇಲ್ಲ. ಸತ್ಯವೇ ಆದರೂ ಕೆಲವು ವೇಳೆ ಅದನ್ನು ಹೇಳಬಾರದು. ಕೆಲವು ವೇಳೆ ಅನೃತವನ್ನು ಹೇಳಬೇಕಾಗುತ್ತದೆ. ಕಾಲಕ್ಕನುಸಾರವಾಗಿ ಸತ್ಯವು ಅನೃತವಾಗಿಯೂ ಅನೃತವು ಸತ್ಯವಾದುದೂ ಆಗುತ್ತದೆ. ತನ್ನೊಳಗೆ ಸತ್ಯವನ್ನು ಕಾಣದವನು ಬಂಧನಕ್ಕೊಳಗಾಗುತ್ತಾನೆ. ಸತ್ಯಾನೃತಗಳನ್ನು ಯಥಾರ್ಥವಾಗಿ ನಿಶ್ಚಯಿಸಿದವನು ಮಾತ್ರ ಧರ್ಮಜ್ಞನೆನಿಸುತ್ತಾನೆ. ಸತ್ಯದಿಂದ ವರ್ತಿಸುವವನ ಜೊತೆ ಸತ್ಯದಿಂದಲೇ ವರ್ತಿಸಬೇಕು. ಅದೇ ಧರ್ಮವಾಗಿರುತ್ತದೆ. ಮಾಯಾಚರಣೆಯನ್ನು ಮಾಡುವವನನ್ನು ಮಾಯಾಚಾರದಿಂದಲೇ ನಿಗ್ರಹಿಸಬೇಕು. ಸಾಧುವಾದವನನ್ನು ಸಾಧುಭಾವದಿಂದಲೇ ಸೇರಬೇಕು. ಪರಮಾರ್ಥ ತತ್ತ್ವಕ್ಕೆ ಹಿತಕರವಾದುದೇ ಸತ್ಯವೆಂದು ನಿಶ್ಚಯ.”

ಸತ್ಯದರ್ಶಿಯಾದ ಭೀಷ್ಮನು ಪರಮಾರ್ಥಸತ್ಯದ ಕಡೆಗೆ ಮುಖ್ಯವಾಗಿ ನಿರ್ದೇಶ ಮಾಡಿದ್ದಾನೆ. ವಿಕಾರರಹಿತವೂ ವಿನಾಶರಹಿತವೂ ಆದ ಅಂತಃಸತ್ಯಕ್ಕೆ ವಿರೋಧವಿಲ್ಲದಿರುವುದು ಸತ್ಯವೆನಿಸುತ್ತದೆ. ಸಂಪೂರ್ಣವಾದ ವಿಶ್ವವ್ಯವಸ್ಥೆ, ಕಾಲ, ಕಾಲನಿಯಾಮಕರಾದ ಸೂರ್ಯ-ಚಂದ್ರರು- ಇತ್ಯಾದಿಯಾಗಿ ಎಲ್ಲವೂ ಋತ-ಸತ್ಯಗಳ ವ್ಯಾಪ್ತಿಗೆ ಸೇರಿದೆ. ಬ್ರಹ್ಮನಿಷ್ಠನಾದ ಬ್ರಾಹ್ಮಣನು ಋತ-ಸತ್ಯಗಳನ್ನು ತನ್ನ ಅಗ್ನ್ಯುಪಾಸನೆಯಲ್ಲಿ ತತ್ತ್ವದೃಷ್ಟಿಯಿಂದ ಪ್ರತಿನಿತ್ಯವೂ ಹೀಗೆ ಉಪಾಸನೆ ಮಾಡುತ್ತಾನೆ –

“ಋತಂ ತ್ವಾ ಸತ್ಯೇನ ಪರಿಷಿಂಚಾಮೀತಿ ಸಾಯಂ ಪರಿಷಿಂಚತಿ |
ಸತ್ಯಂತ್ವರ್ತೇನ ಪರಿಷಿಂಚಾಮೀತಿ ಪ್ರಾಥಃ | ಅಗ್ನಿರ್ವಾ ಋತಮ್ |
ಅಸಾವಾದಿತ್ಯಃಸತ್ಯಮ್ | ಅಗ್ನಿಮೇವ ತದಾದಿತ್ಯೇನ ಸಾಯಂ
ಪರಿಷಿಂಚತಿ |ಅಗ್ನಿನಾದಿತ್ಯಂಪ್ರಾತಃ ಸಃ ||”(ತೈ.ಬ್ರಾ.)

ಧರ್ಮವೂ ಪರಮಾರ್ಥದಲ್ಲಿ ಪರಬ್ರಹ್ಮತತ್ತ್ವವೇ. “ಅಯಂ ಹಿ ಪರಮೋಧರ್ಮಃ ಯದ್ಯೋಗೇನಾತ್ಮದರ್ಶನಮ್” ಎಂದು ಮಹರ್ಷಿಯು ಆತ್ಮದರ್ಶನವನ್ನೇ ಪರಮಧರ್ಮವೆಂದು ಘೋಷಿಸಿದ್ದಾನೆ. “ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ” – “ಧರ್ಮೋಧಾರಯತೇ ಪ್ರಜಾಃ” – “ತಸ್ಮಾದ್ಧರ್ಮಂ ಪರಮಂ ವದಂತಿ”- ಇತ್ಯಾದಿ ಶ್ರುತಿವಚನಗಳು ಪರಮಾರ್ಥತತ್ತ್ವವೇ ಧರ್ಮವೆಂಬುದಾಗಿ ಘೋಷಿಸುತ್ತವೆ. ಧರ್ಮಸ್ವರೂಪ ಮತ್ತು ಅದರ ಪ್ರಕಾರಗಳ ಬಗ್ಗೆ ಮಹರ್ಷಿಗಳು ಮಾಡಿದ ಪ್ರಶ್ನೆಗೆ ಉತ್ತರರೂಪವಾಗಿ ಮನುಮಹರ್ಷಿಯು ಜಗನ್ಮೂಲವಾದ ಪರಬ್ರಹ್ಮವನ್ನೇ ಮೊದಲಿಗೆ ಕೀರ್ತಿಸಿರುವುದು ಮನುಸ್ಮೃತಿಯಲ್ಲಿ ಕಂಡುಬರುತ್ತದೆ. ಸಂಪೂರ್ಣ ವಿಶ್ವವನ್ನು ಧರಿಸುವ ಧಾರಕಶಕ್ತಿ ಪರಬ್ರಹ್ಮಕ್ಕೇ ಸೇರಿದಿದು. ಬೀಜವು ಸಂಪೂರ್ಣವೃಕ್ಷವನ್ನು ಧರಿಸುತ್ತದೆ. ಅದೇ ಬೀಜದಲ್ಲಿನ ಮೂಲಶಕ್ತಿ. ಧರ್ಮದ ತತ್ತ್ವವು ಜ್ಞಾನಿಗಳ ಹೃದಯದಲ್ಲಿ ಅಡಗಿದೆ. ಧರ್ಮತತ್ತ್ವವನ್ನು ತಿಳಿದರೆ ಸತ್ಯಾನೃತಗಳ ವ್ಯವಸ್ಥೆಯು ತಿಳಿಯುತ್ತದೆ. ಯಜ್ಞರೂಪವಾಗಿ ಪರಮಾತ್ಮನಿಗೆ ಅರ್ಪಿತವಾಗುವ ಆಚರಣೆಯೆಲ್ಲವೂ ಧರ್ಮವೇ ಆಗುತ್ತದೆ. ವೃಕ್ಷದ ವಿಕಾಸದ ಎಲ್ಲ ಅವಸ್ಥೆಗಳಲ್ಲೂ ಬೀಜದ ಶಕ್ತಿಯು ಇರುವಂತೆ ಧರ್ಮಶಕ್ತಿಯು ವಿಶ್ವಧಾರಕವಾಗಿ ವ್ಯಾಪಿಸಿದೆ. ವಿಕಾಸಗೊಂಡ ವೃಕ್ಷವು ಮತ್ತೆ ತನ್ನ ಮೂಲರೂಪವಾದ ಬೀಜದ ಸ್ಥಿತಿಗೇ ಬಂದು ನಿಂತರೆ ಮಾತ್ರ ವಿಕಾಸದ ಪೂರ್ಣತೆ ಆಗುತ್ತದೆ. ಈ ಸತ್ಯವನ್ನರಿತ ಮಹರ್ಷಿಗಳು ಜೀವನವನ್ನು ಪುರುಷಾರ್ಥಗಳ ಚೌಕಟ್ಟಿನಲ್ಲಿ ಅಳವಡಿಸಿದರು. ಧರ್ಮಕ್ಕೆ ವಿರೋಧವಿಲ್ಲದಂತೆ ಅರ್ಥಕಾಮಗಳು ಬೆಳೆದು ತನ್ನ ಸ್ವರೂಪವಾದ ಮೋಕ್ಷದ ಸ್ಥಿತಿಯಲ್ಲಿ ನೆಲೆಸಿದರೆ ಜೀವನದ ಪೂರ್ಣತೆ. ಧರ್ಮವು ವ್ಯಾಪಕವಾದುದು. ಸಕಲಪುರುಷಾರ್ಥಗಳೂ ಧರ್ಮದಲ್ಲಿಯೇ ಅಡಗಿವೆ. ಆದಕಾರಣ ಜೀವನದ ಎಲ್ಲ ಕ್ಷೇತ್ರಗಳೂ ಧರ್ಮದಿಂದ ಪರಿಷ್ಕೃತವಾಗಬೇಕು. ಧರ್ಮದ ಕಾರಣದಿಂದಲೇ ಮಾನವನು ಇತರ ಪ್ರಾಣಿಗಳಿಗಿಂತ ಶ್ರೇಷ್ಠನೆನಿಸುತ್ತಾನೆ. ಬೀಜಶಕ್ತಿಯ ವಿಕಾಸದ ವ್ಯವಸ್ಥೆಗೆ ಬೇರೆ ಬೇರೆ ಕರ್ತವ್ಯಾನುಷ್ಠಾನವು ಅವಶ್ಯಕವಾಗಿರುವಂತೆ ಆತ್ಮಶಕ್ತಿಯ ಪೂರ್ಣವಿಕಾಸಕ್ಕೆ- ಮೂಲಧರ್ಮದ ರಕ್ಷಣೆಗಾಗಿ ನಾನಾರೂಪದ ಆಚರಣೆಗಳು ಅವಶ್ಯಕವಾಗುತ್ತವೆ. ಮೂಲಧರ್ಮಕ್ಕೆ ವಿರೋಧವಿಲ್ಲದಂತೆ ಸಾಮಾನ್ಯಧರ್ಮ, ವಿಶೇಷ ಧರ್ಮ, ವರ್ಣ ಧರ್ಮ, ಆಶ್ರಮ ಧರ್ಮ, ವರ್ಣಾಶ್ರಮ ಧರ್ಮ – ಇತ್ಯಾದಿಯಾಗಿ ಧರ್ಮದ ನಾನಾರೂಪಗಳು ವ್ಯವಸ್ಥಿತವಾಗಿವೆ. ಮಾನವಮಾತ್ರನಿಗೆ ಇರಬೇಕಾದ ಸಮಾನ್ಯಧರ್ಮವನ್ನು ಮನುಮಹರ್ಷಿಯು ಹೀಗೆ ಘೋಷಿಸಿದ್ದಾನೆ –
“ಧೃತಿಃಕ್ಷಮಾ ದಮೋsತೇಯಂ ಶೌಚಮಿಂದ್ರಿಯನಿಗ್ರಹಃ |
ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮಲಕ್ಷಣಮ್ ||”
ಈ ಸಾಮಾನ್ಯ ಧರ್ಮದ ತಳಹದಿಯು ಭದ್ರವಾಗಿದ್ದರೆ ವಿಶೇಷ ಧರ್ಮದ ವ್ಯವಸ್ಥೆಯು ಸಾಧ್ಯವಾಗುತ್ತದೆ. ಈ ಸಾಮಾನ್ಯ ಧರ್ಮಗಳಿಂದ ಸುಪರಿಷ್ಕಾರವನ್ನು ಹೊಂದಿ ಪರಮಧರ್ಮವೆನಿಸಿದ ಪರಮಾತ್ಮನಲ್ಲಿ ನೆಲೆನಿಲ್ಲಲು ಸಾಧ್ಯವಾಗುತ್ತದೆ. ಜಗತ್ತಿನ ಧರ್ಮವ್ಯವಸ್ಥೆ ಹೀಗೆ ಇರಬೇಕು. ಜ್ಞಾನಿಗಳ – ಧರ್ಮಜ್ಞರ ಮಾರ್ಗದರ್ಶನ ಮಾನ್ಯವಾಗಬೇಕು. “ಶರೀರಮಾದ್ಯಂ ಖಲು ಧರ್ಮಸಾಧನಮ್ ” ಎನ್ನುವಂತೆ ಶರೀರವು ಮೊದಲಿಗೆ ಧರ್ಮಕ್ಷೇತ್ರವಾಗಬೇಕು. ಇಂತಹ ಪ್ರಜೆಗಳೇ ಧರ್ಮರಾಷ್ಟ್ರವನ್ನು-ಧರ್ಮವಿಶ್ವವನ್ನು ರೂಪಿಸಲು ಸಮರ್ಥರಾಗುತ್ತಾರೆ.

ಮಹರ್ಷಿಗಳ ಹೃದಯರಂಗದಲ್ಲಿ ಬೆಳಗಿದ ಋತ, ಸತ್ಯ ಮತ್ತು ಧರ್ಮಗಳ ಯಥಾರ್ಥ ದರ್ಶನವನ್ನು ಭಾರತೀಯರು ಮತ್ತೆ ಪಡೆಯುವಂತಾಗಲಿ!
ಭಾರತಭೂಮಿಯು ಮತ್ತೆ ಋತ-ಸತ್ಯ-ಧರ್ಮಗಳ ರಾಷ್ಟ್ರವಾಗಿ ಬೆಳಗಲಿ!

“ಋತಗ್ಂ ಸತ್ಯಂ ಪರಂ ಬ್ರಹ್ಮ”||
“ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ”||
~*~

Facebook Comments