ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.
ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.ಹರೇರಾಮ
~
ಜ್ಞಾನ ಸುಮ 13:
ತತ್ತ್ವಮಸಿ
ವಿದ್ವಾನ್ ಎನ್ ರಂಗನಾಥಶರ್ಮಾ
ವೇದಾಂತವೆಂದರೆ ಉಪನಿಷತ್ ಎಂದರ್ಥ. ಆದ್ದರಿಂದ ವೇದಾಂತದರ್ಶನವನ್ನು ಔಪನಿಷದದರ್ಶನವೆಂದೂ ಕರೆಯುತ್ತಾರೆ. ಉಪನಿಷತ್ತುಗಳಲ್ಲಿ ಪ್ರತಿಪಾದಿಸಿರುವುದು ಮುಖ್ಯವಾಗಿ ಜೀವಾತ್ಮ-ಪರಮಾತ್ಮರಿಗೆ ಅಭೇದವನ್ನು ಬೋಧಿಸುವ ಅದ್ವೈತ ಸಿದ್ಧಾಂತ. ಸಂಪ್ರದಾಯದಿಂದ ಅನಾದಿಯಾಗಿ ಬಂದಿದ್ದ ಈ ಸಿದ್ಧಾಂತವನ್ನು ಮತ್ತೆ ಪ್ರತಿಷ್ಠಾಪಿಸಿ ಪೋಷಿಸಿದವರು ಶ್ರೀಶಂಕರ ಭಗವತ್ಪಾದರು. ಅವರು ಬೃಹದಾರಣ್ಯಕ ಭಾಷ್ಯದಲ್ಲಿ “ಸರ್ವೋಪನಿಷತ್ಸು ಹಿ ವಿಜ್ಞಾನಾತ್ಮನಃ ಪರಮಾತ್ಮನಾ ಏಕತ್ವಪ್ರತ್ಯಯೋ ವಿಧೀಯತೇ ಇತಿ ಅವಿಪ್ರತಿಪತ್ತಿಃ ಸರ್ವೇಷಾಮುಪನಿಷದ್ವಾದಿನಾಂ” ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. (ಬೃಹ.೨-೧-೨೦) ಸಕಲ ಉಪನಿಷತ್ತುಗಳಲ್ಲಿಯೂ ವಿಜ್ಞಾನಾತ್ಮನಾದ ಜೀವನಿಗೂ ಪರಮಾತ್ಮನಿಗೂ ಅಭೇದವನ್ನು ಹೇಳಲಾಗಿದೆ ಎಂಬ ವಿಷಯವು ಎಲ್ಲ ವೇದಾಂತಗಳಿಗೂ ಸಮ್ಮತವಾಗಿದೆ. ಈ ವಿಷಯದಲ್ಲಿ ವೇದಾಂತಿಗಳಿಗೆ ಭಿನ್ನಾಭಿಪ್ರಾಯವಿಲ್ಲ ಎಂದು ಇದರ ಅರ್ಥ. ದ್ವೈತ ವೇದಾಂತ ಎಂಬುದು ಆಚಾರ್ಯರ ಕಾಲದಲ್ಲಿರಲಿಲ್ಲ.
ಅದ್ವೈತಸಿದ್ಧಾಂತಕ್ಕೆ ಅಧಾರವಾದ ವಾಕ್ಯಗಳು ಉಪನಿಷತ್ತುಗಳಲ್ಲಿ ವಿಪುಲವಾಗಿ ದೊರೆಯುತ್ತವೆ. ಅವುಗಳಲ್ಲಿ ನಾಲ್ಕನ್ನು ಮಹಾವಾಕ್ಯಗಳೆಂದು ಹಿಂದಿನವರು ಉದ್ಧರಿಸಿದ್ದಾರೆ. ಪ್ರಜ್ಞಾನಂ ಬ್ರಹ್ಮ, ಅಯತಾತ್ಮಾ ಬ್ರಹ್ಮ, ತತ್ತ್ವಮಸಿ, ಅಹಂ ಬ್ರಹ್ಮಾಸ್ಮಿ – ಇವೇ ನಾಲ್ಕು ಮಹಾವಾಕ್ಯಗಳು. ಗುರುವು ಶಿಷ್ಯನಿಗೆ ಸನ್ಯಾಸ ದೀಕ್ಷೆಯನ್ನು ಕೊಡುವಾಗ ಈ ಮಹಾವಾಕ್ಯಗಳನ್ನು ಉಪದೇಶಿಸುವ ಪದ್ಧತಿ ನಮ್ಮಲ್ಲಿದೆ.
ಛಾಂದೋಗ್ಯೋಪನಿಷತ್ತಿನ ಆರನೆಯ ಅಧ್ಯಾಯದ ಎಂಟನೆಯ ಖಂಡದಲ್ಲಿ “ತತ್ತ್ವಮಸಿ” ಎಂಬ ಮಹಾವಾಕ್ಯವು ಬಂದಿದೆ. ಉದ್ದಾಲಕಮಹರ್ಷಿಗಳು ತಮ್ಮ ಪುತ್ರನಾದ ಶ್ವೇತಕೇತುವಿಗೆ ಇದನ್ನು ಉಪದೇಶಿಸಿದ್ದಾರೆ. ಶ್ವೇತಕೇತುವಿನ ಶಂಕೆಗಳನ್ನೆಲ್ಲ ಪರಿಹರಿಸಿ, ಆತನ ಮನಸ್ಸಿಗೆ ಚೆನ್ನಾಗಿ ನಾಟಲೆಂದು ಈ ವಾಕ್ಯವನ್ನು ಒಂಬತ್ತು ಸಲ ಹೇಳಿದ್ದಾರೆ. ಆದ್ದರಿಂದ ಈ ಮಹಾವಾಕ್ಯವು ಅದ್ವೈತಸಿದ್ಧಾಂತದಲ್ಲಿ ಪ್ರಮುಖವಾದ ಸ್ಥಾನವನ್ನು ಗಳಿಸಿಕೊಂಡಿದೆ.
ಈ ಜಗತ್ತಿನಲ್ಲಿ ಅಸಂಖ್ಯಾತವಾಗಿ ಸ್ಥಾವರಜಂಗಮ ವಸ್ತುಗಳಿವೆ. ಅವುಗಳಿಗೆ ವಿಭಿನ್ನವಾದ ನಾನಾ ರೂಪಗಳಿವೆ. ರೂಪಕ್ಕೆ ತಕ್ಕಂತೆ ಹೆಸರುಗಳುಂಟು. ಇವೆಲ್ಲಕ್ಕೂ ಮೂಲವಾದ ಒಂದೇ ಒಂದು ವಸ್ತು ಉಂಟು. ಅದನ್ನು ತಿಳಿದುಕೊಂಡರೆ ಈ ವಿಶ್ವವನ್ನೇ ತಿಳಿದುಕೊಂಡಂತಾಗುವುದು. ’ತಸ್ಮಿನ್ ವಿಜ್ಞಾತೇ ಸರ್ವಮಿದಂ ವಿಜ್ಞಾತಂ ಭವತಿ’ ಅದು ಯಾವುದೆಂದು ಶ್ವೇತಕೇತುವಿಗೆ ಬೋಧಿಸುತ್ತ ಉದ್ಧಾಲಕರು ’ಸದೇವ ಸೌಮ್ಯ ಇದಮಗ್ರ ಆಸೀದ್ ಏಕಮೇವಾದ್ವಿತೀಯಂ’ ಎಂದಿದ್ದಾರೆ. “ಸೌಮ್ಯ-ಶ್ವೇತಕೇತು, ಈ ಜಗತ್ತು ಉತ್ಪನ್ನವಾಗುವುದಕ್ಕೆ ಮೊದಲು, ಒಂದೇ ಒಂದು ಅದ್ವಿತೀಯವಾದ ವಸ್ತುವಿತ್ತು. ಅದನ್ನು ಸತ್ ಎನ್ನಬಹುದು” ಎಂದು ಈ ವಾಕ್ಯದ ತಾತ್ಪರ್ಯ. ಈ ಸದ್ವಸ್ತು ನಾಮ ರೂಪ ಕ್ರಿಯೆಗಳೆಂಬ ವಿಕಾರದಲ್ಲಿದ್ದು, ಅತಿಸೂಕ್ಷ್ಮವೂ, ನಿರ್ವಿಶೇಷವೂ, ನಿರಂಜನವೂ, ಸರ್ವಗತವೂ, ಅವಯವರಹಿತವೂ ಆದ ಕೇವಲ ಚೈತನ್ಯವೇ ಅದು. ಅದನ್ನೇ ಪರಬ್ರಹ್ಮನೆಂದೂ, ಆತ್ಮನೆಂದೂ ಹೇಳುತ್ತಾರೆ. ಈ ವಿಚಾರವು ಅನ್ಯತ್ರ ಸ್ಪಷ್ಟವಾಗಿದೆ. ಇದನ್ನು ತಿಳಿದುಕೊಂಡರೆ ಸಾಮಾನ್ಯವಾಗಿ ಜಗತ್ತೆಲ್ಲವನ್ನೂ ತಿಳಿದಂತೆಯೇ ಆಗುತ್ತದೆ. ಗಡಿಗೆ ಮೊದಲಾದದ್ದು ಮಣ್ಣಿನ ನಾನಾ ವಿಕಾರಗಳು. ವಿಕಾರಗಳಿಗೆ ತಕ್ಕಂತೆ ಬೇರೆ ಬೇರೆ ಹೆಸರುಗಳು. ಕಬ್ಬಿಣದ ಸ್ವರೂಪವನ್ನು ತಿಳಿದರೆ ಅದರಿಂದಾದ ಹಾರೆ, ಕೊಡಲಿ, ಸರಳು ಮುಂತಾದವನ್ನು ತಿಳಿದುಕೊಂಡಂತಾಗುವುದು. ಇವೆಲ್ಲವೂ ಕಬ್ಬಿಣದ ವಿಕಾರಗಳು. ವಿಕಾರಗಳಿಗೆ ಪಾರವಿಲ್ಲ. ಹಾಗೆಯೇ ಹೆಸರುಗಳೂ ಬದಲಾಯಿಸುತ್ತವೆ ಎಂದು ಸ್ಪಷ್ಟವಾಗಿ ತಿಳಿದುಬರುತ್ತದೆ.
ಈ ದೃಷ್ಟಾಂತಗಳಲ್ಲಿ ಒಂದು ಮುಖ್ಯವಾದ ಅಂಶವನ್ನು ಗಮನಿಸಬೇಕು. ಮಣ್ಣು, ಕಬ್ಬಿಣ – ಮೊದಲಾದದ್ದು ಸಾವಯವ ಪದಾರ್ಥ. ಅದು ಬೇರೆ ಬೇರೆ ರೂಪಗಳನ್ನು ತಳೆಯಬಲ್ಲದು. ಬ್ರಹ್ಮವಾದರೋ ನಿರಯವ, ನಿಷ್ಕಲ, ನಿರಂಜನ, ನಿತ್ಯ. ಸದ್ವಸ್ತುವಾದ ಬ್ರಹ್ಮವೇ ಅವಿದ್ಯೆಯಿಂದ ನಾನಾ ವಿಕಾರಗಳನ್ನು ತಳೆದಂತೆ ತೋರುತ್ತದೆ ಎನ್ನುವುದು ಸಿದ್ಧಾಂತ, ಹಗ್ಗವು ಹಾವಿನಂತೆ ತೋರುವ ಹಾಗೆ. ಇದಕ್ಕೆ ವಿವರ್ತವೆಂದು ಹೆಸರು. ಎಲ್ಲವೂ ಸದ್ವಸ್ತುವಿನ ವಿಕಾರಗಳು. ನಾಮರೂಪಗಳು ವಿವಿಧವಾಗಿವೆ. ’ಸರ್ವಂ ಖಲ್ವಿದಂ ಬ್ರಹ್ಮ’ ಎಲ್ಲವೂ ಬ್ರಹ್ಮಸ್ವರೂಪವೇ ಎಂದು ನಿಶ್ಚಯಿಸುವುದೇ ಸರಿಯಾದ ಜ್ಞಾನ. ಮಣ್ಣಿನ ವಿಕಾರಗಳಾದ ಹರವಿ, ಹಣತೆ ಮೊದಲಾದವಕ್ಕೆ ಮಣ್ಣು ಹೇಗೆ ಮೂಲವೋ ಹಾಗೆ ವಿಶ್ವದ ಎಲ್ಲ ವಸ್ತುಗಳಿಗೂ ಸತ್ ಎಂಬುದೇ ಮೂಲ. ಆದ್ದರಿಂದ “ಸನ್ಮೂಲಾಃ ಸೋಮ್ಯ ಇಮಾಃ ಸರ್ವಾಃ ಪ್ರಜಾಃ” ಎಂದು ಇಲ್ಲಿ ಉಪನಿಷತ್ತು ಹೇಳಿದೆ. ಸರ್ವಾಃ ಪ್ರಜಾಃ = ಹುಟ್ಟತಕ್ಕ ಸ್ಥಾವರ ಜಂಗಮಗಳೆಲ್ಲವೂ ಎಂದರ್ಥ. ಪೃಥ್ವಿ, ಜಲ – ಮುಂತಾದವುಗಳು ಮಾತ್ರವಲ್ಲ, ಜೀವಾತ್ಮರೂ ಪರಮಾರ್ಥದಲ್ಲಿ ಬ್ರಹ್ಮವೇ ಆಗಿದ್ದಾರೆಂದು ತಾತ್ಪರ್ಯ.
ಅನಂತರ “ಐತದಾತ್ಮ್ಯಮಿದಂ ಸರ್ವಂ | ತತ್ ಸತ್ಯಂ| ಸ ಆತ್ಮಾ| ತತ್ತ್ವಮಸಿ ಶ್ವೇತಕೇತೋ” – ಈ ವಾಕ್ಯವು ಒಂಬತ್ತು ಸಲ ಬಂದಿದೆ. “ಈ ಸಮಸ್ತ ವಸ್ತುಗಳಿಗೂ ಸತ್ ಎಂಬುದು ಆತ್ಮವಾಗಿದೆ. ಈ ಸತ್ ಎಂಬುದೇ ಸಮಸ್ತ ವಸ್ತುಗಳ ಪ್ರತ್ಯಗಾತ್ಮ. ಇದೊಂದೇ ಸತ್ಯವಾದದ್ದು. ಓ ಶ್ವೇತಕೇತು, ಆದ್ದರಿಂದ ಪರಮಾರ್ಥದಲ್ಲಿ ನೀನು ಸದ್ವಸ್ತುವೇ ಆಗಿದ್ದೀಯೆ” ಎಂದು ಈ ವಾಕ್ಯಗಳ ತಾತ್ಪರ್ಯ. ತತ್= ಆ ಸದ್ವಸ್ತುವೇ, ತ್ವಂ=ನೀನು, ಅಸಿ= ಆಗಿದ್ದೀಯೆ ಎಂದು ಮಹಾಕಾವ್ಯದ ಅರ್ಥ. ಪರಬ್ರಹ್ಮವು ಕೇವಲ ಚೈತನ್ಯರೂಪವಾಗಿದ್ದು, ಅದರಲ್ಲಿ ಯಾವ ಗುಣ ಕ್ರಿಯೆ ಮೊದಲಾದ ಧರ್ಮವಿಶೇಷಗಳಿಲ್ಲವಾದ್ದರಿಂದ ಅದನ್ನು ತತ್=ಇರತಕ್ಕ ವಸ್ತು ಎಂದಿಷ್ಟೇ ಹೇಳಬಹುದು. ಬ್ರಹ್ಮ, ಪರಮಾತ್ಮ – ಮುಂತಾದ ಶಬ್ಧಗಳೂ ಸಹ ಸರಿಯಾದ ಶಬ್ಧಗಳಲ್ಲ. ನಿರ್ವಾಹವಿಲ್ಲದೆ ಉಪದೇಶಕ್ಕಾಗಿ ಬಳಸಿಕೊಂಡಿರುವ ಶಬ್ಧಗಳು.
ಈ ಅದ್ವೈತದ ಉಪದೇಶವು ಬೇಗನೆ ಮನಸ್ಸಿಗೆ ನಾಟತಕ್ಕದ್ದಲ್ಲ. ಅಲ್ಪಜ್ಞನೂ, ಅಲ್ಪಶಕ್ತನೂ ಆದ ಜೀವನು ಸರ್ವಜ್ಞನೂ, ಸರ್ವಶಕ್ತನೂ ಆದ ಪರಮೇಶ್ವರನೇ ಸರಿ ಎಂದು ಹೇಳಿದರೆ ಯಾರು ಒಪ್ಪುತ್ತಾರೆ? ಆದ್ದರಿಂದ ದ್ವೈತವಾದವು ಹುಟ್ಟಿದೆ. ’ತತ್ತ್ವಮಸಿ’ ಎಂಬ ವಾಕ್ಯಕ್ಕೆ ಬೇರೆ ವಿಧವಾಗಿ ಅರ್ಥಮಾಡಬೇಕೆಂದು ಅವರು ಅಕ್ಷೇಪಿಸುತ್ತಾರೆ. ಅವರ ಆಕ್ಷೇಪಗಳನ್ನೂ ಸಿದ್ಧಾಂತಿಯ ಉತ್ತರಗಳನ್ನು ಇಲ್ಲಿ ಸಂಗ್ರಹಿಸಿ ಬರೆಯಲಾಗಿದೆ.
ಆಕ್ಷೇಪ: ಅಲ್ಪಜ್ಞನಾದ ಜೀವನಿಗೂ ಸರ್ವಜ್ಞನಾದ ಈಶ್ವರನಿಗೂ ಅಭೇದವನ್ನು ಹೇಳುವುದು ಯುಕ್ತವಲ್ಲ. ಶ್ರುತಿಯು ಇಂತಹ ವಿರುದ್ಧವಾದ ಹೇಳಿಕೆಯನ್ನು ಎಂದಿಗೂ ಮಾಡದು. ಆದ್ದರಿಂದ ’ತತ್ತ್ವಮಸಿ’ ಇದು ಬ್ರಹ್ಮೋಪಾಸನೆಯೆಂಬ ಕರ್ಮವನ್ನು ಬೋಧಿಸುವುದಕ್ಕಾಗಿ ಹೊರಟಿದೆಯೆನ್ನಬೇಕು. ’ಮನೋ ಬ್ರಹ್ಮೇತ್ಯುಪಾಸೀತ’ – ಮನಸ್ಸನ್ನು ಬ್ರಹ್ಮವೆಂದು ತಿಳಿದು ಉಪಾಸನೆ ಮಾಡಬೇಕು ಎಂಬಂತೆಯೇ ಇದು. ’ಶ್ವೇತಕೇತು, ನಿನ್ನ ಆತ್ಮವನ್ನು ಪರಮಾತ್ಮನೆಂದು ತಿಳಿದು ಉಪಾಸನೆ ಮಾಡು’ ಎಂದು ಇದರ ಅರ್ಥ.
ಉತ್ತರ: ಹಾಗಲ್ಲ; ಇಲ್ಲಿ ಉಪಾಸೀತ ಎಂಬ ಶಬ್ಧವೇ ಇಲ್ಲ. ಇದು ಉಪಾಸನಾವಿಧಿ ಎನ್ನುವುದಕ್ಕೆ ಯಾವ ಆಧಾರವೂ ಇಲ್ಲ. ’ಮನೋಬ್ರಹ್ಮೇತ್ಯುಪಾಸೀತ, ಆದಿತ್ಯೋ ಬ್ರಹ್ಮೇತ್ಯುಪಾಸೀತ’ ಮೊದಲಾದ ಸ್ಥಳಗಳಲ್ಲಿ ನಿಯಮದಿಂದ ’ಉಪಾಸೀತ’ ಎಂಬ ಶಬ್ಧ ಇದ್ದೇ ಇರುತ್ತದೆ. ಅಲ್ಲದೆ ’ಇತಿ’ ಎಂಬ ಶಬ್ಧವೂ ಇಲ್ಲಿಲ್ಲ. ’ಮನಸ್ಸು, ಆದಿತ್ಯ’ ಮೊದಲಾದವು ಬ್ರಹ್ಮವಲ್ಲ. ಆದರೂ ’ಇತಿ’ ಹೀಗೆಂದು ತಿಳಿಯಬೇಕು ಎಂಬ ಅರ್ಥ ಇಲ್ಲಿ ಸ್ಫುಟವಾಗಿದೆ. ಶ್ರುತಿಯಲ್ಲಿ ಇಲ್ಲದ ಶಬ್ಧಗಳನ್ನು ತಂದು ಹೇರುವುದಕ್ಕೆ ಯಾವ ಆಧಾರವಿದೆ? ಇವನು ದೇವದತ್ತ, ಆತನು ನನ್ನ ಮಗ – ಎಂದರೆ ಅಭೇದವೇ ತೋರುತ್ತದೆಯಲ್ಲವೆ? ಹಾಗೆಯೇ ’ತತ್ತ್ವಂ’ ಎಂದರೆ ಅಭೇದವೇ ಸ್ಪಷ್ಟವಾಗಿ ತಿಳಿದುಬರುತ್ತದೆ.
ಆಕ್ಷೇಪ: ಹೋಗಲಿ, ’ದೇವದತ್ತನು ಸಿಂಹ’ ಎಂದು ಹೇಳಿದರೆ ಉಭಯರಿಗೆ ಅಬೇಧವು ತೋರುತ್ತದೆಯೆ? ದೇವದತ್ತನು ಸಿಂಹಸದೃಶನೆಂದು ಅರ್ಥವಾಗುತ್ತದೆ. ಸಿಂಹ ಶಬ್ಧಕ್ಕೆ ಸಿಂಹಸದೃಶನೆಂಬ ಅರ್ಥದಲ್ಲಿ ಲಕ್ಷ್ಮಣಾ ಎಂದು ಎಲ್ಲ ಶಾಸ್ತ್ರಕಾರರೂ ಒಪ್ಪಿದ್ದಾರೆ. ಸಿಂಹದಲ್ಲಿರುವ ಧೈರ್ಯಪರಾಕ್ರಮಗಳು ದೇವದತ್ತನಲ್ಲಿವೆಯೆಂದು ಸರ್ವರಿಗೂ ಅರ್ಥವಾಗುತ್ತದೆ. ಆದ್ದರಿಂದ ತ್ವಂ=ನಿನ್ನ ಜೀವಾತ್ಮನು, ತತ್= ಆ ಬ್ರಹ್ಮಸದೃಶನೆಂದು ಅರ್ಥ. ಬ್ರಹ್ಮದಂತೆ ಜೀವನೂ, ನಿತ್ಯನೂ, ಚೇತನನೂ, ಆನಂದಮಯನೂ ಆಗಿದ್ದಾನೆಂದು ಅರ್ಥವಾಗುತ್ತದೆ. ಅಲ್ಲದೆ ಹೀಗೆಯೂ ಹೇಳಬಹುದು. ಲೋಕದಲ್ಲಿ ಒಬ್ಬನನ್ನು ಹೊಗಳುವುದಕ್ಕಾಗಿ ನೀನು ಇಂದ್ರ, ಚಂದ್ರ, ಕುಬೇರ ಎಂದು ಹೇಳುತ್ತಾರೆ. ಆಗಲೂ ಇಂದ್ರಾದಿಗಳಿಗೆ ಸದೃಶನೆಂದೇ ಅರ್ಥ. ಇದು ಕೇವಲಸ್ತುತಿ. ಅಂತೆಯೇ ನೀನು ಬ್ರಹ್ಮ ಎಂದು ಹೊಗಳುವುದು ಹೊಗಳಿಕೆಗಾಗಿ. ಬ್ರಹ್ಮದಂತೆ ನೀನು ಕಲ್ಯಾಣ ಗುಣಶಾಲಿ ಎಂಬ ಸ್ತುತಿ ಇದು.
ಉತ್ತರ: ಇದೊಂದೂ ಯುಕ್ತವಲ್ಲ. ದೇವದತ್ತನು ಸಿಂಹ ಎಂದು ಹೇಳಿದ ಮಾತ್ರಕ್ಕೆ ದೇವದತ್ತನು ಸಿಂಹವಾಗಿ ಬಿಡುವುದಿಲ್ಲ. ಜನರಿಗೆ ದೇವದತ್ತನು ಒಬ್ಬ ಮನುಷ್ಯನೆಂದೂ, ಸಿಂಹವು ಒಂದು ಮೃಗವೆಂದೂ ಸ್ಪಷ್ಟವಾಗಿ ತಿಳಿದೇ ಇರುತ್ತದೆ. ಇವರಿಬ್ಬರಿಗೆ ಅಭೇದವನ್ನು ಹೇಳುವುದು ಎಂದು ಗೊತ್ತಾಗಿರುತ್ತದೆ. ಆದ್ದರಿಂದ ಸಿಂಹವೆಂದರೆ ಸಿಂಹಸದೃಶ ಎಂದು ಜನರು ಲಕ್ಷಣೆಯಿಂದ ಅರ್ಥ ಮಾಡಿಕೊಳ್ಳುತ್ತಾರೆ. ಪ್ರಕೃತದಲ್ಲಾದರೋ ಜೀವನಸ್ವರೂಪವು ಜನರಿಗೆ ಗೊತ್ತಿಲ್ಲ. ದೇವದತ್ತನು ಯಾರೆಂಬುದು ಗೊತ್ತಿಲ್ಲದಾಗ, ದೇವದತ್ತನು ಯಜ್ಞದತ್ತನ ಮಗ ಎಂದರೆ ಬಾಧೆಯುಂಟೇನು? ದೇವದತ್ತನು ಯಜ್ಞದತ್ತನ ಮಗನೆಂದೇ ತಿಳಿದುಕೊಳ್ಳಬೇಕಲ್ಲದೆ, ಅವನ ಮಗನಿಗೆ ಸದೃಶ ಎಂದು ಅರ್ಥ ಮಾಡಕೂಡದು. ವಿಷ್ಣುವು ನಾರಾಯಣ ಎಂದರೆ ಅಭೇದವೇ ತೋರುತ್ತದೆ. ಎಲ್ಲಿ ಬಾಧೆ ಇಲ್ಲವೋ ಅಲ್ಲಿ ಅಭೇದವನ್ನು ಹೇಳಬೇಕು. ಲಕ್ಷಣೆಯನ್ನು ಹೇಳಬಾರದು. ಆದ್ದರಿಂದ ’ಆ ಬ್ರಹ್ಮವೇ ನೀನು’ ಎಂದೇ ಅರ್ಥ ಮಾಡಬೇಕು. ಇದು ಸ್ತುತಿಯೂ ಅಲ್ಲ. ಇಂದ್ರನನ್ನೇ ಇಂದ್ರನೆಂದೂ, ಕುಬೇರನನ್ನೇ ಕುಬೇರನೆಂದು ಕರೆದರೆ ಸ್ತುತಿಯಾಗುವುದಿಲ್ಲ.
ಅಯಮಾತ್ಮಾ ಬ್ರಹ್ಮ, ಅಹಂ ಬ್ರಹ್ಮಾಸ್ಮಿ – ಮುಂತಾದ ಶ್ರುತಿವಾಕ್ಯಗಳು ಈ ಜೀವವೇ ವಾಸ್ತವವಾಗಿ ಬ್ರಹ್ಮವೆಂದು ಹೇಳಿವೆ. “ತತ್ ಸೃಷ್ಟ್ವಾತದೇವಾನುಪ್ರಾವಿಶತ್” ಎಂಬ ಶ್ರುತಿಯೂ ಸಹ ಈ ಶರೀರಗಳನ್ನು ಈಶ್ವರನು ಸೃಜಿಸಿ ಅದರೊಳಗೆ ಅನುಪ್ರವೇಶ ಮಾಡಿದನು – ಎಂದು ಹೇಳಿದೆ. ಆತನೇ ಶರೀರಾದ್ಯುಪಾಧಿಗಳಿಂದ ಜೀವನೆನಿಸಿದ್ದಾನೆ.
ಆಕ್ಷೇಪ: ಮನೋಬ್ರಹ್ಮೇತ್ಯುಪಾಸೀತ – ಇತ್ಯಾದಿ ವಾಕ್ಯಗಳು ಉಪಾಸನೆಯನ್ನು ವಿಧಿಸುತ್ತವೆ. ಒಂದೇ ಬ್ರಹ್ಮವೇ ಇದ್ದರೆ ಯಾರು ಯಾರನ್ನು ಉಪಾಸನೆ ಮಾಡಬೇಕು? ಉಪಾಸಕನು ಬೇರೆ, ಉಪಾಸ್ಯದೇವತೆ ಬೇರೆ ಎಂದು ಒಪ್ಪಲೇಬೇಕಾಗುತ್ತದೆ. ಆದ್ದರಿಂದ ಮಹಾವಾಕ್ಯದಲ್ಲಿ ತತ್ ಎಂದರೆ ಆ ಬ್ರಹ್ಮದಿಂದ ಎಂದರ್ಥ. ಆದ್ದರಿಂದ ತ್ವಂ=ನೀನು, ಅಸಿ=ಹುಟ್ಟಿದ್ದೀಯೆ ಎಂದು ಅರ್ಥ ಹೇಳಬಹುದಲ್ಲವೆ?
ಉತ್ತರ: ಹಾಗೆ ಅರ್ಥ ಮಾಡಕೂಡದು. ಆಗ ಜೀವನು ಹುಟ್ಟುತ್ತಾನೆ ಎಂದು ಒಪ್ಪಬೇಕಾಗುತ್ತದೆ. ’ಜಾತಸ್ಯ ಮರಣಂ ಧ್ರುವಮ್’ ಎಂದಿರುವುದರಿಂದ ಜೀವಕ್ಕೆ ನಾಶವಿದೆಯೆಂದು ಹೇಳಬೇಕಾದೀತು. ದ್ವೈತಿಯಾದ ನೀನೂ ಇದನ್ನು ಒಪ್ಪುವುದಿಲ್ಲ. ’ಆತ್ಮನಃ ಆಕಾಶಃ ಸಂಭೂತಃ’ ಇತ್ಯಾದಿ ಶ್ರುತಿವಾಕ್ಯಗಳು ಪಂಚಭೂತಗಳ ಉತ್ಪತ್ತಿಯನ್ನು ಸ್ಪಷ್ಟವಾಗಿ ತಿಳಿಸುತ್ತವೆ. ಹಾಗೆ ಜೀವನು ಹುಟ್ಟಿದನೆಂಬುದನ್ನು ಯಾವ ಶ್ರುತಿಯೂ ಹೇಳುವುದಿಲ್ಲ. ’ಏಕಮೇವಾದ್ವಿತೀಯಂ’ ಮುಂತಾದ ವಾಕ್ಯಗಳೂ ಸಹ ಬ್ರಹ್ಮ ಒಂದೇ ಆದಿಯಲ್ಲಿತ್ತೆಂದು ಸಾರುತ್ತವೆ. ಪರಮಾತ್ಮ-ಜೀವಾತ್ಮ ಎಂಬ ಎರಡು ವಸ್ತುಗಳಿದ್ದವೆಂದಾಗಲಿ ಅನೇಕ ವಸ್ತುಗಳಿದ್ದವೆಂದಾಗಲಿ ಹೇಳುವುದೇ ಇಲ್ಲ.
ಆಕ್ಷೇಪ: ಇರಲಿ, ಆಕಾಶಾದಿ ಪಂಚಭೂತಗಳು ಹುಟ್ಟಿದವು ಎಂಬುದನ್ನೊಪ್ಪಿದರೂ ಅನೇಕ ವಸ್ತುಗಳು ಈಗ ಇವೆಯೆಂದು ಸಿದ್ಧವಾಗುತ್ತದೆ. ಆಗ ದ್ವೈತವೇ ಆಯಿತು. ನಿಮ್ಮ ಅದ್ವೈತವು ಸಿದ್ದಿಸುವುದು ಹೇಗೆ?
ಉತ್ತರ: ಇಡೀ ಜಗತ್ತು, ಜಗತ್ತಿನ ಕೋಟ್ಯಾಂತರ ವಸ್ತುಗಳು ಕಣ್ಣಿಗೆ ಕಾಣಿಸುತ್ತಲೇ ಇವೆ. ಈ ದ್ವೈತವು ಎಲ್ಲರಿಗೂ ತಿಳಿದದ್ದೇ. ಇದನ್ನೇ ವೇದವು ಪ್ರತಿಪಾದಿಸಬೇಕಾಗಿಲ್ಲ. ಯಾವುದು ಪ್ರತ್ಯಕ್ಷದಿಂದಾಗಲಿ ಅನುಮಾನದಿಂದಾಗಲಿ ತಿಳಿದು ಬರುವುದಿಲ್ಲವೋ ಅಂತಹ ಒಂದು ಪರಮಾರ್ಥ ರಹಸ್ಯವನ್ನು ತಿಳಿಸುವುದಕ್ಕಾಗಿ ವೇದವು ಹೊರಟಿದೆ. ಈಗ ಕಾಣಿಸತಕ್ಕ ದ್ವೈತವೇನಿದೆ, ಇದೆಲ್ಲವೂ ಮಿಥ್ಯೆ, ಸತ್ಯವಲ್ಲ. ಇದಿಷ್ಟೂ ನಾಶವಾಗತಕ್ಕದ್ದು. ಸತ್ಯವಾದದ್ದು ಬ್ರಹ್ಮ ಒಂದೇ ಎಂದು ವೇದವು ಬೋಧಿಸಿದೆ. ಹಿಂದೆ ಮಣ್ಣು ಗಡಿಗೆಯ ದೃಷ್ಟಾಂತವನ್ನು ಹೇಳಿದೆವಲ್ಲ, ಅಲ್ಲಿಯೇ ವೇದವು “ವಾಚಾರಂಭಣಂ, ವಿಕಾರೋ ನಾಮಧೇಯಂ, ಮೃತ್ತಿಕೇತ್ಯೇವ ಸತ್ಯಂ” ಎಂದು ಘೋಷಿಸಿದೆ. ಮಣ್ಣು ಗಡಿಗೆ, ಹರವಿ ಮುಂತಾದ ರೂಪವನ್ನು ತಳೆದು ಬೇರೆ ಬೇರೆ ಹೆಸರನ್ನು ಪಡೆಯುವುದಷ್ಟೆ. ಅದೆಲ್ಲವೂ ಬರಿಯ ಮಾತಿನಿಂದ ಕಲ್ಪಿತವಾದದ್ದು, ಗಡಿಗೆಯೆಂಬುದೂ ಹರವಿಯೆಂಬುದೂ ಬರಿಯ ವಿಕಾರ, ಬೇರೆ ಬೇರೆ ಹೆಸರು. ವಸ್ತುತಃ ಮಣ್ಣು ಎನ್ನುವುದೇ ಸತ್ಯ ಎಂದು ಅದರ ಅರ್ಥ. ಗಡಿಗೆಯು ನಾಶವಾಗಿ ಮತ್ತೆ ಮಣ್ಣಾಗುತ್ತದೆ. ಆಗ ವಿಕಾರವೂ ಇಲ್ಲ, ಗಡಿಗೆಯೆಂಬ ಹೆಸರೂ ಇಲ್ಲ. ಇದು ಕೇವಲ ದೃಷ್ಟಾಂತ. ವಾಸ್ತವವಾಗಿ ಮಣ್ಣೂ ಇಲ್ಲ. ಅದರ ಮೂಲ ಕಾರಣವಾದ ಬ್ರಹ್ಮ ಒಂದೇ ಕಡೆಯಲ್ಲುಳಿಯುತ್ತದೆ. ಅದೊಂದೇ ಸತ್ಯ. ಈ ಪ್ರಕಾರವಾಗಿ ಉಪನಿಷತ್ತು ಅನೇಕ ದೃಷ್ಟಾಂತಗಳನ್ನು ಕೊಟ್ಟು ನಾಮರೂಪಗಳು ಮಿಥ್ಯೆಯೆಂದು ತೋರಿಸಿಕೊಟ್ಟಿದೆ. ಆದ್ದರಿಂದ ಕಾಣತಕ್ಕ ದ್ವೈತವಾದ ಜಗತ್ತು ಮಿಥ್ಯೆ. ಇದರ ಪರಮಾರ್ಥ ಸ್ವರೂಪವು ಬ್ರಹ್ಮವೇ.
ಆಕ್ಷೇಪ: ಒಳ್ಳೆಯದು, ಜೀವವು ಪರಬ್ರಹ್ಮವಾಗಿದೆಯೆಂದು ನೀವು ಹೇಳುತ್ತೀರಿ. ಅದೇಕೆ? ಪರಬ್ರಹ್ಮವೇ ಜೀವವಾಗಿದೆ ಎಂದೇಕೆ ಅರ್ಥ ಮಾಡಬಾರದು? ತತ್=ಆ ಪರಬ್ರಹ್ಮವೇ, ತ್ವಂ=ನೀನು, ಅಸಿ=ಆಗಿದ್ದೀಯೆ ಎಂದು ಅರ್ಥವನ್ನೇಕೆ ಹೇಳಬಾರದು? ಬ್ರಹ್ಮವೇ ಜೀವವಾಗಿ ಸಂಸಾರ ಬಂಧನದಲ್ಲಿ ಸಿಕ್ಕಿಕೊಂಡಿದೆ ಎಂದು ಅರ್ಥ ಹೇಳೋಣ!
ಉತ್ತರ: ಪರಮಾತ್ಮನೇ ಜೀವಾತ್ಮನಾಗಿದ್ದನೆಂದರೆ ಪರಿಣಾಮವಾದವನ್ನು ಒಪ್ಪಬೇಕಾಗುತ್ತದೆ. ಸಾವಯವಕ್ಕೆ ಮಾತ್ರ ಪರಿಣಾಮವಾಗಲು ಸಾಧ್ಯ. ಆಗ ಅದು ನಶ್ವರವಾಗಬೇಕಾಗುತ್ತದೆ. ಪರಮಾತ್ಮನು ನಶ್ವರನೆಂದು ನೀನೂ ಒಪ್ಪುವುದಿಲ್ಲ. ಆದ್ದರಿಂದ ಪರಿನಾಮ ವಾದವು ಸರಿಯಲ್ಲ ಮತ್ತು ಜೀವನು ಹೇಗಿದ್ದಾನೆಂದು ತಿಳಿದರೆ ಪ್ರಯೋಜನವೇನು? ಅದನ್ನೂ ತಿಳಿಸಿದಂತಾಗುವುದಿಲ್ಲ. ವೇದದಲ್ಲಿ ಪರಮಾತ್ಮನ ವರ್ಣನೆಯುಂಟು. ಜೀವದ ಸ್ವರೂಪವನ್ನು ವರ್ಣಿಸಿಲ್ಲ.
ಮತ್ತು ಆಗ “ತತ್ತ್ವಮಸಿ” ಎಂಬುದಕ್ಕೆ ಅರ್ಥವನ್ನು ಹೇಗೆ ಹೇಳಬೇಕು? ತತ್= ಆ ಬ್ರಹ್ಮವಸ್ತು, ತ್ವಂ= ನಿನ್ನ ಸ್ವರೂಪವಾದ ಜೀವವು, ಅಸ್ತಿ=ಆಗಿದೆ ಎನ್ನಬೇಕು. ಕ್ರಿಯಾಪದವು ಪ್ರಥಮಪುರುಷದಲ್ಲಿ ಇರಬೇಕಾಗುತ್ತದೆ. ಇಲ್ಲಿ ಮಧ್ಯಮ ಪುರುಷದಲ್ಲಿದೆ. ಆದ್ದರಿಂದ ನೀನು ಹೇಳುವ ಅರ್ಥವನ್ನು ಹೇಳುವುದಕ್ಕೆ ಬರುವುದೇ ಇಲ್ಲ. ಅಸಿ ಎಂಬುದು ಮಧ್ಯಮ ಪುರುಷ. ಆದ ಕಾರಣ ತ್ವಂ= ನೀನು, ತತ್= ಆ ಪರಮಾತ್ಮನೇ ಅಸಿ= ಆಗಿದ್ದೀಯೆ – ಎಂದೇ ಅರ್ಥ ಹೇಳಬೇಕು.
ಆಕ್ಷೇಪ: ಜೀವನು ಅಜ್ಞಾನಿಯೂ ಅಲ್ಪಶಕ್ತನೂ ಆಗಿದ್ದಾನೆ. ಅವನಿಗೆ ಪರಮಾತ್ಮನೊಡನೆ ಅಭೇದವು ಹೇಗೆ ಕೂಡುತ್ತದೆ. ಈತನಲ್ಲಿ ಪರಮಾತ್ಮನಿಗಿರುವ ಸರ್ವಜ್ಞತೆ ಸರ್ವಶಕ್ತತೆ ಉಂಟೇನು? ಅಲ್ಲದೆ ಜೀವನು ಕಷ್ಟಗಳನ್ನನುಭವಿಸುತ್ತ ಸಂಸಾರದಲ್ಲಿ ನವೆಯುತ್ತಿರುವುದು ಸ್ಪಷ್ಟವಾಗಿದೆ. ಪರಮಾತ್ಮನಿಗೆ ಸಂಸಾರದ ಕಷ್ಟಗಳು ಇರುತ್ತವೆಯೇನು?
ಉತ್ತರ: ಈ ಬಗೆಯ ಶಂಕೆಗಳು ಅದ್ವೈತ ಸಿದ್ಧಾಂತವನ್ನು ಸರಿಯಾಗಿ ಅರಿತುಕೊಳ್ಳದಿರುವುದರಿಂದ ಬರುತ್ತವೆ. ಜೀವವೆಂದರೆ ಯಾರು? ಅಂತಃಕರಣವೆಂಬ ಉಪಾಧಿಗೆ ಒಳಪಟ್ಟಿರುವ ಆತ್ಮ ಅಥವಾ ಅಂತಃಕರಣದಲ್ಲಿ ಸೇರಿಕೊಂಡಿರುವ ಆತ್ಮಪ್ರತಿಬಿಂಬ. ಘಟದಲ್ಲಿರುವ ಆಕಾಶದಂತೆ ಜೀವ ಅಥವಾ ಕೊಳದಲ್ಲಿರುವ ಸೂರ್ಯನ ಪ್ರತಿಬಿಂಬದಂತೆ. ಮೊದಲನೆಯದು ಅವಚ್ಛೇದವಾದ. ಎರಡನೆಯದು ಪ್ರತಿಬಿಂಬವಾದ. ಎರಡೂ ಪಕ್ಷಗಳಲ್ಲಿಯೂ ಅಂತಃಕರಣವೇ ಉಪಾಧಿ. ಈ ಉಪಾಧಿಯು ಕೊಳೆಯಾಗಿದ್ದರೆ ಉಪಧೇಯನಾದ ಆತ್ಮನಿಗೆ ಕೊಳೆಯ ಸೋಂಕು ಸಹ ಇರುವುದಿಲ್ಲ. ಘಟವು ಮಲಿನವಾದರೆ ಅದರಲ್ಲಿರುವ ಆಕಾಶವು ಮಲಿನವಲ್ಲ. ಕೊಳದ ನೀರು ಮಲಿನವಾದರೆ ಅದರಲ್ಲಿ ಕಾಣುವ ಪ್ರತಿಬಿಂಬವಾಗಲಿ, ಬಿಂಬವಾದ ಸೂರ್ಯನಾಗಲಿ ಮಲಿನವಾಗುವುದಿಲ್ಲ. ಜಡವಾದ ಅಂತಃಕರಣವು ಆತ್ಮಚೈತನ್ಯದ ಬೆಳಕಿನಿಂದ ದೀಪ್ತವಾಗಿ ಸುಖ ದುಃಖಗಳನ್ನು ಅನುಭವಿಸುತ್ತದೆ. ಅನಾದಿಯಾದ ಅವಿದ್ಯಾದೋಷದಿಂದ ನಾನೇ ಅಂತಃಕರಣ, ನಾನೇ ಶರೀರವೆಂಬ ಭ್ರಮೆಯಿಂದ ಆತ್ಮನಲ್ಲಿಯೇ ಸುಖದುಃಖಗಳುಂಟಾಗುತ್ತದೆಯೆಂದು ತೋರುತ್ತದೆ.
ತ್ವಂ=ನೀನು, ತತ್=ಆ ಸದ್ವಸ್ತುವೇ, ಅಸಿ= ಆಗಿದ್ದೀಯೆ ಎಂದರ್ಥ. ತತ್ ಎಂದರೆ ಕೇವಲ ಚೈತನ್ಯರೂಪವಾದ ಸತ್, ತ್ವಂ ಎಂದರೆ ಅಂತಃಕರಣಾದಿಗಳಿಂದ ಕೂಡಿದ ಚೈತನ್ಯ. ಇವರಿಗೆ ಅಭೇದವನ್ನು ಹೇಳುವುದು ಹೇಗೆ ಎಂಬ ಪ್ರಶ್ನೆ ಹುಟ್ಟಬಹುದು. ಇಂಥಾ ಸಂದರ್ಭದಲ್ಲಿ ಲಕ್ಷಣೆಯಿಂದ ಐಕ್ಯವನ್ನು ಹೇಳಬೇಕು. ಎಂದರೆ ಉಪಾಧಿಯಾದ ಅಂತಃಕರಣಾದಿಗಳನ್ನು ತ್ಯಜಿಸಿ, ತ್ವಂ- ಎಂದರೆ ಕೇವಲ ಚೈತನ್ಯವೆಂದರ್ಥ ಹೇಳಬೇಕು. ಆಗ ವಿರೋಧವು ಘಟಿಸುವುದಿಲ್ಲ. ಇನ್ನು ಕೆಲವರು ತತ್ ಎಂದರೆ ಸೃಷ್ಟಿಕರ್ತನಾದ ಈಶ್ವರನೆಂದು ಅರ್ಥ ಹೇಳುತ್ತಾರೆ. ’ ಸ ಆತ್ಮಾ’ ಎಂಬಲ್ಲಿ ಆತ್ಮ ಶಬ್ಧವಿರುವುದರಿಂದ ತತ್ ಶಬ್ಧವು ಆತ್ಮ ಶಬ್ಧಾರ್ಥವನ್ನು ಪರಾಮರ್ಶಿಸುತ್ತದೆಯೆಂದೂ ಆತ್ಮ ಶಬ್ಧದ ಅರ್ಥ ಈಶ್ವರನೆಂದೂ ಅವರ ಅಭಿಪ್ರಾಯ. ಆಗ ತತ್ ಶಬ್ಧದಲ್ಲಿಯೂ ಲಕ್ಷಣೆಯನ್ನು ಹೇಳಬೇಕು. ಈಶ್ವರನೆಂದರೆ ಸಗುಣವಾದ ಎಂದರೆ ಮಾಯೆಯನ್ನು ತನ್ನ ಅಧೀನದಲ್ಲಿಟ್ಟುಕೊಂಡಿರುವ ಬ್ರಹ್ಮವಸ್ತು. ಮಾಯೆಯೆಂಬುದು ಉಪಾಧಿ. ಲಕ್ಷಣೆಯಿಂದ ಅದನ್ನು ತ್ಯಜಿಸಿದಾಗ ಉಳಿಯುವ ಬ್ರಹ್ಮವೆಂದರೆ ಕೇವಲ ಚೈತನ್ಯವೇ ಆಗುತ್ತದೆ. ಹಿಂದೆ ಹೇಳಿದಂತೆ ತ್ವಂ ಪದಾರ್ಥವೂ ಚೈತನ್ಯವೇ ಆಗುತ್ತದೆ. ಆಗ ಅಭೇದವನ್ನು ಎರಡು ಪದಾರ್ಥಗಳಿಗೂ ಹೇಳಬಹುದು. ಲೋಕದಲ್ಲಿಯೂ ಈ ರೀತಿ ವ್ಯವಹಾರವಿದೆ. ದೇವದತ್ತ ಎಂಬವನನ್ನು ಕಾಶಿಯಲ್ಲಿ ನೋಡಿರುತ್ತೇವೆ. ಆಗ ಅವನು ಹುಡುಗ. ಗಡ್ಡ ಮೀಸೆ ಬಂದಿರಲಿಲ್ಲ. ಪಂಚೆಯನ್ನುಟ್ಟಿದ್ದ. ಹತ್ತು ವರ್ಷಗಳ ಮೇಲೆ ಬೆಂಗಳೂರಲ್ಲಿ ಅವನನ್ನು ನೋಡುತ್ತೇವೆ. ಅವನಿಗೆ ಗಡ್ಡಮೀಸೆ ಬಂದಿದೆ. ಈಗ ಪ್ಯಾಂಟ್ ಹಾಕಿದ್ದಾನೆ. ಥಟ್ಟನೆ ಗುರುತು ಸಿಗುವುದಿಲ್ಲ. ಇನ್ನೊಬ್ಬರು ’ಇವನು ದೇವದತ್ತ’ ಎಂದು ಪರಿಚಯವನ್ನು ಹೇಳುತ್ತ ’ಸೋsಯಂ ದೇವದತ್ತಃ’ ಎನ್ನುತ್ತಾರೆ. ಅವನೇ ಈ ದೇವದತ್ತ ಎಂಬ ಜ್ಞಾನವು ನಮಗೆ ಉಂಟಾಗುತ್ತದೆ. ಗಡ್ಡಮೀಸೆ, ಪ್ಯಾಂಟ್, ಪಂಚೆ ಮುಂತಾದವು ಉಪಾಧಿಗಳು. ಆ ಉಪಾಧಿಗಳನ್ನು ತ್ಯಜಿಸಿ ಆ ವ್ಯಕ್ತಿಯೇ ಈತನೆಂದು ಸ್ಫುಟವಾಗಿ ತಿಳಿಯುತ್ತದೆಯಲ್ಲವೇ? ಹಾಗೆಯೇ “ತತ್ತ್ವಮಸಿ” ಎಂಬಲ್ಲಿಯೂ ಮಾಯೆ, ಅವಿದ್ಯೆ ಇತ್ಯಾದಿ ಉಪಾಧಿಗಳನ್ನು ತ್ಯಜಿಸಿ, ಇಬ್ಬರಿಗೂ ಅಭೇದವನ್ನು ಮನಗಂಡು, ತಾನು ಯಾರೆಂದು ತಿಳಿದಾಗ “ಸೋsಹಂ” ಎಂಬ ಆತ್ಮಜ್ಞಾನ ಉಂಟಾಗುತ್ತದೆ. ಇಲ್ಲಿ ಲಕ್ಷಣೆಯಿಂದ ವಿಶೇಷಣಾಂಶವನ್ನು ತ್ಯಜಿಸುತ್ತೇವೆ. ವಿಶೇಷ್ಯವಾದ ಚೈತನ್ಯವನ್ನು ಮಾತ್ರ ಗ್ರಹಿಸಿತ್ತೇವೆ. ಇದಕ್ಕೆ ಭಾಗತ್ಯಾಗ ಲಕ್ಷಣಾ ಎಂದು ಹೆಸರು. ಶಬ್ಧಾರ್ಥದಲ್ಲಿ ವಿಶೇಷಣವಾದ ಒಂದು ಅಂಶವನ್ನು ತ್ಯಜಿಸುವುದರಿಂದ ಭಾಗತ್ಯಾಗವೆಂದು ಹೆಸರು. ಇದನ್ನು ಜಹದಜಹಲ್ಲಕ್ಷಣಾ ಎಂದು ಹೇಳುತ್ತಾರೆ. ಜಹತ್= ವಿಶೇಷಣಾಂಶವನ್ನು ಬಿಡತಕ್ಕ, ಅಜಹತ್= ವಿಶೇಷ್ಯವನ್ನು ಗ್ರಹಿಸತಕ್ಕ ಎಂದರ್ಥ. ಈ ಸಂದರ್ಭದಲ್ಲಿ ಯಾವ ಲಕ್ಷಣೆಯೂ ಬೇಡ. ಕೇವಲ ವಿಶೇಷ್ಯದಲ್ಲಿಯೇ ನೇರವಾಗಿ ಅನ್ವಯವನ್ನು ಹೇಳಬಹುದು ಎಂದು ವೇದಾಂತ ಪರಿಭಾಷೆಯಲ್ಲಿ ಬರೆದಿದೆ.
ಗಾಢವಾದ ಮನನ, ನಿದಿಧ್ಯಾಸನಗಳಿಂದಲೂ, ಗುರುವಿನ ಆಶೀರ್ವಾದದಿಂದಲೂ, ಈಶ್ವರಾನುಗ್ರಹದಿಂದಲೂ ಸಕಲಸಂದೇಹಗಳ ನಿವಾರಣೆಯಾಗಿ ’ಚಿದಾನಂದ ರೂಪಃ ಶಿವೋsಹಂ ಶಿವೋsಹಂ’ ಎಂಬ ನಿಶ್ಚಯಜ್ಞಾನ ಉಂಟಾಗುತ್ತದೆ.
~*~
October 1, 2013 at 6:54 AM
harerama.
tatwamasi soham edu ella kelida shabdhagale aadaru evugala vishala adwaita arthavu eega spashtavagide.dhanyavadagalu. entaha lekhanagalannu hechu hechu koduthiri.
harerama.
October 12, 2013 at 8:22 AM
Connecting Page.
Previous article in Jnanasuma
12. Aham Brahmasmi
http://hareraama.in/articles/sammukha/jnana-suma-aham-brahmasmi/
Next article in Jnanasuma
14. Ayamatma Brahma
http://hareraama.in/articles/sammukha/jnanasuma-14-ayamatma-brahma/