ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಜ್ಞಾನಸುಮ 12:

 

ಅಹಂ ಬ್ರಹ್ಮಾಸ್ಮಿ

ವಿದ್ವಾನ್ ರಾಮಚಂದ್ರ ಶಾಸ್ತ್ರೀ ಸೂರಿ

 

“ಅಹಂ ಬ್ರಹ್ಮಾಸ್ಮಿ” ಎಂಬುದೊಂದು ಮಹಾವಾಕ್ಯ. ಇದು ಬೃಹದಾರಣ್ಯಕದ ಪ್ರಥಮಾಧ್ಯಾಯದ ಚತುರ್ಥಬ್ರಾಹ್ಮಣದಲ್ಲಿ ಬಂದಿದೆ. ಬೃಹದಾರಣ್ಯಕವು ಶುಕ್ಲ ಯಜುರ್ವೇದ ಉಪನಿಷತ್. ತೈತ್ತೀರಿಯದಲ್ಲೂ ಸ್ವಲ್ಪ ತಿರುಮರುವಾಗಿ “ಬ್ರಹ್ಮಾಹಮಸ್ಮಿ” ಎಂದು ಬಂದಿದೆ. ಇದರಂತೆ “ಪ್ರಜ್ಞಾನಂ ಬ್ರಹ್ಮ” ಎಂಬುದು ಋಗ್ವೇದದ ಐತರೇಯೋಪನಿಷತ್ತಿನಲ್ಲಿದೆ. ಛಾಂದೋಗ್ಯ ಉಪನಿಷತ್ತಿನಲ್ಲಿ (ಸಾಮವೇದ) “ತತ್ತ್ವಮಸಿ” ಎಂದಿದೆ. ಅಥರ್ವವೇದದ ಮಾಂಡೂಕ್ಯದಲ್ಲಿ “ಅಯತಾತ್ಮಾ ಬ್ರಹ್ಮ” ಎಂದಿದೆ. ಈ ನಾಲ್ಕೂ ವಾಕ್ಯಗಳು ಒಂದೇ ಅರ್ಥವನ್ನು ಹೇಳುತ್ತಿವೆ.  ಕೆಲವು ವರ್ಷಗಳ ಹಿಂದೆ ಮುಂಬೈ ನಿರ್ಣಯ ಸಾಗರ ಪ್ರೆಸ್ಸಿನಲ್ಲಿ “ಮಹಾವಾಕ್ಯ ರತ್ನಾವಳಿ” ಎಂಬ ಹೆಸರಿನಿಂದ ಪ್ರಿಂಟಾದ ಗ್ರಂಥದಲ್ಲಿ ಇಂಥವೇ ಆದ ಅನೇಕ ವಾಕ್ಯಗಳನ್ನು ಸಂಗ್ರಹಿಸಿದ್ದಾರೆ. ಎಲ್ಲವೂ ಒಂದೇ ಅರ್ಥವನ್ನು ಹೇಳುತ್ತವೆ.

ಮೇಲಿನ ನಾಲ್ಕು ಮಹಾವಾಕ್ಯಗಳನ್ನು ಶ್ರೀಭಗವತ್ಪಾದ ಶಂಕರಾಚಾರ್ಯರಿಂದ ಪ್ರತಿಷ್ಠಿತವಾದ ನಾಲ್ಕು ಆಮ್ನಾಯ ಪೀಠಗಳೂ ಅವುಗಳ ವಿಭಿನ್ನ ಶಾಖಾ ಪೀಠಗಳೂ ಒಂದೊಂದನ್ನು ತಮ್ಮ ಮಠದ ಹೆಗ್ಗುರುತುಗಳನ್ನಾಗಿ ಸ್ವೀಕರಿಸಿದ್ದಾರೆ.

ಪೂರ್ವಾಮ್ನಾಯ ಶ್ರೀಪುರೀ ಪೀಠವು ಋಗ್ವೇದದ “ಪ್ರಜ್ಞಾನಂ ಬ್ರಹ್ಮ” ಎಂಬ ಮಹಾವಾಕ್ಯವನ್ನು ತಮ್ಮದಾಗಿ ಇಟ್ಟುಕೊಂಡಿದೆ. ಹಾಗೇ ದಕ್ಷಿಣಾಮ್ನಾಯ ಪೀಠವಾದ ಕಾಂಚೀ-ಶೃಂಗೇರಿ-ರಾಮಚಂದ್ರಾಪುರ-ಸ್ವರ್ಣವಲ್ಲೀ ಮುಂತಾದ ಪೀಠಗಳು “ಅಹಂ ಬ್ರಹ್ಮಾಸ್ಮಿ” ಎಂಬ ಮಹಾವಾಕ್ಯವನ್ನು ತಮ್ಮದಾಗಿ ಸ್ವೀಕರಿಸಿವೆ. ದ್ವಾರಕಾ ಪೀಠವು “ತತ್ತ್ವಮಸಿ” ಎಂಬುದನ್ನೂ, ಬದರೀಪೀಠವು “ಅಯತಾತ್ಮಾ ಬ್ರಹ್ಮ”ಎಂಬ ಮಹಾವಾಕ್ಯವನ್ನೂ ತಮ್ಮದಾಗಿ ಪರಿಗ್ರಹಿಸಿವೆ. ಇದೊಂದು ಪರಂಪರೆ ಅಷ್ಟೇ. ಬರೇ ಸಂಕೇತಕ್ಕಾಗಿ ಉಪಯೋಗವಾಗಿದೆ. ವಸ್ತುತಃ ಎಲ್ಲ ದೇಶಗಳಲ್ಲೂ ಎಲ್ಲ ಮಹಾಕಾವ್ಯಗಳೂ ಗುರುಗಳಿಂದ ಶಿಷ್ಯರಿಗೆ ಉಪದಿಷ್ಟವಾಗುವವು.

 ಈ ಮಹಾವಾಕ್ಯಗಳಲ್ಲಿ “ಅಹಂ ಬ್ರಹ್ಮಾಸ್ಮಿ” ಎಂಬುದನ್ನು ಮೋಕ್ಷಕಾಂಕ್ಷಿಗಳು ಸತತವಾಗಿ ಜಪಿಸಲು ಉಪನಿಷತ್ತು ಹೇಳಿದೆ. ಅರ್ಥಜ್ಞಾನವಿಲ್ಲದವರೂ ಬರೇ ಪಠಣ ಮಾತ್ರದಿಂದಲೇ ಮಂತ್ರ ಜಪಾದಿಗಳಂತೆ ಮನಃಶುದ್ಧಿಯನ್ನು ಹೊಂದಬಹುದೆಂಬುದೇ ಆ ಉಪನಿಷತ್ತಿನ ಅರ್ಥವಾಗಿದೆ. ಅರ್ಥಜ್ಞಾನವನ್ನೂ ಮಾಡಿಕೊಂಡು ಪಠಿಸಿದಾಗ ಮನಃ ಶುದ್ಧಿಯು ಆಗುವುದೆಂದು ಪುನಃ ಹೇಳಬೇಕಾಗಿಲ್ಲ.

ಈಗ ಆ ಮಹಾಕಾವ್ಯದ ಅರ್ಥವನ್ನು ವಿವರಿಸೋಣ. ‘ಅಹಂ’ ಎಂದರೆ ಅಹಂಕಾರ, ಅದರಲ್ಲಿ ಪ್ರತಿಬಿಂಬಿತವಾದ ಪರಬ್ರಹ್ಮ. ಆತನನ್ನು ಶಾಸ್ತ್ರದಲ್ಲಿ ವ್ಯವಹಾರದಲ್ಲೂ ಜೀವನೆಂದು ಕರೆಯಲಾಗಿದೆ. ಆ ಜೀವನು ನಾನಾ ಜನ್ಮಗಳನ್ನು ಪಡೆಯುತ್ತ ಬಿಡುತ್ತ ಈಗ ಮುಕ್ತಿಯ ಕೊನೆಯ ಮೆಟ್ಟಿಲಾದ ವಿಪ್ರಜನ್ಮದಲ್ಲಿರುವನು ಎಂದು ಇಟ್ಟುಕೊಳ್ಳುವ. ಈ ಜನ್ಮದಲ್ಲಾದರೂ ವಿಷಯಲಂಪಟನಾಗದೆ “ಅಹಂ ಬ್ರಹ್ಮಾಸ್ಮಿ” ಎಂಬ ಮಹಾವಾಕ್ಯದ ಅರ್ಥವನ್ನು ಎಂದರೆ ನಾನೇ ಬ್ರಹ್ಮವೆಂದು ಗುರುಶಾಸ್ತ್ರಗಳ ಮುಖದಿಂದ ತಿಳಿದು ಧ್ಯಾನಿಸುತ್ತ ಆ ಅಹಂಕಾರದಲ್ಲಿದ್ದ ನಾನಾ ವಿಧ ಸಂಸ್ಕಾರಗಳನ್ನು ಕಳಕೊಂಡು ತನ್ನ ಪ್ರತಿಬಿಂಬತ್ವವನ್ನು ತೊರೆದು ಬಿಂಬಭೂತವಾದ ಬ್ರಹ್ಮ ವಸ್ತುವಿನಲ್ಲಿ ಏಕತ್ವವನ್ನು ಅರಿತು ಮುಕ್ತನಾಗಬೇಕು.

ಬ್ರಹ್ಮ ಎಂದರೆ ಶುದ್ಧವೂ, ನಿರ್ಗುಣ ನಿರ್ವಿಕಾರವೂ, ವೇದಾಂತ ಮಾತ್ರಗಮ್ಯವೂ ಆದ ಒಂದು ವಸ್ತು. “ಅಸ್ಮಿ” ಎಂದರೆ ಆಗಿದ್ದೇನೆಂದರ್ಥ. ಇದು ಹೇಗೆ ಸಾಧ್ಯ? ಸಾಧ್ಯವಿದೆ. ಕನ್ನಡಿಯೆಂಬ ಉಪಾಧಿಯಲ್ಲಿ ಮುಖದ ಪ್ರತಿಬಿಂಬವಿದೆ. ಮುಖವು ಬಿಂಬ, ಕನ್ನಡಿಯನ್ನು ಸರಿಸಿದರೆ ಆ ಪ್ರತಿಬಿಂಬವು ಬಿಂಬದೊಡನೆ ಏಕತ್ವವಾಗುವುದಲ್ಲವೆ? ಇದೊಂದು ಉದಾಹರಣೆ, ಇಂಥ ಉದಾಹರಣೆಗಳು ವೇದಾಂತದಲ್ಲಿ ಸಾಕಷ್ಟಿವೆ. ಮಹಾಕಾಶ, ಘಟಾಕಾಶ ಇದೊಂದು ದೃಷ್ಟಾಂತ. ಘಟವು ಒಡೆದು ಹೋದರೆ ಘಟದೊಳಗಿದ್ದ ಆ ಆಕಾಶವು ಅಂದರೆ ಖಾಲಿ ಜಾಗವು ಮಹಾಕಾಶದೊಂದಿಗೆ ಸೇರುವುದಿಲ್ಲವೇ? ಹಾಗೆ.

ನಿನ್ನೆ ಬೆಂಗಳೂರಿನಲ್ಲಿ ಕಂಡ ಒಬ್ಬ ಮಾನವನನ್ನು ಇಂದು ಮಂಗಳೂರಿನಲ್ಲಿ ಕಂಡು ಆತನೇ ಇವನೆಂದು ಗುರುತಿಸುವುದಿಲ್ಲವೆ? ನಿನ್ನೆಯ ದಿನ ಬೇರೆ, ಇಂದಿನ ದಿನ ಬೇರೆ. ಬೆಂಗಳೂರು ಬೇರೆ. ಮಂಗಳೂರು ಬೇರೆ. ಹೀಗೆ ಕಾಲದೇಶಗಳು ಭಿನ್ನವಾದರೂ ಆ ವ್ಯಕ್ತಿ ಒಬ್ಬನೇ. ವಿಶೇಷಣಗಳು ಭಿನ್ನವಾದರೂ ವಿಶೇಷ ವ್ಯಕ್ತಿಯೊಂದೇ.

ಈ ವಿಷಯದಲ್ಲಿ ತರ್ಕವಿತರ್ಕಗಳು ನಡೆಯುತ್ತಲಿವೆ. ಈ ಬಗ್ಗೆ ಲಕ್ಷಣಾವೃತ್ತಿಯಿಂದ ಮಹಾವಾಕ್ಯಗಳ ಅರ್ಥವನ್ನು ಮಾಡುವರೆಂಬ ಆಕ್ಷೇಪಣೆಗಳಿಗೆ ಅವಕಾಶವಿಲ್ಲ. ಅನೇಕ ಹಿಂದಿನ ನಮ್ಮ ಆಚಾರ್ಯರು ಸಿದ್ಧಾಂತಗಳನ್ನು ಪ್ರದರ್ಶಿಸಿರುವರು. ಅದೆಲ್ಲ ಇಲ್ಲಿ ಅಪ್ರಸ್ತುತ. ಸಾಧಕನು ಬ್ರಹ್ಮಜ್ಞಾನಿಯನ್ನು ವಿಧಿವತ್ತಾಗಿ ವಂದಿಸಿ ಜೀವವು ಬ್ರಹ್ಮವೆಂಬುದನ್ನು ತಿಳಿಯಬಹುದು. ನಮಗೀಗ ಅಸಂಭಾವನೆ ಸಂಶಯಭಾವನೆ ವಿಪರೀತ ಭಾವನೆಗಳಿವೆ.

ನಾನು ಬ್ರಹ್ಮನಾಗಲು ಶಕ್ಯವಿಲ್ಲ ಎಂಬುದು ಅಸಂಭಾವನೆ. ನಾನು ಬ್ರಹ್ಮವೋ ಅಲ್ಲವೋ ಎಂಬುದು ಸಂಶಯ ಭಾವನೆ. ನಾನು ಬ್ರಹ್ಮವಲ್ಲ ಎಂಬುದು ವಿಪರೀತ ಭಾವನೆ.

ಗುರುಮುಖದಿಂದ ಶಾಸ್ತ್ರಾಭ್ಯಾಸ ಮಾಡಿ ಶ್ರದ್ಧೆಯಿಂದ ಚೆನ್ನಾಗಿ ಮನನ ಮಾಡಿದರೆ ಆ ಮೊದಲಿನ ಎರಡೂ ಭಾವನೆಗಳೂ ತೊಲಗುವವು. ಆದರೆ ಮೂರನೆಯದಾದ ಅಸಂಭಾವನೆಯು ಮಾತ್ರ ಬ್ರಹ್ಮಾತ್ಮ ಪ್ರತ್ಯಕ್ಷದಿಂದಲೇ ಕಳೆಯುವುದು. ಉದಾಹರಣೆಗೆ-

ಹಗ್ಗವನ್ನು ಕಂಡು ಸರ್ಪವೆಂದು ಭ್ರಮಿಸಿ ನಡುಗುತ್ತ ಮನೆಯನ್ನು ಸೇರಿದ ವ್ಯಕ್ತಿಯೊಬ್ಬನಿಗೆ ಸರ್ಪವೆಂಬ ಪ್ರತ್ಯಕ್ಷ ಭ್ರಮವಿರುವಾಗ ಮನೆಯಲ್ಲಿ ಹಿರಿಯರು ಅದು ಸರ್ಪವಲ್ಲ, ಹಗ್ಗವೆಂದು ಎಷ್ಟೇ ಬೋಧಿಸಿದರೂ ಆತನಿಗೆ ಆ ಸರ್ಪದ ಭ್ರಮೆಯು ನೀಗುವುದಿಲ್ಲ. “ಸ್ವತಃ” ನೋಡಿದ್ದೇನೆ. ವಕ್ರವಾಗಿ ಮಲಗಿ ಹೆಡೆಯನ್ನೆತ್ತಿ ಬುಸ್ ಎಂದು ಶಬ್ಧ ಮಾಡಿತ್ತು. ಅಷ್ಟು ಅಗಲವಾದ ಹೆಡೆಯಿದೆ, ಚಿನ್ಹೆಗಳಿವೆ, ಎಂದು ಮುಂತಾಗಿ ಆತನು ವಾದಿಸುತ್ತಿರುತ್ತಾನೆ. ಆದರೆ ಆ ಹಿರಿಯರು ಆತನನ್ನು ಆ ಸ್ಥಳಕ್ಕೆ ಕೊಂಡೊಯ್ದು ಆ ಹಗ್ಗವನ್ನು ತೋರಿಸಿದಾಗಲೇ ಆತನ ಭ್ರಮೆಯು ಕಳೆದುಹೋಗುತ್ತದೆ. ಹಾಗೆಯೆ ಬ್ರಹ್ಮಜ್ಞಾನಿಯಾದ ಗುರುವು ನಿಜವಾದ ಬ್ರಹ್ಮಾತ್ಮೈಕ್ಯವನ್ನು ನಮಗೆ ತೋರಿಸಿದಾಗಲೇ ನಾವು ಆ ಸ್ವರೂಪವನ್ನು ಪಡೆಯುವೆವು. ಅಂದರೆ ಮುಕ್ತರಾಗುವೆವು. ಅಲ್ಲಿಯ ತನಕ ದೇಹವೇ ನಾನು, ಇಂದ್ರಿಯಗಳೇ ನಾನು, ಈ ಜಗತ್ತೆಲ್ಲವೂ ಕಾಣುವಂತೆ ಸತ್ಯವಾದದ್ದು ಎಂದು ತಿಳಿಯುತ್ತೇವೆ. ಹಾಗೇ ವಾದಿಸುತ್ತೇವೆ. ಹಾಗಿರುವುದರಿಂದಲೇ ಅನೇಕ ವಾದಗಳು ಮತಗಳು ಹುಟ್ಟಿಕೊಂಡಿವೆ.

ಈ ಮತಗಳನ್ನೆಲ್ಲವನ್ನೂ ಬೆಳಗುವುದು ಬ್ರಹ್ಮಾತ್ಮತತ್ತ್ವವೇ. ಅದೇ ಬ್ರಹ್ಮತತ್ತ್ವವು ಆ ಅಹಂಕಾರದಲ್ಲಿ ಪ್ರಕಾಶಿಸಿದರೆ ಅಹಂಕಾರವನ್ನು ಸುಟ್ಟುಬಿಡುತ್ತದೆ. ಇದಕ್ಕೆ ಉದಾಹರಣೆ: ಹುಲ್ಲುಗಳನ್ನು ಬೆಳಗುವ ಸೂರ್ಯಕಿರಣವು ಹುಲ್ಲಿನ ಸಂಗಡವೇ ಇದ್ದ ಸೂರ್ಯಕಾಂತ ಮಣಿಯ ಮೇಲೆ ಬಿದ್ದರೆ, ಆ ಹುಲ್ಲುಗಳನ್ನು ಸುಟ್ಟು ಬೂದಿ ಮಾಡುವುದಿಲ್ಲವೇ? ಈ ಉದಾಹರಣೆಯನ್ನು ವಾರ್ತಿಕಕಾರರಾದ ಶ್ರೀಸುರೇಶ್ವರಾಚಾರ್ಯರು ಹೇಳಿದ್ದಾರೆ.

ತೃಣಾದೇರ್ಭಾಸಿಕಾಪ್ಯೇಷಾ
ಸೂರ್ಯಕಾಂತಿಃ ತೃಣಂ ದಹೇತ್|
ಸೂರ್ಯಕಾಂತಮುಪಾರುಹ್ಯ
ತಂ ನ್ಯಾಯ ತತ್ರ ಯೋಜಯೇತ್ || ಎಂದಿದ್ದಾರೆ.

ಒಟ್ಟಿನಲ್ಲಿ “ಅಹಂ ಬ್ರಹ್ಮಾಸ್ಮಿ” ಎಂಬ ಮಹಾವಾಕ್ಯವೂ ಇತರೇ ಎಲ್ಲ ಮಹಾವಾಕ್ಯಗಳೂ ಇದೊಂದೇ ಅರ್ಥವನ್ನು ಪ್ರತಿಪಾದಿಸುತ್ತವೆ.

ಅದರೊಂದಿಗೆ ಇರುವ ಉಪವಾಕ್ಯಗಳೆಲ್ಲವೂ ವಿವಿಧ ರೀತಿಯಿಂದ ಅವುಗಳನ್ನು ಬಲಪಡಿಸುತ್ತವೆ. ಇವೆಲ್ಲ ಉಪನಿಷತ್ತುಗಳು ಒಂದಾಗಿ-

ಬ್ರಹ್ಮಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ |

ಎಂಬುದನ್ನು ಸಿದ್ಧಮಾಡುತ್ತವೆ.

ಈ ಪ್ರತ್ಯಕ್ಷಾನುಭವವನ್ನು ಸಹಸ್ರಾರು ಜನ್ಮಗಳಿಂದ ಸಾಧಿಸಿದ ಪುಣ್ಯಬಲದಿಂದ ಸಿಕ್ಕಿದ ಬ್ರಹ್ಮಜ್ಞಾನಿಯ ಉಪದೇಶದಿಂದ ಪಡೆದು ಕೃತಾರ್ಥರಾಗೋಣ.

~*~

Facebook Comments