ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಜ್ಞಾನಸುಮ 11:

ಪ್ರಜ್ಞಾನಂ ಬ್ರಹ್ಮ

ವಿದ್ವಾನ್ ಶೇಷಾಚಲ ಶರ್ಮಾ

ಉಪನಿಷತ್ತುಗಳು, ಭಗವದ್ಗೀತಾದಿ ಸ್ಮೃತಿಗಳು ಮತ್ತು ವೇದಾಂತ ಸೂತ್ರಗಳು ಪರಮ ತಾತ್ಪರ್ಯರೂಪವಾಗಿ ಆತ್ಮೈಕತತ್ವವನ್ನೇ ಪ್ರತಿಪಾದಿಸುತ್ತವೆ ಎಂಬುದಾಗಿ ಶ್ರೀಶಂಕರ ಭಗವತ್ಪಾದರು ಹಾಗೂ ಶ್ರೀ ಗೌಡಪಾದಾಚಾರ್ಯರು – ಇವರುಗಳಿಂತಲೂ ಹಿಂದೆಯೇ ವೇದಾಂತ ಸಂಪ್ರದಾಯವಿದರಾದ ಆಚಾರ್ಯರು ಪ್ರತಿಪಾದಿಸಿದ್ದಾರೆ. ಗುರುಶಿಷ್ಯಭಾವವನ್ನು ಹೊಂದಿದ ವೇದಾಂತ ಸಂಪ್ರದಾಯವಿದರಾದ ಆಚಾರ್ಯರ ಅಖಂಡ ಪರಂಪರೆಯೇ ಭಾರತದಲ್ಲಿ ಬೆಳೆದು ಬಂದಿದೆ. ನಾಲ್ಕು ಪುರುಷಾರ್ಥಗಳಲ್ಲಿ ಮೋಕ್ಷವೇ ಪರಮ ಪುರುಷಾರ್ಥ. ಬ್ರಹ್ಮಾತ್ಮೈಕಸಿದ್ಧಿಯೇ ಮೋಕ್ಷ. ಸಚ್ಚಿದಾನಂದ ಸ್ವರೂಪವಾದ ಬ್ರಹ್ಮಾತ್ವಭಾವವನ್ನು ಹೊಂದಿದರೆ ಸಕಲಶೋಕಗಳ ನಿವೃತ್ತಿಯಾಗುತ್ತದೆ. ನೇರವಾಗಿ ಬ್ರಹ್ಮಾತ್ಮಭಾವವನ್ನು ಬೋಧಿಸುವ ಉಪನಿಷದ್ ವಾಕ್ಯಗಳನ್ನು ಮಹಾಕಾವ್ಯಗಳೆಂದು ಸಂಪ್ರದಾಯವಿದರು ಗುರುತಿಸಿದ್ದಾರೆ. ಈ ವಾಕ್ಯಗಳು ಆಕಾರದಲ್ಲಿ ದೊಡ್ಡದಾಗಿವೆ ಎಂಬ ಕಾರಣದಿಂದ ಇವು ಮಹಾವಾಕ್ಯಗಳೆನಿಸಿಲ್ಲ. ನಿರುಪಾಧಿಕವೂ ಅದ್ವಿತೀಯವೂ ಆದ ಬ್ರಹ್ಮಾತ್ಮಭಾವವನ್ನು ನೇರವಾಗಿ ಅಂದರೆ ಅನುಭವಪರ್ಯವಸಾನವಾಗಿ ಬೋಧಿಸುವುದೇ ಈ ವಾಕ್ಯಗಳ ಮಹತ್ತ್ವ. ಆದುದರಿಂದಲೇ ಇವು ಮಹಾವಾಕ್ಯಗಳೆಂದು ಪ್ರಸಿದ್ಧವಾಗಿವೆ. “ತತ್ತ್ವಮಸಿ”, “ಅಹಂ ಬ್ರಹ್ಮಾಸ್ಮಿ” ಮೊದಲಾದವು ಮಹಾವಾಕ್ಯಗಳೆಂದು ಪ್ರಸಿದ್ಧವಾಗಿವೆ. ಇತ್ತೀಚಿನ ವೇದಾಂತಿಗಳು ಇವುಗಳನ್ನು ಮಹಾವಾಕ್ಯಗಳೆಂದು ಹೇಳುತ್ತಾರೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಇದು ಅಷ್ಟೇನೂ ಸಮಂಜಸವಲ್ಲವೆಂದು ತೋರುತ್ತದೆ. ಏಕೆಂದರೆ ಮಹಾವಾಕ್ಯವಿಚಾರವೆಂಬುದು ವೇದಾಂತಸಂಪ್ರದಾಯವಿದರ ಪರಂಪರೆಯಿಂದಲೇ ಪ್ರಸಿದ್ಧವಾಗಿದೆ. ಶ್ರೀಶಂಕರಭಗವತ್ಪಾದರಿಂದ ರಚಿತವಾದವುಗಳೆಂದು ಪ್ರಸಿದ್ಧವಾಗಿರುವ ಪ್ರಕರಣ ಗ್ರಂಥಗಳಲ್ಲಿ
1. ವಾಕ್ಯವೃತ್ತಿ
2.ಮಹಾವಾಕ್ಯಮಂತ್ರ
3. ಮಹಾವಾಕ್ಯವಿವರಣ
4. ಮಹಾವಾಕ್ಯವಿವೇಕ
5. ದ್ವಾದಶಮಹಾವಾಕ್ಯವಿವರಣ
ಮುಂತಾದ ಗ್ರಂಥಗಳು ಕಂಡುಬರುತ್ತವೆ.
ಶ್ರೀಭಗವತ್ಪಾದರು ಬ್ರಹ್ಮಸೂತ್ರಭಾಷ್ಯ ಮುಂತಾದ ಗ್ರಂಥಗಳಲ್ಲಿ ಬ್ರಹ್ಮಾತ್ಮಾನುಭವವನ್ನು ಬೋಧಿಸುವ ‘ತತ್ತ್ವಮಸಿ‘ ವಾಕ್ಯದ ಅರ್ಥವಿಚಾರವನ್ನು ಬಹಳ ವಿಶದವಾಗಿ ನಿರೂಪಿಸಿರುವುದು ಸರ್ವವಿದಿತವಾದ ವಿಷಯ. ಶಿವಮಹಾಪುರಾಣದ ಕೈಲಾಸಸಂಹಿತೆಯಲ್ಲಿ ಸನ್ಯಾಸವಿಧಿಯನ್ನು ತಿಳಿಸುವ ಪ್ರಕರಣದಲ್ಲಿ “ಅಥ ಮಹಾವಾಕ್ಯಾನಿ” ಎಂದು ಆರಂಭಿಸಿ “ಪ್ರಜ್ಞಾನಂ ಬ್ರಹ್ಮ”, “ಅಹಂ ಬ್ರಹ್ಮಾಸ್ಮಿ”, “ತತ್ತ್ವಮಸಿ”, “ಅಯಮಾತ್ಮಾ ಬ್ರಹ್ಮ” ಎಂದು ಮುಂತಾದ ಇಪ್ಪತ್ತೆರಡು ಮಹಾವಾಕ್ಯಗಳನ್ನು ನಿರ್ದೇಶಿಸಲಾಗಿದೆ. ಕೊನೆಗೆ “ಇತ್ಯೇವಂ ಸರ್ವತ್ರ ಸದಾ ಧ್ಯಾಯೇದಿತಿ” ಎಂದು ಹೇಳಲಾಗಿದೆ. ಶಿವಪುರಾಣವು ಪ್ರಾಚೀನ ಪುರಾಣಗಳಲ್ಲಿ ಸೇರಿದುದಾಗಿದೆ. ಕಾಳಿದಾಸನೂ ಕೂಡ ತನ್ನ ಮಹಾಕಾವ್ಯವಾದ ಕುಮಾರಸಂಭವದ ಕಥಾವಸ್ತುವನ್ನು ಶಿವಮಹಾಪುರಾಣದಿಂದಲೇ ಸಂಗ್ರಹಿಸಿದ್ದಾನೆ. ಅಷ್ಟೇ ಅಲ್ಲದೆ ಶಿವಪುರಾಣದ ಎಷ್ಟೋ ವಾಕ್ಯಗಳು ಕುಮಾರಸಂಭವದಲ್ಲಿ ಯಥಾವತ್ತಾಗಿ ಕಂಡುಬರುತ್ತವೆ. ಆದುದರಿಂದ ಉಪನಿಷತ್ತುಗಳಲ್ಲಿ ಬ್ರಹ್ಮಾತ್ಮಭಾವವನ್ನು ನೇರವಾಗಿ ಬೋಧಿಸುವ ವಾಕ್ಯಗಳನ್ನು ಮಹಾವಾಕ್ಯಗಳೆಂದು ಗುರುತಿಸುವುದು ವೇದಾಂತ ಶಾಸ್ತ್ರದ ಪರಂಪರೆಯಿಂದ ಬಂದುದಾಗಿದೆಯೆಂದು ತಿಳಿಯಬೇಕು.

ಇಂದಿಗೂ ಕೂಡ ಅದ್ವೈತ ಸಂಪ್ರದಾಯದಲ್ಲಿ ಸನ್ಯಾಸದೀಕ್ಷೆಯನ್ನು ಕೊಡುವಾಗ ಗುರುವು ಶಿಷ್ಯನಿಗೆ ಪ್ರಣವದ ಅರ್ಥವನ್ನು ಬೋಧಿಸಿ ನಾಲ್ಕು ಮಹಾವಾಕ್ಯಗಳನ್ನು ಅರ್ಥವಿವರಣೆಯೊಡನೆ ಉಪದೇಶ ಮಾಡುವುದು ಸನ್ಯಾಸವಿಧಿಯಲ್ಲಿ ಸೇರಿದೆ. ಅದ್ವಿತೀಯವಾದ ಬ್ರಹ್ಮಾತ್ಮಾನುಭವವೇ ಸಕಲ ಶ್ರುತಿಗಳ ಪರಮತಾತ್ಪರ್ಯವೆಂಬುದನ್ನು ಬೋಧಿಸುವುದಕ್ಕಾಗಿ ನಾಲ್ಕು ವೇದಗಳಿಂದ ಪ್ರತಿನಿಧಿರೂಪವಾಗಿ ನಾಲ್ಕು ಮಹಾವಾಕ್ಯಗಳನ್ನು ಉಪದೇಶ ಮಾಡುವುದು ಸಂಪ್ರದಾಯದಲ್ಲಿ ಬಂದಿದೆ. ಈ ನಾಲ್ಕು ಮಹಾವಾಕ್ಯಗಳು ಯಾವುವೆಂದರೆ,

1. ಋಗ್ವೇದಕ್ಕೆ ಸೇರಿದ ಐತರೇಯೋಪನಿಷತ್ತಿನ “ಪ್ರಜ್ಞಾನಂ ಬ್ರಹ್ಮ”

2. ಯಜುರ್ವೇದಕ್ಕೆ ಸೇರಿದ ಬೃಹದಾರಣ್ಯಕೋಪನಿಷತ್ತಿನ “ಅಹಂ ಬ್ರಹ್ಮಾಸ್ಮಿ”

3. ಸಾಮವೇದಕ್ಕೆ ಸೇರಿದ ಛಾಂದೋಗ್ಯೋಪನಿಷತ್ತಿನ “ತತ್ತ್ವಮಸಿ”

   ಮತ್ತು

4. ಅಥರ್ವಣ ವೇದಕ್ಕೆ ಸೇರಿದ ಮಾಂಡೂಕ್ಯೋಪನಿಷತ್ತಿನ “ಅಯತಾತ್ಮಾ ಬ್ರಹ್ಮ” – ಎಂಬ ಈ ಮಹಾ ವಾಕ್ಯಗಳು.

ಈ ಮಹಾವಾಕ್ಯಗಳು ಇತರ ಉಪನಿಷತ್ತುಗಳಲ್ಲಿಯೂ ಕೆಲವು ಕಡೆ ಕಂಡುಬರುತ್ತವೆ. ಶ್ರೀಶಂಕರಭಗವತ್ಪಾದರು ಪ್ರತಿಷ್ಠಾಪಿಸಿದ ನಾಲ್ಕು ಆಮ್ನಾಯಪೀಠಗಳು ಒಂದೊಂದು ಮಹಾವಾಕ್ಯವನ್ನು ತಮ್ಮ ಅಸಾಧಾರಣವಾದ ಹೆಗ್ಗುರುತನ್ನಾಗಿ ಹೊಂದಿವೆಯೆಂದು ಮಠಾಮ್ನಾಯಚರಿತವು ತಿಳಿಸುತ್ತದೆ. ಭಾರತದ ಪೂರ್ವದಿಕ್ಕಿನಲ್ಲಿರುವ ಜಗನ್ನಾಥಪುರೀ ಕ್ಷೇತ್ರದ ಪೂರ್ವಾಮ್ನಾಯ ಪೀಠಕ್ಕೆ ಋಗ್ವೇದದ “ಪ್ರಜ್ಞಾನಂ ಬ್ರಹ್ಮ” ಎಂಬ ಮಹಾವಾಕ್ಯವು ಗುರುತಾಗಿದೆ. ದಕ್ಷಿಣಾಮ್ನಾಯ ಶೃಂಗೇರಿ ಶ್ರೀಶಾರದಾಪೀಠದ ಹೆಗ್ಗುರುತು ಯಜುರ್ವೇದದ “ಅಹಂ ಬ್ರಹ್ಮಾಸ್ಮಿ” ಎಂಬುದು. ಪಶ್ಚಿಮಾಮ್ನಾಯ ದ್ವಾರಕಾಶಂಕರಾಚಾರ್ಯ ಪೀಠಕ್ಕೆ ಸಾಮವೇದದ “ತತ್ತ್ವಮಸಿ” ಮಹಾವಾಕ್ಯವು ಸೇರಿದೆ. “ಅಯಮಾತ್ಮಾ ಬ್ರಹ್ಮ” ಎಂಬ ಅಥರ್ವಣವೇದದ ಮಹಾವಾಕ್ಯವು ಉತ್ತರಾಮ್ನಾಯ ಬದರೀಶಂಕರಾಚಾರ್ಯಪೀಠಕ್ಕೆ ಸೇರಿದುದಾಗಿದೆ. ಈ ರೀತಿಯಾದ ಮಾಹಾವಾಕ್ಯವಿಭಾಗವು ಕೇವಲ ಒಂದು ಸಾಂಕೇತಿಕ ಪ್ರಸಿದ್ಧಿಯಷ್ಟೆ. ಏಕೆಂದರೆ ಈ ಎಲ್ಲ ಪೀಠಗಳಲ್ಲೂ ಗುರುಗಳು ಸನ್ಯಾಸದೀಕ್ಷಾಪ್ರದಾನ ಸಂದರ್ಭದಲ್ಲಿ ಶಿಷ್ಯರಿಗೆ ಎಲ್ಲ ನಾಲ್ಕು ಮಹಾವಾಕ್ಯಗಳನ್ನೂ ಉಪದೇಶಿಸುತ್ತಾರೆ. ಶಿಷ್ಯನ ಶಾಖೆಯನ್ನು ಅನುಸರಿಸಿ ಆ ಶಾಖೆಯ ಮಹಾವಾಕ್ಯವೊಂದನ್ನೇ ಉಪದೇಶಿಸುವ ಪದ್ಧತಿಯೂ ಇದೆ.

ಸಕಲ ಉಪನಿಷತ್ತುಗಳ ಮುಖ್ಯ ತಾತ್ಪರ್ಯ ಜೀವಬ್ರಹ್ಮೈಕ್ಯವೇ ಆಗಿದೆ. ಜೀವಾತ್ಮಾ ಮತ್ತು ಪರಮಾತ್ಮರ ಏಕತೆಯನ್ನು ನೇರವಾಗಿ ಬೋಧಿಸುವ ಶ್ರುತಿವಾಕ್ಯವು ಮಹಾವಾಕ್ಯವೆನಿಸುತ್ತದೆ.  ಇತರ ವಾಕ್ಯಗಳು ಅವಾಂತರ ವಾಕ್ಯಗಳೆನಿಸುತ್ತವೆ. ವೇದಾಂತದ ಸಂಪೂರ್ಣ ತತ್ತ್ವಬೋಧನೆಯು ಈ ನಾಲ್ಕು ಮಹಾವಾಕ್ಯಗಳಲ್ಲಿ ಅಡಗಿದೆಯೆಂದು ಹೇಳಬಹುದು. ಬ್ರಹ್ಮಜ್ಞಾನಾಪೇಕ್ಷಿಯಾದ ಶಿಷ್ಯನಿಗೆ ಬ್ರಹ್ಮನಿಷ್ಠನಾದ ಗುರುವಿನ ಪ್ರಥಮೋಪದೇಶವು “ಪ್ರಜ್ಞಾನಂ ಬ್ರಹ್ಮ” ಎಂಬುದು. ಇದು ಲಕ್ಷಣವಾಕ್ಯವಾಗಿ ಶಿಷ್ಯನಲ್ಲಿ ಹರಿದು ಮೊಳಗುತ್ತದೆ. ಹೀಗೆ ಬ್ರಹ್ಮಸ್ವರೂಪವನ್ನು ತಿಳಿಸಿದ ಗುರುವು ಶಿಷ್ಯನಿಗೆ “ತತ್ತ್ವಮಸಿ” ಎಂದು ಶಿಷ್ಯನ ಅಂತಃಶ್ರವಣದಲ್ಲಿ ಮೊಳಗುವಂತೆ ಉಪದೇಶಿಸುತ್ತಾನೆ. ಬ್ರಹ್ಮಾತ್ಮೈಕ್ಯವನ್ನು ಪ್ರಬೋಧಗೊಳಿಸುವ ಈ ಮಹಾವಾಕ್ಯವು ಉಪದೇಶವಾಕ್ಯವಾಗಿ ಮೊಳಗುತ್ತಾ ಶಿಷ್ಯನ ಅಂತರಾಳಕ್ಕೆ ಹೋಗಿ ವ್ಯಾಪಿಸುತ್ತದೆ. ನಂತರ ಶಿಷ್ಯನಲ್ಲಿ ಬ್ರಹ್ಮಾನುಭವವನ್ನು ಪ್ರಬೋಧಗೊಳಿಸಲು ಗುರುವು “ಅಯತಾತ್ಮಾ ಬ್ರಹ್ಮ” ಎಂದು ಅನುಭವವನ್ನು ಜಾಗೃತಗೊಳಿಸುತ್ತಾನೆ. ಇದು ಅನುಭವವಾಕ್ಯವಾಗಿ ಮೊಳಗುತ್ತದೆ. ಶಿಷ್ಯನನ್ನು ಹೀಗೆ ಧ್ಯಾನಭೂಮಿಗೆ ಏರಿಸಿ ನಿರುಪಾಧಿಕವಾದ ಬ್ರಹ್ಮಭಾವಾನುಸಂಧಾನಕ್ಕಾಗಿ ಗುರುವು ತನ್ನ ಪೂರ್ಣಾನುಭವವನ್ನೇ ಸಿಂಹಧ್ವನಿಯಿಂದ “ಅಹಂ ಬ್ರಹ್ಮಾಸ್ಮಿ” ಎಂಬ ಮಾಹಾವಾಕ್ಯವಾಗಿ ಉಪದೇಶಿಸುತ್ತಾನೆ. ಇದು ಅನುಸಂಧಾನವಾಕ್ಯವಾಗಿ ಶಿಷ್ಯನ ಹೃದಯವನ್ನು ಹೊಕ್ಕು ಮೊಳಗುತ್ತದೆ. ಯತಿಯು ಜೀವನದುದ್ದಕ್ಕೂ ಅನುಸಂಧಾನ ಮಾಡಬೇಕಾದ ಮಹಾಮಂತ್ರವಿದು. ಇದರಿಂದ ಕ್ರಮೇಣ ಪೂರ್ಣಾನುಭವವು ಫಲಿಸುತ್ತದೆ. ಆದುದರಿಂದಲೇ ವಿದ್ಯಾರಣ್ಯಸ್ವಾಮಿಗಳು ಪಂಚದಶಿಯಲ್ಲಿ

ಅನುಭೂತೇರಭಾವೇsಪಿ ಬ್ರಹ್ಮಾಸ್ಮೀತಿ ವಿಚಿಂತ್ಯತಾಮ್ |
ಅಪಸ್ಯತ್ ಪ್ರಾಪ್ತತೇ ಧ್ಯಾನಾತ್ ನಿತ್ಯಾಪ್ತಂ ಬ್ರಹ್ಮ ಕಿಂ ಪುನಃ ||

ಎಂದು ಹೇಳಿದ್ದಾರೆ. ತೇಜೋಬಿಂದೂಪನಿಷತ್ತು “ಅಹಂ ಬ್ರಹ್ಮಾಸ್ಮಿ” ಎಂಬ ಮಹಾಮಂತ್ರದ ಪೂರ್ಣ ಮಹಿಮೆಯನ್ನು ಬಹಳ ವಿಶದವಾಗಿ ವರ್ಣಿಸುತ್ತದೆ. ಅರ್ಥವನ್ನು ಅನುಭವಿಸುತ್ತಾ ಮಾಡುವ ಈ ಮಹಾವಾಕ್ಯಮಂತ್ರದ ಅನುಸಂಧಾನದಿಂದ ಶಿಷ್ಯನು ಕೃತಕೃತ್ಯನಾಗುತ್ತಾನೆ. “ಸ ಯೋ ಹ ವೈ ತತ್ ಪರಮಂ ಬ್ರಹ್ಮ ವೇದ ಬ್ರಹ್ಮೈವ ಭವತಿ” ಎನ್ನುವಂತೆ ಶಿಷ್ಯನು ಬ್ರಹ್ಮಭಾವದಲ್ಲಿ ನೆಲೆ ನಿಲ್ಲುತ್ತಾನೆ. ಜ್ಞಾನಮಯ ದೃಷ್ಟಿಯು ತೆರೆದು ಬ್ರಹ್ಮದರ್ಶನವು ಪ್ರಕಾಶಿಸುತ್ತದೆ. ಇಲ್ಲಿ ಗುರುವಿನ ಉಪದೇಶವೂ “ಅಹಂ ಬ್ರಹ್ಮಾಸ್ಮಿ” ಎಂಬುದಾಗಿದೆ. ಶಿಷ್ಯನ ಜಿಜ್ಞಾಸೆ ಮುಗಿದು ಜ್ಞಾನವೇ ಬೆಳಗುವುದರಿಂದ “ಅಹಂ ಬ್ರಹ್ಮಾಸ್ಮಿ” ಎಂಬುದಾಗಿಯೇ ಶಿಷ್ಯನ ಧನ್ಯವಾದ ವಚನದ ಸಮರ್ಪಣೆಯಾಗುತ್ತದೆ. ಗುರುಶಿಷ್ಯರಿಬ್ಬರೂ ಒಂದೇ ನೆಲೆಯಲ್ಲಿ ಒಂದೇ ಆಗಿ ಬೆಳಗುವ ಪರಮಾನಂದ ಧಾಮವಿದು. ಇದೇ ಪೂರ್ಣಾತ್ಮದರ್ಶನ. ಇದೇ ಬ್ರಹ್ಮಾತ್ಮನಾ ಸಂಸ್ಥಿತಿ. “ಪ್ರಜ್ಞಾನಂ ಬ್ರಹ್ಮ” – ಈ ವಾಕ್ಯದ ಅರ್ಥವು ಹೀಗಿದೆ. ಮಹಾವಾಕ್ಯವು ಅಖಂಡಾರ್ಥವನ್ನೇ ಬೋಧಿಸುತ್ತವೆ. ಪದಾರ್ಥಜ್ಞಾನದಿಂದ ವಾಕ್ಯಾರ್ಥಜ್ಞಾನವಾಗುತ್ತದೆ. ಪದಾರ್ಥಶೋಧನೆಯನ್ನು ಮಾಡಿ ಅಖಂಡಾರ್ಥವನ್ನು ತಿಳಿದು ಅನುಸಂಧಾನ ಮಾಡಬೇಕು.

ಐತರೇಯೋಪನಿಷತ್ತು “ಆತ್ಮಾ ವಾ ಇದಮೇಕ ಏವಾಗ್ರ ಆಸೀತ್” ಎಂದು ಆರಂಭವಾಗುತ್ತದೆ. ಆತ್ಮೈಕತತ್ತ್ವವೊಂದೇ ತ್ರಿಕಾಲದಲ್ಲೂ ಬೆಳಗುತ್ತದೆ ಎಂದು ಇದರ ತಾತ್ಪರ್ಯ. ಅಧ್ಯಾರೋಪಾಪವಾದ ನ್ಯಾಯದಿಂದ ನಿಶ್ಪ್ರಪಂಚಪರಮಾತ್ಮ ತತ್ತ್ವವನ್ನು ಪ್ರತಿಪಾದಿಸಲು ಮುಂದಕ್ಕೆ ಉಪನಿಷತ್ತು ಲೋಕಸೃಷ್ಟಿಗಾಗಿ ಆತ್ಮನ ಈಕ್ಷಣಾದಿಗಳನ್ನು ವರ್ಣಿಸುತ್ತದೆ. ಹೀಗೆ ವಿಚಾರವನ್ನು ಬೆಳೆಸಿ “ಕೋsಯಮಾನ್ಮೇತಿ ವಯಮುಪಾಸ್ಮಹೇ | ಕತರಃ ಸ ಆತ್ಮಾ” ಎಂದು ಆತ್ಮತತ್ತ್ವದ ಜಿಜ್ಞಾಸೆಯನ್ನು ಆರಂಭಿಸುತ್ತದೆ. ಉಪನಿಷತ್ತಿನಲ್ಲಿ ಬಂದಿರುವ ಈಕ್ಷಣ ಮೊದಲುಗೊಂಡು ಪ್ರವೇಶಾಂತವಾದ ಆಖ್ಯಾಯಿಕೆಯು ಕೇವಲ ಅರ್ಥವಾದವಾಗಿದೆಯೆಂದು ತಿಳಿಯಬೇಕು. ಆತ್ಮಬೋಧವನ್ನುಂಟು ಮಾಡುವುದಕ್ಕಾಗಿ ಈ ಆಖ್ಯಾಯಿಕೆಯ ವರ್ಣನೆ, ಅಷ್ಟೆ. ಏಕೆಂದರೆ ಸಮಸ್ತ ಸಂಸಾರವೂ ಆತ್ಮನ ಸಂಕಲ್ಪವೇ ಆಗಿರುವುದರಿಂದ ಆತ್ಮಸ್ವರೂಪವೇ ಆಗಿದೆ. ಇಂದ್ರಿಯಗಳ ದ್ವಾರಾ ಉಂಟಾಗುವ ದರ್ಶನಾದಿ ಜ್ಞಾನಗಳು, ಹೃದಯ, ಮನಸ್ಸು, ಸಂಜ್ಞಾನ ಮುಂತಾದ ಮನೋವೃತ್ತಿಗಳು – ಎಲ್ಲವೂ ಪ್ರತ್ಯಕ್ ಚೈತನ್ಯದ ಸ್ಫುರಣವೇ ಆಗಿರುವುದರಿಂದ ಪ್ರತ್ಯಕ್ ಚೈತನ್ಯವಾದ ಪ್ರಜ್ಞಾನದ ನಾಮಧೇಯಗಳೇ ಆಗಿವೆ. ಪ್ರಕೃಷ್ಟವಾದ ಅಂದರೆ ಸಮಸ್ತೋಪಾಧಿರಹಿತವಾದ ಚೈತನ್ಯದ ಪ್ರಜ್ಞಾನವೇ ಹಿರಣ್ಯಗರ್ಭ, ಇಂದ್ರ ಮೊದಲಾದ ಸಕಲ ಜೀವಜಂತುರೂಪವಾಗಿ ಬೆಳಗುತ್ತದೆ. ಆದ್ದರಿಂದ ಸಮಸ್ತಸಂಸಾರವೂ ಪ್ರಜ್ಞಾನದಿಂದಲೇ ಪ್ರಕಾಶಿತವಾಗಿ ಪ್ರಜ್ಞಾನದಿಂದಲೇ ಸ್ಥಿತಿಯನ್ನು ಹೊಂದಿ ಪ್ರಜ್ಞಾನದಲ್ಲೇ ಲೀನವಾಗಿ ಒಂದಾಗುತ್ತದೆ. “ಆತ್ಮಾ ಬ್ರಹ್ಮ” ಎಂದು ಶ್ರುತಿಗಳು ಸಾರುತ್ತವೆ. ಆದುದರಿಂದ ಪ್ರಜ್ಞಾನವೇ ಬ್ರಹ್ಮವಸ್ತುವು. ಉಪನಿಷತ್ತು ಪ್ರತಿಪಾದಿಸುವ ಸರ್ವಾತ್ಮಭಾವ ಇದೇ ಆಗಿದೆ. ಇಲ್ಲಿ ಪ್ರಜ್ಞಾನಶಬ್ದದಿಂದ ಪ್ರತ್ಯಗಾತ್ಮನ ನಿರ್ವಿಶೇಷತ್ವವು ಸಿದ್ಧವಾಗುತ್ತದೆ. ಎಲ್ಲವೂ ಪ್ರಜ್ಞಾನವೇ ಆಗಿರುವುದರಿಂದ ಅದೇ ಪರಮಾರ್ಥ ಸತ್ಯ. ಬ್ರಹ್ಮ ಶಬ್ಧದಿಂದ ಉಪನಿಷತ್ತುಗಳಲ್ಲಿ ಪ್ರತಿಪಾದಿಸಿರುವಂತೆ ಮತ್ತು ಶಾರೀರಿಕ ಭಾಷ್ಯದಲ್ಲಿ ನಿರೂಪಿಸಿರುವಂತೆ ನಿರ್ವಿಶೇಷವೂ ಸಕಲೋಪಾಧಿವರ್ಜಿತವೂ ಅದ್ವಿತೀಯವೂ ಆದ ಪರಮಾತ್ಮಚೈತನ್ಯವೇ ಬೋಧಿತವಾಗುತ್ತದೆ. ನಿರ್ವಿಶೇಷವಾದ ಶುದ್ಧಚೈತನ್ಯವೇ ಇಲ್ಲಿ ಸಮಾನಾಧಿಕರಣ್ಯದ ಮಹಿಮೆಯಿಂದ ಅಖಂಡವಾಕ್ಯಾರ್ಥವಾಗಿ ಬೆಳಗುತ್ತದೆ. ಪ್ರತ್ಯಗಾತ್ಮಚೈತನ್ಯವೂ ಜಗತ್ಕಾರಣತ್ವೋಪಲಕ್ಷಿತವಾದ ಬ್ರಹ್ಮಚೈತನ್ಯವೂ ನಿರ್ವಿಶೇಷಚಿದ್ರೂಪವಾಗಿರುವುದರಿಂದ ಐಕ್ಯವೇ ಇಲ್ಲಿ ವಾಕ್ಯಾರ್ಥವಾಗಿ ಪ್ರಕಾಶಿಸುತ್ತದೆ. ಅಧ್ಯಾರೋಪಾಪವಾದ ನ್ಯಾಯದಿಂದ ಆತ್ಮವೇ ತನ್ನ ಅವಿದ್ಯೆಯಿಂದ ಸಂಸಾರಿಯೆನಿಸಿ ಆತ್ಮಬೋಧದಿಂದ ಸ್ವಯಂ ಮುಕ್ತಾತ್ಮನೂ ಅದ್ವಿತೀಯನೂ ಆಗಿ ಬೆಳಗುತ್ತಾನೆ ಎಂದು ಉಪನಿಷತ್ತಿನ ಮುಖ್ಯ ತಾತ್ಪರ್ಯ.

ಅಥವಾ, ಇಲ್ಲಿಯೂ “ತತ್ತ್ವಮಸಿ” ವಾಕ್ಯಾರ್ಥದಂತೆ ತತ್ ತ್ವಂ ಪದಾರ್ಥಗಳ ಅಂದರೆ ಜೀವಬ್ರಹ್ಮರ ಐಕ್ಯವೇ ಸಿದ್ಧವಾಗುತ್ತದೆಯೆಂದು ತಿಳಿಯಬಹುದು. ಇಲ್ಲಿ ಪ್ರಜ್ಞಾನ ಶಬ್ಧದಿಂದ ಪ್ರತ್ಯಗಾತ್ಮನು ಉಕ್ತವಾಗುತ್ತಾನೆ. ಬ್ರಹ್ಮಶಬ್ಧದಿಂದ ಜಗತ್ಕಾರಣತ್ವೋಪಲಕ್ಷಿತವಾದ ಬ್ರಹ್ಮಚೈತನ್ಯವು ಪ್ರತಿಪಾದಿತವಾಗುತ್ತದೆ. ಸಮಾನಾಧಿಕರಣ್ಯದಿಂದ ಜೀವಬ್ರಹ್ಮರ ನಿರ್ವಿಶೇಷಚಿದ್ರೂಪತ್ವವು ಲಕ್ಷಣಾವೃತ್ತಿಯ ಮಹಿಮೆಯಿಂದ ಸಿದ್ಧವಾಗುತ್ತದೆ. “ಸರ್ವಾಣ್ಯೇವೈತಾನಿ ಪ್ರಜ್ಞಾನಸ್ಯ ನಾಮಧೇಯಾನಿ ಭವಂತಿ” ಎಂಬ ವಾಕ್ಯದಿಂದ ದೇಹೇಂದ್ರಿಯಾದಿಗಳ ಸಾಕ್ಷೀರೂಪವಾದ ತ್ವಂಪದಾರ್ಥವೆನಿಸುವ ಪ್ರಜ್ಞಾನವು ನಿಶ್ಚಿತವಾಗುತ್ತದೆ. “ಏಷಾ ಬ್ರಹ್ಮಾ“- ಇತ್ಯಾದಿ ವಾಕ್ಯದಿಂದ ಜಗತ್ಕಾರಣರೂಪವಾಗಿ ನಿರ್ಣೀತವಾದ ಬ್ರಹ್ಮವು ಪ್ರತಿಪಾದಿತವಾಗುತ್ತದೆ. ಆದ್ದರಿಂದ ಜೀವಬ್ರಹ್ಮರಿಗೆ ಯಾವ ಬೇಧವೂ ಇಲ್ಲ. “ಅಹಂ” ಪ್ರತೀತಿಯಲ್ಲಿ ತೋರಿದರೆ ಜೀವವೆನಿಸುತ್ತದೆ. ಶಾಸ್ತ್ರಪ್ರತಿಪಾದಿತವಾದ ರೂಪದಿಂದ ತಿಳಿದರೆ ಬ್ರಹ್ಮವೆಂದೇ ಆಗುತ್ತದೆ. ಹೀಗೆ ವ್ಯವಹಾರ ಬೇಧವೇ ಹೊರತು ತಾತ್ತ್ವಿಕವಾಗಿ ಜೀವಬ್ರಹ್ಮರಿಗೆ ಬೇಧವಿಲ್ಲ. ಪ್ರಜ್ಞಾನ ಮತ್ತು ಬ್ರಹ್ಮ ಶಬ್ಧಗಳಿಗೆ ಒಂದೇ ಅರ್ಥವನ್ನು ಗ್ರಹಿಸುವುದಾದರೆ ಪುನರುಕ್ತಿ ಆಗುತ್ತದೆಯೆಂಬ ಆಕ್ಷೇಪಕ್ಕೆ ಅವಕಾಶವಿಲ್ಲ. ಏಕೆಂದರೆ, ಪ್ರತ್ಯಕ್ ಚೈತನ್ಯವು ಬ್ರಹ್ಮಕ್ಕಿಂತ ಭಿನ್ನವಲ್ಲ ಮತ್ತು ಬ್ರಹ್ಮಚೈತನ್ಯವು ಪರೋಕ್ಷವಾದುದಲ್ಲ ಎಂದು ಸಿದ್ಧವಾಗುತ್ತದೆ. ಹೀಗೆ “ಪ್ರಜ್ಞಾನಂ ಬ್ರಹ್ಮ” ಎಂಬ ಉಪದೇಶದಿಂದ ಅದ್ವಯಾನಂದರೂಪವಾದ ಅಪರೋಕ್ಷ ಬ್ರಹ್ಮಾನುಭವವು ಪ್ರಬೋಧಗೊಳ್ಳುತ್ತದೆ. ಓಮ್!

~*~

Facebook Comments