ಹರೇ ರಾಮ..
ಭಾರತದ ಸಂಸ್ಕೃತಿಯನ್ನು ಜಗತ್ತಿಗೆ, ಅದರಲ್ಲೂ ಭಾರತೀಯರಿಗೆ ಸಾರಿ ಹೇಳಿದ ಆಚಾರ್ಯ ತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು.
ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆಗಳಿಗೆ ಸಂಚರಿಸಿ “ಅದ್ವೈತ” ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಭಾರತದಲ್ಲಿ ಪುನಃಚೈತನ್ಯವನ್ನು ತುಂಬಿದರು.
ಸೂರ್ಯ, ಗಣಪತಿ, ದುರ್ಗಾ, ಶಿವ, ವಿಷ್ಣು – ಮತಗಳನ್ನು ಒಗ್ಗೂಡಿಸಿ ಪಂಚಾಯತನ ಪದ್ದತಿಯ ಪ್ರತಿಷ್ಠಾಪಕರಾದರು. ಭಗವದ್-ಗೀತೆ,ಉಪನಿಶತ್ ಹಾಗು ಬ್ರಹ್ಮ ಸೂತ್ರಗಳಿಗೆ ಭಾಷ್ಯ  ಬರೆದು ಅಂದಿನ ಜನರಿಗೆ ನಮ್ಮತನವನ್ನು ತಲುಪಿಸಿದರು.

ನಮ್ಮ ಗುರುಗಳನ್ನು ನೋಡುವಾಗ ಮತ್ತು ಅವರು ಮಾಡುತ್ತಿರುವ ಪ್ರತಿಯೊಂದು ಕಾರ್ಯದ ಅಭಿವೃದ್ಧಿಯ ಪಥವನ್ನು ಗಮನಿಸುವಾಗ ಇಂತಹ ಆದಿಶಂಕರರೇ ಪುನಃ ಅವತಾರವೆತ್ತಿ ಬಂದಂತೆ ನಮಗೆ ಅನಿಸುತ್ತಿದೆ. ಭಾರತದ ಉದ್ದಗಲಕ್ಕೆ ಪ್ರಯಾಣಿಸಿ ಭಾರತೀಯತೆಯನ್ನು ಸಾರಿದರು. ಗೋವಿನ ಮೂಲಕ ನಮ್ಮ ಅಭಿವೃದ್ಧಿಯನ್ನು ರೈತರಿಗೆ ಮನಗಾಣಿಸಲು, ಜನರಲ್ಲಿ ಪುನಃಶ್ಚೇತನವನ್ನು ತುಂಬಿದರು.
ನಮ್ಮ ಪ್ರಧಾನ ಮಠವಾದ  “ಹೊಸನಗರ” ಎಂಬ ಊರನ್ನು ವಿಶ್ವ ಗೋ ಸಮ್ಮೇಳನದ ಮೂಲಕ ಭೂಪಟದಲ್ಲಿ ಗುರುತಿಸುವಂತೆ ಮಾಡಿದವರು..

ಸಂಸ್ಕಾರವೆಂಬುದು ಜನ್ಮದಾರಭ್ಯ ಬಂದಿರುವಂತಹುದು. ಧರ್ಮವೆಂಬುದು ಬೆಳವಣಿಗೆಯ ಹಂತದಲ್ಲಿ ಬಂದಿರುವುದು. ಸಂಸ್ಕಾರ – ಧರ್ಮ ಎರಡನ್ನೂ ಮಿಳಿತಗೊಳಿಸಿ ಬದುಕುವುದೇ ಸನಾತನತೆ. ಆ ಸನಾತನತೆಯ ಶ್ರೇಷ್ಟತೆಯನ್ನು ಅರಿಯಬೇಕಾದರೆ ನಮ್ಮತನದ ಬಗೆಗೆ ಹೆಮ್ಮೆಯಿರಬೇಕು. ನಮ್ಮ ಆಚಾರ ವಿಚಾರಗಳ ಬಗೆಗೆ ಗರ್ವವಿರಬೇಕು. ಭಾರತವು ನಮ್ಮದೆಂಬ ಅಭಿಮಾನವಿರಬೇಕು. ನಮ್ಮಲ್ಲಿ ಆ ಅಭಿಮಾನವೇ ಇಲ್ಲವೆಂದಾದಲ್ಲಿ?
ನಮ್ಮ ಆಧ್ಯಾತ್ಮಿಕ, ಧಾರ್ಮಿಕ, ರಾಜಕೀಯ ನಾಯಕರು ನಮ್ಮನ್ನು ಮತ್ತೊಮ್ಮೆ ಪುಟಿದೇಳಿಸುವ ಕಾರ್ಯ ಮಾಡಬೇಕು.
ಅಂತಹ ಅದಮ್ಯ ಕಾರ್ಯವನ್ನು ನಮ್ಮ ಶ್ರೀಗಳು ಮಾಡುತ್ತಿದ್ದಾರೆ.

ಧರ್ಮರಕ್ಷಣೆಗಾಗಿ ಆತ್ಮಲಿಂಗ ಇರುವಂತಹ ಗೋಕರ್ಣದ ಪುನರುತ್ಥಾನ ಕಾರ್ಯವನ್ನು ಮಾಡುತ್ತಿದ್ದಾರೆ.
ನಮ್ಮ ಮುಂದಿನ ಎಷ್ಟೋ ಸಹಸ್ರ ತಲೆಮಾರುಗಳ ಕಾಲ ನೆನಪಿಟ್ಟುಕೊಳ್ಳಬಹುದಾದ ಕಾರ್ಯವಿದು. ಧರ್ಮಕ್ಷೇತ್ರವೊಂದರಲ್ಲಿ ಧರ್ಮದ ನೆಲೆ-ಸ್ಥಾಪನೆಗಾಗಿ ನಮ್ಮ ಗುರುಗಳು ಪಡುತ್ತಿರುವ ಶ್ರಮ ಬೆಳಗಲಿ. ನಮಗೆಲ್ಲ ದಾರಿದೀಪವಾಗಲಿ.

ಸಂತವಾಣಿಯಂತೆ,
ಗಂಗೆಯಿದ್ದರೆ ತುಂಗೆಯಿದ್ದರೆ ಗಿರಿಹಿಮಾಲಯವಿದ್ದರೆ…
ಏನುಸಾರ್ಥಕ ಮನೆಯ ಮಕ್ಕಳು ಮಲಗಿ ನಿದ್ರಿಸುತಿದ್ದರೆ!!
– ಇಂತಹ ಜಡ ಯುವಜನತೆಯನ್ನು ಎಬ್ಬಿಸಲು ಗುರುಗಳು ಸತತ ಶ್ರಮವನ್ನು ವಹಿಸುತ್ತಿದ್ದಾರೆ.

ಗೋವುಗಳಿಂದಾಗಿ ಗೋಕರ್ಣ ಇನ್ನೂ ಸಮೃದ್ಧವಾಗಬೇಕು, ಆ ಮೂಲಕ ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂಬುದು ನಮ್ಮ ಗುರುಗಳ ಆಶಯ…
ನಾವು ಗೋವುಗಳನ್ನು ಸಾಕುತ್ತೇವೆ ಎಂಬುದು ಸುಳ್ಳು. ಗೋವುಗಳು ನಮ್ಮನ್ನು ಸಾಕುತ್ತವೆ ಎಂಬ ಸತ್ಯವನ್ನು ಸಮಾಜಕ್ಕೆ ತೋರಿಸಿ ಕೊಟ್ಟವರು….
ಗೋವು ನೀಡುವ ಮೂತ್ರ, ಗೋಮಯ ಸಂಗ್ರಹ ದಿಂದ ಗೋವು ಉದ್ಯಮ ಬೆಳೆದು ಬಡವರು ಹಾಗೂ ರೈತರಿಗೆ ಉದ್ಯೋಗಾವಕಾಶ ನೀಡುವುದಕ್ಕಾಗಿ ಪಣ ತೊಟ್ಟವರು..ಗುರುಗಳು ತೋರಿಸಿದ ಈ ಜ್ಯೋತಿಯ ಬೆಳಕಲ್ಲಿ ನಾವು ಮುನ್ನಡೆಯೋಣವೇ??

ಶ್ರೀ ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆದು ಸುಂದರ ಸಮಾಜವನ್ನು ಕಟ್ಟೋಣ

ಹರೇ ರಾಮ..

ಗಣೇಶ ಭಟ್ ಮಾಡಾವು
9448254469
pgbhat26@gmail.com

ವ್ಯಕ್ತಿಪರಿಚಯ:

ಪಿ.ಗಣೇಶ ಭಟ್, ಮಾಡಾವು.

ಚಿ| ಗಣೇಶ ಭಟ್ಟರು ಪುತ್ತೂರು ತಾಲೂಕಿನ ಮಾಡಾವಿನವರು. ಮಾಡಾವಿನ ಪ್ರಸಿದ್ಧ ಜ್ಯೋತಿಷಿ ಶ್ರೀಯುತ ಶ್ರೀ ವೆಂಕಟರಮಣ ಭಟ್ಟರ ಸುಪುತ್ರರಾದ ಇವರು ಬಾಲ್ಯದಿಂದಲೇ ವೇದಾಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೃಷ್ಣ ಯಜುರ್ವೇದ ಅಧ್ಯಯನದ ನಂತರ ಪ್ರಯೋಗ ಶಾಸ್ತ್ರ, ಜ್ಯೋತಿಷ್ಯ ಇತ್ಯಾದಿ ವಿಚಾರಗಳಲ್ಲಿ ಅಧ್ಯಯನವನ್ನು ಮುಂದುವರಿಸಿದರು. ಸ್ನಾತಕೋತ್ತರ ಪದವಿಯನ್ನು ಸಾಮಾಜಿಕ ವಿಜ್ಞಾನ ವಿಶಯದಲ್ಲಿ ಪಡೆದ ಇವರು ಆಧುನಿಕ ಇಂಟರ್ನೆಟ್ ಬ್ಲಾಗ್ ಯುಗದಲ್ಲೂ ಸೈ ಎನಿಸಿಕೊಂಡಿದ್ದಾರೆ. ಕೈಲಾಸ ಯಾತ್ರೆಯ ಮನೋಹರ ಅನುಭವಗಳನ್ನು ತಮ್ಮ ಬ್ಲಾಗ್ ನಲ್ಲಿ (http://aaptamitra.blogspot.com) ವಿವರಿಸುತ್ತಾರೆ. ಶ್ರೀಯುತರು ಶ್ರೀಮಠದ ಅನೇಕ ಕಾರ್ಯಯೋಜನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಗಣೇಶ ಭಟ್ಟರ ಮುಂದಿನ ಬಾಳು ಸುಖಮಯವಾಗಿರಲೆಂದು, ಶ್ರೀಗುರುಗಳ, ಶ್ರೀರಾಮನ ಅನುಗ್ರಹವಿರಲೆಂದು ಹಾರಯಿಕೆ.
~
ಸಂಪಾದಕ ಬಳಗ

ಮಿಂಚಂಚ: Editor@HareRaama.in

Facebook Comments