ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.
ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಶ್ರದ್ಧಾಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

   ~

ಶ್ರದ್ಧಾಸುಮ ಶ್ರೀಗುರುಚರಣಕೆ....

ಶ್ರದ್ಧಾಸುಮ ಶ್ರೀಗುರುಚರಣಕೆ….

ಶ್ರದ್ಧಾಸುಮ 2:

ಶ್ರೀ ವಿದ್ಯಾನಂದಾಚಾರ್ಯರು

ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರಮಠದ ಪ್ರಥಮಾಚಾರ್ಯರು

    ವಿದ್ವಾನ್ ಕೆ.ಎಸ್. ಭಾಸ್ಕರ ಭಟ್ಟಃ

ಯಸ್ಯ ದೇವೇ ಪರಾ ಭಕ್ತಿಃ ಯಥಾ ದೇವೇ ತಥಾ ಗುರೌ|
ತಸ್ಮೈತೇ ಕಥಿತಾ ಹ್ಯರ್ಥಾಃ ಪ್ರಕಾಶಂತೇ ಮಹಾತ್ಮನಃ ||

ಪ್ರಸ್ತಾವನಾ
ನಮ್ಮ ಈ ಅಖಂಡ ಭಾರತವು ವಿಶ್ವಮಾನವರ ಶ್ರೇಯಸ್ಸಿಗೆ ಕಾರಣಗಳಾದ ವೇದಗಳ ನೆಲೆವೀಡು. ಮಂತ್ರದ್ರಷ್ಟಾರರಾದ ಋಷಿವರೇಣ್ಯರ ಪುಣ್ಯಾಶ್ರಮ. ಮಹಾಪುರುಷರ ಅವತಾರಭೂಮಿ. ಸನಾತನ ಧರ್ಮ ಸಂರಕ್ಷಕರಾದ ಕ್ಷತ್ರಿಯವಂಶದ ಅಸಂಖ್ಯಾತ ರಾಜರ್ಷಿಗಳು ಧರ್ಮದಿಂದ ಪ್ರಜಾಪರಿಪಾಲನೆಯನ್ನು ಮಾಡಿರುವ ರಾಷ್ಟ್ರವೆಂಬುದು ಇತಿಹಾಸವೇದ್ಯ.

  ಹಿಂದೆ ಸುರಕ್ಷಿತವಾಗಿದ್ದ ವೈದಿಕಧರ್ಮವು ಕಾಲದೇಶಗಳ ವೈಪರೀತ್ಯದಿಂದ ಆಗಾಗ್ಗೆ ಆಪತ್ತಿಗೆ ತುತ್ತಾಗುತ್ತಿತ್ತು. ಸುಮಾರು ಎರಡು ಸಾವಿರದ ಐದುನೂರು ವರ್ಷಗಳ ಹಿಂದೆ ಭಾರತವು ಅರಾಜಕವಾಗಿತ್ತು. ಅಂದಿನ ರಾಜರು ಸನಾತನ ಧರ್ಮ ಸಂರಕ್ಷಣೆಯಲ್ಲಿ ಸಮರ್ಥರಾಗಿರಲಿಲ್ಲ. ಆಗ ಅನೇಕ ನಾಸ್ತಿಕ ಮತಗಳು ತಲೆಯೆತ್ತಿದವು. ವೈದಿಕ ಧರ್ಮದ ಗ್ಲಾನಿಯೂ, ಅವೈದಿಕ ಧರ್ಮದ ಅಭ್ಯುತ್ಥಾನವೂ ಉಂಟಾದುವು. ಚಾರ್ವಾಕರ ದೇಹಾತ್ಮವಾದ, ಬೌದ್ಧರ ನೈರಾತ್ಮ್ಯವಾದಗಳು ಜನರಿಗೇ ಮೆಚ್ಚಿಗೆಯಾದವು. ಬುದ್ಧನ ಅನುಯಾಯಿಗಳ ಅಹಿಂಸಾ ತತ್ತ್ವದ ಅತಿಯಾದ ಪ್ರಚಾರವು ವೈದಿಕ ಧರ್ಮಕಾಂಡದ ಮೇಲೆ ಆಘಾತವನ್ನುಂಟು ಮಾಡಿತು. ಕಾಪಾಲಿಕ,ಶೈವ, ಶಾಕ್ತ, ವೈಷ್ಣವ, ಪಾಂಚರಾತ್ರ ಮುಂತಾದ ತಾಂತ್ರಿಕ ವೇದ ಬಾಹ್ಯಾಚಾರಗಳು ಪ್ರಬಲವಾದವು. ವೈದಿಕಯಜ್ಞಾನುಷ್ಠಾನಗಳಿಗೆ ಪ್ರತಿಕೂಲವಾದ ವಾತಾವರಣ ಸೃಷ್ಟಿಯಾದುದರಿಂದ ದೇವತೆಗಳು ಹವಿರ್ಭಾಗ ವಂಚಿತರಾದರು. ಪೃಥ್ವಿಯಲ್ಲಿ ಕಾಲಕಾಲಕ್ಕೆ ಮಳೆಬೆಳೆಗಳಾಗಲಿಲ್ಲ. ದುರ್ಭಿಕ್ಷಾದಿಗಳು ತಲೆದೋರಿದವು. ಆಗ ಸನಾತನ ಧರ್ಮಾವಲಂಬಿಗಳು ಚಿಂತಾಕ್ರಾಂತರಾದರು. ಭಗವದ್ಭಕ್ತರು ಆಪತ್ತಿನಿಂದ ಪಾರಾಗಲು ಪರಮೇಶ್ವರನನ್ನೇ ಮೊರೆ ಹೋಗಬೇಕಾಯಿತು. ಸಮಗ್ರಭಾರತದಲ್ಲಿ ಗಾಢಾಂಧಕಾರ ಕವಿದಿತ್ತು. ಕೋಟಿ ಕೋಟಿ ಸಜ್ಜನರ ಪ್ರಾರ್ಥನೆಯಿಂದ ಪ್ರಸನ್ನನಾದ ಪರಮೇಶ್ವರನ ಕೃಪೆಯಿಂದ ಸುಮಾರು ಕ್ರಿಸ್ತಶಕ ೬೮೮ ರಿಂದ ೭೨೦ ರ ಅವಧಿಯವೊಳಗೆ ದಕ್ಷಿಣ ಭಾರತದ ಕಾಲಟೀ ಕ್ಷೇತ್ರದಲ್ಲಿ ಶಂಕರಭಾಸ್ಕರನ ಉದಯವಾಯಿತು.

ಅಜ್ಞಾನಾಂತರ್ಗಹನ ಪತಿತಾನಾತ್ಮವಿದ್ಯೋಪದೇಶೈಃ
ತ್ರಾತುಂ ಲೋಕಾನ್ಭವದವಶಿಖಾತಾಪಪಾಪಚ್ಯಮಾನಾನ್ |
ಮುಕ್ತ್ವಾ, ಮೌನಂ ವಟವಿಟಪಿನೋ ಮೂಲತೋ ನಿಷ್ಪತಂತೀ
ಶಂಭೋರ್ಮೂರ್ತಿಶ್ಚರತಿ ಭುವನೇ ಶಂಕರಾಚಾರ್ಯಾರೂಪಾ ||

                         (ಮಾಧವೀಯ ಶಂಕರವಿಜಯ -೪ ಸರ್ಗೇ)

ಅಜ್ಞಾನವೆಂಬ ಅಡವಿಯಲ್ಲಿ ಸುತ್ತಾಡಿ ಬಳಲುತ್ತಿರುವ ಜನರಿಗೆ ಮತ್ತು ಸಂಸಾರವೆಂಬ ಕಾಳ್ಗಿಚ್ಚಿನ ತಾಪಕ್ಕೆ ಬೆಂಡಾಗಿರುವ ಜನತೆಗೆ ಆತ್ಮವಿದ್ಯೆಯನ್ನು ಉಪದೇಶಿಸಿ ಸಂರಕ್ಷಿಸುವುದಕ್ಕಾಗಿ ಪರಶಿವನು ಮೌನವನ್ನು ತ್ಯಜಿಸಿ, ಶಂಕರಾಚಾರ್ಯರೂಪದಿಂದ ಭೂಮಿಯಲ್ಲಿ ಸಂಚರಿಸುತ್ತಿದ್ದಾನೆ ಎಂಬ ಪೂಜ್ಯರಾದ ವಿದ್ಯಾರಣ್ಯರ ಸೂಕ್ತಿಯಿಂದ ಆಚಾರ್ಯರ ವೈದಿಕಜೀರ್ಣೋದ್ಧಾರಕಾರ್ಯವು ಅಸಾಧಾರಣವೂ, ಅದ್ಭುತವೂ ಆಗಿತ್ತೆಂದು ಸ್ಫುಟವಾಗುವುದು. ಶ್ರೀ ಶಂಕರಾಚಾರ್ಯರೆಂಬ ಸೂರ್ಯನ ಉದಯಕ್ಕೆ ಮುಂಚಿತವಾದ ಅರುಣೋದಯವೋ ಎಂಬಂತೆ ದೇವತಾವೃಂದವೂ ಭೂಮಿಯಲ್ಲಿ ಅವತರಿಸಿತು.

 ಶ್ರೀವಿದ್ಯಾನಂದಾಚಾರ್ಯರು ಯಾರು?
ವೈದಿಕ ಧರ್ಮ ಪ್ರತಿಷ್ಠಾಪನಾಚಾರ್ಯರಾದ ಶ್ರೀ ಶಂಕರ ಭಗವತ್ಪಾದರು ಶೃಂಗೇರಿಯಲ್ಲಿ ಶ್ರೀ ಶಾರದಾದೇವಿಯನ್ನು ಪ್ರತಿಷ್ಠಾಪಿಸಿ, ತಮ್ಮ ಜ್ಯೇಷ್ಠ ಶಿಷ್ಯರಾದ ಸುರೇಶ್ವರಾಚಾರ್ಯರನ್ನು ದಕ್ಷಿಣಾಮ್ನಾಯಪೀಠದ ಅಧ್ಯಕ್ಷರನ್ನಾಗಿ ನೇಮಿಸಿದರಷ್ಟೆ ಮತ್ತು ಅವರು ಸ್ಥಾಪಿಸಿದ ಚತುರಾಮ್ನಾಯಪೀಠಗಳ ಜೊತೆಗೆ ಇನ್ನೂ ಕೆಲವು ಪೀಠಗಳನ್ನು ಸ್ಥಾಪಿಸಿದರು. ಅಂತಹ ಪೀಠಗಳಲ್ಲಿ ದಕ್ಷಿಣದಲ್ಲಿ ಗೋಕರ್ಣಮoಡಲ ಅಥವಾ ಹೈವದೇಶದ ಕೇಂದ್ರವಾದ ಗೋಕರ್ಣಕ್ಷೇತ್ರದಲ್ಲಿ ಸ್ಥಾಪಿಸಿರುವ ರಘೂತ್ತಮಪೀಠವೂ ಒಂದು. ಈ ಪೀಠದ ಪ್ರಥಮಾಚಾರ್ಯರೇ ವಿದ್ಯಾನಂದಾಚಾರ್ಯರು. ಇವರು ಸುರೇಶ್ವರಾಚಾರ್ಯರಿಂದ ನೇರವಾಗಿ, ಸಾಂಪ್ರದಾಯಿಕವಾಗಿ ಸಂನ್ಯಾಸಾಶ್ರಮ ಸ್ವೀಕರಿಸಿದ್ದರೆಂದೂ, ಶ್ರೀ ಶಂಕರ ಭಗವತ್ಪಾದಾಚಾರ್ಯರ ಹತ್ತಿರ ವೇದಾಂತ ಭಾಷ್ಯಾದಿಗಳನ್ನು ಅಧ್ಯಯನ ಮಾಡಿದ್ದರೆಂದೂ ತಿಳಿದುಬರುತ್ತದೆ. ಈ ರಘೂತ್ತಮಪೀಠದ ಅವಿಚ್ಚಿನ್ನ ಗುರುಪರಂಪರೆಯಲ್ಲಿ ಬಂದ ಯತೀಶ್ವರರೇ  ಶ್ರೀ ಮದ್ರಾಮಚಂದ್ರಾಪುರಮಠದ ಗುರುವರೇಣ್ಯರೇ ಆಗಿದ್ದಾರೆ. ಶ್ರೀ ವಿದ್ಯಾನಂದಾಚಾರ್ಯರ ಸಮಗ್ರಜೀವನ ವೃತ್ತಾಂತ, ಅವರು ಸಾಧಿಸಿದ ಕಾರ್ಯಗಳು,ಅವರ ಗ್ರಂಥಗಳು ಮುಂತಾದ ಅನೇಕ ಐತಿಹಾಸಿಕ ವಿಷಯಗಳು ಮುಂದಿನ ಇತಿಹಾಸ ಸಂಶೋಧಕರಿಗೆ ವಿಷಯಗಳಾಗಿವೆ. ಏಕೆಂದರೆ ಪ್ರಾಚೀನಾಚಾರ್ಯ ಪರಂಪರೆಯ ಮಠಗಳ ಮತ್ತು ಆಚಾರ್ಯರ ವೃತ್ತಾಂತವನ್ನು ಬೋಧಿಸುವ ಗ್ರಂಥಗಳು ಅನೇಕವು ಕಾಲಗರ್ಭದಲ್ಲಿ ಅಡಗಿವೆ. ಕೆಲವು ಯವನರ ಹಾವಳಿಯಲ್ಲಿ ಸುಟ್ಟು ಹೋಗಿವೆ.ಕೆಲವು ನೀರಿನ ಪಾಲಾಗಿವೆ. ಆದುದರಿಂದ ಈಗ ಆಯಾ ಮಠೀಯ ದಾಖಲೆಯ ಪತ್ರಗಳು, ತಾಮ್ರಶಾಸನಗಳು, ಕಾಗದಪತ್ರಗಳು, ಐತಿಹ್ಯ (ಲೋಕೋಕ್ತಿ) ಮುಂತಾದವುಗಳ ಪರಿಶೀಲನೆಯಿಂದ ದೊರೆತಷ್ಟು ಸಂಗತಿಗಳನ್ನು ಆಧರಿಸಿ, ಆಯಾ ಪೀಠದ ಆಚಾರ್ಯರನ್ನು ಗುರುತಿಸಬೇಕಾಗಿದೆ. ಪೂಜ್ಯರಾದ ವಿದ್ಯಾರಣ್ಯರು ಶ್ರೀಶಂಕರದಿಗ್ವಿಜಯದ ಆರಂಭದಲ್ಲಿ, ” ಪ್ರಾಚೀನಶಂಕರಜಯೇ ಸಾರಃ ಸಂಗೃಹ್ಯತೇ ಸ್ಫುಟಮ್ “ ಎಂದು ಹೇಳಿರುವ ಅಂಶವು ಗಮನಾರ್ಹವಾಗಿದೆ. ತಮಗಿಂತ ಹಿಂದಿನ ಪಂಡಿತರು ರಚಿಸಿರುವ ಅನೇಕ ಶಂಕರವಿಜಯ ಗ್ರಂಥಗಳು ಇದ್ದುವೆಂದೂ ಅವು ಯಾವುವೂ ಶ್ರೀಮದಾಚಾರ್ಯರ ಚರಿತ್ರೆಯನ್ನು ಸಮಗ್ರವಾಗಿ ವರ್ಣಿಸಿಲ್ಲವೆಂದೂ, ಆ ಪ್ರಾಚೀನ ಗ್ರಂಥಗಳ ಮುಖ್ಯ ಪ್ರಮೇಯಗಳನ್ನು ತಿಳಿಸುವುದಕ್ಕಾಗಿ ಈ ಗ್ರಂಥರಚನೆಯ ಪ್ರಯತ್ನವೆಂಬ ಅವರ ಉಕ್ತಿಯು ಅರ್ಥಗರ್ಭಿತವಾಗಿದೆ. ಇತಿಹಾಸ ಸಂಶೋಧಕರು ಸಂಗ್ರಹಿಸಿ ಬರೆದಿರುವ ಗ್ರಂಥಸೂಚಿಯಲ್ಲಿ ಶಂಕರಾಚಾರ್ಯರನ್ನು ಕುರಿತಾದ ಹತ್ತು ಮಂದಿ ಮಹನೀಯರ ಹೆಸರುಗಳಿಗೂ ಅವರ ಗ್ರಂಥಗಳ ನಾಮಧೇಯಗಳೂ ಇವೆ. ಅವುಗಳಲ್ಲಿ -ಚಿದ್ವಿಲಾಸಯತೀಶ್ವರರಿಂದ ರಚಿತವಾದ ಶಂಕರವಿಜಯದಲ್ಲಿ ಶ್ರೀವಿದ್ಯಾನಂದಾಚಾರ್ಯರನ್ನು ಕುರಿತ ಸಂಕ್ಷಿಪ್ತವಾದ ಉಲ್ಲೇಖವಿದೆ. ಚಿದ್ವಿಲಾಸಶಂಕರವಿಜಯದ ಉಲ್ಲೇಖ ಶ್ರೀರಾಮಚಂದ್ರಾಪುರಮಠದ ಹಿಂದಿನ ದಾಖಲೆಯ ಕಾಗದಪತ್ರಗಳು, ತಾಮ್ರಶಾಸನ ಮತ್ತು ಐತಿಹ್ಯ ಮುಂತಾದವು ವಿದ್ಯಾನಂದಾಚಾರ್ಯರು ರಾಮಚಂದ್ರಾಪುರಮಠದ ಗುರುಶಿಷ್ಯಪರಂಪರೆಗೆ ಪ್ರಥಮಾಚಾರ್ಯರೆಂಬುದನ್ನು ತಿಳಿಯಪಡಿಸುತ್ತವೆ.

ರಘೂತ್ತಮಪೀಠ ಸ್ಥಾಪನೆ
ಶ್ರೀಶಂಕರಭಗವತ್ಪಾದರು ಶಿಷ್ಯಪರಿವಾರಸಹಿತ ದಿಗ್ವಿಜಯ ಯಾತ್ರೆಯನ್ನು ಕೈಗೊಂಡಿದ್ದರಷ್ಟೆ. ಅವರ ಜೈತ್ರಯಾತ್ರೆಯು ರಾಮೇಶ್ವರದಿಂದ ಆರಂಭವಾಗಿ ಪಾಂಡ್ಯ, ಚೋಳ,ದ್ರವಿಡ,ದೇಶಗಳನ್ನು ದಾಟಿ ಕರ್ಣಾಟಕಕ್ಕೆ ಬಂದಿತು. ಆಗ ಕರ್ಣಾಟಕದಲ್ಲಿ ಕಾಪಾಲಿಕರ ಹಾವಳಿ ಅತಿಯಾಗಿತ್ತು. ಅವರು ರಕ್ತವನ್ನು ಸುರಿಸುವ ನರಶಿರಃ ಕಪಾಲಗಳಿಂದಲೂ, ಮದ್ಯಮಾಂಸಗಳಿಂದಲೂ ಭೈರವನನ್ನು ಪೂಜಿಸುತ್ತಿದ್ದರು. ವಾಮಾಚಾರಿಗಳಾದ ಕಾಪಾಲಿಕರಿಂದ ಸಾತ್ವಿಕರಾದ ಬ್ರಾಹ್ಮಣಾದಿ ಜನಸಾಮಾನ್ಯರೂ ಸ್ತ್ರೀಯರೂ ಭಯದಿಂದ ಕಂಗಾಲಾಗಿದ್ದರು.

ಆಚಾರ್ಯರಿಗೆ ಇಲ್ಲಿನ ಸ್ಥಿತಿ ಮುಂಚೆಯೇ ಗೊತ್ತಿತ್ತು. ಕಾಪಾಲಿಕರನ್ನು ನಿಗ್ರಹಿಸುವುದಕ್ಕಾಗಿಯೇ ಅವರು ಕರ್ಣಾಟಕಕ್ಕೆ ಬಂದದ್ದು. ಶ್ರೀಶಂಕರಾಚಾರ್ಯರು ಬಂದ ಸುದ್ದಿಯನ್ನು ಕೇಳಿ ಕ್ರಕಚನೆಂಬ ಕಾಪಾಲಿಕನು ಕುಪಿತನಾಗಿ ತನ್ನ ಪರಿವಾರದೊಂದಿಗೆ ಭಗವತ್ಪಾದರನ್ನು ಪ್ರತಿಭಟಿಸಿದನು. ಆಗ ತನ್ನ ಸ್ವರೂಪವೇ ಆಗಿರುವ ಆಚಾರ್ಯರಿಗೆ ಅಪರಾಧವೆಸಗಿರುವುದಕ್ಕಾಗಿ ಆತನ ಉಪಾಸ್ಯದೇವತೆಯಾದ ಭೈರವನಿಂದಲೇ ಕ್ರಕಚನು ಹತನಾದನು. ಆಚಾರ್ಯರ ಅಂಗರಕ್ಷಕನಾಗಿದ್ದ ಸುಧನ್ವರಾಜನ ಶಸ್ತ್ರಕ್ಕೆ ಕ್ರಕಚಕ ಕಾಪಾಲಿಕನ ಪರಿವಾರವು ತುತ್ತಾಯಿತು. ಕರ್ಣಾಟಕದ ಜನತೆ ಆಪತ್ತಿನಿಂದ ಪಾರಾಯಿತು. ಎಲ್ಲರೂ ಶ್ರೀಶಂಕರಾಚಾರ್ಯರಿಗೆ ವಂದಿಸಿ ಅವರ ಭಕ್ತರಾದರು. ಅನಂತರ ಭಗವತ್ಪಾದರ ದಿಗ್ವಿಜಯ ಯಾತ್ರೆ ಗೋಕರ್ಣವನ್ನು ಪ್ರವೇಶಿಸಿತು. ಆಗ ಗೋಕರ್ಣದಲ್ಲಿ ವಾಸವಾಗಿದ್ದ ವೇದಶಾಸ್ತ್ರಪಾರಂಗತರೂ, ಸದಾಚಾರಸಂಪನ್ನರಲೂ, ಹವ್ಯಕವ್ಯ ನಿಪುಣರೂ, ಅಗ್ನಿಹೋತ್ರಿಗಳೂ ಆಗಿದ್ದ ಹವ್ಯಕ ಬ್ರಾಹ್ಮಣಶ್ರೇಣಿಯು ಆಚಾರ್ಯವರ್ಯರನ್ನು ಸ್ವಾಗತಿಸಿತು.

       ಪಶ್ಚಿಮಸಮುದ್ರತೀರ ಪ್ರಕೃತಿರಮಣೀಯವಾದ ದೃಶ್ಯ, ನಿತ್ಯಹರಿದ್ವರ್ಣದ ವನರಾಜಿ, ಎತ್ತರವಾದ ಶತಶೃಂಗಪರ್ವತದ ತಪ್ಪಲಿನಿಂದ ಕೆಳಕ್ಕೆ ಧುಮುಕುತ್ತಿರುವ ಅಚ್ಛೋದನಿರ್ಝರಧಾರೆ, ತೀರ್ಥಸಮುಚ್ಚಯದಿಂದ ಕಂಗೊಳಿಸುವ ಅನ್ವರ್ಥನಾಮಧೇಯವುಳ್ಳ ಅಶೋಕವನ, ಕೃಷ್ಣಮೃಗಸಂಚಾರದಿಂದ ಪವಿತ್ರವಾದ ಪ್ರಶಾಂತ ಋಷ್ಯಾಶ್ರಮ, ಕೈಲಾಸಪತಿಯಾದ ಮಹಾಬಲೇಶ್ವರನ ದಿವ್ಯ ಸಾನ್ನಿಧ್ಯ, ಮುಂತಾದ ಗೋಕರ್ಣದ ಮಧುರ ಪರಿಸರವು ಆಚಾರ್ಯರ ಮನಸ್ಸನ್ನು ಆಕರ್ಷಿಸಿತು. ಗೋಕರ್ಣಕ್ಷೇತ್ರವನ್ನು ಪ್ರವೇಶಿಸಿದ ಶಂಕರಭಗವತ್ಪಾದರು ಕ್ಷೇತ್ರಾಧಿದೇವತೆಯಾದ ಶ್ರೀಮಹಾಬಲೇಶ್ವರನ ದರ್ಶನ ಮಾಡಿದ ಕೂಡಲೇ ಭುಜಂಗ ಪ್ರಯಾತವೃತ್ತನಿಬದ್ಧವಾದ ಸ್ತೋತ್ರದಿಂದ ಸ್ವಾಮಿಯನ್ನು ಸ್ತುತಿಸಿದರು. ಶ್ರೀಮದಾಚಾರ್ಯರು ಇಲ್ಲಿ ಶಿಷ್ಯರಿಗೆ ವೇದಾಂತೋಪದೇಶವನ್ನು ಮಾಡುತ್ತಾ ಕೆಲವು ಕಾಲ ವಾಸ ಮಾಡಿದರು. “ಯದಧ್ಯಾಸಿತಮರ್ಹದ್ಭಿಃ ತದ್ಧಿ ತೀರ್ಥಂ ಪ್ರಚಕ್ಷತೇ” ಮಹಾತ್ಮರು ವಾಸಮಾಡಿದ ಸ್ಥಳವೇ ತೀರ್ಥವಲ್ಲವೇ ?  ಶ್ರೀ ಶಂಕರರ ನಿವಾಸದಿಂದ ಗೋಕರ್ಣವು ತೀರ್ಥವಾಯಿತು.

ಗೋಕರ್ಣದ ಹತ್ತಿರ ಅಗಸ್ತ್ಯ ಮಹರ್ಷಿಗಳು ಪೂಜಿಸಿದ್ದ ವರದೇಶಲಿಂಗ ದೇವಾಲಯದ ಪರಿಸರಾರಣ್ಯದಲ್ಲಿ ಅಗಸ್ತ್ಯಮಹಾಮುನಿಗಳ ಶಿಷ್ಯರಾದ ವರದಮಹರ್ಷಿಗಳು ತಪೋನಿರತರಾಗಿದ್ದರು. ಅವರಿಗೆ ಶ್ರೀ ಶಂಕರಾಚಾರ್ಯರು ಗೋಕರ್ಣಕ್ಕೆ ಆಗಮಿಸಿ ಶಿಷ್ಯರಿಗೆ ವೇದಾಂತೋಪದೇಶ ಮಾಡುತ್ತಾ ಉಳಿದಿರುವ ಎಲ್ಲಾ ವೃತ್ತಾಂತವೂ ಧ್ಯಾನಗೋಚರವಾಯಿತು. ಅವರು ಕೈಲಾಸಪತಿಯೇ ಶಂಕರಾಚಾರ್ಯರೆಂಬುದನ್ನು ತಿಳಿದರು. ಆಚಾರ್ಯರ ಆಗಮನವನ್ನು ನಿರೀಕ್ಷಿಸುತ್ತಿದ್ದ ಆ ವರದ ಮಹರ್ಷಿಗಳು ಕೂಡಲೇ ಬಹಿರ್ಮುಖರಾಗಿ, ಆಚಾರ್ಯರ ಸನ್ನಿಧಿಗೆ ಬಂದು ಕಂಡರು. ಬ್ರಹ್ಮತೇಜೋವಿರಾಜಮಾನನಾದ ತರುಣ ಸಂನ್ಯಾಸಿಯನ್ನು ಕಂಡು ಬೆರಗಾದರು. ಯತಿಗಳಿಗೆ ಸಾಂಪ್ರದಾಯಿಕವಾಗಿ ವಂದಿಸಿದರು. ಅನಂತರ ವರದಮಹರ್ಷಿಗಳಿಗೂ ಶಂಕರ ಭಗವತ್ಪಾದರಿಗೂ ಪರಸ್ಪರ ಕುಶಲಪ್ರಶ್ನೆಗಳಾದ ಮೇಲೆ ಶ್ರೀವರದ ಮಹರ್ಷಿಗಳು ಆಚಾರ್ಯರನ್ನು ಕುರಿತ – ಓ ! ಭಗವಾನ್, ನಿನ್ನ ದರ್ಶನದಿಂದ ನಾನಿಂದು ಧನ್ಯನಾದೆನು. ಈ ಕಲಿಯುಗದಲ್ಲಿ ಸರ್ವತ್ರವ್ಯಾಪ್ತವಾದ ನಾಸ್ತಿಕ ಮತವನ್ನು ಖಂಡಿಸಿ, ಸನಾತನ ಧರ್ಮವನ್ನು ದೃಢವಾಗಿ ಸ್ಥಾಪಿಸಲು ಶಿವಾಂಶದಿಂದ ನೀನು ಆವತರಿಸಿದವನಾಗಿರುವೆ. ನಾನು ಈವರೆಗೂ ತಮ್ಮ ನಿರೀಕ್ಷಣೆಯಲ್ಲಿಯೇ ಇದ್ದೆ. ಇನ್ನು ನಾನು ತಪಸ್ಸಿಗಾಗಿ ಹಿಮಾಚಲಕ್ಕೆ ತೆರಳುವೆನು. ಅಗಸ್ತ್ಯ ಮುನಿವರ್ಯರಿಂದ ಅರ್ಚಿಸಲ್ಪಟ್ಟ ಶ್ರೀರಾಮ, ಸೀತಾ,ಲಕ್ಷ್ಮಣ ಈ ಮೂರು ವಿಗ್ರಹಗಳನ್ನು ನಾನು ಈವರೆಗೂ ಪೂಜೆ ಮಾಡುತ್ತಾ ಬಂದಿದ್ದೇನೆ. ಈಗ ಈ ವಿಗ್ರಹಗಳನ್ನು ನಿಮಗೆ ಪ್ರೀತಿಯಿಂದ ಅರ್ಪಿಸುತ್ತೇನೆ. ಈ ವಿಗ್ರಹಗಳ ಅರ್ಚನೆಯು ಅವಿಚ್ಛಿನ್ನವಾಗಿ ನಡೆದುಕೊಂಡು ಹೋಗುವಂತೆ ತಕ್ಕ ವ್ಯವಸ್ಥೆ ಮಾಡು. ನಿನ್ನ ಅವತಾರಕಾರ್ಯಗಳು ಯಶಸ್ವಿಯಾಗಲಿ ಎಂದು ಬಿನ್ನವಿಸಿದರು. ಮತ್ತು ಆ ರಾಮ ಸೀತಾ ಲಕ್ಷ್ಮಣ ವಿಗ್ರಹಗಳನ್ನು ಆಚಾರ್ಯರಿಗೆ ಕೊಟ್ಟರು. ಅನಂತರ ಶ್ರೀಶಂಕರರಿಂದ ಬೀಳ್ಕೊಂಡ ವರದಮಹರ್ಷಿಗಳು ಹಿಮಾಚಲಕ್ಕೆ ತೆರಳಿದರು.

ಬಳಿಕ ಶ್ರೀಶಂಕರಾಚಾರ್ಯರು ಆ ಸುಂದರ ವಿಗ್ರಹಗಳನ್ನು ತಮ್ಮ ಪ್ರಶಿಷ್ಯನಾದ ವಿದ್ಯಾನಂದಾಚಾರ್ಯರಿಗೆ ಕೊಟ್ಟುದಲ್ಲದೇ ತಮ್ಮ ಹತ್ತಿರವಿದ್ದ ಅಮೂಲ್ಯವಾದ ಚಂದ್ರಮೌಳೀಶ್ವರಲಿಂಗವನ್ನೂ ದಿವ್ಯಪಾದುಕೆಯನ್ನೂ ಅವರ ಕಡೆಗೆ ಕೊಟ್ಟರು. ಶತಶೃಂಗಪರ್ವತದ ಶಿಖರದಲ್ಲಿರುವ “ಅಶೋಕ” ಎಂಬ ಸ್ಥಳದಲ್ಲಿ ತಮ್ಮ ಪೂರ್ವದ ಸಂಕಲ್ಪದಂತೆ ಮಠವನ್ನು ನಿರ್ಮಿಸಿದರು. ಆ ಮಠಕ್ಕೆ ವಿದ್ವಾನಂದಾಚಾರ್ಯರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಅವರನ್ನು ಕುರಿತು ಆಚಾರ್ಯರು ಹೀಗೆ ಹೇಳಿದರು – “ಎಲೈ ! ವಿದ್ಯಾನಂದನೇ, ಇಲ್ಲಿ ನೀನು ಉಳಿದು ನಿತ್ಯವೂ ಮಹಾಬಲೇಶ್ವರನನ ದರ್ಶನ ಮಾಡುತ್ತಾ, ಈ ರಾಮಾದಿ ಮೂರ್ತಿಗಳನ್ನೂ, ಚಂದ್ರಮೌಲೀಶ್ವರ ಲಿಂಗವನ್ನೂ ದಿವ್ಯ ಪಾದುಕೆಯನ್ನೂ ಅರ್ಚಿಸುತ್ತಿರು. ಈ ಗೋಕರ್ಣಮಂಡಲದಲ್ಲಿರುವ ಎಲ್ಲಾ ಹೈವ, ದ್ರಾವಿಡ ಬ್ರಾಹ್ಮಣರ ಆಚಾರವಿಚಾರಗಳನ್ನು ಪರಿಶೀಲಿಸುತ್ತಾ,ಶಿಷ್ಯ ಪರಂಪರೆಯನ್ನೂ ಈ ಮಠಾಧಿಪತ್ಯವನ್ನೂ ಅವಿಚ್ಛಿನ್ನವಾಗಿ ಸಾಗಿಸಿಕೊಂಡು ಹೋಗುವಂತಾಗಲಿ. ಇದರಿಂದ ಈ ವರದಮುನಿ ಪ್ರದತ್ತವಾದ ಮೂರ್ತಿಗಳ ಅವಿಚ್ಛಿನ್ನ ಆರಾಧನೆಯೊಂದಿಗೆ ಸನಾತನ ವೈದಿಕ ಧರ್ಮದ ರಕ್ಷಣೆಯೂ ಆಗುವುದು” ಎಂದರು.

  ಸರ್ವವಿದ್ಯೆಗಳಲ್ಲಿಯೂ ವಿಶಾರದರಾದ ವಿದ್ಯಾವಂದರು ತಮ್ಮ ಪರಮಗುರುಗಳ ಆಜ್ಞೆಯನ್ನು ಶಿರಸಾವಹಿಸಿ ಅಲ್ಲಿ ನಿಂತು, ಈಶ್ವರಾರಾಧನೆಯಲ್ಲಿ ತತ್ಪರರಾದರು. ರಘುಕುಲದಲ್ಲೆಲ್ಲಾ ಉತ್ತಮನಾದ ಶ್ರೀರಾಮನೇ ಈ ಮಠದ ಮುಖ್ಯಾಧಿದೇವತೆಯಾದ್ದರಿಂದ ಇದಕ್ಕೆ ರಘೂತ್ತಮಮಠವೆಂದು ನಾಮಕರಣವಾಯಿತು.

 ಅತ್ರತಿಷ್ಠ ಯತಿಶ್ರೇಷ್ಠ ! ಗೋಕರ್ಣೇ ಮುನಿಸೇವಿತೇ |
ಆಚಾರ್ಯತ್ವಂ ಚ ಕುರುತಾಂ ವಿದ್ಯಾನಂದಮಹಾಮತೇ ||

ಇತ್ಯುಕ್ತ್ವಾ ಶಂಕರಾಚಾರ್ಯಃ ಶತಶೃಂಗಸ್ಯ ಮೂರ್ಧನಿ |
ಅಶೋಕೋ ರಾಜತೇ ಯತ್ರ ಸ್ಥಾಪಯಿತ್ವಾ ಮಠಂ ವರಮ್ ||

ವರದಾಖ್ಯೇನ ಮುನಿನಾ ಪ್ರಾಪ್ತರಾಮಾದಿವಿಗ್ರಹಾನ್ |
ಚಂದ್ರಮೌಲಿಂ ದಿವ್ಯಲಿಂಗಂ ಪಾದುಕಾಂ ದಿವ್ಯದರ್ಶನಾಮ್ ||

ವಿದ್ಯಾನಂದಯತೇ ರ್ದತ್ವಾ, ಪುನಸ್ತೋಷಮವಾಪ್ತವಾನ್ |
ರಘೂಣಾಮುತ್ತಮೋ ರಾಮೋ ರಘೂತ್ತಮ ಇತಿ ಸ್ಮೃತಃ ||

ರಘೂತ್ತಮೋ ಮಠ ಇತಿ ನಾಮ್ನಾ ಖ್ಯಾತೋsಭವದ್ವರಃ
(ಚಿದ್ವಿಲಾಸಶಂಕರವಿಜಯೇ ಮಠೋತ್ಪತ್ತಿನಿರೂಪಣಾಧ್ಯಾಯೇ )

ಶ್ರೀ ಶಂಕರಭಗವತ್ಪಾದರು ವಿದ್ಯಾನಂದಾಚಾರ್ಯರನ್ನು ಕುರಿತು ಪಾರಿವ್ರಾಜಕಲಕ್ಷಣಲಕ್ಷಿತನಾಗಿ ಈ ಪೀಠವನ್ನು ಆರೋಹಣ ಮಾಡಿದ ಶಿಷ್ಯನು ನಾನೆಂದೇ ತಿಳಿಯಬೇಕು. ಏಕೆಂದರೆ “ಯಸ್ಯ ದೇವೇ ಪರಾಭಕ್ತಿಃ” ಎಂಬ ಶ್ರುತಿಯಿಂದ ಆ ಶಿಷ್ಯನು ಆಚಾರ್ಯನಷ್ಟೇ ಪ್ರಭಾವಶಾಲಿಯಾಗಿರುತ್ತಾನೆ.

 ಅಸ್ಮಿನ್ ಪೀಠೇ ಸಮಾರೂಢಃ ಪರಿವ್ರಾಡುಕ್ತಲಕ್ಷಣಃ |
ಅಹಮೇವೇತಿ ವಿಜ್ಞೇಯೋ ಯಸ್ಯ ದೇವ ಇತಿ ಶ್ರುತೇಃ ||

ಎಂದು ಮುಂತಾಗಿ ಉಪದೇಶ ಮಾಡಿದರು. ಈ ಎಲ್ಲಾ ಪ್ರಘಟ್ಟದಿಂದ ಶ್ರೀವಿದ್ಯಾನಂದಾಚಾರ್ಯರು ಅನುಪಮ ಬ್ರಹ್ಮನಿಷ್ಠರೂ, ಶ್ರೀಶಂಕರಭಗವತ್ಪಾದರ ಆದರ್ಶವನ್ನು ಪಾಲಿಸಿಕೊಂಡು ಬಂದವರೂ, ಪರಿವ್ರಾಜಕರೂ ಆಗಿ ತಮ್ಮ ಜೀವಿತ ಕಾಲದಲ್ಲಿ ವೈದಿಕ ಧರ್ಮವನ್ನು ಪುನರುಜ್ಜೀವನಗೊಳಿಸಿದ ಮಹಾಮಹಿಮರಾದ ಆಚಾರ್ಯರೆಂದು ಸ್ಫುಟವಾಗುವುದು.

                               ********************

Facebook Comments Box