LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಭಾಗ್ಯದ ಬಾಗಿಲಾದ ಶಿಕ್ಷೆ : ವಿದ್ವಾನ್ ಸತ್ಯನಾರಾಯಣ ಶರ್ಮಾ

Author: ; Published On: ಶನಿವಾರ, ಜನವರಿ 22nd, 2011;

Switch to language: ಕನ್ನಡ | English | हिंदी         Shortlink:

“ಸತ್ಯ, ಏನೇ ಹೇಳಿದರೂ ನಿನ್ನದು ಬೇಜವಾಬ್ದಾರಿತನ. ಶ್ರೀನಿವಾಸ ನಿನ್ನನ್ನು ನಂಬಿ ಇವರಿಬ್ಬರ ವಿದ್ಯಾಭ್ಯಾಸದ ಹೊಣೆಯನ್ನು ನಿನಗೆ ಕೊಟ್ಟಮೇಲೆ ಯೋಗ್ಯರೀತಿಯಲ್ಲಿ ಇವರನ್ನು ತಯಾರುಮಾಡುವ ಕರ್ತವ್ಯ ನಿನ್ನದಾಗಿತ್ತು.
ಸರಿಯಾಗಿ ಗಮನ ನೀಡಿದ್ದರೆ ಇಷ್ಟರೊಳಗೆ ಇವರಿಬ್ಬರಿಗೂ ಸಾಕಷ್ಟು ಶಾಸ್ತ್ರಾಭ್ಯಾಸ ಆಗುತ್ತಿತ್ತು. ನಿನ್ನಿಂದ ಕರ್ತವ್ಯಲೋಪವಾಗಿದೆ.”
– ಹಿಂದಿನ ಪೀಠಾಧಿಪತಿಗಳಾದ ದೊಡ್ಡಗುರುಗಳ ಕಂಚಿನ ಕಂಠದ ಗಡಸುಧ್ವನಿ. ತೀರ್ಥಹಳ್ಳಿಯಮಠದ ಪೂಜ್ಯಶ್ರೀಗಳ ವಿಶ್ರಾಂತಿಕೋಣೆಯಲ್ಲಿ ನನ್ನ ವಿಚಾರಣೆ.
ಜೊತೆಗೆ ಚದರವಳ್ಳಿಯ ಶ್ರೀನಿವಾಸ ಭಟ್ಟರು ಹಾಗೂ ಅವರ ಸುಪುತ್ರರಾದ ಈಗಿನ ಶ್ರೀಗಳು, ಜಗದೀಶ ಶರ್ಮಾ.
ಗುರುಗಳೆದುರು ಹೇಳಲಾಗದ ಸ್ಥಳೀಯವಾದ ಕೆಲವಿಚಾರಗಳು ನನ್ನ ಕೈಕಟ್ಟಿದ್ದವೆಂಬುದನ್ನು ನನ್ನಿಂದ ನಿರೂಪಿಸಲು ಅಸಾಧ್ಯವಾಯಿತು.
ದೊಡ್ಡಗುರುಗಳೆದುರು ವಾದಮಾಡಿ ಉತ್ತರಕೊಟ್ಟು ಬದುಕುವುದುಂಟೇ? ತಪ್ಪಾಯಿತು, ಎಂದು ಉದ್ದಕ್ಕೆ ಅಡ್ಡಬಿದ್ದೆ. ನನ್ನಿಂದ ಅಪರಾಧವಾದದ್ದು ಹೌದು.
ಸದ್ಯಕ್ಕೆ ಏನು ಎಂದು ಅಪ್ಪಣೆಯಾಗಬೇಕು ಎಂದು ನಮ್ರತೆಯಿಂದಲೇ ನಿವೇದಿಸಿಕೊಂಡೆ. “ಅದನ್ನು ನೀನೇ ನಿರ್ಧರಿಸಬೇಕು. ಶಿಕ್ಷೆ ಎಂಬುದು ತಪ್ಪು ಮಾಡಿದ್ದಕ್ಕೇ ಇರುವ ವ್ಯವಸ್ಥೆ” – ಶ್ರೀಗಳವರ ದೃಢವಾದ ಮಾತು.
ಈ ವರ್ಷ ನಮ್ಮ ಮನೆಯಲ್ಲಿಯೇ ಇಬ್ಬರನ್ನೂ ಇಟ್ಟುಕೊಂಡು ಸಾಹಿತ್ಯ ಪರೀಕ್ಷೆಗೆ ನಿಯತವಾದ ಎಲ್ಲ ಪಾಠ್ಯಗಳನ್ನೂ ಪಾಠಮಾಡಿ ಪರೀಕ್ಷೆಗೆ ತಯಾರು ಮಾಡುವುದು ನನ್ನ ಹೊಣೆ ಎಂದೆ.
ಒಪ್ಪಿ ಅನುಗ್ರಹಿಸಿದರು. ಆಗಿನ ಗಂಭೀರ ಮುಖಮುದ್ರೆಯ ಶಾಸಕಮೂರ್ತಿ ಸ್ವಲ್ಪ ಹೊತ್ತಿನಲ್ಲಿಯೇ ಮಾತೃವಾತ್ಸಲ್ಯದ ಪ್ರತಿರೂಪವಾಗಿ ಬದಲಾಗಿದ್ದು ಬೇರೆಯೇ ಆದ ಸಂಗತಿ.

ಇದು ಪೂಜ್ಯಶ್ರೀಗಳು ಪೂರ್ವಾಶ್ರಮದಲ್ಲಿ ಗೋಕರ್ಣದಲ್ಲಿ ವೇದವಿದ್ಯಾಭ್ಯಾಸ ಮುಗಿಸಿದ ವರ್ಷ ನಡೆದ ಘಟನೆ.
ನನ್ನ ಭಾಗ್ಯದ ಬಾಗಿಲು ತೆಗೆದ ಪರಿ.
ಋಷೀಣಾಂ ಪುನರಾದ್ಯಾನಾಂ ವಾಚಮರ್ಥೋನುಧಾವತಿ
.
ನಿಜ, ಮಹಾತ್ಮರ ಪ್ರತಿಯೊಂದು ನಡೆ-ನುಡಿಯ ಹಿಂದೆಯೂ ನಮಗರಿಯದ ವಿಷಯವೊಂದು ಅಂತರ್ನಿಹಿತವಾಗಿರುತ್ತದೆ.
ಪಾಮರರಾದ ನಮಗೆ ತಿಳಿಯುವುದು ಫಲಸಿದ್ಧಿಯ ನಂತರವೇ.

ಶ್ರೀರಾಮಚಂದ್ರಾಪುರಮಠದ ಶಿಷ್ಯರಾಗಿರುವುದೂ ನಮ್ಮ ಬದುಕಿನ ಭಾಗ್ಯ ಎಂಬುದು ಅತಿಶಯೋಕ್ತಿಯ ಮಾತಲ್ಲ. ಅವಿಚ್ಛಿನ್ನಪರಂಪರೆಯ ಏಕೈಕಶಾಂಕರರಾಜಗುರುಪೀಠದ ಶಿಷ್ಯರು ನಾವು.
ಈ ಪೀಠವನ್ನು ಆರೋಹಿಸಿ ಸಮಾಜಕ್ಕೆ ಸತ್ಪಥದರ್ಶನ ಮಾಡಿದ ಎಲ್ಲ ಪೂರ್ವಾಚಾರ್ಯರೂ ಸಹ ಪರಮತಪಸ್ವಿಗಳು, ನಿಗ್ರಹಾನುಗ್ರಹಸಮರ್ಥರು, ಧರ್ಮಸಾಮ್ರಾಜ್ಯದ ನೇತಾರರು.
ಆಯಾಕಾಲದ ಆಳರಸರಿಗೆ ಮಾರ್ಗದರ್ಶನ ನೀಡಿದ ಶ್ರೇಯಸ್ಸು ಈ ಎಲ್ಲ ಪೀಠಾಧೀಶರಿಗೂ ಸಲ್ಲುತ್ತದೆ. ಈ ಗುರುಪರಂಪರೆಯನ್ನು ಸ್ಮರಿಸುವಾಗಲೇ ಮೈರೋಮಾಂಚನಗೊಳ್ಳುತ್ತದೆ.

ಈ ಮಠದ 33ನೆಯ ಪೀಠಾಧಿಪತಿಗಳಾಗಿದ್ದ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀಮದ್ರಾಘವೇಶ್ವರಭಾರತೀಮಹಾಸ್ವಾಮಿಗಳು ಪರಮತಪೋಧನರು.
ಅಪಾರವಾದ ಶಿಷ್ಯವಾತ್ಸಲ್ಯವನ್ನು ಹೊಂದಿದವರು. ತಮಿಳುನಾಡಿನ ತ್ರಿಣ್ಣವಲ್ಲಿಯಲ್ಲಿ ಶಾಸ್ತ್ರಾಧ್ಯಯನಮಾಡಿದ ಪೂಜ್ಯರು ತಮ್ಮ ಪಾಂಡಿತ್ಯದಿಂದ ಕಾಂಚಿಯ ಮಹಾರಾಜರಿಂದ “ರಾಮಭದ್ರ”ನೆಂಬ ಗಜರಾಜ ಸಮರ್ಪಣೆಯ ಸಹಿತ ಸತ್ಕೃತರಾಗಿ ಶ್ರೀಮಠದ ಕೀರ್ತಿಯನ್ನು ವಿಸ್ತರಿಸಿದವರು. ಕೊಡಚಾದ್ರಿಯ ಚಿತ್ರಮೂಲದಲ್ಲಿ ಉಗ್ರತಪಸ್ಸನ್ನು ಆಚರಿಸಿ ಕಾರಣಾಂತರದಿಂದ ನಷ್ಟವಾಗಿದ್ದ ದೃಷ್ಟಿಶಕ್ತಿಯನ್ನು ಪುನಃ ಪಡೆದು “ದುರವಾಪತಪಃಪ್ರಾಪ್ತಚಕ್ಷುಷೇ ಪ್ರಥಿತಾತ್ಮನೇ” ಎಂದು ಪ್ರಶಂಸಿತರಾದ ಮಹಾತ್ಮರು.
ಹಿಂದಿನ ಪೀಠಾಧೀಶರ ಪರಮಗುರುಗಳಾಗಿದ್ದವರು. ಇವರು ಒಮ್ಮೆ ೧೯೮೦ರಲ್ಲಿ ಶಿಷ್ಯಸ್ವೀಕಾರದ ಯೋಚನೆಯೂ ಶ್ರೀಮಠದ ವಲಯದಲ್ಲಿಲ್ಲದ ಕಾಲದಲ್ಲಿ ೩೫ ನೆಯ ಯತಿಶ್ರೇಷ್ಠರಾದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಮದ್ರಾಘವೇಂದ್ರಭಾರತೀ ಶ್ರೀಗಳವರಿಗೆ ಸ್ವಪ್ನದರ್ಶನನೀಡಿ ತಾವು ತೀರ್ಥಹಳ್ಳಿಯ ಶ್ರೀಮಠವನ್ನು ಪ್ರವೇಶಿಸಿದ ಸೂಚನೆಯನ್ನು ನೀಡಿದರು. ಆಗ ಜಾಗೃತರಾದ ಶ್ರೀಗಳು ಅಂದಿನ ತತ್ಕಾಲೀನ ಗ್ರಹಸ್ಥಿತಿಯನ್ನು ಬರೆದಿಟ್ಟು ಇಂತಹ ನಕ್ಷತ್ರ ರಾಶಿಯವರಾದ ನಮ್ಮ ಪರಮಗುರುಗಳೇ ನಮ್ಮನಂತರ ಪೀಠಕ್ಕೆ ಬರುತ್ತಾರೆ. ಇನ್ನು ನಮ್ಮದು ಕೇವಲ ಉಸ್ತುವಾರಿ ಸರ್ಕಾರ ಮಾತ್ರ ಎಂದಿದ್ದರು. ಪೀಠಕ್ಕೆ ಬಂದ ಅನತಿಕಾಲದಲ್ಲಿಯೇ ಜಾಗತಿಕಸ್ತರದಲ್ಲಿ ಪ್ರಸಿದ್ಧರಾಗಿ ತನ್ಮೂಲಕ ಶ್ರೀಮಠದ ಕೀರ್ತಿಯನ್ನು ಜಗದಗಲಕ್ಕೆ ವಿಸ್ತರಿಸಿದ ಇಂದಿನ ೩೬ನೆಯ ಪೀಠಾಧೀಶರು ನಮಗೆ ದೊರೆತಿದ್ದು ಆಕಸ್ಮಿಕವಾಗಿರದೆ ಪ್ರಬಲವಾದ ದೈವೀಸಂಕಲ್ಪ ಹಾಗೂ ಪೂರ್ವಾಚಾರ್ಯರ ಶಿಷ್ಯವಾತ್ಸಲ್ಯಗಳೂ ಕಾರಣವಾಗಿವೆ ಎಂಬುದಕ್ಕೆ ಈ ಘಟನೆಯೂ ನಿದರ್ಶನ.

ಪೂಜ್ಯರ ಪೂರ್ವಾಶ್ರಮದ ಪಿತಾಮಹ ಚದರವಳ್ಳಿಯ ಕೀರ್ತಿಶೇಷ ವೇ|ಮಹಾಬಲೇಶ್ವರ ಭಟ್ಟರು ನಮ್ಮ ಕುಟುಂಬಕ್ಕೆ ಅತ್ಯಾಪ್ತರಾಗಿದ್ದವರು.
ಎಲ್ಲ ಸುಖ-ಸಂತೋಷಗಳಲ್ಲಿ ಕಷ್ಟಕಾರ್ಪಣ್ಯಗಳಲ್ಲಿ ಭಾಗಿಗಳಾಗುತ್ತಿದ್ದವರು. ಹಾಗಾಗಿ ಎರಡೂ ಮನೆಗಳಲ್ಲಿನ ಬಾಂಧವ್ಯ ತುಂಬಾ ಚೆನ್ನಾಗಿತ್ತು. ಶ್ರೀಗಳ ಪೂರ್ವಾಶ್ರಮದ ಅಜ್ಜನ ಮನೆ ನಿಟ್ಟೂರು ಸಮೀಪದ ಹೆಬ್ಬಿಗೆ. ಮೂವತ್ತು ವರ್ಷಗಳ ಹಿಂದೆ ಅಲ್ಲಿಗೆ ಸಾರಿಗೆ ಸಂಪರ್ಕ ಈಗಿನಂತಿರಲಿಲ್ಲ. ಸುಮಾರು ಇಪ್ಪತ್ತು ಕಿಲೋಮೀಟರ್ ನಡೆದು ಈವಳ್ಳಿಹೊಳೆಯನ್ನು ದೋಣಿಯಲ್ಲಿ ದಾಟಿ ಹೋಗಬೇಕಿತ್ತು.
ಹೀಗೆ ತಾಯಿಯೊಂದಿಗೆ ಅಜ್ಜನಮನೆಗೆ ಹೋಗುವಾಗ ಅಥವಾ ಬರುವಾಗ ಮಧ್ಯೆ ನಮ್ಮಮನೆಯಲ್ಲಿ ಉಳಿದುಹೋಗುವ ರೂಢಿಯಿತ್ತು. ಆದ್ದರಿಂದ ಶ್ರೀಗಳವರನ್ನು ಅವರ ಶೈಶವದಿಂದಲೂ ನೋಡಿದವನು ನಾನು. ಉಪನಯನವಾದ ನಂತರ ವೇದಾಧ್ಯಯನಕ್ಕಾಗಿ ಅವರ ಹಿರಿಯರು ಆಯ್ಕೆ ಮಾಡಿದ್ದು ಗೋಕರ್ಣವನ್ನು. ಅಷ್ಟರಲ್ಲಿ ನಾನು ಗೋಕರ್ಣದ ಶ್ರೀ ಮೇಧಾದಕ್ಷಿಣಾಮೂರ್ತಿ ವೇದಭವನ ವಿದ್ಯಾಲಯದಲ್ಲಿ ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೆ.

ಪೂಜ್ಯರು ಮತ್ತು ಜಗದೀಶ ಶರ್ಮಾ ಗೋಕರ್ಣಕ್ಕೆ ವೇದಾಧ್ಯಯನಕ್ಕೆಂದು ಬಂದಿದ್ದು 1986ರ ಜೂನ್10ರಂದು. ವಿದ್ಯಾಲಯಕ್ಕೆ ಸೇರಿ ಕೃಷ್ಣಯಜುರ್ವೇದವನ್ನು ಕ್ರಮಾಂತ ಅಧ್ಯಯನ ಮಾಡಿದ್ದು 1992ರ ವರೆಗೆ.
ಮೊದಲವರ್ಷ ಅಂತಹ ಪ್ರತಿಭಾನ್ವಿತ ಎಂದು ಗುರುತಿಸುವಂತಹ ವ್ಯಕ್ತಿತ್ವವೇನೂ ಎದ್ದು ಕಾಣುತ್ತಿರಲಿಲ್ಲ. ಆದರೆ ಕ್ರಮೇಣ ಸರಳಸಂಸ್ಕೃತಸಂಭಾಷಣೆಯನ್ನು ಕರಗತಗೊಳಿಸಿಕೊಂಡರು.
ವಿದ್ಯಾಲಯದಲ್ಲಿ ಪ್ರತಿ ತ್ರಯೋದಶಿದಿನದಂದು ನಡೆಯುತ್ತಿದ್ದ ವೇದಕಂಠಪಾಠ-ಸಂಸ್ಕೃತಭಾಷಣಗಳಲ್ಲಿ ಭಾಗವಹಿಸತೊಡಗಿದರು. ವಿದ್ಯಾಲಯದ ವಾರ್ಷಿಕೋತ್ಸವದಲ್ಲಿ ಸ್ನಾತಕೋತ್ತರ ಪದವಿಗೆ ಓದುತ್ತಿದ್ದ ಶಾಸ್ತ್ರಾಭ್ಯಾಸಿ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ ಅತಿಹೆಚ್ಚು ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ನೀಡಲಾಗುತ್ತಿದ್ದ ಸರ್ವಪ್ರಥಮಾ ಪ್ರಶಸ್ತಿಯನ್ನೂ ಅನೇಕಬಾರಿ ಪಡೆದರು.
ಅಂದಿನ ಆ ಹೆಜ್ಜೆಗಳಲ್ಲಿ ಇಂದಿನ ತ್ರಿವಿಕ್ರಮಪದಚಿಹ್ನೆಯನ್ನು ನಾವೀಗ ಗುರುತಿಸಬಹುದು.

ವಿದ್ಯಾರ್ಥಿನಿಲಯದಲ್ಲಿ ವಾಸ. ಆಗಿನ ನಿಲಯರಕ್ಷಕನೂ ನಾನೇ ಆಗಿದ್ದೆ. ಬಾಲ್ಯಸಹಜವಾದ ಅವರ ತುಂಟಾಟಗಳು ಮಾತ್ರ ನನ್ನ ನಿದ್ದೆಗೆಡಿಸುತ್ತಿತ್ತು.
ತುಂಬಿ ಹರಿಯುವ ಕೋಟಿತೀರ್ಥದಲ್ಲಿ ಈಜಿನ ಮೋಜು. ಒಮ್ಮೆ ಕೋಟಿತೀರ್ಥದ ಮಧ್ಯದಲ್ಲಿನ ಕೋಟೀಶ್ವರದಿಂದ ಹಿಂದಿರುಗಿ ಬರುವಾಗ ಕಾಲು ಸೋತು ದಡಸೇರಲು ಹರಸಾಹಸ ಪಟ್ಟಿದ್ದರು.
ಇಷ್ಟಾದ ಮೇಲೆ ನಿಲಯದ ಎಲ್ಲ ವಿದ್ಯಾರ್ಥಿಗಳಿಗೂ ಕೋಟಿತೀರ್ಥದ ಈಜನ್ನು ನಿರ್ದಾಕ್ಷಿಣ್ಯವಾಗಿ ನಿಷೇಧಿಸಬೇಕಾಯಿತು.
ಆದರೆ ಸ್ನೇಹಿತರ ಮನೆಗೋ ಬಂಧುಗಳ ಮನೆಗೋ ಹೋದಾಗ ಅಲ್ಲಿಯ ಕೆರೆ, ಹೊಳೆಗಳಲ್ಲಿ ಈಜುವುದಕ್ಕೆ ಯಾವ ದೊಣ್ಣೆನಾಯಕನ ಅನುಮತಿಯೂ ಬೇಕಿರಲಿಲ್ಲವೆಂಬುದು ಬೇರೆ ಮಾತು.

ಒಮ್ಮೆಯಂತೂ ರಾಜ್ಯಾದ್ಯಂತ ಬಿಗುವಾದ ಪರಿಸ್ಥಿತಿ. ಮುಖ್ಯಪಟ್ಟಣಗಳಲ್ಲಿ 144- ಕರ್ಫ್ಯೂಗಳಿದ್ದ ಕಾಲ.
ಪ್ರಾಯಶಃ ಅಯೋಧ್ಯಾ ಪ್ರಕರಣವೆಂದು ನನ್ನ ನೆನಪು. ಊರಿಗೆ ಹೋಗುತ್ತೇವೆಂದು ಹೇಳಿ ಉಳಿದ ಸಹಾಧ್ಯಾಯಿಗಳೊಂದಿಗೆ ಹೋಗಿದ್ದು ಕೋಮು ಗಲಭೆಯ ದಳ್ಳುರಿಯಲ್ಲಿ ಸಿಲುಕಿ ಬೇಯುತ್ತಿದ್ದ ದಕ್ಷಿಣಕನ್ನಡಕ್ಕೆ.
ಇದನ್ನು ಆಮೇಲೆ ತಿಳಿದ ನಮ್ಮ ಸ್ಥಿತಿ ಹೇಗಾಗಿರಬಹುದೆಂಬುದನ್ನು ಊಹಿಸಬೇಕಷ್ಟೆ.

ವೇದಾಧ್ಯಯನ ಮುಗಿದ ನಂತರ ಸಂಸ್ಕೃತಸಾಹಿತ್ಯಪರೀಕ್ಷೆಗೆ ಕುಳಿತದ್ದು. ಮೊದಲೇ ಹೇಳಿದಂತೆ ಮೂರುವರ್ಷಗಳ ಪಾಠ್ಯವನ್ನು ಕೇವಲ ಎಂಟು ತಿಂಗಳುಗಳಲ್ಲಿಯೇ ಓದಿ ಪರೀಕ್ಷೆಗೆ ಸಿಧ್ಧವಾಗಬೇಕಿತ್ತು. ಅಪರಿಹಾರ್ಯವಾದ ಇಂಗ್ಲಿಶ್ ಭಾಷೆ ಬೇರೆ. ನಾನೇನೋ ಕಾಲೇಜು ಮುಗಿಸಿಬಂದವನು ಬಿಡುವಿನ ಪೂರ್ತಿ ಪಾಠ ಮಾಡುತ್ತಿದ್ದೆ. ಆದರೆ ಇನ್ನುಳಿದ ಈರ್ವರು ಅಧ್ಯಾಪಕರೂ ಸೇರಿದಂತೆ ಮಾಡಿದ ದಿನದ ಪಾಠ ಬೆಟ್ಟದಷ್ಟಾಗುತ್ತಿತ್ತು. ಆದರೂ ನಮ್ಮಮನೆಯ ಮಹಡಿಯಲ್ಲಿ ಕುಳಿತು ಜಗದೀಶ ಶರ್ಮರೊಂದಿಗೆ ಗಾಢವಾಗಿ ಅಧ್ಯಯನ ಮಾಡುತ್ತಿದ್ದರು. ಆಗ ತಮ್ಮ ಜೊತೆಗೆ ಹಸುಗೂಸಾಗಿದ್ದ ನನ್ನ ಮಗ ರಾಘವೇಂದ್ರ ಪ್ರಸಾದನನ್ನು ಹಾಗು ಮಗಳು ವಿರಜಾಳನ್ನಿಟ್ಟುಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ಪುಟ್ಟ ಮತ್ತು ಪುಟ್ಟಿ ಎಂದು ಅವರಿಟ್ಟ ಹೆಸರು ಇಂದಿಗೂ ನನ್ನ ಮಕ್ಕಳೀರ್ವರಿಗೂ ಖಾಯಂ ಹೆಸರಾಗಿದೆ. ಆಹಾರ-ಉಪಾಹಾರಗಳ ವಿಷಯದಲ್ಲಿ ಎಂದೂ ಯೋಚನೆ ಮಾಡಿದವರಲ್ಲ. ನಾವಾಗಿ ಕರೆದು ಕೊಟ್ಟರಷ್ಟೇ. ಆದರೆ ನಿತ್ಯಾನುಷ್ಠಾನದಲ್ಲಿ ಓದಿನ ವಿಚಾರದಲ್ಲಿ ಮಾತ್ರ ಎಂದೂ ರಾಜಿಮಾಡಿಕೊಳ್ಳುತ್ತಿರಲಿಲ್ಲ ಇದೇ ಸಂದರ್ಭದಲ್ಲಿ ಪ್ರತಿದಿನ ಕೋಟಿತೀರ್ಥದಲ್ಲಿನ ನಮ್ಮ ಮೂಲಮಠಕ್ಕೆ ಹೋಗಿ ರಾಮದೇವರ ದರ್ಶನಮಾಡಿ ಅಲ್ಲಿಯೇ ಇರುವ ಮೂವ್ವತ್ತಮೂರನೆಯ ಪೀಠಾಧಿಪತಿಗಳಾದ ಮಹಾತಪಸ್ವಿ ಶ್ರೀಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಸಮಾಧಿಗೆ ಪ್ರಣಾಮ ಸಲ್ಲಿಸಿ ಬರುತ್ತಿದ್ದರು.

ಗುರುಕೃಪಾಕಟಾಕ್ಷವೆಂಬುದು ಎಂತಹ ಬದಲಾವಣೆಯನ್ನು ತರಬಹುದೆಂಬುದಕ್ಕೆ ಪೂಜ್ಯಶ್ರೀಗಳೇ ದೃಷ್ಟಾಂತ. ಸಾಹಿತ್ಯ ಪಾಠಗಳು ಪ್ರಾರಂಭವಾದ ಮೂರುತಿಂಗಳಲ್ಲಿ ನವರಾತ್ರಿ ಬಂತು.
ಇಬ್ಬರನ್ನೂ ಜೊತೆಗೆ ಕರೆದುಕೊಂಡು ತೀರ್ಥಹಳ್ಳಿಗೆ ಬರುವಂತೆ ದೊಡ್ಡಗುರುಗಳ ಆದೇಶವಾಯಿತು. ವಾರಪೂರ್ತಿ ಬಿಡುವಿನಲ್ಲೆಲ್ಲ ಗುರುಗಳ ಪ್ರಶ್ನೆಗಳ ಪ್ರವಾಹ.
ಮೊದಲ ದಿನವೇ ಶ್ರೀಗಳು ತರ್ಕಶಾಸ್ತ್ರದಲ್ಲಿ ಅತ್ಯಂತ ಕಠಿಣವಾದ ವಾಯು ಲಕ್ಷಣವನ್ನು ದಲಕೃತ್ಯಸಹಿತವಾಗಿ ಧಾರಾರೂಪವಾಗಿ ನಿರೂಪಿಸಿದಾಗ ಗುರುಗಳು ವಿಸ್ಮಿತರಾದರು.
ಅಂದೇ ಅವರು ತಮ್ಮ ಉತ್ತರಾಧಿಕಾರಿಯನ್ನು ಶ್ರೀಗಳಲ್ಲಿ ಗುರುತಿಸಿದರೇನೋ.
ನಮಗೂ ಸಹ ತರ್ಕಶಾಸ್ತ್ರದಲ್ಲಿ ಇಷ್ಟು ಕಡಿಮೆ ಸಮಯದಲ್ಲಿ ಪ್ರವೇಶ ಸಿಕ್ಕಿರಲಿಲ್ಲ. “ಪದಾರ್ಥಜ್ಞಾನ, ಅವಚ್ಛೇದ್ಯಾವಚ್ಛೇದಕತ್ವ, ಉದ್ದೇಶ್ಯವಿಧೇಯಭಾವಗಳ ಪರಿಚಯವಾಯಿತೆಂದರೆ ತರ್ಕಶಾಸ್ತ್ರ ಬಂದಂತೆಯೇ.
ಉಳಿದ ಎಲ್ಲಶಾಸ್ತ್ರಗಳೂ ಸುಲಭವಾಗಿ ಅರ್ಥವಾಗುತ್ತವೆ” ಎಂದು ಶ್ರೀಗುರುಗಳು ಅಂದು ನುಡಿದದ್ದು ನನ್ನ ಸ್ಮೃತಿಪಥದಲ್ಲಿ ಅಚ್ಚೊತ್ತಿದೆ.

ಓದಿನಲ್ಲಿ ಅನಿತರಸಾಧಾರಣ ಪ್ರತಿಭೆಯನ್ನು ಹೊಂದಿದ್ದ ಪೂಜ್ಯರು ಸಾಹಿತ್ಯ ಪರೀಕ್ಷೆಯಲ್ಲಿ ಆ ವರ್ಷ ರಾಜ್ಯಕ್ಕೇ ಪ್ರಥಮರಾಗಿ ಉತ್ತೀರ್ಣರಾದರು.
ಅಷ್ಟೇ ಅಲ್ಲ ಇಂಗ್ಲಿಷ್ ಭಾಷೆಯಲ್ಲಿ ನೂರೈವತ್ತು ಅಂಕಗಳಿಗೆ ನೂರನಲವತ್ತೇಳು ಅಂಕಗಳನ್ನು ಪಡೆದು ದಾಖಲೆಬರೆದರು
. ಆದರೆ ವ್ಯವಹಾರದಲ್ಲಿ ಮಾತ್ರ ಅಷ್ಟೊಂದು ಕುಶಲತೆಯಿತ್ತೆನ್ನಲಾರೆ. ಇಷ್ಟು ದೊಡ್ಡಸಮಾಜದ ವಿಸ್ತಾರಜವಾಬ್ದಾರಿಯನ್ನು ಹೊರುವವರಿಗೆ ವ್ಯವಹಾರಕೌಶಲವಿಲ್ಲದಿದ್ದರೆ ಏನಾದೀತೋ ಎಂಬ ಚಿಂತೆ ನನಗಿತ್ತು. ಆದರೆ ಅದೆಲ್ಲವೂ ನಮ್ಮಂತಹ ಸಾಮಾನ್ಯರಿಗೆ ಮಾತ್ರ ಎಂಬುದು ಬಹುಬೇಗ ನನ್ನ ಅರಿವಿಗೆ ಬಂತು. ಈ ಮಧ್ಯೆ ಶಿಷ್ಯಪರಿಗ್ರಹಾರ್ಥಸಮಿತಿಯ ಉಪಾಂಗವಾದ ವೈದಿಕರ ಆಯ್ಕೆಸಮಿತಿಯು ಪೂಜ್ಯರ ಜಾತಕವನ್ನು ಪರಿಶೀಲಿಸಿ ನಾಡಿನ ಶೇಷ್ಠಜ್ಯೋತಿರ್ವಿದರ ಅಭಿಪ್ರಾಯವನ್ನು ಪಡೆದು ವಿರಕ್ತಸ್ವಭಾವ, ವೇದ ಹಾಗೂ ಶಾಸ್ತ್ರಜ್ಞಾನ, ಪರಿವ್ರಾಜಕಾದಿಯೋಗಗಳನ್ನು ಅನುಲಕ್ಷಿಸಿ ಪೂಜ್ಯರನ್ನು ಮುಂದಿನ ಉತ್ತರಾಧಿಕಾರಿಗಳನ್ನಾಗಿ ಮಾಡಬಹುದೆಂಬ ಅಭಿಪ್ರಾಯವನ್ನು ಶ್ರೀಗಳಲ್ಲಿ ನಿವೇದಿಸಿಕೊಂಡಿತ್ತು.
ಉತ್ತರಾಧಿಕಾರಿಯ ಆಯ್ಕೆಯ ವಿಷಯದಲ್ಲಿ ತುಂಬ ಸಂತೋಷವನ್ನು ಹೊಂದಿದ್ದ ಶ್ರೀಗಳು ಮಾರ್ಚ್ 1994ರಲ್ಲಿ ತಮ್ಮ ವಾಸ್ತವ್ಯವಾಗಿದ್ದ ಗಿರಿನಗರದಲ್ಲಿ ಪೂಜ್ಯರನ್ನು ಶ್ರೀಮಠದ ಉತ್ತರಾಧಿಕಾರಿಯೆಂದು ಘೋಷಿಸಿದರು.

ಉತ್ತರಾಧಿಕಾರಿಯ ಆಯ್ಕೆಯ ಸಂದರ್ಭದಲ್ಲಿಯೂ ನಡೆದ ಒಂದು ದೈವೀಘಟನೆಯನ್ನು ನಾನಿಲ್ಲಿ ಸ್ಮರಿಸುತ್ತೇನೆ.
ಅರ್ಹರಾದ ಮೂವರು ವಟುಗಳಲ್ಲಿ ತಾವು ಯಾರನ್ನು ಆಯ್ಕೆ ಮಾಡಬೇಕೆಂದು ಸೂಚಿಸಿ ಎಂದು ಅನೇಕಬಾರಿ ನಮ್ಮ ಪೂರ್ವಗುರುಗಳನ್ನು ಪ್ರಾರ್ಥಿಸಿದ್ದೇವೆ ಆದರೆ ಯಾವಸೂಚನೆಯನ್ನೂ ಅವರು ಅನುಗ್ರಹಿಸಿಲ್ಲ ಎಂದು ಹೇಳುತ್ತಿದ್ದ ಶ್ರೀಗಳ ಮಾರ್ಗದರ್ಶನಕ್ಕೋ ಎಂಬಂತೆ ಒಮ್ಮೆ ಎಂದಿನಂತೆ ಕೋಟಿತೀರ್ಥದ ನಮ್ಮ ಶ್ರೀಮಠಕ್ಕೆ ಹೋಗಿ ಗುರುಸಮಾಧಿಯೆದುರು ಧ್ಯಾನಸ್ಥರಾಗಿದ್ದ ನಿಯೋಜಿತಶ್ರೀಗಳಿಗೆ ದೈವೀಸೂಚನೆಯೊಂದು ಲಭಿಸಿತು.
ಆ ವಿಷಯವನ್ನು ದೊಡ್ಡಗುರುಗಳಲ್ಲಿ ನಿವೇದಿಸಲೆಂದು ನಾನು ತ್ವರಿತವಾಗಿ ಅಂದೇ ಬೆಂಗಳೂರಿಗೆ ಹೋಗಿ ಗುರುಗಳನ್ನು ಕಂಡು ನಿವೇದಿಸಿದಾಗ ಆಶ್ಚರ್ಯವೊಂದು ಕಾದಿತ್ತು.
ಯಾವದಿನ ಪೂಜ್ಯರಿಗೆ ದೈವೀಸೂಚನೆಯು ಲಭಿಸಿತೋ ಅಂದೇ ದೊಡ್ಡಗುರುಗಳಿಗೂ ಸಹ ನಿಮ್ಮ ಉತ್ತರಾಧಿಕಾರಿಯ ಆಯ್ಕೆ ಸಮೀಚೀನವಾಗಿದೆ ಎಂದು 33ನೆಯ ಶ್ರೀ ಶ್ರೀಮದ್ರಾಘವೇಶ್ವರಭಾರತೀಶ್ರೀಗಳು ಸ್ವಪ್ನದರ್ಶನದಲ್ಲಿ ಅಪ್ಪಣೆ ಕೊಡಿಸಿದ್ದರು.
ಈ ಪೀಠದ ಗುರುಪರಂಪರೆಯಲ್ಲಿ ಬಂದ ಎಲ್ಲ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರೂ ತಮ್ಮ ವಿಶಿಷ್ಟತೆಯಿಂದ ಶ್ರೀಮಠದ ಕೀರ್ತಿಯನ್ನು ಬೆಳಗಿದವರು. ಅಷ್ಟೇ ಅಲ್ಲ ಸಮಾಜದ ಶಿಷ್ಯರಿಗಾಗಿ ತಮ್ಮ ಸಂಪೂರ್ಣ ಬದುಕನ್ನೇ ಮುಡಿಪಾಗಿಟ್ಟವರು ಎಂಬುದನ್ನು ಇತಿಹಾಸವು ಉಲ್ಲೇಖಿಸಿದೆ.

 • ಪ್ರಥಮ ಶ್ರೀರಾಘವೇಶ್ವರಭಾರತಿಗಳು ತಮ್ಮ ಅಪ್ರತಿಮ ತಪಃಶಕ್ತಿ ಶಾಸ್ತ್ರವಿದಗ್ಧತೆಗಳಿಂದ ವಿಜಯನಗರದ ಅರಸರಿಂದ ಪಂಚಕಲಶಯುಕ್ತವಾದ ಆಂದೋಲಿಕೆಯ ಸಹಿತ ವಿಶೇಷವಾಗಿ ಸಮ್ಮಾನಿತರಾದವರು. ಅಷ್ಟೇ ಅಲ್ಲ ಜ್ಯೊತಿಷ್ಯದಲ್ಲಿ ಅಗಾಧಪಾಂಡಿತ್ಯವನ್ನು ಹೊಂದಿದ್ದ ಮಹಾಮೇಧಾವಿಗಳು.
 • ಎರಡನೆಯ ಶ್ರೀ ರಾಘವೇಶ್ವರಭಾರತೀಶ್ರೀಗಳು ಹಿರೇ ಒಡೆಯರೆಂದೇ ಖ್ಯಾತರಾಗಿ ಮಹಾರಾಜರಂತೆ ಅಪ್ರತಿಹತವಾದ ಶಾಸಕಶಕ್ತಿಯುಳ್ಳವರಾಗಿದ್ದು ಶ್ರೀಮಠಕ್ಕೆ ಅನೇಕ ರೀತಿಯ ಉಂಬಳಿ, ಉತಾರಗಳನ್ನು ಸಂಪಾದಿಸಿದ ಯತಿಶ್ರೇಷ್ಠರು.
 • ವೇಂಕಟೇಶ್ವರಭಾರತೀ ಎಂಬ ಮತ್ತೊಂದು ಹೆಸರನ್ನು ಹೊಂದಿದ್ದ ತೃತೀಯ ಶ್ರೀರಾಘವೇಶ್ವರಭಾರತಿಗಳ ಹಾಗೂ ಶ್ರೀರಘೂತ್ತಮ ಭಾರತೀ ಶ್ರೀಗಳ ಉತ್ತರಾಧಿಕಾರಿಗಳಾದ ಚತುರ್ಥ ರಾಘವೇಶ್ವರ ಭಾರತೀಶ್ರೀಗಳ ಕಾಲದಲ್ಲಿ ಶ್ರೀಮಠದವ್ಯಾಪ್ತಿ ವಿಸ್ತಾರವಾಯಿತು.
 • ಈಗಿನ ಒಂಬತ್ತನೆಯ ಶ್ರೀ ಶ್ರೀಮದ್ರಾಘವೇಶ್ವರಭಾರತೀ ಶ್ರೀಗಳವರ ಪೀಠಾಧಿಪತ್ಯದಲ್ಲಿ ಮಠದ ಹೆಸರು ಜಾಗತಿಕಸ್ತರದಲ್ಲಿ ವಿರಾಜಮಾನವಾಯಿತು.

ಈಗಿನ 36ನೆಯ ಪೀಠಾಧಿಪತಿಗಳ ಎಲ್ಲ ನಡವಳಿಕೆಗಳಲ್ಲಿ ಹಿಂದಿನ 33ನೆಯ ಪೀಠಾಧೀಶರಾದ ಶ್ರೀ ಶ್ರೀಮದ್ರಾಘವೇಶ್ವರಭಾರತೀ ಶ್ರೀಗಳ ಸಾದೃಶ್ಯ ಕಂಡುಬರುವುದು ಖಂಡಿತವಾಗಿಯೂ ಆಕಸ್ಮಿಕವಲ್ಲ.
ಒಂದರೆಡು ಘಟನೆಗಳನ್ನು ದೃಷ್ಟಾಂತವಾಗಿ ನೀಡುವುದಾದರೆ:
– 33ನೆಯ ಶ್ರೀಶ್ರೀಮದ್ರಾಘವೇಶ್ವರಭಾರತೀಶ್ರೀಗಳು ಪೀಠಕ್ಕೆ ಬಂದ ಹೊಸದರಲ್ಲಿ ಶ್ರೀಮಠಕ್ಕೆ ಆನೆಯೊಂದನ್ನು ಬಯಸಿದ್ದರು.
ಗುರುಗಳಾದ ಶ್ರೀ ಶ್ರೀಮದ್ರಾಘವೇಂದ್ರಭಾರತೀ ಶ್ರೀಗಳು ಶಿಷ್ಯರ ಆಸಕ್ತಿಯನ್ನು ತಿಳಿದು ಆನೆಯನ್ನು ಸಂಪಾದಿಸಲು ಕೊಡಗಿನ ಅರಸರಿಗೆ ಕರಣಿಕ ಸುಬ್ಬಯ್ಯನ ಮೂಲಕ ಪತ್ರವನ್ನು ಬರೆಸಿದ್ದರು.
ನಂತರ ಕಾಂಚಿಯ ಮಹಾರಾಜನಿಂದ ರಾಮಭದ್ರ ಎಂಬ ಗಜರಾಜ ಶ್ರೀಗಳಿಗೆ ದೊರೆತು ಕೊನೆಯ ಕ್ಷಣದವರೆಗೂ ಶ್ರೀಗಳ ಸೇವೆ ಸಲ್ಲಿಸಿದ್ದು ಮಾತ್ರವಲ್ಲ ಮುಂದೆ ಹಸ್ತಿದಂತಸಿಂಹಾಸನದ ರೂಪದಲ್ಲಿ ಈಗಲೂ ಈ ಪೀಠದ ಅಧಿಪತಿಗಳ ಸೇವೆಯನ್ನು ನಡೆಸುತ್ತಿದ್ದಾನೆ. ಇವರಂತೆಯೇ ಈಗಿನ ಶ್ರೀಶ್ರೀಮದ್ರಾಘವೇಶ್ವರಭಾರತೀ ಶ್ರೀಗಳೂ ಸಹ ಎಂದೂ ಯಾವುದನ್ನೂ ಅಪೇಕ್ಷೆಪಡದವರು. ಮುಂಬಯಿ ಪ್ರಾಂತಕ್ಕೆ ಸಂಚಾರ ಹೋದಾಗ ನಮ್ಮ ಗೋಶಾಲೆಯ ರತ್ನರೂಪವಾಗಿರುವ ಮಹಾನಂದಿಯನ್ನು ಕಂಡು ಅದನ್ನು ಬಯಸಿದರು. ಅಷ್ಟೇ ಅಲ್ಲ ಯಾವಾಗ ಆ ವೃಷಭರಾಜ ಶ್ರೀಮಠವನ್ನು ಪ್ರವೇಶಿಸಿದನೋ ಆಮೇಲೆ ಮಠದಲ್ಲಿ ಮಾತ್ರವಲ್ಲ ವಿಶ್ವದಲ್ಲಿಯೇ ಗೋವಿನ ಕುರಿತಾಗಿ ಜನಜಾಗೃತಿ ಮೂಡುವಂತಾಯಿತು.
ಭಾರತೀಯ ಗೋಯಾತ್ರೆಯಂತಹ ಬೃಹತ್ ಆಂದೋಲನಕ್ಕೆ ಪೂಜ್ಯಶ್ರೀಗಳು ನೇತಾರರಾದರು. ೩೩ನೆಯ ಯತಿಶ್ರೇಷ್ಠರು ಮದವೇರಿದ್ದ ರಾಮಭದ್ರನನ್ನು ಪ್ರೀತಿಯ ಮಾತಿನಿಂದಲೇ ಶಾಂತಗೊಳಿಸಿದ್ದರೆ ಈಗಿನ ಶ್ರೀಗಳ ಕಾಲದಲ್ಲಿ ಪೂಜ್ಯಶ್ರೀಗಳು ಗೋಶಾಲೆಯನ್ನು ಪ್ರವೇಶಿಸುವುದರ ಒಳಗೇ ಅವರ ಆಗಮನದ ಸುಳಿವು ಪಡೆದ ಗೋವುಗಳು ಶ್ರೀಗಳತ್ತ ಹೋಗಲು ಕೊರಳಿನ ಹಗ್ಗವನ್ನೂ ಲೆಕ್ಕಿಸದೆ ಧಾವಿಸುವುದನ್ನು ಕಾಣಬಹುದು.

ಶ್ರೀಮಠದ ಉತ್ತರಾಧಿಕಾರಿಯಾಗುವವರೆಗೆ ನಂತರವೂ ಕೂಡಾ ಪೂಜ್ಯರು ಅನೇಕ ಅಗ್ನಿದಿವ್ಯಗಳನ್ನು ಕಠಿಣಪರೀಕ್ಷೆಗಳನ್ನು ಎದುರಿಸಬೇಕಾಯಿತು. ಬೇರೆಯವರಾಗಿದ್ದರೆ ಕರಗಿ ನಾಮಾವಶೇಷವೂ ಉಳಿಯದಂತಾಗುತ್ತಿದ್ದ ಆ ಎಲ್ಲ ಪರಿಸ್ಥಿತಿಗಳನ್ನೂ ದೃಢವಾಗಿ ನಿಂತು ಎದುರಿಸಿ ಗೆದ್ದು ಬಂದಿದ್ದು ಅವರ ಹಿರಿಮೆ. ನಿಯೋಜಿತ ಶ್ರೀಗಳಾಗಿ ಹತ್ತಿರದ ಬಂಧುಗಳ ಮನೆಗೆ ಭೇಟಿನೀಡಿದ ಸಂದರ್ಭದಲ್ಲಿ ನಡೆದ ಘಟನೆಯೊಂದು ಪ್ರಾಯಶಃ ಅವರ ಮನೋಭಿತ್ತಿಯಿಂದ ಎಂದೂ ಮರೆಯಾಗಲಿಕ್ಕಿಲ್ಲ. ಆಪ್ತರೆನ್ನಿಸಿಕೊಂಡವರೇ ಖುದ್ದು ಗಿರಿನಗರಕ್ಕೆ ಹೋಗಿ ಸಲ್ಲದ ಮಾತನ್ನು ಹೇಳಿಬಂದರು. ಮತ್ತೋರ್ವ ಬೃಹಸ್ಪತಿ ದೊಡ್ಡಗುರುಗಳಿಗೆ ದೀರ್ಘಪತ್ರವೊಂದನ್ನು ಬರೆದು ಕೃತಾರ್ಥನಾದ. ಆ ಸಂದರ್ಭದಲ್ಲಿ ನಾನು ಅಕ್ಷರಶಃ ಎಲ್ಲರ ಕಾಲ್ಚೆಂಡಿನಂತಾಗಿದ್ದೆ. ಒಂದೆಡೆ ದೊಡ್ಡ ಗುರುಗಳಿಂದ ಗುರುದ್ರೋಹಿ ಎನ್ನಿಸಿಕೊಳ್ಳಬೇಕಾಯಿತು. ಆಯ್ಕೆಯ ವಿಷಯದಲ್ಲಿ ನಾನು ಗುರುಗಳ ಮೇಲೆ ಪ್ರಭಾವ ಬೀರಿದೆ ಎಂದು ಕೆಲವರು. ಆಗಿರುವ ಆಯ್ಕೆಯನ್ನು ತಪ್ಪಿಸುವ ಪ್ರಯತ್ನವನ್ನು ನಾನು ಮಾಡಿದೆ ಎಂದು ಕೆಲವರು. ಆದರೆ ಇಂತಹ ಅವಿಚ್ಛಿನ್ನಪರಂಪರೆಯ ಭಾರತೀಪೀಠಕ್ಕೆ ಆಯ್ಕೆಯ ವಿಷಯದಲ್ಲಿ ಪ್ರಭಾವವಾಗಲೀ ಪ್ರತಿಬಂಧಕವಾಗಲೀ ನಡೆಯಲು ಸಾಧ್ಯವೇ ಎಂಬುದನ್ನು ಯಾರೂ, ವಿಚಾರಶೀಲರೆನಿಸಿಕೊಂಡವರೂ ಸಹ ಯೋಚಿಸಲಿಲ್ಲ.
ಯಮೇವೈಷ ವೃಣುತೇ ತೇನ ಲಭ್ಯಃ
ಎಂಬ ಮಾತು ಉಪನಿಷತ್ತಿನಲ್ಲಿಯೇ ಉಳಿಯಿತು.
ದೈವಾನುಗ್ರಹದಿಂದ ದೊಡ್ಡಗುರುಗಳು ಸಮಾಹಿತಚಿತ್ತರಾಗಿ ಎಲ್ಲವನ್ನೂ ತಿಳಿಗೊಳಿಸಿದರು. ಇಂತಹ ಹಲವಾರು ಅಗ್ನಿಪರೀಕ್ಷೆಗಳನ್ನು ದಾಟಿಬಂದು ಸಾಂಸಾರಿಕವಾದ ಎಲ್ಲ ಬಂಧನಗಳನ್ನೂ ಕಿತ್ತೊಗೆದು ಸಮಾಜಕ್ಕಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಬಂದರೂ ಬವಣೆ ತಪ್ಪಲಿಲ್ಲ. ಇಂತಹ ಪರಿಸ್ಥಿತಿಯನ್ನು ಹಿಂದಿನ ಪೀಠಾಧಿಪತಿಗಳೂ ಸಹ ಅನುಭವಿಸಿದವರೇ. ಆದರೆ ಸ್ವರೂಪ ಮಾತ್ರ ಬೇರೆ ಅಷ್ಟೆ. ಒಂದುರೀತಿಯಲ್ಲಿ ಈ ಒಂದು ಸಂಧಿಕಾಲವೆಂದರೆ ಶ್ರೀಸನ್ನಿಧಾನವು ಹೇಳುವಂತೆ ಚಿಕ್ಕ ಪ್ರಳಯಕಾಲವೇ. ಹಳೆಯದೆಲ್ಲ ಅಳಿಸಿ ಹೊಸತು ಉದಯವಾಗುವ ಸಮಯ.
ಪುರಾಣಮಿತ್ಯೇವ ನ ಸಾಧು ಸರ್ವಮ್
ಎಂಬ ಕಾಳಿದಾಸನ ಮಾತು ಅಕ್ಷರಶಃ ಅನ್ವಯವಾಗುವ ಹೊತ್ತು.
ಮರದ ಮೂಲವನ್ನು ನಂಬಿ ಕುಳಿತವ ಹಣ್ಣಿನಿಂದ ಎಂದೂ ವಂಚಿತನಾಗುವುದಿಲ್ಲ. ಪಕ್ವವಾದ ಹಣ್ಣು ಬೀಳುವುದು ಮರದ ಬುಡಕ್ಕೇ.
ಆದರೆ ಕೇವಲ ಹಣ್ಣಿನ ಮೇಲೆ ಮಾತ್ರ ದೃಷ್ಟಿಯಿಟ್ಟವನಿಗೆ ಮರವನ್ನು ಹತ್ತಿ ಅದನ್ನು ಪಡೆಯುವ ಪ್ರಯಾಸ ತಪ್ಪಿದ್ದಲ್ಲ.

ನಿಯೋಜಿತ ಉತ್ತರಾಧಿಕಾರಿಗಳಾದ ಪೂಜ್ಯಶ್ರೀಗಳ ಬಗ್ಗೆ ದೊಡ್ಡಗುರುಗಳಿಗೆ ಸಂಪೂರ್ಣತೃಪ್ತಿಯಿತ್ತು. ಸಮರ್ಥರಾದವರನ್ನು ಆಯ್ಕೆಮಾಡಿದ್ದೇವೆಂಬ ಹೆಮ್ಮೆಯಿತ್ತು. ಮಹಾತಪೋಧನರೆಂದೇ ಖ್ಯಾತರಾಗಿದ್ದ ತಮ್ಮ ಪರಮಗುರುಗಳಾದ ಮೂವ್ವತ್ತಮೂರನೆಯ ಶ್ರೀಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳೇ ಪೀಠಕ್ಕೆ ಉತ್ತರಾಧಿಕಾರಿಗಳಾಗುತ್ತಾರೆ ಎಂಬುದನ್ನು ತಿಳಿದಿದ್ದ ಅವರು ತಮ್ಮ ದೈಹಿಕವಾದ ಅಸ್ವಾಸ್ಥ್ಯದ ನಡುವೆಯೂ ನೂತನಶ್ರೀಗಳಿಗೆ ಅಗತ್ಯವಾದ ವಸ್ತುಗಳನ್ನು ಮಣೆಯಿಂದ ಪ್ರಾರಂಭಿಸಿ ಮಂಚದವರೆಗಿನ ಎಲ್ಲ ಸಾಧನಗಳನ್ನೂ ಸ್ವತಃ ತಾವೇ ಅವಲೋಕಿಸಿ ಉತ್ಕೃಷ್ಟವಾದದ್ದನ್ನೇ ಆರಿಸಿ ಯೋಜಿಸುವಲ್ಲಿ ತೋರಿದ ಆಸಕ್ತಿಯನ್ನು ಗಮನಿಸಿದವರಿಗೆ ನೋಡಿದವರಿಗೆ, ಹಾಗೆಯೇ ನಾವು ಆಶ್ರಮಸ್ವೀಕಾರ ಮಾಡಿದಾಗ ನಮಗಿದ್ದ ಬೌದ್ಧಿಕಸ್ತರಕ್ಕಿಂತ ಚಿಕ್ಕಶ್ರೀಗಳ ಬುದ್ಧಿಮಟ್ಟ ನೂರುಪಾಲು ಮೇಲ್ಮಟ್ಟದಲ್ಲಿದೆ ಎಂಬ ಅವರ ಹೃದಯತುಂಬಿದ ಮಾತುಗಳನ್ನು ಕೇಳಿದವರಿಗೆ ಹಿಂದಿನ ಪೀಠಾಧಿಪತಿಗಳ ವಾತ್ಸಲ್ಯಭಾವದ ಅರಿವಾಗುವುದು ಸಾಧ್ಯ.

ಎಷ್ಟೋ ಬಾರಿ ಪೂಜ್ಯರು ಚಿಕ್ಕಮಕ್ಕಳನ್ನು ಎತ್ತಿಕೊಂಡು ಲಾಲಿಸುವುದನ್ನು ಕಂಡಾಗ ನನಗೆ ಆ ಮಕ್ಕಳ ಬಗ್ಗೆ ಅಸೂಯೆಯುಂಟಾಗಿ ಅದನ್ನು ಮುಚ್ಚಿಡದೆ ಶ್ರೀ ಸಂಸ್ಥಾನದೆದುರು ನಾವು ಬೇಗ ಹುಟ್ಟಿ ಈ ಭಾಗ್ಯದಿಂದ ವಂಚಿತರಾಗಿದ್ದೇವೆ ಎಂದು ನಿವೇದಿಸಿದ್ದಿದೆ. ಅದಕ್ಕೆ ಅವರ ಉತ್ತರವೇನು ಗೊತ್ತೆ? ನೀವು ತಡವಾಗಿ ಹುಟ್ಟಿದ್ದರೆ ನಮಗೆ ಪಾಠಮಾಡುವ ಯೋಗ ನಿಮಗಿರುತ್ತಿರಲಿಲ್ಲ ಎಂದು. ನಿಜ, ಒಂದರ ಪ್ರಾಪ್ತಿಗಾಗಿ ಮತ್ತೊಂದರ ಪರಿತ್ಯಾಗ ಲೋಕನಿಯಮ. ಒಟ್ಟಿನಲ್ಲಿ ಇಷ್ಟನ್ನು ಮಾತ್ರ ಹೇಳಬಲ್ಲೆ.
ರಾಜಪೀಠದಲ್ಲಿ ವಿರಾಜಮಾನನಾದ ಶ್ರೀರಾಮನ ಹಾಗೂ ಭಾರತೀಪೀಠದಲ್ಲಿ ಶೋಭಿಸುವ ಶ್ರೀಗುರುವಿನ ಮಧ್ಯೆ ಯಾವ ಅಂತರವೂ ಇಲ್ಲ. ಒಂದು ಅವ್ಯಕ್ತವಾದರೆ ಮತ್ತೊಂದು ವ್ಯಕ್ತ. ಒಂದರಲ್ಲಿ ಮೌನ ಸ್ಥಾಯಿಯಾದರೆ ಮತ್ತೊಂದರಲ್ಲಿ ಮಾತಿನ ಸಂಚಾರಿಭಾವಷ್ಟೆ. ಧರ್ಮಾಚಾರ್ಯಪೀಠದಲ್ಲಿರುವ ಪ್ರಭು ಶ್ರೀರಾಮಚಂದ್ರನಿಗೆ ನಮ್ಮ ಸರ್ವಸ್ವವನ್ನೂ ನಿರ್ವಂಚನೆಯಿಂದ ಸಮರ್ಪಿಸಿ ಶರಣಾಗತರಾದರೆ ನಮ್ಮ ಬದುಕು ಸಮೃದ್ಧವಾಗುತ್ತದೆ. ಎಂದೂ ಯಾವುದೂ ಬೇಕೆನ್ನಿಸುವುದಿಲ್ಲ. ಇದು ನನ್ನ ಅನುಭವದ ಮಾತು. ನನ್ನ ಬದುಕಿನ ಭಾಗ್ಯದ ಬಾಗಿಲು ತೆರೆದುಕೊಂಡ ಪರಿಯಿದು. ಅದೂ ಶಿಕ್ಷೆಯರೂಪದಲ್ಲಿ ಎಂದರೆ ಅತಿಶಯೋಕ್ತಿಯಂತೂ ಅಲ್ಲ.

ಓರ್ವ ಅಧ್ಯಾಪಕನಾಗಿ ವೃತ್ತಿಯಲ್ಲಿ ಪಡೆಯಬಹುದಾದ ಸಾರ್ಥಕತೆಯನ್ನು ಎಂದೋ ಪಡೆದಾಗಿದೆ. ಬಯಸುವಂತಹದ್ದು ಬೇರೇನೂ ಇಲ್ಲ. ಭಗವಂತನಲ್ಲಿ ಬೇಡುವುದು ಸಲ್ಲದ ಕಾರ್ಯ.
ನಮ್ಮ ಒಳಿತು ಯಾವುದೆಂಬುದನ್ನು ನಮಗಿಂತ ಚೆನ್ನಾಗಿ ಅವನು ಬಲ್ಲ. ಆದರೂ ತಾಯಿಗೆ ಹಾಲು ಕುಡಿಸುವ ನೆನಪು ಮಾಡಲಾದರೂ ಮಗು ಅಳುವುದು ಅಗತ್ಯ. ಆ ಹಿನ್ನೆಲೆಯಲ್ಲಿ ನನ್ನ ಪ್ರಾರ್ಥನೆಯಿಷ್ಟೇ. ಲೋಕ ಸುಖವಾಗಿರಲಿ, ನಾನಾಗಲೀ ನನ್ನ ಕುಟುಂಬದವರಾಗಲೀ ಧರ್ಮಮಾರ್ಗದಿಂದ ಚ್ಯುತರಾಗದೆ ಸದಾ ಪ್ರಭುಶ್ರೀರಾಮಚಂದ್ರನ ದಾಸ್ಯದಲ್ಲಿಯೇ ಜೀವನಸಾರ್ಥಕ್ಯವನ್ನು ಕಾಣುತ್ತ ಈ ಪೀಠದ ಕೃಪಾಛತ್ರದಡಿಯಲ್ಲಿ ಬದುಕುವಂತಾಗಲಿ ಎಂಬುದು ಮಾತ್ರ.

ಮತ್ತೊಂದು ಮಾತು-ಈ ಎಲ್ಲವನ್ನೂ ಪುನಃ ಸ್ಮರಣೆಗೆ ತಂದುಕೊಟ್ಟಿದ್ದು ತೀರ್ಥಹಳ್ಳಿ ಮಠದ ಶ್ರೀಗುರುಗಳ ವಿಶ್ರಾಂತಿಯ ಕೋಣೆ.
ದೊಡ್ಡಗುರುಗಳ ಯಾವ ವಿಶ್ರಾಂತಿಕೊಠಡಿಯಲ್ಲಿ ಈಗಿನ ಪೀಠಾಧೀಶರ ಆಯ್ಕೆ ನಡೆಯಿತೋ ಅದೇ ಕೊಠಡಿಯಲ್ಲಿ ಕಳೆದ ನವೆಂಬರ್ 27ರಂದು ಹದಿನೇಳು ವರ್ಷಗಳಷ್ಟು ದೀರ್ಘಕಾಲದ ನಂತರ ನಾನು ನಮ್ಮ ಹರೇರಾಮ ತಂಡದ ಸದಸ್ಯರೊಂದಿಗೆ ಶ್ರೀಗಳವರ ಸಮ್ಮುಖದಲ್ಲಿ ಸಭೆಯಲ್ಲಿ ಪಾಲ್ಗೊಂಡಾಗ. ಈ ಎಲ್ಲ ನೆನಪುಗಳೂ ಭಾವಕ್ಕೆ ಲಗ್ಗೆಯಿಟ್ಟು ಅನುಭವಕ್ಕೆ ಅಕ್ಷರರೂಪವನ್ನು ಕೊಡಲು ಪ್ರಚೋದಿಸಿದವು.
ಅಷ್ಟೇ ಅಲ್ಲ ಗುರುಪೀಠದ ವಿಷಯದಲ್ಲಿನ ಈ ಎಲ್ಲ ಘಟನೆಗಳು ಸಮಾಜದ ಗಮನಕ್ಕೆ ಬರಬೇಕೆಂಬುದೂ ಈ ಲೇಖನದ ಉದ್ದೇಶ.

~*~*~

ಲೇಖಕರ ಪರಿಚಯ

ಶ್ರೀಮತಿ ಕಮಲಾಕ್ಷಮ್ಮ ಮತ್ತು ಬೇದರಕೊಪ್ಪ ಶ್ರೀಯುತ ರಾಮಯ್ಯ ದಂಪತಿಗಳಿಗೆ ಜ್ಯೇಷ್ಠ ಪುತ್ರರಾಗಿ ಕೀಡುದುಂಬೆಯಲ್ಲಿ 1954ರಲ್ಲಿ ಜನಿಸಿದರು.

ಪೂರ್ವಾಶ್ರಮದ ಶ್ರೀಗಳು, ಲೇಖಕ-ಗುರುಗಳೊಂದಿಗೆ

ಪ್ರಾಥಮಿಕ ವಿದ್ಯಾಭ್ಯಾಸವನ್ನು ಸಾಗರ ತಾಲೂಕಿನ ಬ್ರಾಹ್ಮಣಕೆಪ್ಪಿಗೆಯಲ್ಲಿ ಪಡೆದು, ಅಲ್ಲಿಯೇ ಸ್ವಲ್ಪಕಾಲ ವೇದಾಭ್ಯಾಸವನ್ನು ಮಾಡಿ, ವೇ| ಮೂ| ರಾಮಚಂದ್ರ ಭಟ್ಟ ಸುಳುಮನೆ ಮತ್ತು ವಿದ್ವಾನ್ ಕೃಷ್ಣಮೂರ್ತಿ ಶಾಸ್ತ್ರಿ ಹುಳೇಗಾರು ಇವರುಗಳಲ್ಲಿ ಪ್ರಾರಂಭಿಕ ಸಂಸ್ಕೃತಾಧ್ಯಯನವನ್ನು ಪೂರೈಸಿ, ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನೀ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಉಚ್ಛಶಿಕ್ಷಣವನ್ನು ಪಡೆದು, ಶ್ರೀಕ್ಷೇತ್ರ ಗೋಕರ್ಣದ ಶ್ರೀ ಮೇಧಾದಕ್ಷಿಣಾಮೂರ್ತಿ ವೇದಭವನ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ 1980ರಿಂದ ಸೇವೆ ಸಲ್ಲಿಸುತ್ತಿದ್ದು, ಅನೇಕ ಸಂಸ್ಕೃತ ವಿದ್ವಾಂಸರನ್ನು ತಯಾರುಗೊಳಿಸಿ ಸಮಾಜಕ್ಕೆ ನೀಡಿದ ಕೀರ್ತಿ ಇವರದ್ದು.
1984ರಲ್ಲಿ ಹೊಸೂರು ಶ್ರೀ ಲಕ್ಷ್ಮೀನಾರಾಯಣಪ್ಪ ಮತ್ತು ಶ್ರೀಮತಿ ಚಂದ್ರಮತಿ ದಂಪತಿಗಳ ಏಕಮಾತ್ರ ಪುತ್ರಿ ವಸುಮತಿಯವರನ್ನು ವರಿಸುವುದರೊಂದಿಗೆ ಗೃಹಸ್ಥಜೀವನವನ್ನು ಪ್ರವೇಶಿಸಿರುತ್ತಾರೆ.

ಬ್ರಹ್ಮಲೀನ ಶ್ರೀ ಶ್ರೀ ರಾಘವೇಂದ್ರಭಾರತೀಮಹಾಸ್ವಾಮಿಗಳವರ ಕಾಲದಲ್ಲಿ ಶ್ರೀಮಠದ ಸಂಪರ್ಕಕ್ಕೆ ಬಂದು, ಶ್ರೀಪರಿವಾರ ಸದಸ್ಯರಾಗಿ ಕೂಡಾ ಕೆಲವು ಕಾಲ ಶ್ರೀಗುರುಪೀಠದಸೇವೆಯನ್ನು ಮಾಡಿರುವ ಶ್ರೀಯುತರು, ಅಂದಿನಿಂದ ಇಂದಿನವರೆಗೂ ಶ್ರೀಪೀಠದ ಜೊತೆಗಿದ್ದು ತಮ್ಮ ವಿಶೇಷ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ತಮ್ಮ ಕಾರ್ಯದೊತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಶ್ರೀಪೀಠದ ಸೇವೆಯನ್ನು ಮಾಡುತ್ತಿರುವ ಲೇಖಕರು ಗೋಕರ್ಣದಲ್ಲಿ ಶ್ರೀಕ್ಷೇತ್ರ ಮತ್ತು ಶ್ರೀಮಠದ ಮಾಧ್ಯಮ ವಿಭಾಗದ ಜವಾಬ್ದಾರಿ, ಶ್ರೀಮಠದಲ್ಲಿ ಸಾಹಿತ್ಯ ವಿಭಾಗದಲ್ಲಿ ಮತ್ತು ಹರೇರಾಮ ಅಂತರಜಾಲ ತಾಣದಲ್ಲಿ ವಿಶೇಷ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
ಇವರಿಗೂ ಕುಟುಂಬಕ್ಕೂ ಶ್ರೀಗುರುದೇವತಾನುಗ್ರಹ ಸದಾ ಇರಲೆಂದು ಹಾರೈಕೆ

ಇತಿಹಾಸದ ಕೆಲವ ಪಟ-ಪುಟಗಳು:

37 Responses to ಭಾಗ್ಯದ ಬಾಗಿಲಾದ ಶಿಕ್ಷೆ : ವಿದ್ವಾನ್ ಸತ್ಯನಾರಾಯಣ ಶರ್ಮಾ

 1. Mahesha Elliadka

  || ಹರೇರಾಮ ||
  ಶ್ರೀಸಮ್ಮುದಲ್ಲಿ ಪ್ರಮುಖರೊಬ್ಬರ ಸಮ್ಮುಖ!!!
  ರೋಚಕ ಮಾಹಿತಿಗಳು, ಅತ್ಯದ್ಭುತ ಶೈಲಿಯಲ್ಲಿ.
  ಇತಿಹಾಸದ ಪುಟಗಳೆಡೆಯ ಅಗೋಚರವಾಗಿರಬಹುದಾದ ಘಟನೆಗಳನ್ನು ಯಥಾವತ್ತಾಗಿ ಚಿತ್ರಿಸಿದ ಶ್ರೀಶರ್ಮರಿಗೆ ಶಿರಸಾ ವಂದನೆಗಳು.
  ಶ್ರೀಗುರುಪೀಠಕ್ಕೆ ವಿಶೇಷ ಸ್ಥಾನವನ್ನಲಂಕರಿಸಿದ ನಿಮ್ಮದು ಭಾಗ್ಯಶಾಲಿ ಜೀವನ.
  ಶ್ರೀಗುರುಗಳ ಆಶೀರ್ವಾದದೊಂದಿಗೆ ಆಯುರಾರೋಗ್ಯ ಐಶ್ವರ್ಯ ಎಂದೆಂದಿಗೂ ನಿಮ್ಮದಾಗಿರಲಿ..!

  ಶ್ರೀಸಂಸ್ಥಾನ ಶ್ರೀಗುರುಗಳಲ್ಲಿ ಒಂದು ವಿನಂತಿ,
  ಇದನ್ನು ’ಪ್ರಮುಖ’ವಾಗಿಸೋಣವೇ?

  ಹರೇರಾಮ.

  [Reply]

  Suma Nadahalli Reply:

  ಹೌದು ಮಹೇಶ ಇದು “ಪ್ರಮುಖದಲ್ಲಿ ಪ್ರಮುಖ “……

  ಶರ್ಮರು ಮಾಡಿದಂತಹ ಕೆಲಸವನ್ನು ಮಾತ್ರ… “ಮತ್ತೆ” ಯಾರು…. ಮಾಡಲಿಕ್ಕೂ ಆಗುವುದಿಲ್ಲ

  [Reply]

 2. Raghavendra Narayana

  ಅದ್ಭುತ.
  ಗುರುಗಳಲ್ಲಿ ಭಕ್ತಿ ಮೂಡುವ೦ತೆ ಮಾಡುತ್ತದೆ..
  .
  ಶ್ರೀ ಗುರುಭ್ಯೋ ನಮಃ

  [Reply]

  Raghavendra Narayana Reply:

  ಸ್ನೇಹ ದೊಡ್ಡದೊ, ಭಕ್ತಿ ದೊಡ್ಡದೊ..?
  ಶಿವನೆ ನಿನ್ನ ಸ್ನೇಹ ದೊಡ್ಡದೊ, ನೀ ದೊಡ್ಡವನೊ..?
  .
  ಶ್ರೀ ಗುರುಭ್ಯೋ ನಮಃ

  [Reply]

 3. gopalakrishna pakalakunja

  ಗರ್ಭಗುಡಿಯೊಗೆ ಪ್ರತಿಷ್ಟೆ ಗೊಡಿರುವ ದೇವತಾ ವಿಗ್ರಹಕ್ಕೆ ಕರಗಳ ಜೋಡಿಸಿ,ಶಿವನು ಬಾಗಿಸಿ, ಹರಕೆ ಕಾಣಿಕೆಗಳ ಒಪ್ಪಿಸಿ,ಬೇಡಿಕೆ ಅಪೇಕ್ಷೀ ಭಕ್ತಗೆ , ವಿಗ್ರಹ ಕಡೆದಿರುವ ಶಿಲ್ಪಿಯ ಕಲ್ಪನೆಯೇ ಬಾರದಿರಬಹುದು. ಆದರೆ ತನ್ನ ಶಿಲ್ಪದಲ್ಲಿ ದೇವತಾ ಸಾನ್ನಿಧ್ಯ ಕಂಡು ಧನ್ಯತಾ ಭಾವ ಅನುಭವಿಸುವ ಶಿಲ್ಪಿ ಯಾವತ್ತೂ ಕೃತಕೃತ್ಯ. ಜನ್ಮ ಸಾರ್ಥಕ್ಯ ಸಾಧಿಸಿರುವ ಪುಣ್ಯಾತ್ಮ. ಯೋಗವಂತರಿಗೆ ಮಾತ್ರ ಈ ಭಾಗ್ಯ. ಶ್ರೀ ಸತ್ಯ ನಾರಾಯಣ ಶರ್ಮರು ಅಂತವರು.
  ಈ ಚಾತರ್ಮಾಸ್ಯದಲ್ಲಿ ಅಶೋಕೆಯಲ್ಲಿ ಶ್ರೀ ಶ್ರೀ ಗಳು ಸಂದೇಶ ನೀಡುವ ಪೂರ್ವದಲ್ಲಿ ಪೀಠಿಕೆ ಮತ್ತು ನಿರೂಪಣೆ ಮಾಡುತ್ತಿರುವ ಅಮೋಘ ಪಾಂಡಿತ್ಯ, ಸರಳ ಸುಂದರ ಶೈಲಿಯ ಮಾತಿನ ಮೋಡಿಯ ಆ ವ್ಯಕ್ತಿ ಯ ಪರಿಚಯ ಭಿಕ್ಷೆ ಬೇಡಿದ್ದೆ .ಕೆಲಬಾರು ವರ್ಷಗಳ ಹಿಂದೆ ಶ್ರೀ ಶ್ರೀನಿವಾಸ ಭಟ್ಟರು ಮತ್ತಿತರೊಡನೆ ನಮ್ಮ ಮನೆಗೆ ಬಂದುದು, ನಮ್ಮ ಮಗ ಚಿರಾಯು ವನ್ನೆತ್ತಿ ಆಡಿಸಿದ್ದೂ, “ಮಗುವಿಗೆ ಈ ಹೆಸರು ಶ್ರೀ ಸಂಸ್ಥಾನದಾರೇ ಕೊಟ್ಟದ್ದೇ ಎಂದು ಕೇಳಿದ್ದೆ ” ಎಂದು ಅವರು ಹೇಳಿದಾಗ ಅವರ ನೆನಪುಶಕ್ತಿಗೆ ,ಹೃದಯ ಶ್ರೀಮಂತಿಗೆಗೆ ಮೆಚ್ಹಿ ಶರಣಾಗಿದ್ದೆ. ಸರಳ ಸಜ್ಜನಿಕೆಯ, ಪ್ರತಿಭಾವಂತ ಪಂಡಿತೋತ್ತಮರ ಈ ಲೇಖನ ಕೆಲವಾರು ದಿವಸಗಳಿಂದ ನಿರೀಕ್ಷೆಸುತ್ತಿದ್ದೆ. ಇಂತಹ ಅನುಭವ ಹಂಚಲು ತಮ್ಮಂಹವರಿಗೆ ಮಾತ್ರ ಸಾಧ್ಯ. ಮತ್ತೊಮ್ಮೆ, ಮಗದೊಮ್ಮೆ ಸಾಷ್ಟಾಂಗ ನಮಸ್ಕಾರಗಳು.

  [Reply]

 4. Anuradha Parvathi

  ಕಣ್ಣು ತುಂಬಿ ಬಂತು. ನಿಮ್ಮಂತ ಭಾಗ್ಯಶಾಲಿಗಳು ಬೇರೆ ಯಾರಿದ್ದಾರೆ? ಈ ದೇಶ, ಈ ಕಾಲದಲ್ಲಿ ನಾವೆಲ್ಲ ಹುಟ್ಟಿದ್ದಕ್ಕೆ ಎಷ್ಟು ಸಂಭ್ರಮ ಪಟ್ಟರೂ ಸಾಲದು. ಆ ಭಗವಂತನಿಗೆ ಕೋಟಿ ಕೋಟಿ ಪ್ರಣಾಮಗಳು.

  ಆಯುಷ್ಯದ ಒಂದೊಂದು ದಿನವೂ ಮುಗಿಯುತ್ತಿದ್ದಂತೆ ಇಂಥಾ ಗುರುಗಳ ಸೇವೆ ಮಾಡುವ ಒಂದೂಂದು ದಿನವೂ ಕಳೆದು ಹೋಗುತ್ತಿದೆಯಲ್ಲ ಎನ್ನುವ ದಿಗಿಲು. ಸೇವೆ ಮಾಡಿದ್ದು ಸಾಕಗಿಲ್ಲ, ಇನ್ನು ಮಾಡಬೇಕಿತ್ತು ಅನ್ನುವ ಭಾವನೆ.

  [Reply]

 5. Suma Nadahalli

  ಶಿಲ್ಪಿಯೊಬ್ಬ ದೇವರ ಮೂರ್ತಿಯನ್ನು ಕೆತ್ತಿ …ದೇವಸ್ತಾನದಲ್ಲಿ ಪ್ರತಿಸ್ಥಾಪನೆ ನಂತರ
  ಕೈಮುಗಿದು ಬೇಡುವಂತೆ ……….ಕಾಣಿಸುತ್ತಿದೆ ….

  ಗುರುವಿಗೆ ಗುರುವಾಗಿ ….ಗುರುತರ ಕಾರ್ಯ ಮಾಡಿ ….ಈಗ ಗುರುವಿನಲ್ಲಿ ‘ಹರಸು ಗುರುವೇ’ ಎಂದು ಬೇಡುವ ….ಅನುಭವ ಹೇಗಿರ ಬಹುದು ???
  ಊಹೆಗೂ ನಿಲುಕದ್ದು …!!!

  ಅತ್ಯದ್ಬುತ …ವಿಶೇಷ …….ಮೊನ್ನೆ ಮೊನ್ನೆ ನಡೆದ ಸತ್ಯ …ಇಂದು ಇತಿಹಾಸ ….ಸತ್ಯ ..ಸತ್ಯ ..ಸತ್ಯ !!!!!!!!!!

  ನಿಜವಾಗಿಯೂ ……..Great !!!!!!!!!!!!!!!!!!!!!!!
  ಇದಕ್ಕಿಂತ ಮಿಗಿಲಾಗಿ ಏನನ್ನು ಹೇಳಲಾಗದ ವಿಶೇಷ ಸಮ್ಮುಖ

  [Reply]

 6. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಮೈ ಮನಗಳು ರೋಮಾಂಚನಗೊಳ್ಳುತ್ತವೆ. ಹೃದಯ ತುಂಬಿ ವ್ಯಕ್ತಪಡಿಸಲಾಗದ ಭಾವನೆಗಳು ಏಳುತ್ತವೆ. ಪುಟ್ಟ ಮಗುವೊಂದು ಬೆಟ್ಟದೊಳಿತಿಗಾಗಿ ಪ್ರಾರ್ಥಿಸಿದಂತೆ “ನಿಮಗೂ ನಿಮ್ಮ ಕುಟುಂಬಕ್ಕೂ ಶ್ರೀಗುರುದೆವತಾನುಗ್ರಹ ಸದಾ ಇರಲಿ” ಎಂದು ಪ್ರಾರ್ಥನೆ.

  [Reply]

 7. shrinivas hegde

  shri satyanaaraayana sharmarige bhakti purvaka namaskaaragalu.

  elli ullekavaagiruva kelavu vishaya halavarige tilididru, neemminda jagatige gottagali ennuvudu guru sankalpave sari.

  ee lekana odida mele, onde ondu nenapige baruvudu,,adu enendare “Hare Raama”.

  [Reply]

 8. maruvala narayana

  ಅಂತರಂಗ ತೆರೆದಿಟ್ಫ್ತ ಲೇಖನ. ಓದಿದ ಮೇಲೆ ಬರುವ ಭಾವನೆಗಳಿಗೆ ಶಬ್ಫರೂಪ ನೀಡಲು ಸಾಧ್ಫ್ಯವಾಗುತ್ಫ್ತಿಲ್ಫ್ಲ.

  [Reply]

 9. seetharama bhat

  ಹರೇರಾಮ,

  ಚಾತುರ್ಮಾಸದ ಸ೦ದರ್ಬ ನೀಡುತ್ತಿದ್ದ ಮಾಸದ ಮುನ್ನುಡಿಯನ್ನು ಕೇಳಿದ್ದೆ
  ಇ೦ದಿನ ಈ ಸಮ್ಮಖದಲ್ಲಿ ಸಮಾಜಕ್ಕೆ ನೀವು ನೀಡಿದ ಮುನ್ನಡೆ ತಿಳಿದೆ
  ಪ್ರವಚನದೊದಿಗೆ ಮುನ್ನುಡಿಯನ್ನು ಸೇರಿಸಬೇಕಿತ್ತು ಎನ್ನಿಸಿತ್ತು.
  ಸಮ್ಮುಖ ಕ್ಕಿ೦ತ ಪ್ರಮುಖದಲ್ಲಿ ನೀವು ಬರೆದಿದ್ದರೆ ಸೂಕ್ತವೇನೋ ಅನ್ನಿಸತ್ತು.

  ಗುರುಗಳಿಗೆ ಗುರುಗಳಾದ ತಮಗೆ ಹರ್ತ್ಪೂರ್ವಕ ವ೦ದನೆಗಳು.

  [Reply]

 10. ಆತ್ಮಾರಾಮ

  ಆತ್ಮೋದ್ಧಾರಕನ ಆತ್ಮ ಶಕ್ತಿಯ ಹಿಂದಿನ ಆತ್ಮದ ಅಂತ:ಕರಣ ಪ್ರಮುಖವೇ. ಖಂಡಿತಾ ಅತಿಶಯೋಕ್ತಿಯಲ್ಲ. ಅಂತಹ ಅಂತ:ಹೃದಯಿಗೆ ಅನಂತ ಅಭಿವಂದನೆಗಳು.

  [Reply]

 11. संದೇशः।

  ॥हरे राम॥

  ಜಗದಗಲ ಇತಿಹಾಸಹೊಂದಿರುವ ಶ್ರೀಮಠದ ಬಗ್ಗೆ ಹಾಗೂ ಶ್ರೀಮಠದ ವರ್ತಮಾನಕೂಡ ಇತಿಹಾಸದಷ್ಟೇ ಭವ್ಯವಾಗಿರಬೇಕೆಂದು ಬಯಸುವ ಶ್ರೀಶ್ರೀಗಳ ಬಗ್ಗೆ ಹಲವು ವಿಚಾರಗಳನ್ನು’ಸಮ್ಮುಖ’ದಲ್ಲಿ ತಿಳಿಸಿದ್ದಕ್ಕೆ ಧನ್ಯವಾದಗಳು…

  ಸಾಗರದಷ್ಟು ವಿಶಾಲವಾದ ವಿಷಯಗಳನ್ನು ಹೊಂದಿರುವ ಶ್ರೀಮಠ ಅಂತೆಯೇ ಶ್ರೀಗುರುಗಳ ಬಗ್ಗೆ ತಿಳಿದುಕೊಂಡಷ್ಟೂ ಹೆಮ್ಮಯಾಗುತ್ತದೆ ಹಾಗೂ ಮನಸ್ಸಿಗೆ ಮುದನೀಡುತ್ತದೆ…

  [Reply]

 12. gopalakrishna pakalakunja

  ದಯವಿಟ್ಟು… ಮತ್ತೆ ಮತ್ತೆ ಇಂತಹ ವಿಚಾರ ಗಳನ್ನು ಹಂಚುವ ಕೃಪೆ ಮಾಡುವಿರಾ ?

  [Reply]

 13. K.N.BHAT

  ಶಿಲ್ಪಿ ಜಕಣಾಚಾರಿಗೆ ಕಡಿಮೆ ಅಲ್ಲದ ಮಹಾಶಿಲ್ಪಿ….ಶ್ರೀ ಸತ್ಯನಾರಾಯಣ ಶರ್ಮರಿಗೆ ಹಾರ್ದಿಕ ಧನ್ಯವಾದಗಳು.ತಮ್ಮ ಅಮೂಲ್ಯ ನೆನಪಿನ ಬುತ್ತಿಯನ್ನು ಇಡೀ ಸಮಾಜಕ್ಕೆ ಹಂಚಿದ್ದೀರಿ…ಚಾತುರ್ಮಾಸ್ಯದ ಸಂದರ್ಭಗಳಲ್ಲಿ ಶ್ರೀ ಮಠದ ಪರಂಪರೆಯ ಹಲವಾರು ತುಣುಕುಗಳನ್ನು ಬಿತ್ತರಿಸಿದ ತಾವು ಲೇಖನದ ಮೂಲಕ ಶ್ರೀ ಮಠದ ಇತಿಹಾಸ ಹಾಗು ಶ್ರೀ ಸಂಸ್ಥಾನದ ಪೂರ್ವಾಶ್ರಮದ ಚಿತ್ರಣವನ್ನು ಚಿತ್ರ ಸಹಿತ ಮನಮುತ್ತುವಂತೆ ಆತ್ಮೀಯವಾಗಿ ಬಣ್ಣಿಸಿದ್ದೀರಿ…ನಿಮ್ಮ ಧನ್ಯತೆಯೊಂದಿಗೆ ನಮ್ಮೆಲ್ಲರನ್ನು ಧನ್ಯರನ್ನಾಗಿಸಿದ್ದೀರಿ.
  ಹರೇ ರಾಮ…ಹರೇ ರಾಮ….

  [Reply]

 14. Venkateshwara KT Nooji

  ಹರೇ ರಾಮ,
  ವಿದ್ವಾನ್ ಸತ್ಯ್ನನಾರಾಯಣ ಶರ್ಮರು ಬರೆದ ಈ ಲೇಖನ ನಮ್ಮ ಶ್ರೀಗುರು ಯಾರೆಂಬುದನ್ನು ತೋರಿಸುತ್ತದೆ. ಇದು ಕೇವಲ net ನೋಡುವ ಭಾಗ್ಯವಂತರಿಗೆ ಮಾತ್ರವಲ್ಲದೆ ಎಲ್ಲಾ ಶಿಷ್ಯಭಕ್ತ ಭಾಗ್ಯವಂತರಿಗೂ ಸಿಗುವಂತೆ ಆಗಬೇಕು.
  ದೇವರನ್ನು ,ಮೋಕ್ಷದ ದಾರಿಯನ್ನು ,ಸನ್ಮಾರ್ಗವನ್ನು ಒಬ್ಬ ಗುರು ತೋರಿಸುವರು,ಇಲ್ಲಿ ನೋಡಿ ಶ್ರೀಗುರುವನ್ನು ಒಬ್ಬಗುರು ತೋರಿಸಿದ್ದಾರೆ.ಇಲ್ಲಿ ನಾವೆಲ್ಲಾ ಭಾಗ್ಯವಂತರು ಶ್ರೀಗುರುವು ಕಾಣದ ದೇವರ ಮಹಿಮೆಯನ್ನು ತಿಳಿಸುವರು,ಇಲ್ಲಿ ಗುರು ಕಾಣುವ ಶ್ರೀಗುರುವಿನ ಮಹಿಮೆಯನ್ನು ತೋರಿಸಿರುವರು. ಈ ಮಹಾಮಹಿಮ ಶ್ರೀಗುರುವಿನ ,ಶ್ರೀಗುರುಪೀಠದ ಸೇವೆಯ ಭಾಗ್ಯ ಪಡೆದ ನಾವೇ ಧನ್ಯರು.

  [Reply]

 15. sriharsha.jois

  ಪ್ರತಿಕ್ರಿಯಿಸಲು ಏನೂ ತೋರದು..
  ಬರಿಯ ಮನನ ಮಾತ್ರ ನಮ್ಮ ಕಾರ್ಯವಲ್ಲವೆ..?

  [Reply]

 16. madhyastharv

  ಹರೆರಾಮ- ಎನಂತ ಬಣ್ಣಿಸಲಿ ನಿಮ್ಮ ಲೆಖನವನ್ನು ? ಹರೇ ರಾಮ ಅಂತ ಮಾತ್ರ ಹೆಳಬಹುದು

  [Reply]

 17. Sharada Jayagovind

  Hareraama.
  ..Making of a Guru is a mysterious miracle…beyond the grasp of the limited human experience.Thank you for sharing …

  [Reply]

 18. Mohan Bhaskar

  ಆಹಾ!!… ಪ್ರಿಯ ಶರ್ಮರೇ,
  ಎಷ್ಟು ಆಪ್ತವಾದ ಮಾಹಿತಿ…ಎಷ್ಟು ಆನ೦ದ ನೀಡುತ್ತಿದೆ..ಇದಕ್ಕೆ ಪರ್ಯಾಯವ೦ತೂ ಜನ್ಮಾ೦ತರಕ್ಕೂ ಅಸಾಧ್ಯ…
  ನೀವು ಧನ್ಯರು..ನಮ್ಮನ್ನೂ ಧನ್ಯರನ್ನಾಗಿಸಿದಿರಿ..
  ನಿಮಗೆ ನಾವು ಕೃತಜ್ನರು…
  ಪ್ರಣಾಮಗಳು ..ಮೋಹನ ಭಾಸ್ಕರ ಹೆಗಡೆ

  [Reply]

  anuttara Reply:

  ಸಮ್ಮುಖಕ್ಕೆ ಪ್ರತಿಕ್ರಿಯಿಸಿದ ಎಲ್ಲರಿಗೂ ಹೄತ್ಪೂರ್ವಕಪ್ರಣಾಮಗಳು.
  ನನ್ನ ಬೆನ್ನು ಬಾಗುತ್ತಿದೆ.ನಾನು ಕುಗ್ಗುತ್ತಿದ್ದೇನೆ.ವಯಸ್ಸಿನ ಕಾರಣದಿಂದಲ್ಲ,ನಿಮ್ಮೆಲ್ಲರ ಪ್ರೀತಿ,ಅಭಿಮಾನಗಳಿಂದ, ಶ್ರೀಗೋಪಾಲಕೃಷ್ಣ ಪಕಳಕುಂಜರಂತಹ ಹಿರಿಯ ವಿದ್ವಾಂಸರ ಮಾತಿನಿಂದ.ಒಂದುಮಾತು ತಮ್ಮೆಲ್ಲರಲ್ಲಿ..”ಗುರು” ಪದ ತುಂಬ.. ತುಂಬ.. ದೊಡ್ಡದು.ಆ ಪದಕ್ಕೆ ಲಕ್ಷ್ಯ ಒಂದೇ.ಬೇರೆಡೆಗೆ ಅದರ ಬಳಕೆ ಸಲ್ಲ.ಇದು ನನ್ನ ಭಾವ.ನಾನು ವಿದ್ವಾಂಸನೂ ಅಲ್ಲ,ಮಾತುಗಾರನೂ ಅಲ್ಲ.ಶ್ರೀಮಠದ ಸಾಮಾನ್ಯ ಶಿಷ್ಯ. ನಾನು ಪಾಠ ಮಾಡಿದ್ದೇನೆಂದುಕೊಂಡರೆ ಅದು ದೊಡ್ಡ ಭ್ರಮೆಯಷ್ಟೆ.ಈ ಪೀಠಕ್ಕೆ ಬಂದವರೆಲ್ಲರೂ “ವಿಕ್ರಮಾರ್ಜಿತ ಸತ್ವಸ್ಯ ಸ್ವಯಮೇವ ಮೃಗೇಂದ್ರತಾ”ಎಂಬ ಮಾತಿಗೆ ದೃಷ್ಠಾಂತರಾದ ಮಹಾಮಹಿಮರು.ಆನೆಗೆ ದಾರಿ ಬೇಕಿಲ್ಲ.ಸಿಂಹಕ್ಕೆ ಯಾರೂ ಅಭಿಷೇಕ ಮಾಡುವುದಿಲ್ಲ.ಅದು ಸ್ವಶಕ್ತಿಯಿಂದಲೇ ಲಭ್ಯ.ಹಿರಿಯರು ಮಾಡಿದ ಪುಣ್ಯದಿಂದ ನನಗೆ ಸಾಮೀಪ್ಯಭಾಗ್ಯ ಸಿಕ್ಕಿತ್ತು ಅಷ್ಟೆ.ಪ್ರಭು ಶ್ರೀರಾಮಚಂದ್ರ ಎಲ್ಲಿ ಎಷ್ಟುಕಾಲ ಯಾರಲ್ಲಿ ವಿದ್ಯಾಭ್ಯಾಸ ಮಾಡಿದ..ಎಂಬುದಕ್ಕೆ ವಾಲ್ಮೀಕಿಮಹರ್ಷಿಗಳ ಉತ್ತರವೇನು..?ನೋಡಿ..ನಿಮಗೇ ಅರಿವಾಗುತ್ತದೆ.ಅನುರಾಧಾ ಪಾರ್ವತಿಯವರ ಮಾತಿನಂತೆ ನಾವು ಈ ಕಾಲದಲ್ಲಿ ಇದ್ದೇವೆಂಬುದೇ ನಮ್ಮ ಬಹುದೊಡ್ಡ ಭಾಗ್ಯ.ಇರವು ಸಂಪತ್ತಲ್ಲ ಇರವಿನ ಅರಿವೇ ಸಂಪತ್ತು ಎನ್ನುತ್ತಾರೆ ತಿಳಿದವರು.ಈ ಅರಿವಿಗೆ ಮರವೆಯ ಅರಿವೆ ಮುಸುಕದಿರಲಿ.ಮತ್ತಷ್ಟು ಲೇಖನ ಕೇಳಿದ್ದೀರಿ..ಕಾಲಬರಲಿ..ಮಾಗಿದಷ್ಟೂ ಮಾಧುರ್ಯ ಅಲ್ಲವೇ..?ಉಕ್ಕು-ಸೊಕ್ಕು ಎರಡೂ ಒಂದೇ ಅನ್ನುತ್ತಾರೆ ಪ್ರಾಜ್ಜರು.ತಿಳಿ ಪಕ್ವತೆಯ ಲಕ್ಷಣ.ತಿಳಿಯಿಲ್ಲದೆ ತಿಳಿಯಾಗುವುದಿಲ್ಲ,ತಿಳಿಯುವುದೂ ಇಲ್ಲ.ಅದ್ವೈತ-ಅಮೃತತ್ವ ಇದೆಲ್ಲ ಶಾಸ್ತ್ರನುಡಿ ಪಕ್ಕಕ್ಕಿರಲಿ-ಪ್ರಭುವಿನ ದಾಸ್ಯದಲ್ಲಿರುವ ಆನಂದಬೇರಾವುದರಲ್ಲಿಯೂ ಇಲ್ಲ.ಇದು ನನ್ನ ಅನುಭವ..ಹರೇರಾಮ ನೌಕೆಯ ನಿಮ್ಮಂತಹ ಆತ್ಮೀಯರ ಜೊತೆ ಸಹಗಮನ ನನಗೂ ತುಂಬ ಖುಷಿಯೇ.ಮತ್ತೊಮ್ಮೆ ನಿಮ್ಮೆಲ್ಲರಿಗೂ ಹಾರ್ದಿಕನಮನಗಳು.
  ಸತ್ಯನಾರಾಯಣ ಶರ್ಮಾ,ಗೋಕರ್ಣ.

  [Reply]

  Raghavendra Narayana Reply:

  ವಿನಯವ೦ತ ವಿದ್ವಾ೦ಸರಿಗೆ ಮಾತ್ರ ಈ ರೀತಿ ಬರೆಯಲು ಸಾಧ್ಯ. ಬರವಣಿಗೆ ಶೈಲೆ ಅದ್ಭುತವಾಗಿದೆ, ಹರೇರಾಮದಲ್ಲಿ ಹೆಚ್ಚು ಹೆಚ್ಚು ಬರೆಯಬೇಕಾಗಿ ಕೇಳಿಕೊಳ್ಳುತ್ತೇವೆ.
  .
  ಗುರುಗಳು ಯಾವಾಗಲು ಹೇಳುವ ಸಾಲುಗಳು ನೆನಪಿದೆಯೆ ಯಾರಿಗಾದರು.. ????
  ಎಲ್ಲೆಲ್ಲಿ ಬಾಗಲೈ ನನ್ನ _______ ಅಲ್ಲಲ್ಲಿ ಕಾಣಲೈ ಗುರು ನಿನ್ನ _____________
  .
  ಶ್ರೀ ಗುರುಭ್ಯೋ ನಮಃ

  [Reply]

  Raghavendra Narayana Reply:

  “ಎಲ್ಲೆಲ್ಲಿ ಅಡ್ಡಾಡುವುದೆನ್ನ ಮನವೋ ಅಲ್ಲಲ್ಲಿ ಕಾಣಲೈ ಗುರು ನಿನ್ನ ತನುವು. ಎಲ್ಲಿ ತಲೆಬಾಗಿಸುವೆನಲ್ಲಲ್ಲಿ ನಿತ್ಯ ಕಾಣಲೈ ಗುರು ನಿನ್ನ ಪದಕಮಲ ಸತ್ಯ” – ಇ೦ದು ತಲೆಯ ಮುಟ್ಟಿತು, ಹೃದಯ ತಟ್ಟಿತು, ವೈಶಾಲ್ಯ ಮತ್ತೂ ಹರಡಿತು.. ಅಲ್ಲೆಲ್ಲೂ ಗುರುವಿನ ಪದಕಮಲ..
  .
  ಶ್ರೀ ಗುರುಭ್ಯೋ ನಮಃ

  [Reply]

 19. Shubha Bhat

  ಗುರುವಿನ ಬಗ್ಗೆ ಮತ್ತಷ್ಟು ಮಾಹಿತಿ ನೀಡಿ ನಮ್ಮನ್ನು ಧನ್ಯನಾಗಿಸಿದಿರಿ. ಎಷ್ಟು ಓದಿದರು ಸಾಲದು. ಹರೇ ರಾಮ.

  [Reply]

  Anuradha Parvathi Reply:

  hareraama

  [Reply]

 20. Ganesh Bhat Madavu

  ಲೇಖನ ಓದುತ್ತಾ ಹೋದಂತೆ ಮೈ ರೋಮಾಂಚನವಾಯಿತು.ಎಷ್ಟೋ ಅವ್ಯಕ್ತವಾದ ವಿಷಯಗಳನ್ನು ತಿಳಿಸಿ ಗುರು ಪೀಠದ ಮಹಿಮೆಯನ್ನು ಶಿಷ್ಯಕೋಟಿಗೆ ತಮ್ಮ ಅನುಭವಗಳನ್ನು ಈ ಮೂಲಕ ವ್ಯಕ್ತಪಡಿಸಿದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು.ಹರೇರಾಮ.

  [Reply]

 21. Yajnesh

  ಗತಕಾಲದ ನೆನಪುಗಳು ಮತ್ತೆ ಮರುಕಳಿಸಿತು. ಹುಟ್ಟು, ಬಾಲ್ಯ, ಸನ್ಯಾಸ ಸ್ವೀಕಾರ, ನಂತರದ ಘಟನೆಗಳು ಎಲ್ಲವೂ ಕಣ್ಮುಂದೆ ಬಂತು. ಸ್ವಲ್ಪ ಹೊತ್ತು ನಾನೆಲ್ಲೋ ಇದ್ದಿದ್ದೆ. ಮತ್ತೆ ಮತ್ತೆ ಓದೋಣವೆನಿಸಿತು. ಅದೇ ಸವಿನೆನಪಲ್ಲಿ ಇದ್ದರೆಷ್ಟು ಚೆಂದ.

  ಶ್ರೀಗಳವರಿಗೆ ಮತ್ತು ಜಗದೀಶ ಶರ್ಮಾರ ವ್ಯಕ್ತಿತ್ವಕ್ಕೆ ಉತ್ತಮ ತಳಹದಿಯಿತ್ತ, ತಿದ್ದಿ ತೀಡಿದ ನಿಮಗೆ ನಮನಗಳು.

  [Reply]

 22. mayakk

  nimma palige,,,,yogyathe yoga eraduu sikkide allavee?
  ,,,,,,,
  nivu thumbaa punyavantharu,,,,,,,,

  enthaa romaanchana,,,,,,,
  nimage nanna vandanegalu,,,,,

  [Reply]

 23. Geetha Manjappa

  ಹರೇರಾಮ,

  ಈ ಲೇಖನ ಧರ್ಮಭಾರತಿಯಲ್ಲೂ ಪ್ರಕಟವಾಗಿ ಎಲ್ಲರ ಮನೆ ಮನದಲ್ಲಿ ಉಳಿಯುವಂತಾಗಬೇಕು.ಶ್ರೀಮಠದ ಎಲ್ಲಾ
  ಶಿಷ್ಯರೂ ಓದಲೇಬೇಕಾದ ಲೇಖನವಿದು.
  ಧನ್ಯವಾದಗಳು.

  [Reply]

 24. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು,

  ಶಿಲ್ಪಕ್ಕೆ ವಂದಿಸಲೋ,ಶಿಲ್ಪಿಗೆ ವಂದಿಸಲೋ,ಗುಡಿಯೋಳಗಿರುವ ದೇವರಿಗೆ ವಂದಿಸಲೋ, ಅಥವಾ ಯೋಗ್ಯವಾದದ್ದನ್ನೆಲ್ಲಾ ಒಂದೆಡೆ ಸೇರಿಸಿದ ಆ ವಿಚಿತ್ರ ಸತ್ಯಕೆ ವಂದಿಸಲೋ ನಾನರಿಯೆ…. “ಅಂದು ನೀವನುಭವಿಸಿದ ಶಿಕ್ಷೆ ನಮ್ಮೆಲ್ಲರ ಭಾಗ್ಯದ ಬಾಗಿಲಾಗಿರುವುದು ಸತ್ಯ….”. ಇದಕ್ಕಾಗಿ ನಾವು ನಿಮಗೆ ಅದೆಷ್ಟು ಕೋಟಿ ಕೋಟಿ ಧನ್ಯವಾದಗಳನ್ನು ಸಮರ್ಪಿಸಿದರೂ ಕಡಿಮೆಯೇ….

  [Reply]

 25. ಸಿ.ಮಹಾದೇವ ಶಾಸ್ತ್ರಿ..

  ಪ್ರಣಾಮಗಳು, ಈ ಲೇಖನ ಒಂದು ಅದ್ಭುತ ಅನುಭವ ನೀಡುತ್ತದೆ. ವೈಜ್ನಾನಿಕವೂ ಅತ್ಯಾಧುನಿಕ ವೆಂದು ಭ್ರಮಿಸಿರುವ ಇಂದಿನ ಜೀವನ ಪದ್ಧತಿ ಕಾಲದಲ್ಲಿ ದಿಗ್ಗನೆ ಗೋಚರಿಸಿದ ತೇಜಸಿನಂತೆ ಅವತರಿಸಿದ ನಮ್ಮ ಹೆಮ್ಮಯ ಪೀಠಾಧಿ ಪತಿ ಗಳ ವಿದ್ಯಾರ್ಥಿ ಜೀವನ ಮೈ ನವಿರೇಳಿಸುವ ದೃಶ್ಯ ವೈಭವ ಮನ ದಲ್ಲಿ ಮೂಡುವಂತೆ ಮಾಡಿದ ಈ ವ್ಯವಸ್ಥೆ ಯ ಎಲ್ಲರಿಗೂ ನನ್ನ ಪ್ರಣಾಮ ಗಳೂ..
  ಮಂಗಳೂರು ಹೋಬಳೀಗೆ ಮೊದಲ ಬೇಃಟಿ ಸಂದರ್ಭ ದಲ್ಲಿ ಆಕಸ್ಮಕವಾಗಿ ನನ್ನ ಮಗ ನ ಉಪನಯನ ಸಂಸ್ಕಾರಕ್ಕೆ ಚಿತ್ತೈಸಿ “””ತಾವು ಪೀಠಾ ದಿಪತಿ ಗಳಾದ ಮೇಲೆ ಆಶೀರ್ವದಿಸಿದ ಮೊದಲ ವಟು ಈತ ಈ ಪುತ್ತೂರು ಬೆಳೆದಂತೆ ಈತನೂ ಬೆಳೆಯುತ್ತಾ ಬೆಳಗಲಿ “” (1999) ಎಂದು ನಮ್ಮನ್ನ ಅನುಗ್ರಸಿದ ನಮ್ಮ ಭಾಗ್ಯಕ್ಕೆ ಎಣೆ ಇಲ್ಲಾ..

  [Reply]

  satyanarayana sharma. Reply:

  mecchikege dhanyavaadagalu.

  [Reply]

 26. ಶಂಭು ಭಟ್

  ಪರಮ ಪೂಜ್ಯ ಶ್ರೀಗಳ ಪಾದ ಕಮಲಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳು. ನನ್ನ ತಮ್ಮ ದಿ. ರವೀಂದ್ರನು ಕೂಡ ಅದೇ ಸಮಯದಲ್ಲಿ ಗೋಕರ್ಣದಲ್ಲಿ ಸಂಸ್ಕೃತ ಓದುತ್ತಿದ್ದು, ಪೂಜ್ಯ ಶ್ರೀಗಳ ಪೂರ್ವಾಶ್ರಮದ ಒಡನಾಟದಲ್ಲಿದ್ದನೆಂದು ನನ್ನ ತಿಳುವಳಿಕೆ.
  ಗುರುಚರಣಗಳಿಗೆ ಅನಂತ ಪ್ರಣಾಮಗಳು………..

  [Reply]

 27. Harihar Bhat, Bangalore.

  ಭಗವಂತ ಸರ್ವಾಂತರ್ಯಾಮಿ. ಕಣ ಕಣ ದಲ್ಲೂ ಅವನೇ ಅಂದರೆ ಅದೇ ” ತತ್ ” . ಆ “ತತ್ ”

  ಪ್ರೇರಣೆಯಿಲ್ಲದೆ ಏನೂ ಇಲ್ಲ. ಶ್ರೀ ಶ್ರೀ ಗಳ ಗುರುಗಳಿಗೆ ಪ್ರೇರಣೆಯಾಗಿದೆ. ಅಕ್ಷರ ರೂಪದಲ್ಲಿ ಪ್ರಕಟ

  ವಾಗಿದೆ. ಶಿಷ್ಯ ಸಮೂಹದ ಭಾಗ್ಯ.

  ಹರಿಹರ ಭಟ್, ಬೆಂಗಳೂರು.
  september 29, 2012.

  [Reply]

 28. Shreepada Rao

  ಶ್ರೀಗಳನ್ನು ಕಡೆದು ನಮ್ಮ ಮು೦ದೆ ಇಟ್ಟ ಈ ಪರಿಗೆ ತಮಗೆ ನಮೋನ್ನಮಃ. ಇನ್ನೇನು ಹೇಳಲು ಸಾಧ್ಯ ನನ್ನಿ೦ದ..

  [Reply]

 29. Jayalakshmi Bhat kukkila

  ನೀ ಗುರುವಿನೊಳಗೋ…. ಗುರುವು ನಿನ್ನೊಳಗೊ….. ಪ್ರಸ್ತುತ ಸಂದರ್ಭದಲ್ಲಂತೂ ಸಮಾಜ ಪ್ರತಿಯೊಬ್ಬರಿಗೂ ತಲುಪಬೇಕಾದ ಲೇಖನ… ಅದ್ಭುತ!!! ನಿಜಕ್ಕೂ ನಿಮ್ಮೊಂದಿಗೆ ನಮ್ಮನ್ನೂ ಧನ್ಯರಾಗಿಸಿದ್ದೀರಿ!!! ಎಂತಹ ಅದ್ವೈತ ಭಕ್ತಿ!!! ಹೆಮ್ಮೆಯೆನಿಸುತ್ತಿದೆ ನಮಗೆ… ಇಂತಹ ಗುರುಪರಂಪರೆಗೆ…. ಸುಮಾ ನಾಡಹಳ್ಳಿಯವರು ಹೇಳಿದಂತೆ… ಶಿಲ್ಪಿಯೊಬ್ಬ ದೇವರ ಮೂರ್ತಿಯನ್ನು ಕೆತ್ತಿ …ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ನಂತರ ಕೈಮುಗಿದು ಬೇಡುವಂತೆ ……….ಕಾಣಿಸುತ್ತಿದೆ ….
  ಗುರುವಿಗೆ ಗುರುವಾಗಿ ….ಗುರುತರ ಕಾರ್ಯ ಮಾಡಿ ….ಈಗ ಗುರುವಿನಲ್ಲಿ ‘ಹರಸು ಗುರುವೇ’ ಎಂದು ಬೇಡುವ ….ಅನುಭವ ಹೇಗಿರ ಬಹುದು ??? ಊಹೆಗೂ ನಿಲುಕದ್ದು …!!! ಏನೆಂದು ವರ್ಣಿಸಲಿ??? ಶರಣು ಶರಣು….

  [Reply]

 30. gshegde

  Harerama….No word to tell….. Harerama…..

  [Reply]

Leave a Reply

Highslide for Wordpress Plugin