ಶ್ರೀಶಾರದಾ ಭುಜಂಗಪ್ರಯಾತಾಷ್ಟಕಮ್

ಶೃಂಗೇರಿ ಶಾರದಾಂಬಾ

ಶೃಂಗೇರಿ ಶಾರದಾಂಬಾ

 

ಹರೇರಾಮ.

ಶ್ರೀ ಆದಿ ಶಂಕರಾಚಾರ್ಯರಿಂದ ರಚಿತವಾದ ಶೃಂಗೇರೀ ಶಾರದಾಂಬೆಯ ಸ್ತೋತ್ರ ಶ್ರೀ ಶಾರದಾ ಭುಜಂಗಪ್ರಯಾತಾಷ್ಟಕಮ್.

ನಾಲ್ಕು ಯಗಣಗಳ ಒಂದು ವೃತ್ತ – ಭುಜಂಗಪ್ರಯಾತ. ಈ ಸುಂದರ ಶಬ್ಧಗಳ ಜೋಡಣೆಯಲ್ಲಿ ರಚಿತವಾದ ವಿದ್ಯಾಧಿದೇವತೆಯ ವರ್ಣನೆಯನ್ನು ಮಾಡಿ ಶಾರದಾದೇವಿಯ ಕೃಪೆಗೆ ಪಾತ್ರರಾಗಿರಿ ಎಂಬ ಹಾರೈಕೆ.

~
ಧ್ವನಿಃದೀಪಿಕಾ ಭಟ್, ಬೆಂಗಳೂರು
ರಚನೆಃ ಶ್ರೀ ಆದಿ ಶಂಕರಾಚಾರ್ಯರು

~
ಶ್ರೀ ಶಾರದಾಭುಜಂಗಪ್ರಯಾತಾಷ್ಟಕಮ್
ಸುವಕ್ಷೋಜಕುಂಭಾಂ ಸುಧಾಪೂರ್ಣಕುಂಭಾಂ
ಪ್ರಸಾದಾವಲಂಬಾಂ ಪ್ರಪುಣ್ಯಾವಲಂಬಾಮ್ |
ಸದಾಸ್ಯೇಂದುಬಿಂಬಾಂ ಸದಾನೋಷ್ಠಬಿಂಬಾಂ
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||೧||

[ವಿಶ್ವಪೋಷಣೆಗಾಗಿ ದೇವಿ ಶಾರದೆ ಅಮೃತಪೂರ್ಣವಾದ ಸ್ತನಯುಗ್ಮವನ್ನು ಧರಿಸಿದ್ದಾಳೆ.
ಸದಾ ಪ್ರಸನ್ನ ಮುಖಮುದ್ರೆಯಿಂದ ಕೂಡಿದ ಆಕೆ ಪುಣ್ಯವಂತರಿಗೆ ಆಶ್ರಯದಾತಳು.
ಚಂದ್ರಬಿಂಬದಂಥ ಮುಖಮಂಡಲ, ಅಮೃತವನ್ನು ಸೂಸುತ್ತಿರುವ ತುಟಿಗಳಿಂದ ಸದಾ ವರದಾನದ ಮಾತುಗಳು, ಇಂಥ ತಾಯಿ ಶಾರದೆಯನ್ನು ನಾನು ಸದಾ ಭಜಿಸುತ್ತೇನೆ.]

ಕಟಾಕ್ಷೇ ದಯಾರ್ದ್ರಾಂ ಕರೇ ಜ್ಞಾನಮುದ್ರಾಂ
ಕಲಾಭಿರ್ವಿನಿದ್ರಾಂ ಕಲಾಪೈಃ ಸುಭದ್ರಾಮ್ |
ಪುರಸ್ತ್ರೀಂ ವಿನಿದ್ರಾಂ ಪುರಸ್ತುಂಗಭದ್ರಾಂ
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||೨||

[ಶಾರದಾಂಬೆಯ ಕಣ್ಣುಗಳು ಸದಾ ಕರುಣೆಯಿಂದ ಆರ್ದ್ರವಾಗಿವೆ.
ಕೈಯಲ್ಲಿ ಜ್ಞಾನ ಮುದ್ರೆಯನ್ನು ಧರಿಸಿದ್ದಾಳೆ.
ಚತುಷ್ಷಷ್ಠಿ ಕಲೆಗಳಿಂದ ಸದಾ ಪರಿಪೂರ್ಣಳಾದ ಆಕೆ ನವಿಲುಗರಿಗಳಿಂದ ಸುಶೋಭಿತಳು.
ತುಂಗಭದ್ರಾ ತೀರವಾಸಿನಿ, ಚೈತನ್ಯದ ಚಿಲುಮೆ ತ್ರಿಪುರ ಸುಂದರಿಯನ್ನು ನಾನು ಸದಾ ಧ್ಯಾನಿಸುತ್ತೇನೆ.]

ಲಲಾಮಾಂಕಫಾಲಾಂ ಲಸದ್ಗಾನಲೋಲಾಂ
ಸ್ವಭಕ್ತೈಕಪಾಲಾಂ ಯಶಃ ಶ್ರೀಕಪೋಲಾಮ್ |
ಕರೇ ತ್ವಕ್ಷಮಾಲಾಂ ಕನತ್ಪ್ರತ್ನಲೋಲಾಂ
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||೩||

[ಶಾರದಾಮಾತೆ ಹಣೆಯಲ್ಲಿ ಸುಂದರ ತಿಲಕವನ್ನು ಧರಿಸಿದ್ದಾಳೆ.
ಇಂಪಾದ ಗಾನದಲ್ಲಿ ಆಸಕ್ತಳು, ಭಕ್ತರನ್ನು ಕಾಪಾಡುವವಳು, ಕೀರ್ತಿಮಂತವಾದ ಕಪೋಲಗಳಿಂದ ರಮಣೀಯಳು, ಕೈಯಲಿ ತೂಗುತ್ತಿರುವ ಜಪಸರವನ್ನು ಧರಿಸಿದ್ದಾಳೆ.
ಇವಳನ್ನು ನಾನು ಧ್ಯಾನಿಸುತ್ತೇನೆ.]

ಸುಸೀಮಂತವೇಣೀಂ ದೃಶಾ ನಿರ್ಜಿತೈಣೀಂ
ರಮತ್ಕೀರವಾಣೀಂ ನಮದ್ವಜ್ರಪಾಣಿಮ್ |
ಸುಧಾಮಂಥರಾಸ್ಯಾಂ ಮುದಾ ಚಿಂತ್ಯವೇಣೀಂ
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||೪||

[ಶಾರದಾದೇವಿಯ ಬೈತಲೆ ಹಾಗೂ ಕೇಶರಾಶಿ ಸುಂದರವಾದವುಗಳು.
ಆಕೆಯ ಕಣ್ಣಿನ ಸೌಂದರ್ಯ ಹೆಣ್ಣು ಜಿಂಕೆಯ ನೋಟವನ್ನು ಮೀರಿಸುವಂತಹದು.
ಆಕೆಯ ಮಾತು ಗಿಣಿಯ ಮಾತಿಗಿಂತ ಮೋಹಕವಾದದ್ದು. ದೇವೇಂದ್ರಾದಿಗಳೂ ಆಕೆಯ ಮುಂದೆ ಬಗ್ಗುತ್ತಾರೆ.
ಅಮೃತಪಾನದಿಂದಾಗಿ ಆಕೆಯ ಮುಖದಲ್ಲಿ ಜಾಢ್ಯವಾವರಿಸಿದಂತೆ ತೋರುತ್ತದೆ. ಆಕೆಯ ಕೇಶರಾಶಿಯನ್ನು ನೋಡುವುದೇ ಒಂದು ಸಂತೋಷದ ಕೆಲಸ.
ಇಂಥ ತಾಯಿಯನ್ನು ನಾನು ವಂದಿಸುತ್ತೇನೆ.]

ಸುಶಾಂತಾಂ ಸುದೇಹಾಂ ದೃಗಂತೇ ಕಚಾಂತಾಂ
ಲಸತ್ಸಲ್ಲತಾಂಗೀಮನಂತಾಮಚಿಂತ್ಯಾಮ್ |
ಸ್ಮರೇತ್ತಾಪಸೈಃ ಸರ್ಗಪೂರ್ವಸ್ಥಿತಾಂ ತಾಂ
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||೫||

[ದೇವಿ ಶಾರದೆ ಶಾಂತ ಸ್ವರೂಪಿಣಿ, ಬಳುಕುವ ಬಳ್ಳಿಯಂತಹ ಸುಂದರ ದೇಹ ಅವಳದು.
ಆಕೆಯ ಕೇಶಪಾಶ ಕಣ್ಣುಗಳ ತುದಿಯವರೆಗೆ ಹರಡಿಕೊಂಡಿದೆ.
ಆದಿ ಅಂತ್ಯಗಳಿಲ್ಲದ ಆಕೆ ನಮ್ಮ ಮನಸ್ಸಿಗೆ ನಿಲುಕದವಳು.
ಸೃಷ್ಟಿಗಿಂತಲೂ ಮುಂಚೆಯೇ ಇದ್ದ ಆಕೆಯನ್ನು ತಪಸ್ವಿಗಳು ಧ್ಯಾನ ಮಾಡುತ್ತಾರೆ. ಆ ತಾಯೊಯನ್ನು ನಾನು ಸ್ಮರಿಸುತ್ತೇನೆ]

ಕುರಂಗೇ ತುರಂಗೇ ಮೃಗೇಂದ್ರೇ ಖಗೇಂದ್ರೇ
ಮರಾಲೇ ಮದೇಭೇ ಮಹೋಕ್ಷೇಧಿರೂಡಾಮ್ |
ಮಹತ್ಯಾಂ ನವಮ್ಯಾಂ ಸದಾ ಸಾಮರೂಪಾಂ
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||೬||

[ಶಾರದಾದೇವಿಯು ನಾನಾ ದೇವತೆಗಳ ಶಕ್ತಿರೂಪಳಾಗಿ ನಾನಾ ಆಕಾರಗಳನ್ನು ತಳೆದು ಜಿಂಕೆ, ಕುದುರೆ, ಸಿಂಹ, ಗರುಡ, ಹಂಸ, ಆನೆ, ಎತ್ತು, ಮುಂತಾದವುಗಳನ್ನು ತನ್ನ ವಾಹನವನ್ನಾಗಿ ಮಾಡಿಕೊಳ್ಳುತ್ತಾಳೆ.
ಮಹಾನವಮಿಯಂದು ಶಾಂತಸ್ವರೂಪದಿಂದ ಶೋಭಿಸುತ್ತಾಳೆ. ಆ ಮಾತೆಗೆ ನನ್ನ ನಮಸ್ಕಾರ.]
ಜ್ವಲತ್ಕಾಂತಿವಹ್ನಿಂ ಜಗನ್ಮೋಹನಾಂಗೀಂ
ಭಜನ್ಮಾನಸಾಂಭೋಜಸುಭ್ರಾಂತಭೃಂಗೀಮ್ |
ನಿಜಸ್ತೋತ್ರಸಂಗೀತನೃತ್ಯಪ್ರಭಾಂಗೀಂ
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||೭||

[ಶಾರದಾದೇವಿಯ ಶರೀರ ಅಗ್ನಿಯ ತೇಜಸ್ಸಿನಂತೆ ಕಾಂತಿಪೂರ್ಣವಾದದ್ದು.
ಲೋಕಮೋಹಕವಾದ ಸೌಂದರ್ಯದಿಂದ ಕೂಡಿದ್ದು, ಕಮಲದಲ್ಲಿ ದುಂಬಿ ಹಾರಾಡುವಂತೆ ದೇವಿಯು ಭಕ್ತರ ಮನಸ್ಸಿನಲ್ಲಿ ಸುಳಿದಾಡುತ್ತಾಳೆ.
ಅವಳನ್ನೇ ಕುರಿತಾದ ಸಂಗೀತ-ಸ್ತೋತ್ರ-ನೃತ್ಯಗಳಿಂದ ಸಂತುಷ್ಟಳಾದ ಅವಳ ಶರೀರ ಬೆಳಗತೊಡಗುತ್ತದೆ. ಆ ಮಾತೆಯನ್ನು ನಾನು ಸದಾ ಪೂಜಿಸುತ್ತೇನೆ.]

ಭವಾಂಭೋಜನೇತ್ರಾಜಸಂಪೂಜ್ಯಮಾನಾಂ
ಲಸನ್ಮಂದಹಾಸಪ್ರಭಾವಕ್ತ್ರಚಿಹ್ನಾಮ್ |
ಚಲಚ್ಚಂಚಲಾಚಾರುತಾಟಂಕಕರ್ಣಾಂ
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||೮||

[ಹರಿಹರ ಬ್ರಹ್ಮರು ಶಾರದಾದೇವಿಯನ್ನು ಆರಾಧಿಸುತ್ತಾರೆ.
ಆಕೆಯ ಮಂದಹಾಸದ ಕಾಂತಿ ಮುಖವನ್ನೆಲ್ಲ ಬೆಳಗಿದೆ.
ಕಿವಿಯಲ್ಲಿ ಸದಾ ಅಲ್ಲಾಡುತ್ತಿರುವ ಕರ್ಣಾಭರಣಗಳಿವೆ.
ಅಂಥ ನನ್ನ ತಾಯಿ ಶಾರದೆಯನ್ನು ನಾನು ಸದಾ ಭಜಿಸುತ್ತೇನೆ.]

~*~

ಹಾಡಿದವರುಃ ದೀಪಿಕಾ ಭಟ್, ಬೆಂಗಳೂರು.

ಆಡಿಯೋ ಸಹಕಾರಃ oppanna.com

(ಸಂಗ್ರಹಃ ಉಂಡೆಮನೆ ಸುಬ್ರಹ್ಮಣ್ಯ ಕುಮಾರ್ )

Facebook Comments