ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.

ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಶ್ರೀಗುರು ಪರಂಪರೆಯಲ್ಲಿ ನಮ್ಮನ್ನು ಅನುಗ್ರಹಿಸುತ್ತಾ ಬಂದಿರುವ ಎಲ್ಲ ಗುರುಗಳ ಅನುಗ್ರಹ ನಮ್ಮೆಲ್ಲರ ಮೇಲಿರಲಿ.

ಹರೇರಾಮ.

~

ಜ್ಞಾನಸುಮ 2

ಶ್ರೀಗುರುಕೃಪೆ ಸದಾ ಇರಲಿ..

ಶ್ರೀಗುರುಕೃಪೆ ಸದಾ ಇರಲಿ..

ಸನಾತನ ಧರ್ಮದ ಭವ್ಯ ಪರಂಪರೆ

ಶ್ರೀ ಎದುರ್ಕಳ ಕೆ. ಶಂಕರನಾರಾಯಣ ಭಟ್

ಪುಣ್ಯಭೂಮಿ ಭಾರತದಲ್ಲಿ ಪ್ರಕಾಶಗೊಂಡು ಪರಂಪರಾಗತವಾಗಿ ಜನಮನದಲ್ಲಿ ನೆಲೆಗೊಂಡು ಜೀವನದಲ್ಲಿ ಹಾಸುಹೊಕ್ಕಾಗಿ ಪ್ರಚಾರಗೊಳ್ಳುತ್ತಾ ಬಂದಿರುವ ಸನಾತನ ಧರ್ಮವು ಜಗತ್ತಿನ ಧರ್ಮಗಳಲ್ಲೆಲ್ಲಾ ಅತ್ಯಂತ ಪುರಾತನವಾದುದಾಗಿದೆ. ಹಾಗಿದ್ದರೂ ಅದು ನಿತ್ಯನೂತನವಾಗಿದೆ. ಸನಾತನ ಧರ್ಮದ ಪ್ರಭಾವವು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಕೂಡ ಜನಜೀವನದಲ್ಲಿ ವಿಶೇಷವಾಗಿ ಉಂಟಾಗಿದೆ. ಪೂರ್ವಪಶ್ಚಿಮ ರಾಷ್ಟ್ರಗಳಲ್ಲಿ ಜಾತಿ-ಜನಾಂಗಗಳ ಬೇಧವಿಲ್ಲದೆ ಸನಾತನ ಧರ್ಮದ ತತ್ತ್ವ – ಆದರ್ಶಗಳಿಗೆ ಅದರ ಉಜ್ವಲ ಉದಾಹರಣೆಯಾಗಿ ಬಾಳಿ ಬೆಳಗಿದ, (ಇಂದಿಗೂ ಬೆಳಗುತ್ತಿರುವ) ಆಚಾರ್ಯ ಸ್ವಾಮಿಗಳು, ಸಾಧುಸಂತರು, ಮಹಾಪುರುಷರ ಜೀವನ ಸಂದೇಶಗಳಿಗೆ ಕೋಟ್ಯಂತರ ಮಂದಿ ಆಕರ್ಷಿತರಾಗಿರುತ್ತಾರೆ.

ಸನಾತನ ಧರ್ಮವನ್ನು ರೂಢಿಯಲ್ಲಿ ಹಿಂದೂ ಧರ್ಮ ಎಂದು ಕರೆಯಲಾಗುತ್ತಿದ್ದು ಈ ಹೆಸರು ಇತಿಹಾಸ ಕಾಲದಲ್ಲಿ ಕೂಡಿ ಬಂದಿರುತ್ತದೆ. ಸಿಂಧೂ ನದಿಯ ತೀರದಲ್ಲಿ ವಾಸಿಸುತ್ತಿದ್ದ ನಮ್ಮ ಹಿರಿಯರನ್ನು ಪರ್ಸಿಯನ್ನರು ಹಿಂದುಗಳು ಎಂದು ಕರೆದರು. ಹಿಂದುಗಳ ಧರ್ಮ ಹಿಂದೂ ಧರ್ಮ ಎಂದು ಪ್ರಖ್ಯಾತವಾಯಿತು. ವೈದಿಕ ಧರ್ಮ, ಆರ್ಯಧರ್ಮ ಎಂಬುದು ಈ ಸನಾತನ ಧರ್ಮದ ಪರ್ಯಾಯ ಹೆಸರುಗಳು. ಸದಾ ನೂತನವಾಗಿರುವ ಧರ್ಮ, ಶಾಶ್ವತವಾಗಿರುವ ಧರ್ಮ, ಸಾವಿಲ್ಲದ ಮೃತ್ಯುಂಜಯ ಧರ್ಮ ಸನಾತನ ಧರ್ಮವಾಗಿರುತ್ತದೆ.

ಸನಾತನ ಎಂದರೆ ನಿತ್ಯ, ನಿರಂತರ, ಶಾಶ್ವತ ಎಂದು ಅರ್ಥ. ಭಗವಂತನು ನಿತ್ಯ, ನಿರಂತರ, ಶಾಶ್ವತನಾಗಿದ್ದಾನೆ. ಹಾಗಾಗಿ ಸನಾತನ ಎಂದರೆ ಭಗವಂತ ಎಂದು ಸಾರಾರ್ಥ. ಭಗವಂತನಿಂದ ಮೂಡಿ ಬಂದ ಸತ್ಯವೂ, ಸನಾತನವೂ ಆದ ಧರ್ಮವಾದ್ದರಿಂದ (ಸನಾತನಸ್ಯ ಧರ್ಮಃ – ಸನಾತನಧರ್ಮಃ) ಸನಾತನ ಧರ್ಮ ಎಂಬ ಹೆಸರು ಕೂಡಿ ಬಂದಿದೆ. ಭಗವಂತನಿಂದ ಮೂಡಿ ಬಂದ ಧರ್ಮವು ಸನಾತನ ಧರ್ಮವಾದುದರಿಂದ ಅದರ ಸಂಸ್ಥಾಪಕರು ಮಾನವರ್ಯಾರೂ ಆಗಿರದೆ ಭಗವಂತನೇ ಆಗಿರುವುದರಿಂದ ಸನಾತನ ಧರ್ಮವು ಅಪೌರುಷೇಯ ಧರ್ಮವಾಗಿರುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಭಗವಂತನಿಂದ ಅವತೀರ್ಣಿಸಲ್ಪಟ್ಟಿರುವ ಧರ್ಮ ಸನಾತನ ಧರ್ಮವಾಗಿರುತ್ತದೆ. ಸನಾತನ ಧರ್ಮ ಎಂದರೆ ಮಾನವನನ್ನು ಜನ್ಮ-ಮರಣಪೂರ್ಣವಾದ ಸಂಸಾರ ಬಂಧನದಿಂದ ಮುಕ್ತನನ್ನಾಗಿಸಿ ಶಾಶ್ವತವಾದ ಆನಂದದ ಪದವಿಯನ್ನು ಸೇರಿಸುವ ಧರ್ಮ ಎಂಬ ಅರ್ಥವೂ ಇದೆ – ಸನಾತನಯತೀತಿ ಸನಾತನಃ

ಸನಾತನ ಧರ್ಮವು ತತ್ತ್ವ ಮತ್ತು ಅನುಷ್ಠಾನ ಪ್ರಧಾನವಾದುದು. ವೇದಾದಿ ಶಾಸ್ತ್ರಗಳಲ್ಲಿ ಹೇಳಿರುವ ರೀತಿಯಲ್ಲಿ ಇರುವ ನಿಜವಾದ ವಸ್ತುವಿನ ಜ್ಞಾನ ತಿಳಿದಂತೆ ಅನುಷ್ಠಾನ ಮಾಡಿ ಅದರ ಅನುಭವ ಹೊಂದುವುದು ಧರ್ಮ ಎಂದಾಗುತ್ತದೆ. ಶಾಸ್ತ್ರವು ಸರಿಯೇ ತಪ್ಪೇ ಎನ್ನುವುದನ್ನು ಆಚಾರ-ಅನುಷ್ಠಾನದಿಂದ ನಿರ್ಣಯ ಮಾಡುವುದಾಗಿದೆ. ಅನುಷ್ಠಾನ ಮಾಡುವುದು ಹೇಗೆ ಎಂಬುದನ್ನು ಶಾಸ್ತ್ರಾರ್ಥದಿಂದ ತಿಳಿಯುವುದಾಗಿದೆ. ಹಾಗಾಗಿ ಸತ್ಯ ಮತ್ತು ಧರ್ಮ ಎಂಬುದು ಬೃಹದಾರಣ್ಯಕ ಉಪನಿಷತ್ತಿನಲ್ಲಿ

“ಯೋ ವೈ ಸ ಧರ್ಮಃ ಸತ್ಯಂ ವೈ ತತ್, ತಸ್ಮಾತ್ ಸತ್ಯಂ ವದಂತಮಾಹುಃ ಧರ್ಮಂ ವದತೀತಿ, ಧರ್ಮಂ ವಾ ವದಂತಂ ಸತ್ಯಂ ವದತೀತಿ, ಏತದ್ಧ್ಯೇವೈತದುಭಯಂ ಭವತಿ”(೧-೪-೧೪) ಎಂಬುದಾಗಿ ಹೇಳಿರುವಂತೆ ಒಂದನ್ನೊಂದು ಅವಲಂಬಿಸಿ ಇದ್ದು ಎರಡೂ ಧರ್ಮ ಆಗಿರುತ್ತದೆ.

ಸನಾತನ ಧರ್ಮದ ಪರಂಪರೆ ನಿಜಕ್ಕೂ ಭವ್ಯವಾದುದು. ಏಕೆಂದರೆ ಅದರ ಆಧಾರ ಪರಮಾತ್ಮನಾಗಿದ್ದು, ಅವನಿಂದ ಮಹರ್ಷಿಗಳ ದಿವ್ಯಧ್ಯಾನಾವಸ್ಥೆಯಲ್ಲಿ ಅವರ ಅಂತರಂಗದಲ್ಲಿ ಮಿಂಚಿಸಲ್ಪಟ್ಟ ಜ್ಞಾನ ಅರ್ಥಾತ್ ದಿವ್ಯ ವೇದದ ಅರಿವು ಅನುಷ್ಠಾನಗಳು ಸನಾತನ ಧರ್ಮದ ಪರಂಪರೆ ಆಗಿರುವುದರಿಂದ ಸನಾತನ ಧರ್ಮದ ಪರಂಪರೆ ಭವ್ಯವಾದುದು ಎನ್ನುವುದರಲ್ಲಿ ಸಂದೇಹವಿಲ್ಲ.

ಸನಾತನ ಎಂದರೆ ಸದಾ ನೂತನವಾಗಿರುವ, ಸಾವಿಲ್ಲದ ವಸ್ತುವಿಶೇಷ ಎಂದು ಅರ್ಥವಾದರೆ ಅದು ಭಗವಂತ ಎಂದು ಸ್ಪಷ್ಟವಾಗುತ್ತದೆ. ಹಾಗೆಯೇ ಧರ್ಮ ಎಂದರೆ ಯಾವುದು ನಮ್ಮನ್ನು ಧರಿಸಿ ನಿಲ್ಲಿಸುವುದೋ ಅದು ಧರ್ಮ –

ಧಾರಣಾತ್ ಧರ್ಮಮಿತ್ಯಾಹುಃ ಧರ್ಮೋ ಧಾರಯತೇ ಪ್ರಜಾಃ |
ಯತ್ ಸ್ಯಾತ್ ಧಾರಣಸಂಯುಕ್ತಂ ಸ ಧರ್ಮ ಇತಿ ನಿಶ್ಚಯಃ ||– ಮಹಾಭಾರತ
ಧಾರಣ ಮಾಡುವುದೇ ಧರ್ಮ. ಧರ್ಮವೇ ಸಮಸ್ತರನ್ನು ಧರಿಸಿ ನಿಲ್ಲುತ್ತದೆ. ಧರ್ಮದಿಂದಲೇ ಸರ್ವರೂ ಕಟ್ಟಲ್ಪಟ್ಟಿದ್ದಾರೆ. (ಅಂಕಿತದಲ್ಲಿ ಇರಿಸಲ್ಪಟ್ಟಿದ್ದಾರೆ) ಯಾವುದರಿಂದ ಸಕಲ ಪ್ರಾಣಿ ಸಮೂಹದ ಧಾರಣವಾಗುತ್ತದೋ ಅದೇ ಧರ್ಮ.

ಯತೋsಭ್ಯುದಯ ನಿಃಶ್ರೇಯಸಸಿದ್ಧಿಃ ಸ ಧರ್ಮಃ | – ವೈಶೇಷಿಕಸೂತ್ರ

ಯಾವುದರಿಂದ ಅಭ್ಯುದಯ ಮತ್ತು ನಿಃಶ್ರೇಯಸ್ಸು ಸಿದ್ಧಿಸುವುದೋ ಅದೇ ಧರ್ಮ. ನಮ್ಮ ಇರವಿಗೆ ಆಧಾರವಾದುದು ಯಾವುದೋ ಅದು ಧರ್ಮ. ಹಾಗಾಗಿ ಧರ್ಮ ಎಂದರೆ ನಮ್ಮ ಅಸ್ತಿತ್ವದ ಆಧಾರವಾದ ಆತ್ಮಶಕ್ತಿ ಎಂದು ಸಾರಾಂಶವಾಗಿ ಹೇಳಬಹುದು. ಆತ್ಮಶಕ್ತಿ ಎನ್ನುವುದು ಪರಮಾತ್ಮ ಶಕ್ತಿಯಾಗಿದ್ದು ಪರಮಾತ್ಮನು ಶ್ರೀಮದ್ಭಗವದ್ಗೀತೆಯಲ್ಲಿ “ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ…”(ಅ.10-20)(ಜೀವಕೋಟಿಗಳ ಅಂತರಂಗದಲ್ಲಿ ಆತ್ಮರೂಪಿಯಾಗಿ ನೆಲೆಸಿದ್ದೇನೆ) ಎಂದಿರುವಂತೆ ನಮ್ಮ ಅಸ್ತಿತ್ವದ ಆಧಾರ ಪರಮಾತ್ಮನೇ ಆಗಿರುತ್ತಾನೆ. ಒಟ್ಟಿನಲ್ಲಿ ಧರ್ಮ ಎಂದರೆ ಜೀವಿಯ ಬದುಕು ಉತ್ತಮವಾಗುತ್ತಾ ಆತ್ಮದ ಹಿತವೂ ಲೋಕಕಲ್ಯಾಣವೂ ಸಾಧನೆ ಆಗುವಂತೆ ಜೀವಿಗೆ ಸಹಕಾರಿ ಆಗುವ ಕರ್ಮಗಳು, ನೀತಿನಿಯಮಗಳು ಇವುಗಳು ಎಲ್ಲದರ ತತ್ತ್ವಸಾರವಾಗಿದೆ.

ಸನಾತನ ಧರ್ಮವು ಜೀವನದಲ್ಲಿ ಪ್ರತಿಯೋರ್ವರೂ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳನ್ನು ಸಾಧಿಸಬೇಕೆಂದು ಹೇಳುತ್ತದೆ. ಮಾನವನೆಂದರೆ ಬರೇ ಭೌತಿಕ ಶರೀರಧಾರಿಯಲ್ಲ. ಅವನಲ್ಲಿ ಆಂತರ್ಯದಲ್ಲಿ ದಿವ್ಯ ಆತ್ಮಶಕ್ತಿಯು ಇದೆ. ಆತ್ಮನೇ ಪರಮಾತ್ಮ. ಜೀವನು ದೇವನಿಗೆ ಅಧೀನ. ಜೀವಿಗೂ ದೇವನಿಗೂ ವಿಶಿಷ್ಟವಾದ ಸಂಬಂಧವಿದೆ. ಜೀವನು ದೇವನ ಇನ್ನೊಂದು ಸ್ವರೂಪವಾಗಿದ್ದು ಜೀವನಿಗೂ ದೇವನಿಗೂ ಪಾರಮಾರ್ಥಿಕವಾಗಿ ಯಾವ ವ್ಯತ್ಯಾಸವೂ ಇಲ್ಲ. ಜೀವಿಯು ಹೃದಯಾಂತರ್ಯಾಮಿ ಭಗವಂತನಿಗೆ ಶರಣಾಗಿ ಆತ್ಮಸಾಕ್ಷಾತ್ಕಾರಕ್ಕಾಗಿ ಧರ್ಮ ಸಮ್ಮತವಾದ ರೀತಿಯಲ್ಲಿ ಸಾಧನೆ ಮಾಡಿದರೆ ಭಗವತ್ಕೃಪೆಯಿಂದ ಇಹಲೋಕದಲ್ಲಿಯೇ, ಇಹಜೀವನದಲ್ಲಿಯೇ ಸಿದ್ಧಿಯನ್ನು ಹೊಂದಿ ಭವಬಂಧನದಿಂದ ಮುಕ್ತನಾಗುತ್ತಾನೆ ಎಂಬುದು ಸನಾತನ ಧರ್ಮದ ಆಶ್ವಾಸನೆಯಾಗಿದೆ.

ಇಹೈವ ತೈರ್ಜಿತಃ ಸರ್ಗೋ ಯೇಷಾಂ ಸಾಮ್ಯೇ ಸ್ಥಿತಂ ಮನಃ |
ನಿರ್ದೋಷಂ ಹಿ ಸಮಂ ಬ್ರಹ್ಮ ತಸ್ಮಾತ್ ಬ್ರಹ್ಮಣಿ ತೇ ಸ್ಥಿತಾಃ ||” (ಶ್ರೀಮದ್ಭಗವದ್ಗೀತಾ ೫-೧೯)

ಬ್ರಹ್ಮ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಚತುರ್ವರ್ಣಗಳು ಗುಣಕರ್ಮಗಳ ವಿಭಾಗದ ಅನುಸಾರವಾಗಿ ಭಗವಂತನಿಂದಲೇ ಸೃಷ್ಟಿಸಲ್ಪಟ್ಟಿದ್ದರೆ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಎಂಬ ನಾಲ್ಕು ಆಶ್ರಮಗಳು ಚತುರ್ವಿಧಫಲ ಪುರುಷಾರ್ಥಸಾಧನೆಗೆ ನೆರವಾಗುವ ಜೀವನ ಹಂತಗಳೆಂದು ಸನಾತನ ಧರ್ಮವು ಸ್ಪಷ್ಟಪಡಿಸುತ್ತದೆ.

ಬ್ರಹ್ಮಚರ್ಯ ಆಶ್ರಮದಲ್ಲಿ ಜೀವನು ಇಂದ್ರಿಯ ನಿಗ್ರಹ ಮಾಡಿ ದೇಹಶಕ್ತಿ ಗಳಿಸುತ್ತಾನೆ. ವಿದ್ಯಾಭ್ಯಾಸದಿಂದ ಮನ, ಬುದ್ಧಿಗಳ ಬೆಳವಣಿಗೆ ಪಡೆಯುತ್ತಾನೆ. ಗೃಹಸ್ಥಾಶ್ರಮದಲ್ಲಿ ಮನೆ, ಪತಿ-ಪತ್ನಿ-ಮಕ್ಕಳು, ಧನ, ಕನಕ ವಸ್ತು ವಾಹನಾದಿಗಳೆಲ್ಲದರ ಸುಖವನ್ನು ಅನುಭವಿಸುತ್ತಾ ಸಮಾಜದ ಹಿತವನ್ನು ಬಯಸುತ್ತಾ ಗೃಹಸ್ಥನು ಬಾಳುತ್ತಾನೆ. ಹಾಗೆ ಬಾಳುವಾಗ ತನ್ನ ದೈಹಿಕ-ಮಾನಸಿಕ-ಆಧ್ಯಾತ್ಮಿಕ ಉನ್ನತಿಗಾಗಿ ದೇವ, ಋಷಿ, ಪಿತೃಗಳ ಅಭಯ-ಆಶೀರ್ವಾದಕ್ಕಾಗಿ ಸೇವಾಕಾರ್ಯ ನಡೆಸುತ್ತಾ ತನ್ನ ದೇಹ-ಮನ-ಧರ್ಮ-ಸಂಸ್ಕೃತಿಗಳ ರಕ್ಷಣೆ ಹಾಗೂ ಪೋಷಣೆಗೆ, ರಾಷ್ಟ್ರದ ಭದ್ರತೆ ಹಾಗೂ ಏಳಿಗೆಗೆ ಗೃಹಸ್ಥನೂ ಧರ್ಮ ಸಮ್ಮತವಾದ ಜೀವಿತದ ಮೂಲಕ ವ್ಯಷ್ಟಿ ಹಾಗೂ ಸಮಷ್ಟಿ ನೆಲೆಯಲ್ಲಿ ಸಹಕಾರಿ ಆಗುತ್ತಾನೆ. ವಾನಪ್ರಸ್ಥಾಶ್ರಮದಲ್ಲಿ ಗೃಹಸ್ಥ ಜೀವನದ ಸಂಬಂಧವನ್ನು ತ್ಯಜಿಸಿ ಆಧ್ಯಾತ್ಮಿಕ ಚಿಂತನೆಯಲ್ಲಿಯೇ ಪರಿಶ್ರಮ ಉಳ್ಳವನಾಗಿ ಬಾಳಹೊರಡುತ್ತಾನೆ. ಮೋಕ್ಷಸಾಧನೆಗೆ ಸದಾಕಾಲ ಜೀವಿಯು ಯತ್ನಶೀಲನಾಗಿ ಇರುವ ಆಶ್ರಮವೇ ಸನ್ಯಾಸ ಆಶ್ರಮ. ಬಾಹ್ಯವಿಷಯಗಳಲ್ಲಿ ಆಸಕ್ತಿ ಇಲ್ಲದವನಾಗಿ ಆತ್ಮಚಿಂತನೆ-ಆನಂದಾನುಭವದಲ್ಲಿ ಸದಾನಿರತನಾಗಿ ಸರ್ವಜೀವ-ಸರ್ವಲೋಕ ಹಿತಾಕಾಂಕ್ಷೆಯುಳ್ಳವನಾಗಿ ಬ್ರಹ್ಮಜ್ಞಾನಿಯಾಗಿ ಬ್ರಹ್ಮಸ್ವರೂಪಿಯಾಗಿ ಸನ್ಯಾಸಿಯು ಮುಕ್ತಿಯನ್ನು ಹೊಂದುತ್ತಾನೆ. ಸನ್ಯಾಸ ಆಶ್ರಮವನ್ನು ಬ್ರಹ್ಮಚರ್ಯ ಆಶ್ರಮದಿಂದ ನೇರವಾಗಿ ಯಾರಿಗೆ ಸಾಧ್ಯವಿದೆಯೋ- ಮನಸ್ಸಿನ ಪರಿಶುದ್ಧಿ ಹಾಗೂ ಶಕ್ತಿಸಂಪನ್ನರಾಗಿ ಯಾರಿರುವರೋ – ಅವರು ಸ್ವೀಕರಿಸಬಹುದು. ಆದರೆ ಆ ರೀತಿ ಎಸಗಲು ಶಕ್ತರಲ್ಲದವರಿಗೆ ವರ್ಣಾಶ್ರಮದ ಕ್ರಮವಾದ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಎಂಬ ಹಂತಗಳನ್ನು ಹಾದು ಮುಂದೆ ಸಾಗಿ ಸನ್ಯಾಸ ಆಶ್ರಮ ಸ್ವೀಕರಿಸಿ ಕೃತಾರ್ಥರಾಗಬಹುದು ಎಂಬುದಾಗಿ ಸನಾತನ ಧರ್ಮದಲ್ಲಿ ಜೀವಿಯ ಉನ್ನತಿಗೆ ಶ್ರಮಿಸಿ ಪರಮ ಗುರಿಯಾದ ಮೋಕ್ಷವನ್ನು ಸಾಧಿಸಲು ಅನುಕೂಲದ ಆಶ್ರಮ ವ್ಯವಸ್ಥೆಯನ್ನು ಹೇಳಲಾಗಿದೆ.

ಚತುರ್ವಿಧ ಪುರುಷಾರ್ಥಗಳಲ್ಲಿ ಮೋಕ್ಷ ಸಾಧನೆಯು ಪರಮಪುರುಷಾರ್ಥವಾಗಿದೆ ಎಂಬುದಾಗಿ ಸನಾತನ ಧರ್ಮವು ಸ್ಪಷ್ಟವಾಗಿ ತಿಳಿಸುತ್ತದೆ. “ಇಹ ಖಲು ಧರ್ಮಾರ್ಥಕಾಮಮೋಕ್ಷಾಖ್ಯೇಷು ಚತುರ್ವಿಧ ಪುರುಷಾರ್ಥೇಷು ಮೋಕ್ಷ ಏವ ಪರಮಪುರುಷಾರ್ಥಃ” -ವೇದಾಂತ ಪರಿಭಾಷೆ.
ಮೋಕ್ಷ ಸಾಧನೆಗೆ ಧರ್ಮ, ಅರ್ಥ, ಕಾಮಗಳು ಪೋಷಕವಾಗಿರಬೇಕು. ಆಧ್ಯಾತ್ಮಿಕ ಸಾಧನೆಯ ವಿಚಾರವಾಗಿ ಒಂದೇ ಹಾದಿಯನ್ನು ಎಲ್ಲರೂ ಅನುಸರಿಸಬೇಕಾಗಿಲ್ಲ. ಅವರವರು ಈ ಜನ್ಮದಲ್ಲಿ ಆಧ್ಯಾತ್ಮಿಕ ಬೆಳವಣಿಗೆಯ ಹಂತದಿಂದ ಮುಂದೆ ಸಾಗಲು ಸನಾತನ ಧರ್ಮದಲ್ಲಿ ಧಾರಾಳವಾಗಿ ಅವಕಾಶವಿದೆ. ಅದರಂತೆ ಅವರವರ ಒಲವು-ಸಂಸ್ಕಾರ ಪ್ರೇರಣೆಯಂತೆ ವೈವಿಧ್ಯಮಯವಾದ ಸಾಧನಾಪಥಗಳು ಸನಾತನ ಧರ್ಮದಲ್ಲಿ ಇವೆ. ಅವನ್ನು ನಾಲ್ಕು ವಿಧವೆಂದು ವಿಂಗಡಿಸಿ ಕರ್ಮ, ಭಕ್ತಿ, ಧ್ಯಾನ(ರಾಜ) ಹಾಗೂ ಜ್ಞಾನಯೋಗ ಎಂದು ಹೇಳಲಾಗಿದೆ. ಈ ಯೋಗ ಸಾಧನೆಯ ವಿವರಗಳೆಲ್ಲ ವಿಚಾರವಂತರಿಗೆ, ಭಾವುಕರಿಗೆ, ಕ್ರಿಯಾಪಟುಗಳಿಗೆ, ಅಂತರ್ಮುಖಿಗಳಿಗೆ ಹೀಗೆ ಎಲ್ಲ ರೀತಿಯ ಸ್ವಭಾವದವರಿಗೆ ಆತ್ಮಸಾಕ್ಷಾತ್ಕಾರದ ಹಾದಿಯಲ್ಲಿ ಸಾಧನೆ ಮಾಡಿ ಸಾಕ್ಷಾತ್ಕಾರವನ್ನು ಹೊಂದಲು ಅವಕಾಶ ಮಾಡಿ ಕೊಡುತ್ತವೆ.

ಸನಾತನ ಧರ್ಮದಲ್ಲಿ ಸಾಧನೆಯ ವಿಭಿನ್ನ ಹಾದಿಗಳು ಇದ್ದರೂ ಅವುಗಳೆಲ್ಲದರ ಅಂತಿಮಗುರಿ ಒಂದೇ. ಅದೇ ಭಗವತ್ಸಾಕ್ಷಾತ್ಕಾರ ಮತ್ತು ಜೀವನದ ಸುಖ-ದುಃಖ, ಜನ್ಮ-ಮರಣಗಳ ಚಕ್ರ ಅಂದರೆ ಭವಚಕ್ರದ ಪರಿಭ್ರಮಣೆಯಿಂದ ಜೀವಿಗೆ ಬಿಡುಗಡೆ. ಭಗವಂತನ ಸಾಕ್ಷಾತ್ಕಾರವಲ್ಲದೆ ಜೀವನದ ದುಃಖ ನಿವೃತ್ತಿಯಾಗಿ ಪರಮಪದ ಪ್ರಾಪ್ತಿಗೆ ಬೇರೆ ಯಾವ ಹಾದಿಯೂ ಇಲ್ಲ ಎಂಬುದಾಗಿ ಸತ್ಯದರ್ಶಿಗಳೂ, ಮಂತ್ರದ್ರಷ್ಟಾರರೂ ಆದ ವೈದಿಕ ಮಹರ್ಷಿಗಳ ಅನುಭವವಾಣಿಯು ಯಜುರ್ವೇದದಲ್ಲಿ ಹೀಗೆ ಮೊಳಗಿರುತ್ತದೆ:-

ವೇದಾಹಮೇತಂ ಪುರುಷಂ ಮಹಾಂತಂ
ಆದಿತ್ಯವರ್ಣಂ ತಮಸಃ ಪರಸ್ತಾತ್
ತಮೇವ ವಿದಿತ್ವಾ ಅತಿಮೃತ್ಯುಮೇತಿ
ನಾನ್ಯಃ ಪಂಥಾ ವಿದ್ಯತೇ ಅಯನಾಯ || (ಶ್ವೇ.ಉ)

ಅಜ್ಞಾನವೆಂಬ ಅಂಧಕಾರಕ್ಕಿಂತ ಆಚೆಗಿರುವ ಪ್ರಕಾಶಸ್ವರೂಪನಾದ ಮಹಾನ್ ಪುರುಷನನ್ನು ನಾನು ಅರಿತಿರುತ್ತೇನೆ. ಅವನನ್ನೇ ಅರಿತುಕೊಂಡ ಮನುಷ್ಯನು ಮೃತ್ಯುವನ್ನು ದಾಟುತ್ತಾನೆ. ಪರಮಪದ ಪ್ರಾಪ್ತಿಗೆ ಇದಕ್ಕಿಂತ ಬೇರೆ ದಾರಿಯಿಲ್ಲ.

ಜೀವಿಯ ಚತುರ್ವಿಧ ಫಲ ಪುರುಷಾರ್ಥಗಳನ್ನು ಸಾಧಿಸಲು ಅವನಿಗೆ ಸಹಕಾರಿ ಆಗಲು ಧರ್ಮಶಾಸ್ತ್ರ, ವೈದ್ಯಶಾಸ್ತ್ರ, ಜ್ಯೋತಿಷ್ಯಶಾಸ್ತ್ರ ಇತ್ಯಾದಿ ಶಾಸ್ತ್ರಗಳು ಸನಾತನ ಧರ್ಮದಲ್ಲಿ ಇವೆ. ಅಂತೆಯೇ ಜೀವಿಯ ಜೀವನಾಸಾಫಲ್ಯದ ಹಾಗೂ ಜಗದ್ಗುರುಪೀಠದ ಗುರುಪರಂಪರೆಯು ಸನಾತನಧರ್ಮದಲ್ಲಿ ಇದೆ. ದ್ವೈತ, ವಿಶಿಷ್ಟಾದ್ವೈತ-ಅದ್ವೈತ ಎಂಬ ಮೂರು ವಿಧದ ವೇದಾಂತ ದರ್ಶನಗಳ ಪ್ರತಿಪಾದನಾಚಾರ್ಯರ (ಶ್ರೀ ಶಂಕರಾಚಾರ್ಯರು, ಶ್ರೀರಾಮಾನುಜಾಚಾರ್ಯರು, ಶ್ರೀ ಮಧ್ವಾಚಾರ್ಯರ) ಗುರುಪೀಠಗಳು ಇವೆ.

ಮಾನವನ ಇಹ ಜೀವನದ ಹಾಗೂ ಪಾರಮಾರ್ಥಿಕ ಬದುಕಿನ ಸಫಲತೆಗೆ ಸಹಕಾರಿಯಾಗಲು ಜನ್ಮದಿಂದ ಮರಣದ ತನಕ ಅರ್ಥಪೂರ್ಣವಾದ ಸಂಸ್ಕಾರಕರ್ಮಗಳ ಉಲ್ಲೇಖವು ಸನಾತನ ಧರ್ಮದಲ್ಲಿ ಇದೆ. ಮರಣೋತ್ತರವಾಗಿ ಜೀವನಕಲ್ಯಾಣಕ್ಕಾಗಿ ಮರಣೋತ್ತರ ಸಂಸ್ಕಾರಗಳು ಹೇಳಲ್ಪಟ್ಟಿವೆ. ವ್ಯಷ್ಟಿ ಹಾಗೂ ಸಮಷ್ಟಿ ಜೀವನದಲ್ಲಿ ಭಕ್ತಿ, ಸಹಕಾರ, ಸಹಬಾಳ್ವೆ, ಜೀವನೋಲ್ಲಾಸ, ಸೇವೆ ಇತ್ಯಾದಿಗಳ ವೃದ್ಧಿ ಹಾಗೂ ಪೋಷಣೆಗೆ ಅನುಕೂಲವಾಗುವಂತೆ ರಾಮ, ಕೃಷ್ಣಾದಿ ಭಗವದವತಾರಗಳ ಶ್ರೀಶಂಕರ-ರಾಮಾನುಜ ಮೊದಲಾದ ಆಚಾರ್ಯ ಸ್ವಾಮಿಗಳ ಜಯಂತ್ಯುತ್ಸವಗಳು, ಯುಗಾದಿ, ಗೌರೀಗಣೇಶ, ನವರಾತ್ರಿ, ದೀಪಾವಳಿ, ಮಕರಸಂಕ್ರಾಂತಿ, ಶಿವರಾತ್ರಿ ಮೊದಲಾದ ಹಬ್ಬ-ಉತ್ಸವಗಳು, ಗ್ರಾಮದೇವರ ಹಬ್ಬ. ಊರಿನ ಜಾತ್ರೆ, ನಾಡಹಬ್ಬ ಇತ್ಯಾದಿ ದೇವತಾಸಂಬಂಧವಾದ ಜಾತ್ರೆ-ಉತ್ಸವಗಳು ಸನಾತನ ಧರ್ಮದಲ್ಲಿ ಆಚರಿಸಲು ಹೇಳಲ್ಪಟ್ಟಿವೆ.

ಸನಾತನ ಧರ್ಮದ ಸಾಧನಾ ಹಾದಿಗಳನ್ನು ಅನುಸರಿಸಿ ಸಾಕ್ಷಾತ್ಕಾರವನ್ನು ಹೊಂದಲು ಸಾಧ್ಯವೇ ಎಂಬ ಸಂಶಯಕ್ಕೆ ಎಡೆಯಿಲ್ಲ. ಏಕೆಂದರೆ ಅದೆಷ್ಟೋ ಮಂದಿ ಋಷಿಮುನಿಗಳು, ಆಚಾರ್ಯರು, ಸಂತಮಹಾತ್ಮರು. ಗೃಹಸ್ಥರು, ಸನ್ಯಾಸಿಗಳೆಂಬ ವ್ಯತ್ಯಾಸವಿಲ್ಲದೆ ಶ್ರದ್ಧಾಭಕ್ತಿಸಂಪನ್ನರೂ, ನಿರ್ಮಲಚಿತ್ತರೂ ಆಗಿ ಸಾಧನೆಯ ಹಾದಿಯಲ್ಲಿ ಸಾಗಿ ದಿವ್ಯತೆಯ ಸಾಕ್ಷಾತ್ಕಾರವನ್ನು ಹೊಂದಿರುತ್ತಾರೆ. ಮಹರ್ಷಿ ವಸಿಷ್ಠ, ವಿಶ್ವಾಮಿತ್ರ, ಕಶ್ಯಪ, ಭಾರದ್ವಾಜ, ಅತ್ರಿ, ಆಂಗೀರಸ ಇತ್ಯಾದಿ ವೈದಿಕ ಕಾಲದ ಮಹರ್ಷಿಗಳು, ಶ್ರೀರಾಮ-ಕೃಷ್ಣ ಮೊದಲಾದ ಅವತಾರ ಪುರುಷರು, ಶ್ರೀಶಂಕರಾಚಾರ್ಯರು, ಶ್ರೀರಾಮಾನುಜಾಚಾರ್ಯರು, ಶ್ರೀಮಧ್ವಾಚಾರ್ಯರು ಮೊದಲಾದ ಆಚಾರ್ಯಸ್ವಾಮಿಗಳು, ಸಂತ ತುಕಾರಾಂ, ಸಂತ ಜ್ಞಾನೇಶ್ವರ, ಮೀರಾಬಾಯಿ, ತುಳಸೀದಾಸ್, ಕನಕದಾಸ, ಪುರಂದರದಾಸ, ತ್ಯಾಗರಾಜ ಮೊದಲಾದವರು, ಆಧುನಿಕ ಕಾಲದಲ್ಲಿ ಶ್ರೀರಾಮಕೃಷ್ಣ ಪರಮಹಂಸರು, ಸ್ವಾಮೀ ವಿವೇಕಾನಂದರು, ಶ್ರೀಶಾರದಾಮಣಿದೇವಿಯವರು, ಶ್ರೀ ರಮಣಮಹರ್ಷಿಗಳು, ಮಹಾತ್ಮಾ ಗಾಂಧೀಜಿಯವರು, ಡಾ||ರಾಧಾಕೃಷ್ಣನ್ ಮೊದಲಾದವರು ಸನಾತನ ಧರ್ಮದ ತತ್ತ್ವ-ಅನುಷ್ಠಾನ ವಿಚಾರಗಳು ಅರ್ಥಪೂರ್ಣ ಮತ್ತು ಪ್ರಯೋಗಸಾಧ್ಯ ಎಂದು ತಮ್ಮ ಬದುಕು-ಸಂದೇಶಗಳ ಮೂಲಕ ಸ್ಪಷ್ಟಪಡಿಸಿ ಮನುಕುಲಕ್ಕೆ ಅಭಯ ಆಶೀರ್ವಾದಗಳನ್ನು ನೀಡಿರುತ್ತಾರೆ. ಅಲ್ಲದೆ, ಅಸಂಖ್ಯಾತ ಮಂದಿ ಸಾಧು-ಸಂತರು, ಗೃಹಸ್ಥರು, ಭಕ್ತರು, ಹಿಂದುಸ್ಥಾನದಲ್ಲಿ ಉತ್ತರದ ಹಿಮಾಲಯದಿಂದ ದಕ್ಷಿಣದ ಹಿಂದೂ ಮಹಾಸಾಗರದ ಪರ್ಯಂತ ದೇಶದ ಉದ್ದಗಲದಲ್ಲಿ ಮೈವೆತ್ತು ನಿಂತಿರುವ ಸಹಸ್ರಾರು ದೇಗುಲಗಳು, ನೂರಾರು ಗುರುಪೀಠಗಳು ಇವೆಲ್ಲ ಸನಾತನ ಧರ್ಮವು ಜೀವಂತ ಧರ್ಮ, ಪ್ರಾಯೋಗಿಕ ಧರ್ಮ ಎಂಬುದನ್ನು ಇಂದಿಗೂ ಧೃಢಪಡಿಸುತ್ತದೆ.ಅಷ್ಟೇ ಅಲ್ಲ, ಸನಾತನ ಧರ್ಮದ ಪರಂಪರೆಯಲ್ಲಿ ಹಿಂದಿನಂತೆ ಇಂದಿಗೂ ಕೂಡ ಮಹಾಪುರುಷರು, ಸಾಧುಸಂತರು, ಸದ್ಗೃಹಸ್ಥರು, ಭಕ್ತರು ಹುಟ್ಟಿಬರುತ್ತಿದ್ದಾರೆ ಎನ್ನುವುದು ಸನಾತನ ಧರ್ಮದ ನಿತ್ಯನೂತನತೆ ಬಗೆಗೆ ಹೆಚ್ಚಿನ ಧೈರ್ಯ, ಸಮಾಧಾನ ತುಂಬಿ ಬರುವುದು ಮಾತ್ರವಲ್ಲದೆ ಸನಾತನ ಧರ್ಮವು ಮೃತ್ಯುಂಜಯ ಧರ್ಮ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.

ಜೀವನದ ಎಲ್ಲ ಆಶೋತ್ತರಗಳಿಗೆ ಸ್ಪಂದಿಸಿ ಸೂಕ್ತವಾದ ರೀತಿಯಲ್ಲಿ ಮಾನವನಿಗೆ ಮಾರ್ಗದರ್ಶನ ಮಾಡಬಲ್ಲ ಋಗ್, ಯಜುಸ್, ಸಾಮ ಮತ್ತು ಅಥರ್ವ ಎಂಬ ಚತುರ್ವೇದಗಳು, ಭಾಗವತಾದಿ ಪುರಾಣಗಳು, ಶ್ರೀರಾಮಾಯಣ, ಶ್ರೀಮನ್ಮಹಾಭಾರತ ಎಂಬ ಇತಿಹಾಸ ಕಾವ್ಯಗಳು, ಶ್ರೀಮದ್ ಭಗವದ್ಗೀತೆ ಎಂಬ ಜೀವನ ಧರ್ಮಶಾಸ್ತ್ರಗ್ರಂಥ, ಮನು, ಬೋಧಾಯನ, ಆಶ್ವಲಾಯನ ಮೊದಲಾದ ಮಹರ್ಷಿಪ್ರಣೀತ ಧರ್ಮಶಾಸ್ತ್ರ ಹಾಗೂ ಸೂತ್ರಗಳು, ದ್ವೇಷ, ಭೇದಗಳಿಗೆ ಎಡೆಯಾಗದಿರಬೇಕೆಂದು ಗುಣಕರ್ಮಕ್ಕೆ ಅನುಸಾರವಾಗಿ ವಿಭಾಗಿಸಲ್ಪಟ್ಟಿರುವ ಚತುರ್ವರ್ಣಗಳು, ಜೀವಿಯ ಆಶೋತ್ತರಗಳ ಉದಾತ್ತೀಕರಣಕ್ಕೆ ನೆರವಾಗಿ ಸಹಜವಾಗಿ ವಿಕಸಗೊಂಡು ಜೀವ ಸಾರ್ಥಕ್ಯವನ್ನು ಪಡೆಯಲು ನೆರವಾಗುವ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎಂಬ ಚತುರಾಶ್ರಮ ವ್ಯವಸ್ಥೆ, ಜೀವಿಯು ಜೀವನದಲ್ಲಿ ಸಾಧಿಸಲೇ ಬೇಕಾದ, ಸಾಧಿಸಲು ಇರುವ ಎಲ್ಲ ಬೇಕು ಬೇಡಿಕೆಗಳ ಸುಂದರ ಹಾಗೂ ಅರ್ಥಪೂರ್ಣ ವಿಂಗಡಣೆಯಾದ ಧರ್ಮ-ಅರ್ಥ-ಕಾಮ-ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳು ಇವುಗಳ ಸಾಧನೆಗೆ ನೆರವಾಗುವ ಕರ್ಮ, ಭಕ್ತಿ, ಧ್ಯಾನ(ರಾಜ) ಮತ್ತು ಜ್ಞಾನ ಎಂಬ ಚತುರ್ವಿಧ ಯೋಗಸಾಧನಾಮಾರ್ಗಗಳು, ಶಿಷ್ಯರಿಗೆ, ಭಕ್ತರಿಗೆ ಆಶೀರ್ವಾದವನ್ನು ಇತ್ತು ಜೀವನ ಹಾದಿಯಲ್ಲಿ ಮಾರ್ಗದರ್ಶನ ಮಾಡಿ ಮುನ್ನಡೆಸಲು ಶ್ರೀ ಜಗದ್ಗುರು ಆದಿ ಶಂಕರಾಚಾರ್ಯರು, ಶ್ರೀರಾಮಾನುಜಾಚಾರ್ಯರು, ಶ್ರೀ ಮಧ್ವಾಚಾರ್ಯರು ಎಂಬೀ ತ್ರಿಮತಸ್ಥ ಆಚಾರ್ಯರ ಪ್ರಾಚಾನ ಜಗದ್ಗುರು ಪೀಠಗಳ ಪರಂಪರೆ, ಜೀವಿಯ ಸಾಧನೆಯ ಸಿದ್ಧಿಯ ನೆಲೆಯಲ್ಲಿ ಸಾಯುಜ್ಯ, ಸಾಮೀಪ್ಯ, ಸಾಲೋಕ್ಯ, ಸಾರೂಪ್ಯ ಎಂಬ ಚತುರ್ವಿಧ ಮುಕ್ತಿ ವಿಶೇಷಗಳು ಇವುಗಳನ್ನು ಒಳಗೊಂಡ ಪ್ರಾಚೀನ ಭವ್ಯ ಪರಂಪರೆಯು ಅವಿಚ್ಛಿನ್ನವಾಗಿ ನಿತ್ಯನೂತನವಾಗಿ ಸಾಗಿ ಬರುತ್ತಿರುವುದು ಸನಾತನ ಧರ್ಮದ ಹಿರಿಮೆ ಹಾಗೂ ಭವ್ಯತೆಯಾಗಿರುತ್ತದೆ.

ಯಾವುದೇ ಧರ್ಮದ ಬಗ್ಗೆ ದ್ವೇಷಭಾವನೆ ಇಲ್ಲದೆ, ತಾತ್ಸಾರದೃಷ್ಟಿ ಇಲ್ಲದೆ ಇರುವುದು, ಎಲ್ಲಾ ಧರ್ಮಗಳು ಏಕದೇವ ಪರಮಾತ್ಮನ ಎಡೆಗೆ ಸಾಗಲಿರುವ ವಿಭಿನ್ನ ಹಾದಿಗಳು ಎಂಬ ಸರ್ವಧರ್ಮ ಸಮಭಾವದ ಪ್ರೀತಿಯ ದೃಷ್ಟಿ ಸನಾತನ ಧರ್ಮದ್ದಾಗಿದ್ದು ಇದರಲ್ಲಿ ಎಲ್ಲ ಹಂತದ ಸಾಧಕರಿಗೆ ಆಶ್ರಯ, ಮಾರ್ಗದರ್ಶನವಿದೆ ಎನ್ನುವುದು ಸನಾತನ ಧರ್ಮದ ಪ್ರತ್ಯೇಕವಾದ ಹಿರಿಮೆಯಾಗಿರುತ್ತದೆ. ದೇವನೊಬ್ಬ ನಾಮ ಹಲವು, ಮತೀಯ ಪ್ರೇಮ ಸೌಹಾರ್ದ, ವಿಭಿನ್ನ ಪಂಥಗಳ ಸಾಮರಸ್ಯ ಈ ವಿಚಾರವಾಗಿ ಸನಾತನ ಧರ್ಮದಲ್ಲಿನ ಈ ಹೇಳಿಕೆಗಳು ವಿಶ್ವಕಲ್ಯಾಣ ಸಾಧನ ಸೂತ್ರಗಳಂತಿವೆ –
‘ಏಕಂ ಸದ್ ವಿಪ್ರಾ ಬಹುಧಾ ವದಂತಿ’ – ಋಗ್ವೇದ
ಇರುವುದೊಂದೇ ಸತ್ಯ. ಆದರೆ ಅದಕ್ಕೆ ಹೆಸರುಗಳು ಅನೇಕ.

ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ
ಮಮವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ||- ಶ್ರೀಮದ್ಭಗವದ್ಗೀತಾ

ಯಾರು ನನ್ನನ್ನು ಹೇಗೆ ಆಶ್ರಯಿಸುತ್ತಾರೋ ಅವರನ್ನು ಹಾಗೆಯೇ ನಾನು ಅನುಗ್ರಹಿಸುತ್ತೇನೆ. ಎಲೈ ಅರ್ಜುನ, ಮನುಷ್ಯರು ಸರ್ವಪ್ರಕಾರಗಳಿಂದಲೂ ನನ್ನ ಪಥವನ್ನೇ ಅನುಸರಿಸುತ್ತಾರೆ.

ಹೀಗೆ ಮಹೋನ್ನತ ಜೀವನ ತತ್ತ್ವ ವಿಚಾರಗಳು, ಆನಂದಮೀಮಾಂಸೆ, ಪರಮಾತ್ಮ ದರ್ಶನ ಪ್ರಣಾಲಿಗಳು, ಆತ್ಮಸಾಕ್ಷಾತ್ಕಾರ ಸಾಧನಾ ಕುರಿತಾದ ಯೋಗಮಾರ್ಗಗಳು, ಶ್ರೀ ಜಗದ್ಗುರು ಆದಿ ಶಂಕರಾಚಾರ್ಯರೇ ಮೊದಲಾದ ಜಗದ್ಗುರುಗಳ ಪೀಠಪರಂಪರೆ, ಯುಗಾದಿ, ಗುರುಪೂರ್ಣಿಮೆ, ನವರಾತ್ರಿ-ದೀಪಾವಳಿ, ಶಿವರಾತ್ರಿ ಮೊದಲಾದ ಹಬ್ಬ-ವ್ರತ-ಉತ್ಸವಾದಿಗಳು ಇತ್ಯಾದಿ ಅಪೂರ್ವವೂ, ಅನುಪಮವೂ ಆದ ವಿಚಾರಗಳಿಗೆ ಸಂಬಂಧಿಸಿದಂತೆ ಸನಾತನ ಧರ್ಮದ ತತ್ತ್ವಗಳು, ಅರಿವು ಅನುಷ್ಠಾನಗಳ ಭವ್ಯಪರಂಪರೆಯ ಗಂಗೆಯು ಜೀವಂತವಾಹಿನಿಯಾಗಿ ಇಂದಿಗೂ ಹರಿದು ಸಾಗುತ್ತಿದೆ.

~*~

Facebook Comments