ಅಮೃತಧಾರಾ ಗೋಶಾಲೆ, ಮುಳಿಯ

ಬಂಟ್ವಾಳ ತಾಲೂಕಿನ ವಿಟ್ಲ ಸೀಮೆಯ ಐತಿಹಾಸಿಕವಾಗಿ ತುಂಬಾ ಪ್ರಸಿದ್ಧಿ. ಸೀಮೆಯ ಒಂದು ಐತಿಹಾಸಿಕ ಸ್ಥಳ ಮಾಯಿಲರ ಕೋಟೆ. ಮಾಯಿಲರ ಕೋಟೆ ಅಳಿಕೆ ಗ್ರಾಮದ ಮುಳಿಯದ ಸಮೀಪದಲ್ಲಿದೆ. ಮಾಯಿಲರ ಕೋಟೆಯಿರುವ ಬೆಟ್ಟದ ಇಳಿಜಾರಿನಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಸ್ವಾಭಾವಿಕ ಸಸ್ಯರಾಶಿ ಹಾಗೂ ನಿರಂತರ ಹರಿದುಬರುತ್ತಿರುವ ಜಲಮೂಲಗಳಿಂದ ಸಮೃದ್ಧವಾದ ಪ್ರದೇಶದಲ್ಲಿದೆ ಮುಳಿಯದ ಅಮೃತಧಾರಾ ಗೋಶಾಲೆ.

ದೇಶೀ ಗೋತಳಿಗಳನ್ನು ಉಳಿಸಿ ಬೆಳೆಸುವ ಸಂಕಲ್ಪ ತೊಟ್ಟ ಶ್ರೀ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಉದ್ಧೇಶಕ್ಕೆ ಪೂರಕವಾಗಿ ಮುಳಿಯದ ದಿ| ಬಿ.ಕೆ. ಈಶ್ವರ ಭಟ್ಟರು ಶ್ರೀಮಠಕ್ಕೆ ದಾನವಾಗಿ ನೀಡಿದ ಸ್ಥಳದಲ್ಲಿದೆ ಈ ಗೋಶಾಲೆ. ಗೋಶಾಲೆ ನಿರ್ಮಾಣ ಶ್ರೀಗುರುಗಳ ಸಂಕಲ್ಪ ಉದ್ದೇಶ- ದೇಶೀತಳಿಗಳ ಸಂರಕ್ಷಣೆ, ಸಂವರ್ಧನೆ, ಸಂಭೋದನೆ ಹಾಗೂ ಸಂಶೋಧನೆ. ಈ ಉದ್ದೇಶದಿಂದಲೇ ಮುಳಿಯದಲ್ಲಿ ಶ್ರೀಗುರುಗಳ ದಿವ್ಯಹಸ್ತದಿಂದ ಅಮೃತಧಾರಾ ಗೋಶಾಲೆ ತಾ. ೦೬.೧೧.೨೦೦೪ ರಂದು ಲೋಕಾರ್ಪಣೆಗೊಂಡಿತು.

೫೦’x೧೨’ರ ಕಟ್ಟಡದಲ್ಲಿ ಪ್ರಾರಂಭಗೊಂಡ ಗೋಶಾಲೆ ಇಂದು ಸ್ಥಳಾವಕಾಶದ ಕೊರತೆಯಿಂದ ಇನ್ನೊಂದು ಗೋಶಾಲಾ ಕಟ್ಟಡ ನಿರ್ಮಾಣಕ್ಕೆ ಅಡಿಯಿರಿಸಿದೆ. ಕರ್ನಾಟಕ ಸರಕಾರದ ಸುವರ್ಣ ಕರ್ನಾಟಕ ಗೋತಳಿ ಅಭಿವೃದ್ಧಿ ಯೋಜನೆಯ ಅನುದಾನದ ಕಟ್ಟಡ ಇನ್ನೇನು ಪೂರ್ಣಗೊಳ್ಳಲಿದೆ. ಗೋವುಗಳೆಂದ ಮೇಲೆ ಹುಲ್ಲು ಮತ್ತು ನೀರು ಅತೀ ಅಗತ್ಯ. ನೀರಿನ ಮೂಲ ಸ್ವಾಭಾವಿಕವಾಗಿ ಹರಿದು ಬರುತ್ತಿರುವ ಎತ್ತರದ ಒರತೆ. ಜಿಲ್ಲಾ ಪಂಚಾಯಿತಿನ ಅನುದಾನದೊಂದಿಗೆ ಈಗ ೨೫,೦೦,೦೦೦ಲೀಟರ್ ಸಾಮರ್ಥ್ಯದ ದೊಡ್ಡ ಕೆರೆಯೇ ಅಲ್ಲಿ ನಿರ್ಮಾಣಗೊಂಡಿದೆ. ಸಮೃದ್ಧ ನೀರಿನಿಂದ ಹುಲ್ಲುಗಾವಲು ಹುಲುಸಾಗಿದೆ.

ಗೋಶಾಲೆಯಲ್ಲಿ ಮಲೆನಾಡುಗಿಡ್ಡ ತಳಿಗಳಲ್ಲದೆ ಕಾಂಕ್ರೀಜ್ ತಳಿಯ ಗೋವುಗಳು ಕೂಡಾ ಇವೆ. ಸಾಕಲು ಮನಸ್ಸಿಲ್ಲದೆಯೋ ಅಥವಾ ಅಶಕ್ತರಾಗಿಯೋ ಹಲವರು ನಿರುಪಯುಕ್ತ, ಲಾಭಕರವಲ್ಲದ ದನಕರುಗಳನ್ನು ಗೋಶಾಲೆಗೆ ಒಪ್ಪಿಸುತ್ತಿದ್ದಾರೆ. ಎಲ್ಲವಕ್ಕೂ ಅವಕಾಶ ನೀಡಲಾಗಿದೆ. ಹಲವನ್ನು ಆಸಕ್ತ ಗೋಪ್ರೇಮಿಗಳಿಗೆ ಪೋಷಿಸುವುದಕ್ಕಾಗಿ ಮಠದ ನಿಬಂಧನೆಗೊಳಪಟ್ಟು ನೀಡಲಾಗಿದೆ. ಇದುವರೆಗೆ ಸುಮಾರು ನೂರೈವತ್ತು ಗೋವುಗಳನ್ನು ಗೋಶಾಲೆಗೆ ಸ್ವೀಕರಿಸಲಾಗಿದೆ. ಅರುವತ್ತನಾಲ್ಕು ಗೋವುಗಳನ್ನು ಸಾಕುವುದಕ್ಕಾಗಿ ನೀಡಲಾಗಿದೆ. ಪ್ರಕೃತ ಗೋಶಾಲೆಯಲ್ಲಿ ಮೂವತ್ತೈದು ಗೋವುಗಳನ್ನು ಪೋಷಿಸಿಕೊಂಡು ಬರಲಾಗುತ್ತಿದೆ. ಇದರಲ್ಲಿ ೧೩(ಹದಿಮೂರು) ಹಸುಗಳು ಮತ್ತು ೨೩ (ಇಪ್ಪತ್ತಮೂರು) ಹೋರಿಗಳು ಇವೆ.

ಗೋಶಾಲೆಯಲ್ಲಿ ಈ ಕೆಳಗಿನ ಗವ್ಯ ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು ಮೂರು ಮಂದಿ ಪೂರ್ಣಾವಧಿ ಕೆಲಸಗಾರರು ಹಾಗೂ ಇಬ್ಬರು ತಯಾರಿಕೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅಮೃತಸಾರ, ನಿರ್ಮಲಗಂಗಾ, ಶುಚಿಸ್ಮಿತಾ, ನಿವೇದನಾ, ಅಮೃತಮುಲಾಮು, ಸುಚರಣ, ಪಂಚಗವ್ಯ ಘೃತ, ಸುಕಾಂತಿ, ಶಮನತೈಲ, ಹಿಮಗಿರಿತೈಲ, ಸಮೃದ್ಧಿಕೀಟನಿಯಂತ್ರಕ, ಸುರಭಿಧೂಪ ಹಾಗೂ ವಿಭೂತಿ, ಅಭ್ಯಂಗತೈಲ.

ಗೋವುಗಳ ಸಾಕಣೆಗಾಗಿ ಇಬ್ಬರು ಕೆಲಸಗಾರರು ಇದ್ದು ಮೇವು ಮತ್ತು ಶುಚಿತ್ವದ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ. ಗವ್ಯ ಉತ್ಪನ್ನ ಘಟಕದ ಇಂಧನದ ಅಗತ್ಯವನ್ನು ಎರಡು ಬಯೋಗ್ಯಾಸ್ ಘಟಕಗಳು ಪೂರೈಸುತ್ತಿವೆ.

ಗೋಶಾಲಾ ಪರಿಸರದಲ್ಲಿ ಚಿಕ್ಕ ಕುಟೀರವೊಂದಿದ್ದು ಪ್ರತೀ ತಿಂಗಳು ಭಜನೆ ಹಾಗೂ ಕುಂಕುಮಾರ್ಚನೆಗಳು ಅಲ್ಲಿ ನಡೆಯುತ್ತಿದೆ.

ಗೋಶಾಲಾ ವ್ಯಾಪ್ತಿಗೆ ಬರುವ ಸ್ಥಳದಲ್ಲಿ ಎತ್ತರ ಪ್ರದೇಶದಲ್ಲಿ ಸುಮಾರು ಮೂರು ಎಕರೆ ಜಾಗಕ್ಕೆ ಬಿದ್ದು ಪೋಲಾಗಿ ಹರಿದುಹೋಗುತ್ತಿದ್ದ ನೀರನ್ನು ತಡೆದು ನಿಲ್ಲಿಸುವುದಕ್ಕಾಗಿ ಬಂಟ್ವಾಳ ರೋಟರಿ ಕ್ಲಬ್‌ನವರು ನಮಗೆ ೧೦,೦೦೦/-ರೂ.ಗಳ ಅನುದಾನ ಒದಗಿಸಿರುತ್ತಾರೆ. ಅದರಲ್ಲಿ ೧೦,೦೦,೦೦೦ ಲೀಟರ್ ಸಾಮರ್ಥ್ಯದ ’ಇಂಗುಗುಂಡಿ’ಯ ನಿರ್ಮಾಣ ಸಾಧ್ಯವಾಗಿದೆ.

ವಿಠಲ ಪದವಿ ಪೂರ್ವ ಕಾಲೇಜಿನ ಓSS ಘಟಕದ ವಿದ್ಯಾರ್ಥಿಗಳು ನೀರಿಂಗಿಸುವುದಕ್ಕಾಗಿ ೫,೦೦,೦೦೦ ಲೀ. ಸಾಮರ್ಥ್ಯದ ಇಂಗುಗುಂಡಿ ನಿರ್ಮಿಸಿರುತ್ತಾರೆ.

ವಿಟ್ಲ ಸೀಮಾ ಪರಿಷತ್ತಿನ ವನಜೀವನಯಜ್ಞ ವಿಭಾಗದ ವತಿಯಿಂದ ವನಜೀವನ ಯಜ್ಞ ಕಾರ್ಯಕ್ರಮದಂತೆ ಹಲವಾರು ಗಿಡಮೂಲಿಕೆಗಳನ್ನು ನೆಟ್ಟು ಬೆಳೆಸಲಾಗಿದೆ.

ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ವತಿಯಿಂದ ನೆಟ್ಟು ಬೆಳೆಸುವುದಕ್ಕಾಗಿ ನೀಡಿದ ಕಿರಾಲ್ ಭೋಗಿ ಗಿಡಗಳನ್ನು ಮುಳಿಯ ಶಾಲಾ ವಿದ್ಯಾರ್ಥಿಗಳು ಈ ಪ್ರದೇಶದಲ್ಲಿ ನೆಟ್ಟು ಬೆಳೆಸಿದ್ದಾರೆ.

ಊರ ಮಹನೀಯರು ಸುಮಾರು ೫೦೦ ಗೇರುಗಿಡಗಳನ್ನು ಶ್ರಮದಾನದ ಮೂಲಕ ನೆಟ್ಟುಕೊಟ್ಟಿದ್ದಾರಲ್ಲದೆ ಅವುಗಳಲ್ಲಿ ಫಲ ದೊರೆಯಲು ಪ್ರಾರಂಭವಾಗಿದೆ.

ನೀರಿಂಗಿಸಲು ಹಲವು ಅವಕಾಶಗಳು ಈ ಭೂಮಿಯಲ್ಲಿರುವುದರಿಂದ ೮,೦೦,೦೦೦ಲೀ. ಸಾಮರ್ಥ್ಯದ ಒಂದು ಮದಕವನ್ನು ನಿರ್ಮಿಸಲಾಗಿದೆ.

ಹೊಸದಾಗಿ ನಿರ್ಮಿಸಲಾಗುತ್ತಿರುವ ಗೋಶಾಲೆಗೆ ತಾಗಿಕೊಂಡು ಗೋವುಗಳೇ ಇಳಿದುಹೋಗಿ ನೀರು ಕುಡಿಯುವಂತೆ ಕೊಳವೊಂದು ನಿರ್ಮಾಣಗೊಂಡಿದೆ.

ಶ್ರೀಮಠದ ಜಲಂಭರಣ ಯೋಜನೆಯಡಿಯಲ್ಲಿ ಮುಳಿಯ ಶಾಲಾ ವಿದ್ಯಾರ್ಥಿಗಳು ಹಲವಾರು ನೀರು ಇಂಗುವಂತೆ ತಡೆಕಟ್ಟುಗಳನ್ನು ನಿರ್ಮಿಸಿದ್ದಾರೆ.

ಗೋಶಾಲೆಯ ಯಾವತ್ತೂ ಚಟುವಟಿಕೆ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುತ್ತಿರುವವರು ದಿ| ಬಿ.ಕೆ. ಈಶ್ವರ ಭಟ್ಟರ ಶ್ರೀಮತಿ ಹೇಮಾವತಿ ಅಮ್ಮನವರು.

ಶ್ರೀಗುರುಗಳ ಆಶೀರ್ವಾದ, ಆಡಳಿತ ಮಂಡಳಿಯ ನಿರ್ದೇಶನ, ಕಾರ್ಯಕರ್ತರ ಶ್ರಮ, ಕೆಲಸದವರ ದುಡಿತ ಹಾಗೂ ಊರವರ ಸಹಕಾರದೊಮದಿಗೆ ಮುಳಿಯದ ಅಮೃತಧಾರಾ ಗೋಶಾಲೆಯು ತನ್ನ ಕಾಲಮೇಲೆ ತಾನೇ ನಿಲ್ಲಲು ಪ್ರಯತ್ನಿಸುತ್ತಿದೆ ಎಂದೆನ್ನಲು ಸಂತೋಷವಾಗುತ್ತಿದೆ.

ಅತೀ ಅಗತ್ಯವಾಗಿ ಆಗಬೇಕಾದ ಕೆಲಸಗಳು ಸಾಕಷ್ಟಿದ್ದರೂ –

  • ಸುಸಜ್ಜಿತ ಗವ್ಯ ಉತ್ಪನ್ನ ಘಟಕ.
  • ಗೋಪಾಲಕರ ಹಾಗೂ ಕೆಲಸದವರ ವಸತಿ.
  • ಗೋಶಾಲೆಯ ಭೇಟಿ ಸಂದರ್ಭದಲ್ಲಿ ಶ್ರೀಗುರುಗಳಿಗೆ ವಸತಿ.
  • ಭದ್ರತೆಯ ದೃಷ್ಟಿಯಿಂದ ನೋಡಿದಾಗ ಸುಸಜ್ಜಿತ ಕಛೇರಿ.
  • ತಿಂಗಳ ಭಜನೆ, ಕುಂಕುಮಾರ್ಚನೆ, ಸಮಾವೇಶ ಇತ್ಯಾದಿಗಳಿಗಾಗಿ ಚಿಕ್ಕದೊಂದು ಸಭಾಮಂಟಪ.
  • ಧ್ಯಾನ ಮಾಡಲು ಅನುಕೂಲದ ಧ್ಯಾನಮಂದಿರ ಇತ್ಯಾದಿಗಳು ಶೀಘ್ರ ನಿರ್ಮಾಣವಾಗಬೇಕಾದವುಗಳು.

ಗೋಸಾಕಣೆ ಲಾಭದಾಯಕವಲ್ಲ, ಕೃಷಿಯಲ್ಲಿ ಬರೀ ನಷ್ಟ ಎಂದು ಹೇಳುವ ರೈತರು ಭ್ರಮನಿರಸನ ಹೊಂದಿರುವ ಈ ದಿನಗಳಲ್ಲಿ ಗೋ ಆಧಾರಿತ ಕೃಷಿಯ ಜೊತೆಜೊತೆಗೆ ಆರೋಗ್ಯಕ್ಕೆ ಯಾವುದೇ ಹಾನಿಯಿರದ ಗವ್ಯ ಔಷಧಿಗಳು ಹಾಗೂ ಉತ್ಪನ್ನಗಳ ಮಾರಾಟದಿಂದ ಹೇಗೆ ದೈನಂದಿನ ಖರ್ಚುವೆಚ್ಚಗಳನ್ನು ಭರಿಸಬಹುದೆಂದು ಈ ಗೋಶಾಲೆಯು ತೋರಿಸಿಕೊಟ್ಟಿದೆ.

Facebook Comments