LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಹೆಸರೆಂಬ ಕೆಸರೊಳು..

Author: ; Published On: ರವಿವಾರ, ಮಾರ್ಚ 14th, 2010;

Switch to language: ಕನ್ನಡ | English | हिंदी         Shortlink:

|| ಹರೇರಾಮ ||

ಮೊಟ್ಟಮೊದಲಬಾರಿಗೆ ಗಟ್ಟಿ ಗಟ್ಟಿ ಅಕ್ಕಿಯಿಂದ ಮೃದು – ಮೃದುವಾದ, ಮಧುರ – ಮಧುರವಾದ, ರುಚಿ – ರುಚಿಯಾದ ಅನ್ನವನ್ನು ಸಿದ್ಧಪಡಿಸಬಹುದೆಂಬುದನ್ನು ಯಾರು ಕಂಡುಹಿಡಿದರು..?

ಮನವನ್ನು ಮನಗಳೊಂದಿಗೆ ಬೆರೆಸಲು ನೆರವೀಯುವ ಅಕ್ಷರಗಳನ್ನು ಮೊಟ್ಟಮೊದಲು ಕಂಡುಹಿಡಿದವರಾರು..?

ಬೆಣ್ಣೆ- ಬೆಣ್ಣೆಯಂತಹ ಹತ್ತಿಯಿಂದ ಎಳೆ – ಎಳೆಯಾಗಿ ನೂಲೆಳೆದು ಹಾಗೊಂದು – ಹೀಗೊಂದು ನೇಯ್ದು, ಮೈಮರೆಸುವ – ಮೈಮೆರೆಸುವ ಉಡುಗೆ ತೊಡುಗೆಗಳನ್ನು ನಿರ್ಮಿಸಬಹುದೆಂಬುದು ಯಾರ ಅನ್ವೇಷಣೆ..?

ಬಾಯಾರಿದರೆ ಬಾವಿಗಿಳಿಯಬೇಕಾಗಿಲ್ಲ…!
ಕೊಡದ ಕೊರಳಿಗೆ ಕುಣಿಕೆ ತೊಡಿಸಿ ಬಾವಿಗಿಳಿಸಿದರೆ ಅದರೊಳಗೆ ಕುಳಿತು ನೀರೇ ಮೇಲೇರಿ ನಮ್ಮೆಡೆಗೆ ಬರಬಹುದೆಂಬುದನ್ನು ಕಂಡುಹಿಡಿದವನ ಹೆಸರೇನು..?

ಅಕ್ಕಿಯೊಳಗನ್ನವನು ಮೊದಲಾರು ಕಂಡವನು..?|
ಅಕ್ಕರದ ಬರಹಕ್ಕೆ ಮೊದಲಿಗನದಾರು..? ||
ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ.. |
ಸಿಕ್ಕುವುದೆ ನಿನಗೆ ಜಸ – ಮಂಕುತಿಮ್ಮ…||

ಬದುಕಿನ ಭವನದ ಮೂಲಾಧಾರಶಿಲೆಗಳನ್ನಿಟ್ಟವರ ಗುರುತೇ ಇಲ್ಲ…!
ಆದರೆ ಹೆಸರಿಗಾಗಿ ಓಟ ಮಾತ್ರ ನಿಂತಿಲ್ಲ..!

ಹೆಸರಿಗಾಗಿ ಉಸಿರುಗಟ್ಟಿ ಓಡುವವರೇ…….!!!!
ಈ ಬ್ರಹ್ಮಾಂಡದಲ್ಲಿ ಅದೆಲ್ಲಿ ಕೆತ್ತಿದರೂ ಶಾಶ್ವತವಾಗಿ ಉಳಿಯದು ನಿಮ್ಮ ಹೆಸರು..!!

ಸಂತಸಾಹಿತ್ಯದಲ್ಲಿ ಕಂಡುಬರುವ ಕಥೆಯೊಂದನ್ನು ಕೇಳಿ..

ಒಮ್ಮೆ….

ಭೂಮಿಯಲ್ಲೊಂದು ದೊಡ್ಡ ಸುದ್ದಿ ಯಾಯಿತು..
ಇಲ್ಲಿ ಅತಿದೊಡ್ಡ ಸಾಧನೆ ಮಾಡಿದವರಿಗೆ ಅಲ್ಲಿ ( ಸ್ವರ್ಗದಲ್ಲಿ) ತಮ್ಮ ಹೆಸರನ್ನು ಮಹಾಪರ್ವತವೊಂದರಲ್ಲಿ ಕೆತ್ತಿ ಕೊಳ್ಳಲು ಅವಕಾಶವಿದೆೆ ಎಂಬುದಾಗಿ..
ಅಂದಿನ ಭೂಮಿಯ ಅತಿದೊಡ್ಡ ರಾಜನ ಕಿವಿಗಳಿಗೆ ಈ ವಿಷಯ ತಲುಪುತ್ತಿದ್ದಂತೆಯೇ…
ಆತನಿಗೆ ಹುಚ್ಚು ಹಿಡಿಯಿತು..
ಹೆಸರಿನ ಹುಚ್ಚು..
ಅದು ಬೇರೆಲ್ಲ ಹುಚ್ಚಿಗಿಂತ ಹೆಚ್ಚು.. !!

ತನ್ನ ಹೆಸರು ಸ್ವರ್ಗದ ಪರ್ವತದಲ್ಲಿ ಕೆತ್ತಲ್ಪಡಬೇಕು ಎನ್ನುವ ದಾಹ ಧನದಾಹವನ್ನೂ ಮೀರಿದಾಗ…!
ಅಂದಿನವರೆಗೂ ಚಿಕ್ಕಾಸೂ ಬಿಚ್ಚದ ದೊರೆ, ಬೊಕ್ಕಸ ಬರಿದಾಗುವಂತೆ, ಜಗವೇ ಬೆಕ್ಕಸ ಬೆರಗಾಗುವಂತೆ ದಾನ – ಧರ್ಮಗಳನ್ನು ಮಾಡಿದ್ದೇನು..!?
ಕೆರೆ – ಬಾವಿಗಳನ್ನು ಕಟ್ಟಿದ್ದೇನು..!?
ಅನ್ನಛತ್ರ – ಅರವಟ್ಟಿಗೆಗಳ ನಿರ್ಮಾಣ ಮಾಡಿದ್ದೇನು..!?
ಮಠ – ಮಂದಿರಗಳಿಗೆ ಭೂಮಿಯನ್ನು ಉಂಬಳಿ ಬಿಟ್ಟಿದ್ದೇನು…….!

ಕೊನೆಗೂ ಆ ದಿನ ಬಂತು..!

ಇಲ್ಲಿಯ (ಭೂಮಿಯ) ಜೀವನ ಮುಗಿದು ಅಲ್ಲಿಯ (ಸ್ವರ್ಗದ) ಜೀವನ ಆರಂಭವಾಗುವ ದಿನ..
ಇಹಲೋಕದ ಯಾತ್ರೆಯನ್ನು ಮುಗಿಸಿ ಸ್ವರ್ಗವನ್ನು ಪ್ರವೇಶಿಸಿದ ರಾಜ ಅಲ್ಲಿ ಮೊದಲು ಹುಡುಕಿದ್ದೇ ಆ ಪರ್ವತವನ್ನು..!
ದೇವದೂತರು ರಾಜನನ್ನು ಪರ್ವತದ ಬಳಿ ಕರೆದೊಯ್ದರು..
ಯಾವುದಕ್ಕೆಂದೇ ಬದುಕೆಂಬ ಭಾಗ್ಯವನ್ನೇ ತೆತ್ತಿದ್ದನೋ ಅದು ಸಾಕಾರವಾಗುವ ಸಂಭ್ರಮದ ಕ್ಷಣ..!
ಎಲ್ಲಿಲ್ಲದ ಉತ್ಸಾಹದಲ್ಲಿ ರಾಜ ತನ್ನ ಹೆಸರನ್ನು ಕೆತ್ತಲು ಮುಂದಾದರೆ…….

ಅಲ್ಲಿ ಸ್ಥಳವೇ ಇಲ್ಲ..!!
ಪಾದಮೂಲದಿಂದ ಶಿಖರಾಗ್ರದವರೆಗೆ ಪರ್ವತದ ಅಂಗುಲ – ಅಂಗುಲವೂ ಹೆಸರುಗಳಿಂದ ತುಂಬಿಹೋಗಿತ್ತು..!!

ರಾಜನ ಮುಖದಲ್ಲಿ ದೊಡ್ಡ ಪ್ರಶ್ನಾರ್ಥಕ ಚಿಹ್ನೆ..!

” ದೇವಲೋಕದಲ್ಲಿಯೂ ಸುಳ್ಳು ಭರವಸೆಗಳೇ..? ಇಲ್ಲಿ ಹೆಸರು ಬರೆಯಲು ಸ್ಥಳವಾದರೂ ಎಲ್ಲಿದೆ..? “

ರಾಜನ ಪ್ರಶ್ನೆಗೆ ದೇವದೂತ ಅತ್ಯಂತ ಸರಳವಾಗಿ ಉತ್ತರಿಸಿದ..

” ಅದಕ್ಕೇನು..? ಯಾವುದಾದರೂ ಒಂದು ಹೆಸರನ್ನು ಅಳಿಸಿದರಾಯಿತು, ಆ ಸ್ಥಳದಲ್ಲಿ ತಮ್ಮ ಹೆಸರನ್ನು ಕೆತ್ತಿದರಾಯಿತು..!! “

ಕ್ಷಣಕಾಲ ಜಡವಾಗಿಹೋಯಿತು ರಾಜನ ಮನಸ್ಸು…!
ಬೆಟ್ಟದ ತುಂಬೆಲ್ಲ ತುಂಬಿರುವ ಅನಂತ ಹೆಸರುಗಳ ಮಧ್ಯದಲ್ಲಿ ಎಲ್ಲೋ ಒಂದೆಡೆ ಇರಬಹುದಾದ ತನ್ನ ಹೆಸರನ್ನು ಎಷ್ಟುಜನ ಗಮನಿಸಿಯಾರು..?
ಎಷ್ಟು ಕಾಲ ತಾನೇ ಬೆಟ್ಟದಲ್ಲಿ ತನ್ನ ಹೆಸರು ಉಳಿದಿರಲು ಸಾಧ್ಯ..?
ಇನ್ನೊಬ್ಬ ಬಂದು ಅಳಿಸುವವರೆಗೆ ತಾನೆ..?
ರಾಜನ ಭ್ರಮೆ ಹರಿದಿತ್ತು…
ಆತನಿಗೆ ಬೆಟ್ಟದಲ್ಲಿ ತನ್ನ ಹೆಸರು ಬರೆಯಬೇಕೆಂದೆನಿಸಲೇ ಇಲ್ಲ…
ಆದುದರಿಂದ ಬೆಟ್ಟದಲ್ಲಿ ರಾಜನ ಹೆಸರಿರಲಿಲ್ಲ.. ಆದರೆ ರಾಜನ ಮನದಲ್ಲಿ ಬೆಟ್ಟದಷ್ಟು ತೃಪ್ತಿ ನೆಲೆಸಿತ್ತು..!!!!

ಹರಿವು ಜಗತ್ತಿನ ಸ್ವಭಾವ..!
” ಗಚ್ಛತಿ ಇತಿ ಜಗತ್ ”
ಜಗತ್ತು ಎಂಬ ಶಬ್ದದ ಅರ್ಥವೇ ಚಲನಶೀಲ ಎಂಬುದಾಗಿ..!
ನದೀಪ್ರವಾಹದಲ್ಲಿ ಪ್ರತಿಕ್ಷಣವೂ ಹೊಸನೀರು ಬರುತ್ತಲೇ ಇರುವಂತೆ…
ಪ್ರಕೃತಿಯೂ ಪ್ರತಿಕ್ಷಣವೂ ಹೊಸ ಹೊಸದಾಗುತ್ತಲೇ ಇರುತ್ತದೆ.
ಹೊಸ ನೀರು ಬಂದಾಗ ಹಳೆ ನೀರು ಮರೆಯಾಗುವಂತೆ.. ಜಗದಲ್ಲಿ ಹೊಸತನ ಬರುವಾಗ ಹಳತು ಮರೆಯಾಗಲೇಬೇಕು..
ಸೃಷ್ಟಿಯ ನಿಯಮವೇ ಹೀಗಿರುವಾಗ ನಿನ್ನ ಹೆಸರೊಂದು ಮಾತ್ರ ಹೇಗೆ ಶಾಶ್ವತವಾಗಿ ಉಳಿಯಲು ಸಾಧ್ಯ…?

ಹೆಸರು ಉಳಿದಿರುವಷ್ಟು ಕಾಲವಾದರೂ ಅದೆಷ್ಟು ಎಂದು ತೋರಬಹುದು..?
ಅನಂತಕೋಟಿ ಬ್ರಹ್ಮಾಂಡಗಳಲ್ಲಿ ನಮ್ಮ ಬ್ರಹ್ಮಾಂಡ ಒಂದು ಧೂಲೀಕಣ ಮಾತ್ರ..!
ಅದರೊಳಗೆ ನಮ್ಮ ಭೂಮಿ ಎಷ್ಟರದು?
ಭೂಮಿಯಲ್ಲಾದರೂ ಇರುವ, ಬರುವ, ಬಂದು ಹೋದ ಮಹನೀಯರಲ್ಲಿ ನೀನೆಷ್ಟರವನು..?
ಸಾಧಕರ ಸಾಗರದಲ್ಲಿ ನೀನೊಂದು ಬಿಂದು ಮಾತ್ರವೂ ಅಲ್ಲ..

ಹುಟ್ಟಿದವರೆಲ್ಲ ಸಾಯಲೇಬೇಕು..
ರಿಯಾಯಿತಿ ಇಲ್ಲದ ವಿಧಿ ಅದು..
ಒಮ್ಮೆ ಸತ್ತು ಹುಟ್ಟಿದರೆ ಆ ಹೆಸರಿಗೂ ನಿನಗೂ ಯಾವ ಸಂಬಂಧವೂ ಇಲ್ಲ.. !!
ನೀನೆಷ್ಟು ಶಾಶ್ವತವೊ ನಿನ್ನ ಹೆಸರು ಅಷ್ಟೇ ಶಾಶ್ವತ..

ಹೆಸರು ಹೆಸರೆಂಬುದೇಂ? ಕಸುರು ಬೀಸುವ ಗಾಳಿ |

ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ..?||

ಶಿಶುವಾಗು ನೀಂ ಮನದಿ, ಹಸುವಾಗು , ಸಸಿಯಾಗು |

ಕಸಬೊರಕೆಯಾಗಿಳೆಗೆ – ಮಂಕುತಿಮ್ಮ ||

ಲೋಕೋಪಕಾರದ ಕಾರ್ಯಗಳನ್ನು ಮಾಡಬಾರದೆಂಬುದು ಈ ಲೇಖನದ ತಾತ್ಪರ್ಯವಲ್ಲ..
ಆದರೆ ಉದ್ದೇಶಶುದ್ಧಿ ಬೇಕು..
ನಿರ್ಮಲ ಪ್ರೇಮದಿಂದ ಲೋಕಸೇವೆಯನ್ನು ಮಾಡು, ಹೆಸರಿಗಾಗಿ ಅಲ್ಲ…

ಹೆಸರಿನ ಹುಚ್ಚು ಸಹಜವಲ್ಲ ಎಂಬುದು ಮನಸ್ಸಿಗೆ ಬರಬೇಕಾದರೆ ನೀನೊಮ್ಮೆ ಹಿಂದಿರುಗಿ ನೋಡಬೇಕು..
ನೀನೀ ಭೂಮಿಗೆ ಬಂದ ಹೊಸತರಲ್ಲಿ….
ಶಿಶುವಾಗಿದ್ದ ಸಮಯದಲ್ಲಿ….
ಹೆಸರಿನ ಪರಿವೆ ನಿನಗಿತ್ತೇ…..?
ಇದು ಮತ್ತೆ ಸೇರಿದ ಕೃತ್ರಿಮ ರೋಗ..!

ಹೆಸರಿನ ಪರಿವೆಯೇ ಇಲ್ಲದೆ ಹಸು ಅದೆಷ್ಟು ಉಪಕಾರಗಳನ್ನು ಲೋಕಕ್ಕೆ ಮಾಡುವುದಿಲ್ಲ..?
ನಮ್ಮ ಉಸಿರಿನ ಕೆಸರನ್ನು ತೊಳೆಯುವ ಸಸಿಗಳಿಗೆ ಹೆಸರಿನ ಪರಿವೆಯಿದೆಯೇ..?
ಒಮ್ಮೆ ಗಮನಿಸಿ ನೋಡು ನಿನ್ನ ಮನೆಯ ಕಸಬೊರಕೆಯನ್ನು..
ಕಸಬೊರಕೆಯ ಕಾರ್ಯ ಪ್ರತ್ಯಕ್ಷ..
ಅದು ಮಾತ್ರ ಯಾವಗಲೂ ಪರೋಕ್ಷ..
ಶುದ್ಧಿಶೋಭೆಗಳು ಎದ್ದು ತೋರಿದರೂ ಅವುಗಳ ಮೂಲ ಕಾರಣವಾದ ಕಸಬೊರಕೆ..?
ಎಲ್ಲೋ ಮೂಲೆಯಲ್ಲಿ…..
ಬಾಗಿಲ ಹಿಂದೆ….
ಮರೆಯಾಗಿ…..!

ಸಂಪೂರ್ಣ ಸೌಧದ ಭಾರವನ್ನೇ ಹೊತ್ತ ಆಧಾರ ಶಿಲೆ ಎಲ್ಲಿಯಾದರೂ ಕಾಣುವುದುಂಟೇ..?
ಎಲ್ಲಿಯೋ ಭೂಗರ್ಭದಲ್ಲಿ ಮರೆಯಾಗಿರುತ್ತದೆ ಅದು..!
ಒಂದು ವೇಳೆ ನಮ್ಮ ಹಾಗೆ ನಾಲ್ಕು ಜನರ ಮಧ್ಯೆ ಮಿಂಚಿ ಕಾಣಿಸಿಕೊಳ್ಳಬೇಕೆಂಬ ಚಪಲದಿಂದ ಅದು ಎದ್ದು ಹೊರ ಬಂದರೆ….. ಊಹಿಸಿಕೊಳ್ಳಿ…. ಸೌಧದ ಗತಿ ಏನಾಗಬಹುದೆಂದು..!?

ರಾಮ ಬಾಣ :-

ಹೆಸರಿನ ಹುಚ್ಚು ಹಿಡಿದವನ ಅಂತರಂಗ ಸೌಧಕ್ಕಾಗುವುದು ಅದೇ ಗತಿ….!!!

          || ಹರೇರಾಮ ||

15 Responses to ಹೆಸರೆಂಬ ಕೆಸರೊಳು..

 1. ಜಗದೀಶ್ B R

  ಹೆಸರಿಗೆ ಹೆಸರು ಎಂದು ಹೆಸರಿಟ್ಟ ಹೆಸರಾಂತ ವ್ಯಕ್ತಿಯ ಹೆಸರೇ ಹೇಳಹೇಸರಿಲ್ಲದಾಗಿರುವಾಗ…..

  [Reply]

 2. Raghavendra Narayana

  ಅದ್ಭುತ ಲೇಖನ
  .
  ಹಾಗಾದರೆ ಯಾವುದು ಶಾಶ್ವತ?

  [Reply]

 3. sree guru

  ನಿರಂತರವಾಗಿ ಚಲಿಸುತ್ತಿರುವ ಈ ಚಕ್ರ ಆರಂಬವಾದ್ದು ಹೇಗೆ ?

  [Reply]

 4. Anuradha Parvathi

  ಇಡಿ ಲೇಖನ ಅದ್ಭುತ. ರಾಮ ಬಾಣ ಅತ್ಯದ್ಭುತ.

  ಕರ್ಮಣ್ಯೇವಾಧಿಕಾರಸ್ತೆ ಮಾ ಫಲೆಷು ಕದಾಚನ…..ಕೄಷ್ಣ ನಮಗೆ ಕೊಟ್ಟಿರುವ ಅದ್ಭುತ ಕೊಡುಗೆ. ಇದನ್ನು ಅನುಸರಿಸಿದರೆ ಹೆಸರಿಗಾಗಿ ಮನ ಹಪ ಹಪಿಸುವುದಿಲ್ಲ ಅಲ್ಲದ ಗುರುಗಳೆ?

  [Reply]

 5. vdaithota

  ಅನ್ನ ಮಾಡ ಕಲಿಸಿದವನೇ ವಿಷವ ಮಾಡಲೂ ಕಲಿಸಿದಾ…
  ಆದರೆ ಅನ್ನದೊಳಗೆ ವಿಷವ ಬೆರೆಸುವುದ…
  ಕಲಿಸಿದವನಾರು ಗುರುವೇ…???!!!!

  [Reply]

 6. Raghavendra Narayana

  ಯಾವುದೆ ಒ೦ದು ಕಾರ್ಯ ಮಾಡುವುದಕ್ಕೂ ಪ್ರೇರಣೆ ಬೇಕಾಗುತ್ತದೆ.
  “ಹೆಸರು” – ತು೦ಬಾ ಜನಕ್ಕೆ ಪ್ರೇರಣೆ.
  “ನಿರ್ಮಲ ಪ್ರೇಮ” ಸುಲಭ ಸಾಧ್ಯವೆ?
  ನಮ್ಮ ಯೋಚನೆ ಹಾಗು ಯೋಜನೆ ಬಹು ಸ೦ಕುಚಿತ. ನಮ್ಮಲ್ಲಿ ಬಹಳಷ್ಟು ಜನಕ್ಕೆ ಸಣ್ಣ ಯೋಜನೆ ಸಹ ಇಲ್ಲ. ಕೆಲಸ ಇದೆ, ಕಾಸು ಬರುತ್ತದೆ, ವಾರ-ತಿ೦ಗಳು-ವರ್ಷ ಸುತ್ತುತ್ತಿದೆ – ಆಮೇಲೆ ಇದ್ದೆ ಇದೆ ಮಾತ್ರೆ ನು೦ಗುವ ಕಾರ್ಯ.. ಇನ್ಯಾಕೆ ಯೋಚನೆ.
  ಕೆಲವೊಮ್ಮೆ “ಹೆಸರು” ಎ೦ಬ ಕಾರಣವಾದರೂ ಸರಿಯೆ, ಲೋಕೋಪಕಾರದ ಕಾರ್ಯಗಳನ್ನು ಮಾಡುವುದು ಒಳಿತು….? ಇಲ್ಲವಾದರೆ ಪೂರ್ಣ ಸೋಮಾರಿಗಳಾಗಿಬಿಡುತ್ತೇವೆ….?
  .
  ನಿರ್ಮಲ ಪ್ರೇಮವನ್ನು ಸ್ವಲ್ಪ ಸ್ವಲ್ಪವಾದರು ಕಲಿಯುತ್ತ, ಲೋಕಪಕಾರಿಯಾದ ಕಾರ್ಯವನ್ನು ಸ್ವಲ್ಪ ಸ್ವಲ್ಪವಾದರು ಮಾಡುವುದು ಒಳಿತು.
  ಕೇವಲ ಸ್ವಲ್ಪ ಹಣವನ್ನು ಕೆಲವು ಸ೦ಘ ಸ೦ಸ್ಥೆಗಳಿಗೆ ಕೊಡುವುದರಿ೦ದ ಯಾವ ಲೋಕವೂ ಉದ್ಧಾರವಾಗುವುದಿಲ್ಲ….? ಏಷ್ಟೋ ಬಾರಿ ಈ ರೀತಿ ಬ೦ದ ಹಣ, ಅನೇಕ ಗೋಮುಖ ವ್ಯಾಘ್ರಗಳ ಪಾಲಗುತ್ತದೆ. ಹಣ ಬೇಕು, ಹಣಕ್ಕಿ೦ತ ನಾಲ್ಕು ಜನಕ್ಕೆ ಒಳಿತಾಗಲಿ ಎ೦ಬ ಭಾವ ಹೆಚ್ಚಿನ ಒಳಿತನ್ನು ತರುತ್ತದೆ ಎನ್ನಬಹುದೆ? ಶ್ರಮ ದಾನ ಉತ್ತಮ.
  .
  “ಅನಂತಕೋಟಿ ಬ್ರಹ್ಮಾಂಡಗಳಲ್ಲಿ ನಮ್ಮ ಬ್ರಹ್ಮಾಂಡ ಒಂದು ಧೂಲೀಕಣ ಮಾತ್ರ..!
  ಅದರೊಳಗೆ ನಮ್ಮ ಭೂಮಿ ಎಷ್ಟರದು? ”
  ಗುರುಗಳ ಈ ಮಾತು, ಭಗವದ್ಗೀತೆಯ “ರಾಜ ಯೋಗ” ನೆನಪಿಸಿತು – ನಿರ್ಮಲ ಪ್ರೇಮಕ್ಕೆ ಇದು ಸಹಾಯ ಮಾಡಬಲ್ಲದೆ..? – ಕೃಷ್ಣನ ಬದುಕು ಸಹಾಯ ಮಾಡಬಲ್ಲದೆ..?
  .
  ಶಿವನ ವ್ಯೆರಾಗ್ಯ ಕೃಷ್ಣನ ಬದುಕ್ಕಲಿ ಕಾಣಬಹುದೆ

  [Reply]

 7. shobha lakshmi

  ಕಣ್ಣು ತೆರೆಸಿದಿ ಗುರುದೇವಾ………..

  ಹೆಸರಿನ ಹಿ೦ದೆ ಇರುವುದು ಕೆಸರು ತಾನೆ……..

  [Reply]

  RAVINDRA T L BHATT Reply:

  ಅದು ಹೇಗೆ?
  ಒಳ್ಳೆಯ ಹೆಸರು ಮಾಡಲು,
  ಕೈ ಕೆಸರಾಗಬೇಕು,
  ಹೆಸರು ಗಳಿಸಿದರೆ,ಉಳಿಸುಕೊಂಡು ಹೋಗ ಬೇಕಸ್ಟೆ.
  ಹೆಸರ ಹಿಂದೆ ಕೆಸರಾಗುವ ಕೆಲಸ ಮಾಡಿದರಾಯ್ತಸ್ಟೆ.

  [Reply]

 8. RAVINDRA T L BHATT

  ಹೆಸರ
  ಹಿಂದೆ ನಾವು
  ಹೋಗಬಾರದು
  ನಾವು ಮಾಡುವ ಕಾಯಕ
  -ದ ಹಿಂದೆ ಬರುವಾದಾದರೆ ಬರಲಿ.
  ರಾಮನಾಗುವ ಕನಸು,
  ಕೃಷ್ಣನಾಗುವ ಕನಸು.
  ಹರಿಶ್ಚ್ಂದ್ರನಾಗುವ ಕನಸಿನಿಂದಾದರೂ,
  ಉಳಿದೀತೇನೋ,
  ಸಮಾಜದಲ್ಲಿ ಸ್ವಲ್ಪ ಒಳಿತುಗಳು.
  ಮಳೆ ಬೀಳಬೇಕಲ್ಲ,
  ಇಳೆ ನಗಬೇಕಲ್ಲ.

  ||ಹರೇ ರಾಮ||

  [Reply]

 9. Raghavendra Narayana

  ಅನ್ನದಾತುರಕ್ಕಿ೦ತ ಚಿನ್ನದಾತುರ ತೀಕ್ಷ್ಣ |
  ಚಿನ್ನದಾತುರಕ್ಕಿ೦ತ ಹೆಣ್ಣುಗ೦ಡೊಲವು ||
  ಮನ್ನಣೆಯ ದಾಹವೀಯೆಲ್ಲಕ೦ ತೀಕ್ಷ್ಣತಮ |
  ತಿನ್ನುವುದದಾತ್ಮವನೆ – ಮ೦ಕುತಿಮ್ಮ ||

  [Reply]

 10. Raghavendra Narayana

  ಸಿರಿಮಾತ್ರಕೇನಲ್ಲ, ಪೆಣ್ ಮಾತ್ರಕೇನಲ್ಲ |
  ಕರುಬಿ ಜನ ಕೆಸರುದಾರಿಯಲಿ ಸಾಗುವುದು ||
  ಬಿರುದ ಗಳಿಸಲಿಕೆಸಪ, ಹೆಸರ ಪರರಿಸಲೆಸಪ |
  ದುರಿತಗಳ್ಗೆಣೆಯು೦ಟೆ? – ಮ೦ಕುತಿಮ್ಮ ||

  [Reply]

 11. Raghavendra Narayana

  ಈ ಜಗದ ಗ೦ಧ ಪರಿಪರಿ ಹಸಿವ ಕೆಣಕುತಿರೆ |
  ಭೋಜನವ ನೀಡೆನೆನೆ ಮನ ಸುಮ್ಮನಿಹುದೆ? ||
  ಸಾಜಗಳ ಕೊಲ್ಲೆನುವ ಹಠಯೋಗಕಿ೦ತ ಸರಿ |
  ರಾಜಯೋಗದುಪಾಯ – ಮ೦ಕುತಿಮ್ಮ ||

  [Reply]

 12. Jeddu Ramachandra Bhatt

  ಇಷ್ಟು ದಿವಸ ನನಗೆ ಹೊಳೆಯದೆ ಇದ್ದ ಈ ಅಂತರಾರ್ಥವನ್ನು ತಿಳಿಸಿದ ನಿಮ್ಮಂಥ ಗುರುವನ್ನು ಪಡೆದ ನಾನೇ ಧನ್ಯ.

  [Reply]

 13. ************

  Hesaremba kesarannu… kaleyudu hege ……. idu naanu emba ahambavada moola stitina…..

  [Reply]

 14. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಅಬ್ಬ… ಯಾವ ಕ್ಷಣದಲ್ಲಿ ಈ ಹೆಸರೆಂಬ ಕೆಸರಿನೊಳಗೆ ಬಿದ್ದೆವೆಂದು ತಿಳಿಯುವುದಿಲ್ಲ… ಒಮ್ಮೆ ಬಿದ್ದ ಮೇಲೆ ‘ಹಂದಿಗೆ ಕೆಸರೇ ಹಿತವಾಗುವಂತೆ’ ಅಲ್ಲಿಂದ ಮೇಲೇಳಲಾಗುವುದಿಲ್ಲ… ಅಬ್ಬಬ್ಬ… ಗುರುವೇ………………ಕೈ ಹಿಡಿದು ಮುನ್ನಡೆಸೆನ್ನನು ಅನುಕ್ಷಣವೂ…

  [Reply]

Leave a Reply

Highslide for Wordpress Plugin