LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಜರೆಯದಿರು…ಜರೆಯ…!

Author: ; Published On: ರವಿವಾರ, ಜೂನ್ 6th, 2010;

Switch to language: ಕನ್ನಡ | English | हिंदी         Shortlink:

||ಹರೇರಾಮ||

ಸೋಮುವಿಗೆ ಆಕಸ್ಮಿಕವಾಗಿ ಯಮದೂತನ ಪರಿಚಯವಾಯಿತು….
ಮಾತನಾಡಿ ಮಾತನಾಡಿ ಅವರೀರ್ವರಲ್ಲಿ ಗಾಢವಾದ ಸ್ನೇಹ ಬೆಳೆಯಿತು..
ಬೀಳ್ಕೊಡುವ ಹೊತ್ತು ಬಂದಾಗ ಯಮದೂತ ಸೋಮುವಿಗೆ ಹೇಳಿದ..

“ಗೆಳೆಯಾ,ನನ್ನಿಂದ ಏನಾದರೂ ಸಹಾಯವಾಗಬೇಕಿದ್ದರೆ ಹೇಳು”..

“ನನಗೆ ಸಾವೇ ಇಲ್ಲದಂತೆ ಮಾಡುವೆಯಾ?” – ಸೋಮು ಕೇಳಿದ..!

“ಅದಾಗದು,ನನ್ನ ಕೈಮೀರಿದ ವಿಷಯವದು. ಬೇರೇನಾದರೂ ಕೇಳು”.

“ಹಾಗಿದ್ದರೆ ಕೊನೆಯಪಕ್ಷ ವರುಷಗಳ ಮೊದಲೇ ಸಾವಿನ ಮುನ್ಸೂಚನೆಯನ್ನಾದರೂ ನನಗೆ ನೀನು ಕೊಡಬೇಕು;
ಮತ್ತು ಕರೆದುಕೊಂಡು ಹೋಗಲು ನೀನೇ ಬರಬೇಕು…!!!”

“ತಥಾಸ್ತು…”
ಯಮದೂತ ತನ್ನ ಲೋಕಕ್ಕೆ ಪ್ರಯಾಣ ಬೆಳೆಸಿದ. . .

ಬಹಳ ಕಾಲ ಕಳೆಯಿತು.
ಸೋಮು ಈಗ ಮುಪ್ಪಿನ ಮುದುಕ..!
ಅದೊಂದು ದಿನ ಮತ್ತೆ ಯಮಲೋಕದ ಗೆಳೆಯನ ಆಗಮನವಾಯಿತು….!!

“ಏನು ಬಂದೆ ಗೆಳೆಯಾ ಬಹಳ ಕಾಲದ ನಂತರ…?”

“ಮಾತು ಕೊಟ್ಟಿದ್ದೆನಲ್ಲವೇ? ನಿನಗೆ ಸಾವು ಸನ್ನಿಹಿತವಾಗಿದೆ. ಕರೆದೊಯ್ಯಲು ನಾನೇ ಬಂದೆ..”

ಸೋಮುವಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದ ಅನುಭವ…!!
ವರುಷಗಳ ಮೊದಲೇ ತನಗೆ ಸಾವಿನ ಸೂಚನೆ ಸಿಗುವುದೆಂದೂ,ಮತ್ತುಳಿದ ಸಮಯದಲ್ಲಿ ಮತ್ತುಳಿದ ಆಸೆಗಳೆಲ್ಲವನ್ನೂ (ತಿನ್ನುವ,ತಿರುಗುವ,ಕುಡಿಯುವ,..ಇತ್ಯಾದಿ ಇತ್ಯಾದಿ . . .!) ಪೂರೈಸಿಕೊಳ್ಳಬಹುದೆಂದು ಆತ ಭಾವಿಸಿಕೊಂಡಿದ್ದ..
ಆದರೀಗ ಏಕಾಏಕಿ ಸಾವೇ ಎದುರು ಬಂದು ನಿಂತಾಗ ಗೆಳೆಯನ ಮೇಲೆ ಆಕ್ರೋಶವೇ ಉಂಟಾಯಿತು…

“ಹೀಗೂ ಮಿತ್ರದ್ರೋಹ ಮಾಡುವುದುಂಟೆ..!? ಮೇಲಿನ ಲೋಕದವರೂ ಮಾತಿಗೆ ತಪ್ಪಬಹುದೆ?
ಕೊಟ್ಟ ಮಾತಿನಂತೆ ಸಾವಿನ ಮುನ್ಸೂಚನೆಯನ್ನು ನನಗೆ ನೀನು ಕೊಡಬೇಕಿತ್ತಲ್ಲವೇ…?”

ಯಮದೂತನಿತ್ತ ಉತ್ತರ ಸೋಮುವಿನ ಮಾತ್ರವಲ್ಲ, ಸಕಲ ಮಾನವಕೋಟಿಯ ಕಣ್ತೆರೆಸುವ ಹಾಗಿತ್ತು…!!
ಮುಪ್ಪಿನ ಬಗ್ಗೆ ಅಪೂರ್ವವಾದ ,ಅತ್ಯಾಶ್ಚರ್ಯಕರವಾದ ವಿವರಣೆಯೊಂದನ್ನು ಅದು ಒಳಗೊಂಡಿತ್ತು…

“ಗೆಳೆಯಾ, ಅದೆಷ್ಟೋ ಬಾರಿ ಸಾವಿನ ಸೂಚನೆಗಳನ್ನು ನಿನಗೆ ನಾನು ಕೊಟ್ಟೆ. ಆದರೆ ಅವುಗಳನ್ನು ನೀನು ಅರ್ಥ ಮಾಡಿಕೊಳ್ಳಲಿಲ್ಲ.
ಮಾತ್ರವಲ್ಲ, ಕೃತ್ರಿಮ ವಿಧಾನಗಳಿಂದ ಆ ಸೂಚನೆಗಳನ್ನೇ ಮರೆಮಾಡಿ ಸುಳ್ಳು ವಿಶ್ವಾಸದಲ್ಲಿ ನೀನು ಬದುಕಿದರೆ ನಾನೇನು ಮಾಡಲಿ..?

ಮೊಟ್ಟಮೊದಲು ನಾನು ನಿನ್ನ ಕೂದಲನ್ನು ಬಿಳಿಯಾಗಿಸಿದೆ – ಆದರೆ ಅವುಗಳಿಗೆ ನೀನು ಕರಿಬಣ್ಣ ಹಚ್ಚಿದೆ…!!

ಮತ್ತೆ ನಿನ್ನ ಕಣ್ಣಿನ ಶಕ್ತಿಯನ್ನು ಕುಂದಿಸಿದೆ – ಆದರೆ ನೀನು ಕನ್ನಡಕ ಹಾಕಿಕೊಂಡೆ…!!

ಆಮೇಲೆ ನಿನ್ನ ಶ್ರವಣಶಕ್ತಿಯನ್ನು ಶಿಥಿಲಗೊಳಿಸಿದೆ – ಆದರೆ ನೀನು ಶ್ರವಣಸಾಧನವನ್ನು ಬಳಸಿದೆಯೇ ಹೊರತು, ನನ್ನ ಸೂಚನೆಯನ್ನರಿಯಲಿಲ್ಲ..!!

ನಂತರ ನಿನ್ನ ಹಲ್ಲುಗಳನ್ನು ಬೀಳಿಸಿದೆ – ನಿನ್ನ ಬಾಯಲ್ಲಿ ಕೃತಕ ಹಲ್ಲುಗಳು ಪ್ರತ್ಯಕ್ಷವಾದವು…!!

ನಾ ನಿನ್ನ ಚರ್ಮವನ್ನು ಸುಕ್ಕಾಗಿಸಿ ಸೌಂದರ್ಯ ಕೆಡಿಸಿದೆ – ಆದರೆ ನೀನು ‘ಮೇಕಪ್’ ಎಂಬ ಚಮತ್ಕಾರದ ಮೂಲಕ ನಾನಿನ್ನೂ ಯುವಕನೆಂಬ ಭ್ರಮೆಯನ್ನು ನೋಡುಗರಲ್ಲಿ ಮೂಡಿಸಲು ಯತ್ನಿಸಿದೆ…!!

ಸೂಚನೆಯ ಸಂದೇಶವನ್ನು ನೀನರಿಯದಿದ್ದರೆ ಅದಕ್ಕೆ ಬೇರೆ ಯಾರು ಹೊಣೆಯಾಗಲು ಸಾಧ್ಯ..?”

ಸೋಮುವಿನ ಬಳಿ ಉತ್ತರವಿರಲಿಲ್ಲ…!!
ಸತ್ಯ ಅರ್ಥವಾಗಿತ್ತು…!
ಆದರೆ ಸಮಯ ಮಿಂಚಿತ್ತು….!!

ನಮಗೆ ಇಷ್ಟವೇ ಇರದ, ಆದರೆ ಬದುಕಿನಲ್ಲಿ ಬಂದೇ ಬರುವ ಒಂದು ಅವಸ್ಥೆಯೆಂದರೆ ..ಮುಪ್ಪು..!!
ಮುಪ್ಪು ಕೆಡುಕಲ್ಲ.. ಮುಕ್ತಾಯದ ಮುನ್ಸೂಚನೆಯದು…!!
ಬದುಕು ಮೃತ್ಯುವಿನಲ್ಲಿ ಮುಕ್ತಾಯವಾಗಬಾರದು. . . .  ಮುಕ್ತಿಯಲ್ಲಿ ಮುಕ್ತಾಯವಾಗಬೇಕು…..!
‘ಮುಕ್ತಿ ಸಿದ್ಧತೆಯ ಸಮಯ ಮೀರುತ್ತಿದೆ’ ಎಂಬ ಎಚ್ಚರಿಕೆಯ ಘಂಟೆಯಿದು….!!
ಹಣವೆಂಬ ಸಂಪತ್ತು ಹೋದರೆ ಮತ್ತೆ ಬರಬಹುದು – ಆದರೆ ಸಮಯವೆಂಬ ಸಂಪತ್ತು ಮತ್ತೆ ಬರಲಾರದು…!!
ಮುಪ್ಪೆಂಬುದು ಈಶ್ವರನ ಭಾಷೆ

ರೈಲು ಪ್ರಯಾಣದಲ್ಲಿ ಇಳಿಯುವ ಸ್ಥಳ ಸಮೀಪಿಸುತ್ತ್ತಿದ್ದರೂ ಇನ್ನೂ ಮಲಗಿರುವ ಮಗುವನ್ನು ತಾಯಿ ತಟ್ಟಿ ಎಬ್ಬಿಸುವುದಿಲ್ಲವೇ..?
ಜೀವನವಾಹನವಾದ ದೇಹವನ್ನೇ ನಾವು ಬಿಟ್ಟು ಹೋಗುವ ಸಮಯ ಹತ್ತಿರ ಬರುವಾಗ ಸಿದ್ಧತೆಗಳಿಗಾಗಿ ಈಶ್ವರನು ನಮ್ಮನ್ನು ಬಡಿದೆಬ್ಬಿಸುವ ರೀತಿಯದು…!

ರಾತ್ರಿ ಮಲಗುವಾಗ ಅಲಾರ್ಮ್ ಇಟ್ಟುಕೊಳ್ಳುವುದುಂಟು..
ಅದು ಬೆಳಿಗ್ಗೆ ಕೂಗಿ ನಮ್ಮನ್ನೆಚ್ಚರಿಸುವಾಗ ಕಿರಿಕಿರಿಯೆನ್ನಿಸುವುದುಂಟು…
ಅಲಾರ್ಮ್ ಕೆಟ್ಟದಲ್ಲ…!!
‘ನಿದ್ದೆಯ ಸಮಯ ಮುಗಿಯಿತು,ಎಚ್ಚರದ ಸಮಯ ಆರಂಭವಾಯಿತು’ ಎನ್ನುವ ಸೂಚನೆಯದು..!!
ಮುಪ್ಪೆಂಬುದು ನಮಗಾಗಿ ಈಶ್ವರನಿಟ್ಟ ಅಲಾರ್ಮ್….!!

ಬಾಲ್ಯ ಆಟದಲ್ಲಿ ಮುಗಿಯಿತು…..
ಯೌವನ ಹುಡುಗಾಟದಲ್ಲಿ…..
ಇಲ್ಲಿ ನಿಜದ ಹುಡುಕಾಟಕ್ಕೆ ಎಡೆಯೆಲ್ಲಿ…?!!

ನಮ್ಮ ಮೈಮರೆವಿನ ನಿದ್ದೆಯನ್ನು ಕಳೆಯಲು…
ಬದುಕಿನ ಸಾರ್ಥಕತೆಯ ಹುಡುಕಾಟಕ್ಕೆ ತೊಡಗಿಸಲು,
ಪ್ರತಿಯೊಂದು ಜೀವಿಯ ಶರೀರದಲ್ಲಿಯೂ ದೇವರು ಮುಪ್ಪೆಂಬ ಎಚ್ಚರಿಕೆ ಗಂಟೆಯನ್ನು ಅಳವಡಿಸಿದ್ದಾನೆ…!!

ಮುಪ್ಪೆಂಬುದು ನಮ್ಮ ಕುರಿತು ಈಶ್ವರನಿಗಿರುವ ಕಾಳಜಿಯ ಪ್ರತೀಕ..!
ಅಡುಗೆ ಮಾಡುವಾಗ ಎದ್ದು, ಕುಳಿತು, ಓಡಾಡಿ, ಗಡಿಬಿಡಿಯಲ್ಲಿ ದುಡಿಯುತ್ತಾನೆ ಮನುಷ್ಯ…!
ಆದರೆ ಊಟ ಮಾಡುವಾಗ ಶಾಂತವಾಗಿ ಕುಳಿತು ಅಡುಗೆಯನ್ನು ಆಸ್ವಾದಿಸುತ್ತಾನೆ…!!
ಬಾಲ್ಯ-ಯೌವನಗಳು ಜೀವನದ ಅಡುಗೆಯಿದ್ದಂತೆ. . !
ಅಲ್ಲಿ ಗಡಿಬಿಡಿ ದುಡಿಮೆಗಳಿವೆ..!!
ಮುಪ್ಪಿರುವುದು ಶಾಂತವಾಗಿ ಬದುಕನ್ನು ಆಸ್ವಾದಿಸಲು…!

ಮುಪ್ಪಿನಲ್ಲಿ ಕಣ್ಣು ಮಂಜಾಗುತ್ತದೆ…
ಕಿವಿ ಮಂದವಾಗುತ್ತದೆ…
ಹಲ್ಲುಗಳು ಶಿಥಿಲವಾಗುತ್ತವೆ…
ದೇಹ ದುರ್ಬಲವಾಗುತ್ತದೆ…
ಹೀಗೆ ಬಾಹ್ಯಶರೀರ ಮತ್ತು ಬಹಿರಿಂದ್ರಿಯಗಳೆಲ್ಲವೂ ಕ್ಷೀಣಿಸುತ್ತವೆ…
ಆದರೆ ಅಂತರಂಗ ಕ್ಷೀಣಿಸುವುದಿಲ್ಲ…..!
ಅದು ಅನುಭವದಿಂದ ಇನ್ನಷ್ಟು ಪಕ್ವವಾಗುತ್ತದೆ…!!
ಅನಗತ್ಯ ವೇಗ ಕಳೆದು ಮನಸ್ಸಿಗೊಂದು ಸಮತೋಲನ ಬರಬೇಕಾದ ಕಾಲವದು…

ಬಗೆದು ನೋಡಿದರೆ ಇದರ ಅರ್ಥ “ಅಂತರ್ಮುಖಿಯಾಗು ಎಂದೇ ಅಲ್ಲವೇ…?
ಹೊರಜಗತ್ತಿನೆಡೆಗೆ ಇಂದ್ರಿಯಗಳು ಹರಿಯುವುದು ಅಲ್ಲಿಯ ಸೌಂದರ್ಯವನ್ನು ಸವಿಯಲು – ಆನಂದವನ್ನು ಮೊಗೆಯಲು . . !!
ಆದರೆ, ಅದಕ್ಕಿಂತ ಅದೆಷ್ಟೋ ಮಿಗಿಲಾದ ಆನಂದ-ಸೌಂದರ್ಯಗಳ ನಿಧಿ ನಮ್ಮೊಳಗೇ ಇದೆ!

ಮಾಯೆಯ ಮೋಸವಿದು. . !!

ಆನಂದ-ಸೌಂದರ್ಯಗಳ ತುಣುಕುಗಳನ್ನು ತೋರಿಸಿ ಹೊರಪ್ರಪಂಚದೆಡೆಗೆ ನಮ್ಮನ್ನು ಸೆಳೆದು, ನಮ್ಮೊಳಗೇ ಇರುವ ಆನಂದ ಸೌಂದರ್ಯಗಳ ರಾಶಿಯಿಂದ ನಮ್ಮನ್ನು ವಂಚಿತರನ್ನಾಗಿ ಮಾಡುವುದು…!!

ಈಶ್ವರನ ಕರುಣೆಯಿದು…!!

ಮುಪ್ಪಿನ ಮೂಲಕ ನಮ್ಮ ಬಹಿರಿಂದ್ರಿಯಗಳೆಲ್ಲವನ್ನೂ ಶಿಥಿಲಗೊಳಿಸಿ,
ಅಂತರ್ಮುಖಿಯಾಗಲು ಬೇಕಾದ ಸಕಲ ಸೌಲಭ್ಯಗಳನ್ನೂ ಕಲ್ಪಿಸುವುದು..?

ನಮ್ಮ ಮೂರ್ಖತೆಯಿದು….!!!

ಸೂಚನೆಯ ಸಂದೇಶವನ್ನರಿಯದೆಯೇ – ಭ್ರಮೆಯಲ್ಲಿಯೇ ವಿಹರಿಸಲೆಳಸುವುದು. . . !!

ಜಾನಪದ ಪದ್ಯವೊಂದು ನೆನಪಾಗುತ್ತಿದೆ…..

>ಮಕ್ಕಳಾಟಿಕೆ ಚಂದ….
ಮತ್ತೆ ಯೌವನ ಚಂದ……
ಮುಪ್ಪಿನಲಿ ಚಂದ ನರೆಗಡ್ಡ…..!!

ಈ ಪದ್ಯದಲ್ಲಿರುವಂತೆ ಯಾವುದೂ ಇಂದು ನಡೆಯುತ್ತಿಲ್ಲವೆನ್ನುವುದೇ ನಮ್ಮ ವಿಷಾದದ ವಿಷಯ…

ಮಕ್ಕಳಾಟಿಕೆ ಚಂದ….

ಮಕ್ಕಳು ಸ್ವತಂತ್ರ ಹಕ್ಕಿಗಳಂತೆ,ತಾಯಿಯ ಹಾಲ್ಕುಡಿದ ಪುಟ್ಟ ಕರುಗಳಂತೆ ನಲಿಯುತ್ತಿದ್ದರೇ ಚೆನ್ನ…!
ಆದರೆ ತಂದೆ-ತಾಯಂದಿರಿಗೆ ಮಕ್ಕಳು ಆಟವಾಡಿದರೆ ಕೋಪವೇ ಬರುತ್ತದೆ…!!
ಮಕ್ಕಳು ಗಂಭೀರವಾಗಿರಬೇಕೆಂದೂ,ದೊಡ್ಡವರ ಹಾಗೆ ಜವಾಬ್ಧಾರಿಯುತರಾಗಿರಬೇಕೆಂದೂ, ದಿನವಿಡೀ ಓದಬೇಕೆಂದೂ ಕಂಡಕಂಡ ದೇವರಲ್ಲಿ ಹರಕೆ ಹೊರುತ್ತಾರೆ…!!
ಆದರೆ ಒಮ್ಮೆ ಕಳೆದುಹೋದ ಆಟದ ವಯಸ್ಸು ಮತ್ತೆ ಬರುವುದೇ…?
ಮಕ್ಕಳು ಮುದುಕರಾದ ಮೇಲೆ ಆಟವಾಡಬೇಕೆ..? (ಅಲ್ಲಿಯವರೆಗೂ ಆಟವಾಡಲು ಬಿಡುವೆಲ್ಲಿ…?!!)

ಮತ್ತೆ ಯೌವನ ಚಂದ…

ಯೌವನ ಚಂದ….ಆದರೆ ಅದು ಬರುವಾಗ ಬರಬೇಕು…!
ತಿನ್ನುವ ಅನ್ನವೇ ನಮ್ಮ ಮನಸ್ಸಾಗುತ್ತದೆ..ನಮ್ಮ ಸ್ವಭಾವವಾಗುತ್ತದೆ ಎನ್ನುತ್ತಾರೆ ಪ್ರಾಜ್ಞರು…
ನಮ್ಮ ಆಹಾರದಲ್ಲಿ ಹೈಬ್ರೀಡಿನದ್ದೇ ಸಿಂಹಪಾಲು…!!
ಹೈಬ್ರೀಡೆಂದರೆ ಅನೈಸರ್ಗಿಕವಾಗಿ – ಸಮಯಕ್ಕೆ ಮೊದಲೇ ಬರುವ ಬೆಳೆಯಲ್ಲವೇ…?
ಅದನ್ನೇ ತಿಂದರೆ ಮತ್ತೇನಾಗಬೇಕು…?
ಜೊತೆಗೆ ವಾತಾವರಣದ ಕುಮ್ಮಕ್ಕು ಬೇರೆ….!!
ಹೀಗಾಗಿ…….
ಐದು ವರ್ಷಕ್ಕೇ ಯೌವನ …….
ಇಪ್ಪತ್ತೈದು ವರ್ಷಕ್ಕೇ ವೃದ್ಧಾಪ್ಯ….
ಮುವತ್ತೈದು ವರ್ಷಕ್ಕೇ ಸತ್ತು, ಮತ್ತೆ ಜೀವನವಿಡೀ ಜೀವಚ್ಛವವಾಗಿ ಬದುಕಿರುತ್ತಾರೆ….!!!
ಅವಸ್ಥೆ ಯಾವುದಾದರೂ – ಬರುವ ಸಮಯಕ್ಕೆ ಬಂದರೆ; ಇರುವ ಹಾಗೇ ಇದ್ದರೇ – ಚಂದ ಅಲ್ಲವೇ….?

ಮುಪ್ಪಿನಲಿ ಚಂದ ನರೆ ಗಡ್ಡ….
ಕಾಯಿ ಹಣ್ಣಾಗುವಾಗ ಬಣ್ಣ ಬೇರಾಗುತ್ತದೆ…
ಭಿನ್ನ ಪರಿಮಳ ಬರುತ್ತದೆ…
ಮೃದುತ್ವವೇರ್ಪಡುತ್ತದೆ….
ಅಂತರಂಗ ಮಧುರವಾಗುತ್ತದೆ…!!!

ಇದೆಲ್ಲವೂ ಪಕ್ವತೆಯ ಲಕ್ಷಣಗಳು….
ಮನೆಗೆ ತರುವಾಗ, ಸವಿದು ತಿನ್ನುವಾಗ, ಕಾಯಿಗಳನ್ನು ಪಕ್ಕಕ್ಕಿಟ್ಟು ಹಣ್ಣುಗಳನ್ನೇ ಇಷ್ಟಪಟ್ಟು ಆರಿಸುವ ನಮಗೆ…
ನಮ್ಮದೇ ಜೀವನದಲ್ಲಿ ಪಕ್ವತೆ ಏರ್ಪಡುವಾಗ ಅದೇಕೆ ಜಿಗುಪ್ಸೆಯೋ…..?!!
ಮನುಷ್ಯನೂ ಹಣ್ಣಾಗುವಾಗ ಆತನ “ಬಣ್ಣ“ಬೇರಾಗಬೇಕು..!!
ಅನುಭವದ ಸುಗಂಧ ಸೂಸಬೇಕು…!!

ಅಂತರಂಗ ಮೃದು-ಮಧುರವಾಗಬೇಕು….!!!
ಅದೇಕೆ ಮುಚ್ಚಬೇಕೋ ಮುಪ್ಪನ್ನು…?
ಕಪ್ಪೆಂದರೆ ತಮೋಗುಣ…ಬಿಳಿ ಎಂದರೆ ಸತ್ವಗುಣ….
ಮಸ್ತಿಷ್ಕ ತಮಸ್ಸಿನಿಂದ ಸತ್ವದೆಡೆಗೆ ಸಾಗಬೇಕಿರುವುದನ್ನು ತೋರಿಸಲು, ಕೂದಲಿನ ಕಪ್ಪು ಹೋಗಿ ಬಿಳಿ ಬರುತ್ತದೆ . . .!!
ಬಿಳಿ ತಲೆಗೆ ಕರಿವಿಷ ಹಾಕಿ ಕಪ್ಪು ಮಾಡಿದರೆ…..ಆಗುವ ಲಾಭ ಬರಿಯ ಭ್ರಮೆ ಮಾತ್ರ . . .!
ತಲೆಯೊಳಗಿಳಿಯುವುದು ವಿಷ – ಆತ್ಮಕ್ಕಾಗುವುದು ವಂಚನೆ…
ನೋಡುಗನಲ್ಲುಂಟಾಗುವುದು ಭ್ರಮೆ…!!!

ಸಹಜತೆಯಷ್ಟು ಚಂದ ಈ ಜಗತ್ತಿನಲ್ಲಿ ಬೇರಾವುದೂ ಇಲ್ಲ….!!

ಸೃಷ್ಟಿಯನ್ನು ನೋಡಿ….!!

ಸೂರ್ಯನ ಬೆಳಕು . .
ಚಂದ್ರನ ತಂಪು . . .
ಅಗ್ನಿಯ ಬಿಸಿ . . .
ಆಕಾಶದ ಅನಂತತೆ. . .
ಹಿಮಾಲಯದ ಔನ್ನತ್ಯ . . .
ಸಾಗರದ ಆಳ……
ಇವುಗಳೆಲ್ಲವೂ ಸಹಜತೆಯ ಸೊಗಸುಗಳು….!!!!

ಕಾಡು ನೋಡಿ….!!

ಕೋತಿಯ ಬಾಲ…
ಆನೆಯ ಸೊಂಡಿಲು…
ಘೇಂಡಾಮೃಗದ ಕೊಂಬು…
ಸಿಂಹದ ಕೇಸರ…..
ನವಿಲಿನ ಗರಿ……
ಹಾವಿನ ಹೆಡೆ…….
ಇವೆಲ್ಲವೂ ಸಹಜತೆಯ ಸೊಗಸುಗಳು….!!!

ನಾಡು ನೋಡಿದರೆ…….?

…….!?
…… !?
……!?
…..!?

ಮೆರೆಯೋಣ ಸಹಜತೆಯ…..
ಮರೆಯೋಣ ಕೃತಕತೆಯ…..
ಅರಿಯೋಣ “ಜರೆ”ಯ ಸಾರ-ಸಂದೇಶಗಳ….
ಕಳೆಯಿತೈ ಬಹುಕಾಲ…
ಕದ ತಟ್ಟುತಿಹ “ಕಾಲ”….!
ಕಳವಳವ ಬಿಟ್ಟೇಳು…
ನಡೆ ಸತ್ಯದೆಡೆಗೆ….!!

||ಹರೇರಾಮ||

13 Responses to ಜರೆಯದಿರು…ಜರೆಯ…!

 1. Raghavendra Narayana

  ಈ ಲೇಖನ ಸರಳ, ಸಹಜ, ನದಿಯ೦ತೆ ಹರಿದು ಸೇರಿತು ಮನವ. ಮೆದುಳಿಗೂ ಸೇರಲಿ, ನಿತ್ಯ ಜೀವನಕ್ಕೂ ಸೇರಲಿ. ಗುರುಗಳ ಆಶೀರ್ವಾದ ಬೇಡುವೆವು

  [Reply]

 2. Mahesha Elliadka

  ಹರೇರಾಮ ಗುರುಗಳೇ,
  {
  ಹೈಬ್ರೀಡೆಂದರೆ ಅನೈಸರ್ಗಿಕವಾಗಿ – ಸಮಯಕ್ಕೆ ಮೊದಲೇ ಬರುವ ಬೆಳೆಯಲ್ಲವೇ…?
  ಅದನ್ನೇ ತಿಂದರೆ ಮತ್ತೇನಾಗಬೇಕು…?
  }

  ಬಹಳ ಒಳ್ಳೆಯ ಮಾತು.
  ನಮ್ಮದು ನೈಸರ್ಗಿಕ ಆಹಾರವಾಗಿದ್ದರೆ ನಮ್ಮ ಬದುಕೂ ನೈಸರ್ಗಿಕವಾಗುವುದು.
  We are what we eat – ಎಂದರೆ ತಪ್ಪಾಗಲಾರದು, ಅಲ್ಲವೇ?

  [Reply]

 3. Sunil Kulkarni

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು…

  ತುಂಬಾ ಒಳ್ಳೆಯ ವಿಚಾರವನ್ನು ಗುರುಗಳು ನಮ್ಮ ಮುಂದೆ ಇರಿಸಿದ್ದಾರೆ. ನಮ್ಮ ಜೀವನದ ನಿಯಮಗಳ ಪಾಲನೆಯಲ್ಲಿ ಪ್ರಾಣಿಗಳಿಗಿಂತ ಮನುಷ್ಯನ ಮೇಲೆ ಒಂದು ಹೆಚ್ಚಿನ ಹೋಣೆಗಾರಿಕೆ ಇದೆ. ಪ್ರಣಿಗಳದರೋ ಕೆಲವೋಂದು ನಿಯಮಗಳನ್ನು ಸ್ವಾಭಾವಿಕವಾಗಿಯೇ ಪಾಲಿಸುತ್ತವೆ. ಹಸಿವು ಹಿಂಗಿದ ಮೇಲೆ ಅವು ಬಾಯಿರುಚಿಗಾಗಿ ಎಂದೂ ತಿನ್ನುವುದಿಲ್ಲ. ಅಜೀರ್ಣವಾದಾಗ ಆಹಾರ ಸ್ಪರ್ಷಿಸುವುದಿಲ್ಲ. ಮದ, ಮಾತ್ಸರ್ಯಗಳು ಅವಕ್ಕೆ ಗೊತ್ತಿಲ್ಲ.

  ಆದರೆ ಮನುಷ್ಯನ ಸೃಷ್ಟಿ ಆ ರೀತಿ ಅಲ್ಲ. ಅವನ ಸ್ವಭಾವ ರಚನೆಯಲ್ಲಿ, ಕಾಮ, ಕ್ರೋಧ, ಮೋಹ, ಮದ, ಮಾತ್ಸರ್ಯ – ಇವಾವುದಕ್ಕೂ ಒಂದು ನೈಸರ್ಗಿಕ ಬಂಧನವಿಲ್ಲ, ಒಂದು ಮಿತಿ ಇಲ್ಲ. ಆ ಬಂಧನ, ಆ ಮಿತಿಯನ್ನು ಅವನೇ ಹಾಕಿಕೊಳ್ಳಬೇಕು.ಅವನಲ್ಲಿ ಸಂಯಮ ಸ್ವಯಂಪ್ರೇರಿತವಾಗಿರಬೇಕು. ತನ್ನ ಆಚರ-ವಿಚಾರಗಳ ಮೇಲೆ ಅವನು ತನ್ನ ವಿವೇಕದ ಕಡಿವಾಣ ಹಾಕಿಕೊಳ್ಳಬೇಕು. ಈ ರೀತಿ ಯಾವುದನ್ನು ಯಾವ ಮಿತಿಯಲ್ಲಿ ಮಾಡಬೇಕು ಎಂಬ ವಿವೇಚನಾಯುಕ್ತ ಆಚರಣೆಯನ್ನೇ ನಮ್ಮ ಪೂರ್ವಜರು ನಮಗೆ ಕಲಿಸಿದ್ದಲ್ಲವೇ? ಈ ಎಲ್ಲ ಆಚರಣೆಗೆ ಹೊರತಾಗಿ, ಜೀವನ ವಿರೋಧವಾಗಿ ನಡೆದವನಿಗೆ ಅನರ್ಥ ಎಂದಿಗೂ ತಪ್ಪಿದ್ದಲ್ಲ.

  ಹಾಗಾಗಿ ಜೀವನವೆಂಬ ಪಯಣವೂ ಸಹ ಗುರುಗಳ ಮಾತಿನಂತೆ ಸಹಜವಾಗಿ ಒಂದರ ನಂತರ ಒಂದರಂತೆ ನಡೆದುಕೊಂಡು ಹೋದಾಗಲೇ ಈ ಜೀವನಕ್ಕೋಂದು ಸಾರ್ಥಕತೆ ಲಭಿಸುವುದಲ್ಲವೇ?

  [Reply]

 4. Varidhi Deshpande

  ಮುಪ್ಪು ಕಹಿ ಸತ್ಯ ಅಂತ ಅನ್ನಿಸುತ್ತಿತ್ತು.ಆದರೆ ಈ ಲೇಖನ ಓದಿ ಬಹಳ ಖುಷಿಯಾಯಿತು, ಏಕೆಂದರೆ ಮುಪ್ಪು ಕೆಡುಕಲ್ಲ, ಅದು ಜಗದೀಶನ ಭಾಷೆ ಎನ್ನುವುದನ್ನು ತಿಳಿಸಿಕೊಟ್ಟಿದ್ದೀರಿ.
  ಇದು ನಿಜವಾಗಿಯೂ ಅಧ್ಬುತ ಚಿಂತನೆ ಎನ್ನಿಸುತ್ತಿದೆ.

  [Reply]

 5. Varidhi Deshpande

  ಸೃಷ್ತಿಯ ಸಹಜ ಸೌಂದರ್ಯವನ್ನು ವರ್ಣಿಸಿದ ರೀತಿ ಬಹಳ ಹಿಡಿಸಿತು…

  [Reply]

 6. Anuradha Parvathi

  ಪ್ರತಿಯೊಂದು ವಿಷಯವೊ ಮನ ಮುಟ್ಟುವಂತಿತ್ತು. ಈ ಕಾಲದಲ್ಲಿ ನಾವೆಲ್ಲ ಕಾಲದ ಜೊತೆ ಓಡುತ್ತಿದ್ದೇವೆ. ನಮ್ಮ ಒಳಗೆ ನೋಡಲು ನಮಗೆ ಸಮಯ ಇಲ್ಲ.

  [Reply]

 7. Shridevi Vishwanath

  ಹರೇ ರಾಮ ಸಂಸ್ಥಾನ..
  ಲೋಕದ ಸಮಸ್ತ ಜೀವ ರಾಶಿಯೂ ಹುಟ್ಟುವಾಗಲೇ ತಮ್ಮ ತಮ್ಮ ಅಂತಿಮ ದಿನವನ್ನು ನಿರ್ಧರಿಸಿ ಭೂಮಿಗೆ ಬಂದಿರುತ್ತೇವೆ.. ಅದು ನಮ್ಮ ಅರಿವಲ್ಲಿ ಇರುವುದಿಲ್ಲ.. ಹುಟ್ಟು, ಬಾಲ್ಯ, ಯೌ ವನ, ಉದ್ಯೋಗ,ಮದುವೆ, ಕುಟುಂಬ, ಮಕ್ಕಳು, ಮಕ್ಕಳ ಬಾಲ್ಯ, ಕಲಿಕೆ, ಉದ್ಯೋಗ, ಮದುವೆಯ ಚಕ್ರದಲ್ಲಿ ನಮಗೆ ವರ್ಷಗಳು ಉರುಳುವುದು ಅರಿವಿಗೆ ಬರುವುದಿಲ್ಲ.. ಅರುವತ್ತು ಸಂವತ್ಸರದ ಘಟ್ಟ ಮುಟ್ಟಿದಾಕ್ಷಣ, ನಮಗೆ ಒಂದು ಸಲ ನಮ್ಮ ವೇಗವನ್ನು ಕಡಿತ ಗೊಳಿಸಿ ಬಂದ ದಾರಿಯ ಹಿನ್ನೋಟ ಮತ್ತು ಮುಂದಿನ ಮೋಕ್ಷ ಚಿಂತನೆ ಮಾಡಲು ಒಂದು ಒಳ್ಳೆಯ ಸಂದರ್ಭಇದೆ…. ಕಾಲನ ದಿನದರ್ಶಿಕೆ ಅರುವತ್ತು ಸಂವತ್ಸರಗಳನ್ನೂ ಸೂಚಿಸಿರುವುದೇ ಮೊದಲನೆಯ ಮುನ್ಸೂಚನೆ.. ಆ ಸಮಯದಲ್ಲಿ ಲೋಕದ ಭೋಗ ಭಾಗ್ಯಗಳಲ್ಲಿ ಮೈ ಮರೆತರೆ ಯಾರೂ ಏನೂ ಮಾಡಲಾಗುವುದಿಲ್ಲ… ನಮ್ಮ ಜೀವನವನ್ನು ನಾವು ಆ ಘಟ್ಟಕ್ಕೆ ಮುಟ್ಟಿಯೇ ಪರಾಮರ್ಶಿಸ ಬೇಕಾಗಿಲ್ಲಾ.. ಪ್ರತಿದಿನ ಕಷ್ಟ ಗಳು ಬಂದಾಗ ನಾವು ನಮ್ಮ ಭಾಗ್ಯವನ್ನು ಹಳಿಯುತ್ತೇವೆ.. ಕೊರಗುತ್ತೇವೆ.. ಇದು ನಿಜವಾಗಿ ನಮ್ಮ ಪರೀಕ್ಷೆ ಆಗಿರುತ್ತದೆ.. ಇದರಲ್ಲಿ ನಾವು ನಮ್ಮನ್ನು ಹೇಗೆ ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದು.. ಹೀಗೆ ಜೀವನದ ಎಲ್ಲಾ ಪರೀಕ್ಷೆಗಳಲ್ಲಿ ಮುಂದುವರೆದಾಗ ನಾವು ನಿಜವಾದ ಮನುಷ್ಯರಾಗುತ್ತೇವೆ.. ದೇವರು ನಮಗೆ ನಮ್ಮ ಜೀವನದ ಪ್ರತಿ ಹಂತದಲ್ಲಿಯೂ ಪ್ರತಿಯೊಂದರ ಸೂಚನೆ ಕೊಡುತ್ತಾರೆ.. ಅದು ಹಿಂದಿನ ಕಾಲದಂತೆ ದೈವ ವಾಣಿಯಲ್ಲಿ ಅಲ್ಲ ನಮ್ಮ ಸುತ್ತ ಮುತ್ತಲು ಇರುವ ಜನರಲ್ಲಿ, ಗುರುಗಳ ಸಂದೇಶಗಳಲ್ಲಿ, ಗುರುಗಳ ಲೇಖನಗಳಲ್ಲಿ.. ನಾವೇ ಅದನ್ನು ಅರಿತು ನಮ್ಮ ದಾರಿ ಸವೆಸ ಬೇಕು…
  ಈ ಜೀವನ ಚಕ್ರದಲ್ಲಿ ಮುಕ್ತಿಯನ್ನು ಕಾಣಬೇಕು
  ಹರೇ ರಾಮ..

  [Reply]

 8. Anushree Bandady

  ಹರೇ ರಾಮ.

  ನಿಜ ಗುರುಗಳೇ. ನಾವಿಂದು ಸಹಜ ಜೀವನವನ್ನು ನಮ್ಮ ಕೈಯಾರೆ ಕಳೆದುಕೊಂಡು ಅಸಹಜತೆಯ ಮೊರೆಹೋಗಿ ಬಳಿಕ ಮರುಗುತ್ತೇವೆ. ಕೇವಲ ಮುಪ್ಪಿನಲ್ಲಿ ಮಾತ್ರವಲ್ಲ. ಬಾಲ್ಯ, ಯೌವನಗಳಲ್ಲೂ ಪ್ರಕೃತಿ ಸಹಜವಾಗಿ ಬೆಳೆಯುತ್ತಿಲ್ಲ. ಯಾರದೋ ಒತ್ತಾಯಕ್ಕೆ ಒಳಗಾಗಿ, ಇನ್ಯಾವುದೋ ಒತ್ತಡದ ಮಧ್ಯೆ, ಅದರ ಆನಂದವನ್ನು ಕಳೆದುಕೊಂಡುಬಿಡುತ್ತೇವೆ. ಬಾಲ್ಯದಲ್ಲಿ ಆ ಮೊದಲಿನ ಆಟ-ಊಟಗಳಿಲ್ಲ. ಯೌವನದಲ್ಲಿ ಅಗತ್ಯ ಜೀವನ ಪಾಠವಿಲ್ಲ. ಮುಪ್ಪಿನ ಸಮಯದಿ ಸಹಜತೆಯ ಪಾಲನೆ ಇನ್ನೆಲ್ಲಿ ಬಂದೀತು? ಮರ್ಕಟ ಮನಸ್ಸು ತಾನೇ ಕಲ್ಪಿಸಿಕೊಂಡ ಕಾಲದ ಕೈಗೊಂಬೆ.

  [Reply]

 9. ಜಗದೀಶ್ B R

  ಭ್ರಮೆಯನು ಕೊಡವಿಕೊ ಕಣ್ ತೆರೆದರಿತುಕೊ
  ಮಾನವ ಜೀವನದನಂತ ಮಹಿಮೆ |
  ಬಿಸಿಯಾರುವ ಮೊದಲೇ ಜಗವರಿಯಲಿ
  ನಿನ್ನಯ ಪವಿತ್ರ ರಕ್ತದ ಹಿರಿಮೆ ||
  ———————————-— ಕವಿನುಡಿ

  [Reply]

 10. ಜಗದೀಶ್ B R

  ಸಹಜ ಸುಂದರ ಲೇಖನ,
  ಗುರುಗಳಿಗೆ ಅನಂತ ನಮನ…

  [Reply]

 11. shobha lakshmi

  ಹರೇರಾಮ,,,ಮಕ್ಕಳಾಟವು ಚ೦ದ ಮತ್ತೆ ಯೌವನ ಚ೦ದ……………….ಇದು ಆನು ಪ್ರಾಥಮಿಕ ಶಾಲೆಲಿ ಕಲಿತದ್ದು…ಇದರ ಅರ್ಥ ಆಗ ಆಗಿತ್ತಿಲ್ಲ್ಲೆ..ಈಗ ಸರಿ ಅರ್ಥ ಆತು……ಈ ಲೇಖನ ನಿಜವಾಗಿ ತು೦ಬ ಉಪಯುಕ್ತ..ಇದರ ಓದಿದವು ಮತ್ತೆ ಬಿಳಿ ಆದ ಕೂದಲಿನ ಬಗ್ಗೆ ತಲೆಕೆಡಿಸಿಕೊಳ್ಳವು ,,,,ಇದು ಎನ್ನ ಅನಿಸಿಕೆ……

  [Reply]

 12. Raghavendra Narayana

  ಶ್ರೀ ಆದಿ ಶ೦ಕರಾಚಾರ್ಯರ ವಿವೇಕಚೂಡಾಮಣಿಯ ಒ೦ದು ಶ್ಲೋಕ.
  ——————————————————————–
  .
  ದೇಹಾದಿಸರ್ವವಿಷಯೇ ಪರಿಕಲ್ಪ್ಯ ರಾಗ೦
  ಬಧ್ಯಾತಿ ತೇನ ಪುರುಷ೦ ಪಶುವದ್ ಗುಣೇನ |
  ವೈರಸ್ಯಮತ್ರ ವಿಷವತ್ ಸುವಿಧಾಯ ಪಶ್ಚಾತ್
  ಏನ೦ ವಿಮೋಚಯತಿ ತನ್ಮನ ಏವ ಬ೦ಧಾತ್ ||
  .
  ದೇಹವೇ ಮೊದಲಾದ ಸಮಸ್ತ ವಿಷಯಗಳಲ್ಲಿ ಆಸಕ್ತಿಯನ್ನು ಉ೦ಟುಮಾಡಿ, ಹಗ್ಗದಿ೦ದ ಪಶುವನ್ನು ಕಟ್ಟುವ೦ತೆ ಮನಸ್ಸು ಮನುಷ್ಯನನ್ನು ಕಟ್ಟಿಹಾಕುತ್ತದೆ. ಆನ೦ತರ ಈ ಮನಸ್ಸೇ, ವಿಷದಲ್ಲಿ ನಮಗೆ ದ್ವೇಷವು ಹೇಗಿರುತ್ತದೋ ಹಾಗೆಯೇ, ವಿಷಯಗಳಲ್ಲಿ ವಿರಸವನ್ನು ಉ೦ಟುಮಾದಿ ಜೀವವನ್ನು ಬ೦ಧದಿ೦ದ ಬಿಡಿಸುತ್ತದೆ.
  .
  ಶ್ರೀ ಗುರುಭ್ಯೋ ನಮಃ

  [Reply]

 13. chs bhat

  ಸಹಜ-ಸುಂದರ.
  ನಿಜ.ಎಷ್ಟೋ ಸಲ,ನಾನು ವಯೋ ವೃದ್ಧನಾಗಿದ್ದೇನೆ ಎನ್ನುವುದು ಮರೆತು ಹೋಗುತ್ತದೆ.(ಅಲ್ಲ,ಹಾಗನಿಸುವುದೇ ಇಲ್ಲ!) ಆದರೆ ಯಮದೂತ ಅವನ ಸ್ನೇಹಿತನಿಗೆ ತಿಳಿಸಿದ ಸೂಚನೆಗಳೆಲ್ಲವನ್ನೂ ನನಗೂ ತಿಳಿಸುತ್ತಿದ್ದಾನೆ!(ಅವನು ನನಗೂ ಸ್ನೇಹಿತನೇ ತಾನೇ?).ಅದಕ್ಕೇ ಇರಬೇಕು ವಾನಪ್ರಸ್ಥಾನ ಆಶ್ರಮಕ್ಕೆ ಈ ವಯಸ್ಸಲ್ಲಿ ಹೋಗಬೇಕೆನ್ನುವುದು. ಗುರುದೇವಾ, ಧೈರ್ಯ-ಶಕ್ತಿ ಕೊಡು.
  ಹರೇ ರಾಮ.

  [Reply]

Leave a Reply

Highslide for Wordpress Plugin