ಶೀರ್ಷಿಕೆಯನ್ನು ಅವಲೋಕಿಸಿ ಅಚ್ಚರಿಗೊಂಡಿರೇ? ನಂಬಲಸಾಧ್ಯವೆನ್ನಿಸುತ್ತಿದೆಯೇ? ಹಾಗಿದ್ದರೆ ಪ್ರಶ್ನೆಯೊಂದನ್ನು ಕೇಳುವೆವು; ಉತ್ತರವನ್ನು ಹುಡುಕಿ; ಆ ಉತ್ತರವು ನಿಮಗೆ ‘ಡೈರಿ ಎಂದರದು ಕ್ರೈಮ್ ಡೈರಿಯೇ!’ ಎಂಬ ಸತ್ಯದರ್ಶನ ಮಾಡಿಸುವುದರಲ್ಲಿ ನಮಗೆ ಯಾವ ಸಂಶಯವೂ ಇಲ್ಲ!

ಪ್ರಶ್ನೆ: ನೂರಾರು ಸಂಖ್ಯೆಯಲ್ಲಿ ಹಸುಗಳಿರುವ ಡೈರಿಯಲ್ಲಿ ನಾಲ್ಕಾರು ಹೋರಿಗಳೂ ಕಾಣಸಿಗುವುದಿಲ್ಲ! ಅಲ್ಲಿ ಗಂಡು ಕರುಗಳು ಹುಟ್ಟುವುದೇ ಇಲ್ಲವೇ? ಹುಟ್ಟಿದವು ಎಲ್ಲಿ ಹೋದವು!?

ಉತ್ತರವು ಕ್ರೂರ: ಸಾವಿನ ಮನೆಗೆ!

ನಾವೆಲ್ಲರೂ ನಂಬಲೇಬೇಕಾದ, ಒಪ್ಪಲೇಬೇಕಾದ, ಖಂಡಿಸಲೇಬೇಕಾದ, ಕಣ್ಣೀರು ಮಿಡಿಯಲೇಬೇಕಾದ ಸತ್ಯವದು: ಡೈರಿಗಳಲ್ಲಿ ಹುಟ್ಟಿದ ಗಂಡು ಕರುಗಳೆಲ್ಲವೂ ನೇರವಾಗಿ ಕಟುಕರ ಕೈಸೇರುತ್ತವೆ! ಹೆಣ್ಣು ಕರುಗಳು ನರಕವನ್ನು ನಾಚಿಸುವ ಯಾತನೆಯ ಬಾಳನ್ನು ಅಲ್ಪಾವಧಿಗೆ ಬಾಳಿ, ಬಳಿಕ ಕಸಾಯಿಖಾನೆಗಳಲ್ಲಿ ದಾರುಣ ಅಂತ್ಯವನ್ನು ಕಾಣುತ್ತವೆ!

ಒಟ್ಟಿನಲ್ಲಿ ಗಂಡಿರಲಿ, ಹೆಣ್ಣಿರಲಿ, ಅವು ಡೈರಿಯಲ್ಲಿವೆಯೆಂದರೆ ಅವುಗಳ ಮುಂದಿನ ನಿಲ್ದಾಣ ಕಸಾಯಿಖಾನೆಯೇ! ಅವುಗಳಿಗೆ ತಮ್ಮ ಪೂರ್ಣಾಯುಸ್ಸನ್ನು ಬದುಕುವ ಯಾವುದೇ ಅವಕಾಶವಿಲ್ಲ!

ಗಂಡಾಗಿ ಹುಟ್ಟಿದರೆ ಗಂಡಾಂತರವಿಲ್ಲಿ…ತತ್‌ಕ್ಷಣದಲ್ಲಿ!

ತಂಗಿ ದೇವಕಿಯ ಉದರದಲ್ಲಿ ಶಿಶುಗಳು ಹುಟ್ಟುತ್ತಿದ್ದಂತೆಯೇ ಕೊಲ್ಲುತ್ತಿದ್ದನಂತೆ ಕ್ರೂರಿ ಕಂಸ; ಡೈರಿಗಳು ಕಂಸನಿಗೇನು ಕಡಿಮೆ!? ಅಲ್ಲಿ ಹೆಣ್ಣೆಂದರೆ ಹಾಲು; ಹಾಲು ಕೊಡಲಾರದ ಗಂಡೆಂದರೆ ಮಾಂಸ, ಚರ್ಮ! ಹೆಣ್ಣಾದರೂ ರಾಶಿ ರಾಶಿ ಹಾಲು ಕೊಡುತ್ತಿರುವವರೆಗೆ ಬದುಕಬಹುದು; ಬಳಿಕ ಅದಕ್ಕೂ ಅದೇ ಗತಿ! ಅಧೋಗತಿ!

ಕರು ಗಂಡಾದರೆ ಒಂದೇ ಒಂದು ತೊಟ್ಟು ಹಾಲೂ ಅದಕ್ಕೆ ಸಿಗದು! ದೇವರು ಕೊಟ್ಟ ಹಾಲನ್ನು ಕರುವಿಗೆ ಡೈರಿಯೆಂಬ ಪೂಜಾರಿ ಕೊಡ! ತಾಯಿಯ ಜೊತೆಯಲ್ಲಿ ಒಂದು ದಿನವೂ ಬದುಕಲು ಅವಕಾಶವಿಲ್ಲ; ಗಂಡಾದರೆ ಸೂರಿನೊಳಗಿರಲೂ ಎಡೆಯಿಲ್ಲ! ಬಿಸಿಲಿರಲಿ, ಮಳೆಯಿರಲಿ, ಚಳಿಯಿರಲಿ, ಡೈರಿಗಳಲ್ಲಿ ಇರುವಷ್ಟು ಕಾಲ ಅವು ಹೊರಗೇ ಬದುಕಬೇಕು. ಉಪವಾಸವಿರಿಸಿ ಸಾಯಿಸುವುದೂ ಉಂಟು. ಹಾಗೆಂದು ಬದುಕಿದರೂ ಬಹಳ ದಿನವೇನಲ್ಲ. ಕಸಾಯಿಖಾನೆಯ ಸಾವು ಎಂಬ ಹಾವು ಮುದ್ದು ಕರುವನ್ನು ನುಂಗಲು ಬಾಯ್ದೆರೆದು ಕಾದು ಕುಳಿತಿರುತ್ತದೆ.

ಬಾಬ್ ವೀಲ್ ಎಂಬ ಬರ್ಬರತೆ!

ಹುಟ್ಟಿದ ಒಂದೆರಡೇ ಗಂಟೆಗಳಲ್ಲಿ ಕೊಲ್ಲಲ್ಪಟ್ಟ ಕರುವಿನ ಮಾಂಸಕ್ಕೆ ಬಾಬ್ ವೀಲ್ (bob veal) ಎಂದು ಹೆಸರು. ಇಂಗ್ಲೀಷಿನಲ್ಲಿ ಬಾಲ್ಯವನ್ನು ಸೂಚಿಸಲು ಬಾಬ್/ಬಾಬಿ ಮೊದಲಾದ ಪದಗಳನ್ನು ಬಳಸುವುದುಂಟು. ನಮ್ಮಲ್ಲಿಯೂ, ದಕ್ಷಿಣಕನ್ನಡದಲ್ಲಿ ಶಿಶುವಿಗೆ ಬಾಬೆ ಎನ್ನುವುದುಂಟು. ಶಿಶುರೂಪದ ಪಶುಹತ್ಯೆಯಿಂದ ಬರುವ ಮಾಂಸವೇ ಬಾಬ್ ವೀಲ್! ಬೆಳೆದ ಹಸು – ಹೋರಿಗಳ ಮಾಂಸದ ದುಪ್ಪಟ್ಟು ಬೆಲೆ ಬಾಬ್ ವೀಲ್ ಗೆ! ಕರು ಬೆಳೆದಂತೆ ನಾರಿನಂಶ (fibre) ಸೇರುತ್ತಾ ಹೋಗಿ ಮಾಂಸ ಗಡುಸಾಗುವುದು. ಎಳೆ ಕರುವಿನ ಮಾಂಸದ ಅತ್ಯಂತ ಮೃದುತ್ವ ಅಧಿಕ ಬೆಲೆಗೆ ಕಾರಣ.

ಡೈರಿಯೊಳಗೇ ಚೂರಿ; ಇದು ವಿದೇಶಗಳ ಪರಿ!

ವಿದೇಶಗಳ ಬೃಹತ್ ಡೈರಿಗಳು ಕ್ಷೀರೋದ್ಯಮದ ಜೊತೆಜೊತೆಗೆ ಮಾಂಸೋದ್ಯಮವನ್ನೂ ನಡೆಸುತ್ತವೆ! ಹಾಲಿನ ಪ್ಯಾಕೆಟ್  ಜೊತೆಗೆ ಮಾಂಸದ ಪ್ಯಾಕೆಟ್ ಗಳೂ ಹೊರಬರುವುದು ಅಲ್ಲಿ ಸರ್ವಸಾಮಾನ್ಯ. ಆದುದರಿಂದಲೇ ಅಲ್ಲಿಯ ಬೃಹತ್ ಡೈರಿಗಳೊಳಗೇ-ಅಂತರ್ಗತವಾಗಿಯೇ ಕಸಾಯಿಖಾನೆಗಳಿರುತ್ತವೆ.

ನಮ್ಮಲ್ಲಿ ಐದಾರು ಹಸುಗಳನ್ನು ಸಾಕುವಂತೆ ಅವರು ಐದಾರು ಸಾವಿರ ಹಸುಗಳನ್ನು ಸಾಕುತ್ತಾರೆ. ಹಸುಗಳಲ್ಲಿ ಸಾಮಾನ್ಯವಾಗಿ ಮೂರನೇ ಒಂದಂಶದಷ್ಟು ವಾರ್ಷಿಕವಾಗಿ ಸಂತಾನವೃದ್ಧಿಯಾಗುತ್ತದೆ. ಡೈರಿಗಳಲ್ಲಿ ಕೃತಕ ಗರ್ಭಧಾರಣೆಯ ಕಾರಣ ಸಂತನೋತ್ಪತ್ತಿ ಇನ್ನೂ ಅಧಿಕ. ಆರುಸಾವಿರ ಹಸುಗಳಿಗೆ ಎಷ್ಟು ಕಡಿಮೆಯೆಂದರೂ ವರ್ಷಕ್ಕೆ ಒಂದುಸಾವಿರದಷ್ಟು ಗಂಡುಕರುಗಳೇ ಜನಿಸುತ್ತವೆ. ಬದುಕಿನ ಬೆಳಕನ್ನು ಕಾಣುವ ಭಾಗ್ಯ ಅವುಗಳಿಗಿಲ್ಲವೇ ಇಲ್ಲ.  ಜನನದ ಪಕ್ಕದಲ್ಲಿಯೇ ಮರಣದ ವ್ಯವಸ್ಥೆಯೂ ಇರುವುದರಿಂದ ನವಜಾತ ಕರುಗಳನ್ನು ಕೊಂದು, ಬಾಬ್ ವೀಲ್ ತಯಾರಿಸುವ ಕ್ರೂರಕಾರ್ಯ ಈ ಪರಿಯ ಡೈರಿಗಳಲ್ಲಿ ಮಾತ್ರವೇ ಸಾಧ್ಯ. ಡೈರಿಯೆಂದರೆ ಬಾಬೆ-ಕರುವನ್ನು ಬಾಬ್‘ವೀಲ್’ ಆಗಿಸುವ ಕ್ರೌರ್ಯ ’ಚಕ್ರ’.

ಭಾರತದ ಡೈರಿಗಳಲ್ಲಿ ಕಸಾಯಿಖಾನೆಗಳಿಲ್ಲದಿದ್ದರೂ, ಕರುಗಳ ಮೇಲಿನ ಕ್ರೌರ್ಯಕ್ಕೇನೂ ಕೊರತೆಯಿಲ್ಲ. ಗಂಡು ಕರು ಕುಡಿಯುವ ಒಂದೊಂದು ಬಿಂದು ಹಾಲನ್ನೂ ‘ನಷ್ಟ’ ಎಂದು ಭಾವಿಸುವ ಡೈರಿಗಳು ತಮ್ಮಲ್ಲಿರುವವರೆಗೂ ಅವುಗಳನ್ನು ಉಪವಾಸ ಬೀಳಿಸುತ್ತವೆ; ಸಾಧ್ಯವಾದಷ್ಟು ಬೇಗ ಅವುಗಳನ್ನು ಕಟುಕರಿಗೆ ದಾಟಿಸುತ್ತವೆ.

2001 ರ ಪ್ರಾಣಿಕ್ರೌರ್ಯ-ನಿಷೇಧ-ನಿಯಮ (Prevention of cruelty to animal’s act) ದ ಪ್ರಕಾರ ಗಬ್ಬದ ಹಸುಗಳನ್ನು, ಮೂರುತಿಂಗಳ ಒಳಗಿನ ಕರುಗಳಿರುವ ಹಸುಗಳನ್ನು, ಮೂರು ತಿಂಗಳ ಒಳಗಿನ ಕರುಗಳನ್ನು – ಕೊಲ್ಲುವಂತಿಲ್ಲ. ಆದರೆ ನಮ್ಮ ದೇಶದಲ್ಲಿ ಈ ಕಾನೂನುಗಳಿಗೆ ಯಾವ ಬೆಲೆಯೂ ಇಲ್ಲ. ಯಾವ ಕಸಾಯಿಖಾನೆಯ ಯಾವ ಕಟುಕನೂ ಯಾವ ಕರುವನ್ನೂ ಈ ಕಾನೂನಿನ ಕಾರಣಕ್ಕಾಗಿ ಬದುಕಗೊಟ್ಟ ಉದಾಹರಣೆಯಿಲ್ಲ. ಸಂಶಯವಿದ್ದರೆ ಈ ಕೆಳಗಿನ ಬಾಬ್ ವೀಲ್ ನ ಜಾಹಿರಾತನ್ನು ನೋಡಿ-

Bobby Veal – ಭಾರತದಲ್ಲೇ ಲಭ್ಯ!

ಬಾಬ್-ವೀಲ್ ನ ಅಣ್ಣ ವೈಟ್ ವೀಲ್!

ಬಾಬ್ ವೀಲ್ ಎಂಬುದು ಜನಿಸಿದ ಕೂಡಲೇ ದುರ್ಮರಣವನ್ನಪ್ಪುವ ಎಳೆಗರುಗಳ ಕಥೆಯಾದರೆ, ಬದುಕುಳಿಯುವ ಕರುಗಳ ಕರುಣಕಥೆ ಬೇರೆಯೇ ಇದೆ. ಜನಿಸಿದ ಅತ್ಯಲ್ಪ ಸಮಯದಲ್ಲಿಯೇ ಅವುಗಳು ಕಸಾಯಿಖಾನೆಯನ್ನು ಸೇರುತ್ತವೆ. ಅಲ್ಲಿ ಗಾಳಿಬೆಳಕಿಲ್ಲದ ಅತ್ಯಂತ ಕಿರಿದಾದ ಗೂಡಿನೊಳಗೆ ಇರಿಸಲ್ಪಡುತ್ತವೆ. ಕಬ್ಬಿಣ ಹಾಗೂ ನಾರಿನಂಶಗಳು ಇಲ್ಲದ ದ್ರವಾಹಾರದಲ್ಲಿ ಜೀವಚ್ಛವವಾಗಿ ಅವು ಬದುಕುತ್ತವೆ. ಅವುಗಳಿಗೆ ಘನಾಹಾರವನ್ನು ನೀಡಲಾಗುವುದೇ ಇಲ್ಲ. ಕೊನೆಗೂ, ಬೆಳಕಿನ ಸುಳಿವನ್ನು ಕಾಣದೆಯೇ  ಈ ಹತಭಾಗ್ಯ ಜೀವಗಳು ಕೊನೆಗಾಣುತ್ತವೆ.  ಬ್ರಿಟಿಷರು ಸಾವರ್ಕರರಿಗೆ ನೀಡಿದ ಕರಿನೀರಿ‌ನ ಶಿಕ್ಷೆಗಿಂತಲೂ ಘೋರವಲ್ಲವೇ ಇದು!?

ಈ ಕರುಗಳ ಸಮಾಧಿಯ ಮೇಲೆ ಸೃಷ್ಟಿಗೊಳ್ಳುವುದೇ ವೈಟ್ ವೀಲ್! ಸಾಮಾನ್ಯ ಮಾಂಸಕ್ಕಿಂತ ವೈಟ್ ವೀಲ್ ಗೆ ಅಧಿಕ ಬೆಲೆಯಿದೆ.

ಮಾಂಸವು ಸರ್ವಥಾ ಕೆಂಪುಬಣ್ಣಕ್ಕೆ ತಿರುಗಬಾರದು ಮತ್ತು ಮೃದುವಾಗಿಯೇ ಉಳಿಯಬೇಕು ಎಂಬುದೇ ಕರುವಿನ ಕರಿನೀರಿನ ಶಿಕ್ಷೆಗೆ ಕಾರಣ.

(ಕಿರುಗೂಡಿನ – ಕರಿನೀರಿನ ಶಿಕ್ಷೆ, ಎಳೆಗರುವಿಗೆ!)

  • ಕರುವಿನ ಓಡಾಟ-ಕುಣಿದಾಟಗಳು ಮಾಂಸದಲ್ಲಿ ಚಟುವಟಿಕೆ ಪ್ರಾರಂಭಿಸಿ ಕೆಂಪುಬಣ್ಣಕ್ಕೆ ಕಾರಣವಾಗುತ್ತದೆ.
  • ಆಹಾರದಲ್ಲಿನ ಕಬ್ಬಿಣದ ಅಂಶ ಹಿಮೋಗ್ಲೋಬಿನ್ ಮೂಲಕ ಮಾಂಸಕ್ಕೆ ಕೆಂಪುಬಣ್ಣವನ್ನು ನೀಡುತ್ತದೆ.
  • ಘನಾಹಾರ ಮತ್ತು ಆಹಾರದಲ್ಲಿನ ನಾರಿನಂಶವು ಮಾಂಸವನ್ನು ಗಟ್ಟಿಗೊಳಿಸುತ್ತದೆ.

ಇವೆಲ್ಲವೂ ಕರುವಿನ ಆರೋಗ್ಯಕ್ಕೆ ಬೇಕೇಬೇಕು. ಆದರೆ ನರನ ನಾಲಿಗೆ ಚಪಲಕ್ಕೆ ಬೇಡ!

ಇಷ್ಟೆಲ್ಲ ಪಥ್ಯದ ಬಳಿಕ ಕರುವಿನ ಶರೀರದಲ್ಲಿ ರಕ್ತವೇ ಉಳಿದಿರುವುದಿಲ್ಲ; ಇರುವ ಅಲ್ಪಪ್ರಮಾಣದ ರಕ್ತವೂ ಮಾಂಸಕ್ಕೆ ಕೆಂಪುಬಣ್ಣವನ್ನು ಕೊಡಬಾರದು ಎನ್ನುವ ಕಾರಣಕ್ಕೆ – ಕರುವನ್ನು ಹಿಂದಿನ ಕಾಲಿನಲ್ಲಿ ನೇತಾಡಿಸಿ, ಕುತ್ತಿಗೆ ಕೊಯ್ದು, ಜೀವವಿರುವಾಗಲೇ ರಕ್ತವೆಲ್ಲವೂ ಸುರಿದುಹೋಗುವಂತೆ ಮಾಡಿ, ಕೊಲ್ಲುತ್ತಾರೆ!

ಕರುವಿನ ರಕ್ತವು ಬಿ-ಕಾಂಪ್ಲೆಕ್ಸ್, ಲಿವರ್ ಟಾನಿಕ್, ಐರನ್ ಟಾನಿಕ್ ಗಳ ರೂಪ ತಾಳಿ ಮನುಷ್ಯನ ಹೊಟ್ಟೆ ಸೇರುತ್ತದೆ; ಕರುವಿನ ಪಾಲಿನ ಹಾಲಂತೂ ಮೊದಲೇ ಮನುಷ್ಯನ ಹೊಟ್ಟೆಯನ್ನು ಸೇರಿಯಾಗಿರುತ್ತದೆ!

ಸ್ಲಿಂಕ್ ವೀಲ್ ಎಂಬ ನರಲೋಕದ ಕಳಂಕ:

ಬಾಬ್ ವೀಲ್ ಮತ್ತು ವೈಟ್ ವೀಲ್ ಗಳಿಗಿಂತ ಭೀಭತ್ಸವಾದುದು ಸ್ಲಿಂಕ್ ವೀಲ್. ಸ್ಲಿಂಕ್ ವೀಲ್ ಎಂದರೆ ಬೇರೇನಲ್ಲ, ಅದು ಹಸುವಿನ ಭ್ರೂಣ ಭಕ್ಷಣ! ಗರ್ಭಿಣಿ ಹಸುವಿನ ಉದರ ಬಗೆದು ಭ್ರೂಣವನ್ನು ಹೊರತೆಗೆದು ಪರಿಷ್ಕರಿಸಿ, ಸ್ಲಿಂಕ್ ವೀಲ್ ಎಂದು ಹೆಸರಿಟ್ಟು ಭಕ್ಷಿಸಲಾಗುತ್ತದೆ. ಸದ್ಯಕ್ಕೆ ಇದು ವಿಶ್ವದ ವಿವಿಧೆಡೆ ನಿಷೇಧವಾಗಿದೆ ಎಂದು ಲೆಕ್ಕ. ಆದರೆ, ಈ ಬಗೆಯ ನಿಷೇಧಗಳ ನಿಜವಾದ ಅವಸ್ಥೆಯೇನೆಂಬುದನ್ನು ನೀವೆಲ್ಲರೂ ಬಲ್ಲಿರಿ.

ಕರುಗಳ ಜೀವಕ್ಕೆ ಬೆಲೆಯೇ ಇಲ್ಲ; ಮನುಷ್ಯನ ಕ್ರೌರ್ಯಕ್ಕೆ ಕೊನೆಯೇ ಇಲ್ಲ; ನಾಲಿಗೆಯ ಚಪಲಕ್ಕೆ ಮಿತಿಯೇ ಇಲ್ಲ!

ಭಾರತದ ವಿಜ್ಞಾನಿಗಳಿಗೆ, ಅಧಿಕಾರಿಗಳಿಗೆ, ಸರಕಾರಗಳಿಗೆ ಇಲ್ಲಿ ಒಂದು ಪ್ರಶ್ನೆಯನ್ನು ಕೇಳದಿರಲಾಗುತ್ತಿಲ್ಲ:
ಉಳುಮೆ ಮಾಡಲಾಗದ, ಗಾಡಿ ಎಳೆಯಲಾಗದ ಮಿಶ್ರತಳಿಯ ಗಂಡು ಕರುಗಳು ನಿರುಪಯೋಗಿ ಎಂಬ ಕಾರಣಕ್ಕಲ್ಲವೇ ಈ ಪರಿಯ ಕ್ರೌರ್ಯಕಾಂಡವು ನಡೆಯುತ್ತಿರುವುದು? ಹಾಗೆಂದಮೇಲೆ ಕೃತಕಗರ್ಭಧಾರಣೆ -ತಳಿಸಂಕರಗಳ ಮೂಲಕ ಕೋಟ್ಯನುಕೋಟಿ ಮಿಶ್ರತಳಿಯ ಗಂಡುಕರುಗಳನ್ನು ಸೃಷ್ಟಿಸಿದ ನೀವು ಈ ಹತ್ಯಾಕಾಂಡಕ್ಕೆ ನೇರ ಹೊಣೆಗಾರರಲ್ಲವೇ? ಎಷ್ಟು ಹೆಣ್ಣು ಹುಟ್ಟಿದರೆ ಸುಮಾರಾಗಿ ಅಷ್ಟೇ ಗಂಡು ಎಂಬ ಪ್ರಕೃತಿನಿಯಮವು ನಿಮಗೆ ಅರ್ಥವೇ ಆಗಲಿಲ್ಲವೇಕೆ? ಇಷ್ಟು ದೊಡ್ಡ ಪ್ರಮಾಣದಲ್ಲಿ ನಡೆಸಿದ ನಿರುಪಯೋಗಿ ಸಂತಾನದ ಸೃಷ್ಟಿಯು ರೈತನ ಮೇಲೆ, ದೇಶದ ಮೇಲೆ ನೀವು ಹೊರಿಸಿದ ಹೊರೆಯಲ್ಲವೇ?

ಅದೇ ದೇಶೀ ತಳಿಯ ಗಂಡುಕರು, ಇಂದೂ ಕೂಡಾ ಹುಟ್ಟಿದ ಒಂದೇ ವರ್ಷದಲ್ಲಿ ಎಷ್ಟು ಕಡಿಮೆಯೆಂದರೂ ₹50,000 ಬೆಲೆ ಬಾಳುತ್ತದೆ, ಅದೂ ಮಾಂಸಕ್ಕಾಗಿ ಅಲ್ಲ; ಬದುಕಿ ಮಾಡುವ ಕಾರ್ಯಗಳಿಗಾಗಿ.

ಡೈರಿಗಳ ಕರಾಳತೆಯ ಈವರೆಗಿನ ನಿರೂಪಣೆ ಕೇವಲ ಗಂಡುಕರುಗಳ ದುರಂತ ಬದುಕಿನ ಕುರಿತಾದುದು. ಹೆಣ್ಣುಕರುಗಳು ಮತ್ತು ಹಸುಗಳ ಜೀವನ-ಮರಣಗಳು ಇನ್ನಷ್ಟು ಕ್ಲೇಶಮಯವಾಗಿವೆ. ಅದನ್ನು ನಿರೂಪಿಸಲು ಮತ್ತೊಂದು ಲೇಖನವೇ ಬೇಕು.

ಹಾಲೆಂಬುದು ಹಸುವಿನ ವಾತ್ಸಲ್ಯದ ಫಲವಾಗಿ ಹರಿಯುವ ಅಮೃತದ್ರವ. ಡೈರಿಗಳಿಂದ ಬರುವ ಬಿಳಿದ್ರವವು ಹಸುವಿನ ವಾತ್ಸಲ್ಯದ ಫಲವಲ್ಲ, ಮಾನವನ ಲೋಭ-ಕ್ರೌರ್ಯಗಳ ಫಲ. ಹಾಲಿನ ಹಿಂದಿನ ಕಥೆಯನ್ನು ಕಂಡವನಿಗೆ ಕ್ಷೀರಪಾನವು ರಕ್ತಪಾನಕ್ಕಿಂತ ಕೆಡುಕೆನ್ನಿಸದೇ? ಡೈರಿಗಳ ಹಾಲನ್ನು ಸೇವಿಸುವುದು – ತನ್ಮೂಲಕ ಅಲ್ಲಿ ನಡೆಯುವ ಮಹಾಪಾಪದ ಪಾಲನ್ನು ಸ್ವೀಕರಿಸುವುದು ಇನ್ನು ನಿಮ್ಮ ವಿವೇಚನೆಗೆ ಸೇರಿದ್ದು.

 

~*~*~

ತಿಳಿವು~ಸುಳಿವು:

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.

ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments