ನಮ್ಮ ದೇಶದಲ್ಲಿ ವ್ಯಾಪಕವಾಗಿ ಹಸುಗಳನ್ನು ಕೊಲ್ಲಲಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತು; ಆದರೆ ಹಾಲನ್ನೂ ಕೊಲ್ಲಲಾಗುತ್ತಿದೆ ಎಂಬುದು ಎಷ್ಟು ಜನರಿಗೆ ಗೊತ್ತು!?
ಹೌದೇ ಹೌದು! ನಾವಿಂದು ನಿತ್ಯ ಸೇವಿಸುತ್ತಿರುವುದು ಹಾಲಿನ ಶವವನ್ನು; ಹಾಲಿನ ವೇಷದ ವಿಷವನ್ನು!
ಸೃಷ್ಟಿಯ ಸರ್ವೋತ್ತಮ ಕೊಡುಗೆಗಳ ಸಹಜತೆಯ ಮೇಲೆ ಹಲ್ಲೆ ನಡೆಸಿ, ಅವುಗಳನ್ನು ವಿಕೃತಗೊಳಿಸಿ, ವಿನಾಶಕಾರಿ-ವಿಷವಾಗಿ ಅವುಗಳನ್ನು ಮಾರ್ಪಡಿಸುವ ‘ವೈರಸ್’ ಯಾವುದಾದರೂ ಇದ್ದರೆ ಅದು ಮಾನವ!! ಭೂಲೋಕದ ಅಮೃತವೆಂದು ಹೊಗಳಲ್ಪಟ್ಟಿದ್ದ ಹಾಲು, ಇಂದು ಹಾಳು ಎಂದು ಹಳಿಯಲ್ಪಡುತ್ತಿದ್ದರೆ, ಅದಕ್ಕೆ ಮಾನವನ ಮೌರ್ಖ್ಯ-ಕ್ರೌರ್ಯ-ದುರಾಸೆಗಳ ಮಿಶ್ರಣವೇ ಕಾರಣ!
ಹಾಲಿನ ಮೂಲವಾದ ಹಸುವನ್ನು ಹಾಳು ಮಾಡುವುದರಿಂದ ಆರಂಭಿಸಿ, ಹಸುವಿಗೆ ಯಾವ ರೀತಿಯಲ್ಲಿಯೂ ಸಂಬಂಧವೇ ಇಲ್ಲದ, ಹಾಲಿನ ಅಂಶವೇ ಇಲ್ಲದ, ‘ರಾಸಾಯನಿಕಗಳ ಮಿಶ್ರಣ’ವನ್ನು ಹಾಲೆಂದು ಮಾರುವವರೆಗೆ, ಮನುಷ್ಯನೆಸಗಿದ ಪ್ರಮಾದಗಳ ಪರಂಪರೆಯನ್ನೊಮ್ಮೆ ಅವಲೋಕಿಸಿ, ಬಳಿಕವಷ್ಟೇ ‘ಹಾಲು ಕುಡಿಯಬೇಕೇ, ಬೇಡವೇ?’ ‘ಕುಡಿಯವುದಿದ್ದರೆ ಯಾವ ಹಾಲು ಕುಡಿಯಬೇಕು?’ ಎಂಬ ಬಗ್ಗೆ ನಿರ್ಧರಿಸೋಣ.
#ಪ್ರಮಾದ~1: ಹಾಲಿನ ಮೂಲವನ್ನೇ ಹಾಳು ಮಾಡಿದ್ದು; ಗೋವುಗಳ ಭಾರತೀಯ ತಳಿಗಳನ್ನು ಸಂಕರಗೊಳಿಸಿ ವಿಕೃತಗೊಳಿಸಿದ್ದು.
ಪರಿಣಾಮ: ನಿಜವಾದ ಹಾಲು ಮಾಯವಾಯಿತು; ಮಾಯದ ಹಾಲು ಬದುಕನ್ನು ಆಕ್ರಮಿಸಿತು!
ಶುದ್ಧ ಹಾಲು ಶುದ್ಧ ಗೋವಿನಿಂದ ಮಾತ್ರ ಬರಲು ಸಾಧ್ಯ. ಗೋವಿನ ಶುದ್ಧತೆಯನ್ನೇ ಹಾಳುಗೈದ ಬಳಿಕ ಹಾಲಿಗಿನ್ನೆಲ್ಲಿಯ ಶುದ್ಧತೆ!? ‘ಮಾನವನಿಗೆ ನೀನು ನೀಡಿದ ಅತಿ ದೊಡ್ಡ ಕೊಡುಗೆ ಯಾವುದು?’ ಎಂದು ದೇವರನ್ನು ಕೇಳಿದರೆ, ಅವನು ಭಾರತದ ಗೋವನ್ನೇ ತೋರಿಸಿಯಾನು! ಭೂಮಂಡಲದ ಭೂಷಣವಾಗಿದ್ದ, ಸಮಸ್ತ ಸೃಷ್ಟಿಗೇ ತಿಲಕದಂತಿದ್ದ, ಮನುಷ್ಯನಿಗೆ ಮಹೋಪಕಾರಿಯಾಗಿದ್ದ, ಭಾರತೀಯ ಗೋವಂಶವನ್ನು ಹೆಚ್ಚು ಹಾಲಿನ ದುರಾಸೆಗಾಗಿ ಕುಲಗೆಡಿಸಲಾಯಿತು; ತಳಿಗೆಡಿಸಲಾಯಿತು; ಬಿಳಿಯರ ಊರಿನ ಕಳಪೆ ತಳಿಗಳ ಜೊತೆಗೆ ಸಂಕರಗೊಳಿಸಲಾಯಿತು! ಶಂಕರತಳಿಗಳು ಹೋಗಿ, ಸಂಕರ ತಳಿಗಳು ಬಂದವು; ಚಿನ್ನ ಕೊಟ್ಟು ಪ್ಲಾಸ್ಟಿಕ್ ಪಡೆದವನ ಕಥೆಯಾಯಿತು ಭಾರತೀಯರದು!
ಇಂದೀಗ ಆಧುನಿಕ ವಿಜ್ಞಾನವು ಭಾರತೀಯ ತಳಿಗಳ ಹಾಲು(A2 Milk) ಮಾತ್ರವೇ ಕುಡಿಯಲು ಯೋಗ್ಯವೆಂದು ಸಾರಿದೆ; ಸಂಕರ ತಳಿಗಳ ಹಾಲನ್ನು ಬಿಳಿ ವಿಷವೆಂದು – ಕ್ಷೀರರಾಕ್ಷಸನೆಂದು ಜರೆದಿದೆ! ಸ್ವಾರಸ್ಯವೆಂದರೆ, ಈ ಮಿಲ್ಕ್-ಮಷಿನ್ ತಳಿಗಳನ್ನು ಎಲ್ಲಿ ಸೃಷ್ಟಿಸಲಾಯಿತೋ, ಅಲ್ಲಿಯ ವಿಜ್ಞಾನಿಗಳೇ ಈ ಅನ್ವೇಷಣೆ-ಘೋಷಣೆಗಳನ್ನು ಮಾಡಿದವರು! ಸಂಕರ ತಳಿಗಳ ಕಾಶಿ(?)ಯೆನಿಸಿದ, ನ್ಯೂಜಿಲೆಂಡ್’ನ ಕೀತ್ ವುಡ್’ಫೋರ್ಡ್ ಎಂಬ ವಿಜ್ಞಾನಿಯು ತಮ್ಮ ‘Devil in the Milk’ ಎಂಬ ಪುಸ್ತಕದಲ್ಲಿ ಸಂಶೋಧನೆಗಳನ್ನಾಧರಿಸಿದ ಸಾಕ್ಷ್ಯಗಳ ಸಹಿತವಾಗಿ, ಹಾಲು ವಿಷವಾದ ವಿಷಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಜಗತ್ತಿನಲ್ಲಿ 35%ರಷ್ಟು ಹಾಲನ್ನು ರಫ್ತು ಮಾಡುವ ನ್ಯೂಜಿಲೆಂಡ್ ಭಾರತೀಯ ತಳಿಗಳಿಗೆ ಶರಣಾಗಿದೆ; ಆದರೆ ಭಾರತವು ಈ ವರ್ಷ 7 ಕೋಟಿ 40 ಲಕ್ಷದಷ್ಟು ಗೋವುಗಳನ್ನು ಸಂಕರಗೊಳಿಸಿದೆ; ಮುಂದಿನ ವರ್ಷದಲ್ಲಿ 10 ಕೋಟಿ ಗೋವುಗಳನ್ನು ಸಂಕರಗೊಳಿಸುವ ಗುರಿ ಹೊಂದಿದೆ!
ಭಾರತವು ಭಾರತೀಯ ಗೋವುಗಳಲ್ಲಿ ಬಹ್ವಂಶವನ್ನು ಕಳೆದುಕೊಂಡಿದೆ; ಸರ್ವಸ್ವವನ್ನೂ ಕಳೆದುಕೊಳ್ಳುವ ಮೊದಲಾದರೂ ಆಳುವವರಿಗೆ-ಅಧಿಕಾರಿಗಳಿಗೆ ಪ್ರಜ್ಞೆ ಮರಳಲೆಂಬುದಷ್ಟೇ ನಮ್ಮ ಆಶಯ!
#ಪ್ರಮಾದ~2: ಹಸುಗಳಿಗೆ ಸತತ ವಿಷಯುಕ್ತ ಆಹಾರವನ್ನುಣಿಸಿದ್ದು;
ಪರಿಣಾಮ: ನಮ್ಮ ಆಹಾರವಾದ ಹಾಲಿನಲ್ಲಿ ವಿಷ ಸೇರಿತು!
ಹಸುಗಳ ಮೇವು-ನೀರಿನ ಮೂಲ ಭೂಮಿ. ಆ ತಾಯಿಗೆ ನಾವುಣಿಸುತ್ತಿರುವ ವಿಷವು ಮೇವು-ನೀರುಗಳ ಮೂಲಕ ಈ ತಾಯಿಯ ಒಡಲು ಸೇರುತ್ತಿದೆ. ‘ಮಾಡಿದ್ದುಣ್ಣೋ ಮಹರಾಯ’ ಎಂಬಂತೆ, ವಿಷವು ಅಲ್ಲಿಂದ ನೇರವಾಗಿ ನಮ್ಮೆಲ್ಲರ ಒಡಲನ್ನು ಸೇರುತ್ತಿದೆ! ವಿಷದ ಕೃಷಿಯ ಪರಿಣಾಮವಾಗಿ, ಹುಲುಸಾಗಬೇಕಾದ ಹೊಲಗಳು ಹೊಲಸಾಗುತ್ತಿವೆ! ಹಾಲನ್ನಗಳು ವಿಷವಾಗುತ್ತಿವೆ!
ಕುವೆಂಪು ಸಾಲೊಂದು ಇಲ್ಲಿ ನೆನಪಾಗುತ್ತಿದೆ: ‘ಗೋ ಶಪಿಸದೇ ನಿನ್ನ? ವಿಷವಾಗದೇ ಪಾಪಿ! ನೀನುಣುವ ಹಾಲನ್ನ!?’
ಕುಲಾಂತರಿ (Genetically Modified) ಬೀಜಗಳಿಂದ ಬೆಳೆದ ಮೇವು ಅಸಂತುಲಿತ ಪಶು ಆಹಾರದ ಇನ್ನೊಂದು ಮುಖ. ಉದಾಹರಣೆ ಬಿ.ಟಿ. ಹತ್ತಿ. ಹಸುಗಳು ಸೇವಿಸಿದ ಆಹಾರದಿಂದಲೇ ಅಲ್ಲವೇ ಹಾಲು ತಯಾರಾಗುವುದು? ಅದೇ ಕುಲಾಂತರಿಯಾದರೆ ಹಾಲು ಸಹಜವಾಗಿರುವುದಾದರೂ ಹೇಗೆ?
ಆದರೆ ದೇಶೀ ಗೋವುಗಳು ಇದಕ್ಕೆ ಅಪವಾದ. ಅವುಗಳು ತಾವುಂಡ ವಿಷವನ್ನು ತಮ್ಮೊಳಗೇ ಇಟ್ಟುಕೊಂಡು, ನಮಗೆ ಅಮೃತ ನೀಡಬಲ್ಲವು, ವಿಷಕಂಠನಂತೆ! ಈ ಕುರಿತು ರಾಜೀವ್ ದೀಕ್ಷಿತ್ ನಡೆಸಿದ ಅದ್ಭುತವಾದ ಪ್ರಯೋಗವೊಂದರ ವಿವರ ಇಲ್ಲಿದೆ.
#ಪ್ರಮಾದ~3: ಹಸುಗಳಿಗೆ ಅನೈಸರ್ಗಿಕವಾದ ಪಶು ಆಹಾರಗಳನ್ನು ನೀಡುತ್ತಿರುವುದು;
ಪರಿಣಾಮ: ಹಸುವಿಗೂ, ಮಾನವನಿಗೂ ಅನಾರೋಗ್ಯ.
ನಾವೀಗ ಹಸುವಿಗೆ ಆಹಾರ ನೀಡುತ್ತಿರುವುದು ನಮಗೆ ಬೇಕಾದಂತೆ, ಹೊರತು, ಹಸುವಿಗೆ ಬೇಕಾದಂತೆ ಅಲ್ಲ! ತಥ್ಯವೇನೆಂದರೆ, ಹಸುವಿಗೆ ಬೇಕಾದ ಆಹಾರವನ್ನು ನೀಡಿದರೆ ಮಾತ್ರವೇ ಅದು ನಮಗೆ ಹಿತವಾಗುವ ಹಾಲನ್ನು ನೀಡಲು ಸಾಧ್ಯ. ಹಲವು ಬಾರಿ ಹಾಲು ಹೆಚ್ಚು ಮಾಡುವ ಭರದಲ್ಲಿ ಇವು ಹಸುವಿನ ಬದುಕನ್ನೇ ಹಾಳುಮಾಡುತ್ತವೆ; ನಮ್ಮ ಆರೋಗ್ಯವನ್ನೂ ಕೆಡಿಸುತ್ತವೆ.
ವಿದೇಶೀಯರಂತೂ ಶುದ್ಧ ಶಾಕಾಹಾರಿಯಾದ ಹಸುವಿಗೆ ಮಾಂಸಾಹಾರ ನೀಡುತ್ತಾರೆ! ‘ಕೊಬ್ಬಿ ಬೆಳೆಯಲಿ, ಹೆಚ್ಚು ಮಾಂಸ ನೀಡಲಿ’ ಎಂಬುದು ಇದರ ಹಿಂದಿನ ಘನ ಉದ್ದೇಶ. ಇಂಗ್ಲೆಂಡಿನಲ್ಲಿ ಕುರಿಯ ಮಾಂಸದ ಬಳಕೆಯ ಉಳಿಕೆಯನ್ನು ಹಸುಗಳಿಗೆ ಕೊಟ್ಟ ಪರಿಣಾಮ ಅವುಗಳು ಬಹುದೊಡ್ಡ ಸಂಖ್ಯೆಯಲ್ಲಿ Mad Cow Disease (MCD) ಗೆ ತುತ್ತಾದವು! ಬಳಿಕ ಲಕ್ಷ ಲಕ್ಷ ಸಂಖ್ಯೆಯಲ್ಲಿ ಅವುಗಳ ಸಾಮೂಹಿಕ ಮಾರಣಹೋಮ ನಡೆಸಲಾಯಿತು!!
#ಪ್ರಮಾದ~4: ಹಾಲು ಬಹಳ ನೀಡಲೆಂದು, ಮತ್ತು ಹಸುವಿಗೆ ಇಷ್ಟವಿರಲಿ, ಇಲ್ಲದಿರಲಿ, ಇರುವ ಎಲ್ಲ ಹಾಲನ್ನೂ ಇಳಿಸಿಬಿಡಲೆಂದೂ ಆಕ್ಸಿಟೋಸಿನ್(Oxytocin) ಹಾರ್ಮೋನ್ ಇಂಜೆಕ್ಷನ್ ನೀಡುವುದು:
ಪರಿಣಾಮ: ಹಸುವಿಗೆ ಪ್ರತಿ ಬಾರಿಯೂ ಪ್ರಸವವೇದನೆ; ಹಾಲು ಸೇವಿಸುವವರ ಹಾರ್ಮೋನ್‌ಗಳಲ್ಲಿ ತಲ್ಲಣ!
ಕರುವು ಕೆಚ್ಚಲಿಗೆ ಬಾಯಿಟ್ಟರೆ, ಎದುರು ನಿಂತುಕೊಂಡರೆ ಹಸುವಿನಲ್ಲಿ ಸಹಜವಾಗಿಯೇ ಆಗುವ, ಹಾಲಿಳಿಯುವ ಪ್ರಕ್ರಿಯೆಯನ್ನು ಕೃತ್ರಿಮವಾಗಿ ಉಂಟುಮಾಡಲು ಬಳಸುವ ಬರ್ಬರ ವಿಧಾನವಿದು! ಮನುಷ್ಯರಲ್ಲಿಯೂ ಸಹಜವಾಗಿ ಪ್ರಸವವೇದನೆ ಬಾರದ ಗರ್ಭಿಣಿಯರಿಗೆ ಕೃತಕವಾಗಿ ನೋವು ಬರಿಸಲು ಈ ಇಂಜೆಕ್ಷನ್ ನೀಡುತ್ತಾರೆ. ಸಂಕರ ತಳಿಗಳಲ್ಲಿ ಕರು ತಾಯಿಯ ಜೊತೆ ಇರುವ ಅವಕಾಶವೇ ಇಲ್ಲದಿರುವುದರಿಂದ ಆ ಸ್ಥಾನದಲ್ಲಿ ಈ ರಾಕ್ಷಸ! ಅವುಗಳಲ್ಲಿ ಹಾಲು ಹೆಚ್ಚು ಮಾಡಲೂ ಇದನ್ನೇ ಬಳಸುತ್ತಾರೆ. ಪದೇ ಪದೇ ಪಶುವೈದ್ಯರನ್ನು ಕರೆಯುವ ಕರಕರೆ ಬೇಡವೆಂದು ರೈತರು, ತಾವೇ ಮಾರುಕಟ್ಟೆಯಿಂದ ಈ ಔಷಧವನ್ನು ತಂದಿಟ್ಟುಕೊಂಡು, ಹಸುವಿನ ಮೇಲೆ ತಮಗೆ ಬೇಕೆನಿಸಿದಾಗಲೆಲ್ಲ ಪ್ರಯೋಗ ಮಾಡುತ್ತಿರುತ್ತಾರೆ.
ಪಾಪ! ಕೇವಲ ಹಾಲಿಳಿಸಲು ಪದೇ ಪದೇ ಗರ್ಭಕೋಶ-ಮೂತ್ರಕೋಶಗಳಲ್ಲಿ ಅಸಹನೀಯ ವೇದನೆಯನುಭವಿಸುವ ಹಸುವಿಗೆ ಹಟ್ಟಿಯೂ ನಿತ್ಯ ಕೊಲ್ಲುವ ಕಸಾಯಿಖಾನೆಯೇ!
ಯಾವುದೇ ಪ್ರಾಣಿಯ ಶರೀರದ, ಯಾವುದೇ ಘನವಾಗಲೀ, ದ್ರವವಾಗಲೀ, ಅದು ಪ್ರಮಾಣಬದ್ಧವಾಗಿಯೇ ಇರಬೇಕು. ಸಮಷ್ಟಿಯ ಒಂದಂಶವನ್ನು – ಅದು ಹಾಲಿರಲಿ, ಏನೇ ಇರಲಿ – ಅನೈಸರ್ಗಿಕವಾಗಿ ಹೆಚ್ಚು ಮಾಡಿದರೆ, ಸಮಸ್ತ ಶರೀರದಲ್ಲಿ ಅಸಂತುಲನ ನಿಶ್ಚಿತ. ಹಸುವಿನ ಶರೀರದ ಅಸಂತುಲನ ಹಾಲಿನ ಮೂಲಕ ನಮ್ಮ ಮೈ ಸೇರುವುದೂ ನಿಶ್ಚಿತ! ಈ ಹಿನ್ನೆಲೆಯಲ್ಲಿ “ಹೆಚ್ಚು ಹಾಲು – ಹೆಚ್ಚು ಹಣ!” ಎಂಬ ಸಿದ್ಧಾಂತವನ್ನೇ ಕೈ ಬಿಟ್ಟು, “Quality over Quantity” ಎಂಬ ತತ್ತ್ವಕ್ಕೆ ದೇಶವು ಬರಬೇಕು.
#ಪ್ರಮಾದ~5: ಹಸುವಿನ ಗರ್ಭದ ಕೊನೆಯ ಅವಧಿಯಲ್ಲಿ ಮತ್ತು ಪ್ರಸವದ ಆರಂಭದ ದಿನಗಳಲ್ಲಿ ಹಾಲು ಕರೆದು ಡೈರಿಗೆ ನೀಡುವುದು;
ಪರಿಣಾಮ: ಹಾಲು ಸೇವಿಸಿದವರ ಹಾರ್ಮೋನ್‌ಗಳಲ್ಲಿ ಭಯಂಕರವಾದ ಏರುಪೇರು; ಹೆಣ್ಣುಮಕ್ಕಳಲ್ಲಿ ಅಸ್ವಾಭಾವಿಕವಾದ ಬೆಳವಣಿಗೆ; ಗಂಡು ಮಕ್ಕಳಲ್ಲಿ ಸ್ತ್ರೀತ್ವ-ವೃದ್ಧಿ!
ಈ ಸಮಸ್ಯೆಯ ಮೂಲ Estrogen. ಗರ್ಭವು ನಿಲ್ಲಲು ಕಾರಣವಾಗುವ ಹಾರ್ಮೋನ್ ಇದು. ಗರ್ಭದ ಕೊನೆಯ ಅವಧಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿರುವ ಇದು, ಪ್ರಸವದ ಆರಂಭದ ಹತ್ತು ದಿನಗಳಲ್ಲಿಯೂ ಇರುತ್ತದೆ. ಆದುದರಿಂದ ಆ ಸಮಯದ ಹಾಲು ಮನುಷ್ಯನಿಗೆ ಸರ್ವಥಾ ವರ್ಜ್ಯ. ಬಳಸಿದರೆ, Estrogen ಹಾಲಿನ ಮೂಲಕ ನಮ್ಮ ದೇಹವನ್ನು ಪ್ರವೇಶಿಸುವುದರಿಂದಲಾಗಿ ಹಾರ್ಮೋನ್‌ಗಳ ಅಸಮತೋಲವುಂಟಾಗಿ ಚಿತ್ರ-ವಿಚಿತ್ರವಾದ ಸಮಸ್ಯೆಗಳು ಬರಲು ಸಾಧ್ಯವಿದೆ. ದೇಶೀ ಗೋವುಗಳು ಗರ್ಭಧಾರಣೆಯಾದ 2-3 ತಿಂಗಳುಗಳಲ್ಲಿಯೇ ಹಾಲು ಕರೆಯುವುದನ್ನು ನಿಲ್ಲಿಸುತ್ತವೆ. ಆದುದರಿಂದ ಅಲ್ಲಿ ಈ ಸಮಸ್ಯೆ ಇಲ್ಲ. ಆದರೆ ಸಂಕರ ತಳಿಗಳು ಹಾಲು ಹೆಚ್ಚು ಮಾಡುವ ಮಾನವನ ದುಷ್ಪ್ರಯೋಗದ ಫಲವಾಗಿ ಕೊನೆಯವರೆಗೂ ಹಾಲು ಕೊಡುತ್ತಲೇ ಇರುತ್ತವೆ; ರೈತರು ಅದನ್ನು ಡೈರಿಗೆ ಕೊಡುತ್ತಲೇ ಇರುತ್ತಾರೆ. ನಾವದನ್ನು ಕುಡಿಯುತ್ತಲೇ ಇರುತ್ತೇವೆ!
ದೇಶೀ ಗೋವುಗಳಲ್ಲಿಯೂ ಕರು ಹಾಕಿದ ಮೊದಲ ಹತ್ತು ದಿನಗಳ ಹಾಲಿನಲ್ಲಿ Estrogen ಇರುತ್ತದೆ. ಆ ಹಾಲು ಅದರ ಕರುವಿಗೆ ಶುಭ; ನರರಿಗೆ ಅಶುಭ. ಆದುದರಿಂದಲೇ ಪ್ರಸವಿಸಿದ ಹತ್ತು ದಿನಗಳ ಕಾಲ ಸೂತಕವನ್ನು ಆಚರಿಸುವ, ಹಾಲನ್ನು ಬಳಸದಿರುವ ಪದ್ಧತಿಯನ್ನು ನಮ್ಮ ಪೂರ್ವಜರು ತಂದರು. ಪಕ್ಕಾ ವೈಜ್ಞಾನಿಕವಾದ ಪದ್ಧತಿಯದು! ಮೂಢನಂಬಿಕೆಯ ನಿಷೇಧದ ಮಾತಾಡುವವರು ಎರಡೂ ಕಣ್ತೆರೆದು ಒಮ್ಮೆ ಈ ಸಂಪ್ರದಾಯವನ್ನು ಅವಲೋಕಿಸುವುದೊಳಿತು!
ಕೈಯಾರೆ ಕಾಮಧೇನುವಿನ ಕುಲವನ್ನೇ ಕೊಂದ, ಅದು ನೀಡುವ ಅಮೃತವನ್ನೇ ವಿಷಮಯಗೊಳಿಸಿದ, ಮಾನವನ, ಪ್ರಮಾದಗಳನ್ನು ಬಣ್ಣಿಸಲು ಶಬ್ದಗಳೂ ಸಾಲದು – ಇಲ್ಲಿ ಸ್ಥಳವೂ ಸಾಲದು. ಮತ್ತಷ್ಟು ಘೋರವಾದ, ಇನ್ನಷ್ಟು ಪ್ರಮಾದಗಳನ್ನು ಮುಂದಿನ ಕಂತಿನಲ್ಲಿ ನೋಡೋಣ.
ಹಾಲು ಕುಡಿಯುವವರೆಲ್ಲ ತಪ್ಪದೇ ಓದಿ.
~*~*~
(ಸಶೇಷ)
ಇದು ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ. ಭಾರತೀಯ ಗೋವುಗಳ ರಕ್ಷಣೆಗಾಗಿ, ತಳಿಗಳ ಉಳಿವಿಗಾಗಿ ಕಾಮದುಘಾ ಎಂಬ ಕಾರ್ಯಯೋಜನೆಯನ್ನು ಕೈಗೊಂಡು ದೇಶಾದ್ಯಂತ ಹೋರಾಟಗೈದ ಶ್ರೀಶ್ರೀಗಳು ಭಾರತೀಯ A2 ಹಾಲು ಹಾಗೂ ವಿದೇಶೀ A1 ಹಾಲಿನ ಬಗ್ಗೆ ಅಧಿಕೃತವಾಗಿ ಬರೆಯುತ್ತಿದ್ದಾರೆ. ಮೊದಲ ಕಂತು ಇಲ್ಲಿದೆ.
ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.
October 23, 2017 at 9:51 AM
ಅವೈಜ್ಞಾನಿಕ ಕಾರ್ಯಗಳಿಗೆ ಸರಕಾರ ಅನುಮಾನಗಳನ್ನು ಬಿಡುಗಡೆಗೊಳಿಸುವ ಬದಲಾಗಿ ಸೂಕ್ತವಾಗಿ ದೇಸೀ ಗೋತಳಿಗಳನ್ನುಳಿಸುವ ಯೋಜನೆಗಳಿಗೆ ಅನುದಾನ ಬಿಡುಗಡೆಗೊಳಿಸುವುದರಿಂದ ಗೋವೂ ಉಳಿಯುತ್ತದೆ. ಮಾನವನೂ ಉಳಿಯುತ್ತಾನೆ. ಶ್ರೀ ಸಂಸ್ಥಾನದವರ ಕಾಳಜಿ ಲೋಕರಕ್ಷಣೆಯನ್ನು ಸರಕಾರ ಅರ್ಥೈಸುವುದು ಒಳಿತು
October 23, 2017 at 2:18 PM
ಮಾನವನು ತನ್ನ ನಾಶಕ್ಕೆ ತಾನೇ ಕಾರಣೀಭೂತನು ಎಂಬುದಂತೂ ನಿಜ! ತನ್ನ ಸ್ವಾರ್ಥಕ್ಕೆ ತನ್ನನ್ನೇ ಬಲಿಕೊಡಲು ಹೊರಟಿದ್ದಾನೆ!! ಶ್ವೇತಕ್ರಾಂತಿ, ಹಸಿರುಕ್ರಾಂತಿಯ ನೆಪದಲ್ಲಿ ವಿಷಯುಕ್ತ ಆಹಾರದ ದಾಸನಾಗಿರುವುದು ಬಹುದೊಡ್ಡ ವಿಷಾದ!
ಈಗಲೇ ನಾವು ಎಚ್ಚೆತ್ತು, ನಿಜವಾದ ಕ್ರಾಂತಿಯನ್ನು ಮಾಡಿ ದೊಡ್ಡ ಅನಾಹುತವನ್ನು ತಡೆಯಬೇಕಾಗಿದೆ.. ನಮ್ಮ ಮಕ್ಕಳಾದರೂ ಅಮೃತದ ರುಚಿಯನ್ನು ಸವಿಯುವಂತಾಗಲಿ! ವಿಷಮುಕ್ತ ಜೀವನ ಅವರದಾಗಲಿ.. ಆ ನಿಟ್ಟಿನತ್ತ ನಮ್ಮ ಹೆಜ್ಜೆ ಸಾಗಲಿ… #ಲೋಕಲೇಖ #A2Milk
October 23, 2017 at 6:28 PM
A1-A2 ಎಂದು ಪಾಶ್ಚಾತ್ಯರು ವಿಭಾಗಿಸಿದರು..ಆದರೆ ನಮ್ಮ ಭಾರತೀಯ ತಳಿ ಹಸುಗಳು ಯಾವಾಗಲೂ ಅಮೂಲ್ಯ,ಅಮೃತ, ಅದ್ವಿತೀಯ