ಹಾಲೆಂಬ ಅಮೃತವನ್ನು ವಿಷದ ಕೂಪವನ್ನಾಗಿಸುವ ಪ್ರಮಾದಗಳನ್ನು ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು #ಲೋಕಲೇಖ ಅಂಕಣದ ಮೂಲಕ ನಮ್ಮೆದುರು ಅನುಗ್ರಹಿಸುತ್ತಿದ್ದಾರೆ. ಪ್ರಮಾದಗಳ ಸರಮಾಲೆಯ ಮೊದಲೆರಡು ತುಣುಕುಗಳನ್ನು ಕಳೆದ ವಾರಗಳ ಸಂಚಿಕೆಗಳಲ್ಲಿ ಓದಬಹುದು.

ಶತಕೋಟಿ ಭಾರತೀಯರಿಗೆ ನಿತ್ಯ ಹಾಳು ಕುಡಿಸಲಾಗುತ್ತಿದೆಯೇ? – ಭಾಗ 1
ನಮ್ಮ ದೇಶದಲ್ಲಿ ವ್ಯಾಪಕವಾಗಿ ಹಸುಗಳನ್ನು ಕೊಲ್ಲಲಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತು; ಆದರೆ ಹಾಲನ್ನೂ ಕೊಲ್ಲಲಾಗುತ್ತಿದೆ ಎಂಬುದು ಎಷ್ಟು ಜನರಿಗೆ ಗೊತ್ತು!?
ಹೌದೇ ಹೌದು! ನಾವಿಂದು ನಿತ್ಯ ಸೇವಿಸುತ್ತಿರುವುದು ಹಾಲಿನ ಶವವನ್ನು; ಹಾಲಿನ ವೇಷದ ವಿಷವನ್ನು!….
ಮುಂದೆ ಓದಿ >> http://hareraama.in/blog/lokalekha/a1-milk-vs-a2-milk-part-1 

ಶತಕೋಟಿ ಭಾರತೀಯರಿಗೆ ನಿತ್ಯ ಹಾಳು ಕುಡಿಸಲಾಗುತ್ತಿದೆಯೇ? – ಭಾಗ 2
ಕರುವಿನೊಂದಿಗೆ ನೇರವಾಗಿ ಹಸುವಿನ ಕೆಚ್ಚಲಿನಿಂದಲೇ ಹಾಲು ಕುಡಿಯುತ್ತಿದ್ದ ಬಾಲಕೃಷ್ಣನ ಸ್ಮರಣೆಯನ್ನು ಒಮ್ಮೆ ಇಲ್ಲಿ ಮಾಡಿಕೊಳ್ಳೋಣ. ನಮ್ಮ ದೇಶದಲ್ಲಿ ಸಾಮಾನ್ಯ ಮನುಷ್ಯರಾದರೂ ಪಂಚಗವ್ಯ-ಪಂಚಾಮೃತಗಳಿಗೆ ಬಿಸಿ ಮಾಡಿರದ ಹಾಲನ್ನೇ ಬಳಸುತ್ತಿದ್ದುದು. ಅವು ಎಂದೂ ರೋಗ ಕೊಟ್ಟ ಉದಾಹರಣೆಯಿಲ್ಲ. ಬದಲಿಗೆ ಆರೋಗ್ಯವನ್ನೇ ಕೊಟ್ಟಿವೆ!
ಮುಂದೆ ಓದಿ >> http://hareraama.in/blog/lokalekha/a1-milk-vs-a2-milk-part-2

ಪ್ರಮಾದಗಳ ಸರಣಿಯ ವಿವರಣೆ ಮುಂದುವರಿಯುತ್ತಿದೆ.

ಶತಕೋಟಿ ಭಾರತೀಯರಿಗೆ ನಿತ್ಯ ಹಾಳು ಕುಡಿಸಲಾಗುತ್ತಿದೆಯೇ? – ಭಾಗ 3/3:

‘ಹರಳು-ಮರಳು ಒಂದೇ ಎನ್ನುವವನಿಗೆ ಅರಳು-ಮರುಳು ಎನ್ನದೇ ಬೇರೆ ವಿಧಿಯುಂಟೇ? ವಜ್ರದ ಹರಳುಗಳನ್ನು ಸಮುದ್ರದ ಮರಳಿನಲ್ಲಿ ಬೆರೆಸುವವನ ಮೂರ್ಖತೆಗೆ ಎಣೆಯುಂಟೇ?

ದೇಶೀ ಗೋವಿನ ಸಗಣಿಯನ್ನು ಸುಪ್ರೀಂ ಕೋರ್ಟ್ ಕೊಹಿನೂರ್ ವಜ್ರಕ್ಕೆ ಹೋಲಿಸಿದೆ. (Article Link)
ಸಗಣಿಯೇ ವಜ್ರವೆಂದ ಮೇಲೆ ಇನ್ನು ಹಾಲಿಗೆ ಯಾವುದು ಹೋಲಿಕೆ? ವಜ್ರವನ್ನು ತೇಯ್ದು ಸೇವಿಸಿದರೆ ಸಾವು ನಿಶ್ಚಿತವೆನ್ನುವರು; ಆದರೆ ದೇಶೀ ಗೋವಿನ ಹಾಲನ್ನು ಸೇವಿಸಿದವನ ಬದುಕು ಅಮೃತ! ವಜ್ರಕ್ಕಿಂತ ಮಿಗಿಲಾದ ಹಾಲನ್ನು ವಿಷದ ಜೊತೆಗೆ ಬೆರೆಸುವುದೇ? ರೋಗನಿವಾರಕವಾದ ಕ್ಷೀರವನ್ನು ರೋಗಕಾರಕವಾದ ಬಿಳಿ ನೀರಿನ ಜೊತೆ ಸೇರಿಸುವುದೇ? ‘ಅಮೃತ-ವಿಷಗಳಿಗೆ ಒಂದೇ ಪಾತ್ರ’ ಎಂಬುದನ್ನು ಪ್ರಮಾದವೆನ್ನದೆ ಪ್ರಮೋದವೆನ್ನಲು ಸಾಧ್ಯವೇ?

ಕಳೆದೆರಡು ಸಂಚಿಕೆಗಳಲ್ಲಿ ಹಾಲಿನ ವಿಷಯದಲ್ಲಿ ನಾವೆಸಗುತ್ತಿರುವ ಎಂಟು ಪ್ರಮಾದಗಳನ್ನು ನಿರೂಪಣೆ ಮಾಡಿದ ಬಳಿಕ ಇದೀಗ ಮುಂದುವರಿದ ಪ್ರಮಾದಗಳ ನಿರೂಪಣೆಯನ್ನು ಮುಂದುವರಿಸೋಣವೇ?

#ಪ್ರಮಾದ~9: ದೇಶೀ ಗೋವಿನ ಹಾಲನ್ನು ಬೇರೆ ಪ್ರಾಣಿಗಳ ಹಾಲಿನ ಜೊತೆ ಬೆರೆಸುವುದು.

ಹಾಲಾದರಾಯಿತು; ಯಾವ ಪ್ರಾಣಿಯದಾದರೇನು? ಎಂಬುದು ಡೈರಿಗಳ ತತ್ತ್ವ.‌ ಭಾರತೀಯ ಗೋವುಗಳ ಹಾಲನ್ನು ವಿದೇಶೀ ತಳಿಯ ಹಸುಗಳ, ಎಮ್ಮೆಗಳ ಹಾಲಿನ ಜೊತೆಗೆ ಬೆರೆಸಿ ವಿತರಿಸುವುದು ಅಲ್ಲಿ ನಿತ್ಯಚರ್ಯೆ!

ಪರಿಣಾಮ:

ಹೆಚ್ಚು ಬೆಲೆ ಬಾಳುವ ಹಾಲನ್ನು ಇತರ ಹಾಲಿನ ಜೊತೆ ಬೆರೆಸುವುದು ಆರ್ಥಿಕವಾಗಿ ನಷ್ಟ; ರೋಗನಿವಾರಕವಾದ, ಆರೋಗ್ಯದಾಯಕವಾದ ಕ್ಷೀರವನ್ನು ರೋಗಕಾರಕವಾದ ಕ್ಷೀರದ ಜೊತೆ ಸೇರಿಸುವುದರಿಂದ ಆರೋಗ್ಯದ ನಷ್ಟ; ಬೇರೆ ಬೇರೆ ಗುಣಧರ್ಮದ ಹಾಲುಗಳ ಸಂಯೋಜನೆಯಿಂದ ಸಂಭವಿಸಿದ ದ್ರವದ ಪರಿಣಾಮವನ್ನು ನಾವರಿಯೆವು.

 • ಭಾರತೀಯ ಸಂಶೋಧಕರು ಕಂಡುಕೊಂಡಂತೆ ಸಂಕರ ತಳಿಯ ಹಾಲು – ನರಮಂಡಲದ ಮೇಲೆ, ರೋಗನಿರೋಧಕ ಶಕ್ತಿಯ ಮೇಲೆ ಮತ್ತು ದೇಹದ ಆರೋಗ್ಯ~ಸಮತೋಲನಗಳನ್ನು ಕಾಪಾಡುವ ಹಾರ್ಮೋನುಗಳನ್ನು ಸ್ರವಿಸುವ Endocrine ಗ್ರಂಥಿಗಳ ಮೇಲೆ ಅಪಾರ ವಿಪರಿಣಾಮವನ್ನುಂಟುಮಾಡುವುದು.
 • ರಷ್ಯಾದ ಸಂಶೋಧಕರಿಗೆ A1 ಹಾಲು ಕುಡಿಯುವ ಮಕ್ಕಳ ಮೂತ್ರದಲ್ಲಿ ಗಂಡಾಂತರಕಾರಿಯಾದ BCM7 ಕಂಡುಬಂದಿದೆ.
 • ತಾಯಿಯ ಸ್ತನ್ಯವೆಂದರೆ ಅದು ಅಮೃತ; ಆದರೆ ಪೋಲಂಡ್’ನ ಸಂಶೋಧಕರ ಪ್ರಕಾರ, A1 ಹಾಲು ಕುಡಿಯುವ ತಾಯಿ ತನ್ನ ಮಗುವಿಗೆ ಸ್ತನ್ಯದ ಮೂಲಕವೇ BCM7 ರವಾನಿಸುತ್ತಾಳೆ!
 • ಇತ್ತೀಚಿನ ಸಂಶೋಧನೆಗಳ ಪ್ರಕಾರ ಮಕ್ಕಳಲ್ಲಿ Type-1 Diabetes, Autism, ಅಜೀರ್ಣ, ಸದ್ಯೋಮರಣಗಳು (Sudden Infant Death Syndrome) A1 ಕ್ಷೀರಪಾನದ ಫಲಶ್ರುತಿಗಳು.
 • BCM7 ಕ್ಯಾನ್ಸರ್ ಗೆ ದಾರಿ ಎಂದು ಕೆಲವು ಸಂಶೋಧಕರ ಅಭಿಪ್ರಾಯ.

A2 ಅಥವಾ ಭಾರತೀಯ ತಳಿಗಳ ಹಾಲಿನಲ್ಲಿ BCM7 ಇಲ್ಲದ ಕಾರಣ ಈ ಯಾವ ದುಷ್ಪರಿಣಾಮಗಳೂ ಇಲ್ಲ; ಬದಲಿಗೆ ನಾನಾ ಪ್ರಕಾರದ ಶುಭಪರಿಣಾಮಗಳೇ ಇವೆ. ಆದುದರಿಂದಲೇ ದೇಶೀ ಗೋಕ್ಷೀರವು ಅನ್ಯ ಕ್ಷೀರಕ್ಕಿಂತ ಹೆಚ್ಚು ಬೆಲೆಬಾಳುವುದು, ಅಲ್ಲಲ್ಲ – ಬೆಲೆಕಟ್ಟಲಾರದುದು. ಅದನ್ನು A1 ಹಾಲಿನೊಂದಿಗೆ ಬೆರೆಸುವುದೆಂದರೆ ದೇಶಕ್ಕೆ ನಷ್ಟ; ದೇಹಕ್ಕೆ ಕಷ್ಟ! A1 ಹಾಲು ತರುವ ಅನಾಹುತಗಳಿಂದಾಗಿ “ಮಕ್ಕಳಿಗೆ ಹಾಲನ್ನೇ ನೀಡಬೇಡಿ” ಎಂದು ಅಮೆರಿಕಾದ ವೈದ್ಯರು ಸಲಹೆ ನೀಡುವ ಸ್ಥಿತಿಯಿದೆ!
ನಮ್ಮ ಸಲಹೆ:
ಲಭ್ಯವಿರುವಷ್ಟು ದೇಶೀ ಗೋಕ್ಷೀರವನ್ನಾದರೂ ಪ್ರತ್ಯೇಕವಾಗಿ ಉಳಿಸಿ, ಕೊನೆಯ ಪಕ್ಷ ಮಕ್ಕಳಿಗಾದರೂ ನೀಡೋಣ! ಮುಂದಿನ ಪೀಳಿಗೆಯಾದರೂ ಏಳಿಗೆಯನ್ನು ಕಾಣಲಿ!

ಬೆರಕೆಯ ಫಲವರಿಯೆವು: ‘ಋಷಿರೇವ ವಿಜಾನಾತಿ ದ್ರವ್ಯಸಂಯೋಗಜಂ ಫಲಮ್.’ ಅನ್ಯಾನ್ಯ ದ್ರವ್ಯಗಳನ್ನು ಬೆರೆಸಿ, ಬಳಸಿದಾಗ ಆಗುವ ಪರಿಣಾಮಗಳನ್ನು ಋಷಿ ಮಾತ್ರವೇ ಬಲ್ಲ!  ಋಷಿಗಳೂ ಈಗ ಇಲ್ಲದೆ ಇರುವುದರಿಂದ ಸರ್ವಪ್ರಾಣಿಕ್ಷೀರದ ಕಲಬೆರಕೆಯನ್ನು ಕುಡಿದರೆ ಏನಾದೀತು ಎಂಬುದನ್ನು  ದೇವರೇ ಬಲ್ಲ ಎಂದರೇ ಹೆಚ್ಚು ಸೂಕ್ತವಾದೀತು!

BCM 7 – ಕುರಿತು ಮಾಹಿತಿಗಳ ಪ್ರಸ್ತುತಿ @Prastuti, SriRamachandrapuraMatha

#ಪ್ರಮಾದ~10: ಎಂದಿನ ಹಾಲು ಎಂದೋ, ಎಲ್ಲಿಯ ಹಾಲು ಎಲ್ಲೋ ಬಳಸುವುದು.

ಪರಿಣಾಮ:ಹಾಲು ಜೀರ್ಣಕ್ಕೆ ಭಾರವಾಗುವುದು. ಹಾಲನ್ನು ಕೆಡಿಸದೇ ಉಳಿಸಲೆಂದು, ನಮ್ಮನ್ನೇ ಕೆಡಿಸುವ preservatives ಮತ್ತು plastic ನ ಪ್ರವೇಶ.

ಅಂದಂದಿನದನ್ನು ಅಂದೇ, ಅಲ್ಲಲ್ಲಿಯದನ್ನು ಅಲ್ಲೇ ಸೇವಿಸಬೇಕಾದ ಆಹಾರದ್ರವ ಹಾಲು. ಎಷ್ಟು ತಾಜಾ ಸೇವಿಸಿದರೆ ಅದು ಅಷ್ಟು ಒಳ್ಳೆಯದು. ಆಯುರ್ವೇದವಂತೂ ‘ಕರೆಯುವಾಗಲೇ- ಕರೆದ ಕೂಡಲೇ- ಬಿಸಿಯಾರುವ ಮೊದಲೇ ಸೇವಿಸುವುದು ಹಿತ!’ ಎಂದು ಸಾರುತ್ತದೆ. ಸಮಯ ಕಳೆದಂತೆ ಅದು ‘ಗುರು’ ಅಥವಾ ಜೀರ್ಣಕ್ಕೆ ಕಠಿಣವಾಗುತ್ತಾ ಸಾಗುತ್ತದೆ. ಅದೆಷ್ಟೋ ರೋಗಗಳ ಮೂಲವಿರುವುದು ಜೀರ್ಣವಾಗದೇ ಉಳಿದ ಆಹಾರದಲ್ಲಿಯೇ. ಎಂದಿನ ಹಾಲನ್ನು ಇಟ್ಟು, ಎಂದೋ ಸೇವಿಸುವುದು, ಎಲ್ಲಿಯ ಹಾಲನ್ನು ಒಯ್ದು, ಎಲ್ಲಿಯೋ ಸೇವಿಸುವುದು ಉದ್ಯಮಕ್ಕೆ ಅನುಕೂಲ; ಆರೋಗ್ಯಕ್ಕೆ ಅನಾಹುತ! ಈ ಕಲ್ಪನೆಯನ್ನೇ ಕೈಬಿಡುವುದು ದೇಶದ 130 ಕೋಟಿ ಶರೀರಗಳಿಗೆ ಹಿತ!

ಪೂರ್ವ ಭಾರತದಂತೆ ಗೋವು ಮತ್ತು ಹಾಲು ಎಲ್ಲೆಡೆ ಲಭ್ಯವಿರುವಂತಿದ್ದಿದ್ದರೆ Plastic~ಭೂತ ಮತ್ತು Preservatives~ಪ್ರೇತಗಳ ಪ್ರವೇಶಕ್ಕೆ ಎಡೆಯೇ ಇರುತ್ತಿರಲಿಲ್ಲ!

#ಪ್ರಮಾದ~11: ಗ್ರಾಹಕನ ಕೈಸೇರುವವರೆಗೆ ಕೆಡದಂತೆ ಹಾಲಿನಲ್ಲಿ ವಿಷಕಾರಿಗಳಾದ Preservatives ಬೆರೆಸುವುದು.

ಪರಿಣಾಮ: ವಿಷದ ಪರಿಣಾಮಗಳೆಲ್ಲವೂ!

ದೊಡ್ಡ ಡೈರಿಗಳಿಂದ ಪಾಶ್ಚರೀಕರಣಗೊಂಡ ಹಾಲು ಪೂರೈಕೆಗೊಳ್ಳುವಂತೆಯೇ, ಬಹುದೊಡ್ಡ ಪ್ರಮಾಣದಲ್ಲಿ ಸಣ್ಣ ಡೈರಿಗಳಿಂದಲೂ ಪೂರೈಕೆಗೊಳ್ಳುತ್ತದೆ; ಆದರೆ ಪಾಶ್ಚರೀಕರಣವನ್ನು ಹೊರತುಪಡಿಸಿ. ಸದ್ಯ, ಇಲ್ಲಿಯಾದರೂ ಪಾಶ್ಚರೀಕರಣದ ವಿಪರಿಣಾಮಗಳಿಲ್ಲವಲ್ಲವೆಂದು ಸಂತೋಷ ಪಡುವಂತಿಲ್ಲ! ಏಕೆಂದರೆ, ಪಾಶ್ಚರೀಕರಣದ ಬದಲು ಸಣ್ಣ ಡೈರಿಗಳಲ್ಲಿ ಭಯಾನಕ ವಿಷದ ರೂಪದಲ್ಲಿರುವ preservatives ಬಳಕೆಯಾಗುತ್ತವೆ‌.

ಹಾಲು ಕೆಡಲು ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಬಳಸಲ್ಪಡುವ ವಿಷಗಳು ಮನುಷ್ಯನನ್ನೂ ಕೊಂದೇ ಬಿಡುತ್ತವೆ ಅಥವಾ ಜೀವಂತ ಕೊಲ್ಲುತ್ತವೆ!

ಹಾಲು ಬಾಳುವಂತೆ ಮಾಡಲು ಮನುಷ್ಯನನ್ನೇ ಕೊಲ್ಲುವುದೇ!?

ಪ್ರಿಸರ್ವೇಟಿವ್ ಗಳ ದುಷ್ಪರಿಣಾಮಗಳ ಬಗ್ಗೆ ಪ್ರಸ್ತುತಿ @Prastuti, Sri RamachandrapuraMatha

#ಪ್ರಮಾದ~12: ಹಾಲನ್ನು ಶೇಖರಿಸಲುಕೃತಕ ಪರಿಮಳದ ಪ್ಲಾಸ್ಟಿಕ್ ಕವರ್ ಬಳಸುವುದು.

ಪರಿಣಾಮಪ್ಲಾಸ್ಟಿಕ್ ಎಂಬ ವಿಷಮಾರಿಯ ಸಂಸರ್ಗದಿಂದ ಬರಬಹುದಾದ ಎಲ್ಲ ದೋಷಗಳು. ಪ್ಲಾಸ್ಟಿಕ್ ಕವರಿನ ಸಹಿತವಾಗಿಯೇ ಬಿಸಿನೀರಿನಲ್ಲಿರಿಸಿ, ಹಾಲನ್ನು ಬಿಸಿ ಮಾಡಿದಾಗ ಬಿಡುಗಡೆಯಾಗುವ ಭಯಂಕರ ವಿಷಗಳು!

‘ಗೋವಿನ ಹಾಲೇ ಆದರೂ ನಾಯಿಯ ತೊಗಲಿನಲ್ಲಿದ್ದರೆ ಅದನ್ನು ಸೇವಿಸಕೂಡದು’ ಎಂಬುದೊಂದು ಆರ್ಯೋಕ್ತಿ. ಪ್ಲಾಸ್ಟಿಕ್ ನಾಯಿಯ ತೊಗಲಿಗಿಂತ ಹೀನವಾದುದು! ನಾಯಿಯ ತೊಗಲಿನಲ್ಲಿಯಾದರೂ ಕೆಲವು ಗುಣಗಳಿರಬಹುದು; ಪ್ಲಾಸ್ಟಿಕ್‌ನಲ್ಲಿ ಗುಣಗಳೇ ಇಲ್ಲ, ದೋಷಗಳೇ ಎಲ್ಲ!

ಅಮೃತವನ್ನು ವಿಷದ ಬಟ್ಟಲಲ್ಲಿಟ್ಟು ಕುಡಿಯುವುದೇ!? ಪ್ಲಾಸ್ಟಿಕ್ ವಿಷವೆಂಬುದು ವಿಶ್ವಮಾನ್ಯವಾದ ವಿಷಯ. ‘ಸಂಸರ್ಗಜಾ ದೋಷ-ಗುಣಾ ಭವಂತಿ’ ಸಂಸರ್ಗವು ಏರ್ಪಡುತ್ತಿದ್ದಂತೆಯೇ ಒಂದು ವಸ್ತುವಿನಿಂದ ಮತ್ತೊಂದು ವಸ್ತುವಿಗೆ ಗುಣ-ದೋಷಗಳು ಸಂಕ್ರಾಂತಗೊಳ್ಳುವವು ಎಂಬುದು ಬಲ್ಲವರ ಮಾತು. ಹಾಗಿರುವಾಗ ದೀರ್ಘಕಾಲ ಹಾಲಿನ ಸರ್ವಾಂಶವೂ ಪ್ಲಾಸ್ಟಿಕ್‌ನ ಸಂಸರ್ಗಕ್ಕೊಳಪಡುವಂತೆ ಇರಿಸಿದರೆ, ಪ್ಲಾಸ್ಟಿಕ್‌ನ ಪ್ರಭಾವವು ಹಾಲಿನ ಮೇಲೆ ಆಗದೆ ಇರದು! ಅದು ಶುಭವಾಗಿರಲಂತೂ ಸಾಧ್ಯವೇ ಇಲ್ಲ!

ನಿಜವಾದ ಸಮಸ್ಯೆ ಮುಂದಿದೆ: ಹೋಟೇಲುಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಅಡುಗೆಯವರು ಹಾಲನ್ನು ಪ್ಲಾಸ್ಟಿಕ್ ಕವರ್ ಸಹಿತವಾಗಿ ಕುದಿನೀರಿನಲ್ಲಿ ಇರಿಸಿ, ಕಾಯಿಸುತ್ತಾರೆ. ಬಿಸಿಯಾಗುತ್ತಿದ್ದಂತೆಯೇ ಪ್ಲಾಸ್ಟಿಕ್ ತನ್ನೊಳಗಿನ ವಿಷವೆಲ್ಲವನ್ನೂ ಹಾಲಿನಲ್ಲಿ ಕಕ್ಕುತ್ತದೆ; ಆ ಹಾಲನ್ನು ಸೇವಿಸುವುದೆಂದರೆ ಅದು ವಿಷವನ್ನು ಸೇವಿಸಿದಂತೆಯೇ ಸರಿ! ಇವಿಷ್ಟೂ ಸಾಲದೆಂಬಂತೆ ಬಿಸಿ ಬಿಸಿ ಹಾಲನ್ನು ಪ್ಲಾಸ್ಟಿಕ್ ಕಪ್‌ಗಳಲ್ಲಿ ಸುರಿದು ತಾವೂ ಸೇವಿಸುವುದು, ಚಿಕ್ಕ ಚಿಕ್ಕ ಮಕ್ಕಳಿಗೂ ಕುಡಿಸುವುದು ಬೇರೆ! ಸುಡುಸತ್ಯವನ್ನೇ ಹೇಳಬೇಕೆಂದರೆ ಕಾದ ಪ್ಲಾಸ್ಟಿಕ್‌ನ ಒಳಗಿರುವ ಹಾಲು ಆಲ್ಕೋಹಾಲಿಗಿಂತಲೂ ಅಪಾಯಕಾರಿ!

ಇಲ್ಲಿ ಬರುವ ಪ್ರಶ್ನೆ ‘ಹಾಗಿದ್ದರೆ ಪ್ಲಾಸ್ಟಿಕ್‌ಗೆ ಪರ್ಯಾಯವೇನು?’

ಅಂದಂದಿನ ಹಾಲನ್ನು ಅಂದಂದೇ ಬಳಸುವುದು; ಅಲ್ಲಲ್ಲಿಯ ಹಾಲನ್ನು ಅಲ್ಲಲ್ಲಿಯೇ ಬಳಸುವುದು. ಇದು ಸಾಧ್ಯವಾಗಬೇಕೆಂದರೆ ದೇಶೀ ಗೋವು\ಹಾಲು ಎಲ್ಲೆಡೆ ಲಭ್ಯವಾಗಬೇಕು. ಹಾಲು ಬೇಕೆಂದಮೇಲೆ ಗೋವೂ ಬೇಕು. ಊರಿನೊಳಗೆ\ನಗರದೊಳಗೆ ಗೋವುಗಳನ್ನು ಸಾಕಲು ವ್ಯವಸ್ಥೆಗಳು ಕಲ್ಪಿತವಾಗಬೇಕು. ನಗರಗಳೊಳಗೆ ಗಾಲ್ಫ್‌ ಕ್ಲಬ್‌ಗಳಿಗೆ ಸ್ಥಳವಿದೆ, ಗೋವುಗಳಿಗಿಲ್ಲ ಎಂಬುದು ಆಧುನಿಕಮೂರ್ಖತೆಯ ಮೇರುವಲ್ಲದೆ ಮತ್ತೇನು!?

ಪ್ಲಾಸ್ಟಿಕ್ ಕವರ್ ದುಷ್ಪರಿಣಾಮಗಳ ಬಗ್ಗೆ ಪ್ರಸ್ತುತಿ @Prastuti, Sri RamachandrapuraMatha

#ಪ್ರಮಾದ~13: ಹಾಲಿನಲ್ಲಿ, ಡಿಟರ್ಜೆಂಟ್, ರಾಸಾಯನಿಕ ಬಿಳಿ ಬಣ್ಣ, ಯೂರಿಯಾ, ರಿಫೈನ್ಡ್ ಎಣ್ಣೆ, ಕಾಸ್ಟಿಕ್ ಸೋಡಾಗಳ ಕಲಬೆರಕೆ.
ಪರಿಣಾಮ: ಕಲ್ಪನೆಗೂ ಮೀರಿದ್ದು! ಕ್ಯಾನ್ಸರ್ ಸೇರಿದಂತೆ ಯಾವುದೇ ರೋಗವು ಬರಬಹುದು; ದೇಹದ ವ್ಯವಸ್ಥೆಯಲ್ಲಿ ಎಣಿಕೆಗೆ ಮೀರಿದ ಏರುಪೇರುಗಳು ಉಂಟಾಗಬಹುದು.

ಹಾಲಲ್ಲದುದನ್ನು ಹಾಲಿನಲ್ಲಿ ಸೇರಿಸಿ ಮಾರುವುದರಿಂದ ಪ್ರಾರಂಭಿಸಿ, ಹಾಲೇ ಇಲ್ಲದ – ಅಕ್ಷರಶಃ ಒಂದು ಹನಿ ಹಾಲೂ ಇಲ್ಲದ – ಬಿಳಿ ಬಣ್ಣದ, ಕೃತಕ ರುಚಿಯ, ಕೃತಕ ಪರಿಮಳದ ರಾಸಾಯನಿಕ ದ್ರವವನ್ನು ಮಾರುವವರೆಗೆ ದೇಶ ಕೆಟ್ಟಿದೆ! ಹಣಕ್ಕಾಗಿ ಕೊಲೆಗೈಯ್ಯುವವರಿಗೂ, ಮುಗ್ಧರ ಅಂಗಾಂಗಳನ್ನು ಮಾರುವವರಿಗೂ ಇವರಿಗೂ ಯಾವ ವ್ಯತ್ಯಾಸವಿದೆ!? ಮನಸ್ಸೂ ಅದೇ; ಪರಿಣಾಮವೂ ಅದೇ!

ನೆರೆಯ ಚೀನಾದಲ್ಲಿ, ಮಕ್ಕಳು ಸೇವಿಸುವ ಹಾಲಿನ ಪುಡಿಯಲ್ಲಿ ಕಲಬೆರಕೆ ಮಾಡುವವರನ್ನು ಗಲ್ಲಿಗೇರಿಸುವ ಕಾನೂನಿದೆ! ನಮಗದು ತಪ್ಪೆನಿಸುತ್ತಿಲ್ಲ; ಹಣಕ್ಕಾಗಿ ಹಾಲಿನಲ್ಲಿ ವಿಷ ಬೆರೆಸುವವರಿಗೆ ಬದುಕುವ ಹಕ್ಕಿಲ್ಲ!

~

ಇದು ಕ್ಷೀರಪ್ರಮಾದ ಕಾಂಡ! ಇನ್ನು ಪರಿಹಾರ ಪರ್ವಕ್ಕೆ ಸಾಗೋಣವೇ?

ಹಾಲು-ಹಾಲಾಹಲವೆಂಬ ದೇಶ ಕಂಡ ಅಥವಾ ಇನ್ನೂ ಕಣ್ತೆರೆದು ನೋಡದ ಗಂಭೀರ ಗಂಡಾಂತರಕ್ಕೆ ಪರಿಹಾರವೆರಡು: ಒಂದು ಸರಕಾರ, ಇನ್ನೊಂದು ನಾವೇ! ಕಾನೂನು ತರುವುದರ ಮೂಲಕ ಸರಕಾರ, ಅಸಹಕಾರ ಚಳುವಳಿಯ ಮೂಲಕ ಸಮಾಜ – ದೇಶವೇ ಅನುಭವಿಸುತ್ತಿರುವ ವಿಷಬಾಧೆಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯವಿದೆ.

ವರ್ತಮಾನ ಭಾರತದ ಆಶಾಕಿರಣವೆನಿಸಿದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರೇ, ರಾಷ್ಟ್ರದ ಚುಕ್ಕಾಣಿ ತಮ್ಮ ಕೈಯಲ್ಲಿರುವಾಗ ಶತಕೋಟಿ ಮೀರಿದ ಮುಗ್ಧ ಭಾರತೀಯರು ನಿತ್ಯ ಹಾಲಿನ ಹೆಸರಿನಲ್ಲಿ ವಿಷ ಕುಡಿಯುತ್ತಿರುವುದು ತಮಗೆ ಏನೇನೂ ಶೋಭೆ ತರದು! ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಬಳಿಕ ರಾಷ್ಟ್ರ ಕಂಡ ಅತ್ಯಂತ ಪ್ರಬಲ ಮತ್ತು ಪ್ರಾಮಾಣಿಕ ನಾಯಕನೆಂಬ ಖ್ಯಾತಿಗೆ ತಾವು ಒಳಗಾಗಿದ್ದೀರಿ. ನೋಟ್-ಬ್ಯಾನ್ (Demonetization) ಮತ್ತು ಏಕರೂಪ ತೆರಿಗೆ (GST)ಗಳ ಮೂಲಕ ರಾಷ್ಟ್ರದ ಹಿತದಲ್ಲಿ ‘ತಾನು ಎಂಥಾ ಕಠೋರ ನಿರ್ಧಾರವನ್ನೂ ಕೈಗೊಳ್ಳಬಲ್ಲೆ ಮತ್ತು ಕೈಗೊಂಡು ಜೀರ್ಣಿಸಿಕೊಳ್ಳಬಲ್ಲೆ!’ ಎಂದು ಸಾಬೀತುಪಡಿಸಿದ್ದೀರಿ! ದೇಶದೊಳಗಿನ ಒಳಿತಿಗಾಗಿ ಹಣದ ಶುದ್ಧೀಕರಣಕ್ಕೆ ತಾವು ಮುಂದಾದಂತೆಯೇ, ದೇಹದೊಳಗಿನ ಒಳಿತಿಗಾಗಿ ಹಾಲಿನ ಶುದ್ಧೀಕರಣಕ್ಕೆ ತಾವು ಮುಂದಾಗಬೇಕಾದ ಸಮಯ ಬಂದಿದೆ. ಹಣವನ್ನು ಅಮಾನ್ಯೀಕರಣಗೊಳಿಸಿದಂತೆಯೇ, ವಿಷದ ಹಾಲನ್ನೂ ಅಮಾನ್ಯೀಕರಣಗೊಳಿಸಿ, ಸ್ವಚ್ಛಭಾರತದ ಜೊತೆಯಲ್ಲಿ ಸ್ವಸ್ಥಭಾರತವನ್ನೂ ನಿರ್ಮಿಸಿ. 

ಹಾಲು ಹಾಳಾಗಿದೆ- ಹಾಲಾಹಲವಾಗಿದೆ ಎನ್ನುವುದು ಕೇವಲ ಕಲ್ಪನೆಯಲ್ಲ; ಕಟ್ಟುಕಥೆಯೂ ಅಲ್ಲ; ತಮ್ಮದೇ ಸರಕಾರದ ಆರೋಗ್ಯ ಮಂತ್ರಿಗಳು ‘ದೇಶದಲ್ಲಿ ಮಾರಾಟವಾಗುತ್ತಿರುವ ಹಾಲಿನಲ್ಲಿ 68%ದಷ್ಟು ಸೇವಿಸಲು ಯೋಗ್ಯವಲ್ಲ!’ ಎಂದು ಸಂಸತ್ತಿನಲ್ಲಿಯೇ ಹೇಳಿದ್ದಾರೆ! ಭಾರತಸರಕಾರದಿಂದಲೇ ನಿಯೋಜಿತವಾದ ಆಹಾರ-ಸುರಕ್ಷೆ-ಅರ್ಹತೆ ಪ್ರಾಧಿಕಾರವು (Food Safety and Standards Authority of India – FSSAI), ತಾನು ನಿಗದಿ ಪಡಿಸಿದ ಮಾನದಂಡಗಳಿಗೆ ದೇಶದಲ್ಲಿ ಮಾರಾಟವಾಗುವ ಬಹ್ವಂಶ ಕ್ಷೀರವು ಅನುಗುಣವಾಗಿಲ್ಲ ಎಂದು 2011ರಲ್ಲಿಯೇ ಹೇಳಿದೆ. ಹಾಗೆಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಅಫಿಡೆವಿಟ್ ಕೂಡಾ ಸಲ್ಲಿಸಿದೆ! ಇದು ನಮ್ಮ ಮಾತಲ್ಲ, ತಮ್ಮದೇ ಮಾತು!

ಆಹಾರದ ಕುರಿತಾದ ರಾಷ್ಟ್ರದ ಅತ್ಯುಚ್ಚ ಮಟ್ಟದ ಕಾರ್ಯಾಂಗವು (FSSAI) ಸಲ್ಲಿಸಿದ ವರದಿಯನ್ನು ಆಧರಿಸಿ, ರಾಷ್ಟ್ರದ ಪರಮೋಚ್ಚ ಶಾಸಕಾಂಗವಾದ ಕೇಂದ್ರ ಸರಕಾರವು, ರಾಷ್ಟ್ರದ ನ್ಯಾಯಾಂಗವ್ಯವಸ್ಥೆಯ ತುಟ್ಟ ತುದಿ ಎನಿಸಿದ ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಮಾಣಪತ್ರದ ರೂಪದಲ್ಲಿ ಸಲ್ಲಿಸಿರುವ ಸತ್ಯವಿದು!

ಇನ್ನು ಇದರಲ್ಲಿ ಸಂಶಯವಿಲ್ಲ; ಇನ್ನು ವಿಳಂಬವೂ ಸಲ್ಲ! ಪ್ರಜಾಕೋಟಿಯ ಪ್ರತಿನಿಧಿಗಳಾದ ಪ್ರಧಾನಮಂತ್ರಿಗಳೇ, ಸಮಸ್ತ ಭಾರತೀಯರ ಹಿತದಲ್ಲಿ ಕ್ಷಿಪ್ರ-ದೃಢನಿರ್ಧಾರವೊಂದನ್ನು ಕೈಗೊಳ್ಳಿ; ಹಾಲಿನ ರೂಪದಲ್ಲಿ ಬಂದು ಜನರ ಜೀವ-ಜೀವನಗಳ ಜೊತೆ ಚೆಲ್ಲಾಟವಾಡುತ್ತಿರುವ ಹಾಲಾಹಲವನ್ನು ನಿಷೇಧಿಸಿ! ‘ವಿಷವೂಡುವವನು ಆತತಾಯಿ; ಅಂಥವನನ್ನು ಕೊಂದರೆ ಪಾಪವಿಲ್ಲ!’ ಎಂಬ ಧರ್ಮನಿಯಮವನ್ನು ಕಾನೂನಾಗಿ ಪರಿವರ್ತಿಸಿ; ಹಾಲಿನ ಹೆಸರಲ್ಲಿ ಸಾವನ್ನು ಹಂಚುವವರನ್ನು ಉಕ್ಕಿನ ಹಸ್ತಗಳಿಂದ ದಂಡಿಸಿ!

ತಮ್ಮ ಒಂದು ನಿರ್ಧಾರವು ಶತಕೋಟಿ ಭಾರತೀಯರಿಗೆ ಸಂಜೀವಿನಿಯಾಗಬಲ್ಲುದು; ವಿಷಮುಕ್ತಿ ನೀಡಬಲ್ಲುದು; ಅಮೃತದ ಮಹಾದ್ವಾರವಾಗಬಲ್ಲುದು; ಸಹಜವಲ್ಲದ ರೋಗಗಳು ಮತ್ತು ಸಕಾಲಿಕವಲ್ಲದ ಸಾವುಗಳನ್ನು ತಪ್ಪಿಸಬಲ್ಲುದು, ಸ್ವಸ್ಥ ಬದುಕನ್ನು ನೀಡಬಲ್ಲುದು! ಈ ನಿಟ್ಟಿನಲ್ಲಿ ಮೂಡಿ ಬರುವ ತಮ್ಮ ಹಸ್ತಾಕ್ಷರವು ಪ್ರಜೆಗಳ ಪಾಲಿಗೆ ಅಮೃತಾಕ್ಷರವೆನಿಸಿ, ಭಾರತದ ಚರಿತ್ರೆಯ ಸ್ವರ್ಣಿಮ ಪುಟದಲ್ಲಿ ತಮ್ಮ ಹೆಸರನ್ನು ವಜ್ರಾಕ್ಷರಗಳಲ್ಲಿ ಮೂಡಿಸುವುದರಲ್ಲಿ ಸಂಶಯವೇ ಇಲ್ಲ.

ಪ್ರಧಾನಮಂತ್ರಿಯ ಪದವಿಯಿಂದ ಪದೋನ್ನತಿಯನ್ನು ಪಡೆದು, ಹಾಲಾಹಲವುಂಡು ಹಾಳಾಗುವ ಶತಕೋಟಿ ಕಂದಗಳ ಬದುಕಿನಲ್ಲಿ ತಾಯಿಯಾಗಿ ಬನ್ನಿ!

ಕೊನೆ ಮಾತು, ಹಾಲೆಂದು ಹಾಳು ಕುಡಿಯುತ್ತಿರುವ ಭಾರತೀಯರೆಲ್ಲರಿಗೆ: ಇರುವ ಹಳೆಯ ಹಾಳುಮನೆಯನ್ನು ಕೆಡವದೆ ಅದೇ ಸ್ಥಳದಲ್ಲಿ ಹೊಸ ಮನೆಯನ್ನು ಕಟ್ಟಲಾಗದು! ಅಂತೆಯೇ ಇಂದು ನಮ್ಮ ಬದುಕಿನಲ್ಲಿ ಹರಿಯುತ್ತಿರುವ ಹಾಲಾಹಲವನ್ನು ತಿರಸ್ಕರಿಸದಿದ್ದರೆ ನಿಜವಾದ ಹಾಲಿನ ಶುಭಾಗಮನವಾಗದು! ಬನ್ನಿ, ನಿಜವಾದ ಕ್ಷೀರಕ್ಕಾಗಿ ನಿಜವಾದ ಕ್ರಾಂತಿ ಮಾಡೋಣ; ನಿಜವಾದ ಹಾಲು ಸಿಗುವವರೆಗೆ ನೀರು ಕುಡಿಯುವ ಕ್ಷೀರಸತ್ಯಾಗ್ರಹ ಮಾಡೋಣ‌. ನಮ್ಮೂರಿನ ಬಸ್ ಬರಲಿಲ್ಲವೆಂದು ಯಾವುದೋ ಊರಿಗೆ ಹೋಗುವ ಬಸ್ ಹತ್ತಲು ಸಾಧ್ಯವೇ!? ಕುಡಿದರೆ ನಿಜವಾದ ಹಾಲು ಕುಡಿಯೋಣ; ಇಲ್ಲವಾದರೆ ಹಾಗೆಯೇ ಇರೋಣ; ನಮ್ಮ ಆರೋಗ್ಯಕ್ಕಾಗಿ, ಮಕ್ಕಳ ಭವಿಷ್ಯಕ್ಕಾಗಿ ನಾವೀ ದೃಢನಿರ್ಧಾರವನ್ನು ಕೈಗೊಂಡರೆ ನಾಳೆಯೇ, ನಾವಿದ್ದಲ್ಲಿಯೇ ಬದಲಾವಣೆ ಪ್ರಾರಂಭವಾಗುವುದು!

‘ಹಾಳು’ ನಮ್ಮ ಬದುಕನ್ನೇ ಹರಿಯುವ ಕೃತಕಯುಗ ನಿಂತು, ಹಾಲು ನಮ್ಮ ದೇಹದಲ್ಲಿ, ದೇಶದಲ್ಲಿ ಹರಿಯುವ ಕೃತಯುಗ ಪ್ರಾರಂಭವಾಗುವುದು!

~*~*~

ತಿಳಿವು ಸುಳಿವು:

ಈ ಕೆಳಗಿನ ಚಿತ್ರದಲ್ಲಿ ಅಂಕಿಗಳಿಂದ ಗುರುತಿಸಲ್ಪಟ್ಟ ಅನುಕ್ರಮಣಿಕೆ:

 1. ಗೋವಿನ ಹಾಲು
 2. ಬೇರೆ ಪ್ರಾಣಿಗಳ ಹಾಲಿನ ಕಲಬೆರಕೆ
 3. ಶೇಖರಣೆಗಾಗಿ ಪ್ರಿಸರ್ವೇಟಿವ್ ಗಳ ಬಳಕೆ
 4. ಪ್ಲಾಸ್ಟಿಕ್ ತೊಟ್ಟೆಗಳು
 5. ತೊಟ್ಟೆಯಲ್ಲಿ ಇರುವಾಗಲೇ ಹಾಲನ್ನು ಕಾಯಿಸುವುದು
 6. ಕೊನೆಗೆ ಸಿಗುವುದು ಹಾಲಲ್ಲ; ಹಾಳು” ವಿಷ!

 

~*~

Facebook Comments