ಕಳೆದುಕೊಳ್ಳದ ಕಂಠಹಾರವನ್ನು ಊರೆಲ್ಲ ಹುಡುಕಿ, ಎಲ್ಲಿಯೂ ಸಿಗದೆ, ಕೊನೆಗೆ ಕೊರಳು ಮುಟ್ಟಿ ನೋಡಿಕೊಂಡವನ ಸ್ಥಿತಿ ದಶರಥನದು! ಸುತಪ್ರಾಪ್ತಿಯ ಉಪಾಯವನ್ನು ವಿಶ್ವದಲ್ಲೆಲ್ಲ ಹುಡುಕಿ, ಸಿಗದೆ ತೊಳಲಾಡುತ್ತಿದ್ದಾಗ, ಕೊನೆಗೊಮ್ಮೆ ಅವನ ಹೃದಯದಲ್ಲಿಯೇ ಸ್ಫುರಿಸಿತು ಅದು! ಇಷ್ಟಪ್ರಾಪ್ತಿಗೆ ತಡೆಯಾಗಿ ನಿಂತ ಸಕಲ ಪಾಪಗಳನ್ನೂ ಪರಿಹರಿಸಬಲ್ಲ “ಅಶ್ವಮೇಧ”ವೆಂಬ ಸದುಪಾಯ.
“ಸರ್ವಂ ಪಾಪ್ಮಾನಂ ತರತಿ, ತರತಿ ಬ್ರಹ್ಮಹತ್ಯಾಂ, ಯೋsಶ್ವಮೇಧೇನ ಯಜತಿ” ~ (ಕೃಷ್ಣಯಜುರ್ವೇದ ಸಂಹಿತಾ, ಕಾಂಡ-೫, ಪ್ರಪಾಠಕ-೩)

ಬದುಕಿನಲ್ಲಿ ಇರಬೇಕಾದ ಹತ್ತಾರು ಸಂಗತಿಗಳು ಇಲ್ಲದವನನ್ನು ಯಾವುದೋ ಒಂದರ ಕೊರತೆ ಅಷ್ಟಾಗಿ ಬಾಧಿಸದು. ಆದರೆ ಎಲ್ಲವೂ ಇದ್ದು ಅತಿ ಮುಖ್ಯವಾದ ಯಾವುದೋ ಒಂದು ಇಲ್ಲದಿದ್ದರೆ ಆ ಕೊರತೆ ಕ್ಷಣ ಕ್ಷಣವೂ ಎದ್ದು ತೋರುವುದು, ಅಚ್ಚ ಬಿಳಿಯ ವಸ್ತ್ರದಲ್ಲೊಂದು ಕಪ್ಪು ಕಲೆಯ ಹಾಗೆ. ವಸಿಷ್ಠರಂಥ ಗುರುಗಳು, ಸುಮಂತ್ರನಂಥ ಮಂತ್ರಿ, ಕೌಸಲ್ಯೆಯಂಥ ರಾಣಿ, ಕೋಸಲದಂಥ ರಾಜ್ಯ, ಅಯೋಧ್ಯೆಯಂಥ ರಾಜಧಾನಿಗಳನ್ನು ಹೊಂದಿದ ದಶರಥನಿಗೆ ರಾಮನಂಥ ಸುತ ಬೇಡವೇ? ಎಲ್ಲವೂ ಇದ್ದರೂ, ಇರುವುದೆಲ್ಲವ ಬಿಟ್ಟು ಇರದ ಸುತನಿಗಾಗಿ ಬದುಕಿಡೀ ತುಡಿಯುತ್ತಿದ್ದನು ದಶರಥ! ಎಷ್ಟು ಹುಡುಕಿದರೂ, ಎಲ್ಲಿ ಹುಡುಕಿದರೂ, ಎಲ್ಲೂ-ಎಂದೂ ಸಿಗದ ಉತ್ತರವು ಇಂದವನ ಅಂತರಂಗದಲ್ಲಿಯೇ ಸಿಕ್ಕಿತ್ತು! ದೊರೆಗೆ ಅವನ ಹೃದಯವೇ ಗುರುವಾಗಿತ್ತು! ಕೌಸಲ್ಯೆಯ ಉದರದಲ್ಲಿ ಆಗಬೇಕಾದ ರಾಮಾವತಾರಕ್ಕೆ ಪೀಠಿಕೆಯಾಗಿ, ದಶರಥನ ಹೃದಯದಲ್ಲಿ ಯಾಗಾವತಾರವಾಗಿತ್ತು!

ಪ್ರೇರಣೆಯು ಸಾಧನೆಗಳ ತಾಯಿ. ಸಾಧನೆಗಳು ಪ್ರಾರಂಭವಾಗುವುದೇ ಅಲ್ಲಿಂದ! ಪ್ರೇರಣೆಗೆ ಅಸಾಧ್ಯವಾದುದು ಯಾವುದೂ ಇಲ್ಲ; ಪ್ರೇರಣೆಯಿಲ್ಲದೆ ಯಾವುದೂ ಸಾಧ್ಯವಿಲ್ಲ! ಒಂದು ಪ್ರೇರಣೆಯು ದಿವಿಯನ್ನು ಭುವಿಗಿಳಿಸೀತು; ಭುವಿಯನ್ನು ದಿವಿಗೆತ್ತೀತು; ಭುವಿಯನ್ನೇ ದಿವಿಯಾಗಿಸೀತು! ಇದುವೇ ರಾಮಾಯಣ!

ಸತ್ಸಂಕಲ್ಪವೊಂದನ್ನು ಸತ್ಯಸಂಕಲ್ಪವನ್ನಾಗಿಸಲು ಸಮಯ ಕಾಯಬಾರದು. ಎದೆಯೊಳಗೆ ಉದಿಸಿದ ಒಳಿತನ್ನು ಬದುಕಿನಲ್ಲಿಳಿಸಲು ತಡ ಮಾಡಬಾರದು. ಅಶ್ವಮೇಧದ ಸಂಕಲ್ಪವನ್ನು ಸಾಕಾರಗೊಳಿಸಲು ದಶಾಶ್ವರಥವೇರಿ ಧಾವಿಸುತ್ತಿದೆ ದಶರಥನ ಹೃದಯ! ಮುಂದಿನ ದಾರಿ ಗುರುಗಳು. ತನ್ನಂತರಂಗವನ್ನು ಗುರುವೃಂದದ ಮುಂದಿರಿಸಿದನು ದಶರಥ. ನಮಗೆ ಸರಿಯೆನಿಸಿದ್ದು ನಮ್ಮ ಗುರುವಿಗೂ ಸರಿಯೆನಿಸಬೇಕು, ಆಗಲೇ ಅದು ನಿಜವಾಗಿಯೂ ಸರಿ!

ದೊರೆಯ ಹೃದಯದಲ್ಲಿ ದೈವವೇ ಅಶ್ವಮೇಧದ ದಿವ್ಯಪ್ರೇರಣೆಯಾಗಿ ಅವತರಿಸಿರುವುದನ್ನು ದಿವ್ಯಚಕ್ಷುವಿನಿಂದ ವೀಕ್ಷಿಸಿತು ಗುರುವೃಂದ. ವಿಶ್ವದ ತಂದೆಗೇ ತಂದೆಯಾಗುವ ದಶರಥನ ಯೋಗವನ್ನು ನಿರುಕಿಸಿ, ಪರಮಸಂತೋಷದಲ್ಲಿ ಅನುಮೋದಿಸಿ ಹರಸಿತು! ಶಿಷ್ಯನ ಭವಿಷ್ಯದ ಉತ್ಥಾನ, ಗುರುವಿನ ವರ್ತಮಾನದ ಸಮಾಧಾನವಲ್ಲವೇ?

ಸ್ವಯಂ ವಸಿಷ್ಠರೇ ಗುರುವಾಗಿರುವಾಗ ದಶರಥನಿಗೆ ಯಾಗದ ಪ್ರೇರಣೆಯಾಗುವುದೆಂದರೇನು? ಎಂಬ ಜಿಜ್ಞಾಸೆಗೆ ಇಲ್ಲಿ ಅವಕಾಶವಿದೆ. ಪ್ರೇರಣೆಯು ಗುರುಕಾರ್ಯ. ಗುರು ಅದನ್ನು ಹೊರಗಿನಿಂದಲೂ ನೆರವೇರಿಸಬಹುದು. ಒಳಗೆ ನಿಂತೂ ಪ್ರೇರಿಸಬಹುದು. ಪ್ರತ್ಯಕ್ಷದಲ್ಲಿ ಪ್ರೇರಿಸಿದಾಗ ಶಿಷ್ಯನು ಅದನ್ನು ಪಾಲಿಸಬೇಕು. ಅಂತರಂಗದಲ್ಲಿ ಪ್ರೇರಣೆಯು ಸ್ಫುರಿಸಿದರೆ, ಅದನ್ನು ಗುರುವಿನಲ್ಲಿ ನಿವೇದಿಸಿ, ಅದು ಭ್ರಮೆಯಲ್ಲವೆಂಬುದನ್ನು ಖಚಿತಪಡಿಸಿಕೊಂಡು, ಬಳಿಕವೇ ಮುಂದುವರಿಯಬೇಕು. ದಶರಥನು ಮಾಡಿದ್ದೂ ಅದನ್ನೇ!

ಗುರುಗಳು ಮೋದದಲ್ಲಿ ಅನುಮೋದಿಸುವಾಗ ದೊರೆಯ ಕಣ್ಣಲ್ಲಿ ಹರ್ಷದ ಜಲ! ತಾನು ಸರಿಯೆಂಬುದು ಸರಿಯಾದವರು ಸಾರುವಾಗ ಅತಿಶಯವಾದ ಸಮಾಧಾನವಾಗುವುದು ಸಹಜ. ಯಜ್ಞದ ಸಿದ್ಧತೆಗೆ ಅಮಾತ್ಯರಿಗಾಯಿತು ಅಪ್ಪಣೆ. ಅಶ್ವಮೇಧವು ಸುಲಭಸಾಧ್ಯದ ಯಜ್ಞವಲ್ಲ. ಸಾಮಾನ್ಯ ಮಾನವರಿರಲಿ, ಸಾಮಾನ್ಯರಾದ ದೊರೆಗಳಿಗೂ ಎಟುಕದ ಕಾರ್ಯವದು! ದೊಡ್ಡ ಕಾರ್ಯಗಳು ಸರಿಯಾಗಿ ನಡೆಸಲ್ಪಟ್ಟಾಗ ದೊಡ್ಡ ಶುಭಗಳನ್ನೇ ನೀಡುತ್ತವೆ. ಲೋಪಗಳಾದಾಗ ಮಹದನರ್ಥಗಳನ್ನೇ ಉಂಟು ಮಾಡುತ್ತವೆ! ಅಶ್ವಮೇಧವು ಆ ಸಾಲಿನದೆಂಬುದನ್ನು ಬಲ್ಲ ಅಮಾತ್ಯರು ಸಣ್ಣ ಸಣ್ಣ ಸಂಗತಿಗಳನ್ನೂ ಉಪೇಕ್ಷಿಸದೆ, ಜಾಗರೂಕರಾಗಿ ಸಿದ್ಧತೆಯಲ್ಲಿ ತೊಡಗಿದರು. ಸೂರ್ಯವಂಶದ ಉತ್ತರೋತ್ತರಕ್ಕಾಗಿ ಗುರುನಿರ್ದೇಶನದಲ್ಲಿ ಸರಯೂ ನದಿಯ ಉತ್ತರ ತೀರವು ಯಜ್ಞಭೂಮಿಯಾಗಿ ವರಿಸಲ್ಪಟ್ಟಿತು.

ಅಪರೂಪದ ಆಲೋಚನೆಯನ್ನು ಆತ್ಮೀಯ ಒಡನಾಡಿಗಳಲ್ಲಿ ಹಂಚಿಕೊಂಡಾಗ ಆಗುವ ಆನಂದವೇ ಬೇರೆ. ಸುತರಿಲ್ಲದ ಕೊರಗಲ್ಲಿ ಸಮಪಾಲು ಹಂಚಿಕೊಂಡ ತನ್ನ ಮಡದಿಯರ ಕಿವಿಯಲ್ಲಿ ದೊರೆ ಅಶ್ವಮೇಧದ ವಾರ್ತೆಯನ್ನಿಟ್ಟಾಗ ಮರುಭೂಮಿಯಲ್ಲಿ ಬಂತು ಮಳೆ!
ಸತಿಯರ ಮೊಗದಲ್ಲಿ ಎಲ್ಲಿಲ್ಲದ ಕಳೆ!
ಇದು ರಾಮಾಯಣದ ಕಥೆಯ ಮೊದಲ ಎಳೆ!

~*~*~

(ಸಶೇಷ)

 

Facebook Comments