ಚಿತ್ರಲೇಖಾ!
ದೇವನರ್ತಕಿಯವಳು. ಮಹಾಪುಣ್ಯದ ಫಲವಾಗಿ ಭುವಿಯಿಂದ ದಿವಿಗೇರಿದ ದಿವ್ಯಾತ್ಮರನ್ನು ಮಂಗಲ~ಮನೋಹರ ನರ್ತನದಿಂದ ಮುದಗೊಳಿಸುವ ಮಹಾಯೋಗ ಅವಳದು. ವಿಧಿವಿಲಾಸ! ದಿವಿಯಿಂದ ಚ್ಯುತಳಾಗಿ ಆಕೆ ಭುವಿ ಸೇರುವ ಸನ್ನಿವೇಶವೊಂದು ಸೃಷ್ಟಿಗೊಂಡಿತು!

ಅದು ಹೀಗೆ:
ದೇವಸಭೆಯಲ್ಲಿ, ದೇವರಾಜನ ಸಮ್ಮುಖದಲ್ಲಿ, ಆಕೆ ನರ್ತಿಸುತ್ತಿದ್ದ ಒಂದು ಸಂದರ್ಭ. ಆಕೆಯ ದೃಷ್ಟಿಯು ದೇವೇಂದ್ರನಿಂದ ವಿಚಲಿತಗೊಂಡು, ದೂರದಲ್ಲಿ ವಿಹರಿಸುತ್ತಿದ್ದ ಜಿಂಕೆಯೊಂದರಲ್ಲಿ ನೆಲೆಗೊಂಡಿತು. ತನ್ನನ್ನು ನೋಡದ ಚಿತ್ರಲೇಖೆಯನ್ನು ಕ್ರೋಧಪೂರ್ಣ ನೇತ್ರಗಳಿಂದ ನೋಡಿದನು ಸಹಸ್ರನೇತ್ರ. ಸುಡುನೋಟವ ಹಿಂಬಾಲಿಸಿತು ಶಾಪವಾಕ್ಯ!

“ನಿನಗೆ ದಿವಿಗಿಂತ, ದೇವತೆಗಳ ದೊರೆಗಿಂತ ಆ ಜಿಂಕೆಯೇ ಮಿಗಿಲಾಗಿಹೋಯಿತೇ!? ದಿವಿಯಿಂದ ಚ್ಯುತಳಾಗಿ ಸೇರು ಭುವಿಯ; ಜಿಂಕೆಯಾಗಿಯೇ ಜನಿಸಲ್ಲಿ!” – ದೇವರಾಜನ ಕ್ಷಣ ಕೋಪ; ದೇವಾಂಗನೆಯ ದೀರ್ಘ ಪರಿತಾಪ!

ಅನಿರೀಕ್ಷಿತ ಅವಘಡದಿಂದ ಕಂಗೆಟ್ಟಳು ಚಿತ್ರಲೇಖಾ. ದೈನ್ಯದ ಮೂರ್ತಿಯಾಗಿ, ದೇವರಾಜನ ಪದ ಪಿಡಿದು ದಿವಿಗೆ ಮರಳುವ ದಾರಿಯ ಬೇಡಿದಳು. ಚಿತ್ರಲೇಖೆಯ ದೀನಚಿತ್ರವು ದೇವೇಂದ್ರನ ಕೋಪವನ್ನು ಕರಗಿಸಿ, ಕನಿಕರವಾಗಿಸಿತು. ದೇವತೆಗಳು ದೇವತೆಗಳೆನಿಸುವುದು ಕರುಣೆಯಿಂದಲೇ ಅಲ್ಲವೇ?

ಭುವಿಯ ದಿವಿಯಾಗಿಸುವ ದಿವ್ಯಶಿಶುವೊಂದಕ್ಕೆ ಜನ್ಮ ನೀಡಿ, ದಿವಿಗೆ ಮರಳೆಂದನು ದೇವೇಂದ್ರ.

ಹೀಗೆ ದೇವಲೋಕದ ಆಭರಣವೊಂದು, ಕ್ಷಣಮಾತ್ರದ ಚಾಂಚಲ್ಯದ ಪರಿಣಾಮವಾಗಿ ಹರಿಣವಾಗಿ ಧರಣಿಗಿಳಿಯಿತು! ಹೆಣ್ಣು ಜಿಂಕೆಯ ತನು ತೊಟ್ಟು, ಮಹಾಮುನಿ ವಿಭಾಂಡಕರ ಸುತ್ತ ಮುತ್ತ ಸುಳಿದಾಡತೊಡಗಿದಳು ಚಿತ್ರಲೇಖಾ‌.

ಭಾಂಡವೆಂದರೆ ಜಲಪಾತ್ರ. ವಿಭಾಂಡವೆಂದರೆ ವಿಶಿಷ್ಟ ಜಲಪಾತ್ರ. ವಿಭಾಂಡಕ ಎಂದರೂ ಅದೇ. ಹೆಸರಿನಲ್ಲಿಯೇ ಜಲಸಂಬಂಧ; ಉಸಿರುಸಿರಿನಲ್ಲಿ ಜಲಪ್ರೀತಿ ಆ ಮುನಿಗೆ. ಆದುದರಿಂದಲೇ ಮಡುವೊಂದರಲ್ಲಿ ಮುಳುಗಿ ಕುಳಿತು, ಅಲ್ಲಿ ತಪಸ್ಯೆಯಲ್ಲಿ ಮುಳುಗಿದ್ದರು ಅವರು. ಜಗದ ಗೊಡವೆಯೇ ಬೇಡವೆಂದು ಜಲದಲ್ಲಿ ಮುಳುಗಿದರೆ ಅಲ್ಲಿಯೂ ಬಂತೊಂದು ನಂಟು! ದೇವಸುಂದರಿ ಊರ್ವಶಿಯೆಡೆಗೆ ಅರೆಕ್ಷಣ ಹರಿಯಿತು ಮುನಿದೃಷ್ಟಿ; ಆ ಕ್ಷಣವನ್ನೇ ಕಾಯುತ್ತಿತ್ತೋ ಎಂಬಂತೆ ಮಹರ್ಷಿಯೊಳಗಿನ ಮಹಾತೇಜಸ್ಸೊಂದು ಮೆಲ್ಲನಿಳಿದು, ಜಗವ ಸೇರುವ ಪೀಠಿಕೆಯಾಗಿ ಜಲವ ಸೇರಿತು!

ಹರಿಣಿಯ ಹರಣದೊಳಗೆ ಕುಳಿತು ಈ ಸನ್ನಿವೇಶಕ್ಕಾಗಿಯೇ ಕಾಯುತ್ತಿದ್ದ ಚಿತ್ರಲೇಖಾಚೈತನ್ಯವು ಒಮ್ಮೆಲೇ ಎಚ್ಚರಗೊಂಡಿತು. ಒಂದು ಕ್ಷಣವೂ ತಡ ಮಾಡದೇ, ಋಷಿಯ ಒಳಬೆಳಕನ್ನು ತನ್ನೊಳಗೆ ತುಂಬಿಕೊಂಡಿದ್ದ ಜಲವನ್ನು ಚಿತ್ರಲೇಖಾ~ಹರಿಣಿಯು ಸಂಭ್ರಮಿಸಿ ಸೇವಿಸಿದಳು! ಆ ಘಳಿಗೆಯು ಸಾಲು ಸಾಲು ಶುಭಗಳಿಗೆ ಕಾರಣವಾಯಿತು!

ಋಷ್ಯಶೃಂಗರು ದಿವಿಯಿಂದ ಭುವಿಗಿಳಿದರು;
ತನ್ಮೂಲಕ ಚಿತ್ರಲೇಖೆಯು ಮರಳಿ ಭುವಿಯಿಂದ ದಿವಿಗೇರಿದಳು;
ಅಂಗರಾಜ್ಯದ ಬಹುಕಾಲದ ಬರ ನೀಗಿ, ಜೀವಚೈತನ್ಯವು ಮಳೆಯಾಗಿ ಇಳೆಗಿಳಿಯಿತು.
ದಶರಥನ ಬಹುಕಾಲದ ಸಂತತಿಯ ಬರ ನೀಗಿ, ರಾಮನೆಂಬ ವರ ಲಭಿಸಿತು.
ತನ್ಮೂಲಕ ಭುವಿಯೇ ದಿವಿಯಾಯಿತು; ರಾಮರಾಜ್ಯವು ಉದಯವಾಯಿತು!

ಜಲದೊಳಗಿನ ಜಗದ ಬೆಳಕು ಜಿಂಕೆಯ ಒಡಲ ಸೇರಿ, ಅಲ್ಲಿ ಶಿಶುವಾಗಿ ಬೆಳೆಯತೊಡಗಿತು. ಒಂದು ಮಹಾದಿನ, ಮಂಗಲಮುಹೂರ್ತದಲ್ಲಿ ಮೃಗಿಯ ಒಡಲಿಂದ ಮಹಿಯ ಮಡಿಲಿಗಿಳಿಯಿತು ಆ ಮಹಾಶಿಶು. ಧನ್ಯಜನ್ಮವದು! ಜನನಮಾತ್ರದಿಂದ ಜನನಿಯ ಶಾಪ ಕಳೆವ ಜನ್ಮ! ಮಂಗಲವೇ ಮೈವೆತ್ತ ಮಗುವೊಂದಕ್ಕೆ ತಾಯಿಯಾಗಿ, ಕ್ಷಣಮಾತ್ರದಲ್ಲಿ ಮೃಗತ್ವವ ಕಳೆದು ಮತ್ತೆ ದೇವತ್ವಕ್ಕೇರಿದಳು ಚಿತ್ರಲೇಖಾ!

ಹೀಗೂ ಉಂಟೇ!? ಹರಿಣಿಯು ಆ ಮಗುವಿನ ಭುವಿಯ ಬದುಕಿನ ತಾಯಿಯಾದರೆ, ಮಗುವು ತನ್ನ ತಾಯಿಯ ದಿವಿಯ ಬದುಕಿಗೆ ತಾಯಿಯಾಯಿತು! ಮಗುವಿಗೆ ಮಾತೃಗರ್ಭದಿಂದ ಮೋಕ್ಷ; ತಾಯಿಗೆ ಹರಿಣೀಜನ್ಮದಿಂದಲೇ ಮೋಕ್ಷ!

ಬದುಕಿನ ಪ್ರಥಮಕ್ಷಣದಿಂದಲೇ ಮಾತೃವಿರಹ ಆ ಶಿಶುವಿಗೆ. ಆದರೆ ಆಕೆಯ ಕುರುಹಾಗಿ – ಮುಂದೆ ಋಷಿಸಂಕುಲದ ಶೃಂಗವಾಗಲೆಂಬಂತೆ – ಪುಟ್ಟ ಮಗುವಿನ ಪುಟ್ಟ ಶಿರದಲ್ಲಿ ಪುಟ್ಟ ಶೃಂಗವೊಂದು ಮೂಡಿತ್ತು! ಆ ಶೃಂಗವು ಶಿಶುವಿಗೆ ಋಷ್ಯಶೃಂಗನೆಂಬ ಅಭಿಧಾನವನ್ನು ತಂದುಕೊಟ್ಟಿತು. ಹೀಗೆ ತನ್ನ ತನುವಿನ ಸರ್ವೋತ್ತುಂಗ ಸ್ಥಾನದಲ್ಲಿ, ಮತ್ತು ತನ್ನ ಶುಭನಾಮಧೇಯದಲ್ಲಿ ಕಾಣದ ತಾಯಿಯ ನೆನಹನ್ನು ಹೊತ್ತ ಮಗು ತಂದೆಯೇ ತಾಯಿಯಾಗಿ ಬೆಳೆಯತೊಡಗಿತು!

ಇಲ್ಲಿ ದಿವ್ಯರ ದೋಷವೆಂಬಂತೆ ಕಂಡುಬರುವ ಮೂರು ಸಂಗತಿಗಳು:

  1. ಚಿತ್ರಲೇಖೆಯ ಕ್ಷಣಚಾಂಚಲ್ಯ; ಇಂದ್ರದೇವತೆಗೆ ಸೇವಾರ್ಥವಾಗಿ ನೃತ್ಯಗೈಯುತ್ತಿರುವಾಗ ಚಿತ್ರಲೇಖೆಯು ಕ್ಷಣಕಾಲ ಚಂಚಲಗೊಂಡು ಜಿಂಕೆಯೆಡೆಗೆ ದೃಷ್ಟಿ ಹರಿಸಿದ್ದು.
  2. ಇಂದ್ರನ ಕ್ಷಣಕ್ರೋಧ; ಅಷ್ಟು ಮಾತ್ರಕ್ಕಾಗಿ ಇಂದ್ರನು ಕ್ಷಣ ಕಾಲ ಕ್ರೋಧದ ವಶನಾಗಿ, ಆಕೆಯನ್ನು ದಿವಿಯಿಂದ ದೂರ ಮಾಡಿ, ಭುವಿಗಟ್ಟಿದ್ದು.
  3. ವಿಭಾಂಡಕರ ಕ್ಷಣಕಾಮ; ಪೊಡವಿಯ ಗೊಡವೆಯೇ ಬೇಡವೆಂದು, ಕೊಳದಲ್ಲಿ ಮುಳುಗಿ ತಪಗೈವ ವಿಭಾಂಡಕರು ಊರ್ವಶಿಯೆಡೆಗೆ ಕ್ಷಣಮಾತ್ರದ ದೃಷ್ಟಿಯನ್ನು ಹರಿಸಿದ್ದು.

‘ “ಸೂಕ್ಷ್ಮಃ ಪರಮದುರ್ಜ್ಞೇಯಃ ಸತಾಂ ಧರ್ಮಃ ಪ್ಲವಂಗಮ” ಸತ್ಪುರುಷರ ನಡೆಗಳು ಸೂಕ್ಷ್ಮವೂ, ಪರಮ ದುರ್ಜ್ಞೇಯವೂ ಆಗಿರುತ್ತವೆ’ ಎಂಬ ರಾಮನ ಮಾತು ಇಲ್ಲಿ ನೆನಪಾಗುತ್ತದೆ. ಹಲವು ಬಾರಿ ವರ್ತಮಾನದಲ್ಲಿ ಅರ್ಥವಾಗದ ಮಹಾತ್ಮರ ನಡೆಗಳಿಗೆ ಭವಿಷ್ಯದಲ್ಲಿ ಉತ್ತರವಿರುತ್ತದೆ.

ದೋಷವಲ್ಲಿದು; ದಿವ್ಯದೃಷ್ಟಿ:

  1. ಇಂದ್ರಸೇವೆಯ ನಡುವೆ ಜಿಂಕೆಯೆಡೆಗೆ ಹರಿದ ಚಿತ್ರಲೇಖೆಯ ದೃಷ್ಟಿಗೆ ಋಷ್ಯಶೃಂಗರ ಪ್ರಾದುರ್ಭಾವವೇ ವಿವರಣೆ.
  2. ‘ಜಿಂಕೆಯಾಗಿ, ಮಗುವೊಂದಕ್ಕೆ ಜನ್ಮ ನೀಡಿ, ದಿವಿಗೆ ಮರಳು’ ಎನ್ನುವ ದೇವೇಂದ್ರನದು ಕ್ರೋಧವೆನ್ನುವುದಕ್ಕಿಂತ ಚಿತ್ರಲೇಖೆಗೆ ಕರ್ತವ್ಯನಿರ್ದೇಶನವೆನ್ನುವುದೇ ಸೂಕ್ತ.
  3. ವಿಭಾಂಡಕರದು ನಿಜವಾಗಿಯೂ ಊರ್ವಶಿಯ ಕುರಿತು ಕಾಮವೇ ಆಗಿದ್ದರೆ, ಆಕೆಯನ್ನು ಪಡೆದುಕೊಳ್ಳುವುದು ಅವರ ತಪಸ್ಸಿಗೆ ದೊಡ್ಡ ಮಾತೇ ಅಲ್ಲ!
    ಹಿಂದೆಯೂ ಇಲ್ಲದ, ಮುಂದೆಂದೂ ಬಾರದ ಅವರ ಕ್ಷಣಕಾಮ ಶಾಪಮೋಕ್ಷದ ಮೂಲಕ ಚಿತ್ರಲೇಖೆಯ ಉದ್ಧಾರಕ್ಕಾಗಿ, ಮತ್ತು ಋಷ್ಯಶೃಂಗರ ಮೂಲಕ ಜಗದುದ್ಧಾರಕ್ಕಾಗಿ – ಎನ್ನುವುದರಲ್ಲಿ ಸಂಶಯವೇನಿದೆ!?

ಹೀಗೆ ಇಂದ್ರ~ಚಿತ್ರಲೇಖೆ~ಊರ್ವಶಿಯರೆಂಬ ಮೂವರು ದೇವಚೇತನರು ಮತ್ತು ವಿಭಾಂಡಕರೆಂಬ ದೇವಮಾನವರ ಸಮಾಯೋಗದಲ್ಲಿ ಋಷ್ಯಶೃಂಗರೆಂಬ ಮಹಾವಿಭೂತಿಯು ಇಳೆಗಿಳಿಯಿತು!

~*~

ತಿಳಿವು-ಸುಳಿವು :

  • ರಾಮರಶ್ಮಿಯು ಕಥೆಯ ಓಘದಲ್ಲಿ ಸಂಪೂರ್ಣವಾಗಿ ವಾಲ್ಮೀಕೀ ರಾಮಾಯಣವನ್ನೇ ಅನುಸರಿಸುತ್ತದೆ. ಅಲ್ಲಿಲ್ಲದ ಕೆಲ ಉಪಕತೆ/ವಿವರಗಳನ್ನು ಪುರಾಣ/ಇತಿಹಾಸ ಇತ್ಯಾದಿ ಆಕರಗಳಿಂದ ಸಂಗ್ರಹಿಸಲಾಗುತ್ತದೆ.
  • ಪ್ರಕೃತ ಋಷ್ಯಶೃಂಗರ ಕಥೆಯು ಮಹಾಭಾರತ ವನಪರ್ವ (ಶ್ಲೋಕ 110-112) / ಪುರಾಣನಾಮಚೂಡಾಮಣಿ ಯನ್ನು ಆಧರಿಸಿದೆ

 

~*~*~

(ಸಶೇಷ..)

ಕ್ಲಿಷ್ಟ-ಸ್ಪಷ್ಟ:

  • ಋಷ್ಯಶೃಂಗ = ಋಷ್ಯವೆಂದರೆ ಜಿಂಕೆಯ ಒಂದು ಪ್ರಭೇದ.
    ಋಷ್ಯಶೃಂಗ ಎಂದರೆ ಋಷ್ಯದ ಶೃಂಗವನ್ನು ಹೋಲುವ ಶೃಂಗವುಳ್ಳವನು.
  • ಸಹಸ್ರನೇತ್ರ = ದೇವೇಂದ್ರ
  • ದುರ್ಜ್ಞೇಯ = ಅರ್ಥೈಸಲು ಸುಲಭವಲ್ಲದ

ಇದು ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ ಯ 45ನೇ ರಶ್ಮಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box