“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ ಇದೀಗ “ಹರೇರಾಮ.ಇನ್” ನಲ್ಲಿ ಲಭ್ಯ.
ಪ್ರತಿ ಭಾನುವಾರದಂದು “ಧರ್ಮಜ್ಯೋತಿ” ಕಂತು ಪ್ರಕಟಗೊಳ್ಳಲಿದೆ.
ಪ್ರಕಟಣೆ ಕೃಪೆ & Copyright:
ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

ಸಹಕಾರ: ರಾಘವೇಂದ್ರ ಉಪಾಧ್ಯಾಯ ಬೆಂಗಳೂರು, ಶ್ರೀದೇವಿ ವಿಶ್ವನಾಥ್ ಪುತ್ತೂರು.

ಧರ್ಮಜ್ಯೋತಿ

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಲೇಖನಾಮೃತ
(‘ಕನ್ನಡಪ್ರಭ’ ದಿನಪತ್ರಿಕೆಯ ‘ಧರ್ಮಜ್ಯೋತಿ’ ಅಂಕಣದಲ್ಲಿ ಪ್ರಕಟಗೊಂಡ ಶ್ರೀಶ್ರೀಗಳವರ ಲೇಖನಮಾಲೆ)

~ಸಮರ್ಪಣೆ~

ಅಂತರಂಗವನ್ನು ‘ರಂಗ’ಸ್ಥಳವನ್ನಾಗಿಸಿಕೊಂಡು, ಜೀವಲೋಕಕ್ಕೆ ತಂಪೆರೆವ ವಿಚಾರಾಮೃತವನ್ನು ಲೋಕದೆಡೆಗೆ ಹರಿಸಿ-ಹರಸಿದ ಅಂತರಂಗದೊಡೆಯ ಗುರುಪರಂಜ್ಯೋತಿಗೆ ಈ ಗ್ರಂಥಪುಷ್ಪವು ಸಮರ್ಪಿತ.

~*~

ಪ್ರಕಾಶಕರ ನುಡಿ

ಶ್ರೀಭಾರತೀ ಪ್ರಕಾಶನದ ಶ್ರೀಭಾರತೀ ಗ್ರಂಥಮಾಲಿಕೆಯು ದ್ವಿತೀಯ ಕುಸುಮವಾಗಿ “ಧರ್ಮಜ್ಯೋತಿ” ಅರಳುತ್ತಿದೆ. ಪ್ರಕಾಶನದ ಸಂಸ್ಥಾಪಕರಾದ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಲೇಖನಾಮೃತವನ್ನು ಪ್ರಕಟಿಸುವ ಅವಕಾಶ ದೊರೆತಿರುವುದು ಪ್ರಕಾಶನದ ಸೌಭಾಗ್ಯವೇ ಸರಿ.

ಪ್ರಕೃತ ವಿಷಯಕ್ಕೆ ಪ್ರಥಮ ಕೃತಜ್ಞತೆ ಸಲ್ಲಬೇಕಾಗಿರುವುದು “ಕನ್ನಡಪ್ರಭ” ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ವೆಂಕಟನಾರಾಯಣರಿಗೆ. ಶ್ರೀಶ್ರೀಗಳನ್ನು ಭೇಟಿಮಾಡಿ, ತಮ್ಮ ಪತ್ರಿಕೆಯ “ಧರ್ಮಜ್ಯೋತಿ” ಅಂಕಣಕ್ಕೆ ಲೇಖನಗಳಿಗಾಗಿ ಅವರು ಮಾಡಿದ ಒತ್ತಾಯದ ಬಿನ್ನಹ ನಿಜವಾದ ಅರ್ಥದಲ್ಲಿ ಲೋಕೋಪಕಾರವಾಗಿ ಪರಿಣಮಿಸಿತು.ಯಾಕೆಂದರೆ ಅಲ್ಲಿಯವರೆಗೆ ಲೇಖನಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರದಿದ್ದ ಶ್ರೀಸನ್ನಿಧಾನದವರು ಲೇಖನಗಳನ್ನು ಬರೆಯಲಾರಂಭಿಸಿದರು. ಆಸ್ತಿಕವೃಂದಕ್ಕೆ ಇದರಿಂದಾದ ಪ್ರಯೋಜನ ಅಗಣನೀಯ. ಧಾರ್ಮಿಕ ವಿಷಯಗಳಿಂದ ದೂರವಿದ್ದ ಯುವಕರೂ ಶ್ರೀಗಳವರ ಅಂಕಣಲೇಖನಗಳಿಗಾಗಿ ಕಾಯುವಂತಾದ್ದು ಇದರ ಪರಮಪ್ರಯೋಜನವಾಗಿದೆ.

ಇದಲ್ಲದೆ ಈ ಗ್ರಂಥಕ್ಕೆ ಮುನ್ನುಡಿರೂಪವಾಗಿ ‘ನುಡಿನಮನ’ವನ್ನರ್ಪಿಸಿದ ಶ್ರೀ ವೆಂಕಟನಾರಾಯಣರಿಗೆ ಮತ್ತು ‘ಕನ್ನಡಪ್ರಭ’ದ ಅವರ ಸಿಬ್ಬಂದಿವರ್ಗಕ್ಕೆ ಕೃತಜ್ಞತೆಗಳು.

ಇದನ್ನು ಸಂಪಾದಿಸಿ ಗ್ರಂಥರೂಪವಾಗಿ ಪ್ರಕಟಣೆಗೆ ಸಿದ್ಧಪಡಿಸಿಕೊಟ್ಟ ವಿದ್ವಾನ್ ಜಗದೀಶ ಶರ್ಮಾ ಹಾಗೂ ಅವರಿಗೆ ಸಹಕಾರ ನೀಡಿದ ವಿದ್ವಾನ್ ಗಜಾನನ ಭಟ್, ರೇವಣಕಟ್ಟ ಕೃತಜ್ಞತೆಗೆ ಪಾತ್ರರಾಗಿದ್ದಾರೆ. ಸುಂದರವಾಗಿ ಅಕ್ಷರ ಜೋಡಣೆ ಮಾಡಿದ ಹರಿಪದ್ಮ ಆಫ್ ಸೆಟ್ ನ ಶ್ರೀ ಚಂದ್ರಶೇಖರ್ ಮತ್ತು ಶಾರದಾ ಬಾಪಟ್ ರಿಗೆ ವಂದನೆಗಳು. ಅಂದವಾಗಿ ಮುದ್ರಿಸಿಕೊಟ್ಟ ಸಾಗರ ಅಸೋಸಿಯೇಟ್ಸ್ ನ ಶ್ರೀ ಹೆಚ್.ಟಿ. ಸೀತಾರಾಮ್ ರವರಿಗೆ ಧನ್ಯವಾದಗಳು. ಪ್ರತ್ಯಕ್ಷ-ಪರೋಕ್ಷವಾಗಿ ಗ್ರಂಥಪ್ರಕಾಶನಕ್ಕೆ ಸಹಕರಿಸಿದ ಸರ್ವರೂ ಕೃತಜ್ಞತೆಗೆ ಪಾತ್ರರು.

ವಿಶೇಷವಾಗಿ ಇಂತಹ ಉತ್ತಮ ಗ್ರಂಥವೊಂದನ್ನು ಜಗತ್ತಿಗೆ ಅನುಗ್ರಹಿಸಿ ಇದರ ಪ್ರಕಾಶನಕ್ಕೆ ಆಶೀರ್ವದಿಸಿರುವ ಶ್ರೀಶ್ರೀಚರಣರ ಪಾದಪದ್ಮಗಳಿಗೆ ನಮನಗಳನ್ನರ್ಪಿಸುತ್ತೇವೆ.

-ಪ್ರಕಾಶಕ
(ಭಾರತೀ ಪ್ರಕಾಶನ, ಗಿರಿನಗರ, ಬೆಂಗಳೂರು)

ನುಡಿನಮನ

ನಾನು ಶ್ರೀಮಜ್ಜಗದ್ಗುರುಶಂಕರಾಚಾರ್ಯ ಮಹಾಸಂಸ್ಥಾನ ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀಶ್ರೀಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಗಳನ್ನು ಭೇಟಿ ಮಾಡಿದುದು ಅನಿರೀಕ್ಷಿತವಾಗಿ, ಪತ್ರಕರ್ತ ಗೆಳೆಯ ಶ್ರೀಧರ ದೀಕ್ಷಿತ ಅವರೊಂದಿಗೆ.
ಮೊದಲ ಭೇಟಿಯಲ್ಲೇ ಸ್ವಾಮೀಜಿಗಳು ನನ್ನನ್ನು ಅಯಸ್ಕಾಂತದಂತೆ ಆಕರ್ಷಿಸಿದ್ದರು. ಅದ್ವೈತಮತ ಸಂಸ್ಥಾಪನಾಚಾರ್ಯ ಪರಮಪೂಜ್ಯ ಶ್ರೀಶಂಕರ ಭಗವತ್ಪಾದರನ್ನು ನಾನು ಚಿತ್ರಗಳಲ್ಲಿ ನೋಡಿಬಲ್ಲೆ.
ಶ್ರೀರಾಘವೇಶ್ವರಭಾರತೀ ಸ್ವಾಮೀಜಿಗಳಲ್ಲಿ ಅವತರಿಸಿದಂತೆ ನನ್ನ ಅನುಭವಕ್ಕೆ ದಕ್ಕಿತ್ತು. ಅದನ್ನು ಜೀರ್ಣಿಸಿಕೊಳ್ಳುವ ಯತ್ನದಲ್ಲಿದ್ದೆ.

ಆದಿಚುಂಚನಗಿರಿಯ ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹೊತ್ತಿಸಿದ ‘ಧರ್ಮಜ್ಯೋತಿ’ ಆಗ ತಾನೆ ‘ಕನ್ನಡಪ್ರಭದಲ್ಲಿ ಬೆಳಗುತ್ತಿತ್ತು. ಅದನ್ನು ಮುಂದುವರಿಸುವ ತೇಜೋವಂತರ ಹುಡುಕಾಟ ನಡೆಸಿದ್ದೆ.
ಸ್ವಾಮೀಜಿಗಳ ದರ್ಶನ ಆದಾಗ ಅವರಲ್ಲಿ ‘ಧರ್ಮಜ್ಯೋತಿ’ಯನ್ನು ಮುನ್ನಡೆಸಲು ಕೇಳಬೇಕೆಂದು ನನ್ನ ಮನಸ್ಸಿಗೆ ಮೂಡಿದ್ದೇ ತಡ, ಕೇಳಿದೆ.
ಶಾಂತಚಿತ್ತದ ಶ್ರೀಗಳವರು ಕ್ಷಣ ಯೋಚಿಸಿದರು.’ನಮಗೆ ಆ ಶಕ್ತಿ ಇದೆಯೇ? ಆಗಲಿ, ನೋಡೋಣ’ ಎಂದು ಹೇಳಿ ಸುಮ್ಮನಾದರು. ಗುರುವಂದನೆ ಸಲ್ಲಿಸಿ ನಾನೂ ಹೊರಬಿದ್ದೆ.
‘ಧರ್ಮಜ್ಯೋತಿ’ ಅಂಕಣವನ್ನು ಬರುವ ತಿಂಗಳಲ್ಲಿ ಮುನ್ನಡೆಸುವವರು ಯಾರು?- ಎಂದು ಸಹೋದ್ಯೋಗಿಗಳು ಕೇಳಿದಾಗ ಸ್ವಾಮೀಜಿಯವರ ಹೆಸರು ಹೇಳಿದೆ.
ಕೂಡಲೇ ಸಂಪರ್ಕ ಮಾಡಲು ಯತ್ನಿಸಿದೆ. ‘ಆಗಲಿ ನೋಡೋಣ’ ಎಂದಿದ್ದ ಸ್ವಾಮೀಜಿಗಳಿಗೆ ನಾನು ಬೆನ್ನು ಬೀಳುತ್ತೇನೆಂಬ ನಂಬಿಕೆ ಇರಲಿಲ್ಲ.
ಮಿತ್ರ ಶ್ರೀ ವಿ.ಆರ್. ಹೆಗಡೆ ಅವರ ಮೂಲಕ ಸಂಪರ್ಕ ಮಾಡಿದಾಗ ಶ್ರೀಗಳು ಪ್ರವಾಸದಲ್ಲಿದ್ದರು. ಪ್ರವಾಸದ ನಡುವಿನಲ್ಲಿ ನಮ್ಮ ಕೋರಿಕೆಯ ಸಂದೇಶ ಅವರನ್ನು ಮುಟ್ಟಿತ್ತು.
ತೀವ್ರ ಒತ್ತಡದ ತಮ್ಮ ಪ್ರವಾಸದ ನಡುವೆ ಶ್ರೀಗಳವರು ‘ಧರ್ಮಜ್ಯೋತಿ’ ಬೆಳಗಲು ತಮ್ಮ ಚಿಂತನದ ಆಜ್ಯ ಅರ್ಪಿಸಿದರು.

ಶ್ರೀಗಳವರ ಚಿಂತನಗಳು ‘ಧರ್ಮಜ್ಯೋತಿ’ ಅಂಕಣದ ಓದುಗರ ಮೇಲೆ ಗಾಢ ಪರಿಣಾಮ ಬೀರಿದವು. ಅದು ಅತ್ಯಂತ ಜನಪ್ರಿಯವಾಯಿತು. ಅಂಕಣವನ್ನು ಮುಂದುವರಿಸಲು ಕೋರಿ ಪತ್ರಗಳು ಬಂದವು.
ವಿಷಯವನ್ನು ನಾನು ಶ್ರೀಗಳವರಲ್ಲಿ ಬಿನ್ನವಿಸಿದೆ. ಆಶ್ಚರ್ಯಚಕಿತರಾದರು. ಅದುವರೆಗೆ ಅವರ ವಿಚಾರಧಾರೆ, ಚಿಂತನೆಗಳು ಉಪನ್ಯಾಸಗಳ ಮೂಲಕ ಜನರನ್ನು ತಲುಪುತ್ತಿದ್ದವು. ಅದೂ ಕೂಡಾ ಸೀಮಿತವರ್ಗದ ಜನರನ್ನು ಮಾತ್ರ.
ಪತ್ರಿಕೆಯಲ್ಲಿನ ಬರಹರೂಪದ ಚಿಂತನ ನಾಡಿನಾದ್ಯಂತ ಜನರನ್ನು ತಲುಪಿತು. ದಟ್ಟಪ್ರಭಾವ ಬೀರಿತ್ತು. ವಿದ್ಯಾರ್ಥಿದೆಸೆಯಲ್ಲಿದ್ದಾಗ ಮಾತ್ರ ಬರವಣಿಗೆ ನಡೆಸಿದ್ದ ಶ್ರೀಗಳವರ ಲೇಖನ ಸಾಮರ್ಥ್ಯ ‘ಧರ್ಮಜ್ಯೋತಿ’ಯ ಮೂಲಕ ಹೊರಹೊಮ್ಮಿತ್ತು.

‘ಕನ್ನಡಪ್ರಭ’ ಬೆಳಗಿದ ‘ಧರ್ಮಜ್ಯೋತಿ’ಯ ಬೆಳಗನ್ನು ಕಂಡ ಇತರ ಪತ್ರಿಕೆಗಳು ತಮ್ಮ ಅಂಗಳದಲ್ಲಿ ಆ ದಿವ್ಯಜ್ಯೋತಿಯನ್ನು ಬೆಳಗುವ ಪ್ರಯತ್ನ ಮಾಡಿದವು.
ಶ್ರೀಗಳವರಿಗೆ ಮುಗಿಬಿದ್ದು ಅವರ ಚಿಂತನಬರಹಗಳನ್ನು ಬೇಡಿದವು. ಇಂತಹ ‘ಧರ್ಮಜ್ಯೋತಿ’ ಬೆಳಗುವ ಜೀವಜ್ಯೋತಿಯನ್ನು ‘ಕನ್ನಡಪ್ರಭ’ಕ್ಕೆ ಧಾರೆ ಎರೆದ ಶ್ರೀಶ್ರೀಶ್ರೀಗಳವರ ಚರಣಾರವಿಂದಗಳಲ್ಲಿ ನಮ್ಮ ಕೃತಜ್ಞತಾಪೂರ್ವಕ ನುಡಿನಮನಗಳು.
‘ಕನ್ನಡಪ್ರಭ’ ಅಂಕಣದಲ್ಲಿ ಬೆಳಗಿದ ಶ್ರೀಶ್ರೀಶ್ರೀಗಳವರ ದರ್ಮಜ್ಯೋತಿ ಕಿರಣಗಳು ಇದೀಗ ಪುಸ್ತಕರೂಪದಲ್ಲಿ ಹೊರಬರುತ್ತಿರುವುದು ತುಂಬ ಸಂತಸದ ಸಂಗತಿ.
ಶ್ರೀಶ್ರೀಗಳವರ ಲೇಖನಮಾಲೆಯಲ್ಲಿ ಈ ಪುಷ್ಪಗಳನ್ನೂ ಪೋಣಿಸುವ ಕ್ರಮ ಸ್ತುತ್ಯರ್ಹ. ಇದಕ್ಕೊಂದು ನುಡಿನಮನ ಸಲ್ಲಿಸುವ ಅವಕಾಶ ಕಲ್ಪಿಸಿಕೊಟ್ಟವರೆಲ್ಲರಿಗೆ ನಾನು ಆಭಾರಿ.

ವೆಂಕಟನಾರಾಯಣ.
ಸಂಪಾದಕ, ಕನ್ನಡಪ್ರಭ

ಬೆಂಗಳೂರು
ಮಾರ್ಚ್ ೩೧,೨೦೦೩

~*~*~

ಸೂ: ಧರ್ಮಜ್ಯೋತಿ ಲೇಖನಾಮೃತ – 7 ಅಕ್ಟೋಬರ್ 2012 ರಿಂದ ಪ್ರತಿ ಭಾನುವಾರ ಪ್ರಕಟಗೊಳ್ಳಲಿದೆ
       – ಸಂಪಾದಕ

Facebook Comments