“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು.
ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 11: “ಕೋಟೆಯೇರಿ ನೋಡು ಬಂಗಾರದ ನಾಡು”

ಒಂದು ಊರಿನಲ್ಲಿ ಪುರಾತನವಾದ ಕೋಟೆಯೊಂದಿತ್ತು. ಊರಿನ ಬಹುತೇಕ ಜನರಿಗೆ ಆ ಕೋಟೆಯ ಬಗ್ಗೆ ಗೊತ್ತೇಯಿರಲಿಲ್ಲ. ಗೊತ್ತಿರುವವರಲ್ಲಿ ಕೆಲವರಿಗೆ ಕೋಟೆಯಾಚೆ ಏನಿದೆ ಎಂದು ತಿಳಿಯುವ ಕುತೂಹಲ ಮೂಡಿತು. ಕುತೂಹಲಿಗಳ ಒಂದು ಗುಂಪು ಕೋಟೆಯನ್ನೇರಲು ಯತ್ನಿಸಿತು. ಕೋಟೆಯನ್ನೇರುವ ಕಠಿಣಕಾರ್ಯದಲ್ಲಿ ಸೋತು ಕೆಲವರು ಅರ್ಧದಲ್ಲಿಯೇ ಹಿಂದಿರುಗಿದರು. ಬೆರಳೆಣಿಕೆಯಷ್ಟು ಮಂದಿ ಮಾತ್ರ ದೃಢಸಂಕಲ್ಪ ಮತ್ತು ಕಠಿಣ ಪರಿಶ್ರಮದಿಂದ ಕೋಟೆಯನ್ನೇರಿದರು. ಏರಿದವರು ಕೋಟೆಯಾಚೆಗೆ ಸ್ವರ್ಗವೇ ಭೂಮಿಗಿಳಿದು ಬಂದಂತಿದ್ದ ಆನಂದ ಸಾಮ್ರಾಜ್ಯವನ್ನೇ ಕಂಡರು.
ಸ್ವರ್ಣನಿರ್ಮಿತವಾದ ಮಣಿಭೂಷಿತವಾದ ಭವನಗಳಿಂದ ಆ ರಾಜ್ಯ ಕಂಗೊಳಿಸುತ್ತಿತ್ತು. ಅಲ್ಲಿ ಸಾವು – ನೋವುಗಳಿರಲಿಲ್ಲ. ಮುಪ್ಪು – ರೋಗಗಳಿರಲಿಲ್ಲ. ದ್ವೇಷಾಸೂಯೆಗಳಿರಲಿಲ್ಲ. ಯಾರಿಗೂ ಯಾರಿಂದಲೂ ಭಯವೂ ಇರಲಿಲ್ಲ. ಯಾರಿಗೂ ಯಾವ ಕೊರತೆಯೂ ಇರಲಿಲ್ಲ. ಆ ಅದ್ಭುತ ಸಾಮ್ರಾಜ್ಯ ಶಾಂತಿ- ಸಮೃದ್ಧಿಯಿಂದ ತುಂಬಿ ತುಳುಕುತ್ತಿತ್ತು. ಕೋಟೆಯನ್ನೇರಿ ತನ್ನ ವೈಭವದಿಂದ ಸ್ವರ್ಗವನ್ನು ಮೀರುವ ಆ ರಾಜ್ಯವನ್ನು ನೋಡಿದ ಆ ಧೀರರ ಕಣ್ಮುಂದೆ, ಸಾವು-ನೋವು- ದುಃಖ -ದಾರಿದ್ರ್ಯಗಳಿಂದ ಕೂಡಿದ ನರಕ ಸದೃಶವಾದ ತಮ್ಮ ಊರಿನ ಚಿತ್ರ ಸುಳಿದು ಹೋಯಿತು. ಕೋಟೆಯಾಚೆಗಿನ ಆಕರ್ಷಣೆ ಎಷ್ಟಿತ್ತೆಂದರೆ, ನೋಡಿದ ಕೆಲವರು ತಮ್ಮ ದೃಷ್ಟಿಯನ್ನು ಅಲ್ಲಿಂದ ಕೀಳಲಾರದೇ ಕೋಟೆಯ ಕೆಳ ಧುಮುಕಿ ಆ ಸಾಮ್ರಾಜ್ಯದಲ್ಲಿ ಸೇರಿ ಹೋದರು. ಇನ್ನು ಕೆಲವರು ತಮ್ಮ ಊರಿನ ಕಡೆ ತಿರುಗಿ ಕೋಟೆಯಾಚೆಗಿನ ಅದ್ಭುತದ ಬಗ್ಗೆ ಒಮ್ಮೆ ಕೂಗಿ ಹೇಳಿ, ಅನಂತರ ಆ ಆನಂದಸಾಮ್ರಾಜ್ಯವನ್ನು ಸೇರಿಕೊಂಡರು. ಕೋಟೆಯನ್ನೇರಿದ ಗುಂಪಿನಲ್ಲಿದ್ದ ಕರುಣಾಶಾಲಿಯೂ , ಧೀರನೂ ಆದ ಒಬ್ಬ ವ್ಯಕ್ತಿ ಮಾತ್ರ ಕೋಟೆಯಾಚೆಗಿನ ಆನಂದವನ್ನು ಕಂಡು ಪುನಃ ಕೋಟೆಯ ಈಚೆಗಿನ ತನ್ನ ಊರಿಗೆ ಹಿಂದಿರುಗಿದ. ಊರಿನ ಜನರನ್ನು ಒಂದೆಡೆಗೆ ಸೇರಿಸಿ ಕೋಟೆಯಾಚೆಗಿನ ಅದ್ಭುತದ ಬಗ್ಗೆ ವಿವರಿಸಿದ. ಮಾತ್ರವಲ್ಲ, ತನ್ನ ಮಾತಿನಿಂದ ಪ್ರೇರಿತರಾದ ಅನೇಕರನ್ನು ಕೋಟೆಯಾಚೆಗಿನ ಆನಂದ ಸಾಮ್ರಾಜ್ಯಕ್ಕೆ ಕರೆದೊಯ್ದ. ತಮ್ಮ ಊರಿನಲ್ಲೇ ಆನಂದದ ಖನಿಯಿದ್ದರೂ ದುಃಖ -ದಾರಿದ್ರ್ಯಗಳಿಂದ ಬಳಲುತ್ತಿದ್ದ ಊರಿನ ಜನರಿಗೆ ಶಾಂತಿ -ಸಮೃದ್ಧಿಯ ಮಾರ್ಗವನ್ನು ತೋರಿದ.

ಈ ಕಥೆಯಲ್ಲಿ ಬರುವ ಊರು ನಮ್ಮೆಲ್ಲರ ಜೀವನವೇ ಆಗಿದೆ. ಕೋಟೆಯಾಚೆಗಿನ ಆನಂದ ಸಾಮ್ರಾಜ್ಯ ಯಾವುದೆಂದರೆ, ಶಾಂತಿ ಸಮೃದ್ಧಿಯಿಂದ ತುಂಬಿ ತುಳುಕುವ ಆತ್ಮರಾಜ್ಯ. ದುಃಖ ದುಮ್ಮಾನಗಳು ಆವರಿಸಿಕೊಂಡಿರುವ ನಮ್ಮ ಬಾಹ್ಯ ಜೀವನಕ್ಕೂ, ಪರಮ ಶಾಂತಿಯ ನೆಲೆಯಾದ ಒಳಗಿನ ಆತ್ಮರಾಜ್ಯಕ್ಕೂ ಮಧ್ಯೆ ತುಂಬ ಹಳೆಯ ಅಜ್ಞಾನದ ಕೋಟೆ ಇದೆ. ಬಹು ಮಂದಿಗೆ ನಮ್ಮಲ್ಲಿ ಅಜ್ಞಾನ ಇದೆ ಎಂದು ಗೊತ್ತೇ ಇಲ್ಲ. ಗೊತ್ತಿರುವವರಿಗೂ ಅಜ್ಞಾನ ಮೀರುವ ಇಚ್ಚಾಶಕ್ತಿ ಇಲ್ಲ. ಅಜ್ಞಾನದ ಕೋಟೆಯನ್ನೇರಲೆತ್ನಿಸಿದವರೆಲ್ಲ ಸಫಲರಾಗಿಲ್ಲ. ಸಫಲರಾದವರು ಕಂಡ ಮುಕ್ತಿಸಾಮ್ರಾಜ್ಯ ಅದ್ಭುತವಾದದ್ದು. ಅಲ್ಲಿ ಶೋಕ-ಮೋಹಗಳಿಲ್ಲ, ಜರಾ-ಮೃತ್ಯುಗಳಿಲ್ಲ, ಹಸಿವು-ಬಾಯಾರಿಕೆಗಳಿಲ್ಲ, ದುಃಖ-ರೋಗಗಳಿಲ್ಲ, ಅಜ್ಞಾನದ ಸುಳಿವೇ ಇಲ್ಲ. ಆ ಸಾಮ್ರಾಜ್ಯ ಸೇರಿದವರನ್ನು ಹುಟ್ಟು-ಸಾವುಗಳು ಮುಟ್ಟವು.
ಆತ್ಮರಾಜ್ಯವನ್ನು ಕಂಡವರೆಲ್ಲರಿಗೂ ಅದರ ಸವಿಯನ್ನು ಲೋಕಕ್ಕೆ ಬಣ್ಣಿಸಲು ಉಣ್ಣಿಸಲು ಸಾಧ್ಯವಾಗಿಲ್ಲ. ಆತ್ಮರಾಜ್ಯಕ್ಕೆ ತೆರಳಿ ಅಲ್ಲಿಯ ಸವಿಯನ್ನು ಕಂಡುಂಡು ಪುನಃ ಇಂದ್ರಿಯ ರಾಜ್ಯಕ್ಕೆ ಬಂದು, ಇಲ್ಲಿ ಕೊನೆಯಿಲ್ಲದ ದುಃಖದಲ್ಲಿ ತೊಳಲಾಡುವ ಪಾಮರರನ್ನು ಹಿತವಚನಗಳಿಂದ ಬಡಿದೆಬ್ಬಿಸಿ, ಆತ್ಮರಾಜ್ಯಕ್ಕೆ ಕರೆದೊಯ್ಯಬಲ್ಲವನೇ ಗುರುವೆನಿಸುತ್ತಾನೆ.

“ಆತ್ಮರಾಜ್ಯವ ಕಂಡ ಗುರುವನರಸುವುದೆಲ್ಲಿ? ದೊರೆತಂದು ನೀನ್ ಧನ್ಯ.”

~*~

Facebook Comments