LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಧರ್ಮಜ್ಯೋತಿ 15: “ಶಿವರಾತ್ರಿ ಜಾಗರಣೆ”

Author: ; Published On: ರವಿವಾರ, ಜನವರಿ 13th, 2013;

Switch to language: ಕನ್ನಡ | English | हिंदी         Shortlink:

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 15:ಶಿವರಾತ್ರಿ ಜಾಗರಣೆ

‘ಶಿವರಾತ್ರಿ‘ಯಂದು ಜಾಗರಣೆ ಮಾಡಬೇಕು. ಜಾಗರಣೆ ಎಂದರೆ ನಿದ್ರೆ ಮಾಡದಿರುವುದು. ನಿದ್ರೆ ಬಾರದಿರಲು ಉಪಾಯವೇನು? ಸಿನಿಮಾ ನೋಡುವುದು, ಇಸ್ಪೀಟ್ ಆಡುವುದು, ರಸ್ತೆಗಳಲ್ಲಿ ತಿರುಗುವುದು. ಜಾಗರಣೆ ಮಾಡಬೇಕಾಗಿರುವುದು ಮನೋರಂಜನೆಯ ಕಾರ್ಯಗಳಿಂದಲ್ಲ. ಆತ್ಮರಂಜನೆಯ ಕಾರ್ಯಗಳಿಂದ. ‘ಶಿವರಾತ್ರಿ’ಯ ದಿನ ಜಾಗರಣೆ ಏಕೆ? ನಿದ್ರೆ ಮಾಡಿದರೆ ತಪ್ಪೇನು?

ಮನೆಗೆ ಅತಿಥಿಗಳು ಬಂದಾಗ ಪಕ್ಕದ ಮನೆಗೆ ಹೋಗಿ ಕುಳಿತರೆ ಸರಿಯಾದೀತೇ? ಹಾಗೆಯೇ ಸಾಕ್ಷಾತ್ ಶಿವನೇ ನಮ್ಮ ಮನೆಗೆ- ಮನಸ್ಸಿಗೆ- ಪ್ರಕೃತಿಗೆ ಬಂದಿಳಿಯುವಾಗ ನಿದ್ರೆ ಮಾಡುತ್ತಿರುವುದು ಸರಿಯಾಗಲಾರದು. ಆ ಸಮಯದಲ್ಲಿ ಮನಸ್ಸನ್ನು ಶಿವನಿಗೆ ಅಭಿಮುಖವಾಗಿಸಿಕೊಂಡು ಧ್ಯಾನಮಗ್ನರಾಗಬೇಕು. ಜೀವನದಲ್ಲಿ ಎಷ್ಟೊಂದು ‘ಶಿವರಾತ್ರಿ’ಗಳನ್ನು ನೋಡಿದೆವು. ಒಂದು ದಿನವೂ ಶಿವ ಬರಲಿಲ್ಲವಲ್ಲ ಎಂದರೆ ಪ್ರತಿ ಶಿವರಾತ್ರಿಯಲ್ಲೂ ಶಿವನ ಆವಿರ್ಭಾವವಾಗಿದೆ. ನೋಡುವ ಕಣ್ಣಿಲ್ಲದೇ ಹೋಯಿತಷ್ಟೆ. ನಮ್ಮ ಕಣ್ಣು ಅವನನ್ನು ನೋಡಲು ಸಮರ್ಥವಾಗಲಿಲ್ಲ. ಯಾಕೆಂದರೆ ನಮ್ಮ ಕಣ್ಣು ಹೊರಮುಖವಾಗಿದೆ, ಒಳಮುಖವಾಗಿಲ್ಲ. ಒಳಗೆ ಶಿವನ ಶಬ್ಧ ಕೇಳುತ್ತಿಲ್ಲ. ಅಂತಃಶ್ರವಣವಾಗುತ್ತಿಲ್ಲ. ಬದುಕೆಲ್ಲ ಬಹಿಃಶ್ರವಣದಲ್ಲೇ ಕಳೆಯುತ್ತಿದೆ. ನಮ್ಮ ಪ್ರಕೃತಿ ಹೊರಮುಖವಾದ್ದರಿಂದ, ಪ್ರಪಂಚಕ್ಕೆ- ಭೋಗಕ್ಕೆ ಅಭಿಮುಖವಾದ್ದರಿಂದ ಶಿವನ ದರ್ಶನ ಆಗಲಿಲ್ಲ. ನಮ್ಮ ಹೃದಯಕ್ಕೆ ಮನಸ್ಸಿಗೆ ಶಿವ ತಟ್ಟಲಿಲ್ಲ- ಮುಟ್ಟಲಿಲ್ಲ.

ಶಿವರಾತ್ರಿ ಕಾಲಕಾಲನಾದ ಶಿವನ ಕಾಲ. ಉಳಿದ ದಿನಗಳಲ್ಲಿ ಶಿವನ ಒಲುಮೆಯನ್ನು ಸಂಪಾದಿಸುವುದು ಕಷ್ಟಸಾಧ್ಯ. ಶಿವರಾತ್ರಿಯಲ್ಲಿ ಇದು ತುಂಬಾ ಸುಲಭ. ಆ ಕಾಲದಲ್ಲಿ ವಿಶೇಷವಾಗಿ ಶಿವನ ಸಾನ್ನಿಧ್ಯವಿದೆ. ಆದ್ದರಿಂದ ಆ ಕಾಲವನ್ನು ಶಿವನಿಗಾಗಿಯೇ ಮೀಸಲಿಡಬೇಕು. ಅಂದು ಅಮಂಗಲದಲ್ಲಿ ಮನಸ್ಸನ್ನು ತೊಡಗಿಸದೆ ಮಂಗಲದಲ್ಲಿ- ಶಿವನಲ್ಲಿ ಮನಸ್ಸನ್ನು ತೊಡಗಿಸಬೇಕು. ಕಣ್ಣು ಶಿವನ ರೂಪದಲ್ಲಿ ನೆಡಬೇಕು. ಕಿವಿ ಶಿವನ ಗುಣಗಾನವನ್ನು ಆಲಿಸಬೇಕು. ಮೂಗು ಶಿವನ ಪೂಜಾಸಾಮಾಗ್ರಿಗಳ ಗಂಧವನ್ನು ಆಸ್ವಾದನೆ ಮಾಡಬೇಕು. ನಾಲಿಗೆ ಶಿವನ ನೈವೇದ್ಯವನ್ನು ಸವಿಯಬೇಕು. ಚರ್ಮ ಶಿವನ ಪದಸ್ಪರ್ಶದಿಂದ ಪಾವನವಾಗಬೇಕು. ಕಾಲುಗಳು ಶಿವನ ಪ್ರದಕ್ಷಿಣೆ ಮಾಡಬೇಕು. ಕೈಗಳು ಶಿವನಿಗೆ ಜೋಡಿಸಲ್ಪಡಬೇಕು.

ನಮ್ಮ ಕರಣ ಕಳೇಬರಗಳೆಲ್ಲ ಶಿವನಿಗೆ ಸಮರ್ಪಿತಗೊಳ್ಳಬೇಕು, ಶಿವಮಯವಾಗಬೇಕು.
~*~

5 Responses to ಧರ್ಮಜ್ಯೋತಿ 15: “ಶಿವರಾತ್ರಿ ಜಾಗರಣೆ”

 1. dentistmava

  hareraama
  oooommm…. namaha shivayacha shivatarayacha
  sarvam shivamayam jagath.
  hareraama.

  [Reply]

 2. G.S.Hegde- Dombivli(Mumbai)

  HARERAM

  [Reply]

 3. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಉಕ್ಕಿ ಬರಲಿ ರಾಮ ರಸವು
  ಹೊಕ್ಕುವೊಳಗೆ ಶಿವನ ನಾಮ
  ಸಕ್ಕರೆಗು ಸಿಹಿರಸ ಪಾಕವಂದು ಜೀವನ|
  ಅಕ್ಕರೆಯ ಕರೆಯನು ನೀಡಿ
  ನಕ್ಕು ನಲಿಸಿ ಕುಣಿಸಿ ಜಗವ
  ಹಕ್ಕಿಯಂತೆ ಹಾರಿಯಾಡಿ ಸವಿಯೊ ಜೀವನ||

  ಸಿಕ್ಕಿರಲು ಸುಧಾ ಕಲಶವು
  ರೊಕ್ಕವೇಕೆ ನಿನಗೆ ಮನವೆ
  ಮಿಕ್ಕ ಸಮಯವಿನ್ನು ಕಳೆಯೊ ಶಿವನಿಗಾಗಿ ನೀ||
  ಹೆಕ್ಕು ಶಾಂತಿಯೆಂಬ ಬೀಜ
  ಪಕ್ಕಕಿರಿಸಿ ಬಿಂಕವೆಲ್ಲ
  ಸೊಕ್ಕು ಮುರಿದು ಧನ್ಯತೆಯನು ಪಡೆವೆಯಂದು ನೀ ||

  ಒಡವೆ ನಗದು ಶಿವನಿಗಾಗಿ
  ನಡೆಯು ನುಡಿಯು ಶಿವನಿಗಾಗಿ
  ಹೊಡೆತ ಬಡಿತವೇಕೆ ಬೇಕು ನಿನಗೆ ಸುಮ್ಮನೆ?
  ಒಡಲ ಕಡಲಿನಾಳದಿಂದ
  ತುಡಿಯೊ ಮಿಡಿಯೊ ಶಿವನಿಗಾಗಿ
  ನಡುವೆ ನಿದ್ದೆ ಬಾರದಂತೆ ಜಾಗರಣೆಯ ಮಾಡುತ||

  ಹೆಸರ ಕೆಸರಿಗಾಗಿ ನೀನು
  ಹುಸಿಯ ನುಡಿದು ಹೊಸೆವೆ ಬಾಳ
  ರಸವಿರುವುದು ಶಿವನ ಕರುಣೆಯಲ್ಲಿ ತಿಳಿದುಕೊ|
  ವ್ಯಸನಗಳಿಗೆ ದಾಸನಾಗಿ
  ಹೊಸ ಹೊಸತಿನ ಮೋಜಿಗಾಗಿ
  ಬಿಸಿಯುಸಿರನು ಕಳೆಯಬೇಡ ಹೀಗೆ ಸುಮ್ಮನೆ||

  ಜ್ಹಾನ ಕಲಶ ಹಿಡಿದು ತಂದೆ
  ಜಾಣರನ್ನು ಕರೆಯುತಿಹನು
  ಮಾನವಂತನಾಗಿಯಿಂದು ನೆನೆಯೊ ಲಿಂಗವ|
  ಗಾನ ಗಂಗೆಯನ್ನೆ ಹರಿಸು
  ವೀಣೆವಾಣಿಯಿಂದ ಭಜಿಸು
  ನಾನ ರೀತಿಯಿಂದಲವನ ಸೇರಲದುವೆ ಪಾವನ||

  [Reply]

 4. ಶೋಭಾ

  ಹರೇರಾಮ

  [Reply]

 5. Vidya Ravishankar.

  ಹರೇರಾಮ.

  [Reply]

Leave a Reply

Highslide for Wordpress Plugin