ಗೋಕರ್ಣ: ದನವೇ ಧನವಾಗಿದ್ದ ಕಾಲವೊಂದಿತ್ತು. ಗೋವುಗಳ ಮೂಲಕವೇ ವ್ಯಕ್ತಿಯೋರ್ವನ ಆರ್ಥಿಕಸ್ಥಿತಿಯನ್ನು ಅಳೆಯುವ ಕಾಲವೂ ಇತ್ತು. ಆದರೆ ಭಾರತೀಯರಾದ ನಾವು ವಿಶ್ವಜನನಿಯಾದ ಗೋಮಾತೆಯನ್ನು ಮರೆತಿದ್ದೇವೆ. ನಮ್ಮ ಬದುಕಿನಲ್ಲಿ ಹೆತ್ತ ತಾಯಿಯಷ್ಟೇ ಶ್ರೇಷ್ಠಸ್ಥಾನವನ್ನು ಹೊಂದಿದ ಗೋವಿಗೆ ನಮ್ಮ ಸೇವೆಯನ್ನು ಸಲ್ಲಿಸುವುದು ಮಕ್ಕಳಾದ ನಮ್ಮ ಕರ್ತವ್ಯವಾಗಿದೆಯೆಂದು ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಚಾತುರ್ಮಾಸ್ಯದ ನಿಮಿತ್ತ ಇಂದು ಅಶೋಕೆಯಲ್ಲಿ ನಡೆದ ಮೈಸೂರು ವಲಯದ ಶಿಷ್ಯರ ಶ್ರೀಗುರುದೇವತಾಸೇವೆಯನ್ನು ಸ್ವೀಕರಿಸಿ ಅನುಗ್ರಹ ಸಂದೇಶವನ್ನು ನೀಡುತ್ತಿದ್ದ ಪೂಜ್ಯ ಶ್ರೀಗಳು ಶ್ರೀಮಠದ ಗೋಶಾಲೆಗೆ ಶಿಖರಪ್ರಾಯವಾಗಿದ್ದು ಇತ್ತೀಚೆಗೆ ತನ್ನ ಇಹಲೋಕಯಾತ್ರೆಯನ್ನು ಮುಗಿಸಿದ ಮಹಾನಂದಿಯ ಮಹತ್ವವನ್ನು ವಿಸ್ತಾರವಾಗಿ ಹೇಳಿ ಮಹಾನಂದಿಯು ಕಣ್ಮರೆಯಾಯಿತೆಂದು ಕಣ್ಣೀರು ಸುರಿಸುವುದಕ್ಕಿಂತ ಇರುವ ಗೋವುಗಳಿಗೆ ಯೋಗ್ಯವಾದ ಸ್ಥಾನವನ್ನು ನೀಡಿ, ಅವುಗಳ ಯೋಗಕ್ಷೇಮವನ್ನು ನೋಡಿಕೊಳ್ಳುವ ಗೋಶಾಲೆಗಳಿಗೆ ಸಹಾಯಹಸ್ತವನ್ನು ನೀಡುವ ಮುಖಾಂತರ ಗೋಋಣವನ್ನು ಪರಿಹರಿಸಿಕೊಳ್ಳಬಹುದು ಎಂದರು. ಶ್ರೀಮಠದ ಓರ್ವ ಸಂತನಂತೆ ಬಾಳಿದ ಮಹಾನಂದಿಯ ಸ್ಮರಣಾರ್ಥವಾಗಿ ಈ ವರ್ಷವನ್ನು ಮಹಾನಂದಿ ವರ್ಷವೆಂದು ಘೋಷಿಸಲಾಗಿದ್ದು, ಈ ಕಾಲದಲ್ಲಿ ಸಂಪೂರ್ಣವಾಗಿ ಸಮಾಜದಲ್ಲಿ ಗವ್ಯೋತ್ಪನ್ನಗಳ ಬಗ್ಗೆ ಜಾಗೃತಿ, ಗವ್ಯೋತ್ಪನ್ನಗಳ ಪ್ರಚಾರ, ಪ್ರಸಾರಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿ, ಹಸು ನಿಜವಾದ ಅರ್ಥದಲ್ಲಿ ನಮ್ಮೆಲ್ಲರ ಅಸು ಅಂದರೆ ಪ್ರಾಣರೂಪವಾಗಿದೆ. ಹಾಲಿನ ಹೆಸರಿನಲ್ಲಿ ನಾವಿಂದು ಹಾಲಾಹಲವನ್ನು ಸೇವಿಸುತ್ತಿದ್ದೇವೆ. ಸಹಜವಾದ ಶುದ್ಧಬುದ್ಧಿ ಮತ್ತು ಮನಸ್ಸುಗಳಿಗೆ ಕಾರಣವಾದ ರಾಸಾಯನಿಕಮುಕ್ತವಾದ ಪರಿಶುದ್ಧ ಆಹಾರವೂ ನಮಗೆ ಲಭ್ಯವಾಗುತ್ತಿಲ್ಲ. ಈ ಎಲ್ಲವಕ್ಕೂ ಅಂತ್ಯವನ್ನು ಹೇಳಬೇಕಾದ ಕಾಲ ಬಂದಿದೆ ಎಂದೂ ನುಡಿದ ಶ್ರೀಗಳು ಮೈಸೂರುವಲಯದಿಂದ ಬಂದು ಶ್ರೀಗುರುದೇವತಾಸೇವೆಗಳನ್ನು ಸಲ್ಲಿಸಿದ ಶಿಷ್ಯಸಮುದಾಯಕ್ಕೆ ಎಲ್ಲ ರೀತಿಯ ಸನ್ಮಂಗಳವನ್ನು ಆಶಿಸಿದರು.

ಪ್ರತಿಭಾಪುರಸ್ಕಾರ ಹಾಗೂ ಶ್ರೀಮಠದ ವಿವಿಧ ಯೋಜನೆಗಳಿಗೆ ದೇಣಿಗೆ ವಾಗ್ದಾನಗಳು ಸಂಪನ್ನಗೊಂಡವು. ರಾಷ್ಟ್ರೀಯ ಬ್ಯಾಡಮಿಂಟನ್ ಛಾಂಪಿಯನ್ ಶ್ರೀ ಅರವಿಂದ ಭಟ್ ಪೂಜ್ಯಶ್ರೀಗಳನ್ನು ಸಂದರ್ಶಿಸಿ ಆಶೀರ್ವಾದ ಪಡೆದರು.ಶ್ರೀಸವಾರಿಯ ವ್ಯವಸ್ಥಾಪಕ ಶ್ರೀ ರಾಘವೇಂದ್ರ ಮಧ್ಯಸ್ಥರು ನಿರ್ವಹಿಸಿದರು.

Facebook Comments