ಗೋಕರ್ಣ: ಲೋಕದಲ್ಲಿ ಸಾವಿರಾರು ವಸ್ತುಗಳಿವೆ. ಆದರೆ ಅವೆಲ್ಲವೂ ಸಾವನ್ನು ಹೊಂದಿದವೇ. ಆದರೆ ಸಾವಿರದ ಒಂದು ಸ್ಥಾನವಿದ್ದರೆ ಅದು ಭಗವಂತನ ಸಾನ್ನಿಧ್ಯ ಮಾತ್ರ. ಹಣಬಲದಿಂದಲೋ, ತೋಳಿನಶಕ್ತಿಯಿಂದಲೋ, ಅಧಿಕಾರದಿಂದಲೋ ಅದನ್ನು ಪಡೆಯಲು ಅಸಾಧ್ಯ. ಪರಮಾತ್ಮನ ಮೇಲಿನ ಅಸಾಧಾರಣ ಪ್ರೀತಿಯಿಂದ ಅನನ್ಯ ಶರಣತೆಯಿಂದ ಮಾತ್ರ ನಾವು ಆಸ್ಥಾನವನ್ನು ಸೇರಬಹುದು. ಅದಕ್ಕೆ ಅವನ ಕರುಣೆಯೂ ಬೇಕು ಎಂದು ಶ್ರೀ ರಾಮಚಂದ್ರಾಪುರಮಠದ ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಚಾತುರ್ಮಾಸ್ಯದ ನಿಮಿತ್ತ ಅಶೋಕೆಯಲ್ಲಿ  ಆಯೋಜಿತವಾಗಿರುವ ರಾಮಕಥಾದ ಭಾದ್ರಪದ ಪರ್ವದ ಶುಭಾರಂಭ ದಿನದಂದು ರಾಮಾಯಣದ  ಅನುಗ್ರಹ ಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು, ಸಾವಿನ ಲೋಕಕ್ಕೆ ಹೋಗುವವರಿದ್ದಾರೆ. ಅಲ್ಲಿಗೆ ಹೋಗಿ ಪುನಃ ಬಂದವರೂ ಅಪರೂಪಕ್ಕೆ ಸಿಗಬಹುದು. ಆದರೆ ಮೃತ್ಯುವಿನ ನಾಡಿಗೆ ಹೋಗಿ ಅವನೊಂದಿಗೆ ಸೆಣಸಿ ಗೆದ್ದೆ ಎಂದು ಬೀಗುತ್ತ ಬಂದ ಒಬ್ಬ ವ್ಯಕ್ತಿಯಿದ್ದರೆ ಅದು ರಾವಣ ಮಾತ್ರ. ಸಾವೆಂಬುದು ನೆರಳಿನಂತೆ ನಮ್ಮನ್ನು ಹಿಂಬಾಲಿಸುತ್ತಲೇ ಇರುತ್ತದೆ ಎಂಬುದನ್ನು ಅರಿಯದೆ ಭ್ರಮಾಲೋಕದಲ್ಲಿಯೇ ಆತ ಬದುಕಿದ. ಸಮಸ್ತ ವಿಶ್ವವೇ ತನಗೆ ತಲೆಬಾಗಬೇಕೆಂಬ ಆಸೆಯಿಂದ ಆತ ಎಲ್ಲರನ್ನೂ ಹಿಂಸಿಸಿದ. ರಾವಣ ಎಂದರೆ ಸಾವು ಅಥವಾ ನೋವು. ಸ್ವಂತ ತಂಗಿಯಾದ ಶೂರ್ಪಣಖಿಯ ಪತಿಯಾದ ವಿದ್ಯುಜ್ಜಿಹ್ವನನ್ನೂ ಅವನು ಕೊಂದು ಹಾಕಿದ. ಇಂತಹ ಭಯಾನಕನಾದ ರಾವಣನೂ ಸಹ ವರುಣ ಲೋಕಕ್ಕೆ ಹೋದಾಗ ಅಲ್ಲಿ ವಿಶ್ವಜನನಿಯಾದ ಕಾಮಧೇನುವನ್ನು ಕಂಡು ಕೈಮುಗಿದ ಎನ್ನುತ್ತದೆ ರಾಮಾಯಣ. ಆತನಿಂದ ಪೀಡೆಗೊಳಗಾಗದೆ ಉಳಿದದ್ದು ಸುರಧೇನುವಾದ ಸುರಭಿ ಮಾತ್ರ ಎಂದು ಹೇಳಿದ ಪೂಜ್ಯಶ್ರೀಗಳು, ಗೋರೂಪವಾದ ಕಾಮಧೇನು ಲೋಕಕ್ಕೆ ಅನುಗ್ರಹಿಸಿದ ವಸ್ತುಗಳೆಲ್ಲವೂ ನಮ್ಮ ಬದುಕಿಗೆ ಅತ್ಯಂತ ಅಗತ್ಯವಾದವುಗಳೇ. ಮಮತಾಮಯಿಯಾದ ಗೋವನ್ನು ಮರೆತರೆ ನಾವು ಕೃತಘ್ನರು ಎಂದು ಹೇಳಿ ರಾಮಾಯಣದಲ್ಲಿ ನಿರೂಪಿತವಾದ ಸಮುದ್ರಮಥನಜನ್ಯ ಪದಾರ್ಥಗಳ ವಿಸ್ತಾರ ವಿವೇಚನೆ ಮಾಡಿ ಅವುಗಳ ಸಾಂಕೇತಿಕತೆಯನ್ನು ವಿಶ್ಲೇಷಿಸಿದರು.

ಶ್ರೀಪಾದ ಭಟ್, ಸಂಧ್ಯಾ ಭಟ್, ಪ್ರೇಮಲತಾ ದಿವಾಕರ್ ಇವರ ಸುಶ್ರಾವ್ಯ ಸಂಗೀತಕ್ಕೆ, ಗೋಪಾಲಕೃಷ್ಣ ಹೆಗಡೆಯವರ ತಬಲಾ, ಶ್ರೀಪ್ರಕಾಶರ ವೇಣುವಾದನಗಳು ಸಾಥ್ ನೀಡಿದವು. ಪ್ರೊ. ಕುಮಾರಿ ಸುಭದ್ರಾ ಅವರ ನಿರ್ದೇಶನದಲ್ಲಿ ಡಾ.ಗಜಾನನ ಶರ್ಮಾ ಅವರು ರಚಿಸಿದ ಸುರಭಿ ರೂಪಕ ಪ್ರದರ್ಶನವು ಪ್ರಸ್ತುತವಾಯಿತು.

ರಾಮಕಥೆಯಲ್ಲಿ ನಾಡಿನ ಖ್ಯಾತ ಉದ್ಯಮಿಗಳಾದ ಕೊಲ್ಕತಾದ ಇಮಾಮಿ ಸಮೂಹಸಂಸ್ಥೆಯ ಶ್ರೀ ರಾಧೇಶ್ಯಾಂ ಗೋಯೆಂಕಾ, ಆನಂದ್ ರಾಟಿ ಸಂಸ್ಥೆಯ ಶ್ರೀ ಆನಂದ ರಾಟಿ, ಶ್ರೀ ಎಮ್.ಪಿ.ಸೋನಿಕಾಜಿ ಹಾಗೂ ಅವರ ಕುಟುಂಬದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

Facebook Comments